‘ಹಲೋ’ ಹೇಗಿದ್ದೀರಿ?

Share Button

ಯಾವುದೋ ಹೊಸ ಸ್ಥಳದಲ್ಲಿ ವಿಳಾಸ ಕೇಳಲು, ಮಾಹಿತಿ ಬೇಕಾದಾಗ, ಅಂಗಡಿಗಳಲ್ಲಿ, ಮಾಲ್ ಗಳಲ್ಲಿ, ಆಫೀಸುಗಳಲ್ಲಿ, ರೈಲ್ವೇ ಸ್ಟೇಷನ್ ನಲ್ಲಿ, ಬಸ್ಸಿನಲ್ಲಿ……ಹೀಗೆ ಹಲವಾರು ಕಡೆ ಅಪರಿಚಿತ ವ್ಯಕ್ತಿಗಳೊಂದಿಗೆ ಸಂಭಾಷಣೆ ಮಾಡಬೇಕಾದ ಸಂದರ್ಭ ಎದುರಾಗುತ್ತದೆ. ಮಾತನ್ನು ಹೇಗೆ ಆರಂಭಿಸಿಲಿ ಎಂದು ಯೋಚಿಸುತ್ತಿರುವಾಗಲೇ ಅನೈಚ್ಚಿಕವಾಗಿ ‘ಹಲೋ‘ ಎಂದಿರುತ್ತೇವೆ! ಇದಕ್ಕೆ ಪ್ರತಿಕ್ರಿಯೆಯಾಗಿ ಆ ವ್ಯಕ್ತಿ ಮುಗುಳುನಗುತ್ತಾ ‘ಏನು’ ಎಂಬಂತೆ ನಮ್ಮತ್ತ ನೋಡುತ್ತಾರೆ. ತನ್ನಿಂದ ಸಾಧ್ಯವಾದ ಸಹಾಯ ಮಾಡುತ್ತಾರೆ. ಇದು ‘ಹಲೋ’ ಎಂಬ ಪದವು ಸೃಷ್ಟಿಸುವ ದಿಢೀರ್ ಸ್ನೇಹ! ಪರಿಚಿತರಿರಲಿ, ಅಪರಿಚಿತರಿರಲಿ ‘ಹಲೋ’ ಎನ್ನಲು ಅಡ್ದಿಯಿಲ್ಲ. ನೂರಾರು ದೇಶಗಳ ಗಡಿರೇಖೆಗಳನ್ನು ಮೀರಿ, ಸಾವಿರಾರು ಭಾಷೆಗಳ ಎಲ್ಲೆಗಳನ್ನು ಮೀರಿ, ಜಗತ್ತಿನಾದ್ಯಂತ ಲೀಲಾಜಾಲವಾಗಿ ಹರಿದಾಡುತ್ತಿರುವ ಮಾಂತ್ರಿಕ ಪದ ‘ಹಲೋ’!

ಭಾರತೀಯ ಸಂಸ್ಕೃತಿಯಲ್ಲಿ ಪರಸ್ಪರ ವಂದಿಸುವಾಗ ‘ನಮಸ್ಕಾರ’ ಅಥವಾ ‘ನಮಸ್ತೆ‘ ಅನ್ನುವ ಪದ್ಧತಿ . ಗುರುಹಿರಿಯರು ಎದುರಾದಾಗ ಎರಡೂ ಕೈಗಳನ್ನು ಜೋಡಿಸಿ, ಸ್ವಲ್ಪ ಮುಂದಕ್ಕೆ ಬಾಗಿ ‘ನಮಸ್ತೆ’ ಎನ್ನುವುದು ಶಿಷ್ಟಾಚಾರ. ಸೌಜನ್ಯಯುತವಾದ, ಹೆಚ್ಚಿನ ಸಂದರ್ಭಗಳಿಗೆ ಸೂಕ್ತವೆನಿಸುವ ಹಾಗೂ ಎಲ್ಲಾ ವಯೋಮಾನದವರಿಗೂ ಸರಿಹೊಂದುವ ಸಂಭಾಷಣಾ ಪದ ‘ನಮಸ್ತೆ’. ಈ ದಿನಗಳಲ್ಲಿ, ಪಾಶ್ಚಾತ್ಯ ಭಾಷೆಗಳ ಪ್ರಭಾವದಿಂದ, ಬಹುತೇಕ ಸಂದರ್ಭಗಳಲ್ಲಿ ಸಾಂಪ್ರದಾಯಿಕ ನಮಸ್ಕಾರದ ಬದಲು ತತ್ಕ್ಷಣ ‘ಹಲೋ’ ಎಂದು ಬಿಡುತ್ತೇವೆ. ಇದು ಕೂಡ ಹೆಚ್ಚಿನ ಸನ್ನಿವೇಶಗಳಿಗೆ ಒಪ್ಪುವುದರಿಂದ ಹಲೋ ಪದದ ಬಗ್ಗೆ ಯಾರೂ ತಕರಾರು ಎತ್ತಿದಂತಿಲ್ಲ. ಉದ್ಯೋಗದ ಸ್ಥಳದಲ್ಲಿ, ವ್ಯವಹಾರದ ಮಾತುಕತೆಗಳಲ್ಲಿ ನಮಸ್ಕಾರದ ಬದಲು ಹಲೋ ಎನ್ನುತ್ತಾ ಕೈಕುಲುಕುವುದು, ಸಮಯ ಸಂದರ್ಭಕ್ಕೆ ತಕ್ಕಂತೆ ಗುಡ್ ಮಾರ್ನಿಂಗ್, ಗುಡ್ ಈವ್ ನಿಂಗ್ ಅನ್ನುತ್ತಾ ದೂರದಿಂದಲೇ ತಲೆಯಾಡಿಸುವುದು, ಕೈ ಸನ್ನೆ ಮಾಡುವುದು ವಾಡಿಕೆ. ಸ್ನೇಹಿತರ ವಲಯದಲ್ಲಿ ಹಾಯ್, ಕಣೋ, ಮಚ್ಚಾ, ಬಚ್ಚಾ…ಇತ್ಯಾದಿ ಸಲಿಗೆಯ ಪದಗಳೂ ಅವರವರ ಭಾವಕ್ಕೆ ತಕ್ಕಂತೆ ಚಾಲ್ತಿಯಲ್ಲಿವೆ.

ನಮ್ಮ ದೇಶದಲ್ಲಿ ನಮಸ್ತೆ ಪದವು ದೇಶದಾದ್ಯಂತ ಬಳಕೆಯಾಗುತ್ತಿದರೂ, ಕೆಲವು ರಾಜ್ಯದ ಭಾಷೆಗಳಲ್ಲಿ ಸಮಾನಾರ್ಥಕವಾದ ಬೇರೆ ಪದಗಳಿವೆ. ಉದಾಹರಣೆಗೆ ತಮಿಳಿನ ‘ವಣಕ್ಕಂ’, ಕಾಶ್ಮೀರದ ಲಡಾಕಿನ ‘ಜೂಲೆ’ ಮುಂತಾದುವುಗಳು. ನಮ್ಮ ನೆರೆಯ ರಾಷ್ಟ್ರವಾದ ನೇಪಾಳದವರು ನಮ್ಮಂತೆಯೇ ಎರಡು ಕೈಗಳನ್ನು ಜೋಡಿಸಿ ‘ನಮಸ್ತೆ’ ಅಂದರೆ, ಶ್ರೀಲಂಕಾದವರು ಕೂಡ ಇದೇ ರೀತಿ ಕೈಗಳನ್ನು ಜೋಡಿಸಿ ‘ಆಯುಭವಾನ್‘ ಅನ್ನುತ್ತಾ ವಂದಿಸುತ್ತಾರೆ. ಬಹುತೇಕ ಪಾಶ್ಚಾತ್ಯ ದೇಶಗಳಲ್ಲಿ, ಹಲೋ ಅನ್ನುತ್ತಾ, ದೃಢವಾಗಿ ಕೈಕುಲುಕುವ ಪದ್ಧತಿ. ಫ್ರೆಂಚರು ನಸುನಗುತ್ತಾ ‘ಬೋನ್ಜೋರ್‘ ಎನ್ನುತ್ತಾರೆ. ಚೀನಾದವರು ಪರಸ್ಪರ ಭೇಟಿ ಆದಾಗ ಮುಂದಕ್ಕೆ ಬಾಗಿ ಗೌರವವನ್ನು ಸೂಚಿಸುತ್ತಾ ‘ನೀ ಹಾವ್‘ ಅಂದರೆ ಜಪಾನೀಯರು ಕೂಡ ಮುಂದಕ್ಕೆ ಬಾಗಿ ‘ಕೊನ್ನಿಚಿವಾ’ ಎನ್ನುತ್ತಾ ಶುಭಾಶಂಸನೆ ಮಾಡುತ್ತಾರೆ.

ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಉದ್ಯೋಗ ಮಾಡುವವರಿಗೆ, ಯಾವ ದೇಶದ ಜನರೊಂದಿಗೆ ವ್ಯವಹಾರ ನಡೆಸುತ್ತಾರೆಯೋ ಆ ದೇಶದ ಆಚಾರ, ವಿಚಾರ, ಆಹಾರ, ಸಂಸ್ಕೃತಿಗಳ ಬಗ್ಗೆ ಪರಿಚಯವನ್ನೂ ತಿಳಿಯಪಡಿಸುವುದು ತರಬೇತಿಯ ಭಾಗವಾಗಿರುತ್ತದೆ. ಉದಾಹರಣೆಗೆ ಶೇಕ್ ಹ್ಯಾಂಡ್ ಮಾಡುವಾಗ ತೀರಾ ಬಿಗಿಯಾಗಿ ಅಥವಾ ತೀರಾ ಪೇಲವವಾಗಿ ಕೈ ಕುಲುಕಬಾರದು. ಕೈ ಒದ್ದೆ ಇರಬಾರದು, ಪೆನ್ನು, ಪೇಪರ್ ಇತ್ಯಾದಿ ಇರಬಾರದು, ಮುಖ ನೋಡಿ ವಿಶ್ ಮಾಡಬೇಕು, ತಮ್ಮ ವಿಸಿಟಿಂಗ್ ಕಾರ್ಡ್ ಅನ್ನು ಎರಡೂ ಕೈಗಳಲ್ಲಿ ಹಿಡಿದು ಕೊಡಬೇಕು ಇತ್ಯಾದಿ.

1973 ರಲ್ಲಿ, ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳ ನಡುವೆ ಸಂಭವಿಸಿದ ‘ಯೋಮ್ ಕಿಪ್ಪೂರ್’ ಯುದ್ಧದ ನಂತರ ಶಾಂತಿಯುತವಾಗಿ ಬಾಳಬೇಕೆಂಬ ಸಂದೇಶವನ್ನು ಸಾರುವ ಸಲುವಾಗಿ, ಬ್ರೈನ್ ಮತ್ತು ಮ್ಯಾಕ್ ಕೊರ್ಮಾಕ್ ಎಂಬವರು ನವಂಬರ್ 21 ರಂದು ‘ವಿಶ್ವ ಹಲೋ ದಿನ’ ಎಂದು ಆಚರಿಸಬೇಕೆಂಬ ಪರಿಕಲ್ಪನೆಯನ್ನು ಮುಂದಿಟ್ಟರು. ವರ್ಷದಲ್ಲಿ ಒಂದು ದಿನವಾದರೂ, ನಮ್ಮ ಹಿತೈಷಿಗಳನ್ನು ನೆನಪಿಸಿಕೊಳ್ಳುತ್ತಾ ಮಾತನಾಡುವುದರ ಜೊತೆಗೆ, ಯಾವುದೋ ಕಾರಣದಿಂದ ನಮ್ಮಿಂದ ದೂರವಾಗಿರುವವರನ್ನೂ ‘ ಹಲೋ’ ಎಂದು ಮಾತನಾಡಿಸಿ ಸ್ನೇಹವನ್ನು ಬೆಳೆಸಬೇಕು ಎಂಬುದು ‘ವಿಶ್ವ ಹಲೋ ದಿನ’ ಉದ್ದೇಶ.

‘ಹಲೋ’ ಪದವನ್ನು ಟೆಲಿಫೋನ್ ಸಂಭಾಷಣೆಗಾಗಿ ಪ್ರಥಮಬಾರಿಗೆ ಬಳಸಿದವರು ವಿಜ್ಞಾನಿಯಾದ ಥಾಮಸ್ ಎಡಿಸನ್ . ಆದರೆ ಈಗಿನ ‘ಹಲೋ’ ಬಹಳ ಹಿರಿದಾದ ಅರ್ಥ ಮತ್ತು ವ್ಯಾಪ್ತಿಯನ್ನು ಹೊಂದಿದೆ . ಇಂದಿನ ದಿನಗಳಲ್ಲಿ ತಂತ್ರಜ್ಞಾನದ ಅವಿಷ್ಕಾರದಿಂದಾಗಿ, ಕುಳಿತಲ್ಲಿಂದಲೇ ಪ್ರಪಂಚದ ಯಾವ ಮೂಲೆಗೂ ನಮ್ಮ ಧ್ವನಿ ‘ಹಲೋ’ ತಲಪಬಲ್ಲುದು. ಹೀಗಿರುವಾಗ, ‘ಹಲೋ ದಿನ’ದ ಆಶಯವನ್ನುಸುಲಭವಾಗಿ ಕಾರ್ಯರೂಪಕ್ಕೆ ತರಬಹುದಲ್ಲವೇ?

– ಹೇಮಮಾಲಾ.ಬಿ

(02/12/2018ರ  ಉದಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಬರಹ)

6 Responses

 1. ಆಶಾ says:

  ಸರಿಯಾಗಿದೆ ಕ್ರಮ ….

 2. Nayana Bajakudlu says:

  ಒಂದು ಸಣ್ಣ ಪದದೊಳಗೆ ಎಷ್ಟೊಂದು ಗಾಢವಾದ ಅರ್ಥ ಭಾವ ಅಡಗಿದೆ?, ನೋಡಲು ಒಂದು ಸಾಮಾನ್ಯವಾದ ಪದ, ಆದರೆ ಅದರೊಳಗಡಗಿರೋ ಹಲವು ರೀತಿಯ ಸೌಹಾರ್ದಯುತ ಭಾವನೆಗಳನ್ನು ಮನದಟ್ಟಾಗುವಂತೆ ವಿವರಿಸಿದ್ದೀರಿ.
  ಬಹಳ ಚೆನ್ನಾಗಿದೆ ಮೇಡಂ ಲೇಖನ.

 3. Balachandra Bhat says:

  ನಿಮ್ಮ ಬರಹ ಓದಿದೆ. ಓದಿ ಖುಷಿಯಾಯಿತು. ಚೆನ್ನಾಗಿದೆ.

 4. Umesh Bogur says:

  ನಮಸ್ಕಾರ ಅಕ್ಕಾರ ಚೆನ್ನಾಗಿ ಇದೆ ಬರಹ

 5. Shruthi Sharma says:

  Very nice writing 🙂

 6. Shankari Sharma says:

  ಬರಹ ತುಂಬಾ ಚೆನ್ನಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: