ಸ್ವಚ್ಛ ಭಾರತ ಅಭಿಯಾನದ ಯಶಸ್ಸಿಗೆ ಶಿಕ್ಷಕ-ಪೋಷಕರ ಪಾತ್ರ.

Share Button

”ಸ್ವಚ್ಛತೆ ಇದ್ದಲ್ಲಿ ತಾಯಿ ಶಾರದಾ ಮಾತೆ ನೆಲೆಸಿರುತ್ತಾಳೆ” ಎಂಬ ಶಿಕ್ಷಕರ ಬುದ್ಧಿಮಾತನ್ನು  ವಿದ್ಯಾಭ್ಯಾಸದ ಅವಧಿಯಲ್ಲಿ ನಾವೆಲ್ಲರೂ ಕೇಳಿದ್ದೇವೆ. ಇದರ ಉದ್ದೇಶ ನಮ್ಮಗಳ ಆರೋಗ್ಯದ ದೃಷ್ಟಿಯಿಂದ ನಾವು ವಾಸಿಸುವ ಸುತ್ತಮತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು  ಸ್ವಚ್ಛತೆಯ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು.ಈ ಕೆಲಸ ನಮ್ಮಗಳ ಮನೆಯ ಪರಿಸರದಿಂದಲೇ ಶುರುವಾಗಬೇಕೆಂದು ಪೋಷಕರು ಮತ್ತು ವಿದ್ಯಾರ್ಥಿ ಜೀವನದಿಂದಲೇ  ಪ್ರಾರಂಭವಾಗಬೇಕೆಂದು ಶಿಕ್ಷಕರು, ಈರ್ವರೂ ಒಟ್ಟಾಗಿ ಮಕ್ಕಳಲ್ಲಿ ಜಾಗೃತಿ ಮೂಡಿಸಿದರೆ  ‘ಸ್ವಚ್ಛಭಾರತ ಅಭಿಯಾನ’ಕ್ಕೆ ಶೇ.90ರಷ್ಟು ಯಶಸ್ಸು ದೊರೆಯುತ್ತದೆ. ಇದರಿಂದ ನಮ್ಮಗಳ ಜೊತೆಗೆ ಮುಂದಿನ ತಲೆಮಾರುಗಳು ಕೂಡ ಲಾಭವನ್ನು ಪಡೆಯುತ್ತಾರೆ. “ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು” ಎನ್ನುವುದು ತುಂಬಾ ಹಳೆಯದಾದ ವಿಚಾರ. ಇದೀಗ ಮಕ್ಕಳು ಹುಟ್ಟತ್ತಲೇ ಪ್ರಜೆಗಳು ಎಂಬ ಸತ್ಯವನ್ನು ಪೋಷಕ-ಶಿಕ್ಷಕರು ಮೊದಲು ಅರಿಯಬೇಕಿದೆ.ಮಕ್ಕಳಿಗೆ ಅವರವರ ಜವಾಬ್ದಾರಿಗಳನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು.
.
ಆರೋಗ್ಯವನ್ನು ಎರಡು ರೀತಿಯಲ್ಲೂ ಕಾಪಾಡಿಕೊಳ್ಳಬೇಕು ಒಂದು ದೈಹಿಕ ಮತ್ತೊಂದು ಮಾನಸಿಕ ಆರೋಗ್ಯ. ಮಕ್ಕಳು ಆರೋಗ್ಯದ ವಿಚಾರದಲ್ಲಿ ಸಿದ್ಧಗೊಂಡಾಗ ಮಾತ್ರ ಜ್ಞಾನದ ಹೆಬ್ಬಾಗಿಲು ತೆರೆಯುತ್ತದೆ. ಸ್ವಚ್ಛತೆಯ ಅರಿವು ಎನ್ನುವುದು ಆಚಾರಕ್ಕೆ ಬಂದಾಗಲೇ ಸದೃಢತೆ ಎನ್ನುವುದು ಸ್ವಚ್ಛತೆಯ ಜೊತೆ ಸೇರಿ “ಆರೋಗ್ಯವೇ ಮಹಾ ಭಾಗ್ಯ”ವೆನಿಸಿಕೊಳ್ಳುತ್ತದೆ.
.
” ಸ್ವಚ್ಛತೆಯೇ ಆರೋಗ್ಯದ ಗುಟ್ಟು” . ಆರೋಗ್ಯವನ್ನು ಹಿಡಿದಿಡಲು ನಮ್ಮಗಳ ಸುತ್ತಮುತ್ತ ಉತ್ತಮವಾದ ಪರಿಸರ ನಿರ್ವಹಣೆ ಮಾಡುವುದು ಅತ್ಯವಶ್ಯಕ. ಇದಕ್ಕಾಗಿಯೇ ಭಾರತದ ಪ್ರಧಾನಿಗಳಾದ ಮೋದಿಜಿಯವರು ಮಹಾತ್ಮ ಗಾಂಧೀಜಿಯವರ ಹುಟ್ಟುಹಬ್ಬದ ದಿನವಾದ ಅಕ್ಟೊಬರ್ 2, 2014 ರಂದು ಸ್ವಚ್ಛ ಭಾರತ ಅಭಿಯಾನವನ್ನು ತಮ್ಮಾದಿಯಾಗಿ ಇಡೀ ದೇಶವಾಸಿಗಳಿಗೆ ತಿಳಿಸಿಕೊಟ್ಟು ಎಲ್ಲರಿಗೂ ಈ ಅಭಿಯಾನಕ್ಕೆ ಕೈಜೋಡಿಸುವಂತೆ ಕರೆನೀಡಿದರು. ಗಾಂಧೀಜಿಯವರು ಜನಿಸಿ ನೂರೈವತ್ತು ವರ್ಷಗಳು ಪೂರ್ಣಗೊಳ್ಳುವ ಅಕ್ಟೊಬರ್ 2,2019 ರವರೆಗೂ ಈ ಯೋಜನೆಯನ್ನು ನಿಗಧಿಪಡಿಸಲಾಗಿದೆ.ಈ ಅವಧಿಯಲ್ಲಿ ಸಂಪೂರ್ಣವಾಗಿ ಸ್ವಚ್ಛಭಾರತ ನಿರ್ಮಾಣವಾಗಬೇಕು ಎಂಬ ಗುರಿಯನ್ನು ನಾವುಗಳು ಇನ್ನೂ ತಲುಪಬೇಕಾಗಿದೆ.
.
ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸುವುದು ಅತ್ಯಂತ  ಮಹತ್ವದ್ದು.  ಶಾಲೆಯಲ್ಲಿ ಮಕ್ಕಳಿಂದ ಸ್ವಚ್ಚತೆ ಮತ್ತು ಪರಿಸರ ನೈರ್ಮಲ್ಯದ ಕುರಿತು ಆಗಾಗ್ಗೆ ಚರ್ಚೆಗಳನ್ನು ಶಿಕ್ಷಕನು ಆಯೋಜಿಸುತ್ತಿರಬೇಕು. ಶಾಲೆಯ ಕೋಣೆಗಳು, ಗ್ರಂಥಾಲಯಗಳನ್ನು ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನ ಪಡೆದು ಸ್ವಚ್ಚಗೊಳಿಸುವ ಸನ್ನಿವೇಶಗಳನ್ನು ಶಿಕ್ಷಕರು ರೂಪುಗೊಳಿಸಬೇಕು ಕುಡಿಯುವ ನೀರಿನ ಟ್ಯಾಂಕ್, ಆಹಾರ ತಯಾರಿಸುವ ಪಾತ್ರೆಗಳು, ಅಡುಗೆಮನೆ, ತರಗತಿ ಕೊಠಡಿ, ಊಟಕ್ಕೂ ಮುನ್ನ ಮತ್ತು ನಂತರ ಕೈ ತೊಳೆಯುವ ವಿಧಾನ, ಆಟದ ಮೈದಾನ, ಶೌಚಾಲಯಗಳನ್ನು ಶಿಕ್ಷಕರ ಜೊತೆ ಸೇರಿ ಸಕಾಲಕ್ಕೆ ಸ್ವಚ್ಛ ಮಾಡುತ್ತಿರಬೇಕು.ಆಟದ ಮೈದಾನದ ಅಕ್ಕಪಕ್ಕದಲ್ಲಿ ಗಿಡಗಳನ್ನು ನೆಟ್ಟು ನೀರು ಗೊಬ್ಬರ ಹಾಕಿ ಪೋಷಿಸುವ ಕೆಲಸವನ್ನು ವಿದ್ಯಾರ್ಥಿಗಳಿಗೆ ಶಿಕ್ಷಕರು ಹಂಚಿಕೆ ಮಾಡಬೇಕು.

ದಶಕದ ಹಿಂದೆ ನಮ್ಮ ಸರಕಾರಿ ಶಾಲೆಗಳಲ್ಲಿ ಶಿಕ್ಷಕರು ಒಬ್ಬರಿಗೊಂದು ಗಿಡ ಹಂಚಿ “ಬೇಸಿಗೆ ರಜೆಯಲ್ಲಿ ಬಂದು ನೀರು ಗೊಬ್ಬರ ಹಾಕ್ರಿ ಯಾರು ಗಿಡ ಚೆನ್ನಾಗಿ ಬೆಳೆಯುತ್ತದೆಯೋ ಅವರಿಗೆ ಪೆನ್ನು, ಪುಸ್ತಕ ಬಹುಮಾನವಾಗಿ ಕೊಡುತ್ತೇವೆಂದು‘ ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿಸಲು  ಹುರಿದುಂಬಿಸುತ್ತಿದ್ದರು. ನಾವಿನ್ನೂ ಅವರ ಕಾಳಜಿಯನ್ನು ಮರೆತಿಲ್ಲ. ಶಿಕ್ಷಕರು ವಿದ್ಯಾರ್ಥಿಗಳಿಂದ ಶಾಲೆಯಿರುವ ಗ್ರಾಮಗಳಲ್ಲಿಯೇ ಸಾಧ್ಯವಾದರೆ ಬೀದಿ ನಾಟಕ, ಪರಿಸರ ಶುಚಿತ್ವದ ಅರಿವು ಮೂಡಿಸುವ ವಿಭಿನ್ನ ಕಾರ್ಯಕ್ರಮಗಳ ಮೂಲಕ ಜನಗಳಲ್ಲಿ ಸ್ವಚ್ಛತೆಯ ಉದ್ಧೇಶವನ್ನು ಮೂಡಿಸಬೇಕು. ಸಮುದಾಯದ ನೆರವಿನಿಂದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ‘ಸ್ವಚ್ಛತೆಯೇ ಆರೋಗ್ಯಕ್ಕೆ ಅಡಿಪಾಯ’ ಎನ್ನುವಂತೆ ಕಿರು ಪ್ರಬಂಧ, ಚರ್ಚೆ, ಬಹು ಭಾಷಾ ಭಾಷಣ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಸ್ವಚ್ಛಭಾರತ ಅಭಿಯಾನದ ಪರಿಕಲ್ಪನೆ ಮೂಡಿಸಬೇಕಾಗಿದೆ. ಅವಕಾಶವಿದ್ದರೆ ದಾನಿಗಳ ನೆರವು ಪಡೆದು ಪೋಷಕರಿಗೂ ಒಮ್ಮೊಮ್ಮೆ ಇಂತಹ ಆರೋಗ್ಯಕರ ಸ್ಪರ್ಧೆಗಳನ್ನು ಆಯೋಜಿಸುವುದು ಇಡೀ ಸಮಾಜವನ್ನು ಸ್ವಚ್ಛತೆಯ ಕಡೆ ಮುಖ ಮಾಡಿಸಲು ಬಲು ಸಹಕಾರಿ.
.
ವಿದ್ಯಾರ್ಥಿಗಳಲ್ಲಿನ ಸ್ವಚ್ಛತೆಯ ಮೇಲ್ವಿಚಾರಣೆಯ ಜೊತೆಗೆ ಸ್ವಚ್ಛತೆಯ ಅರಿವನ್ನು ಮೂಡಿಸುವ ಚಿತ್ರ ಪ್ರದರ್ಶನಗಳು, ವರ್ಣಚಿತ್ರಗಳು ಮತ್ತು ಸಂದೇಶಗಳನ್ನು ಸಾರುವ ಸಮೂಹ ಗೀತೆಗಳನ್ನು ಹಾಡಲು ಕಲಿಸುವುದು ಉತ್ತಮ. ಮಕ್ಕಳಿಗೆ ಮುಕ್ತವಾಗಿ ಇಂತಹ ಸಹಪಠ್ಯಗಳಲ್ಲಿ ಭಾಗಿಯಾಗುವ ಅವಕಾಶವನ್ನು ಪೋಷಕ ಪ್ರಭುಗಳು ಅವರವರ ಮಕ್ಕಳಿಗೆ ನೀಡಲೇಬೇಕು. ಬರೀ ಅಂಕಗಳಿಕೆಯ ಮಷಿನ್ ಆಗಿ ಅವರನ್ನು ಪರಿಗಣಿಸದೆ ಅವರಲ್ಲಿ ಸಮಾಜಮುಖಿ ಚಿಂತನೆಗಳನ್ನು ಬೆಳಸಬೇಕು. ಶಿಕ್ಷಕರು ಶಾಲೆಯಲ್ಲಿಯೇ ಮಕ್ಕಳಿಗೆ ಹೊಸದಾದ ಸನ್ನಿವೇಶಗಳನ್ನು ಸೃಷ್ಟಿಮಾಡುತ್ತಿರಬೇಕು. ಮಹಾತ್ಮ ಗಾಂಧೀಜಿಯವರ ಸ್ವಚ್ಛ ಭಾರತ ನಿರ್ಮಾಣದ ಕಲ್ಪನೆಯ ಕನಸನ್ನು ಹಿಡೇರಿಸಲು ಈ ಯೋಜನೆಗೆ ಈರ್ವರು ಅವರೊಂದಿಗೆ ಹೊಸದಾದ ಮುನ್ನುಡಿ ಬರೆಯಲೇ ಬೇಕು.
.
“ಅನುಭವವೇ ಕಲಿಕೆಗೆ ರಹದಾರಿ” . ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ಸ್ವಚ್ಛತೆಯ ಕಡೆ ಗಮನ ನೀಡಲು ನಿತ್ಯದಲ್ಲಿ ಅಲ್ಪ ಅವಧಿಯನ್ನು ಮೀಸಲಿಡಬೇಕು. ಅವರು ಧರಿಸುವ ವಸ್ತ್ರಗಳು, ಓದಿನ ಕೊಠಡಿ,ಬ್ಯಾಗ್, ಹೀಗೆ ಚಿಕ್ಕ ಚಿಕ್ಕದ್ದನ್ನು ಶುಚಿತ್ವದಡಿ ಪರಿಗಣಿಸಬೇಕು. ಪೋಷಕರಿಗಿಂತ ಮಕ್ಕಳು ಶಿಕ್ಷಕರ ಜೊತೆ ಹೆಚ್ಚು ಸಮಯ ಶಾಲೆಯಲ್ಲಿ ಸಕ್ರಿಯವಾಗಿರುತ್ತಾರೆ. ಪಾಠದ ಜೊತೆಜೊತೆಗೆ ನೀತಿ ಬೋಧನೆ, ಮೌಲ್ಯಧಾರಿತ ಅಂಶಗಳು, ಆರೋಗ್ಯ, ಪರಿಸರ ನೈರ್ಮಲ್ಯ ಕಾಪಾಡುವುದರಿಂದ ಆಗುವ ಅನುಕೂಲದ ಸತ್ಯದರ್ಶನವನ್ನು ಶಿಕ್ಷಕರು ಮಾಡಿಸಬೇಕು. ಸ್ವಚ್ಛತೆಯಿಲ್ಲದಿದ್ದರೆ ಆಗುವ ಅಪಾಯಕಾರಿ ಅಂಶಗಳನ್ನು   ತಿಳಿಸಿ ವಾಸ್ತವ ಪ್ರಪಂಚಕ್ಕೆ ಅವರನ್ನೆಲ್ಲಾ ಹತ್ತಿರವಾಗಿಸುತ್ತಲೇ ನೇರವಾದ ಅನುಭವಗಳನ್ನು ನೀಡಬೇಕು.
ಮಹಾತ್ಮರ ಕನಸಿನ ‘ಸ್ವಚ್ಛಭಾರತ ಅಭಿಯಾನ’ ಯಶಸ್ವಿಗೊಳಿಸಬೇಕಾದರೆ ಇದಕ್ಕೆ ಪೋಷಕ ಮತ್ತು ಶಿಕ್ಷಕರ ಸಹಕಾರದ ಸಹಭಾಗಿತ್ವ ವಿದ್ಯಾರ್ಥಿಗಳ ಜೀವನಕ್ಕೆ ಅತ್ಯವಶ್ಯವಾಗಿದೆ.
.
– ಶಿವಾನಂದ್ ಕರೂರ್ ಮಠ್ , ದಾವಣಗೆರೆ.

.

3 Responses

  1. ನಯನ ಬಜಕೂಡ್ಲು says:

    ಚೆನ್ನಾಗಿದೆ ಸರ್ ಬರಹ. ಸ್ವಚ್ಛತೆಯ ಪ್ರತಿ ಹೆತ್ತವರು ಹಾಗು ಶಿಕ್ಷಕರು ಇಬ್ಬರ ಜವಾಬ್ಧಾರಿ ಎಷ್ಟು , ಏನು ಅನ್ನುವುದನ್ನು ಮನದಟ್ಟಾಗುವಂತೆ ವಿವರಿಸಲಾಗಿದೆ .

  2. Channappa says:

    ಸ್ವಚ್ಛ ಭಾರತ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: