ಪುಸ್ತಕ ನೋಟ : ದೊಡ್ಡ ವೀರ ರಾಜೇಂದ್ರ
ಡಾ.ಪ್ರಭಾಕರ ಶಿಶಿಲರ ಇತ್ತೀಚೆಗೆ ಪ್ರಕಟಗೊಂಡ ಕಾದಂಬರಿ ‘ದೊಡ್ಡ ವೀರ ರಾಜೇಂದ್ರ’ ಕೊಡಗಿನ ಐತಿಹಾಸಿಕ ಕಾದಂಬರಿಗಳಲ್ಲಿ ಪ್ರಮುಖವಾಗಿ ನಿಲ್ಲುತ್ತದೆ. ಇದು ಕೊಡಗಿನ ಇತಿಹಾಸವನ್ನು ಆಧರಿಸಿ ಮತ್ತು ಅಧ್ಯಯನ ಮಾಡಿ ಬರೆದಂತಹ ಇವರ ಮೂರನೆ ಕಾದಂಬರಿ. ಈ ಮೊದಲು ಮೂಡಣದ ಕೆಂಪು ಕಿರಣ ಮತ್ತು ನದಿ ಎರಡರ ನಡುವೆ ಎಂಬೆರಡು ಐತಿಹಾಸಿಕ ಕಾದಂಬರಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಪ್ರಸ್ತುತ ಕಾದಂಬರಿಯ ರಾಜ ದೊಡ್ಡ ವೀರ ರಾಜೇಂದ್ರ 1781 ರಿಂದ 1809 ರ ವರೆಗೆ ಕೊಡಗನ್ನು ಕಟ್ಟಿ ಆಳಿದ ಹಾಲೇರಿ ವಂಶದ ದೊರೆ. ಅವನ ಸಾಹಸವಿಲ್ಲದಿದ್ದರೆ ಕೊಡಗು ಎಂಬ ಸಂಸ್ಥಾನ ಎಂದೋ ಮೈಸೂರು , ಐಗೂರು, ಮಲಬಾರು ಮತ್ತು ಕೆನರಾ ನಡುವೆ ಹಂಚಿ ಹೋಗುತ್ತಿತ್ತು . ಹೀಗೆ ಇತಿಹಾಸ ನಿರ್ಮಿಸಿದ ದೊಡ್ಡ ವೀರ ರಾಜೇಂದ್ರನಿಗೆ ಇತಿಹಾಸದಲ್ಲಿ ಸಲ್ಲಬೇಕಾದ ಸ್ಥಾನ ಒದಗಿಸಲಿಕ್ಕಾಗಿಯೆ ಈ ಕಾದಂಬರಿ ಬರೆದುದಾಗಿ ಕೃತಿಕಾರರು ಮುನ್ನುಡಿಯಲ್ಲಿ ಹೇಳಿದ್ದಾರೆ. ಬಹುಶಃ ಇದಿಷ್ಟೇ ಆಗಿದ್ದರೆ ಕೃತಿಗೆ ಮಹತ್ವ ಬರುತ್ತಿರಲಿಲ್ಲ . ಚರಿತ್ರೆಯ ಘಟನೆಗಳನ್ನು ಸಾಹಿತ್ಯಿಕವಾಗಿ ಶ್ರೀಮಂತಗೊಳಿಸಿದ್ದು ಕೃತಿಯ ಬಹುದೊಡ್ಡ ಶ್ರೇಷ್ಠತೆ. ಈ ಕೃತಿಯಲ್ಲಿ ಇಪ್ಪತ್ತು ಅಧ್ಯಾಯಗಳಿಂದ ಕೂಡಿದ ಗುಚ್ಛವು ಸಮಗ್ರ ಕಾದಂಬರಿಯಾಗಿ ಮೂಡಿಬಂದಿದೆ. ಇದರಲ್ಲಿ ಕೆಲವು ಅಧ್ಯಾಯಗಳು ಅಕ್ಕಮಹಾದೇವಿಯ ವಚನಗಳಿಂದಾಗಿ ವಿಭಿನ್ನವಾಗಿ ನಿಲ್ಲುತ್ತದೆ. ‘ಸಂತೆಯೊಳಗೊಂದು ಮನೆಯ ಮಾಡಿ’ ಅಧ್ಯಾಯದಲ್ಲಿ ನೀಲಾಂಬಿಕದೇವಿ ಶಿವಚಾರದವಳಾಗಿ ಲಿಂಗಾಧಾರಣೆ ಮಾಡಿಕೊಂಡಮೇಲೆ ಸಂಪೂರ್ಣ ಅಕ್ಕಮಹಾದೇವಿಯ ವಚನಗಳ ನೆರಳಿನಲ್ಲಿಯೆ ಬದುಕಲಾರಂಭಿಸಿದಳು. ವಚನಗಳನ್ನು ಕಾದಂಬರಿಯಲ್ಲಿ ಉಲ್ಲೇಖಿಸಿ ಸಾಹಿತ್ಯಿಕವಾಗಿ ಶ್ರೀಮಂತಗೊಂಡ ಇಲ್ಲಿನ ಅಧ್ಯಾಯ ವಿಭಿನ್ನವಾಗಿ ನಿಲ್ಲುತ್ತದೆ.
ಇಲ್ಲಿ ದೊಡ್ಡ ವೀರಪ್ಪ ದೊರೆ ನ್ಯಾಯಧೀಶನ ಪೀಠ ಸ್ಥಾನದಲ್ಲಿ ನಿಂತು ತನ್ನ ಮಗನಿಗೆ ನ್ಯಾಯ ಹೇಳುವಂತಹ ಹೃದಯ ವಿದ್ರಾವಕ ಘಟನೆಯನ್ನು ಕಾದಂಬರಿಯ ಭಾಗವಾಗಿ ಚಿತ್ರಿಸಿದ ಪರಿ ಅನನ್ಯವಾಗಿದೆ. ವೀರಪ್ಪ ದೊರೆಯ ಸೊಸೆ ಅಂದರೆ ಅಪ್ಪಾಜಿರಾವ್ ನ ಹೆಂಡತಿ ನೀಲಾಂಬಿಕದೇವಿ ಅರಮನೆ ಎದುರಿನ ಕೊಳಕ್ಕೆ ಹಾರಿ ಪ್ರಾಣ ಕಳೆದು ಕೊಳ್ಳಲು ಪ್ರೇರಣೆ ಏನು ಎಂಬುದನ್ನು ನ್ಯಾಯಪೀಠ ಚರ್ಚಿಸುತ್ತದೆ. ಯಾರೆ ಆದರು ಏನು ಕಾರಣವಿಲ್ಲದೆ ಪ್ರಾಣ ಕಳೆದುಕೊಳ್ಳಲು ಸಾಧ್ಯವಿಲ್ಲ. ಯುವರಾಜರು ಪಟ್ಟದ ರಾಣಿಯನ್ನು ನ್ಯಾಯವಾಗಿ ನಡೆಸಿಕೊಂಡಿದ್ದರೆ ಇಂತಹ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ. ಆದರಿಂದ ನೀಲಾಂಬಿಕೆ ದೇವಿಯ ಆತ್ಮಹತ್ಯೆ ಯ ಹೊಣೆಯನ್ನು ದೊಡ್ಡವೀರಪ್ಪ ದೊರೆಯ ಮಗನೆ ಹೊರಬೇಕು ಎಂಬ ನ್ಯಾಯ ,ನ್ಯಾಯ ಸಮ್ಮತವಾಗಿಯೆ ಮೂಡಿಬಂದಿತ್ತು .ಈ ಒಂದು ಘಟನೆಯಲ್ಲದೆ ಅಪ್ಪಾಜಿರಾವ್ ಸೆರೆಮನೆಗೆ ಹೋದಮೇಲೆ ಆತನ ಮಗನನ್ನು ಅಜ್ಜನಾದ ದೊಡ್ಡ ವೀರಪ್ಪ ದೊರೆಯೆ ಸಾಕುತ್ತಾನೆ ಎಂದು ಪ್ರಜೆಗಳು ಅಂದುಕೊಂಡಿದ್ದರು. ಆದರೆ ಸೊಸೆ ನೀಲಾಂಬಿಕದೇವಿಯ ಅಸಹಜ ಸಾವು ಶಾಪವಾಗಿ ಹಾಲೇರಿ ರಾಜವಂಶವನ್ನು ಬಾಧಿಸಬಹುದು ಎಂಬ ಭೀತಿ ದೊಡ್ಡ ವೀರಪ್ಪ ದೊರೆಯನ್ನು ತಲ್ಲಣಗೊಳಿಸಿತು. ಸೊಸೆಯ ಮರಣದಿಂದ ಕ್ಷುದ್ರನಾಗಿ ಹೋಗಿದ್ದ ದೊಡ್ಡ ವೀರಪ್ಪ ದೊರೆ ತನ್ನ ಮೊಮ್ಮಗನನ್ನು ಪ್ರೀತಿಸಲಾರದೆ ಹೋದ. ಮೊಮ್ಮಗ ಚಿಕ್ಕ ವೀರಪ್ಪ ಸಹ ಕಾರಾಗೃಹದಲ್ಲಿದ್ದರೆಯೆ ಸೊಸೆಯ ಆತ್ಮಕ್ಕೆ ಶಾಂತಿ ಸಿಗುವುದೆಂದು ಭಾವಿಸಿದ. ಯಾವ ತಪ್ಪನ್ನು ಮಾಡದಿದ್ದರು ಅವನ ಅಮೂಲ್ಯವಾದ ಬಾಲ್ಯ ಸೆರೆಮನೆಯಲ್ಲಿ ಅನ್ಯಾಯವಾಗಿ ಕಳೆದುಹೋಯಿತು. ರಾಜಸಂಸ್ಕಾರ ನಷ್ಟವಾಗಿತ್ತು. ಸರಿಯಾದ ಪೌಷ್ಟಿಕ ಆಹಾರವಿಲ್ಲದೆ ಅವನು ದುರ್ಬಲನಾಗಿದ್ದ. ಅವನಲ್ಲಿ ಕೀಳರಿಮೆ ಕಾಡುತ್ತಿತ್ತು. ಯಾರಿಂದಲು ಪ್ರೀತಿ ಸಿಗದ ಅವನು ಯಾರನ್ನು ಪ್ರೀತಿಸಲಾರದೆ ಹೋದ. ಇಂತಹ ಘಟನೆಗಳ ಸುತ್ತ ಹೆಣೆದುಕೊಂಡು ಹೋದ ಕಾದಂಬರಿ ಭಾವುಕವಾಗಿ ನಮ್ಮನ್ನು ಓದಿಸಿಕೊಂಡು ಹೋಗುತ್ತದೆ.ಒಟ್ಟಿನಲ್ಲಿ ಕೊಡಗಿನ ಈ ಐತಿಹಾಸಿಕ ಕಾದಂಬರಿ ಅಧ್ಯಯನ ಶೀಲ ಬರಹವಾದರಿಂದ ಯಾವುದೇ ಗೊಂದಲ ನಮ್ಮಲ್ಲಿ ಸೃಷ್ಟಿಸುವುದಿಲ್ಲ .ಬದಲಾಗಿ ಒಂದು ನೈಜ್ಯ ಘಟನೆಯು ನಮ್ಮನ್ನು ಚಿಂತನೆಗೆ ಹಚ್ಚುವಂತೆ ಪ್ರೇರೇಪಿಸುತ್ತದೆ.
ವೀರರಾಜೇಂದ್ರ ತನ್ನ ರಾಣಿ ಮಹಾದೇವಿಯಮ್ಮಾಜಿಗೆ ಶರಣ ಧರ್ಮದ ಸಾರವನ್ನು ವಚನಗಳ ಮೂಲಕ ಮನಗಾಣಿಸಿ ಅವಳನ್ನು ಧಫನಕ್ಕೆ ಒಡಂಬಡಿಸುವುದು ತುಂಬಾ ಮಾರ್ಮಿಕವಾಗಿದೆ.ನಾಡು ಕಟ್ಟಿದ ದೊರೆ ವೀರ ರಾಜೇಂದ್ರನ ಕುರಿತ ಈ ಕಾದಂಬರಿ ಇತಿಹಾಸದ ಸೂಕ್ಷ್ಮ ವಿಚಾರಗಳನ್ನು ಕಲೆ ಹಾಕಿ ಬರೆದ ವಿಶಿಷ್ಟವಾದ ಕೃತಿ. ಈತನಿಲ್ಲದಿರುತ್ತಿದ್ದರೆ ಕೊಡಗು ಎಂಬ ಪುಟ್ಟ ನಾಡು ಹರಿದು ಹಂಚಿ ಹೋಗಿ ಇತರ ನಾಡುಗಳೊಡನೆ ಸೇರಿಬಿಡುತ್ತಿತ್ತು. ಈತ ದಕ್ಷಿಣ ಕನ್ನಡದವರೆಗೆ ತನ್ನ ನಾಡನ್ನು ವಿಸ್ತರಿಸಿದ. ಶಿವಚಾರದವನಾಗಿದ್ದ ದೊಡ್ಡ ವೀರರಾಜೇಂದ್ರ ಸಮಾನತೆಯ ಹರಿಕಾರನು ಆಗಿದ್ದ. ಕೊಡಗು ರಾಜರ ಇತಿಹಾಸವನ್ನು ರಾಜೇಂದ್ರನಾಮೆ ಎಂಬ ಪುಸ್ತಕದ ಮೂಲಕ ಪ್ರಸ್ತುತ ಪಡಿಸಿದ ಪ್ರಜಾನುರಾಗಿಯಾಗಿದ್ದ ಈತ ಸೌಮ್ಯವಾದ ಕಂದಾಯ ವ್ಯವಸ್ಥೆಯನ್ನು ಜಾರಿಗೆ ತಂದಿದ್ದ. ಡಾ. ಶಿಶಿಲರ ಪಳಗಿದ ಲೇಖನಿಯಿಂದ ಸೃಜನಶೀಲತೆಯ ಬರಹವೊಂದು ಅನಾವರಣಗೊಂಡಿದೆ. ಇವರ ಈ ಎಂಟನೆಯ ಕಾದಂಬರಿ ಇತಿಹಾಸದ ಮೈಲುಗಲ್ಲೊಂದರ ಅನಾವರಣವು ಹೌದು.
ಕೊನೆಯ ಎರಡು ಅಧ್ಯಾಯಗಳಲ್ಲಿ ಮನೋವೈದ್ಯ ಇಂಗಲ್ ಡ್ಯೂ ವೀರರಾಜೇಂದ್ರನ ಮಾನಸಿಕ ಅಸ್ವಸ್ಥತೆಯನ್ನು ಹೋಗಲಾಡಿಸಲು ಮಾಡುವ ಮನೋವೈಜ್ಞಾನಿಕ ಚಿಕಿತ್ಸೆಯ ಮನೋಜ್ಞ ಚಿತ್ರಣವಿದೆ. ಅದರೊಂದಿಗೆ ಕೊಡಗಿನ ಮೋಹಕ ತಾಣಗಳ ಪರಿಚಯವು ಇದೆ. ಕೊನೆಯಲ್ಲಿ ರಾಜ ತನ್ನ ಅಕೃತ್ಯಗಳನ್ನು ನೆನೆದು ಹೃದಯಘಾತದಿಂದ ಸಾಯುವ ಸನ್ನಿವೇಶವನ್ನು ಅಮೋಘವಾಗಿ ಚಿತ್ರಿಸಿದ್ದಾರೆ. ಈ ಕಾದಂಬರಿ ಬೆಂಗಳೂರಿನ ವಸಂತ ಪ್ರಕಾಶನದಿಂದ ಪ್ರಕಟಗೊಂಡಿದೆ. ಇತ್ತೀಚೆಗೆ ಅರಮೇರಿ ಕಳಂಚೇರಿ ಮಠದಲ್ಲಿ ಕೃತಿ ಬಿಡುಗಡೆಗೊಂಡಾಗ ಇನ್ನೂರು ಪ್ರತಿಗಳು ಆ ಕೂಡಲೆ ಮಾರಾಟಗೊಂಡಿವೆ.ಕೃತಿಗೆ ಆಪ್ತವಾಗಿ ಓದಿಸಿಕೊಂಡು ಹೋಗುವ ಗುಣವಿದೆ. ಕೊಡವರು ಮತ್ತು ಗೌಡರು ಒಂದಾಗಿ ಹೇಗೆ ದೊಡ್ಡವೀರರಾಜೇಂದ್ರನಿಗೆ ಕೊಡಗನ್ನು ಕಟ್ಟಲು ನೆರವಾದರು ಎಂಬ ವಿವರಣೆಯಿದೆ. ಪ್ರತಿಯೊಬ್ಬರ ವರ್ತನೆಗು ತಾರ್ಕಿಕ ಸಮರ್ಥನೆಯಿದೆ. ಹಾಗಾಗಿ ಈ ಕೃತಿ ಸಮಷ್ಟಿಯ ದೃಷ್ಟಿಯಿಂದ ಮಹತ್ವದ ಕೃತಿಯೆನಿಸುತ್ತದೆ. ಈ ಕಾದಂಬರಿಯಿಂದ ಪಡೆದ ಹಣವನ್ನು ಕೊಡಗಿನ ದುರಂತದಲ್ಲಿ ಮನೆ ಕಳಕೊಂಡ ಬಡ ವಿದ್ಯಾರ್ಥಿ ಗಳಿಗೆ ಸಹಾಯ ಮಾಡಲು ಮೀಸಲಿಟ್ಟರಿರುವುದು. ಶ್ಲಾಘನೀಯ. ಮಡಿಕೇರಿಯಲ್ಲಿ ಹಳೆ ಬಸ್ ನಿಲ್ದಾಣದ ನೀಲಕಂಠೇಶ್ವರ ಸ್ಟೋರ್ಸ್ ನಲ್ಲಿ ದೊಡ್ಡವೀರರಾಜೇಂದ್ರ ಕೃತಿ ಮಾರಾಟಕ್ಕೆ ಲಭ್ಯವಿದೆ.
-ಸಂಗೀತ ರವಿರಾಜ್, ಮಡಿಕೇರಿ
ಧನ್ಯವಾದಗಳು ಸುರಹೊನ್ನೆ
ಓದಬೇಕೆಂಬ ಕುತೂಹಲ.. ಚೆನ್ನಾಗಿ ಬರೆದಿದ್ದೀರಿ ಸಂಗೀತ..
ಸೊಗಸಾಗಿದೆ ಪುಸ್ತಕ ಪರಿಚಯ. ಇತಿಹಾಸಕ್ಕೆ ಸಂಬಂಧಪಟ್ಟ ವಿಚಾರಗಳು ಕೃತಿಯೆಡೆಗೆ ಮನವನ್ನು ಸೆಳೆಯುತ್ತದೆ.
ಪುಸ್ತಕ ವಿಮರ್ಶೆ ಚೆನ್ನಾಗಿ ಬರೆದಿದ್ದೀರಾ.
ಪುಸ್ತಕ ವಿಮರ್ಶೆ ಬಹಳ ಚೆನ್ನಾಗಿ ಮೂಡಿ ಬಂದಿದೆ ಸಂಗೀತ ರವಿರಾಜ್ .
ಅನನ್ಯ ವಿಶ್ಲೇಷಣೆ… ಬರೆಯುತ್ತಿರಿ ಸಂಗೀತಾ..
ಕಾದಂಬರಿಯಲ್ಲಿ ಬರುವ ಕೊಡಗಿನ ಇತಿಹಾಸದ ಸೂಕ್ಷ್ಮ ಪರಿಚಯದೊಂದಿಗೆ ಮಾಡಿದ ಪುಸ್ತಕ ವಿಮರ್ಶೆ ಚೆನ್ನಾಗಿ ಮೂಡಿಬಂದಿದೆ.
ಸಂಗೀತಾ ಅವರೇ, ‘ದೊಡ್ಡ ವೀರರಾಜೇಂದ್ರ’ ಪುಸ್ತಕ್ ವಿಮರ್ಶೆ ಬಹಳ ಸೊಗಸಾಗಿ ಬಂದಿದೆ.ನಾನೂ ಓದಬೇಕು.
ಸ್ಪಂದಿಸಿದ ಎಲ್ಲರಿಗು ಪ್ರೀತಿಯಿಂದ ವಂದಿಸುತೇನೆ .
ಈ ಪುಸ್ಥಕ ಎಲ್ಲಿ ಸಿಗಬಹುದು?