ಸಾಧಿಸಿದೆನೆಂಬ ಭಾವವೇ ಸಂತೋಷ

Share Button

ಇತ್ತೀಚೆಗೆ ನೋಡಿದ ವೀಡಿಯೋ ತುಣುಕೊಂದರಲ್ಲಿ, ಮಲಗಿದ್ದ ಪುಟ್ಟ ಮಗುವೊಂದು ತನ್ನನ್ನು ಮಲಗಿಸಿದ್ದ ಮಂಚದಿಂದ ಇಳಿಯಲು ಹರಸಾಹಸ ಮಾಡುತ್ತಿತ್ತು. ಮಗುವಿನ ಕಾಲು ನೆಲಕ್ಕೆ ತಾಗುತ್ತಿರಲಿಲ್ಲವಾದುದರಿಂದ, ಬುದ್ಧಿವಂತಿಕೆಯಿಂದ ತನ್ನ ಸುತ್ತ ಇದ್ದ ದಿಂಬುಗಳನ್ನು ಒಂದೊಂದಾಗಿ ನೆಲಕ್ಕೆ ತಳ್ಳಿ ಅದರ ಮೇಲೆ ಕಾಲಿರಿಸಿ ಮಂಚದಿಂದ ಇಳಿದು ದಿಗ್ವಿಜಯದ ನಗೆ ಬೀರುವ ದೃಶ್ಯ ಬಲು ಸೊಗಸಾಗಿತ್ತು. ಆಗಷ್ಟೇ ನಡೆಯಲಾರಂಭಿಸಿದ ಮಗುವು, ಹ್ಹಿ..ಹ್ಹಿ ನಗುತ್ತಾ, ಹಿಂತಿರುಗಿ ನೋಡುತ್ತಾ, ಅಮ್ಮನ ಕೈಗೆ ಸಿಗಲಾರೆನೆಂದು ಓಡುವ ಸಂಭ್ರಮ ಹೇಳತೀರದು. ಚಿತ್ರಕ್ಕೆ ಅಡ್ಡಾದಿಡ್ಡಿ ಬಣ್ಣ ಬಳಿದ ಕಂದನ ಸಂತೋಷ, ಮನೆಮಂದಿಗೆಲ್ಲಾ ರುಚಿಯಾದ ಹಬ್ಬದಡುಗೆ ಮಾಡಿದ ಗೃಹಿಣಿಯ ಸಡಗರ, ಕೈಯಾರೆ ನೆಟ್ಟ ಗಿಡದಲ್ಲಿ ಅರಳಿದ ಮೊದಲು ಹೂವನ್ನು ನೋಡುವಾಗ ಲಭಿಸುವ ಸಂತಸ, ಬೆಳೆಯನ್ನು ಕಟಾವ್ ಮಾಡಿ ತಂದ ರೈತನ ಸಂತೃಪ್ತಿ, ಕೊನೆಯ ದಿನಾಂಕದ ಮೊದಲು ಪ್ರಮುಖ ಪ್ರಾಜೆಕ್ಟ್ ಮುಗಿಸಿದ ಉದ್ಯೋಗಿಯ ನಿರಾಳತೆ, ಅವಶ್ಯವುಳ್ಳವರಿಗೆ ತನ್ನಿಂದಾದ ಪುಟ್ಟ ಸಹಾಯವನ್ನು ಮಾಡಿದಾಗ ಸಿಗುವ ಧನ್ಯತಾ ಭಾವ ಇಂತಹ ಪುಟ್ಟ ವಿಷಯಗಳೂ ನಿತ್ಯಜೀವನದ ಸಂತೋಷದ ಸೆಲೆಗಳು.

ಶಾಲಾ ವಿದ್ಯಾರ್ಥಿಗಳಿಗೆ ತನ್ನ ತರಗತಿಯಲ್ಲಿ ಅಂಕ ಪಡೆಯುವುದಾಗಲಿ, ಆಟೋಟ ಚಟುವಟಿಕೆಗಳಲ್ಲಿ ಗೆಲ್ಲುವುದಾಗಲಿ ಸಾಧನೆಯಾದರೆ, ಉದ್ಯೋಗಿಗಳಿಗೆ ಕಾರ್ಯಕ್ಷಮತೆ, ವೃತ್ತಿಪರತೆ, ಬಡ್ತಿ, ಉತ್ತಮ ಅವಕಾಶಗಳು ಸಾಧನೆಯಾಗುತ್ತವೆ. ಮ್ಯಾರಥಾನ್ ಸ್ಪರ್ಧಿಗೆ ನಿಗದಿತ ದೂರವನ್ನು ಆದಷ್ಟು ಬೇಗ ಕ್ರಮಿಸುವುದು ಸಾಧನೆಯಾದರೆ, ವಯಸ್ಸಾದ ಅಜ್ಜಿಗೆ ಎರಡು ಕಿ.ಮೀ ವಾಕಿಂಗ್ ಮಾಡುವುದೇ ಸಾಧನೆ. ಎಲ್ಲಾ ಚಾರಣಿಗರಿಗೆ ಎವರೆಸ್ಟ್ ಏರಲು ಸಾಧ್ಯವಾಗದು. ಆದರೆ ತಮ್ಮ ಆಸಕ್ತಿಗೆ ತಕ್ಕಂತೆ ಕುದುರೆಮುಖ, ಕುಮಾರ ಪರ್ವತ ಇತ್ಯಾದಿ ಸ್ಥಳೀಯ ಬೆಟ್ಟಗಳ ತುದಿಯನ್ನೇರಿ, ಶಾರೀರಿಕ ಸುಸ್ತು ಇದ್ದರೂ ಎವರೆಸ್ಟ್ ಏರಿದ ಸಾಧನೆ ಮಾಡಿದಂತೆ ಸಡಗರ ಪಡುವವರೂ, ಸಂಪೂರ್ಣವಾಗಿ ಚಾರಣ ಮಾಡಲಾಗದಿದ್ದರೆ ದೊಡ್ಡ ನಷ್ಟವಾಯಿತು ಎಂಬಂತೆ ಕೊರಗುವವರೂ ಇದ್ದಾರೆ. ಇಲ್ಲಿ ತಾವೇ ನಿಗದಿಪಡಿಸಿಕೊಂಡ ಗುರಿಯು ಸಾಧನೆಯ ಮಾಪನಗಳಾಗುತ್ತವೆ.


ಪ್ರತಿಯೊಬ್ಬರ ಆಸಕ್ತಿ, ಅವಶ್ಯಕತೆ, ಅನಿವಾರ್ಯತೆ ಹಾಗೂ ಸೌಲಭ್ಯಗಳು ವಿಭಿನ್ನವಾಗಿರುವುದರಿಂದ ಅವರವರ ಬದುಕಿನ ಉದ್ದೇಶ ಮತ್ತು ಸಾಧನೆಯ ಮಾಪನಗಳೂ ವಿಭಿನ್ನ. ಉದ್ದೇಶ ಯಾವುದೇ ಇರಲಿ, ತಾವೇ ನಿಗದಿ ಪಡಿಸಿದ ಯಶಸ್ಸಿನ ಗುರಿಯನ್ನು ತಲಪಿದರೆ ಸಿಗುವ ಸಂತೋಷಕ್ಕೆ ಬೆಲೆ ಕಟ್ಟಲಾಗದು.

– ಹೇಮಮಾಲಾ.ಬಿ

5 Responses

 1. Nayana Bajakudlu says:

  ಗೃಹಿಣಿ , ರೈತ , ವಯಸ್ಸಾದವರು, ಸಣ್ಣ , ಮಗು ಹೀಗೆ ಎಲ್ಲರೂ ಹೇಗೆ ತಮ್ಮ ಸಣ್ಣ ಅತಿ ಸಣ್ಣ ಸಾಧನೆಗೆ ಖುಷಿ ಪಡ್ತಾರೆ ಅನ್ನೋದನ್ನು ಬಹಳ ಸೊಗಸಾಗಿ ವಿವರಿಸಿದ್ದೀರಿ ಮೇಡಂ.
  ಯಸ್ , ನಿಜ , ಪ್ರತಿಯೊಬ್ಬರಿಗೂ ಅವರವರ ಸಾಧನೆ ಅದು ಎಷ್ಟೇ ಚಿಕ್ಕದಾಗಿದ್ರು ದೊಡ್ಡದೇ .
  ನೈಸ್ ಆರ್ಟಿಕಲ್.

 2. Doddabasappa P says:

  ಬರಹ ಚೆನ್ನಾಗಿದೆ

 3. Shruthi Sharma says:

  Short and sweet. Superb

 4. Nambishan Ramesh says:

  Where there is a will there is way super

 5. Shankari Sharma says:

  ಬರಹ ತುಂಬಾ ಚೆನ್ನಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: