‘ಅದರ ನಂತರ’- ಎಚ್ ಆರ್ ರಮೇಶ್ ಕವನ ಸಂಕಲನ

Share Button

ಕವನವೊಂದರ ಶೀರ್ಷಿಕೆ ಹೇಗಿರಬೇಕು? ಅದು ಯುಗ ಧರ್ಮಕ್ಕನುಸಾರವೋ? ಕಾಲ ಪ್ರಣೀತವೋ ಅಥವಾ ಕವಿಯ ವೈಯಕ್ತಿಕ ಆಯ್ಕೆಯೇ? ಈ ರೀತಿಯ ಪ್ರಶ್ನೆಗಳು ಉದ್ಭವಿಸುವುದು ವಿಶಿಷ್ಟವಾಗಿ. ಸ್ವತಂತ್ರ ಶೈಲಿಯಲ್ಲಿ ಬರೆಯುವ, ಹೊಸ ಕಾಲದ ಹೊಸ ತವಕ ತಲ್ಲಣಗಳಿಗೆ ಸಮರ್ಪಕವಾಗಿ ಸ್ಪಂದಿಸುವ ಕವಿ ಪ್ರಜ್ಞೆಯೊಂದಕ್ಕೆ ಮುಖಾ ಮುಖಿಯಾದಾಗ. ಈ ರೀತಿಯ ಚಕಿತಗೊಳಿಸುವ, ಥಟ್ಟನೆ ಅವಾಕ್ಕಾಗಿ ಬಿಡುವಂತೆ, ಮಿಂಚು ಹೊಳೆಯಿಸುವ ಭಾವವೊಂದರ ಅಸ್ಪಷ್ಟ ಕನವರಿಕೆಯಂತೆ, ಅಸಹಾಯಕತೆಯಿಂದಲೂ, ತಲ್ಲಣದಿಂದಲೂ, ಭಾಷೆಯ ಅಭಿವ್ಯಕ್ತಿಯಲ್ಲಿ ರೂಹುಗೊಳುವ ಪ್ರಯತ್ನದಂತೆ, ಅಮೂರ್ತ ಕಲ್ಪನೆಗಳನ್ನು ವೈಚಾರಿಕ ಪಾಕದಲ್ಲಿ , ಅನುಭವದ ಮೂಸೆಯಲ್ಲಿ ಹದಗೊಳಿಸುವ ಪ್ರಾಮಾಣಿಕತೆಯ ಝಳದಂತೆ, ತನ್ನ ಗೋಜಲುಗಳನ್ನು ಲೋಕದ ಗೋಜಲಿಗಳಿಗೆ ಸಮೀಕರಿಸುವ, ವ್ಯಕ್ತಿ ಜೀವನದ ದು:ಖದ ಸೆಲೆಗಳನ್ನು ರಾಜ್ಯ, ರಾಷ್ಟ್ರ ರಾಜಕಾರಣದ ನೆಲೆಗಳನ್ನು ಅರಿವಿನ ಪಾತಳಿಯಲ್ಲಿ ಕಂಡುಕೊಳ್ಲುವ ಹುಡುಕಾಟದಂತೆ, ರಮೇಶ್ ಎಚ್ ಆರ್ ಅವರ ಕವನ ಸಂಕಲನ ‘ಅದರ ನಂತರ’.

ಮಡಿಕೇರಿಯ ಫ಼ೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಆಂಗ್ಲ ಭಾಷಾ ಪ್ರಾಧ್ಯಾಪಕರಾಗಿರುವ ರಮೇಶ್ ಅವರ ಐದನೆಯ ಕವನ ಸಂಕಲನ ಇದು. ಎಡವಟ್ಟು ಬದುಕಿನ ಲಯಗಳು’,ಸಾಸಿವೆ ಹೂವ ಚರಿತ’, ‘ಝನ್ನದಿ’ ಹಾಗೂನಿಜ ಸ್ವಪ್ನ ಇವರ ಪ್ರಕಟಿತ ಕವನ ಸಂಕಲನಗಳು. ಅಭಿನವ ಪ್ರಕಾಶನದಿಂದ ಯುವ ಬರಹಗಾರರ ಪುಸ್ತಕ ಮಾಲಿಕೆಯಲ್ಲಿ ಪ್ರಕಟಿತವಾಗಿರುವ ಈ ಪುಸ್ತಕ ತನ್ನ ವಿನೂತನ ಶೈಲಿಯ ನಿರೂಪಣೆಯಿಂದ, ಜ್ವಲಂತ ಸಮಸ್ಯೆಗಳನ್ನು ಕಾವ್ಯಾತ್ಮಕ ಶೈಲಿಯಿಂದ ಕಟ್ಟಿಕೊಡುವ ಕಾಣ್ಕೆಯಿಂದ ವಿಭಿನ್ನವಾಗಿದೆ ಎಂದು ಹೇಳಬಲ್ಲೆ. ಒಟ್ಟು 45 ಕವಿತೆಗಳಿರುವ ಈ ಕವನ ಸಂಕಲನದಲ್ಲಿ ಕೆಲವು ಶೀರ್ಷಿಕೆಗಳು ಝಗ್ಗನೆ ನಮ್ಮನ್ನು ತಬ್ಬಿಬ್ಬಾಗಿಸುತ್ತವೆ. ಉದಾಹರಣೆಗೆ ‘ಬಹುದು’, ‘ಆದರೆ’, ‘ಇದ್ದ’, ‘ಅದು ಹಾಡುತ್ತದೆ ನಿಜವಾಗಿಯೂ’ ‘ಅದು’ ಹೀಗೆ. ( ಇಂಗ್ಲಿಷ್ ನ Might, but, was ಈ ರೀತಿಯ Helping verbs, conjunctions ) ಇವನ್ನೆಲ್ಲ ಶೀರ್ಷಿಕೆ ಮಾಡಿದ್ದಾರೋ ಹೇಗೆ ಎಂದು ಅರೆ ಕ್ಷಣ ಗಾಬರಿಯಾಯಿತು.

ತಮ್ಮ ಮುನ್ನುಡಿಯಲ್ಲಿ ರಮೇಶರು ” ಇಲ್ಲಿಯ ಕವಿತೆಗಳು ನನ್ನ ಬಗ್ಗೆ ನಾನೇ ಆಡಿಕೊಂಡ ಏಕಾಂತದ ಪಿಸು ಮಾತುಗಳಂತಿರಬಹುದು ಅಥವಾ ಲೋಕವನ್ನು ನಾನು ಕಂಡ ರೀತಿಯಲ್ಲಿ ಚಿತ್ರಿಸಿರಬಹುದು ಎಂದು ವಿನಮ್ರವಾಗಿ ಹೇಳಿಕೊಳ್ಳುತ್ತಾರೆ. ಸೆಕ್ಯುಲರಿಸಂ, ಸದ್ಯದ ರಾಜಕೀಯ ಸನ್ನಿವೇಶ ಮತ್ತು ಪರಿಸ್ಥಿತಿಗಳು, ಆಧುನಿಕ ಜಗತ್ತಿನಲ್ಲಿ ಕಂಡು ಬರುತ್ತಿರುವ ಮೃಗೀಯತೆ, ಜಾತಿ ಜಾತಿಗಳ ನಡುವಣ ಅಸಮಾನತೆ, ಧಾರ್ಮಿಕತೆಯ ವೈರುಧ್ಯಗಳು.. ರಮೇಶರ ಕವನಗಳ ಮುಖ್ಯ ಕಾಳಜಿ. ಇಷ್ಟೇ ತೀವ್ರವಾಗಿ ಅವರ ಕವನಗಳಲ್ಲಿ ಕಂಡು ಬರುವುದು ಕಳೆದು ಹೋದ ಪ್ರೇಮವೊಂದರ ಕಳವಳಿಕೆಯಂತೆ ಇರುವ ತಲ್ಲಣಗಳು. ಅವರ ಆಂಗ್ಲ ಸಾಹಿತ್ಯದ ಜ್ನಾನವೂ ಈ ಕವನಗಳಲ್ಲಿ ಪ್ರತಿಮೆಗಳ ಮೂಲಕ, ಭಾಷೆಯನ್ನು ಬಳಸುವ ಮೂಲಕ, ಆಧುನಿಕೋತ್ತರ ಶೈಲಿಯ ಮೂಲಕ ಕಂಡು ಬರುತ್ತವೆ. ನಟ ರಾಜ ಬೂದಾಳು ಅವರು ತಮ್ಮ ಮುನ್ನುಡಿಯಲ್ಲಿ ಬರೆದಂತೆ ‘ರಮೇಶ ಅವರಿಗೆ ಪಾಶ್ಚಾತ್ಯ ತತ್ವ ಪರಂಪರೆಗಳ , ಕಾವ್ಯ ಪರಂಪರೆಗಳ ಒಡನಾಟವಿದೆ, ಹಾಗಾಗಿ ಅವರಿಗೆ ಈ ನೆಲದ ಕಾವ್ಯ ಪರಂಪರೆಗಳ ಅನುಸಂಧಾನ ತೊಡಕಿನ ಸಂಗತಿಯೇನಲ್ಲ. ‘ ಈ ಕವನಗಳಲ್ಲಿನ ಕ್ರಿಯಾಲೋಕ ವರ್ತಮಾನದ ಸಂಕಟ ಅನುಸಂಧಾನವೇ ತನ್ನ ಮೊದಲ ಆಯ್ಕೆ ಎಂದುಕೊಂಡಿರುವುದರಿಂದ ಸಹಜವಾಗಿ ವರ್ತಮಾನದ ಅನೇಕ ಸಂಕಟಗಳು ಇಲ್ಲಿ ಜಾಗ ಪಡೆದಿವೆ ” ಎಂದೂ ಅವರು ಗುರುತಿಸುತ್ತಾರೆ.

ಒಟ್ಟಿನ ಮೇಲೆ ರಮೇಶರ ಕವನಗಳು ಆಧುನಿಕೋತ್ತರ ಶೈಲಿಯಲ್ಲಿ ಸಮಕಾಲೀನ ಜೀವನದ ಕುರಿತು ಬರೆದ ಕವಿತೆಗಳೆನ್ನಬಹುದು. ಅವರ ಕೆಲವು ಶಬ್ದಗಳು ಓದುಗರಲ್ಲಿ ಅರ್ಥ ಸಂದಿಗ್ಧತೆಯನ್ನೂ ಹುಟ್ಟು ಹಾಕಬಹುದು. ಉದಾಹರಣೆಗೆ ಮೊದಲ ಕವಿತೆ ‘ನಿವೇದನೆ’
ನಿನಗೆ ಕಾಣದಿದ್ದುದು ಏನಿದೆ
ಕಂಡೂ ಕಾಣದಂತಿರುವೆ
ಇಲ್ಲಿ ನಡೆಯುತ್ತಿರುವ ಇದನ್ನು ಕಂಡು
ನಮ್ಮ ಆಡು ಮಾತಿನಲ್ಲಿ ಶಬ್ದಗಳಲ್ಲಿ ಹೇಳಲಾರದೆ ‘ಇದನ್ನು’ ಎಂದು ಬಳಸುವ ಶಬ್ದ ಇಲ್ಲಿ ಬಳಕೆಯಾದ ಬಗೆಯನ್ನು ಗಮನಿಸಿ. ಅದೇ ರೀತಿ ‘ ನಿನಗೆ ಅಳಿವಿಲ್ಲ‘ ಕವನದಲ್ಲಿ
‘ಡೆರಿಡಾದಿಗಳು ರೂಪಿಲ್ಲದಿರುವುದು ರೂಪವೇ ಎನ್ನುವರು
ನಿರುತ್ತರವೂ ಉತ್ತರವೆನ್ನುವರು’.

ಈ ಸಂಕಲನದಲ್ಲಿ ನನಗೆ ಕೆಲವು ಸಾಲುಗಳ ಓದು ಇಂಗ್ಲಿಷ್ ನಲ್ಲಿ  Jolt ಎನ್ನುತ್ತಾರಲ್ಲ ಆ ಅನುಭವ ಕೊಟ್ಟಿತು. ಇದಕ್ಕೆ ಕಾರಣ ವಾಕ್ಯಗಳ ವ್ಯಾಕರಣವನ್ನು ಅವರು ಹೊಸದಾಗಿ ಬಳಸಿದ ವಿಧ. ಉದಾಹರಣೆಗೆ
ಬಳ್ಳದ ರಾಶಿಯ ತುದಿಯಲ್ಲಿ
ಬೆವರ ನೆತ್ತರಿನಂತಿದೆ
ಮುತ್ತುಗ
ಮುತ್ತಿನಂತೆ
ಅವಳ (ಕವಿತೆ: ಮುತ್ತುಗ)
‘ಬಳ್ಳದ ರಾಶಿಯ ತುದಿಯಲ್ಲಿ ಮುತ್ತುಗ ಮುತ್ತಿನಂತೆ, ಅವಳ ಬೆವರ ನೆತ್ತರಿನಂತಿದೆ’ ಎಂದು ಅರ್ಥ ಮಾಡಿಕೊಳ್ಳುವಲ್ಲಿಗೆ ಸುಸ್ತಾಗಿ ಹೋಯಿತು. ಇಂಗ್ಲಿಷ್ ನಲ್ಲಿ Inversion  ಎನ್ನುವುದನ್ನು ರಮೇಶ್ ಹೆಚ್ಚು ಬಳಸುತ್ತಾರೆ. ಉದಾಹರಣೆಗೆ ‘ಒಂದು ಬಿನ್ನಹ’ ಕವಿತೆಯಲ್ಲಿನ ‘ನೀನು ಗರಿ ಗರಿಯಾಗಿ ಇಸ್ತ್ರಿ ಮಾಡಿಸಿಕೊಂಡು ಪೋಷಾಕ’ (ನೀನು ಗರಿ ಗರಿಯಾಗಿ ಪೋಷಾಕ ಇಸ್ತ್ರಿ ಮಾಡಿಸಿಕೊಂಡು)

ಆಧುನಿಕ ಸಂವೇದನೆಗಳೇ ರಮೇಶರ ಭಾವ ಲೋಕದ ಭಾಗವಾಗಿದ್ದರೂ ಆಗೊಮ್ಮೆ ಈಗೊಮ್ಮೆ ಕೆಲವು ಸಾಲುಗಳು ತಮ್ಮ
ಅರ್ದ್ರತೆಯಿಂದ, ಆರ್ತತೆಯಿಂದ ಆಪ್ತವಾಗುತ್ತವೆ. ಉದಾಹರಣೆಗೆ ‘ಮಳೆ’ ಕವನದ

‘ಮಿಂಚು ಹೊಳೆವಾಗ ಇದ್ದವಳು
ಮಳೆ ಬೀಳುವಷ್ಟರಲ್ಲಿ ಹೋಗಿದ್ದಾಳೆ’

ನನಗೆ ಅಚ್ಚರಿಯನ್ನೂ , ಖುಶಿಯನ್ನೂ ಏಕ ಕಾಲಕ್ಕೆ ಕೊಟ್ಟ ಇನ್ನೊಂದು ಶೀರ್ಷಿಕೆ ‘ಬಹುದು‘. ಭಾರತೀಯ ಇಂಗ್ಲಿಷ್ ಸಾಹಿತ್ಯದಲ್ಲಿ ಅರುಂಧತಿ ರಾಯ್ ರವರು ತಮ್ಮ ‘ಗಾಡ್ ಆಫ಼್ ಸ್ಮಾಲ್ಲ್ ಥಿಂಗ್ಸ್’ ನಲ್ಲಿ ಭಾಷೆಯಲ್ಲಿ ಪ್ರಯೋಗ ಮಾದಿದಂತೆ, ಜೇಮ್ಸ್ ಜಾಯ್ಸ್ ಇಂಗ್ಲಿಷ್ ಸಾಹಿತ್ಯದಲ್ಲಿ ಪ್ರಯೋಗ ಮಾಡಿದಂತೆ ರಮೇಶ್ ಅವರ ಭಾಷೆಯ ಬಳಕೆ ಅದ್ಭುತವಾಗಿದೆ. ಅದೇ ರೀತಿ ರಮ್ಯ ಶೈಲಿಯಲ್ಲಿ ಇಲ್ಲದ ಕಾರಣ ರಮೇಶರ ಕವಿತೆಗಳು ಒಂದು ಓದಿಗೆ ದಕ್ಕುವುದಿಲ್ಲ.

‘ಬಹುದು‘ ಕವನ ತಾಜ್ ಮಹಲ್ ಬಗೆ ಎಂದು ಕವಿತೆ ಓದದ ಹೊರತು ಗೊತ್ತಾಗುವುದಿಲ್ಲ. 59 ಸಾಲುಗಳಿರುವ ಈ ಕವಿತೆಯಲ್ಲಿ ನಾಲ್ಕೈದು ಸಲ ಮಾತ್ರ ‘ಬಹುದು’ ಶಬ್ದ ಇದೆ.
‘ ಆ ನೆನಪುಗಳು ಇನ್ನೂ ಹಸಿ. ಅವನ್ನು
ಯಾರಾದರೂ ಬಂದು ಮುಟ್ಟಬಹುದು
ಕೈಗೆ ಕಾಲಿಗೆ ಮೈಗೆ ಅಂಟಿಕೊಳ್ಳಬಹುದು.
ನಿನ್ನ ಹರಸಿ ಬಿಸಿಲ ಕುದುರೆಯನೇರಿದಾಗ
ಆದ ಅನುಭವ ಅವರಿಗೂ ಆ ನೆನಪುಗಳಲ್ಲಿ.
ತಾಜಮಹಲು ನಗಬಹುದು.

ಇದೇ ರೀತಿ ದಿಗಿಲು ಹುಟ್ಟಿಸುವ ಇನ್ನೊಂದು ಕವಿತೆ ‘ಅರ್ಥ ಅಥವಾ..’ . ರಮೇಶ್ ರ ‘ಬೋಲ್ಡ್’ ಎನ್ನಬಹುದಾದ ಇನ್ನೊಂದು ಪ್ರಯೋಗವನ್ನು ‘ಆದರೆ’ ಕವನದಲ್ಲಿ ಗಮನಿಸಿ.
ಅಚ್ಚ ಹೊಸ ಕಾಲವಂತೆ..
ಮೊಳೆ ಹೊಡೆದು ಸಾಯಿಸುತ್ತಿದವರು ವಿಷವಿಕ್ಕಿ
ಕೊಲ್ಲುತ್ತಿದ್ದವರು ಸದ್ದಿಲ್ಲದೆ ಬಂದೂಕಿನಿಂದ
ಮುಗಿಸುತ್ತಿದ್ದಾರೆ. ಇಲ್ಲಿ ಕೊಲೆಗೆ ಕಾರಣವಿಲ್ಲ.
ಇಲ್ಲಿ ಬದುಕಲು ಕಾರಣವಿದೆ.
ಆದರೆ,

ಆಧುನಿಕೋತ್ತರ ಭಾರತದ, ಅಷ್ಟೇ ಕೆ ಜಗತ್ತಿನ ಸಂದಿಗ್ಧಗಳನ್ನು ಈ ಕವಿತೆ ಥಟ್ಟನೆ ಮಧ್ಯದಲ್ಲೇ ನಿಂತು ಬಿಡುವ ಮೂಲಕ, ಒಂದು ರೀತಿಯ ತಣ್ಣಗಿನ ಕ್ರೌರ್ಯದಂತಿರುವ ಅತಿ ಸಂಕ್ಷಿಪ್ತ ವಾಕ್ಯಗಳ ಮೂಲಕ, ಎಲ್ಲಕ್ಕಿಂತ ಮಿಗಿಲಾಗಿ ‘ಆದರೆ’ ಎನ್ನುವ  Conjunction ಅನ್ನು ಕ್ರಿಯಾ ಪದದ ಜಾಗದಲ್ಲಿ ಬಳಸುವ ಮೂಲಕ SVO  (Subject-Verb- Object) ಎಂಬ ನಮ್ಮ ಸಾಮಾನ್ಯ ವಾಕ್ಯ ರಚನೆಯ ಗ್ರಹಿಕೆಯನ್ನೇ ಬುಡ ಮೇಲು ಮಾಡುತ್ತದೆ.

ರಮೇಶರ ಕವನಗಳ ಪ್ರಮುಖ ಲಕ್ಷಣ ಅವುಗಳಲ್ಲಿನ ಕ್ರಿಯಾ ಪದಗಳ ಬಾಹುಳ್ಯ. ಉದಾಹರಣೆಗೆ ‘ಒಂದು ಬಿನ್ನಹ‘ ಕವಿತೆಯಲ್ಲಿ
‘ಒಂದೇ ಒಂದು ಸುಳ್ಳು ಅವಳನ್ನು ಮತ್ತೆ
ಕಂಡು ಮಾತನಾಡಿಸದಷ್ಟು ದೂರ ಮಾಡಿದೆ ‘
ಎಂಬ ಸಾಲಿನಿಂದ ಹಿಡಿದು ‘ಘಮ್ಮೆನ್ನುತ್ತದೆ’, ‘ಕಾಯುತ್ತಿದ್ದಾರೆ’ , ರೋದಿಸುತ್ತದೆ’, ‘ನಂಬಿಹರು’ ಹೀಗೆ ಹೆಚ್ಚಿನ ವಾಕ್ಯಗಳು ಕ್ರಿಯಾ ಪದದೊಂದಿಗೆ ಕೊನೆಯಾಗುತ್ತವೆ. ವರ್ತಮಾನದಲ್ಲಿ ಬದುಕುಳಿಯಲು ‘ಕ್ರಿಯೆ’ ಅನಿವಾರ್ಯವೆಂದು ಹೋರಾಡುತ್ತಿರುವ ಸಕಲ ಮಾನವರ ಪ್ರತೀಕದಂತೆ ಈ Present tense ಕ್ರಿಯಾ ಪದಗಳು ನಮ್ಮನ್ನು ಕಾಡುತ್ತವೆ.

ಕೊನೆಯದಾಗಿ , ಕಾವ್ಯವೊಂದು ರೂಪ ತಳೆಯುವುದು ಓದುಗರ ಮನಸ್ಸಿನಲ್ಲಿ. ಹೀಗಾಗಿ , ಕವಿತೆಯೆನ್ನುವುದು ಅವರವರ ಭಾವಕ್ಕೆ ನಿಲುಕಿದಷ್ಟು. ‘ಮಂಜುಗಡ್ಡೆಯ ಮೇಲೆ’, ‘ಅವನು ಅವಳು ವ್ಯಾಘ್ರ’ , ‘ನೀನು ಹೋದ ಮೇಲೆ’, ‘ಇಲ್ಲಿ ಅದನ್ನು ಹೇಳಿದರೆ’, ‘ಇದ್ದ’, ‘ಮ್ಯಾಕ್ ಬೆತ್ ನ ಅಪ್ರಕಟಿತ ಸ್ವಗತ’ ಹೀಗೆ ಅನೇಕ ಗಮನಾರ್ಹ ಕವಿತೆಗಳು ಇಲ್ಲಿವೆ. ತಮ್ಮ ಗುರುಗಳಾ‌ದ ರಾಜೇಂದ್ರ ಚೆನ್ನಿ ಹಾಗೂ ಯು ಆರ್ ಅನಂತ ಮೂರ್ತಿಯವರನ್ನು ನೆನಪಿಸಿಕೊಂಡು ಬರೆದ ಎರಡು ಕವಿತೆಗಳೂ ಇಲ್ಲಿವೆ.

ಬುದ್ಧನ ಕಾರುಣ್ಯ, ರಾಜ್ಯ , ದೇಶವನ್ನಾಳುವ ದೊರೆಗಳ ಪೊಳ್ಳು ಅಶ್ವಾಸನೆಗಳು ಹೀಗೆ ಅನೇಕ ಜನ ಪರ, ಜೀವ ಪರ ವಿಚಾರಗಳು ಇಲ್ಲಿವೆ. ಹಾಗಿದ್ದರೂ ಇಲ್ಲಿನ ಅನೇಕ ಕವಿತೆಗಳು ಸರಳ ಮನೋಧರ್ಮದ ಓದುಗರಿಗೆ ಅರ್ಥವಾಗದೆ ಇರುವ ಸಾಧ್ಯತೆಗಳೂ ಇವೆ. ಅದೇ ಸಮಯ ‘ಪೋಸ್ಟ್ ಟ್ರುಥ್’ ನ ಕೊಂಡ ಹಾಯುವ ಕಾವ್ಯ’ ದಂತಿರುವ, ಈ ರೀತಿಯ ವಿಶಿಷ್ಟ ಸಂವೇದನೆಯ ಕವಿತೆಗಳು ಸಾಹಿತ್ಯ ಲೋಕಕ್ಕೆ ಅವಶ್ಯ ಕೂಡ.ಹೀಗಾಗಿಯೇ ‘ಅಗಾಧ ಆಕಾಶವ ಸೆಲ್ಫಿಯಲಿ ಹಿಡಿಯಲಾದೀತೆ? ಎಂಬ ವಿನಮ್ರತೆಯೂ ಅವರಿಗಿದೆ. ರಮೇಶ್ ಅವರ ಸಾಹಿತ್ಯ ಕೃಷಿಗೆ ಶುಭ ಹಾರೈಕೆಗಳು.

ಎಚ್ ಆರ್ ರಮೇಶ್ ಅವರ ಇ-ಮೈಲ್ ವಿಳಾಸ : hrramesha@gmail.com

– ಜಯಶ್ರೀ ಬಿ. ಕದ್ರಿ

4 Responses

  1. Shankari Sharma says:

    ಪ್ರೌಢ ಪುಸ್ತಕ ವಿಮರ್ಶೆ ಜಯಶ್ರೀಯವರದ್ದು . ಅಭಿನಂದನೆಗಳು.

  2. Hema says:

    ಕವನಗಳ ಶೀರ್ಷಿಕೆ ವಿಶಿಷ್ಟವಾಗಿವೆ ಹಾಗೂ ಕವನಗಳ ಸಾಲುಗಳು ಕುತೂಹಲ ಮೂಡಿಸುವಂತಿವೆ.ಪುಸ್ತಕ ಪರಿಚಯ ಸೊಗಸಾಗಿ ಮೂಡಿ ಬಂದಿದೆ. ಶ್ರೀ ಎಚ್ ಆರ್ ರಮೇಶ್ ಅವರಿಗೆ ಆಭಿನಂದನೆಗಳು .

  3. ಥ್ಯಾಂಕ್ಸ್ ಶಂಕರಿ ಶರ್ಮಾ ಹಾಗು ಹೇಮಮಾಲಾ ಅವರೇ

  4. Smitha Amrithraj says:

    ಒಳ್ಳೆಯ ವಿಮರ್ಶೆ ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: