ಪುಸ್ತಕ ಪರಿಚಯ : ಗೆಲುವಾಗೆಲೆ ಮನ..

Share Button

ಒಳ್ಳೆಯ ಕತೆಗಾರ್ತಿ ಮತ್ತು ಕವಯತ್ರಿಯಾಗಿ ಹೆಸರು ಮಾಡಿರುವ ಸುಳ್ಯದ ಲೀಲಾ ದಾಮೋದರರವರು ಇದೀಗ ತಮ್ಮ ಲಲಿತ ಪ್ರಬಂಧ ಸಂಕಲನ ‘ಗೆಲುವಾಗೆಲೆ ಮನ’ ದ ಮೂಲಕ ತಮ್ಮ ಮುಂದೆ ಬಂದು ನಿಂತಿದ್ದಾರೆ. ಉಪನ್ಯಾಸಕಿಯಾಗಿ ನಿವೃತ್ತಿ ಹೊಂದಿರುವ ಲೀಲಾರವರ ಪ್ರಬಂಧಗಳ ತುಂಬಾ ಬಾಲ್ಯದಿಂದ ಹಿಡಿದು, ತಮ್ಮ ವೃತ್ತಿ, ಪ್ರವೃತ್ತಿ ಎಲ್ಲ ವಿಚಾರಗಳು ಓಡಾಡಿಕೊಂಡು ಮಾತನಾಡಿದಂತೆ ಭಾಸವಾಗುತ್ತದೆ. ಒಟ್ಟು ಹದಿಮೂರು ಪ್ರಬಂಧಗಳ ಗುಚ್ಛ ನಮ್ಮನ್ನು ಒಂದೇ ಗುಕ್ಕಿಗೆ ಓದಿ ಮುಗಿಸುವಂತೆ ಪ್ರೇರೇಪಿಸುತ್ತವೆ. ಅನುಭವ ಜನ್ಯವಾದ ನೈಜ ಬರಹಗಳ ಶಕ್ತಿ ಇದು.

ಅಡುಗೆ ಎಂಬುದು ಅನಾದಿಯಿಂದಲೂ ಹೆಣ್ಣಿಗೆ ಅಂಟಿಕೊಂಡು ಬಂದಂತಹ ಬಳುವಳಿ. ಇದಕ್ಕೆ ನಮ್ಮ ತಕರಾರುಗಳೇನು ಇಲ್ಲ. ಆದರೆ ತಕರಾರು ಇರುವುದು ಅಡುಗೆ ಅಂದರೆ ಅದೊಂದು ಕೆಲಸವೇ ಅಲ್ಲ ಅನ್ನುವ ಪೂರ್ವಗ್ರಹ ಪೀಡಿತ ಮನಸುಗಳ ನಿರ್ಲಕ್ಷ ಧೋರಣೆಯ ಕುರಿತು . ಇದನ್ನು ‘ವಿಮೋಚನೆ’ ಪ್ರಬಂಧದ ಮೂಲಕ ಲೇಖಕಿ ತಣ್ಣಗೆ ಪ್ರತಿರೋಧ ವ್ಯಕ್ತಪಡಿಸುತ್ತಾರೆ. ಯಾವುದೋ ಒಂದು ಕ್ಷಣದಲ್ಲಿ ಅಡುಗೆಯ ಕುರಿತಾದ ಹಗುರವಾದ ಮಾತನ್ನು ಗಂಡನಿಂದ ಕೇಳಿದೊಡನೆ ಶರತ್ತು ಹಾಕಿ ಆ ಕೆಲಸ ನಿಭಾಯಿಸುವ ಪಣಕ್ಕೆ ಬೀಳುವಂತ ಪಾತ್ರವನ್ನು ನಿಭಾಯಿಸುತ್ತಾರೆ. ಮೇಲು ನೋಟಕ್ಕೆ ಸುಲಭಕ್ಕೆ ಮತ್ತು ಹಗುರವಾಗಿ ಗೋಚರಿಸುವುದು ಅಷ್ಟೊಂದು ಸುಲಭದಾಯಕ ಸಂಗತಿಯಲ್ಲ. ಅದು ಅಪಾರ ತಾಳ್ಮೆ ಮತ್ತು ನಿರಂತರ ಅಭ್ಯಾಸ , ಪರಿಶ್ರಮದಿಂದಷ್ಟೇ ಸಾಧ್ಯ. ಹಾಗಾಗಿ ಎಲ್ಲಾ ಕೆಲಸಗಳಂತೆ ಅಡುಗೆ ಕೆಲಸವೂ ಒಂದು ಜವಾಬ್ದಾರಿಯುತ ಕೆಲಸ ಅನ್ನುವಂತದ್ದನ್ನ ಲೇಖಕಿ ಲಘುವಾಗಿ ತಿಳಿ ಹಾಸ್ಯದಿಂದ ಹೇಳುತ್ತಾ ಗಂಭೀರವಾದ ವಿಚಾರವೊಂದನ್ನ ಇಲ್ಲಿ ಎತ್ತಿ ಪರಾಮರ್ಶಿಸಿದಂತೆ ತೋರಿ ಬರುತ್ತದೆ.

‘ಓಲೆಗಳೆಲ್ಲ ಎಲ್ಲಿ ಹೋದವೋ’ ಅನ್ನುವ ಪ್ರಬಂಧದಲ್ಲಿ ಪತ್ರದ ಇತಿಹಾಸ, ಪತ್ರ ಬರೆಯುವ ರೀತಿ, ಅದು ತಂದು ಕೊಡುವ ಖುಷಿ, ಸಂಕಟ, ಪೇಚಾಟ ಎಲ್ಲವನ್ನು ಸಾದ್ಯಂತವಾಗಿ ಬಿಚ್ಚಿಡುತ್ತಾ ಅಂಚೆಯಣ್ಣನ ಚಿತ್ರಣವೊಂದು ಕಣ್ಣ ಮುಂದೆ ತಂದು ನಿಲ್ಲಿಸುತ್ತಾರೆ. ಮನಸು -ಮನಸುಗಳನ್ನು ಬೆಸೆಯುವ ಕೊಂಡಿಯಾಗಿದ್ದ ಓಲೆಗಳು ಕಾಲದ ಪಲ್ಲಟದಲ್ಲಿ ತಟಸ್ಥಗೊಂಡು ಹೇಳ ಹೆಸರಿಲ್ಲದ ನಿರ್ಭಾವುಕತನದ ಅಂಟೊಂದು ಅಂಟಿಸಿಕೊಂಡು ತಮ್ಮನ್ನು ತಾವು ಕಳೆದುಕೊಳ್ಳುತ್ತಿರುವ ಸಂಕೇತದಂತೆ ಗೋಚರಿಸುತ್ತದೆ. ಕೈಯ ಲೆಕ್ಕಣಿಕೆಯನ್ನ ಮೊಬೈಲ್ ಗುಂಡಿ ಆವರಿಸಿರುವಾಗ ಪತ್ರ ಸಂಸ್ಕೃತಿಯೊಂದು ಇತಿಹಾಸಕ್ಕೆ ಸಂದು ಹೋಗುತ್ತದೆಯೇನೋ ಅನ್ನುವ ದಿಗಿಲು ಇಲ್ಲಿ ನಮ್ಮನ್ನು ಧಿಗ್ಗನೆ ಆವರಿಸಿಕೊಳ್ಳುತ್ತದೆ.

ಅಳು ಅನ್ನುವಂತದ್ದು ಸಾರ್ವತ್ರಿಕ. ಇದಕ್ಕೆ ಲಿಂಗ ಭೇದವಿಲ್ಲ. ತಾರತಮ್ಯವಿಲ್ಲ. ಆದರೆ ಅಳುವುದು ಬರೇ ಹೆಂಗಸರ ಸೊತ್ತು ಅಂತ ಬಿಂಬಿಸುತ್ತಾ ಬಂದ ಪುರುಷ ಪ್ರಧಾನ ವ್ಯವಸ್ಥೆಯ ತೀರ್ಮಾನವನ್ನು ಅಲ್ಲಗಳೆಯುತ್ತಾ ಇಲ್ಲಿ ಲೇಖಕಿ ಹೇಗೆ ಅಳುವೆಂಬುದು ಸಹಜ ಮತ್ತು ಅಗತ್ಯವೆಂಬುದನ್ನ ಉದಾಹರಣೆಗಳ ಮೂಲಕ ವ್ಯಕ್ತಪಡಿಸುತ್ತಾ , ನಕ್ಕು ಹಗುರಾಗಿ ಜೀವನವನ್ನು ಗೆಲುವಾಗಿಡುವುದೇ ಬದುಕಿನ ಉದ್ದೇಶ ಅನ್ನುವಂತದ್ದನ್ನ ಸಾದರ ಪಡಿಸುತ್ತಾರೆ.

ಮನುಷ್ಯನ ಇಡೀ ಬದುಕಿನ ಲವಲವಿಕೆ ನಿಂತಿರುವುದೇ ರಾತ್ರೆ ಹೊತ್ತಿನ ಒಂದು ಪರಿಪೂರ್ಣ ನಿದ್ದೆಯಲ್ಲಿ. ಆದರೆ ನಿದ್ರೆ ದಕ್ಕಿಸಿಕೊಡುವ ಸುಖ, ಅದು ಬಿಚ್ಚಿಡುವ ರೋಚಕ ಸಂಗತಿಗಳು, ಅದರ ಸಾಧಕ, ಭಾದಕಗಳನ್ನ ಎಳೆ ಎಳೆಯಾಗಿ ನಿರೂಪಿಸುತ್ತಾ ಸಾಗುವಾಗ ನಿದಿರಾ ಲೋಕದ ಗಾಢ ಅನುಭವವೊಂದು ತೆರೆದುಕೊಳ್ಳುತ್ತಾ ಹೋಗುತ್ತದೆ. ನಿದ್ರೆಯ ಕುರಿತಾದ ಪ್ರಬಂಧದೊಳಗೆ ಅನೇಕ ಮೂರ್ತ ಮತ್ತು ಅಮೂರ್ತ ಸಂಗತಿಗಳನ್ನ ಹರವಿಡುತ್ತಾ ಸಾಗುತ್ತಾರೆ.

‘ಬಣ್ಣದ ನವಿಲು’ ಪ್ರಬಂಧವೊಂದು ರೂಪಕದಂತೆ ನನ್ನನ್ನು ಕಾಡಿತು. ಜಾಗತೀಕರಣದ ಭರಾಟೆಯಲ್ಲಿ ಹೆತ್ತವರು ಮಕ್ಕಳನ್ನು ಸ್ಪರ್ಧೆಗೆ ದೂಡುತ್ತಾ ತಾವೂ ಬಳಲುತ್ತಿದ್ದಾರೆ ಅನ್ನುವುದನ್ನ ಸೂಚ್ಯವಾಗಿ ಕಟ್ಟಿಕೊಡುತ್ತಾರೆ. ತಮ್ಮ ಮಕ್ಕಳಿಗೆ ಆ ವಿಷಯದಲ್ಲಿ ಆಸಕ್ತಿ, ಪ್ರತಿಭೆ ಇದೆಯೋ ಗೊತ್ತಿಲ್ಲ, ಆದರೆ ಹೆಸರು ಬರಬೇಕು ಅನ್ನೋ ಒಂದೇ ಒಂದು ಉದ್ದೇಶ ಇಟ್ಟುಕೊಂಡು ಹೇಗೆ ಬದುಕಿನಲ್ಲಿ ನೆಮ್ಮದಿಯನ್ನು ಕಳೆದುಕೊಳ್ಳುತ್ತಾರೆ ಅನ್ನುವಂತದನ್ನ ಕತೆಯ ಪಾತ್ರದಂತೆ ತೆರೆದಿಡುತ್ತಾರೆ.

ಓದುವ ಸುಖ ಹೇಗಿರ ಬೇಕು ಮತ್ತು ಹೇಗಿರುತ್ತೆ ಅನ್ನುವುದನ್ನ ಓದಿಯೇ ಅರಿಯ ಬೇಕಷ್ಟೆ. ಓದುವ ಹುಚ್ಚು ಹತ್ತಿಸಿಕೊಂಡವರ ಪರಿಸ್ಥಿತಿ ಹೇಗಿರುತ್ತೆ ಅಂದರೆ ಗುಡಿಸುವಾಗ ಕಸದ ಪತ್ರಿಕೆ ಚೂರು ಕೂಡ ಅಮೂಲಾಗ್ರ ಪರಿಶೀಲನೆಗೆ ಒಳಗಾಗದೆ ಬಿಡುತ್ತಿರಲಿಲ್ಲವೆಂಬುದನ್ನ ಇಲ್ಲಿ ಲೇಖಕಿ ವಿವವರಿಸುತ್ತಾ ಈ ಓದಿನ ಗೀಳಿನಿಂದಾಗಿ ಕೆಲವೊಮ್ಮೆ ಲೇವಡಿಗೆ ಒಳಗಾಗಿ ಬಿಡುತ್ತೇವೆ ಅನ್ನುವಂತದ್ದನ್ನ ತಿಳಿ ಹಾಸ್ಯದೊಂದಿಗೆ ಉಣ ಬಡಿಸುತ್ತಾರೆ. ಈಗ ಮೊಬೈಲ್ ಪರದೆಯೊಳಗೆ ಕಣ್ಣು ಕೀಲಿಸಿಕೊಂಡು ಯಾವುದೋ ಭ್ರಮಾಲೋಕದಲ್ಲಿ ಬಿಡುಗಣ್ಣು ಬಿಟ್ಟಂತೆ ತೇಲಿಕೊಂಡಿರುವಾಗ ಈ ಓದಿನ ಸುಖವೆಂಬುದು ಎಷ್ಟು ಚೆಂದವಲ್ಲವಾ ಅಂತ ಅನ್ನಿಸದೇ ಇರಲಾರದು. ಆದರೆ ಓದಿನ ತೆಕ್ಕೆಗೆ ಬಿದ್ದವರಿಗಷ್ಟೆ ಇದು ಗೊತ್ತಾಗಬಹುದಾದ ಸತ್ಯ ಅನ್ನುವಂತದ್ದು ವೇದ್ಯವಾಗುತ್ತದೆ. ನಮ್ಮನ್ನು ಇಂತಹ ಚಟಗಳು ಆವರಿಸಬೇಕೆಂಬುದು ಲೇಖಕಿಯ ನಿಲುವು.

ಹಳೆಯ ವಸ್ತುಗಳೆಂದು ನಿಕೃಷ್ಟ ಸಲ್ಲ. ಹಳೆಯ ವಸ್ತುಗಳು ಎಲ್ಲರ ತಿರಸ್ಕಾರಕ್ಕೆ ಒಳಗಾದರೂ ಯಾವುದೇ ಅನಗತ್ಯದ ಖರ್ಚಿಗೆ ಎಡೆ ಮಾಡಿ ಕೊಡದೆ ಜೀವನದುದ್ದಕ್ಕೂ ನಮ್ಮೊಂದಿಗೆ ಸಹಕರಿಸುತ್ತದೆ ಅನ್ನುವುದನ್ನ ‘ಕೊಡೆ’ ಯ ಪ್ರಬಂಧದ ಮೂಲಕ ವಿವರಿಸುತ್ತಾರೆ. ಆದಷ್ಟು ವಸ್ತುಗಳನ್ನು ಕಡಿಮೆ ಖರೀದಿಸಿ ಇರುವ ವಸ್ತುವನ್ನೇ ಉತ್ತಮವಾಗಿ ಉಪಯೋಗಿಸಿ ಕೊಳ್ಳಬೇಕೆಂಬ ಮಿತವ್ಯಯದ ಪಾಠವನ್ನು ಹೇಳಿ ಕೊಡುತ್ತಲೇ ಆಡಂಬರಕ್ಕೆ, ಆಕರ್ಷಣೆಗೆ ಆಯುಷ್ಯ ಕಡಿಮೆ ಅನ್ನುವ ಜಾಗ್ರತ ಮನಸ್ಥಿತಿ ಈ ಬರಹದುದ್ದಕ್ಕೂ ಇಣುಕುತ್ತದೆ.


ಹೆಣ್ಣು ಮಕ್ಕಳಿಗೂ ತವರಿಗೂ ಎಲ್ಲಿಲ್ಲದ ಬಂಧ. ತವರೂರ ಹಾದಿಯಲ್ಲಿ ಕಲ್ಲಿಲ್ಲ ಮುಳ್ಳಿಲ್ಲ ಅಂತ ನೆನೆಯುತ್ತಾ ತವರೂರ ಮಹಿಮೆಯನ್ನು ಕೊಂಡಾಡಿದ ಜಾನಪದ ಮಹಿಳೆಯ ಭಾವನೆ ಇವತ್ತಿನ ಆಧುನಿಕ ಮಹಿಳೆಯವರೆಗೂ ವ್ಯಾಪಿಸಿದೆಯೆಂದರೆ ತವರೂರಿನ ಸೆಳೆತ ಅದೆಷ್ಟೆಂಬು ನಮಗೆ ಮನದಟ್ಟಾಗುತ್ತದೆ. ಇಲ್ಲೂ ಕೂಡ ಹೊಸ ಕಾಲಕ್ಕೆ ಒಡ್ಡಿಕೊಂಡ ಲೇಖಕಿಗೆ ತವರೂರ ಹಾದಿ ಅದೆಷ್ಟು ಹಿತ ಕೊಡುತ್ತದೆ ಅನ್ನುವಂತದನ್ನ ನವಿರಾಗಿ ನಿರೂಪಿಸುತ್ತಾ ಸಾಗುತ್ತಾರೆ. ತವರಿನ ಹಾದಿ, ಅಕ್ಕಪಕ್ಕದ ಮರ, ಹರಿವ ನದಿ , ಕಾಕನ ಅಂಗಡಿ ಈಗ ತಾನೇ ಆಧುನಿಕತೆಗೆ ಒಡ್ಡಿಕೊಂಡು ಹಂತಹಂತವಾಗಿ ಬದಲಾಗುತ್ತಿರುವ ಊರಿನ ಚಿತ್ರಣದೊಂದಿಗೆ ತನ್ನ ಹಳೆ ಕಾಲದ ನೆನಪಿನ ಬುತ್ತಿಯನ್ನು ಬಿಚ್ಚುತ್ತಾ ಹೋಗುತ್ತಾರೆ. ತವರೂರು, ಅಮ್ಮ ಮಾಡಿದ ಅಡುಗೆ ಒಂದಕ್ಕೊಂದು ಕೊಂಡಿ ಜೋಡಿಸುತ್ತಾ ತವರೂರ ನೆನಕೆಯೆಂಬುದು ಹೆಣ್ಣುಮಕ್ಕಳಿಗೆ ಅದೆಷ್ಟು ಚೇತೋಹಾರಿ ಸಂಗತಿಯೆಂಬುದನ್ನ ಕಟ್ಟಿಕೊಡುತ್ತಾರೆ ಲೇಖಕಿ. ಓದುತ್ತಿದ್ದಂತೆಯೇ ನಮ್ಮಗಳ ತವರೂರ ನೆನಪು ನಮ್ಮನ್ನು ಇಡಿಯಾಗಿ ಆವರಿಸಿಕೊಳ್ಳುವುದು ಸುಳ್ಳಲ್ಲ.
ಹಲವಾರು ಪ್ರಬಂಧಗಳನ್ನು ಓದುತ್ತಾ ಬಂದವಳು ನಾನು . ಆದರೆ ನೀಳ ಕಾಯದ ಕುರಿತ ಪ್ರಬಂಧ ಓದಿದ್ದು ಇದೇ ಮೊದಲು. ನೀಳ ಕಾಯ ಸುಂದರ ದೇಹ ಪ್ರಕೃತ್ತಿಯಾದರೂ ಕೆಲವೊಮ್ಮೆ ತರಗತಿಯಲ್ಲಿ ಮೊದಲ ಬೆಂಚಿನಲ್ಲಿ ಕುಳಿತುಕೊಳ್ಳಬೇಕೆನ್ನುವ ಆಸೆಯಿಂದ ವಂಚಿತರಾಗುವುದು, ಮದುವೆ ವಯಸ್ಸಿಗೆ ಬಂದಾಗ ಸರಿಯಾದ ಎತ್ತರದ ಜೋಡಿ ಸಿಗದೆ ಹೈರಾಣಾಗುವುದು ಮುಂತಾದ ನೀಳ ಕಾಯದವರ ಪಡಿಪಾಟಲುಗಳನ್ನು ರಸವತ್ತಾಗಿ ಚಿತ್ರಿಸುತ್ತಾರೆ.

ಮೂಲತ; ಲೇಖಕಿ ಉಪನ್ಯಾಸಕಿಯಾಗಿರುವ ಕಾರಣ ಗುರುಗಳು ಹೇಗೆ ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ತಿದ್ದಬೇಕೆಂಬುದನ್ನ ‘ ಕಸುಬಿಯಾಂಕ’ ಪ್ರಬಂಧದಲ್ಲಿ ವಿವರಿಸುತ್ತಾರೆ. ಉತ್ತಮ ಗುರುವಿನ ಕರ್ತವ್ಯವೇನೆಂಬುದನ್ನ ಉದಾಹರಣೆಯ ಮೂಲಕ ಸರಳವಾಗಿ ನಿರೂಪಿಸುತ್ತಾರೆ.

ಬಹುಷ; ಈ ಜಗತ್ತಿನಲ್ಲಿ ಬೆಲೆ ಕಟ್ಟಲಾಗದ ಜೀವವೆಂದರೆ ಅದು ಅಮ್ಮ. ಅಮ್ಮನ ಸ್ಥಾನ ಬದುಕಿನಲ್ಲಿ ಎಲ್ಲಕ್ಕಿಂತಲೂ ಮಿಗಿಲಾದದ್ದು. ನಾವು ಅಮ್ಮನ ಪಟ್ಟಕ್ಕೇರಿದರೂ ನಮ್ಮಮ್ಮ ಕಟ್ಟಿಕೊಟ್ಟ ಬದುಕು, ತೋರಿಸಿ ಕೊಟ್ಟ ಹಾದಿ, ಮೊಗೆದು ಕೊಟ್ಟ ಪ್ರೀತಿ ವರ್ಣಿಸಲಸದಳ ಎನ್ನುವಂತದನ್ನ ಅಷ್ಟೇ ಆಪ್ತವಾಗಿ ಕಟ್ಟಿಕೊಡುತ್ತಾ ಅಮ್ಮನ ಕೈ ಅಡುಗೆ, ಮನೆ ಕೆಲಸ,ಚಾಪೆ, ಹೆಣಿಗೆ ..ಅನ್ನುವ ಇನ್ನಿತರ ಕಸುಬುಗಳಿಗೂ ಅಮ್ಮನಿಗೂ ನಂಟು ಕಲ್ಪಿಸುತ್ತಾ ಹೇಗೆ ಪ್ರತಿಯೊಬ್ಬರ ಅಮ್ಮ ಅವರದೇ ರೀತಿಯಲ್ಲಿ ಭಿನ್ನ ಅನ್ನುವಂತದ್ದನ್ನ ಅನಾವರಣಗೊಳಿಸುತ್ತಾರೆ.

ಹೇಗೆ ಬದುಕಿಗೆ ಪೂರಕವಾದ ಬೇಸಿಗೆ ಶಿಬಿರವನ್ನು ಮಕ್ಕಳಿಗೆ ನೀಡಬೇಕೆಂಬುದನ್ನ ‘ ಬಿತ್ತಿದಂತೆ ಬೆಳೆ‘ ಅನ್ನುವ ಬರಹದ ಮೂಲಕ ಹೇಳುತ್ತಾ, ಮಕ್ಕಳನ್ನು ಬೇಸಿಗೆ ಶಿಬಿರದಲ್ಲಿ ಉಪಯುಕ್ತವಾದ ಕೃಷಿ ಚಟುವಟಿಕೆಗಳನ್ನು ಕಲಿಸುವುದರ ಮೂಲಕ ಹೇಗೆ ಮಕ್ಕಳು ಅವನ್ನು ಅನುಕರಿಸಿ ಕಲಿಯಬಹುದು ಅನ್ನುವ ತಿಳುವಳಿಕೆ ಪಾಠವನ್ನೂ ಹೇಳಿ ಕೊಡುತ್ತಾರೆ.

ಒಂದು ಕಿಟಕಿಯ ಕುರಿತು ಹೇಳಲು ಇಷ್ಟೆಲ್ಲಾ ಇವೆಯಾ ಅಂತ ಅಚ್ಚರಿ ಹುಟ್ಟಿಸುವಷ್ಟು ಲೇಖಕಿ ‘ಗವಾಕ್ಷಿ ‘ ಪ್ರಬಂಧದಲ್ಲಿ ಹೇಳುತ್ತಾರೆ. ಒಳ್ಳೆಯದನ್ನು ಸ್ವಾಗತಿಸಲು ಕೆಟ್ಟದನ್ನು ಬರದಂತೆ ತಡೆಗಟ್ಟಲು ಇರುವುದೇ ಕಿಟಕಿ ಅನ್ನುವ ಅದ್ಭುತ ಹೊಳಹನ್ನು ಕೊಡುತ್ತಾರೆ. ಬೆಕ್ಕಿನ ಚಲನವಲನ, ಬೆಕ್ಕಿನ ಬಾಣಂತನದ ಬಗ್ಗೆಯೂ ಬರೆಯುತ್ತಾರೆ.

ನದಿ ನಮ್ಮ ಬದುಕಿನ ಅವಿಭಾಜ್ಯ ಅಂಗ. ನಾವೆಲ್ಲಾ ನದಿಯ ನೋಡುತ್ತಾ ಬೆಳೆದವರು. ಈಗೆಲ್ಲಾ ಟ್ಯಾಪ್ ತಿರುವಿದರೆ ಕಾಲಡಿಗೆ ಬಂದು ಬೀಳುವ ನೀರಿನ ಎದುರು ಹೇಗೆ ಹೊಳೆಯೊಂದಿಗೆ ಅನುಸಂಧಾನಗೊಳ್ಳುತ್ತಲೇ ನಮ್ಮ ಬದುಕು ಹೇಗೆ ಬೇರೆಯದೇ ಬಗೆಯಲ್ಲಿ ತೆರೆದುಕೊಂಡಿತು ಅನ್ನುವಂತದ್ದನ್ನ ನದಿಯ ಹರಿವಿನಂತೆ ಹೇಳುತ್ತಾರೆ. ನದಿಯೊಂದು ಅವರವರಿಗೆ ಬೇಕಾದ ಹೆಸರಿನಿಂದ ಕರೆಯಲ್ಪಡುತ್ತಾ ನಾವು ಮತ್ತು ನದಿಯೂ ಬೇರೆಬೇರೆಯಲ್ಲ ಒಂದೇ ಎನ್ನುವ ಭಾವವನ್ನು ನವಿರಾಗಿ ಬಿಂಬಿಸುತ್ತಾರೆ.
ಈ ಪ್ರಬಂಧ ಸಂಕಲನದ ಹೆಚ್ಚಿನ ಪ್ರಬಂಧಗಳನ್ನ ಲೇಖಕಿ ಕಥನ ಕ್ರಮದಲ್ಲೇ ಮಂಡಿಸುತ್ತಾ ಸಾಗುತ್ತಾರೆ. ಆಳವಾದ ಅಧ್ಯಯನ, ಹೊಸ ನೋಟ, ಸೂಕ್ಷ್ಮ ಗ್ರಹಿಕೆಯ ಮೂಲಕ ಬರಹಕ್ಕೊಂದು ಮೌಲಿಕತನ ಪ್ರಾಪ್ತವಾಗಿದೆ. ಲವಲವಿಕೆಯಿಂದ ಓದಿಸಿಕೊಂಡು ಹೋಗುವ ಇಲ್ಲಿನ ಬರಹಗಳಲ್ಲಿ ಕತೆಯಿದೆ,ಕಾವ್ಯವಿದೆ, ಎಚ್ಚರದ ಪ್ರಜ್ಞೆಯಿದೆ, ತಿಳುವಳಿಕೆಯ ಸಾರವಿದೆ, ಹೆಚ್ಚಾಗಿ ಬದುಕಿನ ಎಲ್ಲ ಸಂಗತಿಗಳನ್ನ ಮುದದಲ್ಲಿ ಕಾಪಿಟ್ಟುಕೊಂಡು ಬದುಕಲ್ಲಿ ಜೀವಂತಿಕೆಯನ್ನು ಕಂಡುಕೊಳ್ಳುವ ಜಾಣ್ಮೆಯಿದೆ.

‘ಗೆಲುವಾಗೆಲೆ ಮನ’ ಓದುತ್ತಾ ಗೆಲುವಾಗುವ ಸರದಿ ನಮ್ಮದೀಗ.

– ಸ್ಮಿತಾ ಅಮೃತರಾಜ್. ಸಂಪಾಜೆ

4 Responses

 1. ಕಲಾ ಚಿದಾನಂದ says:

  ತುಂಬಾ ಚೆನ್ನಾಗಿದೆ

 2. Shobha Hirekai says:

  ನಾನೂ ಗೆಲುವಾದೆ ಲಲಿತ ಪ್ರಬಂಧ ಕುರಿತ ನಿಮ್ಮ ಬರಹ ಓದಿ. ಗೆಲುವಾಗಲೇ ಮನ ಓದುವ ಹಂಬಲ ಹುಟ್ಟಿತು.

 3. Nayana Bajakudlu says:

  ಚೆನ್ನಾಗಿದೆ ಪುಸ್ತಕ ಪರಿಚಯ . ಆ ಪುಸ್ತಕದ ಕುರಿತಾದ ನಿರೂಪಣೆಯಲ್ಲಿ ಸಾಕಷ್ಟು ಇಂಟೆರೆಸ್ಟಿಂಗ್ ವಿಷಯಗಳಿವೆ . ನೈಸ್.
  ಪುಸ್ತಕದ ಟೈಟಲ್ ಮನಸಿಗೆ ಒಂದು ರೀತಿಯ ಉಲ್ಲಾಸ ಮೂಡಿಸುವಂತಿದೆ .

 4. ವಿಜಯಾಸುಬ್ರಹ್ಮಣ್ಯ,ಕುಂಬಳೆ. says:

  ಶ್ರೇಷ್ಠ ಬರಹಗಾರರನ್ನು ಪರಚಯಿಸುವುದರೊಂದಿಗೆ ಒಳ್ಳೆಯ ಲೇಖನ ಓದಲು ಸಿಕ್ಕಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: