ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನ -14 ಡಿಸೆಂಬರ್

Share Button

ಉರಿಯುವ ಪುಟ್ಟ ಹಣತೆ,  ಸ್ವಿಚ್ ಅದುಮಿದಾಗ ಸದ್ದು ಮಾಡುವ ಗಾಡಿ, ಸೂರ್ಯತಾಪವನ್ನು ಬಳಸಿ ಶರ್ಕರ ಪಿಷ್ಟವನ್ನು ತಯಾರಿಸುವ ಹಸಿರೆಲೆಗಳು, ಮಕ್ಕಳಾಟದ ಕೇರಂ, ಕ್ರಿಕೆಟ್ ಆಟಗಾರ ಹೊಡೆದ ಸಿಕ್ಸರ್, ಹರಿಯುವ ನದಿ,  ಚಲಿಸುವ ಗಾಳಿ, ಚಿಗುರುವ ಬಳ್ಳಿ, ಕುದಿಯುತ್ತಿರುವ ಸಾರು, ಧುಮುಕುವ ಜಲಪಾತ, ಕುಸಿಯುತ್ತಿರುವ ಬೆಟ್ಟ, ಚಲಿಸುತ್ತಿರುವ ಬಸ್ಸು,  ಅಣುಬಾಂಬ್ ಸ್ಫೋಟ …ಹೀಗೆ ಮೇಲ್ನೋಟಕ್ಕೆ ಒಂದಕ್ಕೊಂದು ಸಂಬಂಧ ಇಲ್ಲದ ವಿಚಾರಗಳನ್ನೂ ಒಂದೇ ಎಳೆಯಿಂದ ಸಂಯೋಜಿಸಬಹುದಾದ ವಿಚಾರವೊಂದಿದೆ. ಅದುವೇ ಶಕ್ತಿ ( Energy)! 

ಈ ಜಗತ್ತು ಶಕ್ತಿಮಯವಾದುದು. ಎಲ್ಲೆಡೆ ಶಕ್ತಿಯ ವಿವಿಧ ರೂಪಗಳನ್ನು ನಾವು ಕಾಣುತ್ತೇವೆ. ವಿಜ್ಞಾನಿಗಳ  ಪ್ರಕಾರ ‘ವಿಶ್ವದಲ್ಲಿ ಶಕ್ತಿಯ ಪ್ರಮಾಣ ಸ್ಥಿರವಾಗಿರುತ್ತದೆ. ಶಕ್ತಿಯನ್ನು ಸೃಷ್ಟಿಮಾಡಲೂ , ನಾಶಗೊಳಿಸಲೂ ಸಾಧ್ಯವಿಲ್ಲ. ಆದರೆ ಶಕ್ತಿಯನ್ನು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ವರ್ಗಾಯಿಸಬಹುದು’ .ಇದನ್ನು ಶಕ್ತಿಯ ಸಂರಕ್ಷಣಾ ನಿಯಮ ಎಂದು ಕರೆಯುತ್ತಾರೆ,

ಪ್ರಪಂಚದ ಪ್ರತಿ ಚರಾಚರ ವಸ್ತುಗಳಲ್ಲಿ ಶಕ್ತಿ ಯಾವ ರೂಪದಲ್ಲಿ ಸಂಚಯನವಾಗಿರುತ್ತದೆ, ಹೇಗೆ ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾಗುತ್ತವೆ ಎಂಬುದು ವಿಜ್ಞಾನದ ಕೌತುಕ. ಉದಾಹರಣೆಗೆ ಜಲಾಶಯದಲ್ಲಿ ಶೇಖರವಾಗಿರುವ ನೀರು ತನ್ನಲ್ಲಿ ಅಂತಸ್ಥ ಶಕ್ತಿಯನ್ನು (Potential Energy) ಹೊಂದಿರುತ್ತದೆ. ನೀರನ್ನು ವೇಗವಾಗಿ ಹರಿಸಿದಾಗ  ಅದು ಗತಿಚೈತನ್ಯವಾಗಿ (Kinetic Energy) ಪರಿವರ್ತಿತಗೊಂಡು, ಟರ್ಬೈನ್ ಮೂಲಕ ಹಾಯಿಸಲ್ಪಟ್ಟಾಗ ವಿದ್ಯುಚ್ಚಕ್ತಿಯಾಗಿ (Electric Energy) ರೂಪುಗೊಳ್ಳುತ್ತದೆ.  ಟಾರ್ಚ್ ನ ಸ್ವಿಚ್ ಅದುಮಿದಾಗ, ಸೆಲ್ ನಲ್ಲಿರುವ ರಾಸಾಯನಿಕ ವಸ್ತುಗಳ ಶಕ್ತಿಯು (Chemical Energy), ವಿದ್ಯುಚ್ಚಕ್ತಿಯಾಗಿ, ಬಲ್ಬನ್ನು ಉರಿಸಿ ಬೆಳಕು ಹಾಗೂ ಉಷ್ಣಶಕ್ತಿಯಾಗಿ  ಹೊರಹೊಮ್ಮುತ್ತದೆ.  ಏನೂ ಮಾಡದೆ ಸುಮ್ಮನೆ ಇರುವ ವಸ್ತುಗಳಲ್ಲಿಯೂ ಅಂತಸ್ಥ ಶಕ್ತಿಯಿರುತ್ತದೆ. ಉದಾಹರಣೆಗೆ ಸ್ಥಿರವಾದ ಬಂಡೆ ಏನೂ ಮಾಡದಿದ್ದರೂ, ಅದನ್ನು ಕದಲಿಸಲು   ಅಪಾರ ಪ್ರಮಾಣದ ಯಾಂತ್ರಿಕ ಶಕ್ತಿ ( Mechanical Energy) ಬೇಕು.

ಹಾಗಾದರೆ ಶಕ್ತಿಯ ಮೂಲ ಯಾವುದು ? ಸ್ಥೂಲವಾಗಿ ಪಂಚಭೂತಗಳು ಅನ್ನಬಹುದೇನೋ. ಹಿಂದಿನ ಕಾಲದಲ್ಲಿ ಮನುಷ್ಯನು ಸೌರಶಕ್ತಿಯನ್ನು ಮಾತ್ರ ಹೆಚ್ಚಾಗಿ ಬಳಸಲು ಅರಿತಿದ್ದ. ಈಗಿನ ಜೀವನ ಶೈಲಿಯಲ್ಲಿ ವಿದ್ಯುಚ್ಚಕ್ತಿಯ ಬಳಕೆ ಅತಿ ಮುಖ್ಯ. ಭೂಮಿಯಲ್ಲಿ ನೈಸರ್ಗಿಕವಾಗಿ ದೊರೆಯುವ ಇಂಧನಗಳು, ಕಲ್ಲಿದ್ದಲು ಇತ್ಯಾದಿ  ವಿದ್ಯುತ್ತನ್ನು ಪಡೆಯುವ ಉತ್ಪಾದಿಸುವ ಮೂಲವಸ್ತುಗಳಾಗಿವೆ.  ಇತ್ತೀಚೆಗೆ ಥೆರ್ಮಲ್ ಪವರ್ ಹಾಗೂ ನ್ಯೂಕ್ಲಿಯರ್ ಪವರ್ ಕೂಡ ಬಳಸಲಾಗುತ್ತಿವೆ. ಉರಿಯುವ ಇಂಧನಗಳಿಂದ ವಿದ್ಯುಚ್ಚಕ್ತಿಯನ್ನು ಉತ್ಪಾದಿಸಬಹುದಾದರೂ, ಭೂಮಿಯಲ್ಲಿ ಅವುಗಳ ಲಭ್ಯತೆ ಸೀಮಿತ. ಬಳಕೆ ಹೆಚ್ಚಾಗುತ್ತಾ ಹೋದಂತೆ  ನೈಸರ್ಗಿಕ ಸಂಪನ್ಮೂಲಗಳ ಕೊರತೆ ಎದುರಾಗುವುದು ಅನಿವಾರ್ಯ.

ಹೀಗಾಗಿ ಪರ್ಯಾಯವಾಗಿ ಮರುಬಳಕೆ ಮಾಡಬಹುದಾದ ನವೀಕರಿಸಬಲ್ಲ ವಸ್ತುಗಳಿಂದ ಶಕ್ತಿಯನ್ನು ( Renewable Energy)  ಉತ್ಪಾದಿಸುತ್ತಿರುವುದು ಈ ಕ್ಷೇತ್ರದಲ್ಲಾದ ಬದಲಾವಣೆ. ಜಲಶಕ್ತಿ, ಅನಿಲಶಕ್ತಿ, ಸೌರಶಕ್ತಿ ಮೊದಲಾದುವುಗಳು ಈ ವರ್ಗಕ್ಕೆ ಸೇರುತ್ತವೆ. ನವೀಕರಿಸಬಲ್ಲ ಶಕ್ತಿಯ ಮೂಲಗಳು ಶ್ರೇಷ್ಠವಾದರೂ, ಇವುಗಳು ಪ್ರಕೃತಿಯ ಕೈಗೊಂಬೆಗಳಾದುದರಿಂದ ವರ್ಷದ ಎಲ್ಲಾ ಋತುಗಳಲ್ಲಿಯೂ  ಏಕಪ್ರಮಾಣದ ವಿದ್ಯುತ್ತನ್ನು ಒದಗಿಸಲು  ಸಾಧ್ಯವಾಗುತ್ತಿಲ್ಲ.  ಹಾಗಾಗಿ, ಶಕ್ತಿಯ ಮೂಲಗಳನ್ನು  ಸಂರಕ್ಷಿಸಬೇಕಾದುದು ಅಗತ್ಯ.

ನಾವು ಜವಾಬ್ದಾರಿಯುತ ನಾಗರಿಕರಾಗಿ ಶಕ್ತಿಯ ಮಿತವ್ಯಯ, ಸಾಧ್ಯವಿದ್ದಲ್ಲಿ ಮರುಬಳಕೆ ಹಾಗೂ ಸಂರಕ್ಷಣೆ ಮಾಡುವುದರ ಜೊತೆಗೆ ಮನೆಯಲ್ಲಿರುವ ಪುಟ್ಟ ಮಕ್ಕಳಿಗೂ ಈ ಬಗ್ಗೆ ಅರಿವು ಮೂಡಿಸುವುದು ಅಗತ್ಯ. ದೈನಂದಿನ ಚಟುವಟಿಕೆಗಳಲ್ಲಿ   ವಿದ್ಯುಚ್ಚಕ್ತಿಯನ್ನು  ಮಿತವಾಗಿ, ಪ್ರಜ್ಞಾವಂತರಾಗಿ ಬಳಸಿ, ಆ ಮೂಲಕ ಶಕ್ತಿಯ ಉಳಿಸಿಕೊಳ್ಳಲು ನೆರವಾಗಬೇಕು. ಹಾಗಿದ್ದರೆ ಮಾತ್ರ ನಮ್ಮ ಮುಂದಿನ ಪೀಳಿಗೆಗೆ ನೈಸರ್ಗಿಕ ಇಂಧನಗಳು ಲಭಿಸಲು ಸಾಧ್ಯ. ಉದಾಹರಣೆಗೆ, ಕೋಣೆಯಲ್ಲಿ ಯಾರೂ ಇಲ್ಲದಿರುವಾಗ ಫ್ಯಾನ್, ಲೈಟ್ ಆರಿಸುವುದು, ಸಾಧ್ಯವಾದಷ್ಟು ಕೆಲಸಗಳನ್ನು ಸೂರ್ಯನ ಬೆಳಕಿರುವಾಗಲೇ ಮಾಡುವುದು. ಹಳೆಮಾದರಿಯ ಸಿ.ಎಫ್.ಎಲ್ ಬಲ್ಬುಗಳ ಬದಲು ಕಡಿಮೆ ಶಕ್ತಿ ಬಳಸುವ ಎಲ್.ಇ.ಡಿಗಳನ್ನು ಉಪಯೋಗಿಸುವುದು, ಸ್ನಾನಕ್ಕೆ ಸೌರಶಕ್ತಿಯಿಂದ ನೀರು ಬಿಸಿಮಾಡುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದು.   ತೀರಾ ಅವಶ್ಯ ಎನಿಸಿದಾಗ ಮಾತ್ರ ವಾಹನ ಬಳಸುವುದು,  ಒಂದೇ ಕಡೆಗೆ ಹೋಗುವವರು ಮಾತನಾಡಿಕೊಂಡು ಒಟ್ಟಾಗಿ ಕಡಿಮೆ ವಾಹನಗಳಲ್ಲಿ ಅಥವಾ ಸಾರ್ವಜನಿಕ ಸಾರಿಗೆ ವ್ಯವಸ್ಥ್ಯೆವನ್ನು ಉಪಯೋಗಿಸುವುದು….. ಹೀಗೆ ವಿವಿಧ ರೂಪದಲ್ಲಿ ಶಕ್ತಿಯು ಪೋಲಾಗುವುದನ್ನು ತಪ್ಪಿಸಿದರೂ  ಶಕ್ತಿಯ ಸಂಪನ್ಮೂಲಗಳ ಸಂರಕ್ಷಣೆಗೆ ಅಳಿಲುಸೇವೆ ಸಲ್ಲಿಸಿದಂತಾಗುತ್ತದೆ.

ಭಾರತ ಸರಕಾರವು ಶಕ್ತಿಯ ಸಂವರ್ಧನೆ ಹಾಗೂ ಸಂರಕ್ಷಣೆಯ ಅಗತ್ಯವನ್ನು ಮನಗಂಡು,  2001 ರಲ್ಲಿ  ಶಕ್ತಿಯ ಸಂರಕ್ಷಣಾ ನಿಯಮವನ್ನು  ( Energy Conservation Act) ಜಾರಿಗೆ ತಂದಿದೆ ಹಾಗೂ ಈ ನಿಟ್ಟಿನಲ್ಲಿ ಜಾಗೃತಿಯನ್ನು ಮೂಡಿಸಲು 14  ಡಿಸೆಂಬರ್ ಅನ್ನು  ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನ ಎಂದು ಘೋಷಿಸಿದೆ.

 

– ಹೇಮಮಾಲಾ.ಬಿ

7 Responses

 1. ವಿಜಯಾಸುಬ್ರಹ್ಮಣ್ಯ, says:

  ಒಳ್ಳೆಯ ಲೇಖನ ಎಲ್ಲಾ ಎನರ್ಜಿಗಳ ಸದ್ಬಳಕೆ ಹಾಗೂ ದುರ್ಬಳಕೆಯನ್ನು ಪುಟ್ಟಮಕ್ಕಳ ಹಂತದಿಂದಲೇ ಬೋಧಿಸಬೇಕಾದ ಅನಿವಾರ್ಯತೆಯಿದೆ.

 2. Nayana Bajakudlu says:

  ಚೆನ್ನಾಗಿದೆ ಮೇಡಂ.
  ಶಕ್ತಿಯ ಸಂಪನ್ಮೂಲಗಳನ್ನು ನಾವು ಹಿತ ಮಿತವಾಗಿ ಬಳಸಿ ಅವುಗಳ ಉಳಿತಾಯದ ಕಡೆಗೆ ಹೇಗೆ ಗಮನ ಕೊಡ್ಬೇಕು ಅನ್ನೋದನ್ನು ಮನದಟ್ಟಾಗುವಂತೆ ವಿವರಿಸಿದ್ದೀರಿ.

 3. Raghunath Krishnamachar says:

  ನಿಜ.ಚಂದದ ಬರಹ

 4. Shankari Sharma says:

  ಉತ್ತಮ ಮಾಹಿತಿಯುಕ್ತ ಲೇಖನ ..ಚೆನ್ನಾಗಿದೆ.

 5. Anonymous says:

  Nice madam

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: