ಖಾದಿ…ಗಾಂಧಿ ಚಿಂತನೆಯ ಪ್ರಯೋಗ

Share Button

ಉಜಿರೆ, ಡಿ.೩: ಉಜಿರೆಯ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ  ಲಕ್ಷದೀಪೋತ್ಸವದಲ್ಲಿ  ಗಾಂಧಿ ಚಿಂತನೆಯನ್ನು  ಚಾಲ್ತಿಯಲ್ಲಿರಿಸುವ ವಿನೂತನ ವಾಣಿಜ್ಯಿಕ ಪ್ರಯೋಗ ನಡೆದಿದೆ. ಅವರ ಸ್ವದೇಶಿ ಪರಿಕಲ್ಪನೆಯನ್ನು ಜನಪ್ರಿಯಗೊಳಿಸುವ ಪ್ರಯತ್ನ ಗಮನ ಸೆಳೆದಿದೆ. ಜನರನ್ನು ಆಕರ್ಷಿಸುತ್ತಿರುವ ಖಾದಿ ಬಟ್ಟೆಗಳ ವ್ಯಾಪಾರ ಮಳಿಗೆ ಇದಕ್ಕೆ ಸಾಕ್ಷಿಯಾಗಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅರಳಿಕೊಪ್ಪ ಗ್ರಾಮದ ಸ್ವದೇಶಿ ಕೈಮಗ್ಗ ನೇಕಾರರ ಜವಳಿ ಉತ್ಪತ್ತಿ ಮತ್ತು ಮಾರಾಟ ಸಹಕಾರ ಸಂಘದಿಂದ ಸಿದ್ಧವಾದ ಖಾದಿ ಬಟ್ಟೆಗಳನ್ನು ಜನರು ಖರೀದಿಸುತ್ತಿದ್ದಾರೆ. ಸುಮಾರು ಹದಿನೈದು ವರ್ಷದಿಂದ ಪ್ರಾರಂಭವಾದ ಈ ಕೈಮಗ್ಗ ಸಂಸ್ಥೆ ಕಳೆದ ಏಳು ವರ್ಷಗಳಿಂದ ಲಕ್ಷದೀಪೋತ್ಸವದಲ್ಲಿ ತಮ್ಮದೇ ಮಳಿಗೆಯಲ್ಲಿ ವ್ಯಾಪಾರ ನಡೆಸುತ್ತಿದೆ. ಹಿಂದಿನ ಕೆಲ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಅರಳಿಕೊಪ್ಪ ಈ ಕೈಮಗ್ಗದಲ್ಲಿ ಸುಮಾರು ಮೂವತ್ತೈದು ಮಹಿಳಾ ಸಿಬ್ಬಂದಿ ನೇಯ್ಗೆ ಕೆಲಸವನ್ನು ಮಾಡುತ್ತಾರೆ. ಹದಿನೆಂಟು ಮಗ್ಗಗಳನ್ನು ಹೊಂದಿರುವ ಇಲ್ಲಿ ಒಂದು ಮಗ್ಗದಲ್ಲಿ ದಿನಕ್ಕೆ ಕನಿಷ್ಠ ಹತ್ತರಿಂದ ಇಪ್ಪತ್ತು ಮೀಟರ್‌ಗಳಷ್ಟು ಉದ್ದದ ಬಟ್ಟೆಯನ್ನು ನೇಯುತ್ತಾರೆ. ನೇಯ್ಗೆಗಾಗಿ ದಾರವನ್ನು ಗೋಕಾಕ್ ಮಿಲ್ಲಿನಿಂದ ತರಿಸಲಾಗುತ್ತದೆ. ನೇಯ್ಗೆಯ ಜೊತೆಯಲ್ಲಿ ಬಟ್ಟೆಗಳ ಮೇಲೆ ಕಸೂತಿಯನ್ನೂ ಮಾಡಲಾಗುತ್ತದೆ.

ಸದ್ಯಕ್ಕೆ ಕೇವಲ ಪುರುಷರ ಉಡುಪುಗಳನ್ನು ಮಾತ್ರವೇ ತಯಾರಿಸುತಿರುವ ಕೈಮಗ್ಗ ಮುಂಬರುವ ದಿನಗಳಲ್ಲಿ ಮಹಿಳೆಯರ ಉಡುಗೆಗೆಳನ್ನು ತಯಾರಿಸುವ ಯೋಜನೆಯನ್ನು ರೂಪಿಸುತ್ತಿದೆ. ಕುರ್ತಾ, ಜುಬ್ಬಾ, ಕರವಸ್ತ್ರ, ಟವೆಲ್, ಶರ್ಟ್,ಕೋಟ್ ಮಕ್ಕಳ ಅಂಗಿ ಹೀಗೆ ವಿವಿಧ ರೀತಿಯ ಉಡುಪುಗಳು ತಯಾರಾಗುತ್ತವೆ.

ಗುಣಮಟ್ಟಕ್ಕೆ ತಕ್ಕಂತೆ ಬೆಲೆಯನ್ನು ನಿಗದಿಪಡಿಸಲಾಗುತ್ತದೆ. ನೇಯ್ಗೆ ಮತ್ತು ಹೊಲಿಗೆಯಲ್ಲಿ ಯಂತ್ರಗಳ ಬಳಕೆ ಕಡಿಮೆ ಇರುವ ಕಾರಣ ಬೇರೆ ರೀತಿಯ ಬಟ್ಟೆಗಳಿಗೆ ಹೋಲಿಸಿದರೆ ಬೆಲೆ ತುಸು ದುಬಾರಿಯೇ.ಖಾದಿ ಉಡುಪುಗಳು ಈಗೀಗ ಎಲ್ಲರೂ ಧರಿಸುವುದು ಸಾಮಾನ್ಯವಾಗಿದೆ. ಅಂದದ ಜೊತೆ ಕಂಫರ್ಟ್ ನೀಡುವಲ್ಲಿ ಖಾದಿ ಮುಂಚೂಣಿಯಲ್ಲಿ ನಿಲ್ಲುತ್ತದೆ.

‘ಸ್ವದೇಶಿ ವಸ್ತುಗಳ ಖರೀದಿ ಮತ್ತು ಮಾರಾಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇನ್ನೂ ಹಳೆಯ ಮಾದರಿಯಲ್ಲಿಯೇ ಬಟ್ಟೆಗಳನ್ನು ತಯಾರಿಸುತ್ತಿದ್ದೇವೆ. ವೃತ್ತಿಪರತೆಯನ್ನು ಉಳಿಸುವಲ್ಲಿ ಶ್ರಮ ಹೆಚ್ಚು. ಆದರೂ ಬದಲಾಗುತ್ತಿರುವ ಟ್ರೆಂಡ್ ಜನರಲ್ಲಿ ಖಾದಿ ಬಟ್ಟಗಳ ಮೇಲೆ ಒಲವು ಹರಿಸುವಂತೆ ಮಾಡಿದೆ. ಆದ್ದರಿಂದ ವ್ಯಾಪಾರವೂ ಉತ್ತಮ ಗತಿಯಲ್ಲಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಡಿಸೈನ್ ಮತ್ತು ವಿಧಗಳಲ್ಲಿ ಖಾದಿಯನ್ನು ಇನ್ನಷ್ಟು ಪ್ರಚಲಿತ ಪಡಿಸಬೇಕು’ ಎನ್ನುತ್ತಾರೆ ಅರಳಿಕೊಪ್ಪ ಕೈಮಗ್ಗದ ಅಂಜೀನಪ್ಪ.
ಖಾದಿ ಬಟ್ಟೆಗಳಿಗೆ ಒಂದು ವಿಶೇಷ ಗುಣವಿದೆ. ಬೇಸಿಗೆಯಲ್ಲಿ ತಂಪಿನ ಮತ್ತು ಚಳಿಗಾಲದಲ್ಲಿ ಬೆಚ್ಚಗಿನ ಅನುಭವವನ್ನು ನೀಡುತ್ತದೆ. ಆದರೆ ಕೈ ಮಗ್ಗದಿಂದ ನೇಯಲ್ಪಡುವ ಕಾರಣದಿಂದ ಉಳಿದ ಬಟ್ಟೆಗಳಿಗೆ ಹೋಲಿಸಿದರೆ ಇದು ಕೊಂಚ ದುಬಾರಿಯೇ ಸರಿ. ಹವಾಮಾನದಂತೆ ಬದಲಾಗುತ್ತಿರುವ ಟ್ರೆಂಡ್ ಈಗ ದೇಶಿ ಬಟ್ಟೆಗಳ ಮೇಲೆ ಬಿದ್ದಿದೆ. ಕೈ ಮಗ್ಗದಲ್ಲಿ ತಯಾರಾದ ಬಟ್ಟೆಗಳಿಗೆ ಡಿಮ್ಯಾಂಡ್ ಹೆಚ್ಚಾಗುತ್ತಿದೆ.

ವರದಿ ಮತ್ತು ಚಿತ್ರಗಳು : ಜಯಲಕ್ಷ್ಮಿ ಭಟ್.
ಪತ್ರಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಎಸ್‌ಡಿ‌ಎಂ ಸ್ನಾತಕೋತ್ತರ ಕೇಂದ್ರ ಉಜಿರೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: