ನಾಷ್ಟಾ ತಿಂದ್ರೆ ನಷ್ಟ..
‘ಏನಪ್ಪಾ ರವಿ ನಾಷ್ಟಾ ಮಾಡಿದ್ಯಾ.?’
‘ನಂದು ನಾಷ್ಟಾ ಆಯ್ತು. ನಿಂದು. ? ಬೆಳಿಗ್ಗೆನೆ ಎಲ್ಲೋ ಹೊರಟಿರೊ ಹಾಗಿದೆ.’
‘ಆಯ್ತು ಪಾ. ಮನೆಲಿ ಬಿಸಿಬಿಸಿ ದೋಸೆ ಮಾಡಿದ್ರು,
ಸರಿ ಸ್ವಲ್ಪ ಅರ್ಜೆಂಟ ಕೆಲಸ ಇದೆ ಮತ್ತೆ ಭೇಟಿ ಆಗೋಣ, ಬರ್ತೀನಿ ಆಯ್ತಾ.’
ಎಂದು ರಮೇಶ ಅಲ್ಲಿಂದ ಹೊರಟ.
ಈ ಸೂಪರ್ ಫಾಸ್ಟ್ ಜೀವನದಲ್ಲಿ ಫಾಸ್ಟ್ ಫುಡ್ ಹಾಗೂ ನಾಷ್ಟಾಗಳಿಗೆ ನಾವೇಷ್ಟು ಒಗ್ಗಿಕೊಂಡಿದ್ದೇವೆ ಎಂದರೆ ಹಿಂದೆ ನಮ್ಮ ಹಿರಿಯರು ಬೆಳಿಗ್ಗೆ ಸೇವಿಸುತ್ತಿದ್ದ ಹಾಲು ರೊಟ್ಟಿ ಮುದ್ದೆ ತರಕಾರಿ ಪಲ್ಯೆಗಳು ಎಲ್ಲವನ್ನೂ ಮರೆಯುತ್ತಿದ್ದೇವೆ.
ಎದ್ದ ತಕ್ಷಣ ಆಫೀಸಿಗೆ ಹೋಗುವ ತರಾತುರಿಯಲ್ಲಿ ಮನೆಯಲ್ಲಿ ಮಾಡಿದ ಚಿತ್ರಾನ್ನ, ಇಡ್ಲಿ , ದೋಸೆ , ಮ್ಯಾಗಿ, ಬ್ರೇಡ್ , ಉಪ್ಪಿಟ್ಟು , ಅವಲಕ್ಕಿ ಹೀಗೆ ಹತ್ತು ಹಲವು ಬಹುಬೇಗ ತಯಾರಾಗುವ ತಿನಿಸುಗಳ ಮೊರೆ ಹೋಗುತ್ತಿದ್ದೇವೆ. ಆಫೀಸಿಗೆ ತಡವಾಗುತ್ತಿದೆ, ಟ್ರಾಫಿಕ್ ಇರುತ್ತದೆ, ಲೇಟ್ ಆದರೆ ಆಫೀಸಿನಲ್ಲಿ ಬಾಸ್ ಬಯ್ಯುತ್ತಾರೆ ಎಂಬ ಹತ್ತು ಹಲವು ಕಾರಣಗಳಿಂದ ಹಲವರು ಹೋಟೆಲಿನಲ್ಲಿ ಏನಾದರೂ ತಿಂದರಾಯಿತು ಎಂದು ಮನೆಯಿಂದ ಹೊರಟು ಬಿಡುತ್ತಾರೆ.
‘ಎನ್ ಕೊಡ್ಲಿ ಸರ್.’
‘ನಾಷ್ಟಾ ಎನಿದೆಯಪ್ಪಾ.?’
‘ಇಡ್ಲಿ ವಡೆ, ಪೂರಿ, ದೋಸೆ, ಪಲಾವ್, ಬೀಸಿಬೆಳೆ ಬಾತ್’ ಹೀಗೆ ಪಟಪಟ ಎಂದು ಮಾಣಿ ನೀಡುವ ದೊಡ್ಡ ಪಟ್ಟಿಯಲ್ಲಿ ಅಕ್ಕಿ , ಮೈದಾಹಿಟ್ಟು ಹಾಗೂ ಎಣ್ಣೆಯಿಂದ ಮಾಡಿದ ಖಾದ್ಯಗಳೇ ಹೆಚ್ಚಾಗಿರುತ್ತವೆ.
ಅಯ್ಯೋ ತಡವಾಗುತ್ತಿದೆ ಎಂದು ಒಂದೆರಡು ಇಡ್ಲಿ ತಿಂದು ಎದ್ದು ಬಿಡುತ್ತೇವೆ.
ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆನೆಂದರೆ ನಾವು ಪ್ರತಿದಿನ ನಾಷ್ಟಾ ಎಂದು ಸೇವಿಸುವ ಆಹಾರದಲ್ಲಿ ಹೆಚ್ಚಾಗಿ ಅಕ್ಕಿ, ಮೈದಾ , ಸಕ್ಕರೆ , ಉಪ್ಪು ಹಾಗೂ ಹಾಲಿನ ಅಂಶ ಹೆಚ್ಚಾಗಿರುತ್ತವೆ ಎಲ್ಲರಿಗೂ ತಿಳದಿರುವಂತೆ ಇವುಗಳನ್ನು ಪಂಚ ಬಿಳಿ ವಿಷಗಳೆಂದೇ ಕರೆಯಲಾಗುತ್ತದೆ.
ಆಹಾರ ತಜ್ಞರ ಪ್ರಕಾರ ಅನ್ನವನ್ನು ಬಿಸಿಯಾಗಿದ್ದಾಗಲೇ ಸ್ವಲ್ಪ ಸೇವಿಸಿದರೆ ಒಳಿತು ಏಕೆಂದರೆ ತಣ್ಣಗಾದ ಮೇಲೆ ಅದರಲ್ಲಿರುವ ಆರ್ಸೇನಿಕ್ ಅಂಶ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಅದರಲ್ಲಿಯು ರಾತ್ರಿ ಉಳಿದ ಅನ್ನವನ್ನು ಚಿತ್ರಾನ್ನ ಮಾಡಿ ತಿನ್ನುವುದು ರುಚಿಕರವಾಗಿದ್ದರು ತಣ್ಣಗಾಗಿರುವ ಅನ್ನದಲ್ಲಿ ಮಾರಣಾಂತಿಕ ಆರ್ಸೇನಿಕ್ ಅಂಶ ಯಥೇಚ್ಛವಾಗಿರುವುದರಿಂದ ರಾತ್ರಿ ಉಳಿದ ಅನ್ನವನ್ನು ಬಳಸದೆ ಇರುವುದೇ ಸೂಕ್ತ.
ಹಾಗೇ ಗೋಧಿಯ ಹಿಟ್ಟನ್ನು ನುಣ್ಣಗೆ ನಯಗೊಳಿಸಿ, ಶುದ್ಧೀಕರಿಸಿ ಹಾಗು ಬೆನ್ಜೈಲ್ ಬೆನ್ಜೋಯಿಕ್ ಪೆರೋಕ್ಸೈಡ್ ಎನ್ನುವ ರಾಸಾಯನಿಕವನ್ನು ಬಳಸಿ ಬಿಳುಚಿಸಿದಾಗ ಅಚ್ಚ ಬಿಳಿಯ ಬಣ್ಣದ ಮೈದಾ ಹಿಟ್ಟು ಸಿದ್ದವಾಗುತ್ತದೆ. ಇದೇ ಕಾರಣದಿಂದಾಗಿ ಮೈದಾದಿಂದ ತಯಾರಿಸಿದ ಖಾದ್ಯಗಳ ಅತಿಸೇವನೆಯಿಂದ ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು, ಕಿಡ್ನಿಗಳಲ್ಲಿ ಕಲ್ಲುಗಳು ಆಗುವ ಸಾಧ್ಯತೆಗಳಿವೆ.
ಅಂಗಡಿಗಳಲ್ಲಿ ತಯಾರಿಸಿದ ಮಕ್ಕಳಿಗೆ ಇಷ್ಟವಾಗುವ ಅನೇಕ ತಿನಿಸುಗಳು ಸಿಗುವುದರಿಂದ ತಾಯಂದಿರು ಮಕ್ಕಳು ಹಸಿವು ಎಂದ ತಕ್ಷಣ ಬ್ರೆಡ್ಡು , ಬಿಸ್ಕೇಟು , ಕೇಕು ಅವರ ಮುಂದಿಟ್ಟು ಬಿಡುತ್ತಾರೆ. ಇದು ಮಕ್ಕಳು ಹಲವು ಕಾಯಿಲೆಗಳಿಗೆ ತುತ್ತಾಗುವಂತೆ ಮಾಡುತ್ತದೆ. ಅದೇ ರೀತಿ ಅಪರ್ಯಾಪ್ತ ಎಣ್ಣೆಯಿಂದ ತಯಾರಾಗುವ ಅನೇಕ ತಿಂಡಿ ತಿನಿಸುಗಳಿಂದ ದೂರವಿರುವುದು ಉತ್ತಮ.
ಹಿಂದೆ ನಮ್ಮ ಹಿರಿಯರು ಎನಿಸಿಕೊಂಡವರು ಬೆಳಿಗ್ಗೆ ಎದ್ದ ತಕ್ಷಣ ಐದಾರು ರೊಟ್ಟಿ , ಮೊಸರು ಹತ್ತು ಹಲವು ತರಕಾರಿಗಳ ಪಲ್ಯೆಗಳು, ಮುದ್ದೆ ಹೀಗೆ ಆರೋಗ್ಯಯುತ ಆಹಾರವನ್ನು ನಿಧಾನವಾಗಿ ಸಮಾಧಾನದಿಂದ ಸೇವಿಸಿ ಕೆಲಸಕ್ಕೆ ತೆರಳುತ್ತಿದ್ದರು. ಈಗಲೂ ಹಲವು ಗ್ರಾಮೀಣ ಭಾಗದ ಜನರಿಗೆ ನಾಷ್ಟಾ ಎಂದರೆ ಎನೆಂಬುದೆ ಗೊತ್ತಿಲ್ಲ. ದಿನದ ಮೂರು ಹೊತ್ತು ಆರೋಗ್ಯಯುತ ಊಟವನ್ನೆ ಸೇವಿಸುತ್ತಾರೆ ಹಾಗೇ ಆರೋಗ್ಯವಂತರಾಗಿ ಇರುತ್ತಾರೆ.
ಎಲ್ಲವೂ ಫಾಸ್ಟ್ ಫಾಸ್ಟಾಗಿ ಆಗಬೇಕು ಎಂದೂ ಬಯಸುವ ನಗರ ಪ್ರದೇಶದವರ ಆಯಸ್ಸು ಕೂಡ ಫಾಸ್ಟಾಗಿ ಮುಗಿದುಬಿಡುತ್ತದೆ. ಸದೃಢ ದೇಹದಲ್ಲಿ ಸದೃಢ ಮನಸ್ಸನ್ನು ನೆಲೆಸುವಂತೆ ಮಾಡಿ ಸದೃಢ ಸಮಾಜವನ್ನು ನಿರ್ಮಿಸಬೇಕೆಂದಿದ್ದರೆ ನಾವು ನಮ್ಮ ಆಹಾರ ಕ್ರಮವನ್ನು ಬದಲಿಸಬೇಕಿದೆ..
ಇನ್ನೊಮ್ಮೆ ಆತ್ಮೀಯರು ಭೇಟಿಯಾದರೆ “ನಾಷ್ಟಾ ಆಯ್ತಾ.? ” ಎಂದು ಕೇಳುವ ಮುನ್ನ ಸ್ವಲ್ಪ ಯೋಚಿಸಿ…...
-ರಾಜೇಶ ಎಸ್ ಜಾಧವ , ಬಾಗಲಕೋಟೆ