ಗುಟ್ಟೊಂದ ಹೇಳುವೆ ಪುಟಾಣಿ ಮಕ್ಕಳೆ…

Share Button


ಒಂದು ಪುಟ್ಟ ಮಗು ಕಾಯಿಲೆ ಬಿದ್ದಾಗ ಅದರ ಜೊತೆಗೆ ಇಡೀ ಕುಟುಂಬವೇ ಸಂಕಟಪಡುತ್ತದೆ.  ಆ ಮಗುವಿನ ತಾಯಿಯೆನ್ನುವ ದೇವರ ಎದೆ ಬಡಿತ ಎಲ್ಲಾ ಎಲ್ಲೆಯನ್ನು  ಮೀರಿ , ಮಗುವಿಗಾಗಿ ತುಡಿಯುತ್ತದೆ. ರೋಗಗ್ರಸ್ತ ಮಗು , ರೋಧಿಸುತ್ತಿರುವ ತಾಯಿ, ಇಬ್ಬರನ್ನೂ ಒಂದಷ್ಟು ಸೂಕ್ಷ್ಮವಾಗಿ ” ಹ್ಯಾಂಡಲ್” ಮಾಡುವುದು ಮಕ್ಕಳ ತಜ್ಞ ವೈದ್ಯರ ಮುಂದಿರುವ   ಕಠಿನ ಸವಾಲು. ಆ  ತಾಯಿಯ ಸಂವೇದನೆ ಅವಳನ್ನು ತನ್ನ ಕಂದಮ್ಮ ಹುಷಾರಾಗುವ ತನಕ ಕುಂತಲ್ಲಿ ಕೂರಲು ಬಿಡದು. ಆ ತಾಯಿಯ ವಿಶ್ವಾಸವನ್ನು  ಗೆಲ್ಲಲಾಗದಿದ್ದರೆ,  ಚಿಕಿತ್ಸೆಯೆಂದೂ ಫಲಕಾರಿಯಾಗದು.  ನಮ್ಮ ವೈದ್ಯಕೀಯ ಜ್ಞಾನವೆಲ್ಲ ನಗಣ್ಯವಾಗಿ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗುವುದು

ಭಾರತೀಯರು ತಮ್ಮ ಮಲ, ಮೂತ್ರದ ಟೈಮಿಂಗ್ಸ್, ಬಣ್ಣ ಮತ್ತು ಲಕ್ಷಣಗಳ ಬಗ್ಗೆ ಅಗತ್ಯಕ್ಕಿಂತಲೂ ಜಾಸ್ತಿ ತಲೆಕೆಡಿಸಿಕೊಳ್ಳುತ್ತಾರೆ.  ಸ್ವಲ್ಲ ಏರುಪೇರಾದರೂ ಔಷಧಿಯ ಮೊರೆ ಹೋಗುತ್ತಾರೆ. ಇಂದೊಬ್ಬಳು ತಾಯಿ ತನ್ನ ಎರಡು ತಿಂಗಳ ಮಗುವಿನ  ಜೊತೆ ಊರೆಲ್ಲಾ ಅಲೆದಾಡಿದ ಮೇಲೆ ನನ್ನ OPDಯಲ್ಲಿ ಹಾಜರಾದಳು. ತಾಯಿಯ ಹುಬ್ಬುಗಳಲ್ಲಿ ಚಿಂತೆಯ ಕಾರ್ಮೋಡ ಗಂಟು ಕಟ್ಟಿದ್ದರೆ,  ಅವಳ ಕಂಕುಳಲ್ಲಿ ನಲಿದಾಡುವ ಪುಟ್ಟ ಕಂದಮ್ಮಳ ಮೊಗದಲ್ಲೊಂದು ಮಂದಹಾಸವಿತ್ತು.            ” ಡಾಕ್ಟರೇ , ಹತ್ತು ದಿನದಿಂದ ಮೋಷನ್ ಲೂಸಾಗಿ ಹೊಗ್ತಾ ಇದೆ ..ದಿನಕ್ಕೆ ಏಳೆಂಟು ಬಾರಿ ಮಾಡ್ತಾಳೆ, ತುಂಬಾ ಕಡೆ ತೋರಿಸಿದ್ವಿ ,  ಏನು ಔಷಧಿ ಕೊಟ್ಟರೂ ಸರಿಯಾಗ್ತಾ ಇಲ್ಲ.. ” ಎಂದೆನ್ನುತ  ಮನಸ್ಸಿನ ದುಗುಡವನ್ನು ಹೊರಚೆಲ್ಲುತ್ತಾ ತನ್ನ ಕೈಚೀಲದಿಂದ ನಾಲ್ಕೈದು ಚಿಕ್ಕ ಪುಟ್ಟ ಬಾಟಲಿಗಳನ್ನು ಮೇಜಿನ ಮೇಲೆ ಸುರಿದಳು. ಮಾರ್ಕೆಟಿನಲ್ಲಿದ್ದಷ್ಟೂ ಶಕ್ತಿಶಾಲಿ Antibiotics  ಆಗಾಗಲೇ ಮಗುವಿನ ಹೊಟ್ಟೆಯೊಳಗೆ ಸೇರಿತ್ತು‌. ವಿನಾಕಾರಣ ನೀಡಲ್ಪಟ್ಟ ಔಷಧಿಗಳ ನಡುವೆಯೂ ಮಗು ನಿತ್ರಾಣಗೊಳ್ಳದೆ ನಲಿದಾಡಿಕೊಂಡಿದ್ದ ಪರಿ ನನ್ನನ್ನು ಅಚ್ಚರಿಗೊಳಿಸಿತು. ಆ ಮಗುವಿನ  ಅಸಲಿ ಕಾಯಿಲೆ ಯಾವುದೆಂದು  ನನಗಾಗಲೇ ಅರ್ಥವಾಗಿತ್ತು. ನನಗೆ ಮಾತ್ರ ಅರ್ಥವಾದರೆ ಏನು ಸುಖ?, ಮಗುವಿನ ಅಮ್ಮ ಅಪ್ಪನನ್ನು  Convince ಮಾಡಬೇಕಲ್ಲ!. ಅದು ಆನೆಗೆ ಚಡ್ಡಿ ಹೊಲಿಸಿದಷ್ಟೇ ತ್ರಾಸದಾಯಕ ಕೆಲಸ.

ಅವರನ್ನು ಸಮಾಧಾನಿಸಲು  ಸ್ವಲ್ಲ ವಾತಾವರಣವನ್ನು ತಿಳಿಗೊಳಿಸಬೇಕಾಗಿತ್ತು . ವಸ್ತುನಿಷ್ಟವಾಗಿ ವಿಷಯವನ್ನು  ಹೇಳಿ , ಆ ತಾಯಿಗೆ ಅರ್ಥೈಸಲಾಗದೆಂದು ಮಾತಿನ ದಾಟಿಯನ್ನು ಬದಲಿಸಿದೆ. ” ಸರಿ ಅಕ್ಕ , ನೀವೇ ಹೇಳಿ ಮಗು ದಿನಕ್ಕೆ ಎಷ್ಟು ಬಾರಿ ಮೋಷನ್ ಮಾಡುವಂತೆ ಔಷಧಿ ಬರೆಯಲಿ , ಅದು ಗಟ್ಟಿಯಾಗಿರಬೇಕಾ ? ನೀರಿನಂತಿರಬೇಕಾ? “ ಎಂದು ಚೆಂಡನ್ನು ಅವರ ಅಂಗಳಕ್ಕೆ ಎಸೆದು ಮಗುವನ್ನು ಕೈಗೆತ್ತಿಕೊಂಡೆ.  ವಯಸ್ಸಿಗೆ ಸರಿಯಾದ ತೂಕ ಮತ್ತು ಬೆಳವಣಿಗೆಯಿದ್ದ ಆರೋಗ್ಯವಂತ ಮಗು ಅದಾಗಿತ್ತು. ಒಂದಿಷ್ಟೂ ಕೊಸರಾಡದೆ ಅದರ ಪುಟಾಣಿ ಬೆರಳುಗಳು ನನ್ನ ಮುಖದ ಮೇಲೆ ಹರಿದಾಡಿದವು. ಪುಟಾಣಿ ಮಕ್ಕಳನ್ನು ಎತ್ತಿಕೊಂಡಾಗ ಮನಸ್ಸು ಬಹಳ ನಿರಾಳವಾಗಿ , ಚಿಂತೆಗಳೆಲ್ಲ ಮಾಯವಾಗುತ್ತದೆ. ಪ್ರಪಂಚದ ಯಾವ ಯೋಗ , ಪ್ರಾಣಯಾಮಕ್ಕೂ ಈ ಪರಿಯ ಶಕ್ತಿಯಿರಲಿಕ್ಕಿಲ್ಲ.

ನನ್ನ ಪ್ರಶ್ನೆಯಿಂದ ತಬ್ಬಿಬ್ಬಾದ ಅಪ್ಪ ಅಮ್ಮ ಮುಖ ಮುಖ ನೋಡಿಕೊಂಡರು.   ನಾನೀಗ ಸಮಯ ನೋಡಿ ಸಿಕ್ಸರ್ ಬಾರಿಸಬೇಕಿತ್ತು. ಕ್ರಿಕೆಟಿನಂತೆ ಮಾತು ಕಥೆಯಲ್ಲಿ ಕೂಡ ಇನ್ನೊಬ್ಬರನ್ನು Convince ಮಾಡಲು ಟೈಮಿಂಗ್ ಅತ್ಯಗತ್ಯ. ” ನಿಮ್ಮ ಮಗುವಿಗೆ ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲ. ಅದು ಅದರ ವಯಸ್ಸಿಗೆ ಸರಿಯಾದ ಬೆಳವಣಿಗೆಯೊಂದಿಗೆ ಆರೋಗ್ಯವಾಗಿದೆ. ಎಲ್ಲಾ ಔಷಧಿಗಳನ್ನು  ಈಗಿನಿಂದಲೇ ನಿಲ್ಲಿಸಿ “ ಎಂದು ಮಗುವನ್ನು ಎತ್ತಿ ಮತ್ತೆ ಅವರ ಮಡಿಲಿಗಿಟ್ಟೆ.

ತಮ್ಮ ಮಗು ಕೂಡಾ ಬೇರೆಲ್ಲಾ ಮಕ್ಕಳಂತೆ ಆರೋಗ್ಯವಾಗಿದೆಯೆಂದು ವೈದ್ಯರ ಬಾಯಲ್ಲಿ ಬರುವ ಸಾಲುಗಳು, ಮೇ ತಿಂಗಳ ಮೊದಲ ಮಳೆಯಂತೆ ಎಲ್ಲಾ ತಾಯಿಯರ ಹೃದಯಕ್ಕೆ ತಂಪೆರೆಯುತ್ತವೆ.   ಅಮ್ಮನ‌ ಮುಖದಲ್ಲಿ ಒಂದಷ್ಟು ಪ್ರಶಾಂತತೆ ಕಂಡರೂ ಕಣ್ಣುಗಳಲ್ಲಿ ಸಾವಿರ ಪ್ರಶ್ನೆಗಳಿದ್ದಂತಿತ್ತು. ನಾನಗೀಗ ಆ ತಾಯಿಗೆ ಎಲ್ಲವನ್ನೂ ಎಳೆ ಎಳೆಯಾಗಿ  ಬಿಡಿಸಿ ಹೇಳುವ ಸಮಯ.   ತಾಯಿಯ ಹಾಲು ಮತ್ತೆ ತನ್ನ ಜಠರದ ಬೆಳವಣಿಗೆಯ ಅನುಸಾರವಾಗಿ ನವಜಾತ ಶಿಶುಗಳ ಮೋಷನಿನ ಬಣ್ಣ, ಗಟ್ಟಿತನ ಮತ್ತು frequency ನಿರಂತರವಾಗಿ ಬದಲಾಗುತ್ತಿರುತ್ತದೆ. ಮಗು ಹುಟ್ಟಿದ ಒಂದೆರಡು ದಿನ ಕಡು ಕಪ್ಪಾಗಿ ಪೇಸ್ಟ್ ಮಾದರಿಯಲ್ಲಿರುವ ಮಲ, ತದನಂತರ ಹಸಿರಾಗಿ .. ಹಳದಿಯಾಗಿ ಬದಲಾಗುತ್ತದೆ.

ಪ್ರತಿ ಬಾರಿ ಹಾಲು ಕುಡಿದಾಗಲೂ ಮಲ ವಿಸರ್ಜನೆಯಾಗುವುದು ಕೂಡ ಸಹಜ ಪ್ರಕ್ರಿಯೆ. ( exaggerated gastrocolic reflex). ಮೊದಲ ತಿಂಗಳಲ್ಲಿ 10-15 ಬಾರಿ ಮಲವಿಸರ್ಜನೆ ಮಾಡುವ ಹಸುಗೂಸುಗಳು ತದನಂತರ ತಾಯಿಯ ಹಾಲು ಮತ್ತು ತನ್ನ ಜಠರದ ಗುಣಕ್ಕೆ ಅನುಗುಣವಾಗಿ ತಮ್ಮ ಮಲವಿಸರ್ಜನೆಯ frequency ನಿಗದಿಯಾಗುತ್ತದೆ. ನಾಲ್ಕು ದಿನಕ್ಕೆ ಒಂದು ಸಲ ಮಾತ್ರ ಮಾಡುವುದರಿಂದ ಹಿಡಿದು ದಿನಕ್ಕೆ ಹತ್ತಾರು ಬಾರಿ ಮಾಡುವುದು ಕೂಡ perfectly Normal. ಎಂದು  ಮಗುವಿನ ಕೆನ್ನೆ ಹಿಂಡುತ್ತಾ ತಾಯಿಯ ಮುಂದೆ ಈ  ವಿಚಾರಗಳನ್ನು  ಮಂಡಿಸಿದೆ. ವೃತ್ತಿಜೀವನದ ಗುರುಗಳೆಲ್ಲ ನೆನಪಿನಂಗಳದಲ್ಲಿ ಮಿಂಚಿ ಮಾಯವಾದರು.

Antibiotics ಎರಡು ಅಲಗಿನ ಕತ್ತಿ , ಎಷ್ಟು ಉಪಯುಕ್ತವೋ ಅನಗತ್ಯವಾಗಿ ನೀಡಿದಲ್ಲಿ ಅಷ್ಟೇ ಅಪಾಯಕಾರಿ.  ಕಳೆದ ಒಂದು ದಶಕದಲ್ಲಿ ಮಗು ಕೆಮ್ಮಿದಕ್ಕೆ ,  ಕಕ್ಕಿದಕ್ಕೆ ಸ್ವಲ್ಲ ಅಗತ್ಯಕಿಂತ  ಜಸ್ತಿ  ನಕ್ಕಿದಕ್ಕೂ   antibiotics ಬಳಕೆಯಾಗಿವೆ.  ಅವುಗಳು ಬೆಳೆಯುವ ಮಕ್ಕಳ ಮೇಲಿನ ಮಾಡಿರಬಹುದಾದ ದುಷ್ಪರಿಣಾಮಗಳು ಇನ್ನೂ‌  ಬಳಕಿಗೆ ಬಂದಿಲ್ಲ.   ಮಗುವಿನ ಜಠರದಲ್ಲಿ‌, ಚರ್ಮದಲ್ಲಿ ಅಗಾಧವಾದ ಸಂಖ್ಯೆಯ (100 trillion)  ನಮಗೆ ಉಪಯುಕ್ತವಾದ ಸ್ನೇಹಿ ಬ್ಯಾಕ್ಟೀರಿಯಾಗಳಿವೆ. ಅವುಗಳು  ನಮಗೆ ಅಗತ್ಯವಾದ ವಿಟಾಮಿನ್ ಗಳ ಉತ್ಪಾದನೆಯ ಜೊತೆಗೆ ನಮ್ಮ ದೇಹದೊಳಗೆ ಮಾರಕ ರೋಗಗಳನ್ನು ತರುವ ಬ್ಯಾಕ್ಟೀರಿಯಾಗಳು ಬೆಳೆಯದಂತೆ ಮಾಡುತ್ತವೆ. ಗುಬ್ಬಚ್ಚಿಯ ಮೇಲೆ ಬ್ರಹ್ಮಾಸ್ತ್ರ ಹೂಡುವಂತೆ  ಅಡ್ಡಾದಿಡ್ಡಿ antibiotics ಬಳಕೆಯಿಂದ ನಮ್ಮ ದೇಹದಲ್ಲಿಯ friendly microbes ಮಣ್ಣುಮುಕ್ಕಿ ಅದರ ಜಾಗವನ್ನು ಅಪಾಯಕಾರಿ ಜಂತುಗಳು ಅಕ್ರಮಿಸಿಳ್ಳುತ್ತವೆ. ಹಸಿವೆ ಮಾಯವಾಗುತ್ತದೆ , ನಿತ್ರಾಣ ಕಾಡುತ್ತದೆ. ಬಿಡ್ಜ್ ಕೋರ್ಸಗಳಿಂದ  ಗಲ್ಲಿ ಗಲ್ಲಿಗಳಲ್ಲಿ ಹುಟ್ಟುತ್ತಿರುವ ಕೆಂಪು ಬೋರ್ಡಗಳು  ಯ್ಯಾಂಟಿಬಯಾಟಿಕ್ಸನ್ನು ಗೋಬಿಮಂಚೂರಿಯ ರೀತಿಯಲ್ಲಿ ಲಗಾಮಿಲ್ಲದೆ ಹಂಚುತ್ತಿದೆ. ಮಕ್ಕಳ ಚಿಕಿತ್ಸೆಯಲ್ಲಿ / ಎಲೋಪಥಿಯಲ್ಲಿ ತರಬೇತಿಯನ್ನು ಪಡೆಯದೆ  Augmentin, metronidazole ಅನ್ನು  ದೇವಸ್ಥಾನದಲ್ಲಿ ಅರ್ಚಕರು ತೀರ್ಥ ಹಂಚುವಂತೆ ನೀಡಿ , ಸಕಲ ರೋಗಗಳಿಗೆ ಇದುವೆ ರಾಮಬಾಣವೆಂಬ ಬಹುದೊಡ್ಡದಾದ ಭ್ರಮೆಯನ್ನು ಜನಸಾಮಾನ್ಯರಲ್ಲಿ ಬಿತ್ತಲಾಗಿದೆ. ಮಕ್ಕಳಲ್ಲಿ ಸಾಮಾನ್ಯವಾಗಿ ಬರುವ ವೈರಲ್ ಜ್ವರದಲ್ಲಿಯೂ antibiotics  ನೀಡುವುದನ್ನು ಪೋಷಕರು ನಿರೀಕ್ಷೆ ಮಾಡುವಷ್ಟು ದೊಡ್ಡ ಮಟ್ಟಿಗೆ ಈ ಕಾಯಿಲೆ ಸಮಾಜದಲ್ಲಿ ಬೆಳೆದಿದೆ‌. ಬಣ್ಣ ಬಣ್ಣದ ಸಿರಫ್  ಮಕ್ಕಳ ಹೊಟ್ಟೆಯೊಳಗೆ ಹೋದರಷ್ಟೇ ಅವರು  ಆರೋಗ್ಯವಂತರಾಗುವರೆಂಬ ಭ್ರಮೆಯನ್ನು ತಾಯಂದಿರಲ್ಲಿ ಸೃಷ್ಟಿಮಾಡಲಾಗಿದೆ.

DO NO HARM – ಇದು ಒಬ್ಬ ಸಂವೇದನಾಶೀಲ ವೈದ್ಯ   ಚಿಕಿತ್ಸೆಯ  ಪ್ರತಿ ಹಂತದಲ್ಲೂ ಮೆಲುಕು ಹಾಕಬೇಕಾದ ವಿಷಯ. ನಾನು ಮಾಡುತ್ತಿರುವ ಚಿಕಿತ್ಸೆ ಎಂದಿಗೂ  ಕಾಯಿಲೆಗಿಂತ ಭೀಕರವಾಗಿರಬಾರದು. ಈ antibiotics ಪರಮಾವಧಿಯ ಮುಂಚಿನ ದಿನಗಳಲ್ಲಿ  ನನ್ನ ಬಾಲ್ಯವನ್ನು ಕಳೆದ ನಾನೇ ಭಾಗ್ಯವಂತ. ನಾನು ಬಾಲ್ಯದಲ್ಲಿ ತೋರಿಸುತ್ತಿದ್ದ   ಡಾ. ಚಿದಾನಂದ ಕುರುಂಜಿ ಮತ್ತೆ ಡಾ. ರಘುರಾಮ ಮಾಣಿಬೆಟ್ಟು ಅವರಿಗೆ ನಾನು ಎಂದೆಂದಿಗೂ ಚಿರಋಣಿ.  They did not put knowledge before wisdom and cleverness before common sense. They did not make the cure of the disease more grievous than endurance of the same!  ನನಗವರು ಕುಂತದ್ದಕ್ಕೆ , ನಿಂತದ್ದಕ್ಕೆ antibiotics ಹಾಕಲಿಲ್ಲ! ಅಸಲಿಗೆ ನನಗೆ ಟೈಫಾಯ್ಡ್ ಜ್ವರ ಬಂದ ಸಮಯ ಬಿಟ್ಟರೆ antibiotics ತಿಂದು ಮಲಗಿದ್ದೇ ನೆನಪಿಲ್ಲ.

ಅಮ್ಮ ಹೊರಡಲು ತಯಾರಾದಳು. ಅವಳು  ಮೇಜಿನ ಮೇಲಿಟ್ಟಿದ್ದ  antibiotics ಬಾಟಲಿಗಳ ರಾಶಿ ನನ್ನ ಡಸ್ಟ್ ಬಿನ್ ತುಂಬಿತ್ತು. ಅವಳಿಗೆ ಸಮಾಧಾನವಾದಂತಿತ್ತು.ಅವಳ ಮುಖದಲ್ಲಿ ನೆಮ್ಮದಿ ಮನೆಮಾಡಿದ್ದನ್ನು ಕಂಡು ನಾನು ನಿರಾಳನಾದೆ.

.
-ಡಾ (ಮೇಜರ್) ಕುಶ್ವಂತ್   ಕೋಳಿಬೈಲು
MD Pediatrics , ಪುಣೆ.

13 Responses

 1. Krishnaprabha says:

  ತುಂಬಾ ಒಳ್ಳೆಯ ಲೇಖನ. ಸುಂದರ ಪ್ರಸ್ತುತಿ…ಕೆಲವೊಮ್ಮೆ ವೈದ್ಯರ ಸಕಾರಾತ್ಮಕ ಮಾತುಗಳೇ ಔಷಧಿಯಂತೆ ಕೆಲಸ ಮಾಡುವುದುಂಟು

 2. Smitha Amrithraj says:

  ಮಾಹಿತಿಯುಕ್ತವಾದ ಬರಹ ಸುಲಲಿತ ಶೈಲಿಯಲ್ಲಿದೆ.ಅಭಿನಂದನೆಗಳು ಕುಶ್ವಂತ್

 3. ವಿಜಯಾಸುಬ್ರಹ್ಮಣ್ಯ , says:

  ಅತ್ಯಂತ ಉಪಯುಕ್ತ ಲೇಖನ. ಇದೆಷ್ಟೋ ತಾಯಂದಿರ ಎದೆ ಡವಕುಟ್ಟುವಿಕೆಗೆ, ಮಕ್ಕಳ ಸಲಹುವುದಕ್ಕೆ, ಅನಾರೋಗ್ಯದಲ್ಲಿ ,ಆರೈಕೆಮಾಡುವುದಕ್ಕೆ ,ಧೈರ್ಯ ತುಂಬುವುದಕ್ಕೆ ಖಂಡಿತಾ ಉಪಯುಕ್ತ. ಯಾಕೆಂದರೆ ಇದರಲ್ಲಿ ಹಲವು ಅಗತ್ಯದ ಕಿವಿಮಾತುಗಳೂ ಇವೆ.

 4. ವಿಜಯಾಸುಬ್ರಹ್ಮಣ್ಯ , says:

  ಇಂತಹ ಆರೋಗ್ಯ ಸಲಹೆ, ಅನುಭವಯುಕ್ತ ಸೂಚನೆಗಳು ಇನ್ನೂ ಬರಲಿ ಡಾಕ್ಟ್ರೆ.

 5. Harshitha says:

  ಬಹಳ ಉಪಯುಕ್ತ ಮಾಹಿತಿಗಳು ಸರ್…

 6. ನಯನ ಬಜಕೂಡ್ಲು says:

  Superb sir. ಹಲವರನ್ನು ಎಚ್ಚರಿಸುವಂತಹ ಲೇಖನ . ನಾನೂ ಕೂಡ ನನ್ನ ಮಗ ಸಣ್ಣವನಿರುವಾಗ ಆಂಟಿಬಯೋಟಿಕ್ ವಿಷಯದಲ್ಲಿ ಅರಿವಿಲ್ಲದೆ ಇಂತಹುದೇ ತಪ್ಪನ್ನು ಮಾಡಿ ಡಾಕ್ಟರ್ ಕೈಯ್ಯಲ್ಲಿ ಬೈಸಿಕೊಂಡಿದ್ದೆ . ಕೃಷ್ಣ ಪ್ರಭಾ ಮೇಡಂ ಹೇಳಿದ ಹಾಗೆ ಸಕಾರಾತ್ಮಕವಾದ ಮಾತು , ರೋಗಿಯನ್ನು ವಿಚಾರಿಸುವ ತಾಳ್ಮೆ, ಜೊತೆಗೆ ಮುಖದಲ್ಲಿ ಮಂದಸ್ಮಿತ , ಇವಿಷ್ಟು ರೋಗಿಗೆ ವೈದ್ಯರ ಮೇಲೆ ಭರವಸೆ ಮೂಡುವಂತೆ ಮಾಡಿ ಅರ್ಧದಷ್ಟು ಕಾಯಿಲೆಯನ್ನು ಗುಣಪಡಿಸಬಲ್ಲುದು .
  ಸರ್, ನಿಮ್ಮಲ್ಲಿ ಒಂದು ಸಣ್ಣ ವಿನಂತಿ , ನಿಮ್ಮ ನೆನಪಿನ ಬುತ್ತಿ, ಅನುಭವದಲ್ಲಿ ಇಂತಹ ಸಾಕಷ್ಟು ಉಪಯೋಗ ಆಗುವಂತಹ ವಿಚಾರಗಳು ಇರಬಹುದು , ದಯವಿಟ್ಟು ಅವನ್ನು ಸಾಧ್ಯ ಆದಾಗ ನಮ್ಮೆಲ್ಲರ ಜೊತೆ ಹಂಚಿಕೊಳ್ಳಿ .

 7. Hema says:

  ಬಹಳ ಉಪಯುಕ್ತ ಮಾಹಿತಿ, ಸೊಗಸಾದ ನಿರೂಪಣೆ..

 8. Shankari Sharma says:

  ಉಪಯುಕ್ತ ಮಾಹಿತಿಯೊಡಗೂಡಿದ ಲೇಖನ ತುಂಬಾ ಚೆನ್ನಾಗಿದೆ. ವೈದ್ಯರ ಅನುಭವಗಳು, ಜನ ಜೀವನದೊಂದಿಗೇ ಬೆಸೆದುಕೊಂಡಿರುವುದರಿಂದ, ಅವರ ಸಲಹೆ ಸೂಚನೆಗಳು ಓದುಗರೆಲ್ಲರಿಗೂ ಸಹಕಾರಿ. ..ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: