ಮಾತೃಭೂಮಿಗೊಂದು ಪತ್ರ- (ಹೊತ್ತ ಒಡಲಿಗೆ)

Share Button

 

ಹೆತ್ತ ಮಾತೆಗೆ ಸಮಾನಳಾದ ಓ ನನ್ನ ತಾಯಿ ಭಾರತೀ-

ತಾಯ ಒಡಲಿನಿಂದ ಭೂಮಿಗೆ ಬಿದ್ದ ಕ್ಷಣದಿಂದ ಸಲಹುವ ತಾಯೇ ನಾನು ನಿನ್ನ ಕುವರಿ ನಿನ್ನಲ್ಲಿ ಬೇಡಿಕೊಳ್ಳುವ ಅನಂತಾನಂತ ಆಶೀರ್ವಾದಗಳು-

ಕ್ಷೇಮ- ಸದಾ ನಿನ್ನ ಮೇಲೆ ನಡೆದು,ನನ್ನ ಆಹಾರಕ್ಕಾಗಿ ನಿನ್ನನ್ನು ಗಾಯಗೊಳಿಸಿ ಕೃಷಿ ಮಾಡಿಕೊಂಡು, ನೀನು ನೀಡಿದ ಆಹಾರವನ್ನುಂಡು,ಕೆಲವೊಮ್ಮೆ ಆಹಾರ ಸ್ವೀಕರಿಸಿದ ಸಮತೋಲನ ತಪ್ಪಿ, ಅನಾರೋಗ್ಯವಾದಾಗ ನಿನ್ನ ವನಸ್ಪತಿಯನ್ನೇ ಬಳಸಿ, ಪರಿಹಾರ ಕಂಡುಗೊಂಡೆ. ನಾನೀಗ ನನ್ನ ಸುಖ-ದುಃಖವನ್ನು ನಿವೇದಿಸಿ, ಪತ್ರಬರೆಯಲು ಮನ ಬಯಸಿತು.

ಭಾರತಮಾತೆಃ-ಭಾರತಮಾತೆಯ ಮಕ್ಕಳಾದ ನಾವು ನೂರಮೂವತ್ತು ಕೋಟಿ ಜನರ ಮಹಾತಾಯಿಯಾದ ಅಧಮ್ಯ ಚೇತನ ಧರಣಿಯೇ  ಹುಲುಮಾನವಳಲ್ಲೊಬ್ಬಳಾದ ನಾನು; ನಿನ್ನ 130 ಕೋಟಿ ರೋಮಗಳಲ್ಲಿ ಒಂದೇ ಒಂದು ನಾನು..! ಎಂಬುದು ನನ್ನ ನಿಲುವು. ಅದು ಸರಿ ತಾನೇ!!. ಅದಕ್ಕಾಗಿ ಸಂತಸವಿದೆ ತಾಯಿ.ಲೋಕದ ಜನರಿಗೆ  ಪ್ರಪಂಚವು ಮನೆಯಾದರೆ; ಭಾರತವು ದೇವರಕೋಣೆ.ಆ ಕೋಣೆಯಲ್ಲಿ ನಮ್ಮ ಆರಾಧ್ಯ ದೈವ ನೀನು!.

ಹೆತ್ತ ತಾಯಿ,ಹೊತ್ತ ಭೂಮಿ,ಹಾಗೂ ನಮ್ಮ ಜೀವನಪರ್ಯಂತ ಹಾಲೂಡಿ ಸಲಹುವ ಗೋಮಾತೆ ಇವರು ಮೂವರು; ಮೂವತ್ತಮೂರುಕೋಟಿ ದೇವತೆಗಳಿಗೆ ಸಮವೆಂದು ನಮ್ಮ ಆರ್ಯ ತಲೆಮಾರಿನಿಂದ ಬಂದ ಹಿತನುಡಿ.ಈ ರೀತಿ ಪೂಜನೀಯ ಭಾವದಿಂದ ಕಾಣುವ ಸಂಸ್ಕಾರದಿಂದಾಗಿ ಭಾರತೀಯರನ್ನು ಹೊರದೇಶದವರೂ ಗೌರವಿಸುತ್ತಾರೆ.ಎಂಬುದೂ ನಮ್ಮ ಹೆಮ್ಮೆಯಲ್ಲವೇ ಅಮ್ಮಾ!.

ನಿನ್ನ ಇತಿಹಾಸವನ್ನು ಅವಲೋಕಿಸಿದಾಗ ಅದರಲ್ಲಿ ಮೂರು ಹಂತಗಳನ್ನು ಕಾಣಬಹುದು.ಪ್ರಾಚೀನಯುಗ,ಮಧ್ಯಯುಗ ಹಾಗೂ ಆಧುನಿಕಯುಗ. ಪ್ರಾಚೀನಯುಗದಲ್ಲಿ ಪೂರ್ಣ ನಿನ್ನ ನೆಲ ಹಿಂದೂ ಅರಸರ ಅಧೀನಕ್ಕೆ ಒಳಪ್ಪಟ್ಟಿದುದನ್ನು ಕಂಡರೆ, ಮಧ್ಯಯುಗದಲ್ಲಿ ವಿದೇಶಿ ಮುಸ್ಲಿಮರ ಆಳ್ವಿಕೆಗೆ ಒಳಪಟ್ಟಿತ್ತು.ಮುಂದೆ ಆಧುನಿಕ ಯುಗದಲ್ಲಿ ಐರೋಪ್ಯರ ಆಗಮನದಿಂದ ಭಾರತ ಮತ್ತೊಂದು ಸಂಕ್ರಮಣ ಕಾಲವನ್ನು ಕಾಣಬೇಕಾಯಿತು. ಭಾರತ ಪ್ರವೇಶಿಸಿದ ಐರೋಪ್ಯರಲ್ಲಿ,ಡಚ್ಚರು, ಫ್ರೆಂಚರು.ಮುಂದೆ ಇಂಗ್ಲಿಷರ ಪಾದಾರ್ಪಣೆಯಾಯಿತು.ಇವರುಗಳೆಲ್ಲರೂ ನಿನ್ನ ಸೊತ್ತನ್ನು ಲೂಟಿಮಾಡಿದರು. ಈ ನಿರಂತರ ದಬ್ಬಾಳಿಕೆ, ಹಾಗೂ ನಮ್ಮ ಮೌಲ್ಯಗಳು ಸೂರೆಹೋಗುವುದು ಸಹಿಸಲಾಗದೆ ಮಹಾತ್ಮಾಗಾಂಧೀಜಿಯವರ ಮುಂದಾಳುತನದಲ್ಲಿ ನಮಗೆ ಸ್ವಾತಂತ್ರ್ಯ ದೊರಕಿತು. ಆ ಮಹಾತ್ಮರ ನೆನಪಿಸುತ್ತಾ ಈ ಪತ್ರ.

ಪೂಜನೀಯಳು-ಓ ತಾಯೀ  ರಾಮನನ್ನು ಹೆತ್ತ ಕೌಸಲ್ಯೆ ನೀನು.,ಕೃಷ್ಣನನ್ನು ಹೊತ್ತು ಸಲಹಿ ಪೋಷಿಸಿದ ಯಶೋದೆ ನೀನು.ಇಳೆಯೊಳಿತಿಗಾಗಿ ಬುದ್ಧ, ಶಂಕರಾಚಾರ್ಯರನ್ನು ನೀಡಿದ್ದಿ!.ಶ್ರೀಬಸವೇಶ್ವರ,ಶ್ರೀ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ,ರವೀಂದ್ರನಾಥ ಟಾಕೂರ್ ಮಹಾಯೋಗಿ ಶ್ರೀಅರವಿಂದ ಮೊದಲಾದ ಮಹನೀಯರನ್ನ ಸೃಷ್ಟಿಸಿದ್ದಿ!!. ನಮ್ಮೀ ಭೂಮಿ ಪರಕೀಯರ ದಾಸ್ಯಶೃಂಖಲೆಯಿಂದ,ತಪ್ಪಿಸುವುದಕ್ಕೆ,ಬ್ರಿಟಿಷರವಿರುದ್ಧ,ಹೋರಾಡುವುದಕ್ಕೆ ಝಾನ್ಸೀರಾಣಿ ಲಕ್ಷ್ಮೀಬಾಯಿಯಂತಹ ಅದೆಷ್ಟು ವೀರ ರಾಜ+ರಾಣಿಯರನ್ನು ಬೆಳೆಸಿದ್ದಿ!.ಭಗತ್ ಸಿಂಗರಂತಹ ಅದೆಷ್ಟು ವೀರರನ್ನು ಪಡೆದೆ!. ಮಹಾತ್ಮಾಗಾಂಧೀಜಿಯವರೊಂದಿಗೆ ಜೊತೆಗೂಡಲು ನೇತಾಜಿ, ಸುಭಾಷ್ಚಂದ್ರಭೋಸ್,ಬಾಲಗಂಗಾಧರತಿಲಕ,ಗೋಪಾಲಕೃಷ್ಣ ಗೋಖಲೆ,ಮೊದಲಾದವರಂತಹ ಮೇಧಾವಿಗಳನ್ನು ಹೊತ್ತು ಬೆಳೆಸಿದ ತಾಯೀ ನೀನೊಂದು ಸೃಷ್ಟಿಲೋಕದ  ಅಗಾಧ ಆಗರ!!. ಎಲ್ಲಾ ಜೀವಲೋಕಕ್ಕೂ ಅಮ್ಮನಾದ ದೊಡ್ಡಮ್ಮ ನೀನು!!!.ನಿನ್ನನ್ನು ಏನೆಂದು ಬಣ್ಣಿಸಲೆಂದೂ ಪರದಾಡುತ್ತಿದ್ದೇನೆ.ನಿನ್ನನ್ನು ಹೊಗಳಲು ನನ್ನಲ್ಲಿ ಪದಗಳಿಲ್ಲ ತಾಯೀ.!!!!. ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣಳು ಭೂಮಾತೆ. ಭಾರತೀಯರಿಗೆ ಭೂಮಾತೆಯೆಂದರೆ ಭಾರತಮಾತೆಯಲ್ಲವೇ?.ನಮ್ಮ ಹುಟ್ಟು ನಿನ್ನಿಂದಲೇ,ನಮ್ಮಸ್ಥಿತಿಗೆ ಅರ್ಥಾತ್ ಜೀವಕ್ಕೂ ಆಹಾರಕ್ಕೂ ನೀನೆ ಕಾರಣಳು,ಅಂತೆಯೇ ನಮ್ಮ ಲಯ ಅಂದರೆ ನಮ್ಮ ಅಂತ್ಯವೂ ನಿನ್ನೊಳಗೇ ಅಲ್ಲವೇ ತಾಯೀ!.ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಬೇರು ಬಿಟ್ಟಿರುವ ಸನಾತನಧರ್ಮೀಯರು ಹುಟ್ಟಿ ಬೆಳೆದು,ಬಾಳಿ ಬದುಕಿ ಮುಂದೆ ಅಳಿದರೂ ಅವರ ಹೆಸರು ಅಜರಾಮರವಾಗಲು ನಿನ್ನೊಲವಿನ ಆಹಾರವೇ ಕಾರಣವಲ್ಲವೇ?.

ಭಾರತದ ಭವಿಷ್ಯ-  ಸ್ವತಂತ್ರಭಾರತದ ಈ ತನಕದ ರಾಜ್ಯಭಾರವನ್ನು ತುಲನೆಮಾಡಿ ನೋಡಿದರೆ ಕೇಂದ್ರಸರಕಾರದಲ್ಲಿ ಈಗ ಪ್ರಸ್ತುತಃ  ಒಂದಿಷ್ಟು ಆಶಾ ಭಾವನೆಗಳು ಮೂಡುತ್ತವೆ.ಕಾರ್ಯಭಾಗವು ಸಾಗುತ್ತಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಆಡಳಿತವು ಸ್ವಾರ್ಥರಹಿತವಾಗಿ ಜನೋಪಯೋಗಿಯಾಗಿ ಬೆಳಗಿ ರಾಮರಾಜ್ಯವಾಗಲಿ ಎಂಬುದು ನಮ್ಮೆಲ್ಲರ ಮನದ ಇಂಗಿತ.

ಹೃದಯ ತಲದ ನಮನಃ-ನನ್ನ ತನು ಕಣ ಕಣವೂ ನಿನ್ನ ಋಣವೇ ಮಾತೆ.ನನ್ನೊಳಗೆ ನನ್ನತನವನ್ನು ತುಂಬಿದ ಹೆತ್ತಮಾತೆಗೆ ಸಮನಾದ ತಾಯೇ ಎಂತು ತೀರಿಸುವೆನಮ್ಮ ನಿನ್ನ ಋಣವನ್ನು!.’ಕ್ಷಮಯಾಧರಿತ್ರಿ’ ಹಾಗೂ ’ಭೂಮಿತೂಕ’ ಎಂಬದಾಗಿ ನಿನ್ನ ಬಗ್ಗೆ ಉಕ್ತಿಗಳಿವೆ.ಹೌದು ನಾವು ನೆಲೆನಿಂತ ಭೂಮಿಗಿರುವಷ್ಟು ಕ್ಷಮೆ ಬೇರೆಲ್ಲಿದೆ?.|ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತ ನಃ ಭವತಿ|  ಕೆಟ್ಟಮಕ್ಕಳು ಹುಟ್ಟಬಹುದು,ಕೆಟ್ಟ ತಾಯಿ ಎಲ್ಲೂ ಇರಲಾರಳು.ಇದು ಆದಿ ಶಂಕರಾಚಾರ್ಯರು ಹೇಳಿದ ಮಾತು.ಎಲ್ಲ ಕಾಲಕ್ಕೂ ಅನ್ವರ್ಥವಾಗುವ ಆಚಾರ್ಯರ ಸೂಕ್ತಿ.ಆಕಾಶ ಅಪ್ಪನಾದರೆ; ಭೂಮಿತಾಯಿ ಅಮ್ಮನಂತೆ. ಆಕಾಶಕ್ಕೆ ಭೂಮಿಯ ಸಹನೆ ಎಲ್ಲಿದೆ?.

ಊಟ+ಉಡುಗೆ ಕೊಟ್ಟು ಪೋಷಿಸಿದ  ಅಮ್ಮನಿಗೆ- ಊಟವನ್ನ ನನ್ನ ಉಸಿರಿರುವ ತನಕವೂ ಕೊಡುತ್ತಾ ಇರುವ ನಮ್ಮ ಸಿರಿಭೂಮಿ ಭಾರತಮಾತೆ..,ನಿನ್ನ ಪಾಲನೆಯಲ್ಲಿ ಸುಖದ ಖನಿಯಿದೆ!.ಜೀವದೊಳಗೆ ’ಅಮರ’ವನ್ನು ಪ್ರಕಟಪಡಿಸುವ ಶಕ್ತಿ ನಿನ್ನದು. ಆ ಶಕ್ತಿಯನ್ನ ಸ್ವೀಕರಿಸಿ ಕಾರ್ಯರೂಪಕ್ಕೆ ತಂದುಕೊಳ್ಳುವ ಸ್ವಂತಿಕೆ ನನ್ನಲ್ಲಿ ಬೆಳೆಸಮ್ಮ. ಜನಮಾನಸರಲ್ಲಿ ಸ್ಥಿರವಾಗಿ ನೆಲೆಯಾಂತ ಮಹಾಮಾತೆಯೇ ನನ್ನ ಈ ಪತ್ರ ಮುಖೇನ ನಿನ್ನಲ್ಲಿ ನನ್ನ ಸುಖ-ದುಃಖ ತೋಡಿಕೊಂಡು ಮತ್ತೊಮ್ಮೆ ಸ್ಮರಿಸುತ್ತಾ ನೆಲವಾಗಿ ಹೊರುವ,ಬೆಳೆಭೂಮಿಯಾಗಿ ಬೆಳಗುವ ಹಾಗೂ ಗಂಗಾ,ಯಮುನಾ ಬ್ರಹ್ಮಪುತ್ರಾ ಮೊದಲಾದ ಜೀವನದಿಗಳಾಗಿ ಹರಿವ,ನಮಗೆ ಆಹಾರವಿತ್ತು ಸದಾ ಪೋಷಿಸುವ ,ನಮ್ಮ  ಬದುಕಿನ ಭಾಗ್ಯವತಿ ಭಾರತಮಾತೆಯೇ ಸದಾ ನಿನ್ನ ಸ್ಮರಣೆಯೊಂದಿಗೆ.

-ವಿಜಯಾಸುಬ್ರಹ್ಮಣ್ಯ,ಕುಂಬಳೆ.

4 Responses

 1. ನಯನ ಬಜಕೂಡ್ಲು says:

  Beautiful. ಇಡೀ ಭಾರತದ ಆಗು ಹೋಗುಗಳ ಚಿತ್ರಣ ಒಂದು ಪತ್ರದಲ್ಲಿದೆ. ಜೊತೆಗೆ ದೇಶಪ್ರೇಮವೂ ಅನಾವರಣಗೊಂಡಿದೆ .

 2. ವಿಜಯಾಸುಬ್ರಹ್ಮಣ್ಯ , says:

  ಧನ್ಯವಾದ ಗಳು ನಯನಾ ಬಜಕೂಡ್ಲು

 3. Shankari Sharma says:

  ಭೂ ಮಾತೆಯ ಇತಿಹಾಸದೊಂದಿಗೆ ಲೇಖನ ತುಂಬಾ ಚೆನ್ನಾಗಿ ಮೂಡಿಬಂದಿದೆ.

 4. Harshitha says:

  ಭಾರತ ಮಾತೆಯ ಹಿರಿಮೆಯನ್ನು ಪತ್ರದ ಮೂಲಕ ಬಹಳ ಚೆನ್ನಾಗಿ ವಿವರಿಸಿದ್ದೀರಿ ಮೇಡಮ್..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: