ಧರ್ಮಭೀರು ಧರ್ಮರಾಯ

Share Button


ಯಾವುದು ಧರಿಸಿ ನಿಲ್ಲುತ್ತದೋ ಅದೇ ಧರ್ಮ. ಮನುಷ್ಯನನ್ನೂ ಸಮಾಜವನ್ನೂ ಮಾನವತೆಯಿಂದ ಮಾಧವತೆಯೆಡೆಗೆ ಕೊಂಡೊಯ್ಯುವ ದೈವನಿರ್ಮಿತವಾದ ಸೇತುವೆಯೇ ಧರ್ಮ, ಸಮಾಜವನ್ನು ಹಲವು ಕಾಲ ನಿಲ್ಲಿಸಬಲ್ಲದ್ದು ಧರ್ಮ. ಧರ್ಮೋ ರಕ್ಷತಿ ರಕ್ಷಿತಃ ಎಂಬ ಸುಭಾಷಿತವಿದೆ. ಧರ್ಮವನ್ನು ನಾವು ಕಾಪಾಡಿದರೆ ಧರ್ಮ ನಮ್ಮನ್ನು ಕಾಪಾಡುತ್ತದೆಯಂತೆ. ಸತಿಧರ್ಮ, ಪತಿ ಧರ್ಮ, ಸುತನ ಧರ್ಮ, ಅಪದ್ಧರ್ಮ ಹೀಗೆ ಕಾಲ, ದೇಶ, ಸಂದರ್ಭ, ಸನ್ನಿವೇಶಕ್ಕನುಸಾರ ಅವರವರ ಧರ್ಮಕ್ಕೆ ಗೌರವನೀಡಿ ಬಾಳಬೇಕು.

’ನನ್ನ ಧರ್ಮ ನನ್ನನ್ನು ಕಾಪಾಡೀತು’ ಎಂಬುದು ಜನಪದೀಯರಲ್ಲಿ ಹರಿದು ಬಂದ ನುಡಿ. ಧರ್ಮೋ ವಿಶ್ವಸ್ಥ ಜಗತ: ಪ್ರತಿಷ್ಟಾ:  ಈ ಜಗ ಮೂಲವಾದ ಸ್ವಭಾವಗಳಲ್ಲಿ ಪ್ರತಿಷ್ಠಿತವಾದದ್ದು. ಧರ್ಮಕ್ರಿಯೆಗಳು, ಸೂರ್ಯ-ಚಂದ್ರರು, ಗ್ರಹ- ನಕ್ಷತ್ರಗಳು, ಋತು-ಮಾಸಗಳು ಹೀಗೆ ಸೃಷ್ಟಿಯ ಸಮಸ್ತ ವ್ಯವಹಾರಗಳೂ ಈ ಗತಿ ಶೀಲತೆಯಲ್ಲಿಯೇ ಇರುತ್ತದೆ. ಒಂದು ದಿನವಾದರೂ ಸೂರ್ಯನ ಉದಯಾಸ್ತಗಳು ವ್ಯತ್ಯಸ್ಥವಾಗುವುದಿಲ್ಲ. ಮಳೆ, ಚಳಿ, ಬಿಸಿಲುಗಳು ಕಾಲ ಕಾಲಕ್ಕೆ ತಕ್ಕ ರೀತಿಯಲ್ಲಿ ನಡೆಯುತ್ತದೆ. ಇದಕ್ಕೆ ಮೂಲವಾಗಿದ್ದ್ದು ಭಗವಂತನ ಧರ್ಮಚಕ್ರ, ‘ಯಶೋ ಧರ್ಮ ತತೋಜಯ:.  ಎಲ್ಲಿ ಧರ್ಮವಿದೆಯೋ ಅಲ್ಲಿ ಜಯವಿರುತ್ತದೆ. ಧರ್ಮವನ್ನು ಭದ್ರ ಬುನಾದಿಯನ್ನಾಗಿಸಿ ಯಾರಲ್ಲೂ  ವಿರೋಧವನ್ನು ಕಟ್ಟಿಕೊಳ್ಳದೆ ಅಜಾತ ಶತ್ರುವೆನಿಸಿ ವಿಶೇಷವಾದ ಧರ್ಮಾಚರಣೆಯನ್ನಾಧರಿಸಿಕೊಂಡವನೇ ಧರ್ಮರಾಯ, ಮಹಾಭಾರತದ ಪಾಂಡು ಪುತ್ರನೆಂದು ಹೆಸರು ಪಡೆದ ಇವನು ಕುಂತಿಗೆ ಯಮಧರ್ಮರಾಯನಿಂದ ಹುಟ್ಟಿದವ. ಪಾಂಡವಾಗ್ರಜನಾದ ಇವನಿಗೆ ಯುದಿಷ್ಠಿರ, ಅಜಾತಶತ್ರು, ಧರ್ಮಜ ಮುಂತಾದ ಹೆಸರುಗಳಿವೆ.

ಧರ್ಮರಾಯನ ಜನನ :  ಕಾಡಿನಲ್ಲಿ ಒಂದು ದಿನ ಪಾಂಡುರಾಜನು, ಜಿಂಕೆಯ ರೂಪದಲ್ಲಿರುವ ಕಿಂದಮ ಮಹರ್ಷಿಗಳು ಪತ್ನಿಯೊಂದಿಗೆ ಕೂಡಿದ್ದಾಗ ವಿಷಯ ತಿಳಿಯದೆ ಬಾಣ ಹೂಡುತ್ತಾನೆ. ಕ್ರೋಧಗೊಂಡ ಕಿಂದಮನು ‘ನೀನೂ ನಿನ್ನ ಪತ್ನಿಯೊಂದಿಗೆ ಸೇರಿದಾಗ ನಿನ್ನ ಸಾವು ಉಂಟಾಗಲಿ ಎಂದು ಶಾಪಕೊಡುತ್ತಾನೆ’. ವ್ಯಥೆಗೊಂಡ ಪಾಂಡುರಾಜನು ಪತ್ನಿಯರಾದ ಕುಂತಿ-ಮಾದ್ರಿಯರೊಂದಿಗೆ ಅರಣ್ಯವಾಸ ಮಾಡುತ್ತಾನೆ. ಆದರೂ ಮಕ್ಕಳನ್ನು ಹೊಂದುವ ಅಭಿಲಾಶೆ ನಶಿಸುತ್ತದೆಯೇ? ತನ್ನಮನೋಭಿಷ್ಟವನ್ನು ಪತ್ನಿಯರ ಮುಂದೆ ಒಡ್ಡುತ್ತಾನೆ. ಏನು ತಾನೇ ಮಾಡಲಾದೀತು? ಕ್ಷಣ ಯೋಚಿಸಿದ ಕುಂತಿಯು ಹಿಂದೆ ದೂರ್ವಾಸರು ತನಗೆ ನೀಡಿದ ವರವನ್ನು ನೆನಪು ಮಾಡಿಕೊಳ್ಳುತ್ತಾಳೆ. ಮತ್ತೆ ಪತಿಯ ಅಪ್ಪಣೆ ಪಡೆದು ಕ್ರಮವಾಗಿ ಯಮಧರ್ಮರಾಯನಿಂದ ಯುಧಿಷ್ಠಿರನನ್ನು, ವಾಯುವಿನ ಅನುಗ್ರಹದಿಂದ ಭೀಮನನ್ನೂ, ಇಂದ್ರನಿಂದ ಅರ್ಜುನನನ್ನೂ ಪಡೆಯುತ್ತಾಳೆ. ಸೂರ್ಯನು ತುಲಾರಾಶಿಯಲ್ಲಿರುವಾಗ ಪೂರ್ಣ ತಿಥಿಯೆನ್ನಿಸಿಕೊಂಡ ಪಂಚಮೀ ತಿಥಿಯಲ್ಲಿ ಇಂದ್ರ ದೇವಾತ್ಮಕವಾದ ಜೇಷ್ಠಾ ನಕ್ಷತ್ರದೊಡನೆ ಚಂದ್ರನು ಸೇರಿದಾಗ ಅಭಿಜಿತ್ ಎಂಬ ಎಂಟನೇ ಮುಹೂರ್ತದಲ್ಲಿ ಕುಂತಿಯು ಧರ್ಮರಾಯನಿಗೆ ಜನ್ಮ ನೀಡುತ್ತಾಳೆ, ಧರ್ಮರಾಯನ ಪತ್ನಿ ದ್ರೌಪದಿ. ಈಕೆಯಲ್ಲಿ ಇವನಿಗೆ ಪ್ರತಿವಿಂದ್ಯನೆಂಬ ಮಗನಿದ್ದನು. ಧರ್ಮಜನಿಗೆ ಶೈಬ್ಯ ಮತ್ತು ದೇವಕಿಯೆಂಬ ಇನ್ನಿಬ್ಬರು ಹೆಂಡಿರೂ ಇದ್ದರು ಎಂಬುದಾಗಿ ಪುರಾಣದಲ್ಲಿ ಉಲ್ಲೇಖವಿದೆ.

ಅಜಗರನ  ಶಾಪ ವಿಮೋಚನೆ : ಅಜಗರ ಎಂದರೆ ಹೆಬ್ಬಾವು . ಚಂದ್ರವಂಶದ ನಹುಷ ಎಂಬ ರಾಜನು ಅಗಸ್ತ್ಯರ ಕೋಪಕ್ಕೆ ಗುರಿಯಾಗಿ ಹೆಬ್ಬಾವಿನ ರೂಪಹೊಂದಿ ಜೀವಿಸುತ್ತಿದ್ದ. ಪಾಂಡವರು ವನವಾಸದಲ್ಲಿದ್ದ ಸಂದರ್ಭ. ಭೀಮನು ವನದಲ್ಲಿ ಮೃಗಾನ್ವೇಷಣೆಯಲ್ಲಿ ಒಂದು ದಿನ ಅಜಗರನು ಭೀಮನ ಮೈಗೆ ಸುತ್ತಿಕೊಂಡು ಕದಲಲಾರದಾದನು. ಬಂಧಿಸಲ್ಪಟ್ಟ ಭೀಮನನ್ನು ಅಜಗರ ಕೇಳಿದ ಧರ್ಮ ಪ್ರಕಾರದ ಪ್ರಶ್ನೆಗಳಿಗೆ ಸರಿ ಉತ್ತರ ನೀಡಿ ಧರ್ಮರಾಯನು ಬಂಧಮುಕ್ತಗೊಳಿಸುತ್ತಾನೆ. ತತ್ಪರಿಣಾಮವಾಗಿ ನಹುಷನ ಪಾಪವೂ ವಿಮೋಚನೆಯಾಗಿ ಅವನು ಸ್ವರ್ಗಕ್ಕೆ ತೆರಳುತ್ತಾನೆ.

ಹಿರಿಯಣ್ಣನ ಹಿರಿ ಹೃದಯ  : ಒಂದು ದಿನ ದುರ್ಯೋದನನು ಪರಿವಾರ ಸಮೇತವಾಗಿ ಗೊಲ್ಲರಹಳ್ಳಿಗೆ ಹೊರಟನು. ಅಲ್ಲಿರುವ ಸುಂದರವಾದ ದ್ವೈತವನದಲ್ಲಿರುವ  ಸರೋವರದಲ್ಲಿ ಭಾನುಮತಿ ಹಾಗೂ ಅವಳ ಸಖಿಯರೊಡಗೂಡಿ ಜಲ ಕ್ರೀಡೆಗೆ ತೊಡಗಿದನು. ವನ ಹಾಗೂ ಸುಂದರವಾದ ಸರೋವರ ಕಲುಷಿತವಾಗಲು,  ಅದರ ರಕ್ಷಣೆ ಮಾಡುತ್ತಿದ್ದ ಗಂಧರ್ವ, ದೇವಲೋಕಕ್ಕೆ ಸುದ್ದಿ ಮುಟ್ಟಿಸಿದ. ಗಂಧರ್ವನಿಗೂ ಕೌರವನಿಗೂ ಹೊಡೆದಾಟ, ಗುದ್ದಾಟ ಪ್ರಾರಂಭವಾಗಿ ಘೋರ ಯುದ್ಧವೇರ್ಪಟ್ಟಿತು.

ಅದರಲ್ಲಿ ಕೌರವ ಸೋತಾಗ ಜೀವಸಹಿತ ಕೌರವನನ್ನು ಸೆರೆ ಹಿಡಿದರು. ಇದರಿಂದಾಗಿ ಕೌರವನ ಪತ್ನಿ ಭಾನುಮತಿ ಚಿಂತೆಗೀಡಾದಳು. ಅದೇ ಪರಿಸರದಲ್ಲಿ ಪರ್ಣಶಾಲೆಯಲ್ಲಿ ಬೀಡುಬಿಟ್ಟಿದ್ದ ದ್ರೌಪದಿಯ ಮೂಲಕ ಪತಿಯ ಪ್ರಾಣ ಉಳಿಸುವಂತೆ ಮೊರೆಯಿಟ್ಟಳು. ತಮ್ಮಂದಿರಿಗೆ  ನಾಲ್ವರಿಗೂ ಕೌರವನ ರಕ್ಷಣೆ ಮಾಡುವುದಕ್ಕೆ ಮನಸ್ಸಿಲ್ಲದ್ದಿದ್ದರೂ ಧರ್ಮರಾಯ ಹೇಳುತ್ತಾನೆ ‘ ಅಣ್ಣ-ತಮ್ಮಂದಿರಲ್ಲಿ ಪರಸ್ಪರ ಜಗಳ ಸಹಜ. ಅದರ ಉಪಯೋಗ ಹೊರಗಿನವನು ಪಡೆ, ಹೊರಗಿನವರು ನಮ್ಮ ಮೇಲೆ ದಾಳಿ ಮಾಡಲು ಬಂದರೆ ನಾವು ಐವರಲ್ಲ, ನೂರು ಮಂದಿ ಇದ್ದೇವೆ ನಮ್ಮ ಮನೆತನಕ್ಕೆ  ಉಂಟಾದ ಅಪಕೀರ್ತಿಯನ್ನು ತಪ್ಪಿಸುವುದು ನಮ್ಮ ಕರ್ತವ್ಯ’  ಎಂದು ಹೇಳಿ ದುರ್ಯೋಧನನನ್ನು ಗಂಧರ್ವನದ ಚಿತ್ರಸೇನನಿಂದ  ಬಿಡಿಸುವ ಧರ್ಮರಾಯನ ವಿಶೇಷವಾದ ಸೋದರ ಧರ್ಮ ಮೆಚ್ಚಬೇಕಾದ್ದು.

ದೈತವನದಲ್ಲಿ : ಬ್ರಾಹ್ಮಣನೊಬ್ಬನು ಅಗ್ನಿ ಉತ್ಪತ್ತಿಗೆ ಕಾರಣನಾದ ಅರಣಿ ಮತ್ತು ಮಂಥನವನ್ನು ಹರಿಣವೊಂದು ಹೊತ್ತುಕೊಂಡು ಹೋಯಿತೆಂದು ಧರ್ಮರಾಯನಲ್ಲಿ ದೂರಿತ್ತನು. ಪಾಂಡವರೈವರೂ ಮೃಗವು ತೆರಳಿದ ದಾರಿಯನ್ನುಪಕ್ರಮಿಸಿದರು. ಈ ದಾರಿ ಮಧ್ಯೆ ಪಾಂಡವರೈವರೂ ಬಾಯಾರಿ ಬಳಲಿದರು. ತೃಷೆ ನೀಗಿಸುವುದಕ್ಕಾಗಿ  ಸರೋವರಕ್ಕೆ ತೆರಳಿದರು. ಕ್ರಮಾಗತವಾಗಿ ನೀರು ಕುಡಿಯಲು ಸರೋವರಕ್ಕಿಳಿದಾಗ, ಯಕ್ಷನು ಪ್ರಶ್ನೆ ಹಾಕುವುದಕ್ಕೆ ತೊಡಗುತ್ತಾನೆ. ಅವನ ಪ್ರಶ್ನೆಗೆ ಸಮರ್ಪಕವಾದ ನೀಡಿದರೆ ನೀರು ಕುಡಿದು ನೀರಡಿಕೆ ನೀಗಿಸಬಹುದಿತ್ತು. ಇಲ್ಲದೆ ಹೋದರೆ ಮರಣವೇ ಗತಿ. ಸಹದೇವ, ನಕುಲ, ಅರ್ಜುನ, ಭೀಮ ಹೀಗೆ ನಾಲ್ವರೂ ಯಕ್ಷನ ಪ್ರಶ್ನೆಗೆ  ಉತ್ತರಿಸದೆ  ಸರೋವರದ ತಟದಲ್ಲಿ ಮೂರ್ಛ ತಪ್ಪಿ ಬೀಳುತ್ತಾರೆ.


ಕೊನೆಗೆ  ಧರ್ಮರಾಯನು ಯಕ್ಷನ ಎಲ್ಲಾ ಪ್ರಶ್ನೆಗಳಿಗೆ ತಕ್ಕುದಾದ ಉತ್ತರ ನೀಡಿ ಸಂತೋಷಪಡಿಸಿದಾಗ ನಿನ್ನ ನಾಲ್ವರು ತಮ್ಮಂದಿರಲ್ಲಿ ಒಬ್ಬನನ್ನು ಬದುಕಿಸುತ್ತೇನೆ. ಯಾರಾಗಬಹುದು ಎಂಬ ಧರ್ಮ ಪರೀಕ್ಷೆಯ ಪ್ರಶ್ನೆಗೆ ಧರ್ಮರಾಯ ನಕುಲನನ್ನು ಬದುಕಿಸಿಕೊಡಲು ಕೇಳುತ್ತಾನೆ.  ನನ್ನ ಹೆತ್ತಬ್ಬೆ ಕುಂತಿಯ ಮಕ್ಕಳಲ್ಲಿ ನಾನು ಬದುಕಿದ್ದೇನೆ ಹಾಗೆಯೆ ಚಿಕ್ಕಮ್ಮನಾದ ಮಾದ್ರಿಯ ಮಗನಾದ ನಕುಲನು ಬದುಕಿ ಬರಲಿ ಎಂಬುದೇ ನನ್ನ ಆಶಯ ಎನ್ನುತ್ತಾನೆ, ಯುದಿಷ್ಠಿರ, ಮಲತಾಯಿ ಮಕ್ಕಳಾದರೂ ನಕುಲ, ಸಹದೇವರಲ್ಲಿ ನೀನು ತೋರಿಸಿದ ಪ್ರೀತಿ ಅವರ್ಣನೀಯ. ಇದರಿಂದ ಸಂತೋಷಗೊಂಡ ಯಕ್ಷನು ನಾಲ್ವರು ಸಹೋದರರೂ ಮರುಜೀವ ಪಡೆಯುವಂತಾಗಲಿ ಎನ್ನುತ್ತಾ, ನಾನು ಯಕ್ಷನೆಂದು ಹೇಳಿದರೂ ಯಕ್ಷನಲ್ಲ. ನಿನ್ನ ತಂದೆಯಾದ ಯಮಧರ್ಮರಾಯನೇ  ಆಗಿದ್ದೇನೆ ಎನ್ನುತ್ತಾನೆ. ಧರ್ಮಕ್ಕೆ ಎಲ್ಲೆಲ್ಲೂ ಜಯ ಎಂಬುದಕ್ಕೆ ಧರ್ಮರಾಯನಿಗೆ ಸೂರ್ಯದೇವ ಕರುಣಿಸಿದ ಅಕ್ಷಯ ಪಾತ್ರೆಯೂ ವಿಶೇಷ ಸಾಕ್ಷಿ. ಎಲ್ಲವನ್ನೂ ಕಳೆದುಕೊಂಡು ವನವಾಸದಲ್ಲಿದ್ದಾಗ ಧರ್ಮಜನು ಮಮ್ಮಲ ಮರುಗುತ್ತಾನೆ. ತನಗಾಗಿ ಅಲ್ಲದಿದ್ದರೂ ದೇಹಿ ಎಂದು ಬೇಡಲು ಬಂದವರಿಗೆ ಇದುವರೆಗೆ ನಾಸ್ತಿ ಎಂದು ಹೇಳಿಲ್ಲ. ಯಾರಾದರೂ ಅಪ್ಪಿ-ತಪ್ಪಿ ಯಾಚಿಸಲು ಬಂದರೆ ಏನೆನ್ನಲಿ! ಅತಿಥಿಗಳಿಗೆ, ಮುನಿರಾಜನಿಗೆ ಏನನ್ನು ಅರ್ಪಿಸಲಿ? ಧರ್ಮಜನ ಈ ರೀತಿಯ ಅಳಲನ್ನು ಅರ್ಥಮಾಡಿಕೊಂಡ ಧೌಮ್ಯರು ಸೂರ್ಯದೇವನಲ್ಲಿ ನಿನ್ನ ಇಚ್ಚೆಯನ್ನು ತೋಡಿಕೊಳ್ಳು ಎನ್ನುತ್ತಾರೆ. ಇದರಿಂದಾಗಿ ಧರ್ಮಜನು ಸೂರ್ಯನನ್ನು ಅನನ್ಯ ಪ್ರಾರ್ಥಿಸುತ್ತಾನೆ. ಪರಿಣಾಮವಾಗಿ ಭಾಸ್ಕರನು ಅಕ್ಷಯ ಪಾತ್ರೆಯನ್ನು ಕರುಣಿಸುತ್ತಾನೆ.

ಮಹಾ ಪ್ರಸ್ಥಾನಿಕ :  ಪಾಂಡವರೈವರೂ ನೇರ ಸ್ವರ್ಗಕ್ಕೆ ತೆರಳುತ್ತಾರೆ. ಸ್ವರ್ಗಾರೋಹಣ ಸಂದರ್ಭದಲ್ಲೂ ಧರ್ಮರಾಯ ತನ್ನ ಧರ್ಮವನ್ನು ಬಿಟ್ಟುಕೊಡುವುದಿಲ್ಲ. ಆತನ ಜೊತೆಯಲ್ಲಿ ಒಂದು ನಾಯಿ ಹಿಂಬಾಲಿಸುತ್ತದೆ. ತಮ್ಮಂದಿರು ನಾಲ್ವರೂ ದ್ರೌಪದಿಯೂ ದಾರಿ ಮಧ್ಯೆ ಅಸುನೀಗಿ ಸ್ವರ್ಗ ಸೇರುತ್ತಾರೆ, ಆದರೆ ನಾಯಿಯು ಧರ್ಮಜನನ್ನು ಬಿಡಲೇ ಇಲ್ಲ. ಸ್ವರ್ಗದ ಬಾಗಿಲಿನಲ್ಲಿ ದೇವೇಂದ್ರನು ನಾಯಿಯನ್ನು ತಡೆಯುತ್ತಾನೆ.ಧರ್ಮಜನಾದರೋ ನನ್ನನ್ನು ನಂಬಿ ಬಂದ ನಾಯಿಗೆ ಸ್ವರ್ಗಕ್ಕೇರಲು ಪ್ರವೇಶ ಇಲ್ಲವಾದಲ್ಲಿ ನನಗೂ ಬೇಡವೆಂದು ನಿರಾಕರಿಸುತ್ತಾನೆ. ಆದರೆ ಯುದಿಷ್ಠಿರನು ತನ್ನ ನಿರ್ಧಾರವನ್ನು ಬದಲಿಸಲಾರ. ಇಲ್ಲಿಯೂ ಧರ್ಮಜನೇ ಗೆಲ್ಲುತ್ತಾನೆ. ಇಲ್ಲಿ ನಾಯಿ ಎಂದರೆ ಅದು ಅವನ ಧರ್ಮವಾಗಿತ್ತು. ಹೀಗೆ ಧರ್ಮಜನ ಧರ್ಮಸೂಕ್ಷ ಆತನ ಜೀವನದುದ್ದಕ್ಕೂ ಎದ್ದು ಕಾಣುತ್ತದೆ. ಧರ್ಮರಾಜನು ಧರ್ಮರೂಪವಾದ ಒಂದು ಮಹಾವೃಕ್ಷವಾಗಿದ್ದಾನೆ ಎಂದು ಮಹಾಭಾರತವೇ ನಮಗೆ ತಿಳಿಸುತ್ತದೆ. ಇದು ಮಾನವನ ದಿನನಿತ್ಯದ ಬದುಕಿಗೆ ದಾರಿದೀಪವಾಗಿದೆ.

-ವಿಜಯಾ ಸುಬ್ರಹ್ಮಣ್ಯ, ಕುಂಬಳೆ

6 Responses

 1. ನಯನ ಬಜಕೂಡ್ಲು says:

  ಚೆನ್ನಾಗಿದೆ ಮೇಡಂ , ಪರಸ್ಪರ ಜಗಳವಿದ್ದರೂ ಹೊರಗಿನವರ ಎದುರು ಕೌರವರನ್ನು ಬಿಟ್ಟು ಕೊಡದ ಧರ್ಮರಾಯನ ಕತೆ ಹಾಗು ಇಡೀ ಬರಹದಲ್ಲಿ ಬದುಕಿನ ಮೌಲ್ಯಗಳು ತುಂಬಿವೆ

 2. Anonymous says:

  ಸುರಹೊನ್ನೆಯ ಹೇಮಮಾಲಾ ಹಾಗು ನಿಮಗೆ, ಮೆಚ್ಚಿದ ಇತರರಿಗೂ ವಂದನೆಗಳು

 3. Hema says:

  ಧರ್ಮರಾಯನ ಎಲ್ಲಾ ಸುಗುಣಗಳು ಸರ್ವಕಾಲಕ್ಕೂ ಅನುಕರಣೀಯ. ಆದರೆ ಆತನಿಗೆ ‘ದ್ಯೂತದ’ ಚಟ ಇರಬಾರದಿತ್ತು , ಅಲ್ಲವೆ?

 4. ಹೌದು ಹೇಮಮಾಲಾ. ಎಲ್ಲಾ ಬಣ್ಣಮಸಿನುಂಗಿತು ಎನ್ನುವಹಾಗೆ….,
  ಯುದ್ಧಕ್ಕೆ ಮೆಟ್ಟಿಲು ಇದುವೇ ಎನ್ನಬಹುದು.!!!!

 5. Shankari Sharma says:

  ಧರ್ಮರಾಯನ ಬಗ್ಗೆ ತಿಳುವಳಿಕೆ ಮೂಡಿಸುವ ಪ್ರಬುದ್ಧ ಲೇಖನ..ಧನ್ಯವಾದಗಳು ವಿಜಯಕ್ಕ.

 6. Hema Latha says:

  ಯುಧಿಷ್ಠಿರ ಹಾಗೂ ದ್ರೌಪದಿ ಮಗ ಅಭಿಮನ್ಯು ಗಿಂತ ವಯಸ್ಸಿನಲ್ಲಿ ಹಿರಿಯವನಿರಬೇಕು ಅಲ್ವೆ ಮೇಡಂ

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: