ರುಕ್ಮಿಣಿಮಾಲಾ ಅವರ ಕೃತಿ ‘ಚಾರಣ ಹೂರಣ’

Share Button


ದೈನಂದಿನ ಕೆಲಸಗಳ ಏಕತಾನತೆಯನ್ನು ಮುರಿಯಲು ವಿಭಿನ್ನವಾದ ಯಾವುದಾದರೂ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಮನುಷ್ಯರ ಜಾಯಮಾನ. ಕೆಲವರಿಗೆ ಸಂಗೀತ ನೃತ್ಯ ಮೊದಲಾದ ಕಲಾಪ್ರಕಾರಗಳನ್ನು ಆಲಿಸಿ, ವೀಕ್ಷಿಸಿ, ಭಾಗವಹಿಸಿ ಸಂತಸಪಡುವುದು ಇಷ್ಟವಾದರೆ ಇನ್ನು ಕೆಲವರಿಗೆ ಸಾಹಿತ್ಯಾಸಕ್ತಿ ಇದ್ದು ಓದುವುದು, ಬರೆಯುವುದು ಅಚ್ಚುಮೆಚ್ಚು. ಅನುಕೂಲಕರವಾಗಿ ಪೂರ್ಯಯೋಜಿತ ಪ್ರವಾಸ ಕೈಗೊಳ್ಳುವವರು ಕೆಲವರಾದರೆ, ಪ್ರಕೃತಿಯ ಮಡಿಲಿನಲ್ಲಿ ವಿಹರಿಸುತ್ತಾ ಕಾಡುಮೇಡುಗಳಲ್ಲಿ ಚಾರಣ ಮಾಡುವವರು ಇನ್ನು ಹಲವರು. ಎಲ್ಲವೂ ಅವರವರ ಆಸಕ್ತಿಗೆ,ಅನುಕೂಲಕ್ಕೆ ಹಾಗೂ ಆರೋಗ್ಯಕ್ಕೆ ತಕ್ಕಂತೆ ಎನ್ನಬಹುದು.

ಚಾರಣ ಹಾಗೂ ಸೈಕಲ್ ಯಾನದ ಹವ್ಯಾಸವುಳ್ಳ ಮೈಸೂರಿನ ಶ್ರೀಮತಿ ರುಕ್ಮಿಣಿಮಾಲಾ ಅವರು ತನ್ನ ವಿವಿಧ ಚಾರಣಾನುಭವಗಳನ್ನು ಒಪ್ಪವಾಗಿ ಜೋಡಿಸಿ, ‘ಚಾರಣ ಹೂರಣ’ ಎಂಬ ಕೃತಿಯನ್ನು ರಚಿಸಿದ್ದಾರೆ. ಒಟ್ಟು ಮೂವತ್ತನಾಲ್ಕು ಚಾರಣ ಹಾಗೂ 6 ಸೈಕಲ್ ಯಾನದ ಬರಹಗಳನ್ನು ಹೊಂದಿರುವ ಈ ಪುಸ್ತಕದಲ್ಲಿ ಕರ್ನಾಟಕ ಹಾಗೂ ಇತರ ರಾಜ್ಯಗಳ ಹಲವಾರು ಬೆಟ್ಟಗಳ ಬಗ್ಗೆ ಮಾಹಿತಿ, ಸ್ಥಳಪುರಾಣ, ಹೋಗುವ ಬಗೆ, ಆಹಾರ-ವಸತಿಗೆ ಅನುಕೂಲತೆ ಇತ್ಯಾದಿ ವಿವರಗಳಿವೆ.ಇವರ ಕೆಲವು ಬರಹಗಳಲ್ಲಿ ತಿಳಿಹಾಸ್ಯದ ಲೇಪನವಿದೆ. ಇನ್ನು ಕೆಲವೆಡೆ ಚಾರಣಿಗರಿಗೆ ಸೂಕ್ತ ಕಿವಿಮಾತು ಲಭ್ಯ. ಭೇಟಿ ಕೊಟ್ಟ ಕೆಲವೆಡೆ ಪ್ರವಾಸಿಗರು ಪರಿಸರವನ್ನು ಹಾನಿಗೊಳಿಸಿದ ಬಗ್ಗೆ ಸಾತ್ವಿಕ ಅಸಹನೆಯನ್ನೂ ವ್ಯಕ್ತಪಡಿಸಿದ್ದಾರೆ.

ರುಕ್ಮಿಣಿಮಾಲಾ ಅವರು, ತನ್ನ  ಹವ್ಯಾಸಕ್ಕೆ ಮೈಸೂರಿನಲ್ಲಿರುವ ಯೂಥ್ ಹಾಸ್ಟೆಲ್ಸ್ ಅಸೋಸಿಯೇಷನ್  ಗಂಗೋತ್ರಿ ಘಟಕದಿಂದ ಲಭಿಸಿದ ಪ್ರೋತ್ಸಾಹ, ಮಾರ್ಗದರ್ಶನ ಹಾಗೂ ಸಹಕಾರವನ್ನು ಗೌರವದಿಂದ ನೆನಪಿಸಿಕೊಂಡಿದ್ದಾರೆ. ಹಿಮಾಲಯದ ವಿವಿಧ ಸ್ಥಳಗಳೂ ಸೇರಿದಂತೆ ನೂರಾರು ಬೆಟ್ಟಗಳಿಗೆ ಚಾರಣ ಮಾಡಿದ ಹಾಗೂ ಸತತವಾಗಿ ಚಾರಣ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ, ಘಟಕದ ಹಿರಿಯ ಸದಸ್ಯರಾದ ಶ್ರೀ ಎಂ.ವಿ.ಪರಶಿವಮೂರ್ತಿ ಅವರ ಮುನ್ನುಡಿಯು ಈ ಕೃತಿಗೆ ಅತ್ಯಂತ ಸೂಕ್ತವೆನಿಸುತ್ತದೆ. ಸುಂದರವಾದ ಮುಖಪುಟದೊಂದಿಗೆ ಜಾಗೃತಿ ಪ್ರಿಂಟರ್ಸ್ ಬೆಂಗಳೂರು ಅವರ ಮುದ್ರಣದಲ್ಲಿ ಪುಸ್ತಕವು ಸೊಗಸಾಗಿ ಮೂಡಿ ಬಂದಿದೆ.

ಚಾರಣದ ವ್ಯಾಪ್ತಿ ಬಲು ದೊಡ್ಡದು. ನಮ್ಮ ಊರಿನಲ್ಲಿಯೇ ಇರುವ ಚಿಕ್ಕ ಪುಟ್ಟ ಬೆಟ್ಟಗಳು, ಕರ್ನಾಟಕದ ಕೊಡಗು, ಚಿಕ್ಕಮಗಳೂರು, ಕುದುರೆಮುಖ ಪರ್ವತ ಶ್ರೇಣಿಯಲ್ಲಿರುವ ಹಲವಾರು ಬೆಟ್ಟಗಳು, ಬೇರೆ ಬೇರೆ ರಾಜ್ಯಗಳ ಬೆಟ್ಟಗಳು, ಭಾರತದ ತುತ್ತತುದಿಯಲ್ಲಿರುವ ಹಿಮಾಲಯ ಪರ್ವತ ಶ್ರೇಣಿಗಳು…ಹೀಗೆ ನೂರಾರು ಬೆಟ್ಟಗಳು ಚಾರಣಿಗರನ್ನು ಕೈಬೀಸಿ ಕರೆಯುತ್ತವೆ. ಕಿಲೋಮೀಟರ್ ಗಟ್ಟಲೆ ಹಸಿರು ಗದ್ದೆಯ ಬದಿಯಲ್ಲಿ ಅಥವಾ ವನಸಿರಿಯ ನಡುವೆ ನಡೆದು ಬೆಟ್ಟದ ತುದಿಯನ್ನೇರಿ ಸಾಧಿಸಿದೆನೆಂಬ ಭಾವ ಪಡೆಯುವುದು ಒಂದು ವಿಧವಾದರೆ ಸಾವಿರಾರು ಮೆಟ್ಟಿಲುಗಳನ್ನೇರಿ ಬೆಟ್ಟದ ತುದಿ ತಲಪಿ ಅಲ್ಲಿರುವ ದೇವಾಲಯಕ್ಕೂ ಭೇಟಿ ನೀಡಿ ಸಂತಸಪಡುವುದು ಇನ್ನೊಂದು ವಿಧ. ಭೋರ್ಗರೆಯುವ ನದಿಯನ್ನು ದಾಟುತ್ತಾ, ಜಿಗಣೆಗಳಿಂದ ಕಚ್ಚಿಸಿಕೊಳ್ಳುತ್ತಾ ಮುನ್ಸೂನ್ ಚಾರಣ ಮಾಡುವುದು ಕೆಲವರಿಗೆ ಇಷ್ಟವಾದರೆ, ಕಣ್ಣು ಹಾಯಿಸಿದಷ್ಟೂ ದೂರ ಹಬ್ಬಿರುವ ಕಡಲಕಿನಾರೆಯಲ್ಲಿ ನಡೆಯುವುದು ಇನ್ನೊಂದು ವಿಧ.

ನಮ್ಮ ದೇಶದಲ್ಲಿ ಅದ್ಭುತವಾದ ಭೌಗೋಳಿಕ ವೈವಿಧ್ಯವಿದೆ. ಸಾವಿರಾರು ಬೆಟ್ಟಗಳಿವೆ. ಇವುಗಳಲ್ಲಿ ಕೆಲವು ಬೆಟ್ಟಗಳನ್ನಾದರೂ ಏರಿ ಪ್ರಕೃತಿಯ ಮಡಿಲಿನಲ್ಲಿ ವಿಹರಿಸುವ ಅವಕಾಶ ನಮ್ಮದಾಗಲಿ. ಅದಕ್ಕೆ ಬೇಕಾದ ಮಾಹಿತಿ ಹಾಗೂ ಮಾರ್ಗದರ್ಶನಕ್ಕೆ ‘ಚಾರಣ ಹೂರಣ‘ವು ಖಂಡಿತಾ ಸಹಕಾರಿಯಾಗಬಲ್ಲುದು. ಚಾರಣಾಸಕ್ತರಿಗಾಗಿ ಸದಭಿರುಚಿಯ ಬರಹಗಳನ್ನು ಕೊಟ್ಟ ಲೇಖಕಿಯವರಿಗೆ ಅಭಿನಂದನೆಗಳು.

-ಹೇಮಮಾಲಾ.ಬಿ

5 Responses

 1. Shankari Sharma says:

  ರುಕ್ಮಿಣಿಮಾಲಾರವರ “ಚಾರಣ ಹೂರಣ” ಪುಸ್ತಕ ಪರಿಚಯ ಚೆನ್ನಾಗಿ ಮೂಡಿ ಬಂದಿದೆ.

 2. Rukminimala says:

  ಪುಸ್ತಕ ಪರಿಚಯ ಬಹಳ ಚೆನ್ನಾಗಿ ಮಾಡಿದ್ದೀರಿ. ಧನ್ಯವಾದ

 3. Nayana Bajakudlu says:

  Beautiful. ಪುಸ್ತಕ ಪರಿಚಯ ಆ ಪುಸ್ತಕದೆಡೆಗೆ ಗಮನ ಸೆಳೆಯುವಂತಿದೆ . ಚಾರಣ ಪ್ರಿಯರಿಗಂತೂ ಸಾಕಷ್ಟು ಮಾಹಿತಿಗಳು ಸಿಗಬಹುದೇನೋ ಈ ಪ್ರವಾಸ ಕಥನದಲ್ಲಿ .

 4. ವಿಜಯಾಸುಬ್ರಹ್ಮಣ್ಯ,ಕುಂಬಳೆ. says:

  ಪ್ರವಾಸ ಹಾಗೂ ಚಾರಣಕ್ಕೆ ಮಾಹಿತಿ ಇದ್ದರೆ ಅದೆಷ್ಟೋ ಸುಲಭ.. ಪುಸ್ತಕ ವಿಮರ್ಶೆ ಮಾಡಿದ ಹೇಮಮಾಲಾ ಹಾಗೂ ಓದುಗರಿಗೆ, ಚಾರಣಪ್ರಿಯರಿಗೆ ಪುಸ್ತಕ ಒದಗಿಸಿದ ರುಕ್ಮಿಣಿಮಾಲಾ ಇಬ್ಬರಿಗೂ ಅನಂತಾನಂತ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: