ನದಿಯ ಮಂಜುಳ ನಿನಾದವೆಂಬುದು…

Spread the love
Share Button

.

ನೆಲದಿಂದಲೇ  ಚಿಮ್ಮಿ  ಹೊರ ಹೊಮ್ಮುವ
ಬುಗು ಬುಗು ಉಗ್ಗುವ ಸಣ್ಣ ತೊರೆ
ಹರಿವ ಹಳ್ಳ, ಬೊಗಸೆಗೆ ಸಿಗುವ ಒರತೆ
ತಿಳಿ ನೀರ ದೊಣೆ ಧುಮ್ಮಿಕ್ಕುವ ಜಲ ಧಾರೆಗಳೆಲ್ಲಾ:
ನದಿಯಲ್ಲ!
.
ಸಲಿಲದ ಸಹಸ್ರ ರೂಪ ಸ್ವರೂಪಗಳು ಸಮ್ಮಿಲಿಸಿ ಹರಿದೋಡಲು
ಅಡೆತಡೆಯಿಲ್ಲದ ಹರಿವು ಒಂದೇ ಧಾರೆಯಾಗಿ
ತಗ್ಗಿನಲ್ಲಿ ಸುಳಿದು ದಿಬ್ಬ ದೊಗರು ಸುತ್ತಿ
ಧಬೆ ಧಬೆಗಳಲ್ಲಿ ಧುಮ್ಮಿಕ್ಕಿ ಜಲ ಪಾತಗಳನ್ನೇ
ನಿರ್ಮಿಸಿದರೂ ತನ್ನ ಪಾತ್ರದ-
.
ಎರಡು ಅಂಚುಗಳ ಒಳಗೆ ಒಮ್ಮೆ ಶಾಂತತೆಯಲ್ಲಿ
ಮತ್ತೊಮ್ಮೆ ಅಶಾಂತವಾಗಿ ಹರಿಯುವ ನೀರೇ:
ಪುಟ್ಟ ಪೋರಿ ಕಿಶೋರಿ ಬೆಳೆದರಳಿ ಹೆಣ್ಣಾದಂತೆ
ಹೆಣ್ಣ ಹೆಸರ ಧರಿಸಿ ತನ್ನ ಪಾತ್ರದಂಚಿಗೆ ನೆಲೆ
ನಿಂತವರ ಪೊರೆಯುವ – ನದಿ!
.
ನದಿಗೆ ನೆನಪಿನ ಹಂಗಿಲ್ಲವಂತೆ!
ತೆಳುವಾಗಿ ಹರಿದಾಗ ತಡೆಯೊಡ್ಡಿದ್ದ
ಸಣ್ಣ ಬೆಣಚು ಕಲ್ಲೂ, ಮೈ ಗೀರಿದ ಚಿಟ ಮುಳ್ಳು
ಕೊರಕಲು ಎತ್ತರದಿಂದ ಕೆಳಗೆಸೆದ ಕೋಡುಗಲ್ಲು
ಅಲ್ಲೂ ಇಲ್ಲೂ ಬಿಡದೇ ಕಾಡಿ, ಪಸೆಯಾರಿಸಿ ಢವ
ಗುಟ್ಟಿಸಿದರೂ ನಿಲ್ಲದು ನದಿಯ ಚಲನೆ
.
ಲಲನೆ ಸುಲಭವಲ್ಲ ತನ್ನೊಡಲ ಕಾಳ್ಗಿಚ್ಚ ಸುಮ್ಮನೇ
ತೋರುವುದಿಲ್ಲ ನೀರ ಹೊರ ಮೈ ಮೇಲೆ ಹಾವಸೆ
ಬೆಳೆದು ನಿಂತರೂ  ನೀರಾಳ ಸದಾ ನಿರಾಳ ಹರಿವು
ಶತ ಶತಮಾನಗಳಿಂದ ಪೀಳಿಗೆಗಳ ಪೊರೆದ ತಾಯಿ
ಸಹೋದರತ್ವಕ್ಕೆ ಘನತೆ ನೀಡಿದ ಅನುಜೆ ಭಾವ ವಜ್ಜೆ
ವಿರಹ ಅನುಸರಿಸಿದ ಭಾರ್ಯೆ ಬರಿಯೇ ಹೆಣ್ಣಲ್ಲ
.
ಹೆಣ್ಣು ನದಿಯಷ್ಟೇ ಅಲ್ಲ: ದಡವ ತೋಯಿಸಿದರೂ
ಮಡಿಲ ಮಕ್ಕಳ ಮೈದಡವಿದರೂ ನಾಗರಿಕತೆಯ
ರಜತ ತೊಟ್ಟಿಲು ಮಂಜುಳವಾಗಿ ನಿನಾದಿಸಿ ನಡೆದು
ಸೇರಲು ಹಂಬಲಿಸುವುದು-  ತನ್ನದೇ ಕಡಲು
ದಣಿದ ಈ ಸಹಸ್ರಪದಿಯ ಒಡಲುಗೊಳ್ಳುವ ಮಡಿಲು..


.

– ಆನಂದ್ ಋಗ್ವೇದಿ , ದಾವಣಗೆರೆ

5 Responses

  1. Smitha Amrithraj says:

    ನದಿಯ ನಿನಾದ ಚೆಂದಿದೆ ಸರ್

  2. Nayana Bajakudlu says:

    ಸುಂದರ ಕವನ. ಹರಿಯುವ ನದಿಯ ಚಿತ್ರಣ ಕಣ್ಣ ಮುಂದೆ ಬರುತ್ತದೆ ಓದುವಾಗ. ಹೆಣ್ಣು ಮತ್ತು ನದಿ ಯ ಹೋಲಿಕೆ ಸೊಗಸಾಗಿದೆ .

  3. Ashoka Mallappa Surapur Surapur says:

    All faces of the river are defined in the poem… nice sir

Leave a Reply to Ashoka Mallappa Surapur Surapur Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: