ಅಮ್ಮನಾಗಿ ಉಳಿದೂ ಬೆಳೆಯುವುದೆಂದರೆ…, 

Share Button

ವಸುಂಧರಾ . ಕೆ. ಎಂ

 ‘ಈ ಶತಮಾನದ ಮಾದರಿ ಹೆಣ್ಣೆಂದು’ ಎಷ್ಟೇ ತುತ್ತೂರಿ ಊದಿಕೊಂಡರೂ ಅನಾದಿ ಜವಾಬ್ದಾರಿಗಳನ್ನು  ನಿರ್ವಹಿಸುವುದರ ಜೊತೆಯಲ್ಲೇ ಪ್ರಸ್ತುತಕ್ಕೆ ತನ್ನನ್ನು ಸಮರ್ಥವಾಗಿ ಸಾಬೀತುಪಡಿಸಿಕೊಳ್ಳುವ ತುರ್ತು ಇಂದಿನ ಹೆಣ್ಣಿಗಿದೆ.ಅದರಲ್ಲಿಯೂ ವೃತ್ತಿ ಪ್ರವೃತ್ತಿಗಳೊಂದಿಗೆ ತಾಯ್ತನದ ಜವಾಬ್ದಾರಿಗಳನ್ನು ನಿರ್ವಹಿಸಬೇಕಿರುವ ಎಳೆಯ ಅಥವಾ ಮಧ್ಯವಯಸ್ಸಿನ ಅಮ್ಮನಿಗಿರುವ ಸವಾಲು ನೂರಾರಿವೆ.   ಈಗಿನ ಅಮ್ಮ ಒಂದೆರಡು ತಲೆಮಾರಿನ ಹಿಂದಿನ ಅಮ್ಮಂದಿರಂತೆ ಮನೆಯ ಯಜಮಾನ ‘ತಂದು ಹಾಕಿದ್ದನ್ನು ಮಾಡಿಹಾಕುವವಳು’ ಅಲ್ಲ ( ಈ ಮಾದರಿಗೆ ಆಗ್ಗೆಯೂ ಹಲವು ಅಪವಾದಗಳಿರಬಹುದು). ಈಗಿನ  ಅಮ್ಮನಿಗೆ ಕೊಂಡು ತರುವ ಶಕ್ತಿಯೂ, ಮಾಡಿ ಹಾಕುವ ಯುಕ್ತಿಯೂ ಮಿಳಿತವಾಗಿದೆ .
.
‘ಸೂಪರ್ ವುಮನ್’ ಎಂದೇ ಕರೆಸಿಕೊಳ್ಳುತ್ತಿರುವ 21ನೇ ಶತಮಾನದ ನಾರಿಶಕ್ತಿಯು, ನವಶಕ್ತಿಗೆ  ಮತ್ತೊಂದು ಪ್ರಮುಖ ದ್ಯೋತಕವಾಗಿದೆ. ಹಾಗಾದರೆ ಆಧುನಿಕ ಅಮ್ಮಂದಿರಿಗೆ ಎಲ್ಲವೂ ಅನುಕೂಲಕರವಾಗಿ ಇದೆಯೇ? ಎಲ್ಲವೂ ಸರಿಯಾಗಿದೆಯೇ? ಎಂದು ಪ್ರಶ್ನಿಸಿ ನೋಡಿದರೆ ಇತ್ಯಾತ್ಮಕ ಉತ್ತರ ಸಿಗುವುದು ಕಷ್ಟ. ಆಕೆ ತನ್ನ ಅಸ್ಮಿತೆಯನ್ನು  ಸಾಬೀತುಪಡಿಸಲು ಸತತ ಗುದ್ದಾಟ ನಡೆಸುತ್ತಲೋ, ರಾಜಿ- ಸಂಧಾನಗಳನ್ನು ಮಾಡುತ್ತಲೋ ನಿರಂತರವಾಗಿ ಸಕ್ರಿಯಳಾಗಿ ಇರಬೇಕಾಗಿದೆ.
.
ಇವತ್ತಿಗೂ ‘ಮಕ್ಕಳಿಸ್ಕೂಲು ಮನೇಲಲ್ವೇ..?’  ಎಂದು ಪ್ರಶ್ನಿಸಿಕೊಂಡರೆ ಉತ್ತರ ಹೌದೆಂದೇ ಇರುತ್ತದೆ.   ಅದರೊಟ್ಟಿಗೆ ‘ತಾಯಿಯೇ ಮೊದಲ ಗುರು’ವಾಗಿ ಉಳಿಯಬೇಕಾಗಿದೆ. ಇಂಥ ಗುರುವಾಗುವ ಅಮ್ಮ ಮಗುವಿನ ಆಟಪಾಟ ಆನಂದಿಸುತ್ತಲೇ, ಎಚ್ಚರಿಕೆಯಿಂದ ಮಗುವನ್ನು ತಿದ್ದುವ, ಅದರ ವ್ಯಕ್ತಿತ್ವ ರೂಪಿಸುವ ಜವಾಬ್ದಾರಿಯನ್ನೂ ನಿಭಾಯಿಸುತ್ತಿರುವುದನ್ನು  ಯಾರೂ ನಿರಾಕರಿಸಲಾರರು.
.
ಇಂಥಾ ಈ ಅಮ್ಮನಿಗೆ ಈಗಾಗಲೆ ಹೊರಗಿನ ಸಮಾಜದಲ್ಲಿ ಐಡೆಂಟಿಟಿ ಇದೆ. ಈ ಅಮ್ಮನಿಗೂ ಹಲವು ಹವ್ಯಾಸ ಅಭ್ಯಾಸಗಳಿವೆ, ಈ ಅಮ್ಮನಿಗೂ ಸ್ನೇಹ ಬಳಗವಿದೆ, ಈ ಅಮ್ಮನಿಗೂ ಕನಸುಗಳಿವೆ.  ಅದನ್ನು ನನಸು ಮಾಡುವ ದಾರಿಗಳೂ, ಅದರೆಡೆಗೆ ಸಾಗಬೇಕಾದ ಮಾರ್ಗಗಳೂ ಗೊತ್ತಿವೆ. ಆದರೆ ಇದೆಲ್ಲಾ ಆಗುವುದಕ್ಕೆ ಆಕೆಗೆ ಯಾವುದೋ ಅದ್ಭುತ ಮ್ಯಾಜಿಕ್ ದೀಪದ ಬೆಂಬಲವಿಲ್ಲ. ಬದಲಿಗೆ ಅವಳಿಗೆ ಬಹಳ ಸಹಕಾರಗಳು ಬೇಕೇಬೇಕು. ಅಂತಹ ಸಹಕಾರಗಳು ಮನೆಯಿಂದ, ಸಮಾಜದಿಂದಲೇ ಸಿಗಬೇಕು. ತನ್ನೊಳಗಿನಿಂದ ಆಕೆ ಎಷ್ಟೇ ಗಟ್ಟಿಗೊಂಡಿದ್ದರೂ ಸಮಾಜಜೀವಿಯಾಗಿರುವ ಹೆಣ್ಣಿಗೆ ಸಮಾಜದಿಂದಲೇ, ಸಾಮಾಜಿಕರಿಂದಲೇ ಹಲವು ಬದಲಾವಣೆಗಳ ನಿರೀಕ್ಷೆಗಳಿವೆ. ಹಾಗೆಂದು  ಆಕೆ ಅತಿ ದೊಡ್ಡ  ಸಾಮಾಜಿಕ ಕ್ರಾಂತಿಯಾಗಬೇಕೆಂಬ ಬೇಡಿಕೆಯನ್ನಿಡುವುದಿಲ್ಲ. ಕಾರ್ಯ ಕಾರಣಗಳನ್ನು ಅರಿತುಕೊಂಡು ಸಹಕರಿಸುವ ಮನೋಭಾವವನ್ನು ಇತರರಿಂದ ಬಯಸುತ್ತಾಳೆ.
ಆಧುನಿಕ ಅಮ್ಮಂದಿರ ಒಟ್ಟಾರೆ ನಿರೀಕ್ಷೆಗಳು ಇಷ್ಟೇ…  ಆಕೆ ಜಾಣೆ ಅವಳಿಗೆ ಗೌರವ ಬೇಕು; ಆಕೆ ಸಮರ್ಥೆ ಅವಕಾಶ ಬೇಕು ; ಆಕೆ ದಿಟ್ಟೆ  ಗುರುತಿಸಿ ಪ್ರೊತ್ಸಾಹಿಸಬೇಕು. ಅಬಲೆ ಸಬಲೆ ಎಂಬ ಗುಣಾಕಾರ ಭಾಗಾಕಾರಗಳ ಲೆಕ್ಕಾಚಾರವನ್ನು ಇಟ್ಟುಕೊಂಡಿಲ್ಲ. ತನ್ನ ಅಸ್ಮಿತೆಯನ್ನು ಪ್ರತಿಪಾದಿಸುತ್ತಲೇ ಆಧುನಿಕ ಅಮ್ಮ ತನ್ನ ಹಿಂದಿನವರಿಗಿಂತಲೂ ತನ್ನನ್ನು  ಸಮರ್ಥವಾಗಿ ಪ್ರತಿನಿಧಿಸಿಕೊಳ್ಳುತ್ತಾಳೆ.
.
ಅಮ್ಮನೆಂದರೆ ಈಗೀಗ ಬರಿಯ ಹೊರುವ ಹೆರುವ ಅಮ್ಮನಾಗಿ ಉಳಿಯಲು ಬಯಸುತ್ತಿಲ್ಲ. ಗೆಳತಿಯಾಗಿ, ಗುರುವಾಗಿ, ಪೋಷಕಿಯಾಗಿ,  ಮಾರ್ಗದರ್ಶಕಳಾಗಿ, ಆಕೆ ವಿವಿಧ ಪಾತ್ರಾಭಿನಯದೊಂದಿಗೆ ತನ್ನನ್ನು  ಪ್ರಸ್ತುತ ಪಡಿಸಿಕೊಳ್ಳುತ್ತಿದ್ದಾಳೆ.

ಇದೆಲ್ಲದರೊಟ್ಟಿಗೆಯೇ ಮನೆಕೆಲಸ, ಹೊರಕೆಲಸಗಳ ಹೊರೆಯನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದಾಳೆ. ತನ್ನ ಹವ್ಯಾಸ ಅಭ್ಯಾಸಗಳೊಟ್ಟಿಗೆಯೇ… ಮಕ್ಕಳೊಡನೆ ಈಜು ಕಲಿಯುತ್ತಾಳೆ, ಸ್ಕೂಟಿ, ಕಾರ್ ಗಳಲ್ಲಿ ಸುತ್ತಾಡಿಸುತ್ತಾಳೆ, ಚಾರಣಗಳಿಗೆ ಕರೆದೊಯ್ಯುತ್ತಾಳೆ,  ಹಾಗಾಗಿಯೇ ಎಂದಿನಂತೆ ಇಂದಿನ ಮಕ್ಕಳಿಗೆ ತನ್ನಮ್ಮನೆಂದರೆ ‘ಬೆಸ್ಟ್ ಮದರ್’..! ಇಂತಹ ಭೂಮಿ ಮೇಲಿರುವ ಎಲ್ಲಾ ಬೆಸ್ಟ್ ಮದರ್ ಗಳಿಗೂ ‘ಅಮ್ಮಂದಿರ ದಿನ’ದ ಸಾಂಕೇತಿಕ  ಆಚರಣೆಗೆ ಶುಭಾಶಯಗಳು. ಏಕೆಂದರೆ, ಪ್ರತೀ ಅಮ್ಮ  ಮತ್ತು  ಮಗುವಿಗೂ ಗೊತ್ತು  ಪ್ರತಿ ದಿನವೂ ಅಮ್ಮನ ದಿನವೆಂದು……
.
– ವಸುಂಧರಾ . ಕೆ. ಎಂ., ಬೆಂಗಳೂರು
.

3 Responses

  1. Vasundhara k m says:

    ಅಪಾರ ಧನ್ಯವಾದಗಳು ಸರಹೊನ್ನೆ ಬಳಗವೇ… ಹಾಗೂ ಹೇಮಮಾಲಾ ಮೇಡಂ ಅವರಿಗೆ…

  2. Hema says:

    ಸಕಾಲಿಕ, ಚೆಂದದ ಬರಹ

  3. Pallavi Bhat says:

    ಹಿಂದೆ, ಇಂದು, ಮುಂದೂ ಯಾವತ್ತಿದ್ದರೂ ಅಮ್ಮ ಎಂಬಾಕೆ ಸೂಪರ್ ವಿಮೆನ್ ಆಗಿರುತ್ತಾಳೆ. ಸುಂದರ ಬರಹ. 🙂

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: