ಕಾಫಿ ಕಾಸಿನ ಸದ್ಬಳಕೆ (ನುಡಿಮುತ್ತು-2)

Share Button

ನಾನಾಗ ಪ್ರೈಮೆರಿ ಶಾಲೆ ಕಲಿಯುತ್ತಿದ ದಿನಗಳವು. ಈ ಹಿಂದೆ ಹೇಳಿದಂತೆ ನನ್ನ ಅಜ್ಜನಮನೆಯಿಂದ ಸೋದರಮಾವನ ಮಕ್ಕಳಾದ ಬಾವಂದಿರ ಜೊತೆಗೆ ಕುಂಬಳೆಸೀಮೆಯ ಇಚ್ಲಂಪಾಡಿ ಹಿರಿಯ ಬುನಾದಿ ಕಳತ್ತೂರು ಶಾಲೆಗೆ ಹೋಗುತ್ತಿದ್ದ ಕಾಲ. ಅಜ್ಜನಮನೆ ಎಡನಾಡು ಗ್ರಾಮದ ಕಾರಿಂಜ ಹಳೆಮನೆ. ಮನೆಯಿಂದ ಶಾಲೆಗೆ ಐದುನಿಮಿಷದ ಹಾದಿ. ಈಗಿನಂತೆ ಆ ಕಾಲದಲ್ಲಿ ಶಾಲೆಯಲ್ಲಿ ಮದ್ಯಾಹ್ನ ಬಿಸಿಯೂಟದ ಉಪಚಾರ ಇರಲಿಲ್ಲ. ಸಮೀಪದವರು ಮನೆಗೆ ಹೋಗಿ ಬರುವರು. ದೂರದವರಿಗೆ ಬುತ್ತಿಯೂಟವೇಗತಿ. ನಾವು ಮನೆಗೆ ಬಂದು ತಲಪದೆ ಅಜ್ಜ ಸಹಿತ ಅಲ್ಲಿ ಯಾರೂ ಊಟ ಮಾಡುತ್ತಿರಲಿಲ್ಲ. ಯಾರೇ ಅತಿಥಿಗಳು ಬಂದರೂ ಅಜ್ಜನಮನೆಯಲ್ಲಿ ಅದೇ ಕ್ರಮ.

ಶಾಲೆಯ ಐದುದಿನಗಳಲ್ಲಿ ನಾಲಕ್ಕೂ ದಿನಗಳು ಮದ್ಯಾಹ್ನ ಒಂದು ಗಂಟೆಗೆ ಊಟಕ್ಕೆ ಬಿಡುವು. ಆದರೆ ಶುಕ್ರವಾರ 12-30 ಕ್ಕೆ ಊಟದ ಬೆಲ್. ವಾಪಾಸು 0230 ಕ್ಕೆ ಅಪರಾಹ್ನದ ತರಗತಿಗಳು ಪ್ರಾರಂಭ. ಶುಕ್ರವಾರ ನಮಗೂ ಸಂತಸದ ದಿನ!. ಯಾಕೆಂದರೆ….ಮನೆಗೆ ಬಂದು ಊಟತೀರಿಸಿ ಹಿಂತಿರುಗುವಾಗ ಅಜ್ಜ ನಮಗೆ ಹೋಟೆಲಲ್ಲಿ ಕಾಫಿ ಕುಡಿಯಲು ಕಾಸು ಕೊಡುತ್ತಿದ್ದರು. ಆದರೆ ಆಗತಾನೇ ಊಟಮಾಡಿ ಹೋಗುವ ಮಕ್ಕಳಿಗೆ ಹೋಟೆಲಿನ ಕಾಫಿ ಯಾಕೆಂದು ಅಜ್ಜ ವಾದಿಸಿದರೂ ಇರಲಿ ಮಕ್ಕಳು ವಾರಕ್ಕೊಮ್ಮೆ ಹೋಟೆಲು ಕಾಫಿ ರುಚಿನೋಡಲಿ ನಮ್ಮವೇ ವೆಂಕಪ್ಪಜ್ಜನ ಹೋಟೆಲು ಎಂದು ಹೇಳಿ ಒಪ್ಪಿಸಿ ನಮಗೆ ಸಿಗುವ ಬೋನಸ್ಸಾಗಿತ್ತು. ಕೊಡುವವರು ಫೈನೆನ್ಸ್ ಅಧಿಕಾರಿಗಳಾದ ಅಜ್ಜನಾದರೂ ಇದು ಪುಟ್ಟುಮಾವನ ಮುಖೇನ ಸಿಗುವ ಭಕ್ಷೀಸಾಗಿತ್ತು. ಕಾರ್ಬಾರವೆಲ್ಲ ಪುಟ್ಟುಮಾವನಿಗೆ ಅಜ್ಜ(ಕೇಶವಭಟ್ಟ)ಬಿಟ್ಟುಕೊಟ್ಟರೂ ಫೈನೆನ್ಸ್ ಹಿಡಿತ ಅಜ್ಜನ ಕೈಯೊಳಗೇ ಇತ್ತು. ಪುಟ್ಟುಮಾವ(ಮಹಾಲಿಂಗಭಟ್ಟರು)ನಿಗೆ ಆಗ ಮಕ್ಕಳಾಗಿಲ್ಲ. ಬಾವಂದಿರು ಮೂರುಜನ ಅವರ ಅಣ್ಣನ ಮಕ್ಕಳಾದರೆ; ನಾನು ತಂಗಿಯ ಮಗಳು. ನಮಗೆ ಸಿಗುವ ಕಾಫಿಕಾಸು ಕಡಿಮೆಯೇನಲ್ಲ!. ಬರೋಬರಿ ಎರಡಾಣೆ!!. ಹನ್ನೆರಡು ನಯಾಪೈಸೆ !!!. ಅಂತಹ ನೂರುಪೈಸೆಗೆ‌ ಒಂದು ರೂಪಾಯಿ.(ಅಂದರೆ ಹದಿನಾರಾಣೆ). ಆ ಕಾಲದಲ್ಲಿ ಒಂದಾಣೆ, ಎರಡಾಣೆ, ಒಂದುಪೈಸೆ, ಎರಡುಪೈಸೆ. ಐದುಪೈಸೆ, ಹತ್ತುಪೈಸೆಗಳೆಲ್ಲ ಚಲಾವಣೆಯಲ್ಲಿತ್ತು.

ಕಳತ್ತೂರು ಶಾಲೆಯ ಎದುರುಭಾಗ ಅದೇ ಊರಿನ ಮುನ್ನೂರು ವೆಂಕಪ್ಪಭಟ್ಟರ ಹೋಟೆಲು ಇತ್ತು. ಎರಡಾಣೆಗೆ ಒಂದು ಕಾಫಿ + ಒಂದು ಸಣ್ಣತಿಂಡಿ ಬರುತ್ತಿದ್ದ ಕಾಲವದು. ನಾವು ನಮ್ಮಕೈಯಲ್ಲಿದ್ದ ಎರಡಾಣೆಯನ್ನು ವೆಂಕಪ್ಪಜ್ಜನಿಗೆ ಕೊಟ್ಟು ಕಾಫಿ+ತಿಂಡಿ ಸೇವಿಸಬೇಕೆಂದು ಮಾವನ ಕಿವಿಮಾತು ಪ್ರಾರಂಭದ ಹಂತದಲ್ಲೇ ಇತ್ತಾಗಿ ಪ್ರತಿಬಾರಿಯೂ ಅದೇರೀತಿ ವ್ಯವಹರಿಸುತ್ತಿದ್ದೆವು.

ಹೀಗಿರುತ್ತಾ ಕೆಲವು ಸಮಯ ಸರಿದಾಗ ನನಗೊಂದು ಯೋಚನೆ ಹೊಳೆಯಿತು. ಅಜ್ಜ ಹೇಳಿದಂತೆ ಊಟಮಾಡಿ ಹೋಗಿ ಐದು ನಿಮಿಷಕ್ಕೆ ಮತ್ತೆ ಕಾಫಿ ಯಾಕೆ?.(ಅಜ್ಜನ ಮನೋಭೂಮಿಕೆ ನನ್ನಲ್ಲೂ ಉದ್ಭವಿಸಿತು). ಆ ದುಡ್ಡನ್ನು ಉಳಿಕೆ ಮಾಡಿಕೊಂಡೆನಾದರೆ.. ಮುಂದೆ ನನಗೇನಾದರೂ ಖರೀದಿಸಬೇಕಿದ್ದರೆ ಅದನ್ನ ಉಪಯೋಗಿಸಬಹುದಲ್ಲ!. ಸರಿ.. ಅದು ಕಾರ್‍ಯರೂಪಕ್ಕೆ ಒಂದು ದಿನ ಬಂತು. ಅಂದಿನ ಕಾಫಿಯ ದುಡ್ಡನ್ನು ಶಾಲೆ ಬಿಟ್ಟು ಬಂದೊಡನೆ ಅಜ್ಜಿಯ ಬಳಿಕೊಟ್ಟು ಇದು ನಿಂಗಳತ್ರೆ ಇರಳಿ ಅಜ್ಜಿ, ಆನು ಬೇಕಪ್ಪಗ ಕೇಳುವೆ. (ಇದು ನಿಮ್ಮಲ್ಲಿರಲಿ ಅಜ್ಜಿ ನಾನು ಬೇಕಾಗುವ ಸಮಯಕ್ಕೆ ಕೇಳುವೆ ) ಎಂದಾಗ ಇದೆಲ್ಲಿಂದ..! ಎಂದು ಅಜ್ಜಿ ಕಣ್ಣರಳಿಸಿದಾಗ ನಾನು ವಿಷಯ ಒಪ್ಪಿಸಿದೆ.

ಅಂದು ರಾತ್ರಿ ಊಟ ತೀರಿಸಿ ಎಂದಿನಂತೆ ಅಜ್ಜ ಕತೆ ಹೇಳಲು ನಮ್ಮನ್ನೆಲ್ಲ ಹತ್ತಿರ ಕುಳಿತುಕೊಳ್ಳಿಸಿದ ಕ್ಷಣ; ಭಾವಂದಿರು.. ಅಜ್ಜಾ..,ವಿಜಯತ್ತಿಗೆ ಇಂದು ಹೋಟ್ಳಿಲ್ಲಿ ಕಾಫಿ ಕುಡುದ್ದಿಲ್ಲೆ(ವಿಜಯತ್ತಿಗೆ ಇಂದು ಹೋಟೆಲು ಕಾಫಿ ಕುಡಿಯಲಿಲ್ಲ). ಎಂದು ವರದಿ ಒಪ್ಪಿಸಿದಾಗ ನನಗೆ ಹೆದರಿ ಹೊಟ್ಟೆಯೊಳಗೆ ತಳಮಳವಾಯ್ತು. ಯಾಕೆಂದರೆ..ಆ ಕಾಸನ್ನು ಅಜ್ಜ ವಾಪಾಸು ಕೇಳದೆ ಬಿಡಲಾರರು. ನನ್ನೆಣಿಕೆ ಸುಳ್ಳಾಗಲಿಲ್ಲ. ಆ ಪೈಸೆ ಇತ್ತೆ ಕೊಡು ವಿಜಯಾ ಎಂದರು ಅಜ್ಜ. ಅದರ ಅಜ್ಜಿಯತ್ರೆ ಕೊಟ್ಟಿದೆ(ಅದನ್ನು ಅಜ್ಜಿಯೊಡನೆ ಕೊಟ್ಟಿದ್ದೇನೆ). ಅಜ್ಜಿಯಲ್ಲಿ ಕೇಳಿದರು ಅಜ್ಜ. ಅದರ ನಿಂಗೊ ವಾಪಾಸು ಕೇಳೆಡಿ. ಅದಕ್ಕೆ ಕೆದೂರು ಜಾತ್ರೆಂದ ಎಂತಾರು ತೆಗವಲಾತು (ಅದನ್ನು ನೀವು ವಾಪಾಸು ಕೇಳುವುದು ಬೇಡ. ಅವಳಿಗೆ ಕಿದೂರು ಜಾತ್ರೆ ಸಂತೆಯಿಂದ ಏನಾದ್ರೂ ತೆಗೆಯುವುದಕ್ಕಿರಲಿ) ಎಂದು ಅಜ್ಜಿ ಹೇಳಿದಾಗ ಅಜ್ಜ ಸುಮ್ಮನಾದರು. ಯಬ್ಬ!!..ಬಚಾವಾದೆ ಎಂದು ಸಂತೋಷದ ನಿಟ್ಟುಸಿರು ಬಿಟ್ಟೆ.

ಪ್ರತಿಬಾರಿಯೂ ಹೀಗೇ ಮಾಡ್ತಾ ಬಂದೆ. ಆದರೆ..ನನ್ನೆಣಿಕೆ ಸಂತೆಯ ಖರೀದಿಯಾಗಿರಲಿಲ್ಲ. ಎರಡು ವರ್ಷ ಸರಿದಾಗ ಹನ್ನೆರಡು ಪೈಸೆಯಂತೆ ಸೇರಿಸುತ್ತಾ ಹನ್ನೆರಡು ರೂಪಾಯಿಗಳಾದುವು. ನನ್ನ ಚಿಂತನೆಯಂತೆ ನನ್ನ ಮನೆಗೆಹೋಗಿದ್ದಾಗ ಅಬ್ಬೆ(ಅಮ್ಮ) ಹತ್ರ ಅದನ್ನು ಕೊಟ್ಟು ನನಗೊಂದು ಪೆಟ್ಟಿಗೆ ತರಿಸಿಕೊಡಲು ಹೇಳಿದೆ. (ಅಲ್ಲಿ ಆ ಕಾಲದಲ್ಲಿ ನನ್ನ ಕೈಗೆಟಕುವಂತೆ ಶೆಲ್ಫ್ ಆಗಲೀ ಸ್ಟೇಂಡ್ ಆಗಲೀ ಇರಲಿಲ್ಲ) ಪುಸ್ತಕ ಜೋಪಾನವಾಗಿಡುವ ಅಭ್ಯಾಸ ನನಗೆ ಬಾಲ್ಯದಲ್ಲೇ ಇತ್ತು. ಆ ಟ್ರಂಕು ಪೆಟ್ಟಿಗೆ ಬಾಲ್ಯದ ಸವಿನೆನಪನ್ನು ನೀಡುವ ದ್ಯೋತಕವಾಗಿ ಈಗಲೂ ಇದೆ.

-ವಿಜಯಾ ಸುಬ್ರಹ್ಮಣ್ಯ, ಕುಂಬಳೆ.

4 Responses

 1. Hema says:

  ಸವಿನೆನಪುಗಳ ಮೆರವಣಿಗೆ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. ೫-೬ ದಶಕಗಳ ಹಿಂದೆಯೇ, ಹಳ್ಳಿಯ ಪರಿಸರದಲ್ಲಿ, ಬಾಲಕಿಯನ್ನು ಓದಿಸಿದ ಹಾಗೂ ಹೋಟೆಲ್ ನಲ್ಲಿ ಕಾಫಿ ಕುಡಿಯಲು ಹಣ ಕೊಟ್ಟ ಹಿರಿಯರ ಧಾರಾಳತನ ಹಾಗೂ ಬಾಲ್ಯದಲ್ಲಿಯೇ ಮಿತವ್ಯಯ ಮಾಡಬೇಕೆಂಬ ನಿಮ್ಮ ಆಲೋಚನೆ ಬಹಳ ಮೆಚ್ಚಿಗೆಯಾಯಿತು..ನಿಮ್ಮ ನುಡಿಮುತ್ತುಗಳನ್ನು ಸುರಹೊನ್ನೆಯಲ್ಲಿ ಫೋಣಿಸುತ್ತಾ ಇರಿ..

 2. Vijayasubrahmanya says:

  ಸುರಹೊನ್ನೆಯ ಹೇಮಮಾಲಾ ಅವರಿಗೆ ಮನದಾಳದಿಂದ ಧನ್ಯವಾದ ಗಳು

 3. Nayana Bajakudlu says:

  ಬಾಲ್ಯದ ಸವಿನೆನಪಿನ ಗುಚ್ಛ ಸೊಗಸಾಗಿದೆ.

 4. Jessy Pudumana says:

  ಸವಿಸವಿ ನೆನಪು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: