ಭೂತದ ಕಥೆಗಳು.
ಭೂತ ಪ್ರೇತಾದಿಗಳನ್ನು ನೋಡಿದ್ದೀರಾ ಎಂಬ ಪ್ರಶ್ನೆಗೆ ನಮ್ಮಲ್ಲಿ ಹಲವರ ಉತ್ತರ ಹಾಂ, ಉಹುಂ, ಇಲ್ಲ, ತಿಳಿದಿಲ್ಲ, ನಂಬಲ್ಲ ಎಂದೆಲ್ಲಾ ಇರಬಹುದು. ಆದರೆ ಭೂತದ ಕಥೆಗಳನ್ನು ಕೇಳಿದ್ದೀರಾ ಎಂದರೆ ಖಂಡಿತವಾಗಿಯೂ ಹೌದು ಎಂದಷ್ಟೇ ಇರುತ್ತದೆ. ಪ್ರತಿ ಊರಲ್ಲೂ ಒಂದಲ್ಲ ಒಂದು ಭೂತದ ಕಥೆಯು ಪ್ರಚಲಿತದಲ್ಲಿ ಇರುತ್ತದೆ. ಕೆಲವು ನಂಬಿಕೆಗಳಾದರೆ, ಇನ್ನೊಂದಷ್ಟು ಮಾನವ ನಿರ್ಮಿತ ಕಥೆಗಳು. ಇನ್ನು ಕೆಲವಂತೂ ನಮ್ಮ ಕಲ್ಪನೆಗಳು. ಅದೇನೇ ಇರಲಿ ಈ ಕಥೆಗಳನ್ನು ಮೆಲುಕು ಹಾಕುವುದಂತೂ ಒಂದೊಳ್ಳೆಯ ಅನುಭವ.
ಪ್ರೈಮರಿ ಶಾಲಾ ದಿನಗಳು. ಶಾಲೆಯ ಮೈದಾನದ ಪಕ್ಕದಲ್ಲೊಂದು ಟೆರೇಸಿನ ಮನೆಯಿತ್ತು. ಮನೆಯ ಪಕ್ಕಕ್ಕೆ ಒಂದು ಬುಗುರಿ ಹಣ್ಣಿನ ಮರವೂ ಇತ್ತು. ಶಾಲಾ ಮಕ್ಕಳಾದ ನಮಗೆಲ್ಲಾ ಬುಗುರಿ ಹಣ್ಣು ಎಂದರೆ ಅಚ್ಚು ಮೆಚ್ಚು. ಮರ ತುಂಬಾ ತುಂಬಿಕೊಂಡಿದ್ದ ಬುಗುರಿ ಹಣ್ಣುಗಳು ನಮ್ಮನ್ನು ಆ ಮನೆಯೆಡೆಗೆ ಸೆಳೆಯುತ್ತಿತ್ತು. ಅದೊಂದು ದಿನ ಗೆಳೆತಿ ಫಾತಿಮಾ ಬಳಿ ಕೇಳಿಯೇ ಬಿಟ್ಟೆ: ” ನಿನ್ನ ಮನೆ ಇಲ್ಲೇ ಸಮೀಪವಲ್ಲವೇ. ಬರುವ ದಾರಿಯಲ್ಲಿ ಆ ಮನೆಗೆ ಹೊಕ್ಕು ಬುಗುರಿ ಹಣ್ಣನ್ನು ತರಬಹುದಲ್ಲಾ?”. ತುಸು ಕೋಪ ಹಾಗು ಭಯದೊಂದಿಗೆ ಫಾತಿಮಾ ನನಗೆ ಆ ಸತ್ಯವನ್ನು ಬಿಚ್ಚಿಟ್ಟಳು. ಅದು ಭೂತದ ಮನೆ. ಅಲ್ಲಿಗೆ ಯಾರು ಹೋಗುವುದಿಲ್ಲ. ಭೂತದ ಮನೆ ಎಂಬುವುದು ನನಗೆ ಹೊಸ ಪರಿಕಲ್ಪನೆ. ಅದು ಹೇಗೆ ಹೇಳುತ್ತಿ, ನಿನಗೆ ಹೇಗೆ ಗೊತ್ತು, ನೀನು ನೋಡಿದ್ದೀಯಾ ಎಂದೆಲ್ಲಾ ಅವಳನ್ನು ಕೆದಕತೊಡಗಿದೆ. ಯಾರಿಗೂ ಕೇಳದಂತೆ ನನ್ನ ಪಕ್ಕಕ್ಕೆ ಬಂದು ಅವಳು ವಿವರಿಸ ತೊಡಗಿದಳು. ” ನಮ್ಮ ಆಚೆ ಮನೆಯ ಅಣ್ಣ ಕ್ರಿಕೆಟ್ ಬಾಲ್ ಬಿತ್ತು ಅಂತ ಒಳಗೆ ಹೋಗಿದ್ದನಂತೆ. ಮನೆಯಲ್ಲಿ ಒಂದು ಫೋಟೋ ಇತ್ತಂತೆ. ಅದಕ್ಕೆ ನಿಮ್ಮವರಲ್ಲಿ ಹಾರ ಹಾಕುತ್ತಾರಲ್ಲ, ಅದೇ ಹಾರ ಹಾಕಿತ್ತಂತೆ. ಇವನು ಬಾಲ್ ತೆಗೆದುಕೊಂಡು ಹೊರಗೆ ಬರುತ್ತಾ ಗೇಟ್ ಸರಿಸಲು ಮರೆತು ಬಿಟ್ಟನಂತೆ. ಹಿಂದಿನಿಂದ ಅದ್ಯಾರೋ ಕರೆದು ಗೇಟ್ ಹಾಕಲು ಹೇಳಿದರು ಎಂದು ತಿರುಗಿ ನೋಡಿದರೆ ಅದೇ ಜನ!”. ಅಬ್ಬಾ.. ನಾನು ಮೊದಲ ಬಾರಿ ಕೇಳಿದ ಭೂತದ ಕಥೆಯಿದು. ನಿಜವೋ ಸುಳ್ಳೋ ಎಂದು ಅರ್ಥವಾಗುತ್ತಿರಲಿಲ್ಲ. ಹೀಗೆ ಸಂದೇಹದೊಂದಿಗಿರುವಾಗ ಮತ್ತೊಂದು ದಿನ ಟೀಚರ್ ನಮಗೆಲ್ಲ ಆ ಮನೆ ಪಕ್ಕ ಆಡಬೇಡಿ ಎಂದು ಬಿಟ್ಟರು. ತಕ್ಷಣಫಾತಿಮಾಳ ಕಡೆಗೆ ತಿರುಗಿ ನೋಡಿದೆ. “ನಾ ಮೊದಲೇ ಹೇಳಿಲ್ಲವೇ” ಎಂಬಂತೆ ತಲೆಯಾಡಿಸಿದಳು ಆಕೆ.
ಫಾತಿಮಾಳ ಕತೆ ಇನ್ನೂ ಮನಸಲ್ಲೇ ಕುಯ್ಯುತ್ತಿತ್ತು. ಹಾಗಿರುವಾಗ ಅದೊಂದು ದಿನ ನಮ್ಮ ಆಟೋ ಮಾಮ (ಶಾಲೆಗೆ ಕೊಂಡೊಯ್ಯುತ್ತಿದ್ದ ಡ್ರೈವರ್) ಕಾಲಿ ಬಿದ್ದಿರುವ ಮನೆಯೊಂದನ್ನು ತೋರಿಸಿ ಅದು ಭೂತದ ಮನೆಯೆಂದು ಕಥೆ ಹೇಳತೊಡಗಿದರು!. ನಾನಂತೂ ವಾರಕ್ಕೆ ಕನಿಷ್ಠ 2 ಬಾರಿಯಾದರೂ ಆ ದಾರಿಯಲ್ಲಿ ಒಬ್ಬಳೇ ನಡೆದು ಹೋಗಬೇಕಿತ್ತು. ಸಂಗೀತ ಪಾಠಕ್ಕೆ ಹೋಗಲು ಇನ್ನು ಮುಂದೆ ಅಮ್ಮನನ್ನು ಜೊತೆಗೆ ಬರಲು ಹೇಳಬಹುದು. ಆದರೆ ಪೆಪ್ಸಿ ತಿನ್ನಲು?!! ಪೆಪ್ಸಿ ಅಂದರೆ ನಮ್ಮೂರಲ್ಲಿ ದೊರೆಯುತಿದ್ದ ಐಸ್ ಕ್ಯಾಂಡಿ. ಇದನಂತೂ ಅಮ್ಮನಿಗೆ ಹೇಳಿದರೆ ಅಷ್ಟೇ ಕಥೆ. ಸರಿ, ಇನ್ನು ಉಳಿದಿದ್ದು ಒಂದೇ ದಾರಿ. ನವೀನ, ನನ್ನ ಆಪ್ತ ಮಿತ್ರ. ನನ್ನದೇ ವಯಸ್ಸಿನ ಅವನಲ್ಲಿ ಎಲ್ಲವನ್ನೂ ವಿವರಿಸಿದೆ. ಘನ ಚರ್ಚೆಯ ಅವಸಾನದಲ್ಲಿ ನಾವಿಬ್ಬರು ಒಂದು ತೀರ್ಮಾನಕ್ಕೆ ತಲುಪಿದೆವು. ಪಕ್ಕದ ಮಿಲ್ಲಿನಲ್ಲಿ ಕೆಲಸಕ್ಕೆ ಬರುವ ಮಣಿ ಅಣ್ಣನಲ್ಲಿ ಸಹಾಯವನ್ನು ಕೇಳುವುದು. ಅವರಿಗೆ ಅಪಾರ ಧೈರ್ಯ ಎಂಬುವುದಾಗಿತ್ತು ನವೀನನ ವಾದ. ಅಂತೆಯೇ ಇಬ್ಬರೂ ನಮ್ಮ ಸಂಕಟವನ್ನು ಮಣಿ ಅಣ್ಣನಲ್ಲಿ ತೋಡಿಕೊಂಡೆವು. “ಅಬ್ಬಾ.. ಅದು ಹಿಂದಿನಿಂದ ಕರೆಯುತ್ತದೆ. ನೀರು ಬೇಕು ಎಂದೂ ಕೇಳಬಹುದು. ತಿರುಗಿದರೆ ಅಷ್ಟೇ ಮತ್ತೆ. ನನ್ನಲ್ಲೂ ಕೇಳಿತ್ತು. ನಾನೇ ಕಷ್ಟದಲ್ಲಿ ತಪ್ಪಿಸಿಕೊಂಡೆ. ನಿಮಗೆಲ್ಲಾ ಆಗಲ್ಲ.” ಎಂದೇ ಬಿಟ್ಟರು ಮಣಿ ಅಣ್ಣ. ಇನ್ನು ಮೇಲೆ ಆ ಕಡೆಗೆ ಹೋಗುತ್ತಿದ್ದಾರೆ ಜೊತೆಯಾಗಿಯೇ ಹೋಗಿ, ತಿರುಗಿ ನೋಡಬೇಡಿ, ಮತ್ತು ಏನಾದರೂ ಸಮಸ್ಯೆಯಾದಲ್ಲಿ ನನ್ನಲ್ಲಿಗೆ ಬನ್ನಿ ಎಂಬ ಸಲಹೆ ದೊರೆಯಿತು. ಅವರ ಮಾತಿನಂತೆ ಮತ್ತೆ ಯಾವಾಗಲೂ ನಾವಿಬ್ಬರು ಜೊತೆಯಾಗಿಯೇ ಪೆಪ್ಸಿ ತಿನ್ನಲು ಹೋಗುತ್ತಿದ್ದೆವು. ಹಾಗಿರಬೇಕಾದರೆ ಒಂದು ದಿನ ಧಿಡೀರನೆ ಆ ಮನೆಗೆ ಕೆಲವಷ್ಟೇ ಮೀಟರುಗಳ ದೂರದಲ್ಲಿ ನಮ್ಮನ್ನು ಯಾರು ಹಿಂದಿನಿಂದ “ಒಯ್ಯ್” ಎಂದು ಕರೆದಂತೆ ಭಾಸವಾಯಿತು. ಏನು, ಯಾರು ಎಂದೂ ನೋಡದೆ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಕಾಲುಕಿತ್ತೆವು ನಾವಿಬ್ಬರು. ನಡಿದಿದ್ದ ಘಟನೆಯನ್ನು ಮಣಿ ಅಣ್ಣನಿಗೆ ತಿಳಿಸೋಣವೆಂದು ಮಿಲ್ಲಿಗೆ ಹೋದ ನಾವು ಅಲ್ಲಿದ್ದ ತಾತನೊಬ್ಬರ ಕೈಯಲ್ಲಿ ಸಿಕ್ಕಿಹಾಕಿಕೊಂಡೆವು. ನಮ್ಮ ಕತೆಯನ್ನೆಲ್ಲಾ ಕೇಳಿ “ಆ ಕುಡುಕ ಹೇಳಿದ ಕಥೆಯನ್ನೆಲ್ಲ ನಂಬುತ್ತೀರಾ ಮಕ್ಕಳೇ, ನಡೆಯಿರಿ ಮನೆಗೆ” ಎಂದು ಬೈದು ಅಟ್ಟಿದರು ಆ ಹಿರಿಯರು.
ಮತ್ತೊಂದಷ್ಟು ವರುಷಗಳ ಕಾಲ ಭೂತದ ಕಥೆಗಳನ್ನು ನಾನು ಕೇಳಲೇ ಇಲ್ಲ. ಹಾಸ್ಟೆಲ್ ಜೀವನವು ಪ್ರಾರಂಭವಾದ ಸಮಯ. ನಮ್ಮ ರೂಮಿನ ಹಿಂಬದಿಯಲ್ಲಿ ಯಾರದ್ದೋ ಅಡಿಕೆ ತೋಟವೊಂದಿತ್ತು. ನನ್ನ ರೂಮ್-ಮೇಟ್ ಸಿರಸಿ ಕಡೆಯವಳು. ಹಾಗಾಗಿಯೇ ನಮಗಿಬ್ಬರಿಗೂ ಅಡಿಕೆ ತೋಟವೇನು ಹೊಸದಲ್ಲ. ಆದರೆ ನಮ್ಮ ಪಕ್ಕದ ರೂಮಿನಲ್ಲಿ ಅಸ್ಸಾಂನಿಂದ ಬಂದ ಹುಡುಗಿಯೊಬ್ಬಳು ಇರುತ್ತಿದ್ದಳು. ಮೊದಲ ಸೆಮಿಸ್ಟರಿನ ಪರೀಕ್ಷೆಗಳಿಗೆ ಓದಲು ರಜೆ ಪ್ರಾರಂಭವಾಗಿತ್ತು. ಹಾಗಾಗಿಯೇ ಹಾಸ್ಟೆಲ್ ಅಲ್ಲಿ ಜಾಸ್ತಿ ವಿದ್ಯಾರ್ಥಿಗಳಿರಲಿಲ್ಲ. ಹಾಗಿರುವಾಗ ಒಂದು ರಾತ್ರಿ ಪಕ್ಕದ ರೂಮಿನ ಅಸ್ಸಾಮಿ ಹುಡುಗಿ ನಮ್ಮಲ್ಲಿಗೆ ಬಂದು ಗದ್ದಲವನ್ನೆಬ್ಬಿಸಲು ತೊಡಗಿದಳು. ಅವಳ ಪ್ರಕಾರ “ ತೆಂಗಿನ ತೋಡದಲ್ಲಿ ಆಗ್ಗಾಗೆ ಬೆಂಕಿ ಕಾಣಿಸುತ್ತಿದೆ. ಅಲ್ಲೇನೋ ಇದೆ.” ಅದು ಅಡಿಕೆ ತೋಟವಮ್ಮ, ಬೆಂಕಿ-ಗಿಂಕಿ ಏನು ಇಲ್ಲ, ಸುಮ್ನೆ ಮಲ್ಕೋ ಎಂದು ಎಷ್ಟು ಹೇಳಿದರು ಆಕೆ ನಂಬುತ್ತಿರಲಿಲ್ಲ.ಅವಳ ಹರಟೆ ತಾಳಲಾರದೆ ನಾವಿಬ್ಬರು ಅವಳ ರೂಮಿಗೆ ಹೋಗಿ ಅವಳ ಹಾಸಿಗೆಯನ್ನೂ, ಸಾಮಾನುಗಳನ್ನೂ ಹೊತ್ತು ನಮ್ಮ ರೂಮಿಗೆ ತರಬೇಕಾಯಿತು. ಪರೀಕ್ಷೆಯು ಮುಗಿದಂತೆ ಬಹುತೇಕ ವಿದ್ಯಾರ್ಥಿಗಳು ಊರಿಗೆ ತೆರಳಿದರು. ಅದೇನೋ ಕೆಲಸದ ನಿಮಿತ್ತ ನಾವಿಬ್ಬರು ಇನ್ನೂ ಅಲ್ಲೇ ಉಳಿದಿದ್ದೆವು. ರಾತ್ರಿ 12 ರ ಸಮಯ. ಲ್ಯಾಪ್ಟಾಪ್ ನಲ್ಲಿ ಏನೂ ಮಾಡುತಿದ್ದ ರೂಮ್-ಮೇಟ್ ಧಿಡೀರನೆ ಎದ್ದು “ಅಲ್ಲೇನೋ ಇದೆ, ನೋಡು” ಅಂದಳು. ಅಸ್ಸಾಂ ಹುಡುಗಿಯ ರೋಗ ಇವಳಿಗೂ ಬಂತೆ ಅಂದುಕೊಳ್ಳುತ್ತ ಆ ಕಡೆಗೆ ನೋಡಿದೆ. ತೋಟದ ಕಡೆಯಿಂದ ಅದೇನೂ ಬೆಳಕು. ಸರಿಯಾಗಿ ನೋಡೋಣವೆಂದು ಕರ್ಟನ್ ಸರಿಸಿದರೆ ಏನು ಇಲ್ಲ. ಮತ್ತೆ ಮುಚ್ಚಿದರೆ ಮತ್ತೆ ಕಾಣಿಸುತ್ತದೆ. ತೆರೆದು ಮುಚ್ಚಿ, ತೆರೆದು ಮುಚ್ಚಿ ನೋಡಿದೆವು. ಗಮನಿಸಿ ನೋಡಿದಾಗ ತಿಳಿಯಿತು ಇದ್ಯಾವುದೋ ಆಸಾಮಿಯ ಕೆಲಸವೆಂದು. ಹಾಸ್ಟೆಲ್ ಕಡೆಗೆ ಟಾರ್ಚು ಹಾಕಿ ಇಣುಕುತಿದ್ದ ಅದ್ಯಾವುದೋ ಕಿಡಿಗೇಡಿ. ಅದನ್ನೇ ನಮ್ಮ ಅಸ್ಸಾಂ ಕುಮಾರಿಯು ಭೂತವೆಂದು ಹಾಸ್ಟೆಲ್ ಪೂರಾ ಹೇಳುತ್ತಾ ಬಂದಿದ್ದಳು.
ಇನ್ನೇನೂ ಜೀವನದಲ್ಲಿ ಈ ತರಹದ ಅನುಭವಗಳು ಆಗಲ್ಲ ಎಂದುಕೊಂಡಿದ್ದೆ ನಾನು. ಕೆಲಸಕ್ಕೆ ಸೇರಿದ ಹೊಸದರಲ್ಲಿ ಟ್ರೈನಿಂಗಿಗೆ ಎಂದು ಮೈಸೂರಿಗೆ ತೆರಳಿದ್ದೆ. ಅದು ಒಂದು ದೊಡ್ಡ ಕ್ಯಾಂಪಸ್. ಕಾಲೇಜಿಗಿಂತಲೂ ವರ್ಣ ರಂಜಿತವಾದ ಕತೆಗಳು ಚಾಲ್ತಿಯಲ್ಲಿದ್ದ ಜಾಗವದು. ದಿನಕ್ಕೊಂದರಂತೆ ಹೊಸ ಕತೆಗಳು ಹುಟ್ಟಿಕೊಳ್ಳುತಿದ್ದವು. ಕತ್ತಲು ಕೋಣೆಯೊಳಗೆ ಹಠಾತ್ ಆಗಿ ಒಬ್ಬರಿಗೆ ಬೆಳಕೊಂದು ಕಂಡರೆ, ಬೆಳಗ್ಗೆ ಎದ್ದೊಡನೆ ಕನ್ನಡಿಯಲ್ಲಿ ಬೆರಳ ಗುರುತುಗಳು ಕಂಡಿತ್ತು ಇನ್ನೊಬರಿಗೆ. ಹೀಗೇ ತಾಯತಗಳನ್ನೂ, ಮಂತರಿಸಿದ ನೂಲುಗಳನ್ನು ಕಟ್ಟಿಸಿಕೊಂಡರು ಹಲವರು. ಇವೆಲ್ಲದರ ನಡುವೆಯೂ ಕುತೂಹಲ ಕೆರಳಿಸುವ ಕಥೆಯಾಗಿತ್ತು ಬಿಲ್ಡಿಂಗ್ 53 ರದ್ದು. ಅದೊಂದು ದೊಡ್ಡ ಹಾಸ್ಟೆಲ್ ಕಟ್ಟಡ. ಆದರೆ ಅಲ್ಲಿ ಯಾರು ವಾಸಿಸುತಿರಲಿಲ್ಲ. ಹಿಂದೆಂದೋ ಆತ್ಮಹತ್ಯೆ ಮಾಡಿಕೊಂಡ ಯಾವುದೋ ಹುಡುಗಿಯ ಆತ್ಮವಿನ್ನೂ ಅಲ್ಲೇ ಅಲೆದಾಡುತ್ತಿದೆ ಎಂಬುದಾಗಿತ್ತು ವದಂತಿ. ಅದೇನು ಎಂದು ನೋಡಿಯೇ ಬಿಡೋಣ ಅಂದುಕೊಳ್ಳುತ್ತ ಸೈಕಲ್ ಹತ್ತಿ ಆ ಬಿಲ್ಡಿಂಗ್ ಪಕ್ಕಕೆ ತೆರಳಿದೆವು ನಾವು 3-4 ಹುಡುಗಿಯರು. ನಮ್ಮನ್ನು ನೋಡಿದ್ದೇ ತಡ ಕಾವಲುಗಾರನು ನಿಲ್ಲಿಸಿ ಕನ್ನಡದಲ್ಲಿ ಕೇಳತೊಡಗಿದ “ನಿಮಗೇನು ಇಲ್ಲಿ ಕೆಲಸ. ಏನಮ್ಮ ಹಿಂದುಗಡೆ ಹುಡುಗರ ಹಾಸ್ಟೆಲ್ ಇದೆ ಅಂತ ನೋಡೋಕೆ ಬಂದಿರಾ?”. ಏನು ಹೇಳಬೇಕೆಂದು ತಿಳಿಯದೆ ಪೆಚ್ಚು ಮೊರೆ ಹಾಕಿ ಕನ್ನಡವೇ ತಿಳಿದಿಲ್ಲದವರಂತೆ “ಸಾರೀ ಸರ್ ” ಎಂದು ಹೇಳಿ ಹಿಂತಿರುಗಬೇಕಾಯಿತು. ಆದರೆ ನಮ್ಮ ಕುತೂಹಲವಿನ್ನೂ ಶಮನವಾಗದಿದ್ದುದರಿಂದ, ಈಗಾಗಲೇ ಪರಿಚಿತರಾಗಿದ್ದ ನಮ್ಮ ಬಿಲ್ಡಿಂಗ್ ಕಾವಲುಗಾರನಲ್ಲಿ ಈ ಬಗ್ಗೆ ಕೇಳೋಣವೆಂದು ತೀರ್ಮಾನಿಸಿದೆವು. ನಮ್ಮ ಈ ಭಯಂಕರ ಪ್ರಶ್ನೆಗೆ, ಅವರು ಮಾತ್ರ ನಗುತ್ತಾ “ಕಳೆದ ವರ್ಷ ಬಿಲ್ಡಿಂಗ್ 13 ಆಗಿತ್ತು, ಈ ವರ್ಷ 53 ಆಯ್ತಾ?” ಎಂದರು.
ಹಲವಾರು ಬಾರಿ ಇಂತಹ ಘಟನೆಗಳನ್ನು ಸಿನಿಮಾಗಳಲ್ಲಿ ನೋಡಿರುತ್ತೇವೆ. ಕೆಲವು ಪರಿಚಿತರು ಹೇಳುವುದನ್ನೂ ಕೇಳಿರುತ್ತೇವೆ. ಇವುಗಳ ಸತ್ಯಸತ್ಯತೆಯೂ, ಉಗಮವೋ ನನಗೆ ತಿಳಿಯದು. ನಿಜವೋ ಸುಳ್ಳೋ ಎಂದೂ ಗೊತ್ತಿಲ್ಲ. ಆದರೆ ಅದೇನೇ ಇರಲಿ ಈ ಘಟನೆಗಳನ್ನು ನೆನಪಿಸಿ ಕೊಂಡರೆ ಒಮ್ಮೆ ಮೈ ಜುಮ್ಮ್ ಅನಿಸುವುದಂತೂ ನಿಜ.
-ಪಲ್ಲವಿ ಭಟ್, ಬೆಂಗಳೂರು
ಹಹ್ಹಾ …ಸೂಪರ್ . ಚೆಂದದ ನಿರೂಪಣೆ.
ಇದೇ ರೀತಿಯ ಭೂತದೊಂದಿಗಿನ ಒಡನಾಟದ ಕತೆಗಳು ನನ್ನ ಶಾಲಾದಿನಗಳಲ್ಲಿಯೂ ಹರಿದಾಡುತ್ತಿದ್ದುವು. ನಮ್ಮ ಶಾಲೆಯ ಪಕ್ಕದಲ್ಲಿಯೂ ಬುಗುರಿ ಮರ ಇದ್ದರೂ, ‘ಭೂತ’ದ ಕಥೆಗೆ ಅಲ್ಲಿಯೇ ಇದ್ದ ‘ಸಂಪಿಗೆ’ಮರವನ್ನು ಜೋಡಿಸಿದ್ದರು…ಕಾರಣ ಗೊತ್ತಿಲ್ಲ!
ಧನ್ಯವಾದಗಳು 🙂
ಬಹಳ ಚೆನ್ನಾಗಿದೆ ಬರಹ! ನೀವಂದಂತೆ ಇಂತಹ ಭೂತದ ಕಥೆಗಳು ಮೆಲುಕು ಹಾಕುವುದು ಮಜಾ.. ನಾನೂ ಹಾಸ್ಟೆಲ್ನಲ್ಲಿ ಇದ್ದಾಗ ಪಕ್ಕದ ಜೂನಿಯರ್ ಹುಡುಗರ ಹಾಸ್ಟೆಲ್ ಗೆ ಕಾಣಿಸುವಂತೆ ನಮ್ಮ ಕತ್ತಲೆ ಕೋಣೆ ಒಂದರ ಕಿಟಕಿಯ ಮೂಲಕ ಸಿನೆಮಾಗಳಲ್ಲಿ ಕಾಣಸಿಗುವ ದೆವ್ವದ ವೇಷ ತೊಟ್ಟು torch ಬೆಳಕಿನಲ್ಲಿ ಹೆಸರಿಸಿದ್ದು ಉಂಟು. ನಿಮ್ಮ ಬರಹ ಓದಿದಾಗ ನಾನು ಕೇಳಿದ ಹಲವು ಕಥೆಗಳು ನೆನಪಿಗೆ ಬಂತು! ಧನ್ಯವಾದ ಪಲ್ಲವಿ! 🙂
ಧನ್ಯವಾದಗಳು ಶ್ರುತಿ 🙂
ಚೆನ್ನಾಗಿದೆ . ದೆವ್ವ, ಭೂತ , ಪಿಶಾಚಿಗಳು ಇವೆಯೇ , ಇಲ್ಲವೇ ಅನ್ನೋದು ಒಂದು ಯಕ್ಷ ಪ್ರಶ್ನೆ . ನನಗೂ ಈ ವಿಚಾರದಲ್ಲಿ ಬಹಳ ಕುತೂಹಲವಿದೆ , ಇವತ್ತಿನವರೆಗೂ ಅವುಗಳು ಕಾಣ ಸಿಗುತ್ತವೋ ಏನೋ ಅಂತ ನಾನೂ , ನನ್ನ ಗಂಡ ಇಬ್ರು ಹುಡುಕುತ್ತಾ ಮಧ್ಯ ರಾತ್ರಿಗೂ ನಮ್ಮ ತೋಟಕ್ಕೆ (ಮನೆಯಿಂದ ಸ್ವಲ್ಪ ದೂರ ಇದೆ ) ಕಾಡು ದಾರಿಯಲ್ಲಿ ಓಡಾಡ್ತಾ ಇದ್ದೇವೆ , ಆದ್ರೆ ಸಿಕ್ಕೇ ಇಲ್ಲ ನನ್ನ ಗಂಡ ನೀನೇ ದೊಡ್ಡ ದೆವ್ವ ಇನ್ನು ನೀನು ಜೊತೆಗಿದ್ರೆ ಅದು ಎಲ್ಲಿಂದ ಬರುತ್ತೆ ಅಂತ ರೇಗಿಸ್ತಾರೆ (ಹ್ಹ… ಹ್ಹ… ಹ್ಹ).
ಏನೇ ಆದರೂ ಇದೊಂದು ಇಂಟೆರೆಸ್ಟಿಂಗ್ ಟಾಪಿಕ್ .
ನಿಮ್ಮ ಅನ್ಸ್ವೆಷಣೆಯಲ್ಲಿ ಏನನ್ನಾದರೂ ಕಂಡರೆ ತಿಳಿಸಿ 😛 ಧನ್ಯವಾದಗಳು 🙂
ಸರಾಗವಾಗಿ ಓದಿಸಿಕೊಂಡು ಹೋಗುವಂತಹ ಸುಂದರ ಲೇಖನ…ಲವಲವಿಕೆಯ ಕುತೂಹಲ ಹುಟ್ಟಿಸುವ ನಿರೂಪಣೆ….ಅಭಿನಂದನೆಗಳು ..
ಧನ್ಯವಾದಗಳು 🙂
ನಾನೂ ಲೇಖನ ಓದಿದೆ…. ಅರೇ ನನಗೂ ಗೊತ್ತಿಲ್ಲದಂತ ಅನೇಕ ಬಂಡವಾಳ ನಿನ್ನಲ್ಲಿ ಇದೆಯಲ್ಲಾ….. Good… ಈ ಹವ್ಯಾಸ.. ಪ್ರವೃತ್ತಿಯಾಗಿ ಬೆಳೆಯಲಿ… ಶುಭಂ ಭವತು!!!!
ಧನ್ಯವಾದಗಳು 🙂
Very nice
ಹೌದು..ಈ ತರಹದ ಭೂತ ಬಂಗಲೆಗಳನ್ನು ನಾನೂ ದೂರದಿಂದ ನೋಡಿದ ನೆನಪು. ಸಿನಿಮಾದವರಿಗೆ ತುಂಬಾ ಪ್ರೀತಿಯ ಬಂಗಲೆ..ನೋಡುಗರನ್ನು ಹೆದರಿಸುವುದಕ್ಕೆ!! ನಿಮ್ಮ ಲೇಖನ ಸೊಗಸಾಗಿದೆ.