ಅಪ್ಪ..

Share Button

ಅಪ್ಪ..

ಬಾಳ ಜೋಳಿಗೆ ಹಿಡಿದು ನನ್ನೆದೆಯ ನಡುಮನೆಯ ಹೊಸ್ತಿಲಲಿ ನಿಂತಿರುವ ಜೋಗಪ್ಪ

ಆ ಜೋಳಿಗೆ ತುಂಬ ಪ್ರೀತಿ ಎಂಬ ಆಸ್ತಿ ಹೊತ್ತುತಂದಿರುವ ಅರಸ ಆತ ನನ್ನಪ್ಪ..

ಅಪ್ಪ ಪದ ಚಿಕ್ಕದೆ ಆದ್ರೆ ಕೊಡೋ ಅರ್ಥ,ಭಾವನೆ,ನೆನಪಿಗೆ ಹೋಲಿಕೆ ಇಲ್ಲ.ಅಣ್ಣ ಅಪ್ಪನ ತರ ಅಂತಾರೆ ಇರಬೋದೇನೋ
ಆದ್ರೆ ಅಣ್ಣನೇ ಅಪ್ಪ ಅಂತ ಯಾರು ಹೇಳಲ್ಲ ಯಾಕಂದ್ರೆ ಅವರಿಗೂ ಗೊತ್ತು ಯಾರಿಂದಲೂ ಬದಲಿಸಲು ಆಗದ ವ್ಯಕ್ತಿ ಅಪ್ಪ…

ಅಪ್ಪ….
ಎಲ್ಲರಿಗು ಇಷ್ಟ,ಇಷ್ಟಪಡದೆ ಇರೋರು ಇದಾರೆ ಅದು ಅವರವರ ಭಾವನೆ,ಜೀವನಕ್ಕೆ ಬಿಟ್ಟದ್ದು.ಎಲ್ಲದರ ಹಿಂದೆಯೂ ಬಲವಾದ ಕಾರಣ ಎಂಬ ಕಳ್ಳ ಇದ್ದೆ ಇದ್ದಾನೆ. ಕೆಲ ಕಳ್ಳರು ಪರಿಸ್ಥಿತಿಯ ಒತ್ತಡಕ್ಕೆ ಬಿದ್ದು ಕಳ್ಳರಾದವರು,ಇನ್ನು ಕೆಲವರು ಕಳ್ಳರಾಗಲೇ ಬೇಕೆಂಬ ಒತ್ತಡ ತಂದುಕೊಂಡವರು.

ಅಪ್ಪ….
ಜೀವನದಲ್ಲಿ ದೇವರು ಎಲ್ಲರಿಗೆ ಎಲ್ಲವನ್ನು ಕರುಣಿಸಿರೋದಿಲ್ಲ ಆದ್ರೆ ಅಪ್ಪ ಅಮ್ಮ ಅನ್ನೋ ಎರಡು ದೊಡ್ಡ ಮರಗಳನ್ನ
ಪ್ರತಿಯೊಬ್ಬರಿಗೂ ಕೊಟ್ಟಿರುತ್ತಾನೆ.ಆದರೆ ಆ ಮರ ಇಷ್ಟೇ ದಿನ ನಮಗೆ ಆಸರೆಯಾಗಿರ್ಬೇಕು ಅಂತಾನೋ ಇಲ್ಲ ನಾವುಗಳು
ಇಷ್ಟೇ ದಿನ ಅವುಗಳ ಆಸರೆ ಪಡೆಯಬೇಕಂತನೋ ಬರೆದು ಕಳಿಸಿರುತ್ತಾನೆ.

ಅಪ್ಪ….
ಎಲ್ಲರ ಜೀವನದಲ್ಲಿ ಪ್ರತ್ಯಕ್ಷವಾಗೋ ಇಲ್ಲ ಪರೋಕ್ಷವಾಗೋ ಜೊತೇಲಿ ಇರೋ ಶಕ್ತಿ.ನೀವು ಯಾರನ್ನೇ ಕೇಳಿ ಜೀವನದಲ್ಲಿ ಏನಾಗಬೇಕು ಅಂತ ಇದಿಯಾ ಎಲ್ರು ದೊಡ್ಡ ದೊಡ್ಡ ಸಾಧಕರ ಹೆಸರು ಹೇಳ್ತಾರೆ.ಕಣ್ಣೆದುರಿಗೆ ಇರೋ ಅಪ್ಪ ಅನ್ನೋ ಸಾಧಕನ ಹೆಸರು ಹೇಳೋರು ತೀರಾ ವಿರಳ.ಯಾಕಂದ್ರೆ ಅವರಿಗೆ ತನ್ನ ಅಪ್ಪನಂತೆ ನಾನು ಒಬ್ಬ ಒಳ್ಳೆ ಅಪ್ಪ ಆಗ್ತೀನಿ ಅನ್ನೋದ್ರಲ್ಲಿ ಏನೋ ಮುಜುಗರ.

ಅಪ್ಪ…
ಊರಿನ ಎಲ್ಲಾ ಮನೆಗಳಲ್ಲಿ ಇರೋ ಮಕ್ಕಳ ಜೊತೆ ಹೋಲಿಕೆ ಮಾಡಿ ಬೈತಾರೆ,ಅದೇ ಊರಿನ ಮಂದಿ ಯಾರಾದರೂ ತಮ್ಮ
ಮಗ/ಮಗಳ ಬಗ್ಗೆ ಏನಾದ್ರು ಹೇಳಿದ್ರೆ ಪರ ನಿಂತು ಅವರ ಬಾಯ್ ಮುಚ್ಚುಸ್ತಾರೆ.

ಅಪ್ಪ…

ನಾವು ಎಷ್ಟೇ ಬೆಳೆದು ದೊಡ್ಡೋರು ಆದ್ರು ನಿನಗೆ ನಾವಿನ್ನು ಮಕ್ಕಳೇ. ಸರಿಯಾಗಿ ಓಡಾಡದಿದ್ದಾಗ ತನ್ನ ಕಿರುಬೆರಳ ಆಸರೆ ನೀಡಿ ನಡಿಗೆ ಕಲಿಸೋ ಅಪ್ಪ, ಸೈಕಲ್ ಹೊಡೆಯಲು ತನ್ನ ಎರಡು ಕೈಗಳ ಆಸರೆ ನೀಡೋ ಅಪ್ಪ , ತಾನು ಕಲಿತಿದು ಅಲ್ಪವಾದರೂ ತನ್ನ ಮಕ್ಕಳು ಎಲ್ಲವನ್ನು ಕಲಿಯಲಿ ಎಂದು ಜೀವನವಿಡೀ ಕೂಡಿಡೋ ಅಪ್ಪ, ತನ್ನ ಬಾಲ್ಯದ ಆಸೆ ಕನಸುಗುಳನ್ನ ತನ್ನ ಮಕ್ಕಳ ಬಾಲ್ಯದಲ್ಲಿ ನೋಡಲು ಬಯಸೋ ಅಪ್ಪ.

ಅಪ್ಪ….
ನಾವು ಹುಟ್ಟೋ ಮುಂಚೇನೇ ನಮ್ಮನ್ನ ತುಂಬಾ ಅಂದ್ರೆ ತುಂಬ ಪ್ರೀತಿ ಮಾಡೋ ಎರಡು ಜೀವದಲ್ಲಿ ಒಂದು ಜೀವ ನೀನು..
ಹುಟ್ಟಿದ ನಾವು ಹೇಗೇ ಇರಲಿ ನಮ್ಮನ್ನ ಮುದ್ದಾಡಿ ಎದೆಗವಚಿಕೊಳ್ಳೋ ಜೀವವು ನೀನೇ ,ಪ್ರಪಂಚದ ಯಾವುದೇ ಮೂಲೇಲಿ
ಇದ್ರೂ ನಮ್ಮನ್ನ ಪ್ರತಿ ಕ್ಷಣ ನೆನಪಿಸಿಕೊಳ್ಳೋ ಜೀವಂತ ಗಡಿಯಾರವು ನೀನೇ ಅಪ್ಪ ,ಭಯ ಪ್ರೀತಿ ಎರಡು ಒಂದೇ ಕಡೆ ಇರೋಲ್ಲ ಅನ್ನೋ ಮಾತಿದೆ ಅದನ್ನ ಸುಳ್ಳು ಅಂತ ಹೇಳೋಕೆ ಅಪ್ಪ ಅನ್ನೋ ಪದ ಸಾಕು,ಮಗಳನ್ನ ಮಗ ಅಂತ ಬೆಳೆಸೋ ಶಕ್ತಿ ಅಪ್ಪ,ತನ್ನ ಮಕ್ಕಳನ್ನ ಸಮಾಜದಲ್ಲಿ ಒಳ್ಳೆ ಪ್ರಜೆಯಾಗಿ ನೋಡಬೇಕೆಂಬ ಆಸೆ ಅಪ್ಪನದ್ದು, ಅಪ್ಪ ಆರ್ಥಿಕವಾಗಿ ಶ್ರೀಮಂತನೋ ಬಡವನೋ ಆದರೆ ತನ್ನ ಮಕ್ಕಳ ಬೇಡಿಕೆಯನ್ನು ಈಡೇರಿಸುವಲ್ಲಿ,ಪ್ರೀತಿಸುವಲ್ಲಿ ಪ್ರತಿ ಅಪ್ಪನು ಶ್ರೀಮಂತನೇ.

ಅಪ್ಪ…
ನಾವುಗಳು ಜೀವನದಲ್ಲಿ ಎಷ್ಟೇ ಬೆಳೆದು ದೊಡ್ಡೋರ್ ಆದ್ರು ಕೆಲವು ವಾಸ್ತವಗಳನ್ನ,ಸತ್ಯಗಳನ್ನ ಬದಲಾಯಿಸೋಕೆ ಆಗೋಲ್ಲ.
ಎಷ್ಟೇ ದೊಡ್ಡ ಉದ್ಯೋಗದಲ್ಲಿ ಇದ್ದು ಎಷ್ಟೇ ದೊಡ್ಡ ಸಂಬಳ ತಗೋತಿದ್ರು ನಿನ್ನತ್ರ ಕೇಳಿ ತಗೋತಿದ್ದ ಒಂದು ರುಪಾಯಿ
ಕೊಡುತಿದ್ದ ಖುಷಿ ಸಾವಿರ ರೂಪಾಯಿ ಮುಟ್ಟಿದರು ಇಲ್ಲ ,
ಎಷ್ಟೇ ದುಬಾರಿ ಬಟ್ಟೆ ತಗೊಂಡ್ರು ನೀನು ಹಬ್ಬಕ್ಕೆ ತರುತ್ತಿದ್ದ ಬಟ್ಟೆ ಹಾಕಿದಾಗ ಸಿಗುತ್ತಿದ್ದ ಖುಷಿನೇ ಬೇರೇನಪ್ಪಾ…
ಎಷ್ಟೇ ದೊಡ್ಡ ಹೋಟೆಲ್ನಲ್ಲಿ ಕೂತು ತಿಂದ್ರು ನೀನು ತಂದು ಕೊಡುತಿದ್ದ ಚಿಕ್ಕಿ/ ಮಿಠಾಯಿ ತಿನ್ನೋ ಕೊಡೋ ಖುಷಿಗೆ ಹೋಲಿಕೆನೇ ಇಲ್ಲ..
ಗೆಳೆಯ/ಗೆಳತಿಯರ ಜೊತೆ ಎಷ್ಟೇ ಹರಟೆ ಹೊಡೆದ್ರು ಅಪ್ಪನ ಜೊತೆ ಮಾತಾಡೋ ಹತ್ತು ನಿಮಿಷದ ಮಾತು ಕೊಡೋ
ಸಮಾಧಾನ ಎಲ್ಲೂ ಸಿಗೋಲ್ಲ.ಇಡೀ ಪ್ರಪಂಚನ ಸುತ್ತಿದ್ರು ಅಪ್ಪನ ಹೆಗಲಲ್ಲಿ ಕೂತು ತಿರುಗಾಡಿದ ನನ್ನೂರು ಕಂಡಾಗ ಆಗೋ ಖುಷಿಗೆ ಸಾಟಿನೇ ಇಲ್ಲ…

ಅಪ್ಪ….
ತನ್ನ ಕೊನೆ ದಿನದ ತನಕ ತನ್ನ ಕರ್ತವ್ಯ ಮಾಡೋ ನೀನು ಕಲಿಸಿದೆ ಪಾಠ ಮರೆಯೋಲ್ಲ ನಾನು.ನಿನ್ನ ಜೊತೆ ಇರುವ
ದಿನಗಳೇ ಸಾಕು ನಾ ಹೇಳಲು ನನ್ನ ಜೀವನದ ಅತೀ ಸುಂದರ ಕ್ಷಣಗಳವು.ಜೀವನದಲ್ಲಿ ಯಾವುದು ಸುಲಭವಾಗಿ ಸಿಗೋಲ್ಲ
ಅನ್ನೋ ಸತ್ಯನ ತನ್ನದೇ ರೀತಿಯಲ್ಲಿ ಕಳಿಸಿದ ಗುರು ನನ್ನಪ್ಪ.
ಕಡಲಿನಾಚೆಗೆ ನಿಂತು ಕಡಲಿನ ಆಳ ತಿಳಿಯಲಾಗದು,ಅಪ್ಪನ ಪ್ರೀತಿಯು ಹಾಗೆ ಸವಿಯಲು ಗೊತ್ತಿದ್ದವರಿಗೇ ಗೊತ್ತು ಆ
ಪ್ರೀತಿ ಎಂಬ ಬೆಲ್ಲದ ರುಚಿ.

ಅಪ್ಪ …
ನಿನ್ನ ಆಸರೆಯಲ್ಲಿ ಬೆಳೆದ ಪುಟ್ಟ ಹಕ್ಕಿ ನಾ ಎಷ್ಟೇ ದೂರ ಹಾರಿದರು…ಪುನಃ ಬಂದು ನಿನ್ನ ಆಸರೆಯ ಮಗುವಾಗಿ ಮಲಗೋ ಆಸೆ ನನದು…
ನಿನ್ನ ಕಿರು ಬೆರಳು ನನಗೆ ಅಂದು ನೀಡಿದ ಆಸರೆಯ ನೆನೆದು..ನನ್ನ ಕೈಗಳು ನೆನಪಿಸುತ್ತಿವೆ ನನ್ನ ಜವಾಬ್ದಾರಿಯನ್ನ ಇಂದು..
ನಿನಗೆ ಹೇಳಲು ಸಾವಿರ ವಿಷಯಗಳಿವೆ ನನ್ನಲ್ಲಿ..ನೀ ಎದುರಿಗೆ ನಿಂತರೆ ಅದೇಕೋ ಕಾಣೆ ನಾ ಮೌನೀ…
ನೀನೊಂದು ಅಂತ್ಯವಿಲ್ಲದ ಗದ್ಯ…ಆ ಗದ್ಯದ ಎಲ್ಲ ಪುಟಗಳಲ್ಲಿ ನಾನಿರಬೇಕೆಂಬ ಸ್ವಾರ್ಥ ನನ್ನದು ….

~ ಮಾಲಾ ಎನ್ ಮೂರ್ತಿ

1 Response

  1. Nayana Bajakudlu says:

    ಅಪ್ಪ ಅನ್ನೋ ಅದ್ಭುತ ಪ್ರಪಂಚದ ಅನಾವರಣ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: