ನೈತಿಕ ಮೌಲ್ಯಗಳ ಅಧಃಪತನ

Share Button

ಕಣ್ಣು ಮಂಜಾಗುತ್ತಿವೆ. ಮನದ ವೇದನೆಯು ಕಣ್ಣೀರ ಧಾರೆಯಾಗಿ ಸುರಿಯುತ್ತಿದೆ. ನಮ್ಮದೇ ಮನೆಯ ನೋವು ಎಂಬಂತೆ ಭಾಸವಾಗುತ್ತದೆ. ಪ್ರತಿಕ್ಷಣವೂ ಒಂದಿಲ್ಲೊಂದು  ಅಹಿತಕರ ಘಟನೆಗಳು ನಡೆದು ಮನದ ಪ್ರಶಾಂತತೆಯನ್ನು ಹಾಳುಮಾಡುತ್ತಿವೆ. ಅಂದು ಅಲ್ಲೆಲ್ಲೋ, ನಿನ್ನೆ ಮತ್ತೆಲ್ಲೋ, ಇಂದು ನಮ್ಮಲ್ಲಿ , ನಾಳೆ ಮತ್ತಿನ್ನೆಲ್ಲೋ, ಒಟ್ಟಿನಲ್ಲಿ ಈ ಘಟನೆಗಳು ಸುದ್ದಿಯಾಗುತ್ತಿವೆ. ಅದು ಸುದ್ದಿ ಅದಾಗಲೆಲ್ಲಾ ಮನಕಲಕುತ್ತದೆ. ಮುತ್ತೆಂದು ಘಟಿಸದಿರಲಿ ಎಂದು ದನಿ ಏಳುತ್ತದೆ. ಅಷ್ಟೇ ವೇಗವಾಗಿ ಆ ದನಿ ಕ್ಷೀಣಿಸುತ್ತದೆ. ಮತ್ತೆಲ್ಲೋ ನಡೆದಾಗ ಮತ್ತೆ ಜಾಗೃತವಾಗುತ್ತದೆ. ಆದರೆ ಈ ಧ್ವನಿ ಎಂದು ಗಟ್ಟಿಗೊಳ್ಳುತ್ತಿದ್ದದರ ಫಲವೇ ಇಂದು ಮತ್ತೆ ಮತ್ತೆ ಮರುಕಳಿಸುತ್ತಿರುವ ದುರ್ಘಟನೆಗಳ ಸಂಖ್ಯೆ ಅಧಿಕವಾಗಲು ಕಾರಣವಾಗಿದೆ.

         ಯಾರದೋ ಮನೆಯ ಮಗಳು ಓದುವುದಕ್ಕೋ, ದುಡಿಮೆಗಾಗಿಯೋ, ಮತ್ತಿನ್ಯಾವುದೋ ಕಾರಣದಿಂದ ಅವಳು ಹೊರಹೋದವಳು ಮತ್ತೆ ಸುರಕ್ಷಿತವಾಗಿ ಮನೆಗೆ ಹಿಂದಿರುಗುವ ಭರವಸೆಯೇ ಇಲ್ಲದಾಗಿದೆ. ಯಾವ ನಿರ್ಜನ ಪ್ರದೇಶದಲ್ಲಿ, ಯಾವ ಖಾಲಿ ವಾಹನದಲ್ಲಿ, ಯಾವ ಹೊಲಗದ್ದೆಗಳಲ್ಲಿ ಹೊಂಚು ಹಾಕಿ ಕುಳಿತಿದ್ದವನ ಕೈಯಲ್ಲಿ ಈ ಅಮಾಯಕ ಹೆಣ್ಣು ಮಕ್ಕಳು ತನ್ನ ಬದುಕನ್ನು ಕಳೆದುಕೊಳ್ಳುತ್ತಾಳೋ ಗೊತ್ತಿಲ್ಲ. ನಮ್ಮೊಂದಿಗೆ ನಮ್ಮಂತೆಯೇ ಇದ್ದವನು, ಅದಾವ ಕುಕೃತ್ಯದ ಸಂಚನ್ನು ಹೆಣೆದು ಕೂತಿದ್ದಾನೋ, ಅಸಹಾಯಕ ಸ್ಥಿತಿಯನ್ನೇ ತನ್ನ ಕೃತ್ಯಕ್ಕೆ ಬಲು ಸುಲಭವಾಗಿ ಬಳಸಿಕೊಂಡು ಅಮಾಯಕರ ಮಾನ-ಪ್ರಾಣಕ್ಕೆ ಕ್ರೂರ  ಮನಸ್ಥಿತಿಯನ್ನು ಹೊಂದಿದ್ದಾನೋ ಯಾರಿಗೂ ಅರ್ಥವಾಗುವುದೇ ಇಲ್ಲ. ಹೆಣ್ಣು ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಆತ್ಮರಕ್ಷಣೆಯ ಕೌಶಲ್ಯಗಳನ್ನು ಕಲಿಸದೆ ಅವಳನ್ನು ಅಸಹಾಯಕ ಅಸಮರ್ಥಳನ್ನಾಗಿ ಮಾಡಿದ್ದೆ ಇಂದಿನ ದುಷ್ಟರ ಕೈಯೊಳಗೆ ನಲುಗುತ್ತಿರುವ ದುಸ್ಥಿತಿಗೆ ತಲುಪಲು ಕಾರಣವಾಗಿದೆ ಎಂದರೆ ತಪ್ಪಾಗಲಾರದು.
.
ನಾವಿಂದು ಎತ್ತ ಸಾಗುತ್ತಿದ್ದೇವೆಯೋ, ಜನಾಂಗದ ನಡೆ ಏನು ಸಾಧಿಸಲು ಹೊರಟಿದೆಯೋ ಅರಿಯದಾಗಿದೆ. ಇದಕ್ಕೆಲ್ಲ ಮೂಲ ಕಾರಣ ನಮ್ಮ ಶಿಕ್ಷಣ ವ್ಯವಸ್ಥೆಯ ವೈಫಲ್ಯವೇ ಎಂದೇ ಹೇಳಬೇಕು. ಇಂದಿನ ಕಾಲಮಾನದಲ್ಲಿ ನೈತಿಕ ಮೌಲ್ಯಗಳು ಅಧಃಪತನ ವಾಗಿ, ಅಪಮೌಲ್ಯಗಳೇ ರಾರಾಜಿಸುತ್ತಿವೆ. ನಮ್ಮ ಮನೆಗಳಲ್ಲಿ ಸಂಸ್ಕಾರ ಎಂಬುದು ನಮ್ಮ ಮಕ್ಕಳಿಗೆ ದಕ್ಕದೇ  ಇದ್ದುದರ ಪರಿಣಾಮವೇ ಬೇರೆಯವರ ಮನೆಯ ಹೆಣ್ಣು ಮಕ್ಕಳು ಬಲಿಯಾಗುತ್ತಿದ್ದಾರೆ. ಪರಸ್ಪರ ಸಂಬಂಧಗಳ ಬೆಸುಗೆ ಇರದೆ, ಗೌರವ ಆತ್ಮೀಯತೆ ಸಹಬಾಳ್ವೆ ಭ್ರಾತೃತ್ವ ಮುಂತಾದವುಗಳಲ್ಲಿ ಆರೋಗ್ಯಕರವಾದ ಭಯ ಇಲ್ಲದಿರುವುದೇ ಇಂದಿನ ಯುವ ಜನಾಂಗ ಹಾದಿ ತಪ್ಪಿ ಸಮಾಜ ಕಂಟಕನಾಗಿ ತನ್ನ ಮೃಗೀಯ ವರ್ತನೆಗಳನ್ನು ಪ್ರದರ್ಶಿಸಿ ಇತರರ ಬಾಳನ್ನು ನರಕಗೊಳಿಸುತ್ತಿದ್ದಾರೆ.

      ಹಿಂದೆಲ್ಲಾ ಗುರುಹಿರಿಯರು ಎಂದರೆ ಪ್ರತಿಯೊಬ್ಬರಿಗೂ ಭಯ ಗೌರವ ಇರುತ್ತಿತ್ತು. ಸಮಾಜ ಒಪ್ಪದ ಕಾರ್ಯವೆಸಗಿದಾಗ ಇಡೀ ಸಮಾಜ ಆತನನ್ನು ನೋಡುವ ದೃಷ್ಟಿಯೇ ಬೇರೆಯಾಗಿರುತ್ತಿತ್ತು. ಇದು ಮಾಡಿದವನ ಮನಸ್ಥಿತಿಯನ್ನು ಕುಗ್ಗಿಸುತ್ತಿತ್ತು. ಅದೇ ಶಿಕ್ಷೆಯಾಗಿ ಅವನು ಅದರಿಂದ ತಪ್ಪಿಸಿಕೊಳ್ಳಲು ತನ್ನ ಚಾರಿತ್ರ್ಯವನ್ನು ಕಾಪಾಡಿಕೊಳ್ಳಲು ಹೆಣಗಾಡುತ್ತಿದ್ದನು. ಆದರೆ ಇಂದು ವ್ಯವಸ್ಥೆ ಬದಲಾಗಿದೆ. ಕುಕೃತ್ಯ ಎಸಗಿದವನನ್ನೇ ಈ ವ್ಯವಸ್ಥೆ ಒಪ್ಪಿಕೊಂಡು ಆದರಿಸಿ ಗೌರವಿಸಿ ಅವರ ವ್ಯಕ್ತಿತ್ವಕ್ಕಿಂತ ವರ್ಚಸ್ಸಿಗೆ, ಹಣ ಅಂತಸ್ತುಗಳಿಗೆ ಮಣೆ ಹಾಕುತ್ತದೆ. ಅದರಿಂದ ಬಿಟ್ಟವರು ಊರಿಗೆ ದೊಡ್ಡವರು ಆಗುತ್ತಾರೆ . ಆಗ ಇದೇ ಸಮಾಜ ಅವನ ಮಾತುಗಳಿಗೆ ಜೈಕಾರ ಹಾಕುತ್ತದೆ. ಅವನು ಎಸೆಯುವ ಭಿಕ್ಷೆಗಾಗಿ ಬೊಗಸೆಯೊಡ್ಡಿ ಕಾದು ಬಿದ್ದಿರುತ್ತದೆ . ಹಾಗಾಗಿ ತಪ್ಪು ಮಾಡಿದವನಿಗೆ ಇಂದು ಪಶ್ಚಾತ್ತಾಪದ ಶಿಕ್ಷೆಯೇ ಇಲ್ಲ. ಬದಲಾಗಿ ಅವನನ್ನು ಹೊತ್ತು ಮೆರೆಸುವ ಪ್ರವೃತ್ತಿ ಅಧಿಕವಾಗುತ್ತಿದೆ. ಇಷ್ಟೆಲ್ಲದರ ನಡುವೆ ನಮ್ಮ ಕಾನೂನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನ್ಯಾಯ ಪರಾಮರ್ಶೆ ಮಾಡುವುದು ವಿಳಂಬ ಆಗುತ್ತಿರುವುದರಿಂದ ಅಪರಾಧಿಗಳು ಸುಲಭವಾಗಿ ತಪ್ಪಿಸಿಕೊಳ್ಳಲು ಅವಕಾಶ ಕೊಟ್ಟಂತಾಗುತ್ತದೆ. ಕೃತ್ಯ ಎಸಗಿದವನು ಇವನೇ ಎಂದು ಗೊತ್ತಾದ ಮೇಲೆ ಅವನನ್ನು ಆ ಕ್ಷಣವೇ ಶಿಕ್ಷಿಸುವ ಬದಲು ಸಾಕ್ಷಿಯ ನೆಪವೊಡ್ಡಿ ವರ್ಷಗಳವರೆಗೆ ಅದನ್ನು ತಳ್ಳುವುದರಿಂದ ಆರೋಪಿಯು ಪ್ರಭಾವಿಗಳ ಮೊರೆ ಹೋಗಿ ಕೇವಲ ಸಾಧಾರಣ ಶಿಕ್ಷೆ ಅಥವಾ ಆ ಕ್ಷಣವೇ ಬಿಡುಗಡೆ ಹೊಂದುವಂತಹ ಸಂದರ್ಭಗಳು ಇಂತಹ ಕೃತ್ಯಗಳು ಹೆಚ್ಚು ಹೆಚ್ಚು ನಡೆಯಲು ಪ್ರೇರೇಪಣೆ ನೀಡುತ್ತಿದೆ. ಹಾಗಾಗಿ ನೈತಿಕ ಹೆದರಿಕೆ ಇಲ್ಲದವನು ಸಮಾಜದ ಮುಂದೆ ನಿರ್ಭಿಡೆಯಿಂದ ಓಡಾಡಿಕೊಂಡಿರುವುದು ಮತ್ತೊಬ್ಬನಿಗೆ ಅದು ಪಾಠವಾಗುವ ಬದಲು ಪ್ರೇರಣೆಯಾಗುತ್ತದೆ. ಕಾನೂನು ತಪ್ಪಿತಸ್ಥ ಸಿಕ್ಕ ಕೆಲವೇ ಗಂಟೆಗಳಲ್ಲಿ ಪರಾಮರ್ಶಿಸಿ ಸಾರ್ವಜನಿಕವಾಗಿ ಅವನು ಎಸಗಿದ ಕೃತ್ಯದಷ್ಟೇ ಘೋರವಾಗಿ ಶಿಕ್ಷಿಸಿ ದಾಗ ಇತರರು ಹೆದರುವ ಮನಸ್ಥಿಯನ್ನು ತರುವತ್ತ ಇಂದಿನ ಕಾನೂನು ಮಾರ್ಪಾಡು ಆಗಬೇಕಾಗಿದೆ.
.
ಪ್ರತಿಯೊಂದು ಜೀವವು ಅದರದೆ ಆದ ಮಹತ್ವವನ್ನು ಪಡೆದು ಈ ಭೂಮಿಯಲ್ಲಿ ಅವತರಿಸಿರುತ್ತದೆ. ಆದರೆ ಅದನ್ನು ಹಾಳುಗೆಡಹುವ ಶೂದ್ರ ಶಕ್ತಿಗಳು ತಲೆಯೆತ್ತದಂತೆ ಸಮಾಜ, ಕಾನೂನು ನೈತಿಕ ಸಂಸ್ಕಾರಗಳು ವ್ಯಕ್ತಿಯನ್ನು ರೂಪಿಸಬೇಕು ಇಂದಿನ ಅಗತ್ಯವಾಗಿದೆ. ಘಟನೆ ಎಲ್ಲೇ ನಡೆಯಲಿ ಅದಕ್ಕೆ ಇಡೀ ಮಾನವ ಸಂಕುಲವೇ ಅತೀ ಶೀಘ್ರವಾಗಿ ಮಿಡಿಯಬೇಕು. ದುಷ್ಟ ಕೃತ್ಯಗಳು ನಡೆಯದಂತೆ ತನ್ನ ಸುತ್ತ ತಾನೇ ಕಾವಲಾಗಿ ನಿಂತು ರಕ್ಷಿಸಿಕೊಳ್ಳಬೇಕು. ಅನಿವಾರ್ಯತೆ ಅಸಹಾಯಕತೆಗಳು ಅಮಾನವೀಯ ಕೃತ್ಯಗಳು ನಡೆಯಲು ಸುಲಭದ ತುತ್ತಾಗದಂತೆ ಎಚ್ಚರವಹಿಸಬೇಕು. ಒಬ್ಬಂಟಿತನದ ಬದಲಿಗೆ ಸಂಘ ಜೀವನ, ಪರಸ್ಪರ ನಂಬಿಕೆ, ಬಹುಬೇಗ ಸ್ಪಂದನೆಯ ಗುಣಗಳನ್ನು ಬೆಳೆಸಿಕೊಂಡು ಸ್ವಸ್ತ ಸಮಾಜದ ನಿರ್ಮಾಣದಲ್ಲಿ ಭಾಗಿದಾರರಾದಾಗ ಸಮಾಜ ತಗ್ಗಿಸುವ ಘಟನೆಗಳು ನಡೆದಂತೆ ಜಾಗೃತರಾದಾಗ ನಾವೆಲ್ಲರೂ ನೆಮ್ಮದಿಯಿಂದ ಬದುಕಬಹುದಾಗಿದೆ.

.

-ಅಮು ಭಾವಜೀವಿ,  ದಾವಣಗೆರೆ ಜಿಲ್ಲೆ

3 Responses

  1. ನಯನ ಬಜಕೂಡ್ಲು says:

    ನೈಸ್ . ಮನಸ್ಸು ಗಳನ್ನೂ ಕೆಟ್ಟ ವಿಚಾರಗಳ ವಿರುದ್ಧ ಜಾಗೃತ ಗೊಳಿಸುವಂತಹ ಬರಹ . ನಿಜ , ಇಂದಿನ ಸಮಾಜ ವ್ಯವಸ್ಥೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಪರಸ್ಪರ ಸ್ಪಂದಿಸುತ್ತಾ ಹೆಜ್ಜೆ ಇರಿಸಬೇಕಾಗಿದೆ.

  2. Shankari Sharma says:

    ಮನ ಜಾಗ್ರತಗೊಳಿಸುವ ಲೇಖನ…ಚೆನ್ನಾಗಿದೆ.

Leave a Reply to Anonymous Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: