ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 1

Share Button

ಪೀಠಿಕೆ:
ನಮ್ಮ ಕುಶಲ ಹಾಸ್ಯ ಪ್ರಿಯರ ಸಂಘದ ವತಿಯಿಂದ ಪ್ರವಾಸವೊಂದನ್ನು ಆಯೋಜಿಸುವ ಹೊಣೆಯಿಂದ ಸುಳ್ಯದಲ್ಲಿರುವ ತಮ್ಮನಿಗೆ ಫೋನಾಯಿಸಿದೆ. ಮಡಿಕೇರಿಯಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಗಾಗಿ. ಆಗಲೇ ತಿಳಿಸಿದ ವಿಷಯವಾಗಿತ್ತು, ಅವನು ಹೋಗುತ್ತಿರುವ ಈಶಾನ್ಯ ಭಾರತದ ಪ್ರವಾಸ. “ನೀನೂ ಯಾಕೆ ಬರಬಾರದು, ಸೀಟಿದೆಯಾ ಎಂದು ವಿಚಾರಿಸುವೆ” ಎಂದಾಗ ಮನಸ್ಸು ಖುಷಿ ಗೊಂಡಿದ್ದು ಸುಳ್ಳಲ್ಲ. ಪ್ರವಾಸದ ವಿವರಗಳಂತೂ ತುಂಬಾ ಆಕರ್ಷಕವಾಗಿದ್ದುವು. ದೇಗುಲ ದರ್ಶನಗಳೊಂದಿಗೆ ಪ್ರಕೃತಿ ವೀಕ್ಷಣೆಯ  ಅವಕಾಶಗಳೂ ಹೇರಳವಾಗಿದ್ದುವು.  ಮನೆಯವರ ಅನುಮತಿ ದೊರೆತೇ ದೊರೆಯುವುದೆಂಬ ಭರವಸೆಯೊಂದಿಗೆ ತಕ್ಷಣವೇ ಸೀಟು ಕಾದಿರಿಸಲು ಸೂಚಿಸಿದರೂ ‘ಸೀಟ್ ಫುಲ್’ ಎನ್ನುವ ಮರುತ್ತರ ದೊರೆತಾಗ ಉತ್ಸಾಹದ ಬೆಲೂನು ಠುಸ್ ಎನ್ನದಿರುತ್ತದೆಯೇ? ತಮ್ಮನ ಎಡೆಬಿಡದ ಪ್ರಯತ್ನದಿಂದ ಸೀಟು ದೊರೆತಾಗ ಸ್ವಲ್ಪ ನೆಮ್ಮದಿ. ಮುಂದಿನ ಹಂತವಾದ ಸೀಟು ಕಾದಿರುಸುವಿಕೆಯ ಮೊತ್ತವನ್ನೂ  ಕಳುಹಿಸಿಯಾಯಿತು. ನಮ್ಮ ಸಹೃದಯೀ ಬಂಧುಗಳಾದ ಹಾಗೂ ಪ್ರವಾಸಾನುಭವಿಗಳಾದ, ಮೈಸೂರಿನ ಹೇಮಮಾಲಾ ಅವರ ಪೂರ್ಣ ಮಾರ್ಗದರ್ಶನವೂ ನಮಗೆ ದೊರೆತುದು ನಿಜಕ್ಕೂ ಸಂತಸದ ವಿಷಯ. ತಮ್ಮನ ಐದು ಜನರ ಕುಟುಂಬದ ಸದಸ್ಯರೊಡನೆ ನಮ್ಮಿಬ್ಬರದೂ ಸೇರಿ ಏಳು ಜನರ ಗುಂಪು ತಯಾರಾಯಿತು. ಪುರಿ-ಡಾರ್ಜಿಲಿಂಗ್ ಪ್ರವಾಸದ ವಾಟ್ಸಾಪ್ ಗುಂಪಿನಲ್ಲೂ ನಮ್ಮ ಸೇರ್ಪಡೆಯಾಯಿತು.

ಸಿದ್ಧತೆ:
‘Travel 4 U’ ಎಂಬುದು ಪ್ರವಾಸಗಳನ್ನು ಏರ್ಪಡಿಸುವ ಸಂಸ್ಥೆ. ನಮ್ಮ ಈ 11ದಿನಗಳ ಪ್ರವಾಸದ ಹೊಣೆಯನ್ನು ಹೊತ್ತಿದ್ದ ಈ ಸಂಸ್ಥೆ ಹಾಗೂ ಈ ಪ್ರವಾಸವನ್ನು ಆಯೋಜಿಸಿ, ಸಮಾನ ಮನಸ್ಕರನ್ನು ಒಂದೆಡೆ ಸೇರಿಸಿದವರು ಮಂಗಳೂರಿನ ಮರುವಳ ನಾರಾಯಣ ಭಟ್ ಇವರು.  ಪ್ರವಾಸದ ಗುಂಪಿನಲ್ಲಿ ಪುತ್ತೂರಿನಿಂದ ನನ್ನ ಗೆಳತಿಯರಿಬ್ಬರು ಇರುವುದು ತಿಳಿದು, ಅವರಿಂದಲೂ ತಯಾರಿಗಾಗಿ ಮಾಹಿತಿಗಳನ್ನು ಸಂಗ್ರಹಿಸಲಾಯಿತು.  ಪುಟ್ಟ ಪುಟ್ಟ ಪ್ರವಾಸಗಳನ್ನು ಸಂಘಟಿಸಿ ಖುಷಿ ಪಡುವುದು ನನ್ನ ಹವ್ಯಾಸವಾಗಿದ್ದರೂ, ಬೇರೆಯೇ ಗುಂಪುನಲ್ಲಿ ಒಂದಾಗಿ ಹೋಗುವ ಸಂತಸ ಇನ್ನೊಂದು ತರಹ. ಎಪ್ರಿಲ್-ಮೇ ತಿಂಗಳುಗಳಲ್ಲಿ ಅಮೆರಿಕಾದಲ್ಲಿ  ಪ್ರಕೃತಿಯ ತುಂಬು ವೈಭವದ ಕಾಲ. ಇದೇ ಸಮಯಕ್ಕೆ   ಅಮೇರಿಕಾದಲ್ಲಿರುವ ಮಗಳ ಕರೆ, ಮೇ ತಿಂಗಳ ಮೊದಲನೇ ವಾರವೇ ಅಲ್ಲಿಗೆ ಬರಲು. ಆದರೆ ಅನಾಯಾಸವಾಗಿ ಸಿಕ್ಕಿದ ಈ  ಸದವಕಾಶವನ್ನು ಕಳೆದುಕೊಳ್ಳಲು ಇಷ್ಟವಾಗದೆ, ಅಲ್ಲಿಗೆ ಹೋಗುವ ದಿನವನ್ನೂ ಮುಂದೂಡಲಾಯಿತು.

ಹೋಗುವ ದಿನ ಹತ್ತಿರವಾದಂತೆ ಅತೀ ಅಗತ್ಯದ ಸಾಮಾನುಗಳನ್ನು ಪ್ಯಾಕ್ ಮಾಡುವ ತುರಾತುರಿ. ಲಗೇಜ್ ಭಾರ ಕನಿಷ್ಟವಾಗಿರುವಂತೆ  ಇರುವುದೂ ಮುಖ್ಯ ವಾಗಿತ್ತಲ್ಲಾ.ಮೇ8ರಂದು ಎಲ್ಲರೂ ಭುವನೇಶ್ವರ ಸೇರುವುದೆಂದು ನಿಗದಿಯಾಗಿತ್ತು. ಮೇ ಮೊದಲನೇ ದಿನವೇ ಅತ್ಯಂತ ಭೀಕರ ಚಂಡಮಾರುತ ಫನಿ ಅದೇ ಪ್ರದೇಶಕ್ಕೆ ಅಪ್ಪಳಿಸಿದ ಸುದ್ದಿ ನಿಜಕ್ಕೂ ಭಯಾನಕವಾಗಿತ್ತು. ಅಲ್ಲಿಯ ಜನಜೀವನ ಅಸ್ಥವ್ಯಸ್ಥವಾದಂತೆಯೇ ನಮ್ಮ ಪ್ರವಾಸದ ಸ್ಥಿತಿಯೂ ಡೋಲಾಯಮಾನವಾಗಿತ್ತು. ಪ್ರತಿಯೊಬ್ಬರಿಗೂ ಆತಂಕವಿದ್ದರೂ ದೇವರ ಮೇಲೆ ನಂಬಿಕೆ ಇರಿಸಿ ಕಾದದ್ದಂತೂ ನಿಜ. ಜೊತೆಗೇ ನಮ್ಮ ಸುಳ್ಯ ಗುಂಪಿನ ರೂವಾರಿ, ರಾಮಚಂದ್ರ ಶರ್ಮರ ಹಿರಿಯಣ್ಣನವರು ದೈವಾಧೀನರಾಗಿದ್ದರಿಂದ ಅವರೆಲ್ಲರೂ ಕೊನೆಯ ಕ್ಷಣದಲ್ಲಿ ತಮ್ಮ ಪ್ರವಾಸವನ್ನು ರದ್ದುಗೊಳಿಸಬೇಕಾದ ಪರಿಸ್ಥಿತಿ ಬಂದುದು ಕೂಡಾ ಮನಕ್ಕೆ ಬೇಸರವನ್ನು ತಂದಿತ್ತು. ಇಂತಹ ಆತಂಕಗಳ ನಡುವೆಯೇ ಪ್ರವಾಸಕ್ಕಾಗಿ ಲಗೇಜ್ ಜೋಡಣೆ ಮುಂದುವರಿದಿತ್ತು. ಜೊತೆಗೇ ಈ ಪ್ರವಾಸದ ಲೀಡರ್ ಗಳಾದ ನಾರಾಯಣಣ್ಣ ಮತ್ತು ಬಾಲಣ್ಣನವರ ತಲೆ ತಿಂದದ್ದೂ ಆಯ್ತು. ಅಂತೂ ಭುವನೇಶ್ವರಕ್ಕೆ ಹೊರಡುವ ವಿಮಾನ ಹಾಗೂ ರೈಲುಗಳು ಮೇ 6ರಿಂದ ಪ್ರಾರಂಭಗೊಂಡ ಬಗ್ಗೆ ವಿಷಯ ತಿಳಿದು ಮನಸ್ಸು ನಿರಾಳ.

ಪುತ್ತೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ, ಅಲ್ಲಿಂದ ಮುಂದೆ ಭುವನೇಶ್ವರಕ್ಕೆ ವಿಮಾನದಲ್ಲಿ ಸೀಟು ಮೊದಲೇ ಕಾದಿರಿಸಿದ್ದರಿಂದ ವಿಶೇಷ ಆತಂಕ ಇರಲಿಲ್ಲ.  ತಾ6ಕ್ಕೆ ಪುತ್ತೂರಿನಿಂದ ಬೆಂಗಳೂರು ತಲಪಿ, ತಾ8ಕ್ಕೆ ಬೆಂಗಳೂರಿನಿಂದ  ನಮ್ಮ ಜೊತೆಗೆ ಬಂಧುಗಳಾದ ಗೌರಿಯವರೊಡಗೂಡಿ ಮಧ್ಯಾಹ್ನ 2ಗಂಟೆಗೆ ಭುವನೇಶ್ವರದಲ್ಲಿ ವಿಮಾನದಿಂದಿಳಿದಾಗ ಮನಸ್ಸು ಸಂಭ್ರಮದಿಂದ ತುಂಬಿತ್ತು. ನಮಗಾಗಿ Travel 4U ನ, ಆಗ ಅಪರಿಚಿತರಾಗಿದ್ದ ಗಣೇಶಣ್ಣ, ಅವರ ಬ್ಯಾನರ್ ಹಿಡಿದು ನಿಂತು ಪ್ರೀತಿಯಿಂದ ಸ್ವಾಗತಿಸಿ, ನಮ್ಮೆಲ್ಲರ ಸರಂಜಾಮುಗಳನ್ನು ಜೋಪಾನವಾಗಿ ಅವರ ವಾಹನದಲ್ಲಿರಿಸಿ ಅಲ್ಲಿಯ ಹೋಟೆಲಿಗೆ ಕರೆದೊಯ್ದರು. ದಾರಿಯಲ್ಲಿ ಕಂಡ ದೃಶ್ಯಗಳು ಮಾತ್ರ ಮನಕದಡುವಂತಿದ್ದವು. ವಾರ ಮೊದಲೇ ಆಗಮಿಸಿದ್ದ ಭೀಕರ ಚಂಡಮಾರುತದ  ರುದ್ರನರ್ತನದ ಸ್ಪಷ್ಟ ಹೆಜ್ಜೆಗಳು ಕಣ್ಣಿಗೆ ರಾಚುತ್ತಿದ್ದವು.

ಬೃಹದಾಕಾರದ ಟವರ್ ಗಳಿಂದ ಹಿಡಿದು ಪುಟ್ಟ ಗಿಡಮರಗಳನ್ನೂ ಬಿಡದೆ ನುಚ್ಚು ನೂರಾಗಿಸಿತ್ತು. ವಿದ್ಯುತ್ ಕಂಬ, ತಂತಿಗಳೆಲ್ಲಾ ಅಸಹಾಯಕತೆಯಿಂದ ಧರೆಗುರುಳಿದ್ದವು. ಇಡೀ ಪಟ್ಟಣವೇ ವಾರದಿಂದ ವಿದ್ಯುತ್, ನೀರಿಲ್ಲದೆ ಕಂಗೆಟ್ಟಿತ್ತು. ಟಿ.ವಿ.ಯಲ್ಲಿ ಇಂತಹ ದೃಶ್ಯಗಳನ್ನು ವೀಕ್ಷಿಸುವ ಅನುಭವ ಹಾಗೂ ನೈಜ ದರ್ಶನದ ಅಜ ಗಜಾಂತರದ ವ್ಯತ್ಯಾಸ ಮನದರಿವಿಗೆ ಬಂದು ಕಣ್ಣು ತೇವಗೊಂಡಿತ್ತು. ಈ ಸಮಯದಲ್ಲಿ ನಾವು ಪ್ರವಾಸದ ಆನಂದ ಸವಿಯ ಹೊರಟಿರುವುದು ಸರಿಯೇ ಎಂದು ನನಗೆ ನಾನೇ ಪ್ರಶ್ನಿಸಿಕೊಂಡುದು ಮಾತ್ರ ಖಂಡಿತಾ ಸುಳ್ಳಲ್ಲ. ನಮ್ಮ ವಾಹನ  ಹೋಟೆಲ್ ಸಫೈರ್ ಮುಂದೆ  ನಿಂತಾಗ ಮನದ ದುಗುಡವನ್ನೆಲ್ಲಾ ಕಳಚಿ, ತಾಳ ಹಾಕುತ್ತಿದ್ದ ಹೊಟ್ಟೆಗೆ ಮುಂದೆ ಸ್ವಲ್ಪ ಹೊತ್ತಿನಲ್ಲಿ ಸಿಗಬಹುದಾದ ಊಟದ  ಚಿಂತನೆಗೆ ತೊಡಗಿದ್ದು ಸತ್ಯ!

(ಮುಂದುವರಿಯುವುದು..)

-ಶಂಕರಿ ಶರ್ಮ, ಪುತ್ತೂರು.

7 Responses

 1. ನಯನ ಬಜಕೂಡ್ಲು says:

  ಹಂತ ಹಂತವಾಗಿ ಪ್ರವಾಸದ ಪ್ರತಿಯೊಂದು ಮಜಲನ್ನು ನೀವು ವಿವರಿಸೋ ರೀತಿ ಸೊಗಸಾಗಿದೆ , ಮುಂದೇನಾಯಿತು ಅನ್ನೋ ಕುತೂಹಲ ಮೂಡಿಸುತ್ತೆ . very nice madam .
  ಒಂದು ಸಾಲಲ್ಲಿ ನಮ್ಮ ಹೇಮಕ್ಕನ ಬಗ್ಗೆ ಅಂದ್ರಿ ,
  Yes , very nice and great lady our Hemakka .

 2. ವಿಜಯಾಸುಬ್ರಹ್ಮಣ್ಯ , says:

  ಶಂಕರಿ ಶರ್ಮ…., ಚೆನ್ನಾಗಿದೆ ಪ್ರವಾಸ ಕಥನ.

 3. Shruthi Sharma says:

  ಕಥನ ಚಿತ್ರವಾಗಿದೆ. ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದೇನೆ

 4. ASHA says:

  ಚೆನ್ನಾಗಿ ಬರೆದಿರುವಿರಿ ನಾನು ಅಲ್ಲಿತನಕ ಬಂದೆನೊ ಎನ್ನುವ ಭಾಸ ವಾಯಿತು .ಮಮುಂದಿನ ಸಂಚಿಕೆಗೆ ಕಾಯುವೆನು .ಸಹೋದರಿ

 5. Shankari Sharma says:

  ಓದಿದ, ಮೆಚ್ಚುಗೆ ವ್ಯಕ್ತಪಡಿಸಿದ ಸುರಗಿ
  ಬಂಧುಗಳಿಗೆಲ್ಲರಿಗೂ ಕೃತಜ್ಞತೆಗಳು.

 6. Anonymous says:

  ಚಂದವಾದ ನಿರೂಪಣೆ ನಾವೂ ಪ್ರವಾಸಿಗಳಾದಂತೆ ಅನ್ನಿಸಿತು. ಇನ್ನೂ ಲೇಖನಗಳು ಬರಲಿ.
  ದೇವಾಲಯಗಳ ವಿವರಣೆ ಬರಲಿ.
  ಧನ್ಯವಾದಗಳು.

 7. ಜಯಲಕ್ಷ್ಮಿ says:

  ಚೆನ್ನಾಗಿದೆ.

Leave a Reply to ಜಯಲಕ್ಷ್ಮಿ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: