ಖಾಸಗಿ ಕನಸು…!
ನಿಮಗೆ ಗೊತ್ತಿಲ್ಲವಿದು.., ನನ್ನೆದೆಯ
ಖಾಸಗಿ ವಿಷಯ ಒಂದು ಹೀಗಿದೆ ಎಂದು…!
ಈ ಮಾಧವ ಆ ಮಿಲಿಂದರ ಮೇಲೆ ಹರೆಯದಿಂದಲೂ
ನನಗೆ ಮನಸ್ಸೆಂದರೆ ಮನಸ್ಸೆಂದು..
ನನ್ನಿರುಳ ಕನಸ ತಿಜೋರಿಗೆ ಕನ್ನ
ಹಾಕಿದ್ದರರೀರ್ವರು ! ಮೊಗೆದು ಕೊಟ್ಟಿದ್ದರು
ಅಕ್ಷಯ ಭಂಡಾರದ ಒಲವನು.
ಬಿಡಿ, ಅದೆಲ್ಲಾ ಬರಿದಾಗುವ ಬರಿಯ
ಮೋಹಕ ಮಾತಾಗಿರಲಿಲ್ಲ..
ಆಗೀಗ ತೆರೆಯ ಮೇಲೆ ವಿರಳವಾಗಿ
ಕಂಡತೆ, ಈ ತರಳೆ ಮನಸ್ಸು ಆಗುತ್ತಿತ್ತು
ಮಲ್ಲೆ-ಅರಳೆ..!! ಹಿಂಜಿ ಹಿಂಜಿ…
ತೆರೆತೆರೆಯಾಗಿ ಹಗೂರ ಹಾರುತ್ತಿತ್ತು…!
ಮತ್ತೀಗಲೂ ಅವರ ಕಂಡರೆ ಒಮ್ಮೊಮ್ಮೆ ಹಾಗಾಗುವುದು ಶುದ್ಧ ಸುಳ್ಳೇನಲ್ಲ..
ಆಗ ಮಾಧವ, ಮತ್ತೀಗ ಮಿಲಿಂದ
ಯಾರನ್ನೋ ಮದುವೆಯಾದದ್ದು ಕೇಳಿ;
ಹೊಟ್ಟೆಕಿಚ್ಚು ಹೆಚ್ಚಾಗಿ, ನಿಗಿಕೆಂಡ ಕಣ್ಣಾಗಿ,
ಮನಸ್ಸು -ಸಮಾ…, ಒಂದೇ ಸಮಾ
ಉರಿದಿತ್ತು..
ಈಗಲೂ ಆಗೀಗ್ಗೆ ಮುನಿಸಿನ ದಿನಗಳಲಿ
‘ನನ್ನವರು’ ರಮಿಸಲು ಮರೆತರೋ…
ಅದೇ ಮಾಧವ – ಮಿಲಿಂದರು, ಮತ್ತೆ
ಬಳಿಬರಲು ಕನಸಲೂ ಕಾದಾಡುವರು..
ಹಗಲುಗನಸು ಮರೆಯಾದ ಮೇಲೆ,
‘ನನ್ನವರೇ’ ನನಗೆ ಸದಾ
ಸರ್ವಪ್ರಿಯರಾಗಿ ಉಳಿಯುವರು…
{ಸದಾ ಹರೆಯಕ್ಕೆ ಅಂಟಿಕೊಳ್ಳುವ ಈ
ಮನಸ್ಸೆಂದರೆ ಹೀಗೆಯೇ…?! }
– ವಸುಂಧರಾ ಕೆ ಎಂ., ಬೆಂಗಳೂರು
Chendide kavite.vasundhara
Beautiful madam ji. ಈ ಕವನ ಓದಿ ನನಗೂ ಮತ್ತೆ ನೆನಪಾಗುತ್ತಿದೆ ತೆರೆಮರೆಯಲ್ಲಿ ಅವಿತಿದ್ದ ಆ ಕನಸು . ಮತ್ತೆ ಹುಡುಕಾಟದಲ್ಲಿ ತೊಡಗಿತು ಮನಸು .
ಸಹಜವಾಗಿ ಹೇಳುವುದು ಕಲೆ.
ಚೆಂದ. ಇಷ್ಟವಾಯ್ತು
ಕವಿತೆ ಚೆಂದ ವಸುಂಧರಾ
ಸುಂದರ ಕವನ.