ಭೂಮಿ ಹುಣ್ಣಿಮೆ…

Share Button

ನನ್ನೆಲ್ಲಾ ಓದುಗ ಮಿತ್ರರಿಗೂ ಭೂಮಿ ಹುಣ್ಣಿಮೆಯ ಶುಭಾಶಯಗಳೊಂದಿಗೆ ಅದರ ಕುರಿತಂತೆ ನಾನು ತಿಳಿದುಕೊಂಡ  ಕಿರು ಮಾಹಿತಿಯನ್ನು  ನಿಮ್ಮೊಂದಿಗೆ ಹಂಚಿಕೊಳ್ಳಲು ಅದೇನೋ ತವಕ.ನನಗೆ ಈ ಭೂಮಿಹುಣ್ಣಿಮೆ ಹಬ್ಬ ಅರಿವಿಗೆ ಬಂದಿದ್ದೆ ನಾನು ಸಾಗರಕ್ಕೆ ವರ್ಗವಾಗಿ ಬಂದಾಗ.ಇಗ್ಗೆ ಎರಡು ವರ್ಷಗಳ ಹಿಂದೆ ನಾನು ತಾಳಗುಪ್ಪಕ್ಕೆ ವರ್ಗವಾಗಿ ಬಂದೆ.ಕೆಲಸದ ಒತ್ತಡಗಳೇನೇ ಇದ್ದರೂ  ಬಹುಶಃ ಈ ಊರಿಗೆ ಬಂದು ಹೋಗುವ ಪ್ರಯಾಣದ ಹಾದಿ ,ಇಲ್ಲಿನ ಹಸಿರು ಸಿರಿ,ಒಡನಾಟ ನನ್ನ ಸಾಹಿತ್ಯ ಕೃಷಿಗೆ ತುಂಬಾ ಸ್ಪೂರ್ತಿ ತುಂಬಿತ್ತು. ಮನಸ್ಸು ಬರವಣಿಗೆಯತ್ತ ವಾಲಿದ ಕಾರಣ,ಈ ಭೂಮಿ ಹುಣ್ಣಿಮೆ ಹಬ್ಬದ ಹೊತ್ತಿಗೆ ಲೇಖನ ಬರೆಯುವ ಪ್ರಯತ್ನ ಮಾಡಿದ್ದೆ.ಆಗಲೇ ನೋಡಿ ನಾನು ಹತ್ತಿರ ಹೊಲಕ್ಕೆ ಬಿಡುವು ಮಾಡಿ ಹೋದಾಗ ಆ ವಿಶಿಷ್ಟ ಆಚರಣೆ ಅದರ ಮಹತ್ವ ಕುರಿತು ಆಶ್ಚರ್ಯಗೊಂಡಿದ್ದು . ಮೊದಲ ಲೇಖನ ಕಳೆದ ವರ್ಷ ಬರೆದಿದ್ದೆ..

ಈ ಹಬ್ಬ ಎಲ್ಲಾ ಜನಾಂಗದವರೂ  ,ಎಲ್ಲಾ ಕಡೆಯಲ್ಲೂಆಚರಿಸುತ್ತಾರಾದರೂ ನಮ್ಮ ಸಾಗರ ಸೀಮೆಯ ಸುತ್ತ ಮುತ್ತ ಇದರ ಆಚರಣೆ ಅದರಲ್ಲೂ ದೀವರ ಜನಾಂಗದವರ ಆಚರಣೆ ವಿಭಿನ್ನ  ವಿಶಿಷ್ಟ ಎಂದು ಅರಿವಿಗೆ ಬಂತು. ಆಧುನಿಕತೆಯ ದೊಡ್ಡ ಅಲೆಗಳ ನಡುವೆ ಶಂಖದೊಳಗಿನ ಮುತ್ತಿನಂತೆ ಇನ್ನೂ ಜೀವಂತವಾಗಿರುವ ಸುಂದರ ಅರ್ಥ ಪೂರ್ಣ ಸಂಪ್ರದಾಯದ ಬಗ್ಗೆ ವಿನಮ್ರ ಗೌರವ ಹುಟ್ಟಿದ್ದು.ಈ ಭೂಮಿಹುಣ್ಣಿಮೆ ಆಯಾ ಪ್ರದೇಶಗಳಲ್ಲಿ ಅವರವರ ನಂಬಿಕೆ ನಡಾವಳಿಗಳನ್ನಾದರಿಸಿ ವಿಭಿನ್ನವಾಗಿ ಕಂಡರೂ ಮೂಲ ಉದ್ದೇಶ ಭೂಮಿತಾಯಿಯ ಗೌರವ ಸಮರ್ಪಣೆ.

ನಮ್ಮನ್ನು ಸಾಕಿ ಸಲಹುವ ಹಾಗೂ ನಮಗಾಗಿ ನೋವನೆಲ್ಲಾ ನುಂಗಿ ಅವಳು ಜೀವ ಸ್ವರೂಪಿ ಮಹಾತಾಯಿ. .ಹೀಗಾಗಿ ಒಬ್ಬಳು ಸ್ತ್ರೀ ಗೆ ಕಾಲಾನುಕಾಲಕ್ಕೆ ಸಲ್ಲಬೇಕಾದ ಗೌರವ ಆಚರಣೆ ಭೂಮಾತೆಗೂ ಸಲ್ಲಬೇಕು ಅನ್ನುವುದು ರೈತಾಪಿ ವರ್ಗದವರ ಅಂಬೋಣ.

ಆಷಾಡ ಮಾಸ ಆರಂಭವಾಗುತ್ತಿದ್ದಂತೆ ಕೃಷಿಗೆ ಸಜ್ಜಾಗುವ ರೈತ,ಭೂಮಿಯನ್ನು ಉಳುಮೆ ಮಾಡಿ ಸಮ ಮಾಡಿ ,ನಂತರ ಉತ್ತು ಬಿತ್ತು,ಬೆಳೆ ತೆಗೆಯುವ ನಿರೀಕ್ಷೆಯಲ್ಲಿ ಇರುತ್ತಾರೆ. ಈ ನಡುವೆ ಮಳೆ ಸರಿಯಾದ ಪ್ರಮಾಣದಲ್ಲಿ ಆಗಿ ಉತ್ತಮ ಇಳುವರಿಗಾಗಿ  ಗಂಗೆ ಬಾಗಿನವನ್ನೂ ಮಾಡುತ್ತಾರೆ.ಪ್ರತಿನಿತ್ಯ ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೂ ಜಮೀನಿನ ಒಡನಾಟದಲ್ಲಿರುವ ರೈತ ಅದನ್ನು ತನ್ನ ಹೆತ್ತ ತಾಯೋ ಮಗಳೋ ಎಂಬಷ್ಟು ಜೋಪಾನ ಮಾಡಿ ಬೆಳೆ ಭೂಮಿ ಎರಡನೂ ಜತನ ಮಾಡುವುದರಲ್ಲೇ ಮಗ್ನವಾಗಿರುತ್ತಾನೆ.ಹೀಗೆ ರೈತನ ಹಾರೈಕೆ ಮಳೆಯ ಆರೈಕೆಯಲ್ಲಿ ಬೀಜವೊಡೆದು ತಳಿರಾಗುವ ಕ್ಷಣ ರೈತನಿಗೇನೋ ಹೊಸ ಕನಸು ಸಂಭ್ರಮ ಕಾರಣ ಭುವಿ ಬಸಿರಾಗಿ ತನ್ನೊಡಲಲ್ಲಿ ಬೆಳೆಯನ್ನು ಹೊತ್ತು ಮೈದುಂಬಿ ನಗುತ್ತಾಳೆ.ಇದೇ ಹೊತ್ತಿಗೆ ‌ ರೈತಾಪಿ ಕುಟುಂಬದಲ್ಲಿ ಮನೆಗೆ ಹೊಸ ಸದಸ್ಯ ಕಣಜ ತುಂಬುವ ಹರುಷ,ಅದಕ್ಕೂ ಮೊದಲು ಅವಳಿಗೆ ಸೀಮಂತ ಮಾಡುವ ಬಯಕೆ.ಅದಕ್ಕಂತಲೇ ಅವರು ನಿಗದಿಸಿದ ದಿನ ಈ ಭೂಮಿ ಹುಣ್ಣಿಮೆ ಅಥವಾ ಸೀಗೆ ಹುಣ್ಣಿಮೆ.

ಈ ದಿನದ ಆಚರಣೆಗೆ ಪೂರ್ವಭಾವಿಯಾಗಿ ಮನೆಯಲ್ಲಿ ಹೆಂಗಸರು ಮಕ್ಕಳಾದಿಯಾಗಿ ಎಲ್ಲರೂ ತಯಾರಿಯಲ್ಲಿ ತೊಡಗುತ್ತಾರೆ. ಕೆಮ್ಮಣ್ಣು ,ಸೆಗಣಿ  ಅಕ್ಕಿ ಹಿಟ್ಟು ಇತ್ಯಾದಿ ಬಳಸಿ ಭೂಮಣ್ಣಿ ಬುಟ್ಟಿ ಸಿದ್ದಪಡಿಸುತ್ತಾರೆ .ಇದಕ್ಕೆ ಭತ್ತದ ಸಸಿ,ಎತ್ತು ನೊಗ ಇನ್ನಿತರೆ ಕೃಷಿ ಸಂಬಂದಿತ ಹಸೆ ಚಿತ್ತಾರಗಳನ್ನು  ಸುಂದರಾವಾಗಿ ಬಿಡಿಸುತ್ತಾರೆ.ಇವರ ಕಲಾ ನೈಪುಣ್ಯತೆ ಯಾವ ಚಿತ್ರ ಕಲಾ ಶಾಲೆಯನ್ನೂ ಮೀರಿಸುವಷ್ಟು ಕಣ್ಕಟ್ಟುತ್ತದೆ.ಅದರಲ್ಲೊಂದು ಸಂದೇಶ,ಸಂಸ್ಕೃತಿಯ ಪ್ರತೀಕವಿದೆ.

ಅಲ್ಲದೇ ಭೂದೇವಿಗಾಗಿ ಸೀರೆ ಬಳೆ ಆಭರಣ ,ಸೀಮಂತಕ್ಕೆ ಅನ್ವಯವಾಗುವಂತೆ ಅಡುಗೆ ತಯಾರಾಗುತ್ತೆ.ಮನೆಯ ಗಂಡಸರು ಹಿಂದಿನ ಸಂಜೆ ಜಮೀನಿನಲ್ಲಿ ಬೆಳೆದ ತರಹೇವಾರಿ ತರಕಾರಿ, ಸೊಪ್ಪು ಎಲ್ಲಾ ತರುತ್ತಾರೆ.ಹುಣ್ಣಿಮೆಯ ನಸುಕಿನಲ್ಲಿ ಎದ್ದು ಸ್ನಾನ ಮಾಡಿ ಮನೆ ಹೆಂಗಸರು ಸಿದ್ದ ಪಡಿಸುವ ಚರಗವನ್ನು (ಇದನ್ನು ಹಚ್ಚಂಬಲಿ ಎಂದೂ ಕರೆಯುತ್ತಾರೆ.)ಇಡೀ ಹೊಲಕ್ಕೆ ಬೀರುತ್ತಾರೆ.ಈ ಚರಗಕ್ಕೆ ತರತರದ ಸೊಪ್ಪುಅಕ್ಕಿ ಸೇರಿಸಿ ಬೇಯಿಸಿರುತ್ತಾರಂತೆ.

ಜಮೀನಿನ ಬಳಿ ಪೂಜೆಯ ಸ್ಥಳ,ಮನೆಮಂದಿ ಕುಳಿತು ಊಟ ಮಾಡುವ ಜಾಗ ಎಲ್ಲವೂ ಮೊದಲೇ ಅಣಿಯಾಗಿರುತ್ತದೆ.ಸೂರ್ಯ ಮೇಲೆರುವ ಮೊದಲೇ ಮನೆ ಮಂದಿ ಬಂಧುಗಳು  ಒಟ್ಟಾಗಿ ತಲೆಯ ಮೇಲೆ ಈ ,ಮಡಿಲೊಪ್ಪಿಸಲು ಸಿದ್ದಗೊಂಡ ತಿಂಡಿ ತಿನಿಸು,ವಗೈರೆ ತುಂಬಿದ ಭೂಮಣ್ಣಿ ಬುಟ್ಟಿ,ತಮಗೆ ತಯಾರಿಸಿದ ಆಹಾರ ಪೂಜಾ ಸಾಮಗ್ರಿಗಳನ್ನು ಹೊತ್ತು  ಭಕ್ತಿ ಭಾವದಿಂದ ಜಮೀನಿನೆಡೆಗೆ ಹೋಗುವುದು ನಿಜಕ್ಕೂ ತುಂಬಾ ಶ್ಲಾಘನೀಯ. ನನಗೂ ಇಲ್ಲಿನ ಜನ ಆಧರ ಆತಿಥ್ಯದಿಂದ ಆಹ್ವಾನವಿಡುತ್ತಾರಾದರೂ ಸಮಯದ ಅಭಾವದಿಂದ ಸ್ವಲ್ಪ ಕಣ್ಣು ಹಾಯಿಸಿ ಖುಷಿಗೊಂಡೆ. ಜಮೀನಿನ ನಿಗದಿತ ಜಾಗದಲ್ಲಿ ಪೂಜ ಕೈಂಕರ್ಯಗಳು ವಿಧಿಬದ್ದವಾಗಿ ನಡೆದ ಬಳಿಕ ,ಕೆಲವು ಸಸಿಗಳನ್ನು ಕಿತ್ತು ಬುಡದಲ್ಲಿ ಕಡುಬು ಹೂತಿಡುವುದು ವಾಡಿಕೆ.ನಂತರ ಕಟಾವಿನ ಹೊತ್ತಿನಲ್ಲಿ ಇದನ್ನು ಪ್ರಸಾದವಾಗಿ ಸ್ವೀಕಾರ ಮಾಡುವ ಪ್ರತೀತಿಯಂತೆ.

ಈ ಹಬ್ಬಕ್ಕೆ ಎಲ್ಲಾ ಇತರ ಅಡುಗೆಯ ಜೊತೆಗೆ ಚೀನಿ ಕಾಯಿ ಯಾ ಸೌತೆಕಾಯಿ ಕಡುಬು ಬಾಳೆ ಎಲೆಯಲ್ಲಿ ಸುತ್ತಿ  ,ಅವಶ್ಯವಾಗಿ ಮಾಡುತ್ತಾರೆ.ಭೂತಾಯಿಗೆ  ಸ್ತ್ರೀ ಗೆ ಶೃಂಗರಿಸಿದಂತೆ ಅಲಂಕರಿಸಿ ಮುತ್ತೈದೆಯರು  ಅರಿಶಿನ ಕುಂಕುಮ ಸಹಿತ ಉಡಿ ತುಂಬಿ ಆರತಿ ಮಾಡಿ ತಿಂಡಿ ತಿನಿಸುಗಳನಿಟ್ಟು ಬಯಕೆ ಶಾಸ್ತ್ರ ಮಾಡುತ್ತಾರೆ. ಮಾಡಿದ ಅಡುಗೆಯಲ್ಲಿ ಇಲಿಗೆ ಒಂದು ಎಡೆ,ಕಾಗೆಗೆ  ಒಂದು ಎಡೆ ಇಡುತ್ತಾರೆ. ಕಾಗೆಯಲ್ಲೂ ಎರಡೂ ಬಗೆಯಂತೆ‌. ಒಂದು ದೆವ್ವ ಕಾಗೆ,ಇನ್ನೊಂದು ಕುಂಬಾರ ಕಾಗೆ.ದೆವ್ವ ಕಾಗೆ ತಿಂದರೆ ಒಳ್ಳೆಯ ದಾಗುತ್ತದೆ ಎನ್ನುವ ವಿಶ್ವಾಸ.ಇದಾದ ಬಳಿಕ ಎಲ್ಲರೂ ಜಮಿನಿನಲ್ಲೇ ಕುಳಿತು ಬೋಜನ ಮುಗಿಸಿ ವಿನೋದದಿಂದ ಕಾಲ ಕಳೆಯುತ್ತಾರೆ.

ಕಾಂಚಾಣಂ ಸರ್ವತ್ರ ಸಾಧನಂ ಎಂದು ಬೀಗುವ ಹಮ್ಮಿನ ನಡುವೆ ಈ ಅರ್ಥಪೂರ್ಣ ಆಚರಣೆಗಳು ,ಸಂಸ್ಕೃತಿಯು ತಲೆಯೆತ್ತಿ ಇನ್ನೂ ಸೊಗಡು ಕಳೆಯದೇ ಇರುವುದೇ ಹೆಮ್ಮೆಯ ವಿಚಾರ.ನಮ್ಮ ಬದುಕಿನ ಉಸಿರಾಗಿರುವ ಹಸಿರಿನ ಸಿರಿಗೆ ನಾವು ತಗ್ಗಿ ಬಗ್ಗಿ ಗೌರವಿಸುವ ಸತ್ಸಂಪ್ರದಾಯ ಹೀಗೆ ಅನುಗಾಲ ಮುಂದುವರೆಯಲಿ ಎನ್ನುವುದೇ ಆಶಯ.

ಹೊಸತೇನೇ ಇರಲಿ ಅಲ್ಲಿ ಹಳತರ ಗಮಲು ಹಾಗೇ ಇರಲಿ. ನಮ್ಮತನಕೊಂದು ಗೌರವ ಧನ್ಯತೆ .ನಮ್ಮ ಸಲಹುವ ಭುವಿಗೊಂದು ಹೃದಯಪೂರ್ವಕ ಮಾನ್ಯತೆ ಸದಾ ನವಿರಾಗಿರಲಿ.ನಮಗೆ ಅನ್ನವನ್ನು ಕರುಣಿಸುವ “ಅನ್ನಪೂರ್ಣೆ” ಸದಾ ವಂದ್ಯಳು ,ಎನ್ನುತ್ತಾ ಬಹುಷಃ ಪ್ರತಿಕಾರ್ಯ ,ಭೋಜನ ಇತ್ಯಾದಿ ಸಮಯಗಳಲ್ಲಿ ವಸುಂಧರೆಯ ನಾಮಸ್ಮರಣೆಯೊಂದಿಗೆ ಈ ಶ್ಲೋಕದ ಸಾಲುಗಳ ಅನುರಣನೆ ಹೆಚ್ಚು ಪ್ರಸ್ತುತವಾಗಬೇಕು ಅಲ್ಲವೇ?
.

ಅನ್ನಪೂರ್ಣೆ ಸದಾಪೂರ್ಣೆ ಶಂಕರ ಪ್ರಾಣ ವಲ್ಲಭೆ
ಜ್ಞಾನ ವೈರಾಗ್ಯ ಸಿಧ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತೀ               

 ‘

-ಲತಾ(ವಿಶಾಲಿ) ವಿಶ್ವನಾಥ್

1 Response

  1. Anonymous says:

    ಉತ್ತಮ ಲೇಖನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: