ಸಾರ್ಥಕತೆ

Share Button

 

ಇಪ್ಪತ್ತವರ್ಷ ನುಂಗಲೂ ಆಗದ, ಉಗಳಲೂ ಬಾರದ ಸಂದಿಗ್ಧತೆಯಲ್ಲಿ ಸಿಲುಕಿಕೊಂಡು ಏನೆಲ್ಲಾ ಪಡಬಾರದ ಕಷ್ಟ ಪಟ್ಟ ಪರಮೇಶಿಗೆ ಅಂತೂ ಇಂತೂ ವಿಮೋಚನೆ ಬಂತು. ‘ತಿಪ್ಪಿ ಪಾಟ ತೆಗಿತೈತಂತ, ಅವನೌನ್ ನನ್ನ ಪಾಟು ತಗಿಯಾಕಿಲ್ಲೆನ್ರಿ..?’ ಅನ್ನೊ ಭರವಸೆಯ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಸಕಾರಾತ್ಮಕವಾಗಿ ಬದುಕಿದ ಪರಮೇಶಿಯ ಅರೆಕಾಲಿಕ ನೌಕರಿಯ ಇಲಾಖೆಯನ್ನೇ ಸರ್ಕಾರ ಬಂದಮಾಡಿ, ಅಲ್ಲಿರುವ ಎಲ್ಲ ಸಿಬ್ಬಂದಿಯನ್ನು ಬೇರೆ ಬೇರೆ ಅನುದಾನಿತ ಶಾಲೆಗಳಲ್ಲಿ ವಿಲೀನಗೊಳಿಸಲು ತಯಾರಿ ನಡೆಸಿದಾಗ ಮಗು ಇಲ್ಲಿ ತಿಳಿದೂ ತಿಳಿಯದವರಂತಿರಬೇಕು, ಇದ್ದರೂ ಇರದಂತಿರಬೇಕು, ಬದುಕಿಯೂ ಸತ್ತಂತಿರಬೇಕು ಅಕ್ಷರಶಃ ರೂಪಾ ಹಾಸನರ ಕವಿತೆಯಂತೆ ಉಸಿರುಗಟ್ಟಿಕೊಂಡು ಬದುಕು ಕಟ್ಟಿಕೊಂಡ ಪರಮೇಶಿಯನ್ನು ಸರ್ಕಾರವೇ ಹೊರತಂದದ್ದಕ್ಕೆ ಪರಮೇಶಿಯ ಪತ್ನಿ ಮನೆದೇವರ್‍ಗೆ ದೀರ್ಘದಂಡವಾಗಿ ನಮಿಸಿ ಹರಕೆ ತೀರಿಸಿದಳು.
* * * * *
ಕೌನ್ಸಲಿಂಗ್ ಮೂಲಕ ಸ್ಥಳ ಆಯ್ಕೆ ಮಾಡಿಕೊಳ್ಳಲು ಬೆಂಗಳೂರಿಗೆ ಪರಮೇಶಿ ಹೊರಟು ನಿಂತಾಗ, ಪತ್ನಿಯ ಮುಗಳ್ನಗೆಯಲಿ ಅಪರಿಮಿತ ಆನಂದವಿತ್ತು. ಮಕ್ಕಳಂತೂ ಆಗಲೇ ಅವರ ಗೆಳೆಯರಿಗೆ ಹೇಳಿದ್ದರಂತೆ ಲೇ ನಮ್ಮಪ್ಪಂದು ನೌಕ್ರಿ ಆಗೈತಿ, ನಾವು ಮುಂದಿನ ವರ್ಷ ಈ ಸಾಲ್ಯಾಗ ಇರುದಿಲ್ಲ. ದೊಡ್ಡ ಸಿಟಿಗೆ ಹೋಗ್ತಿವಿ ಹೀಗಂತ ಸಾಲಿತುಂಬೆಲ್ಲಾ ಢಂಗೂರ ಸಾರಿದ್ದರಂತೆ. ಸ್ಥಳ ಆಯ್ಕೆ ಮಾಡಿಕೊಳ್ಳುವ ಸಮಯ ಬಂದಾಗ, ಪರದೆಯ ಮೇಲೆ ನೂರಾರು ಶಾಲೆಗಳಿದ್ದವು ಪರಮೇಶಿಗೆ ಅದೇಕೊ.. ‘ನೆಲ್ಸನ್ ಮಂಡೇಲಾ ಪ್ರೌಢಶಾಲೆ’ಯ ಹೆಸರು ನೋಡಿದಾಕ್ಷಣವೇ ಬೇರೆ ಶಾಲೆಗಳ ಮೇಲೆ ದೃಷ್ಟಿ ಹರಿಸದೆ ತಕ್ಷಣ ಆಯ್ದುಕೊಂಡ್ಬಿಟ್ಟ. ಕೌನ್ಸಲಿಂಗ್ ಕೊಠಡಿಯಿಂದ ಹೊರಬರುವಷ್ಟರಲ್ಲಿಯೇ ಮನೆಯಿಂದ ಪೊನ್‌ಕರೆ ಏನ ಆಯಿತ್ರಿ? ಅಂತಾ ಪತ್ನಿ ಕೇಳಿದಳು. ಹುಬ್ಬಳ್ಳಿಯ ‘ನೆಲ್ಸನ್ ಮಂಡೇಲಾ ಪ್ರೌಢಶಾಲೆ’ಯನ್ನು ಆಯ್ದು ಕೊಂಡಿರುವೆ ಅಂತಾ ಪರಮೇಶಿ ಹೇಳಿದಾಗ ಬೇಗ ಬರ್ರೀ ಎಂದವಳೆ ಪೋನ್ ಕಟ್ಟಮಾಡಿ, ತನ್ನೆಲ್ಲಾ ಇದ್ದಬಿದ್ದವರ್‍ಗೆ ಸುದ್ದಿ ಬಿತ್ತರಿಸಿದ್ದಳು.

ಅಸಮಾನತೆಗಳು ಸುಟ್ಟುಬೂದಿಯಾದಾಗ ಮಾತ್ರ ಪ್ರೀತಿ, ಸ್ನೇಹ, ದಯೆ, ಸಹಕಾರ, ಸೌಹಾರ್ಧತೆ ಪ್ರತಿಯೊಬ್ಬ ವ್ಯಕ್ತಿಯ ಹೃದಯದಲ್ಲಿ ನೆಲೆಗೊಳ್ಳಲು ಸಾಧ್ಯ ಅನ್ನೊ ಅದ್ಭುತ ಸಂದೇಶ ರವಾನಿಸಿದ ಅಂತರಾಷ್ಟ್ರಿಯ ವ್ಯಕ್ತಿಯ ಹೆಸರಿನಲ್ಲಿರುವ ಶಾಲೆಯಲ್ಲಿ ಸೇವೆ ಸಲ್ಲಿಸುವುದೆ ನನ್ನ ಸೌಭಾಗ್ಯ. ವೈಚಾರಿಕ ಆಲೋಚನೆಯುಳ್ಳ ನನ್ನ ಮನಸ್ಥಿತಿಗೆ ಸರಿ ಹೊಂದುವಂತಹ ಶಾಲೆಯೇ ಸಿಕ್ಕಿತಲ್ಲಾ ಅನ್ನೊ ಖುಷಿಯಲ್ಲಿ ಪರಮೇಶಿಗೆ ತನ್ನೂರು ಬಂದದ್ದೆ ಗೊತ್ತಾಗಲಿಲ್ಲ. ಬಸ್ಸಿಳಿದು ಮನೆ ತಲುಪಿದಾಗ ಪರಮೇಶಿಯ ಭಾವನೆಗಳನ್ನೆಲ್ಲಾ ಬ್ಯಾಗಿನಲ್ಲಿರುವ ಸಿಹಿ ತಿಂಡಿಗಳೆ ಬಿಚ್ಚಿಟ್ಟಿದ್ದವು. ಮಕ್ಕಳಂತೂ ಮೊದಲ ತಿಂಗಳ ಸಂಬಳದಲ್ಲಿ ನನಗೆ ಇಷ್ಟೆಲ್ಲಾ ಬೇಕೆಂಬ ಪಟ್ಟಿಯನ್ನು ಕಂಠಪಾಠ ಮಾಡಿಕೊಂಡವರಂತೆ ಒಂದೇ ಉಸುರಿನಲ್ಲಿ ಪಟಪಟನೆ ಒಪ್ಪಿಸಿ ಬಿಟ್ಟರು.

ಕೆಲ ದಿನಗಳಾದ ಮೇಲೆ ಸರಕಾರದ ಆದೇಶವನ್ನು ಹಿಡಿದುಕೊಂಡು ಆಯ್ದುಕೊಂಡ ಖಾಸ್ಗಿ ಶಾಲೆಯ ಅಂಗಳ ತಲುಪಿದಾಗ ಪರಮೇಶಿಗೆ ಒಮ್ಮಿಂದೊಮ್ಮೆಲೇ ಭೂಮಿಯೇ ಕುಸಿದಂತಾಯಿತು. ಸುಧಾರಿಸಿಕೊಂಡು ಮುಖ್ಯ ಶಿಕ್ಷಕರನ್ನು ಸಂಪರ್ಕಿಸಿದಾಗ ಸರ್ ಈ ಶಾಲೆಯಲ್ಲಿ ಮಕ್ಕಳಿರದ ಕಾರಣ ಇಲಾಖೆ ನಮ್ಮನ್ನೇ ಹೆಚ್ಚುವರಿ ಮಾಡುವ ಹಂತದಲ್ಲಿದೆ, ಇಂತಹ ಸಂದರ್ಭದಲ್ಲಿ ನಿಮ್ಮನ್ನು ಸೇವೆಗೆ ಸೇರಿಸಿಕೊಳ್ಳುವುದು ಕಷ್ಟ, ಯಾವುದಕ್ಕೂ ಒಂದ್ಸಾರಿ ನಮ್ಮ ಚೇರ್‍ಮನ್‌ರನ್ನು ಭೆಟ್ಟಿಯಾಗಿ ಮಾತಾಡ್ರಿ ಅಂದ್ರು, ಸಣ್ಣ ಆಸೆಯೊಂದಿಗೆ ಶಾಲೆಯ ಚೇರ್‍ಮನ್ನರನ್ನು ಕಂಡಾಗ ಪರಮೇಶಿ ಕಟ್ಟಿಕೊಂಡ ಕನಸುಗಳೆಲ್ಲಾ ನುಚ್ಚುನೂರಾದವು.

ಪರಮೇಶಿಯ ನೀರಸ ಮಾತುಗಳು ನಿಧಾನಕೆ ಪತ್ನಿಗೆ ಅರ್ಥವಾದವು, ಆ ಶಾಲೆ ಹಾಗಿದ್ದರೆ ಇನ್ನೊಂದು ಶಾಲೆಗೆ ಹೋಗ್ಬುಹುದು ಧೈರ್ಯವಾಗಿರಿ ಅಂತಾ ಪತ್ನಿಯ ಸಮಾಧಾನದ ಮಾತುಗಳು ಬೇಸರ ನುಂಗಿಕೊಂಡೇ ಧ್ವನಿಸುತ್ತಿದ್ದವು. ಆದರೂ ಹೆಜ್ಜೆಹೆಜ್ಜೆಗೂ ವಿಘ್ನಗಳು, ಅಗ್ನಿಪರೀಕ್ಷೆಗಳು ಪರಮೇಶಿಯ ತಾಳ್ಮೆಯನ್ನು ಪರೀಕ್ಷಿಸುತ್ತಿವೆ. ಬದುಕಿನಲಿ ಬಹಳಷ್ಟು ವ್ಯಕ್ತಿಗಳಿಂದ ಮೋಸಹೋಗಿದ್ದ ಪರಮೇಶಿಗೆ ಪ್ರೀತಿಯಿಂದ ಆಯ್ದುಕೊಂಡ ‘ನೆಲ್ಸನ್ ಮಂಡೇಲಾ’ ಹೆಸರಿನ ಶಾಲೆಯೂ ಸಹ ಮೋಸಮಾಡ್ತಾಲ್ಲಾ ಅಂತಾ ಒಳ್ಗೊಳ್ಗೆ ಕೊರಗಾಕ್ಹತ್ತಿದ. ಪರಮೇಶಿಯ ಆಪ್ತ ಗೆಳೆಯ ಸತೀಶ ಸುಮಾರು ಹೊತ್ತು ಸಮಾಧಾನ ಮಾಡಿ, ಲೇ.. ಪರಮೇಶಿ ದೂರಾದ್ರೂ ಚಿಂತಿಲ್ಲ ಕರಾವಳಿ ಕಡೆ ಹೋಗು, ಅಲ್ಲೊಂದಿಷ್ಟು ಒಳ್ಳೆ ಸಂಸ್ಥೆಗಳು ಅದಾವಂತ. ತಗೋ ಇದೊಂದಸಾವಿರ ರೂಪಾಯಿ ಇಟ್ಕೊ ನಾಳೆಯೇ ಹೋಗು ಅಂತಾ ಸತೀಶ್ ಸಂತೈಸಿ ಹೋದ.

ಸತೀಶನ ಸ್ಪೂರ್ತಿಯಿಂದ ಪರಮೇಶಿ ಕರಾವಳಿ ಪ್ರದೇಶದ ಶಾಲೆಯೊಂದರ ಮುಖ್ಯ ಶಿಕ್ಷಕರನ್ನು ಕಂಡು ಮಾತ್ನಾಡಿದ, ಮುಖ್ಯ ಶಿಕ್ಷಕರ ಸೌಜನ್ಯ ಪರಮೇಶಿಗೊಂದಿಷ್ಟು ಸಮಾಧಾನ ತಂದಿತು. ಕಡೆಗೆ ಮುಖ್ಯ ಶಿಕ್ಷಕರು ನೀವು ಚೇರ್‍ಮನ್‌ರನ್ನು ಕಂಡು ಮಾತ್ನಾಡಬೇಕು ಅಂತಾ ಹೇಳಿದಾಗ ಒಂದಿಷ್ಟು ತಳಮಳ, ತಲ್ಲಣ ಒಳಗೊಳಗೆ ಒದ್ದಾಡುತ್ತಿದ್ದವು, ಅವೆಲ್ಲವನ್ನೂ ಅದುಮಿಡಿದುಕೊಂಡು ಸಂಸ್ಥೆಯ ಕಚೇರಿ ಸಹಾಯಕರೊಂದಿಗೆ ಚೇರ್‍ಮನ್ನರ ಮನೆಯ ಬಾಗಿಲು ತಟ್ಟಿದಾಗ, ಚೇರ್‍ಮನ್‌ರೆ ಬಾಗಿಲು ತೆಗೆದು ಸ್ವಾಗತಿಸಿ ಎದುರಿಗೆ ಕೂರಿಸಿಕೊಂಡು, ಚಹಾ ತಿಂಡಿ ಕೊಟ್ಟು ಆಪ್ತೆತೆಯಿಂದ ಮಾತನಾಡಿದರು. ಪರಮೇಶಿಯ ಕಳಕಳಿಯ ವಿನಂತಿ, ಶೈಕ್ಷಣಿಕ ದಾಖಲೆಗಳು ಮತ್ತು ನಡತೆ ಚೇರ್‍ಮನ್‌ರಿಗೆ ಹಿಡಿಸಿದ್ದರಿಂದ ‘ನಾಳೆಯೇ ನೀವು ಸೇವೆಗೆ ಹಾಜರಾಗ್ರಿ’ ಅಂತಾ ಆದೇಶ ಮಾಡಿದರು.

ಪರಮೇಶಿ ನಾಸ್ತಿಕನಾಗಿದ್ದರೂ ‘ಈ ಚೇರ್‍ಮನ್‌ರು ನನ್ನ ಪಾಲಿನ ದೇವರು’ ಅಂತಾ ತಕ್ಷಣಕ್ಕೆ ಒಪ್ಪಿಕೊಂಡು ಬಿಟ್ಟ. ಚೇರ್‍ಮನರ ಮನೆಯಿಂದ ಹೊರ ಬಂದವ್ನೆ ಒಳಗಿನ ಸಂತಸವನ್ನು ಅದುಮಿಟ್ಟುಕೊಳ್ಳಲಾಗದೆ ನಡೆದಿದ್ದೆಲ್ಲವನ್ನೂ ದೂರವಾಣಿ ಮೂಲಕ ಹೆಂಡತಿಗೆ ಹೇಳಿಕೊಂಡು ಹಗುರಾದ. ಪರಮೇಶಿಯ ಪತ್ನಿ ಹಿಡಿದ ಕೆಲಸವನ್ನು ಮೂಲೆಗೊತ್ತಿ, ಗಡಬಡಿಸಿ ಮೊದಲು ದೇವರಿಗೆ ತುಪ್ಪದ ದೀಪ ಹಚ್ಚಿದಳು ‘ದೇವರೆ.. ನಿನ್ನ ಪುಣ್ಯದಿಂದ ನಮ್ಮನೆಯವರ್‍ಗೆ ನೌಕರಿ ಸಿಕ್ಕಿದೆ ಆದರೆ ಅಲ್ಲೂ ಸಹ ಚಾಡಿ ಹೇಳುವ, ಕಡ್ಡಿ ಗೀರುವ ಕೆಟ್ಟ ಕುಳಗಳ ಕಿರಿಕಿರಿಯಲಿ ಮತ್ತೊಮ್ಮೆ ಉಸಿರುಗಟ್ಟುವ ವಾತವರಣವನ್ನು ಸೃಷ್ಟಿಸದಿರು ತಂದೆ..’ ಹೀಗೆ ದೇವರೆದಿರು ಸುದೀರ್ಘವಾಗಿ ಏನೇನೊ ಬೇಡಿಕೊಂಡು, ಮಕ್ಕಳೊಂದಿಗೆ ಭಜನೆ ಮಾಡಿ ನಿರಾಳವಾದಳು.
* * * * *

ಪಕ್ಕದ್ಮನೆಯ ಸತೀಶ್ ತನ್ನ ಪತ್ನಿಗೆ ಹೀಗೆ ಕೇಳಿದಾ ‘ಅಲ್ಲಾ ಪರಮೇಶಿ ಪಕ್ಕಾ ನಾಸ್ತಿಕ, ಪತ್ನಿ ಆಸ್ತಿಕಳು ಆದರೂ ಸಹ ಇಬ್ಬರೂ ಅದ್ಹೇಗೆ ಅನ್ಯೊನ್ಯವಾಗಿದ್ದಾರಲ್ಲ? ಸತೀಶನ ಸಂಗಾತಿ ‘ರೀ.. ಒಂದು ನಾಣ್ಯಕೆ ಭಿನ್ನವಾದ ಎರಡು ಮುಖಗಳಿದ್ದಾಗಲೇ ಅದಕ್ಕೊಂದು ಮೌಲ್ಯ, ಹಾಗೆಯೇ ಪ್ರತಿ ಕುಟುಂಬದಲ್ಲೂ ಪರಸ್ಪರ ಪ್ರೀತಿ, ಸಹನೆಯ ನಡುವೆಯೂ ಪರ ವಿರೋಧದ ಆಪ್ತತೆ ಇದ್ದಾಗ ಮಾತ್ರ ಅಪ್ಯಾಯಮಾನತೆ ಇರೋದು, ಸಂಸಾರದಲ್ಲಿ ಸಾಮರಸ್ಯ, ಸಹಿಷ್ಣುತೆ ಬರಬೇಕಾದ್ರೆ ಬಹುತ್ವ ಮತ್ತು ಭಿನ್ನತೆಯನ್ನು ಒಪ್ಪಿಕೊಂಡು, ಅಪ್ಪಿಕೊಂಡು ಸೌಹಾರ್ಧತೆಯನ್ನು ಸಾರಿದಾಗಲೇ ಸಂಸಾರ ಒಂದು ಸಾರ್ಥಕತೆಯ ಗಮ್ಯವನ್ನು ತಲುಪುತ್ತದೆ, ಅವರನ್ನೋಡಿ ನಾವು ಕಲಿಯುದು ಇನ್ನೂ ಭಾಳಾ ಐತ್ರಿ’ ನೀನ್ಹೇಳಿದ್ದೆಲ್ಲವೂ ನಿಜ, ಪರಮೇಶಿ ನನ್ನ ಹಿತೈಷಿ, ಪರಮಾಪ್ತ, ಅರ್ಥಾತ್ ನನ್ನ ಪಾಲಿನ ಪರಮಾತ್ಮನಾತ, ಹೀಗೆ ಸತೀಶ್ ಹೆಮ್ಮೆಯಿಂದ ಹೇಳಿಕೊಂಡ.

-ಕೆ.ಬಿ.ವೀರಲಿಂಗನಗೌಡ್ರ, ಬಾಗಲಕೋಟ ಜಿಲ್ಲೆ.

4 Responses

 1. Raghunath Krishnamachar says:

  ಚಂದದ ಕತೆ

 2. Nayana Bajakudlu says:

  ಎಷ್ಟೇ ಭಿನ್ನತೆಗಳಿದ್ರೂ, ಪರಸ್ಪರರ ವಿಚಾರಗಳನ್ನು ಗೌರವಿಸುವುದನ್ನು ಕಲಿತಾಗ ಆಪ್ತತೆ ತನ್ನಿಂದ ತಾನೇ ಸಂಬಂಧಗಳ ನಡುವೆ ಹುಟ್ಟಿಕೊಳ್ತದೆ ಅನ್ನೋ ಸುಂದರ ಸಂದೇಶವಿರುವ ಕಥೆ .

 3. Anantha Indaje says:

  ಆಸ್ತಿಕ-ನಾಸ್ತಿಕ ಎನ್ನುವುದಕ್ಕಿಂತ ಕರಾವಳಿಯ ಒಳ್ಳೆಯ ಶಾಲೆಗಳ ಬಗ್ಗೆ ಬೆಳಕು ಚೆಲ್ಲಿದ್ದು ಇಲ್ಲಿ ಹೆಚ್ಚು ಇಷ್ಟ ಆಯ್ತು. ಕರಾವಳಿಯನ್ನುಳಿದು ಬೇರೆಲ್ಲ ಕಡೆ ಚೇರ್ಮನ್ ರ ಗತ್ತು, ದರ್ಪ, ಠೀವಿಗಳೇ ವಿದ್ಯಾಲಯಗಳ ಕಪ್ಪು ಕಲೆಯಾಗಿ ಕಾಣಿಸುವಾಗ; ತಮ್ಮ ಶಾಲೆಗೆ ಬಂದ ಯೋಗ್ಯ ಅಧ್ಯಾಪಕರನ್ನು ಮನೆಯೊಳಗೆ ಬರಮಾಡಿಕೊಂಡು ಉಪಚರಿಸಿ ಯೋಗ್ಯತೆಯನ್ನು ಗುರುತಿಸುವ ಸಂಸ್ಥೆಗಳು ಬಹಳ ವಿರಳ. ಕರಾವಳಿಗರ ಹೃದಯ ಸಂಪನ್ನತೆಗೆ ನಮಸ್ಕಾರ. ಕತೆ ಚೆನ್ನಾಗಿದೆ

  ಹಾಗೆಯೇ ಮನೆಯೊಳಗೆ ಪತಿ/ಪತ್ನಿಯರಲ್ಲಿ ಆಸ್ತಿಕ/ನಾಸ್ತಿಕರಿದ್ದಾಗ್ಯೂ ಒಬ್ಬರನ್ನೊಬ್ಬರು ತಿಳಿದು, ಗೌರವಿಸಿ, ತಮ್ಮ ತನವನ್ನು ಮೆರೆದು, ಬದುಕಿದ ಬಾಳಿನ ಸಾರ್ಥಕ್ಯ ಈ ರೀತಿ ಅವರಿಗೆ ಒಳಿತನ್ನುಂಟುಮಾಡಿದೆ…!!! ಧನ್ಯವಾದ.

 4. Shankari Sharma says:

  ಕತೆ ಚೆನ್ನಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: