ಪ್ಲೀಸ್, ನಮಗೊಂದಿಷ್ಟು ಸಮಯಕೊಡಿ!

Share Button

ಜೆಸ್ಸಿ ಪಿ ವಿ

“ಪ್ಲೀಸ್, ನಮಗೊಂದಿಷ್ಟು ಸಮಯಕೊಡಿ!” ಹಲವು ವಿವಾಹಿತ ಮಹಿಳೆಯರ ಹೃದಯ ಈ ರೀತಿ ಆರ್ದ್ರವಾಗಿ ಬೇಡುತ್ತಿರುತ್ತದೆ.

ಆ ಕೂಗು ಬಹುಶಃ ಅರಣ್ಯ ರೋದನವಾಗುವುದೇ ಹೆಚ್ಚು. ಮದುವೆಯಾಗಿ, ಮಕ್ಕಳಾದರೆ ಮಹಿಳೆಗೆ ಮತ್ತೆ ಇನ್ನೇನೂ ಬೇಡ. ತನ್ನ ಬೇಕು-ಬೇಡಗಳ ಕುರಿತು ಚಿಂತಿಸಲು ಆಕೆಗೆ ಸಮಯವಿದ್ದರೆ ತಾನೇ? ಅವಳಿಗೆ ಬೇಕಾದದ್ದು ಒಂದಿಷ್ಟು ಸಮಯ ಮಾತ್ರ. ಆದರೆ ಅದು ಅವಳಿಗೆ ಎಂದೆಂದೂ ಮರೀಚಿಕೆಯೇ. ಅವಳ ಬದುಕು ಸಮಯದೊಂದಿಗಿನ ಗುದ್ದಾಟ.
“ಶಾಲೆಯಲ್ಲಿ ಬಿಸಿಯೂಟ ಇರುವುದು ನಮ್ಮ ಪುಣ್ಯ. ಇಲ್ಲದಿದ್ದರೆ ಬುತ್ತಿ ಕಟ್ಟಿ ಹೊರಡುವಾಗ ಮತ್ತಷ್ಟು ಲೇಟಾಗಿ ಬಿಡುತ್ತಿತ್ತು. ಬಿಸಿಯೂಟ ಉಣ್ಣುವ ವೇಳೆ ನಾವು ಶಿಕ್ಷಕಿಯರು ಹೀಗೆ ಹೇಳಿಕೊಳ್ಳುತ್ತೇವೆ. “ಛೆ, ನಾನು ಬೆಳಗ್ಗೆ ಸೊಪ್ಪಿನ ಪಲ್ಯ ಮಾಡಿದ್ದೆ. ಇನ್ನೊಂದು ಐದು ನಿಮಿಷ ಇದ್ದಿದ್ದರೆ ಬಾಕ್ಸಲ್ಲಿ ಹಾಕಿ ತರುತ್ತಿದ್ದೆ.” “ಫ್ರೆಶ್ ಅಲಸಂಡೆ ತಂದಿಟ್ಟಿದ್ದೆ. ಬೆಳಗ್ಗೆ ಅದರಿಂದ ಪಲ್ಯ ಮಾಡಿ ತರೋಣವೆಂದುಕೊಂಡಿದ್ದೆ. ಲೇಟಾಯ್ತು ಅಂತ ಫ್ರಿಡ್ಜ್ ನಲ್ಲೇ ಇಟ್ಟೆ.” ಈ ತರ ನಾವು ಪರಿತಪಿಸುವಾಗ ನಮ್ಮ ಅಸಹನೆ ನಮ್ಮ ಮೇಲೆಯೋ, ಸಮಯದ ಮೇಲೆಯೋ ತಿಳಿಯುವುದಿಲ್ಲ. ಇವತ್ತು ನೆಲ ಒರೆಸಲು ಆಗ್ಲಿಲ್ಲ. ಬೆಳಗ್ಗಿನ ಉಪಾಹಾರದ ಪಾತ್ರೆಗಳನ್ನು ತೊಳೆಯದೇ ಹಾಗೇ ಬಿಟ್ಟು ಬಂದೆ…ವಾಷಿಂಗ್ ಮೆಷಿನ್ ನಿಂದ ಬಟ್ಟೆ ತೆಗೆದು ಒಣಗಲು ಹಾಕಲು ಮರೆತೆ..ಒಂದೈದು ನಿಮಿಷ ಸಿಗುತ್ತಿದ್ದರೆ!..” ಹೊರಗಡೆ ಕೆಲಸಕ್ಕೆ ಹೋಗುವ ಮಹಿಳೆಯರು ತಮ್ಮ ಪಯಣದುದ್ದಕ್ಕೂ ಇಂತಹ ಯೋಚನೆಗಳನ್ನೇ ತಲೆಯಲ್ಲಿ ತುಂಬಿಕೊಂಡು ಬೇಸರ ಪಡುತ್ತಿರುತ್ತಾರೆ.
.
ಬೆಳಗ್ಗೆ  ಎಲ್ಲಾ ಕೆಲಸವನ್ನು ಮುಗಿಸಿಯೇ ಹೊರಡುತ್ತೇನೆಂದು ಅಲಾರಂ ಇಟ್ಟು ಬೇಗನೇ ಎದ್ದು ಕೆಲಸ ಪ್ರಾರಂಭಿಸಿದರೂ ಹೊರಡುವಾಗ ಎಂದಿನಂತೆ ತಡವಾಗಿರುತ್ತದೆ. ಲಗುಬಗೆಯಲ್ಲಿ ಕೆಲಸಗಳಲ್ಲಿ ತೊಡಗಿಕೊಂಡರೆ ನಡುವೆ ಶೌಚಾಲಯಕ್ಕೆ ಹೋಗಬೇಕೆನಿಸಿದರೂ ತಡೆದುಕೊಂಡು ಕೆಲಸ ಮುಂದುವರಿಸುತ್ತಾರೆ. ಕಾರಣವೊಂದೇ, ಕಚೇರಿಗೆ ಲೇಟಾಗಬಾರದು.ಹೀಗೆ ಮಲ-ಮೂತ್ರಗಳನ್ನು ಬಲವಂತವಾಗಿ ತಡೆಯುವುದರಿಂದಾಗಿ ಮಹಿಳೆಯರಿಗೆ ಅಪ್ಪೆಂಡಿಸೈಟಿಸ್, ಮೂತ್ರಕೋಶದ ಸೋಂಕು, ಗ್ಯಾಸ್ಟ್ರಿಕ್‌ ಸಮಸ್ಯೆಗಳು ಇನ್ನಿತರ ಕರುಳು ಹಾಗೂ ಹೊಟ್ಟೆಗೆ ಸಂಬಂಧಿಸಿದ ರೋಗಗಳು ಬರುತ್ತವಂತೆ.ಇವೆಲ್ಲದರ ಅರಿವಿದ್ದೂ ತಮ್ಮ ಆರೋಗ್ಯವನ್ನು ಕಡೆಗಣಿಸಿ ಕೆಲಸಕ್ಕೆ ಆದ್ಯತೆ ಕೊಡುವ ಮಹಿಳೆಯರ ಮನಸ್ಸು ಮೌನವಾಗಿ ಅಂಗಲಾಚುತ್ತದೆ.’ನಮಗೊಂದಿಷ್ಟು ಸಮಯಕೊಡಿ, ಪ್ಲೀಸ್..’

 


ಮಹಿಳೆಯರು, ಅದರಲ್ಲೂ ಉದ್ಯೋಗಸ್ಥ ಮಹಿಳೆಯರಲ್ಲಿ ಪ್ರಪಂಚದಲ್ಲಿ ಅತ್ಯಂತ ಅಮೂಲ್ಯವಾದ ವಸ್ತು ಯಾವುದೆಂದು ಕೇಳಿದರೆ “ಸಮಯ” ಎಂದು ಉತ್ತರಿಸುತ್ತಾರೆ. ಸಮಯಾಭಾವದಿಂದಾಗಿ ಕೆಲಸಗಳು ಅಪೂರ್ಣವಾಗುವುದು, ಸಮಯಪಾಲನೆ ಮಾಡಲಾಗದ್ದರಿಂದ ಕೇಳಬೇಕಾಗಿ ಬಂದ ಬೈಗುಳ ಇವೆಲ್ಲಾ ಅವಳ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಇದು ಮತ್ತಷ್ಟು ಚಿಂತೆಗೆ ಕಾರಣವಾಗುತ್ತದೆ. ಮನೆ, ಮಕ್ಕಳು, ಕಚೇರಿ ಎಂದು ಒದ್ದಾಡುವಾಗ,  ಮನೆಯವರ ಆರೋಗ್ಯ ಕಾಪಾಡಲು ಗಮನಕೊಡುವಾಗ ತಾನು ಸ್ವತಃ ಕಾಯಿಲೆಗೆ ತುತ್ತಾದರೆ ಸಕಾಲದಲ್ಲಿ ವೈದ್ಯಕೀಯ ತಪಾಸಣೆಗೆ ಹೋಗಲು, ಚಿಕಿತ್ಸೆ ಪಡೆದುಕೊಳ್ಳಲು ಆಕೆಗೆ ಸಾಧ್ಯವಾಗುವುದಿಲ್ಲ. ಕೆಲಸದ ಒತ್ತಡದ ನಡುವೆ ಸಣ್ಣಪುಟ್ಟ ನೋವುಗಳು ಅವಳ ಗಮನಕ್ಕೆ ಬರುವುದೇ ಇಲ್ಲ. ಸಣ್ಣ ಕಾಯಿಲೆಯೇ ಇರಲಿ, ಅದು ಉಲ್ಬಣಗೊಂಡಾಗಷ್ಟೇ ವಿಧಿಯಿಲ್ಲದೇ ಆಸ್ಪತ್ರೆಗೆ ಹೋಗುವ ಕಾರಣ ಅದು ಗುಣವಾಗಲು ತುಂಬಾ ಸಮಯ ಬೇಕಾಗುತ್ತದೆ. ಕ್ಯಾನ್ಸರ್ ಇತ್ಯಾದಿ ಭೀಕರ ಕಾಯಿಲೆಗಳು ಅದು ಗುಣಪಡಿಸಲಾಗದ ಹಂತ ತಲುಪಿದ ಮೇಲಷ್ಟೇ ಕಂಡು ಹಿಡಿಯಲ್ಪಡಲು ಮಹಿಳೆಯರ ಬಿಡುವಿಲ್ಲದ ದುಡಿಮೆಯೂ ಕಾರಣವಿರಬಹುದು. ಸಮಯಾಭಾವದಿಂದ ಮುಂದೂಡಿದ ವೈದ್ಯಕೀಯ ಪರೀಕ್ಷೆಗಳ ಕಾರಣ ಅವಳು ತನ್ನ ಪ್ರಾಣವನ್ನೇ ಕಳೆದುಕೊಳ್ಳಬೇಕಾಗಬಹುದು.ಅವಳಿಗೆ ತನ್ನ ಕುರಿತು ಚಿಂತಿಸಲು, ಕಾಳಜಿ ವಹಿಸಲು ಒಂದಿಷ್ಟು ಸಮಯವಿದ್ದರೆ ಅವಳ ಆರೋಗ್ಯ, ಆಯುಷ್ಯ ಉಳಿಯುತ್ತದೆ.
.
ನೌಕರಿಯಲ್ಲಿರುವ ಮಹಿಳೆಗೆ ಮನೆಗೆಲಸದ ಒತ್ತಡ ಹಾಗೂ ಕಚೇರಿ ಕೆಲಸದ ಒತ್ತಡ ಎರಡೂ ಇರುತ್ತದೆ. ತನ್ನ ಮಾನಸಿಕ ಒತ್ತಡವನ್ನು ಯಾರೊಂದಿಗಾದರೂ ಹಂಚಿಕೊಳ್ಳಲು ಅವಳು ತವಕಿಸುತ್ತಾಳೆ. ಮನೆಯ ಸದಸ್ಯರು ಇದನ್ನು ಅರ್ಥಮಾಡಿಕೊಂಡು ಅವಳಿಗಾಗಿ ಸ್ವಲ್ಪ ಸಮಯ ನೀಡಬೇಕು. ಅವಳ ಸುಖ-ದುಃಖ ವಿಚಾರಿಸಬೇಕು. ಎಲ್ಲಾ ಕೆಲಸಗಳನ್ನೂ ಅವಳಿಗೊಬ್ಬಳಿಗೇ ವಹಿಸದೇ ತಾವೂ ಕೆಲಸಗಳನ್ನು ಹಂಚಿಕೊಳ್ಳಬೇಕು. ಸಾಧ್ಯವಿದ್ದರೆ ಮನೆಕೆಲಸಕ್ಕೆ ಸಹಾಯಕರನ್ನು ವ್ಯವಸ್ಥೆಗೊಳಿಸಬೇಕು. ಮನೆಮನೆಗೆ ತೆರಳಿ ಒಂದೆರಡು ಗಂಟೆಗಳಲ್ಲಿ ಮನೆ ಕೆಲಸ ಮಾಡಿಕೊಡುವ ಆಳುಗಳು ಪಟ್ಟಣಗಳಲ್ಲಿ ಲಭ್ಯವಿರುತ್ತಾರೆ. ಮಹಿಳೆಯರು ತಮ್ಮ ಕೆಲಸದ ಒತ್ತಡ ಹಾಗೂ ಅದರಿಂದ ತಮಗಾಗುತ್ತಿರುವ ಸಮಸ್ಯೆಗಳ ಬಗ್ಗೆ ಮನೆಮಂದಿಯಲ್ಲಿ ಹಂಚಿಕೊಂಡು ಅವರ ಸಹಾಯ ಕೋರಬೇಕು.
.
ಕೇವಲ ಕಚೇರಿ ಕೆಲಸಕ್ಕೆ ಹೋಗುವವರಿಗಷ್ಟೇ ಇಂತಹ ಸಮಸ್ಯೆಗಳಿರುವುದಲ್ಲ. ಬಹುತೇಕ ಎಲ್ಲಾ ಮಹಿಳೆಯರಿಗೂ ಇದು ಸಾಮಾನ್ಯ ಸಮಸ್ಯೆ. ಕೂಲಿ ಕಾರ್ಮಿಕರಿಂದ ಹಿಡಿದು ಮನೆವಾರ್ತೆ ನಿರ್ವಹಿಸುವ ಉದ್ಯೋಗ ರಹಿತ ಸ್ತ್ರೀಯರಿಗೂ ಈ ರೀತಿಯ ಒಂದಲ್ಲ ಒಂದು ಸಮಸ್ಯೆ ಇರುತ್ತದೆ. ಅದರ ಪ್ರಮಾಣ ಹಾಗೂ ತೀವ್ರತೆಯಲ್ಲಿ ವ್ಯತ್ಯಾಸಗಳಿರಬಹುದಷ್ಟೇ.  ಆದುದರಿಂದ ಮಬೆಯ ಸದಸ್ಯರು ಮಹಿಳೆಯರ ಮೌನ ರೋದನವನ್ನು ಕೇಳಲು ಕಿವಿಯುಳ್ಳವರಾಗಬೇಕು. ಮಹಿಳೆ ನೆಮ್ಮದಿ ಹಾಗೂ ಆರೋಗ್ಯವಾಗಿದ್ದರಷ್ಟೇ ಮನೆಯ ಸದಸ್ಯರು ನೆಮ್ಮದಿಯಾಗಿರಲು ಸಾಧ್ಯ. ಮನೆಯವರು ಚಾಚುವ ಸಣ್ಣ ಸಹಾಯಹಸ್ತ ಅವಳ ಪಾಲಿಗೆ ಬಹುದೊಡ್ಡ ನಿರಾಳತೆ ನೀಡುತ್ತದೆ. ಅವಳಿಗೊಂದಿಷ್ಟು ಸಮಯ ಕೊಡೋಣ. ನಾವಿದ್ದೇವೆ  ನಿಮ್ಮ ಜೊತೆ ಎಂಬ ಧೈರ್ಯ ನೀಡೋಣ.

-ಜೆಸ್ಸಿ ಪಿ.ವಿ

 

3 Responses

  1. Ranganath Nadgir says:

    Mahileyar sankashtagala Kuritagi Bareda Pratiyondu wakya Shabdshaha arthapoorna Hagu Katu satyawagiruttawe, Nimma lekhana Samrhtyakke Abhinandanegalu Smt Hemakka,.. Renuka Nadgir and Ranganath Nadgir , hubblli (@4.10 A,M.)

  2. Nayana Bajakudlu says:

    ಮಹಿಳೆಯರ ಸಮಸ್ಯೆಯ (ಅದರಲ್ಲೂ ಎಲ್ಲದಕ್ಕೂ ಸಮಯ ಹೊಂದಿಸೋದೇ ಬಹುದೊಡ್ಡ ಸಮಸ್ಯೆ) ಕುರಿತಾಗಿ ಬರೆದ ರೀತಿ ಬಹಳ ಚೆನ್ನಾಗಿದೆ . ಇದರಲ್ಲಿರುವ ಪ್ರತಿಯೊಂದು ಮಾತೂ ನಿಜ. ಕೆಲಸಕ್ಕೆ ಹೋಗುವ ಮಹಿಳೆಯರ ಕಷ್ಟ ಅಂತೂ ಯಾರಿಗೂ ಬೇಡ.ಇದನ್ನೆಲ್ಲಾ ಅರ್ಥೈಸಿಕೊಂಡು ಬರೆದ ರೀತಿ ಸುಂದರವಾಗಿದೆ. ಅದೂ ತಾನೂ ಗಂಡಸು, ಮನೆ ಕೆಲಸ ನಾನು ಯಾಕೆ ಮಾಡ್ಬೇಕು ಅನ್ನೋ ಮನಸ್ಥಿತಿಯವರು ಇದ್ದರಂತೂ ಕೇಳುವುದು ಬೇಡ ಮಹಿಳೆಯ ಪಾಡು.

  3. Hema says:

    ವೃತ್ತಿಯ ಜವಾಬ್ದಾರಿ ಮತ್ತು ಗೃಹಕೃತ್ಯಗಳನ್ನು ಏಕಕಾಲದಲ್ಲಿ 25 ವರ್ಷ ಸಂಭಾಳಿಸಿ ‘ಸಾಕಪ್ಪಾ’ ಅಂತ ಸ್ವಯಂನಿವೃತ್ತಿ ತೆಗೆದುಕೊಂಡ ನನ್ನ ಅನುಭವವೂ ಹೀಗೆಯೇ ಇದೆ.. ಬರಹ ಸೊಗಸಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: