ಉರಿ – ದಿ ಸರ್ಜಿಕಲ್ ಸ್ಟ್ರೈಕ್

Spread the love
Share Button

“ಉರಿ” ಎಂದು ಕೇಳುತ್ತಲೇ ಉರಿದುಬೀಳುವಂತಹ ಘಟನೆಯೊಂದು ನೆನಪಿಗೆ ಬರುವುದು ಸಹಜ. 2016 ರಲ್ಲಿ ನಡೆದ ಉರಿ ಅಟ್ಯಾಕ್ ಹಾಗು ಅದಕ್ಕೆ ಭಾರತೀಯ ಸೇನೆಯು ನಡೆಸಿದ ಪ್ರತಿ ದಾಳಿಗಳನ್ನು ಆಧರಿಸಿ ಮೂಡಿಬಂದ ಸಿನಿಮಾವೇ “ಉರಿ- ದಿ ಸರ್ಜಿಕಲ್ ಸ್ಟ್ರೈಕ್”. ಜನವರಿ 11 ನೇ ತಾರೀಕಿನಂದು ಬಿಡುಗಡೆಗೊಂಡ ಈ ಚಿತ್ರವು ಇನ್ನೂ ಯಶಸ್ವಿಯಾಗಿ ಚಿತ್ರಮಂದಿರಗಳಲ್ಲಿ ಮುಂದುವರಿಯುತ್ತಿದೆ.

ಚಿತ್ರದ ಪ್ರಾರಂಭವಾಗುವುದು ಮ್ಯಾನ್ಮಾರ್ ಗಡಿಯಲ್ಲಿ. ಯೋಧರು ಸಾಗುತಿದ್ದ ಬಸ್ಸುಗಳ ಮೇಲೆ ದಾಳಿಯೊಂದು ನಡೆಯುತ್ತದೆ. ಅದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೇನೆಯು ದಾಳಿಗಾರರ ಕ್ಯಾಂಪುಗಳ ಮೇಲೆ ಮರು- ದಾಳಿ ನಡೆಸುತ್ತದೆ. ಈ ದಾಳಿಗೆ ನೇತೃತ್ವ ನೀಡುವಾತನೇ ನಮ್ಮ ಸಿನಿಮಾದ ಹೀರೋ- ಮೇಜರ್ ವಿಹಾನ್ ಸಿಂಗ್. ಈ ಘಟನೆಯ ನಂತರ ನಾಯಕನು ತನ್ನ ತಾಯಿಯ ಆರೈಕೆಗಾಗಿ ದೆಹಲಿಗೆ ವರ್ಗಾವಣೆ ಪಡೆದುಕೊಂಡು ಆಫೀಸ್ ಕೆಲಸಗಳಲ್ಲಿ ತೊಡಗಿಸಿಕೊಳ್ಳುತಾನೆ. ಅದೇ ಸಮಯದಲ್ಲಿ ಜಮ್ಮು ಕಾಶ್ಮೀರದ ಉರಿ ಎಂಬಲ್ಲಿ ಸೇನಾ ಕ್ಯಾಂಪ್ ಒಂದರ ಮೇಲೆ ಭಯೋತ್ಪಾದಕರು ದಾಳಿ ನಡೆಸುತ್ತಾರೆ. 2016 ಸೆಪ್ಟೆಂಬರ್ 18ರಂದು ನಡೆದ ಈ ದಾಳಿಯಲ್ಲಿ 19 ಸೈನಿಕರು ಹುತಾತ್ಮರಾಗುತ್ತಾರೆ. ಇದರಲ್ಲಿ ನಾಯಕನ ಆಪ್ತರು ಸೇರಿರುತ್ತಾರೆ. ಕಥೆಯ ದ್ವಿತೀಯಾರ್ಧ ಪ್ರಾರಂಭವಾಗುವುದೇ ಇಲ್ಲಿಂದ. ತನ್ನ ದೇಶ ಹಾಗು ಕುಟುಂಬಕ್ಕೆ ನೋವುಂಟು ಮಾಡಿದ ಈ ದಾಳಿಗೆ ಉತ್ತರ ನೀಡಬೇಕೆಂದು ನಾಯಕನು ತೀರ್ಮಾನಿಸುತ್ತಾನೆ. ಸೆಪ್ಟೆಂಬರ್ 28-29 ರಂದು ಉಗ್ರರ ಲಾಂಚ್ ಪಾಡುಗಳ ಮೇಲೆ ನಡೆಸಿದ ಸರ್ಜಿಕಲ್ ಸ್ಟ್ರೈಕಿನ ನೇತೃತ್ವವನ್ನು ವಹಿಸುತ್ತಾನೆ. ಈ ಸರ್ಜಿಕಲ್ ಸ್ಟ್ರೈಕಿನ ಹಿನ್ನಲೆ, ಯೋಜನೆ, ಸಿದ್ಧತೆ, ಹಾಗು ಅಲ್ಲಿ ಎದುರಾದ ಸಂಕಷ್ಟಗಳು , ಅದನ್ನು ಮೇಜರ್ ವಿಹಾನ್ ಸಿಂಗ್ ಹಾಗು ಸೇನೆ ಎದುರಿಸಿದ ರೀತಿ , ಎಲ್ಲವನ್ನು ಬಿಚ್ಚಿಡುತ್ತದೆ “ಉರಿ” ಸಿನಿಮಾ.

ಜನರ ಮನಸ್ಸಿನಿಂದ ಇನ್ನೂ ಮಾಸದ ಒಂದು ಘಟನೆಯನ್ನು , ಸಿನಿಮಾ ಶೈಲಿಯಲ್ಲಿ ಜನ ಸಾಮಾನ್ಯರಿಗೆ ಇಷ್ಟವಾಗುವಂತೆ ಹೇಳುವುದರಲ್ಲಿ ಯಶಸ್ವಿಯಾಗಿದ್ದಾರೆ ನಿರ್ದೇಶಕ ಆದಿತ್ಯ ಧರ್. ಇದು ಅವರ ಚೊಚ್ಚಲ ಚಿತ್ರವೆಂದರೆ ಅಚ್ಚರಿಯೇ ಸರಿ. ದೊಡ್ಡ ಬಜೆಟಿನ ಮಸಾಲಾ ಸಿನಿಮಾಗಳು,ವಿದೇಶಿ ಲೊಕೇಶನುಗಳನ್ನು ಒಳಗೊಂಡ ಬಾಲಿವುಡ್ ಸಿನೆಮಗಳು, ಹಾಗು ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾಗಳು ಹೊರಬರುತ್ತಿರುವ ಈ ಕಾಲದಲ್ಲಿ, ಇಂತಹದೊಂದು ಸಿನೆಮಾವನ್ನು ನಿರ್ದೇಶಿಸಲು ಧೈರ್ಯ ಮಾಡಿದ ರೊನ್ನಿ ಸ್ಕ್ರೂವಾಲಾ ಅವರನ್ನು ಶ್ಲಾಘಿಸಲೇ ಬೇಕು. ಸಂಗೀತ ಸಂಯೋಜಕರು, ಸಿನೆಮಾಟೋಗ್ರಾಫರ್, ಮತ್ತುಳಿದೆಲ್ಲಾ ತಂತ್ರಜ್ಞರು ತಮ್ಮ ತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ನಟರಾದ ಪರ್ವೇಶ್ ರಾವಲ್,ಯಾಮಿ ಗೌತಮ್ ಹಾಗು ಕೀರ್ತಿ  ಕುಲ್ಹರಿ ತಮ್ಮ ಪಾತ್ರಗಳಿಗೆ ನ್ಯಾಯವನ್ನು ಒದಗಿಸಿದ್ದಾರೆ. ಇನ್ನು ನಾಯಕ ಮೇಜರ್ ವಿಹಾನ್ ಸಿಂಗ್ ಪಾತ್ರವನ್ನು ನಟಿಸಿದ ವಿಕಿ ಕೌಶಲ್ ಅಂತೂ ಸಿನಿಮಾದಲ್ಲಿ ಮಿಂಚಿದ್ದಾರೆ ಎಂದರೆ ತಪ್ಪಾಗದು.

ಹಾಲಿವುಡ್ ಸಿನೆಮಾಗಳ ಶೈಲಿಯಲ್ಲಿ ಚಿತ್ರವನ್ನು ಚಿತ್ರೀಕರಿಸಬೇಕೆಂಬ ನಿರ್ದೇಶಕರ ಪ್ರಯತ್ನವು ಸಿನಿಮಾ ನೋಡಬೇಕಿದ್ದರೆ ಮನದಟ್ಟಾಗುತ್ತದೆ. ಚಿತ್ರದಲ್ಲಿರು ಹಾಡುಗಳು, ಕೆಲವು ಭಾವುಕ ದೃಶ್ಯಗಳನ್ನು ಹೊರತು ಪಡಿಸಿದರೆ ನಿರ್ದೇಶಕರ ಈ ಪ್ರಯತ್ನವು ಒಂದು ಮಟ್ಟಿಗೆ ಯಶಸ್ವಿ ಎನ್ನಬಹುದು. ನೈಜ ಘಟನೆಗಳಿಗೆ ಒಂದಷ್ಟು ಭಾವನಾತ್ಮಕ ಸನ್ನಿವೇಶಗಳನ್ನು ಸೇರಿಸಿದ್ದಾರೆ ನಿರ್ದೇಶಕರು. ಹುತಾತ್ಮರಾದ  ಯೋಧರೊಬ್ಬರ ಮಗಳು, ತನ್ನ ತಂದೆಗೆ ಕೊನೆಯ ನಮನವನ್ನು ಸಲ್ಲಿಸಿದ ರೋಮಾಂಚಕರ ಘಟನೆಯೊಂದನ್ನು ಸಿನೆಮಾದಲ್ಲೂ ಅಳವಡಿಸಿಕೊಂಡಿದ್ದಾರೆ. ಪ್ರಧಾನ ಮಂತ್ರಿ ಹಾಗು ಇನ್ನಿತರ ಮಂತ್ರಿಗಳನ್ನು ಹೋಲುವ ಪಾತ್ರಗಳು ಸಿನೆಮಾವನ್ನು ಇನ್ನೂ ಹೆಚ್ಚು ನೈಜತೆಯೆಡೆಗೆ ಕೊಂಡೊಯ್ಯುತ್ತವೆ. ಒಟ್ಟಿನಲ್ಲಿ ಭಯೋತ್ಪಾದಕರ ಕ್ರೌರ್ಯ, ಅದರೆದುರು ಹೋರಾಡುವ ಸೈನಿಕರು, ಅವರ ಕುಟುಂಬ, ಅವರ ನಿಸ್ವಾರ್ಥ ಸೇವೆ ಹಾಗು ದೇಶಭಕ್ತಿಯನ್ನು ತೋರಿಸಿವುದರಲ್ಲಿ “ಉರಿ – ದಿ ಸರ್ಜಿಕಲ್ ಸ್ಟ್ರೈಕ್”  ಸಂಪೂರ್ಣವಾಗಿ ಗೆದ್ದಿದೆ ಎನ್ನ ಬಹುದು.

ಬಹಳ ದಿನಗಳ ನಂತರ ಬಾಲಿವುಡಿನಲ್ಲಿ ಇಂತಹದೊಂದು ದೇಶಭಕ್ತಿಯುಳ್ಳ ಸಿನಿಮಾ ಹೊರಬಂದಿದೆ. ಬಾರ್ಡರ್, ಲಕ್ಷ್ಯ , ಕಮಾಂಡೋ ತರಹದ ಚಿತ್ರಗಳ ಪಟ್ಟಿಗೆ ಇದು ಹೊಸದೊಂದು ಸೇರ್ಪಡೆ ಎನ್ನಬಹುದು. ಪೂರ್ವಾಗ್ರಹೀತರಾಗಿರದೆ ನೋಡಿದಲ್ಲಿ ಈ  ಸಿನೆಮಾವು ಇಷ್ಟವಾಗದೆ ಇರುವುದು ಸಂಶಯವೇ. ಚಿತ್ರದ ಪ್ರಸಿದ್ಧ ಸಂಭಾಷಣೆಯೊಂದು ಹೀಗಿದೆ. ಮೇಜರ್ – ” ಹೌ ಐಸ್ ದಿ ಜೋಷ್?”. ಸಿನಿಮಾ ನೋಡಿದ ಪ್ರೇಕ್ಶಕರಂತೂ “ಹೈಯ್ ಸರ್” ಎಂದೇ ಉತ್ತರಿಸುತ್ತಾರೆ.

-ಪಲ್ಲವಿ ಭಟ್, ಬೆಂಗಳೂರು

7 Responses

 1. Varun kumar says:

  ಉರಿ ಚಿತ್ರ ಬಂದ ನಂತರ ಕೆಲ‌ ಲದ್ದಿ ಜೀವಿಗಳಿಗೆ ಉರಿ ಬಂದಿರುವುದಂತು ನಿಜ

 2. Shankara Narayana Bhat says:

  ಉರಿ -ದಿ ಸರ್ಜಿಕಲ್ ಸ್ಟೈಕ್ ಸಿನೆಮಾ ಚೆನ್ನಾಗಿದೆ. ಇದರಂತೆಯೇ ಕಾಸರಗೋಡು ಹಿರಿಯ ಪ್ರಾಥಮಿಕ ಶಾಲೆ, ಎಂಬ ಸಿನಿಮಾ ಕೂಡ. ಸೊಗಸಾಗಿ ಮೂಡಿಬಂದಿದೆ. ಇಂತಹ ನೈಜ ಸಂಗತಿಗಳನ್ನು ಸಿನಿಮಾ ಮಾಡಿದರೆ ಒಳ್ಳೆಯದು.

 3. Nayana Bajakudlu says:

  ಚೆನ್ನಾಗಿದೆ ಬರಹ. ಸಿನೆಮಾ ವನ್ನು ಒಂದು ಸಲ ನೋಡಲು ಪ್ರೇರೇಪಿಸುವಂತಿದೆ .

 4. Vasanth Shenoy says:

  Beautiful article

 5. ಗಣೇಶ ರಾಜ್ says:

  ಸಂಶಯವೇ ಇಲ್ಲ. ಉರಿ ಸಿನಿಮಾದಿಂದ ಲದ್ದಿ ಜೀವಿಗಳ ಜೊತೆಗೆ ನಗರದ ನಕ್ಸಲರಿಗೂ ಉರಿ ಬಂದುಬಿಟ್ಟಿದೆ..
  ಇದು ಮಕ್ಕಳು ನೋಡಲೇ ಬೇಕಾದಂತಹ ಸಿನಿಮಾ.. ಯಾಕೆಂದರೆ ದೇಶಪ್ರೇಮದ ಕಿಚ್ಚನ್ನು ಹತ್ತಿ ಸುವುದರ ಜೊತೆಗೆ ನಮ್ಮ ಸೈನಿಕರ ಪರಿಶ್ರಮ ದ ಪರಿಚಯವನ್ನು ಮುಂದಿನ ಪೀಳಿಗೆಯವರಿಗೆ ತಿಳಿಯಲು ಸಹಕಾರಿ..

  ಪಲ್ಲವಿ ಯವರೆ ತುಂಬಾ ಚೆನ್ನಾಗಿ ಸಿನೆಮಾ ವಿಮರ್ಶೆ ಮಾಡಿದ್ದೀರಿ.. ಧನ್ಯವಾದಗಳು..

 6. Hema says:

  ನಿಮ್ಮ ಬರಹ ಇಷ್ಟವಾಯಿತು. ನಾವು ಕೂಡ ‘ಉರಿ’ ಸಿನೆಮಾ ನೋಡಿ ಬಂದೆವು.

 7. Shankari Sharma says:

  ಚೆನ್ನಾಗಿದೆ ಬರೆಹ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: