ಇದು ಉಳುವವನ ಭೂಮಿ…
ಪಾಲಿಸಿದರು , ಪೋಷಿಸಿದರು
ದೂರಿದರು ,ದೂಷಿಸಿದರು
ಹಂಬಲಿಸದರು ,ಹಾರೈಸಿದರು
ಬೆಳೆದರು , ಕಳೆ ಇದ್ದರು
ಕಿತ್ತೆಸೆದರು , ಬರಸೆಳೆದರು
ನೀರೆರೆದರು, ಸುಮ್ಮನಿದ್ದರು
ಹೇಗೆ ನಡೆಸಿಕೊಂಡರೂ
ನಾ ಸ್ಥಾವರ
ಈ ಎದೆಯ ಒಲವ
ಕೊಳ್ಳೆ ಹೊಡೆಯಲಾಗದು
ಪ್ರೇಮದೊರತೆಯ ಇಂಗಿಸಲಾಗದು
ಪ್ರೀತಿಯ ನಿಕ್ಷೇಪವ ಭೇಧಿಸಲಾಗದು
ಪಾಳು ಬೀಳಿಸಿ ಬಂಜಾರಾಗಿಸಲಾಗದು
ಇದು ಉಳುವವನ ಭೂಮಿ
ಇಲ್ಲಿ ಬೆಳೆದವನದೇ ಬೆಳೆ ಸ್ವಾಮಿ
ಗೆದ್ದೆನೆಂಬ ಗರ್ವವ
ಸೋತನೆಂಬ ವಿಷಾದವ
ಸಿಗಲೇಬೇಕೆನ್ನುವ ದುರಾಸೆಯ
ಕೈತಪ್ಪಿತೆನ್ನುವ ನಿರಾಸೆಯ
ಸಿಗದೇ ಹೋಗಲೆನ್ನುವ ಶಾಪವ
ತಣ್ಣಗಿರಲೆಂಬ ಹಾರೈಕೆಯ
ನನ್ನದಲ್ಲವೆನ್ನುವ ಅತೃಪ್ತಿಯ
ನನ್ನದೇ ಎನ್ನುವ ಸಂತೃಪ್ತಿಯ
ಈ ಎಲ್ಲ ರೂಪಕ್ಕೂ ನಾ
ಜೋಳಿಗೆ ಕಟ್ಟಿದ್ದೇನೆ
ಜೋಗುಳ ಹಾಡಿದ್ದೇನೆ
ಹುಬ್ಬು ತೀಡಿ ಬಾಚಿ ತಬ್ಬಿದ್ದೇನೆ
ನೀವು ನೀಡಿದ ಕೂಸುಗಳ
ನಿಮಗೇ ಕೊಟ್ಟಿದ್ದೇನೆ
ಮತ್ತೆ ಖಾಲಿಯಾಗಿ
ಮಳೆರಾಯನ ಕರೆದಿದ್ದೇನೆ
ಮತ್ತೆ ಹಸಿರಾಗಿ
ಮೈದಳೆಯುತ್ತೇನೆ
-ರಾಜೇಶ್ವರಿ.ಎನ್
ಚೆಂದದ ಕವನ..
ಭೂ ತಾಯಿಯ ಸ್ವಗತ. ಅನ್ನದಾತನನ್ನು ಪೊರೆವ ಭೂಮಿ ತನ್ನೊಳಗೆ ಏನೂ ಇಲ್ಲ , ನೀ ಮಾಡಿದ್ದನ್ನು ನಿನಗೆಯೇ ಮರಳಿ ನೀಡಿದ್ದೇನೆ ಅನ್ನುವ ಅದ್ಭುತ ಸಂದೇಶ .
ಆಹಾ !ಚೆನ್ನಾಗಿ ವರ್ಣಿಸಿರುವಿರಿ ,
ಅರ್ಥವತ್ತಾದ ಕವನ
ಚೆಂದದ ಕವನ
Nice kavana