ಮರೆತು ಬಿಟ್ಟದ್ದನ್ನು ನೆನೆದುಕೊಳ್ಳುತ್ತಾ..
ಮೊನ್ನೆ ಬೆಂಗಳೂರಿನಲ್ಲಿ ನಡೆದ ಸುಂದರ ಸಾಹಿತ್ಯ ಪ್ರಕಾಶನದ ಕಾರ್ಯಕ್ರಮದಲ್ಲಿ ಬೇಟಿಯಾಗಿ ಮಾತಿಗೆ ಸಿಕ್ಕು ಜೊತೆಗೊಂದು ಕವನ ಪುಸ್ತಕವನ್ನು ಕೈಗಿತ್ತು ಸ್ನೇಹದ ನಗುವ ಬೀರಿದವರು ವಸುಂಧರಾ ಕೆ.ಎಂ. , ಅವರಿಗೆ ಕೃಷಿ ಮಾರಾಟ ಇಲಾಖೆಯಲ್ಲಿ ವೃತ್ತಿ. ಬಿಡುವಿಲ್ಲದ ಕಾರ್ಯ ಬಾಹುಳ್ಯದ ನಡುವೆಯೂ ಪ್ರವೃತ್ತಿಯನ್ನಾಗಿಸಿ ತೊಡಗಿಸಿಕೊಂಡದ್ದು ಸಾಹಿತ್ಯ ಕೃಷಿಯಲ್ಲಿ. ಅವರ ಕವನ ಸಂಕಲನ ‘ಮರೆತು ಬಿಟ್ಟದ್ದು’ ಓದಿ ಮುಗಿಸಿ ಮರೆಯದೆ ಒಂದಷ್ಟು ನನ್ನ ಅನಿಸಿಕೆಗಳನ್ನು ನಿಮ್ಮಗಳ ಮುಂದಿಟ್ಟು ಮತ್ತೆ ನೆನಪಿಸ ಹೊರಟಿರುವೆ . ವಸುಂಧರಾರವರ ಸಂಕಲನವನ್ನು ಮೊದಲ ಸಲಕ್ಕೇ ಒಂದೇ ಗುಕ್ಕಿಗೆ ಓದಿ ಮುಗಿಸಿ ಎರಡನೇಯ ಭಾರಿ ಮತ್ತೊಮ್ಮೆ ಸಾವಕಾಶವಾಗಿ ಓದಿ ಮುಗಿಸಿದೆ.
ಮೊದಲ ಸಂಕಲನದಲ್ಲಿಯೇ ಭರವಸೆಯ ಹೊಳಹುಗಳನ್ನು ಕಟ್ಟಿಕೊಟ್ಟಿದ್ದಾರೆ ಅಂತ ಬೇರೆ ಹೇಳಬೇಕಾಗಿಲ್ಲ. ಹೆಚ್ಚಾಗಿ ಇವರ ಕವನ ಸಂಕಲನದುದ್ದಕ್ಕೂ ಚರಿತ್ರೆಯ ಮಹಾ ವ್ಯಕ್ತಿಗಳನ್ನ ವರ್ತಮಾನಕ್ಕೆ ಕರೆದು ನಮ್ಮ ನಡುವೆ ತಂದು ನಿಲ್ಲಿಸಿ ಅವರೊಂದಿಗೆ ಮಾತಿಗಿಳಿಯುತ್ತಾ ತಮ್ಮಲ್ಲಿ ಉದಿಸಿದ ಭಾವಗಳಿಗೆ ಸ್ಪಷ್ಟ ರೂಪವನ್ನು ಕೊಡುವಂತಿದೆ. ಗೊಮ್ಮಟನ ಕುರಿತು ಬರೆಯುತ್ತಾ..ಕಾಡಲ್ಲಿಲ್ಲವೇನಾಗ ಒಲವಿನೊಂದು ಮುಖ? ಅಂತ ಪ್ರಶ್ನಿಸುತ್ತಾರೆ. ಗೊಮ್ಮಟನ ಧೀಮಂತ ನಗ್ನತೆಯನ್ನು ಕಂಡು ಅಚ್ಚರಿಗೊಳ್ಳುತ್ತಲೇ ಕವಯತ್ರಿಗೆ ಕಾಡುವ ಭಾವವಿದು. ಗೌರವದ ನೆಪದಲ್ಲಿಟ್ಟ ಗಾಂಧೀಜಿ ಚಿತ್ರದ ನೋಟಿಗೆ ನಿಜಕ್ಕೂ ನಾವು ಗೌರವ ಸಲ್ಲಿಸುತ್ತೇವಾ? ಅನ್ನುವುದನ್ನ ಕವಿತೆಯ ಸಾಲಿನ ಮೂಲಕ ಬೆಚ್ಚಿ ಬೀಳುವಂತೆ ಅನಾವರಣಗೊಳಿಸುತ್ತಾರೆ. ನಿಜ.ಹೌದಲ್ಲ? ಅಂತ ಮನಸು ಪಿಚ್ಚೆನಿಸುತ್ತದೆ.
ಬುಧ್ಧಳಾಗದೆ ಬದ್ದತೆಯ ತಾಯಿಯಾಗುವುದೇ ಬುದ್ದತ್ವಕ್ಕಿಂತ ಮಿಗಿಲು ಎನ್ನುವಲ್ಲಿ ತಾಯಿಯ ತಾಳ್ಮೆಯ ಸಾಕಾರಕ್ಕೊಂದು, ತ್ಯಾಗದ ಔನತ್ಯಕ್ಕೊಂದು ಹೊಸ ಅರ್ಥ ಪ್ರಾಪ್ತವಾಗಿ ಬಿಡುತ್ತದೆ. ಮತ್ತೊಂದು ಕವಿತೆಯಲ್ಲಿ ಬುಧ್ದನೆಂದರೆ ಮತ್ತೇನು? ಒಂದಷ್ಟು ಪ್ರಶ್ನೆ. ಆಶ್ಚರ್ಯ.ಚುಕ್ಕಿಗಳನ್ನು ಬಿಟ್ಯು.. ಹೊಸ ಹುಡುಕಾಟಕ್ಕೊಂದು ,ಹೊಸ ಚಿಂತನೆಗೆ ಮನಸು ತಹತಹಿಸುತ್ತದೆ ಇಲ್ಲಿ .
ಕವಿತೆ ಅಂದರೆ ಮತ್ತಿನ್ನೇನು?ಇದೇ ತಾನೇ.
ಕಾಲದ ನಿರಂತರ ಚಲಿಸುವಿಕೆಯ ಬಗ್ಗೆ ಎಲ್ಲರದ್ದು ತಕರಾರುಗಳು ಇದ್ದದ್ದೇ.ಅದಕ್ಕೆ ಯಾರು ಕೂಡ ಹೊರತಾಗಿಲ್ಲ. ಕಾಯ ಬೇಕಿದೆ ಕಾಲ ಅನ್ನುತ್ತಾ ತಮಗೆ ಮಾಡಬೇಕಿರುವ ಕೆಲಸದ ಪಟ್ಟಿ ಬಹಳಷ್ಟು ಇದೆ . ಕಾಲ ಸಹಕರಿಸ ಬೇಕು ಎನ್ನುವುದು ಅವರ ಕವಿತೆಗಳ ಒಳ ಮೊರೆತ. ಕಾಲ ಕಿವುಡು ಅನ್ನುವುದು ಅಷ್ಟೇ ಸತ್ಯ.
ವಸುಂಧರಾರವರ ಕವಿತೆಗಳು ಬದುಕಿನ ಎಲ್ಲಾ ಸೂಕ್ಷ್ಮ ಸಂಗತಿಗಳನ್ನು ತೀರ ದ್ಯಾನಸ್ಥ ಸ್ಥಿತಿಯಲ್ಲಿ ನೋಡುತ್ತಾ ಕಟ್ಟಿ ಕೊಡುತ್ತವೆ.
ಹಾಗಾಗಿ ಬಚ್ಚಲ್ಲಿ ಸ್ನಾನಕ್ಕೆ ನಿಂತ ಮಗು ಅವರಿಗೆ ಗೊಮ್ಮಟನಂತೆ ಕಾಣುವುದು, ಹೆಣ್ಣುಮಕ್ಕಳು ತಾಯಿಯ ಪ್ರತಿರೂಪದಂತೆ ಅನ್ನಿಸುವುದು. ಬೆಲೆ ಕಟ್ಟಲಾಗದ ಮಗುತನಕ್ಕೆ, ತಾಯ್ತನಕ್ಕೆ ಮನಸು ತಲೆಬಾಗುವುದು.
ಮಕ್ಕಳು ಹೇಗೆ ಬೆಳೆಯುತ್ತಾ ಹೋದ ಹಾಗೆ ಅದರ ಮುಗ್ಧತನವನ್ನು ಕಳೆದು ಕೊಳ್ಳುತ್ತದೆ, ಅಥವಾ ನಾವುಗಳೆ ಅದರ ಮಗುತನವನ್ನು ಕಸಿಯುತ್ತೇವೆಯೋ ಅನ್ನುವ ಅವರ ಆತಂಕ ನಮ್ಮೆಲ್ಲರದ್ದು ಕೂಡ. ಅವರ ಕವಿತೆಗಳಲ್ಲಿ ಸ್ತ್ರೀ ಪರ ನಿಲುವಿದೆ. ನಮ್ಮ ಅಸ್ಮಿತೆ ಹೇಗೆ ಬದುಕಿನ ಅನೇಕ ಮಜಲುಗಳಲ್ಲಿ ರೂಪಾಂತರಗೊಳ್ಳುತ್ತಾ ಕಳೆದು ಹೋಗುತ್ತದೆ ಅನ್ನುವ ಕಟು ಸತ್ಯವನ್ನ ಅವರ ಕವಿತೆಗಳು ಬಿಚ್ಚಿಡುತ್ತವೆ. ಹೇಗೆ ಯಾವುದೇ ಅಸ್ಮಿತೆಯಿಲ್ಲದೆ ಅದೆಷ್ಟೋ ಹೆಣ್ಣು ಜೀವಗಳು ಕಳೆದು ಹೋಗಿಬಿಡುತ್ತಾರಲ್ಲ?ಅನ್ನುವ ಗಾಢ ವಿಷಾದ ಸುಯಿಲೊಂದು ಹೊರ ದಬ್ಬಿ ಬರುತ್ತದೆ.
ಬೆತ್ತಲಾದ ದ್ರೌಪದಿಗೆ ಸುಳ್ಳು ಸುಳ್ಳೇ ಬಟ್ಟೆ ತೊಡಿಸಿ ನಿಜದ ಅರ್ಥದಲ್ಲಿ ನಾವುಗಳು ಹೇಗೆ ಬೆತ್ತಲಾಗಿ ಬಿ್ಟ್ಟಿದ್ದೇವೆ ಅನ್ನುವುದನ್ನ ದಿಟ್ಟವಾಗಿ ಪ್ರಶ್ನಿಸುತ್ತಾರೆ. ಇನ್ನು ಅಮೃತ ಮತಿಯು ಹೇಳಿದ್ದು ಕವಿತೆಯಲ್ಲಿ ಚರಿತ್ರೆಯನ್ನು ಮರು ವ್ಯಾಖ್ಯಾನಿಸಿದ್ದು ಸ್ತ್ರೀ ಪರ ನಿಲುವಿಗೊಂದು ಉದಾಹರಣೆ. ಹಾಗೆಯೇ ಸೀತೆ,ಮಂಡೋದರಿ,ದ್ರೌಪದಿ..ಹೀಗೆ ನಮ್ಮ ಕರುಳ ಬಳ್ಳಿಯ ತಂತುಗಳಿಗೆ ಸ್ಥಾಪಿತ ಸಮಾಜ ಹುಸಿ ಕತೆಗಳನ್ನ ಕಟ್ಟಿ ನಾವು ನಂಬುವಂತೆ ಬಿಂಬಿಸುತ್ತಾ ನಮ್ಮನ್ನು ಇಲ್ಲಿ ತನಕ ಮೂರ್ಖಗೊಳಿಸಿದಂತೆ ಇನ್ನು ಸಾದ್ಯವಾಗಲಾರದು, ಅಕ್ಕನ ದಿಟ್ಟತನವನ್ನು ನಾವು ಆವಾಹಿಸಿಕೊಂಡು ನಾವು ಬಯಲ ಬೆಳಕಿನಲ್ಲಿ ಗಟ್ಟಿಯಾಗಿ ಬೇರೂರಿ ನಿಂತು ಬಿಟ್ಟಿದ್ದೇವೆ. ಯಾವ ,ಯಾರ ಉಸಾಬರಿಯೂ ನಮಗೆ ಬೇಕಿಲ್ಲ ಅನ್ನುತ್ತಾ, ಹೇಗೆ ಇವತ್ತು ನಮ್ಮ ಮಹಿಳೆಯರು ತಮ್ಮದೇ ಹಾದಿಯನ್ನು ಕಂಡು ಕೊಂಡು ಹೊಸ ಹೆಜ್ಜೆ ಇಡುತ್ತಿದ್ದಾಳೆ ಅನ್ನುವುದನ್ನ ವ್ಯಕ್ತ ಪಡಿಸುತ್ತಾರೆ. ಹೊಸ ಆತ್ಮವಿಶ್ವಾಸ ನಮ್ಮ ಎದೆಯ ಬೆಳಕೀಗ ಅನ್ನುವುದು ಅವರ ಕವಿತೆಗಳ ಆಶಯ.
ವಸುಂಧರಾರವರ ಚೊಚ್ಚಲ ಕವಿತೆಗಳ ತುಂಬಾ ನವಿರು ಭಾವಗಳಿವೆ. ಸಾಮಾಜಿಕ ತುಡಿತ ಇದೆ.ಸ್ತ್ರೀ ಪರ ಕಾಳಜಿ ಇದೆ. ಬದುಕಿನ ಎಲ್ಲ ಸಂಗತಿಗಳ ಕುರಿತು ಪ್ರಶ್ನಿಸುವ ಮನೋಭಾವವಿದೆ. ಕಾಳಜಿ ತೋರುವ ಹೃದಯ ವೈಶಾಲ್ಯತೆಯಿದೆ. ಮಿಡಿಯುವ ಅಂತ:ಕರಣ ಇದೆ. ಜೊತೆಗೆ ಬದುಕಿನ ಕುರಿತ ಅಪಾರ ಅಚ್ಚರಿಯೂ ಇದೆ.
ಒಂದು ಚೊಚ್ಚಲ ಸಂಕಲನದಲ್ಲಿ ಇಷ್ಟೆಲ್ಲ ಕಟ್ಟಿಕೊಟ್ಟಿದ್ದಾರೆ. ಮುಂದಿನ ಕವಿತೆಗಳು ಮತ್ತಷ್ಟು ಪಕ್ವತೆಯನ್ನು ಪಡೆದುಕೊಂಡಿವೆ ಅನ್ನುವುದಕ್ಕೆ ಅವರ ಇತ್ತೀಚಿಗಿನ ಕವಿತೆಗಳೇ ಸಾಕ್ಷಿ. ಅವರ ಕಾವ್ಯ ಪ್ರೀತಿ ನಿರಂತರವಾಗಿರಲಿ.
– ಸ್ಮಿತಾ ಅಮೃತರಾಜ್.ಸಂಪಾಜೆ.
ಸೊಗಸಾದ ವಿಮರ್ಶೆ
ಈ ತರದ ಬರಹಗಳು ತೆರೆಮರೆಯಲ್ಲಿರುವ, ನಾವು ಅರಿಯದ ಕವಿ , ಕವಯಿತ್ರಿ , ಲೇಖಕರ ಪರಿಚಯ ನಮಗೆ ಮಾಡಿಸುತ್ತದೆ ಹಾಗು ಅವರ ಬಗ್ಗೆ, ಅವರ ಬರಹಗಳ ಬಗ್ಗೆ ತಿಳಿದುಕೊಳ್ಳುವಂತೆ ನಮ್ಮನ್ನು ಪ್ರೇರೇಪಿಸುತ್ತದೆ .
ಥ್ಯಾಂಕ್ಸ್..ಶಂಕರಿ ಮೇಡಂ,ನಯನ ಮೇಡಂ
ಸೊಗಸಾದ ವಿಮರ್ಶೆ..
ನಿಜವಾಗ್ಲೂ ಸ್ಮಿತಾ, ನೀವು ಕವನಗಳನ್ನು ಅನಾವರಣಗೊಳಿಸಿದ ರೀತಿಯಿಂದಲೇ ಈ ಸಂಕಲನದ ವೇಟೆಜ್ ತಿಳಿದು ಬರುವುದು. ನಿಮಗೂ, ಕವಿಗೂ ಅಭಿನಂದನೆಗಳು
ಧನ್ಯವಾದಗಳು ಸ್ಮಿತಾ… ಮೊನ್ನೆ ನಿಮ್ಮನ್ನು ಕಂಡಕೂಡಲೇ ಎಲ್ಲೋ ಎಂದೋ ಕಳೆದು ಹೋಗಿದ್ದ ಗೆಳತಿಯೊಬ್ಬಳು ಸಿಕ್ಕಂಗಾಯ್ತು ನನಗೆ..! ಬರಿಯ ಒಂದು ದಿನದ ಪರಿಚಯ..! ಅಷ್ಚೇಯಾ ಅನ್ನಿಸುವಂಗಿರಲಿಲ್ಲ… ನಿಮ್ಮ ಬರವಣಿಗೆಯನ್ನು ಅಲ್ಲಿ ಇಲ್ಲಿ ಓದುತ್ತಿದ್ದ ಅಭಿಮಾನಿಯಾಗಿದ್ದವಳು ನಾನು. ನನ್ನ ಕವನ ಸಂಕಲನ ಎಂಬ ಮಗುವನ್ನು ನಿಮಗಿತ್ತೆ. ಅದನ್ನು ನೀವಿಲ್ಲಿ ಇಷ್ಟು ಅಂದಗೊಳಿಸಿ ಮುದ್ದು ಮಾಡುತ್ತಿರುವಿರಿ..! ಈ ಸ್ನೇಹ ಪ್ರೀತಿ ಉಳಿಸಿಕೊಳ್ಳುವ ಬುದ್ಧಿ ನನಗಿರಲಿ. ಮತ್ತೆ ಧನ್ಯವಾದಗಳು..
ಚೆನ್ನಾಗಿ ಬರೆದಿದ್ದೀರಿ