ಬೇಸಿಗೆಯ ದೇವಕನ್ಯೆ
ಮಂಜಿನ ಬಲೆಯ ಸರಿಸಿ, ಶರಧಿಯ ದಾಟಿ..
ಮೆಲ್ಲಗೆ ಅತ್ತಿತ್ತ ನೋಡುತ್ತ ಕಾಲ್ಬೆರಳೂರುವಳು..
ಬೇಸಿಗೆಯ ದೇವಕನ್ಯೆ..
ನೇಸರನುಡಿಸಿದ ಚಿನ್ನದ ಉಡುಗೆಗೆ,
ತಿಳಿನೀಲಿ ಬಿಳಿಯ ಚಿತ್ತಾರದ ಪಟ್ಟಿ
ಮುಡಿಗೇರಿಸುವಳು ಒಲುಮೆಯಿಂದ
ವಸಂತ ತನಗಾಗಿಯೇ ಸೃಷ್ಟಿಸಿದ ಹೂಗಳನ್ನ
ಹಿತವಾದ ಬೆಚ್ಚನೆಯ ಗಾಳಿಯ
ರೆಕ್ಕೆಯಲಿ ಬೀಸುತ್ತ ಕಚಗುಳಿಯಿಟ್ಟಾಗ
ಕಾಡುವುದು ಅವೆಷ್ಟೋ ಜೀವಕೆ ಯೌವನ..
ಇಷ್ಟೊಂದು ಸುಖವೀಯುವ ಸುಂದರಿಯಿವಳು,
ಆದರೂ..
ಕಾಪಿಟ್ಟುಕೊಳ್ಳಲು ಹರಸಾಹಸ ಮಾಡಬೇಕು
ಅವಳಿರುವಿಕೆ ಯಾಕೋ..
ಗಂಭೀರ ಭಂಗಿಯಲಿ ನಿಸರ್ಗ ರಾಜನ ಕೂಡಿ
ಬೆರಳೊಳಗೆ ಬೆರಳ ತೂರಿಸಿ ನಡೆಯುವಾಗ
ಉಡಿಯೊಳಗಿಟ್ಟ ಮಲ್ಲಿಗೆಯ ಮೊಗ್ಗನ್ನು
ಹದವಾಗಿ ಹರಡುವಳು
ತುಸುದೂರ ನಡೆದಂತೇ ಮಕರಂದದ ಹೂಗುಚ್ಛ
ಮೃದುವಾದ ಕೈಗೆ ಜೋಲಿಹೊಡೆಯುತ್ತಲೇ
ಕಾಲ್ಬೆರಳನೂ ಸ್ಪರ್ಶಿಸಿ ಮುತ್ತನೀಯುತಿದೆ
ವೈಭವದಿ ಕೈಯೆತ್ತಿ ಹಿಡಿಯುವ ದೀಪವದೋ
ಕಾವೇರಿಸುವದು
ಸೊಂಪಾಗಿ ಬೆಳೆದ ಹಚ್ಚ ಹಸಿರಿನ ನಡುವಿನ ತಿಳಿತೊರೆಯ ಕನ್ನಡಿಯಲಿ ಕಾಣುವದೇನೋ
ಸುತ್ತೆಲ್ಲ ಮೌನ…
ಅವಳಿರುವಿಕೆ ಯಾಕೋ..
ಒಂದೇ ಸಮನೆ ಘರ್ಜಿಸಬಲ್ಲಳು
ಅವಳಿಗೇ ಅರಿವಿಲ್ಲದಂತೇ
ಗುಡುಗಿಗೆ,ಸಾಗರದ ತೆರೆಗಳಿಗೆ,ಧ್ವನಿಯ ಕೊಟ್ಟು
ಅದೇ ಗತಿಯಲಿ ಶಾಂತವಾಗುವಳು
ಬಾನಲ್ಲಿ ಕಾಮನ ಬಿಲ್ಲಿನ ಪಟ್ಟಿಗೆ ಬಣ್ಣವಿಟ್ಟು. .
ಅಡಗುವಳು ಕತ್ತಲೆಯ ದಟ್ಟ ಕಾಡಿನ ನಡುವೆ
ಏರುವಳು ಶಿಖರವ, ಸೋರ್ವಳು ಕಣಿವೆಯಲಿ
ಮತ್ತೆ ಕಾಣುವಳು ಪಕ್ಕದ ಬಯಲಿನಲಿ ವಿಶ್ರಾಂತಿ ತಾಣವ
ನಾಳೆಯಾದರೆ ಮರೆಯಾಗುವಳು
ಬೆವರ ಹನಿಯಲೂ ಅವಳದೇ ಘಮ ಘಮ.
ಅವಳಿರುವಿಕೆ ಯಾಕೋ ಚಡಪಡಿಕೆ ..
-ಕಲಾ ಚಿದಾನಂದ, ಮುಂಬೈ
ಕಲಾˌಚೆಂದದ ಕವನ
ಪ್ರೋತ್ಸಾಹಕ್ಕೆ ಧನ್ಯವಾದಗಳು ಸುರಹೊನ್ನೆ
ಧನ್ಯವಾದ
ಕಲಾ Nice
ಧನ್ಯವಾದ ಸ್ಮಿತಾ..
ಆಹಾ…n.. ಸುಂದರವಾದ ನಿಸರ್ಗದ ವರ್ಣನೆ . ಎಲ್ಲವ ಕ್ಷಣ ಕಾಲ ಮರೆಸುವಂತಹ ಭಾವ .
ಧನ್ಯವಾದ ನಯನಾ..
ಆಹಾ….. ಸುಂದರವಾದ ನಿಸರ್ಗದ ವರ್ಣನೆ . ಎಲ್ಲವ ಕ್ಷಣ ಕಾಲ ಮರೆಸುವಂತಹ ಭಾವ .
Wonderful poem
ಧನ್ಯವಾದ ಜ್ಯೋತಿ..