ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು :  ಪುಟ 17     

Share Button


ಬೇಲೂರು ಮಠದ ಸೊಗಸು

ಹೂಗ್ಲಿ ನದಿಯಲ್ಲಿ ನಡೆದ ದೋಣಿ ವಿಹಾರ, ಸುಖಾಂತ್ಯವಾದ ಪರ್ಸಿನ ಘಟನೆ..ಎಲ್ಲವನ್ನೂ ಮೆಲುಕು ಹಾಕುತ್ತಾ ಬೇಲೂರು ಮಠ ತಲಪಿದಾಗ ಮಧ್ಯಾಹ್ನ ಗಂಟೆ ಹನ್ನೊಂದು. ಬಿಸಿಲ ಝಳಕ್ಕೆ ಬೆಂಡಾಗಿ ಹೋಗಿದ್ದ ನಾವೆಲ್ಲರೂ, ಮಠದ ಆವರಣದೊಳಗೆ ಸೊಂಪಾಗಿ ಬೆಳೆದ ಮರದ ನೆರಳಿನ ಕೆಳಗೆ ಆಶ್ರಯ ಪಡೆದೆವು. ಹಾಂ..ಆಗಲೇ ಕಂಡಿತು.. ಸಮೀಪದಲ್ಲಿಯೇ, ಸ್ವಲ್ಪ ಎತ್ತರದಲ್ಲಿ ಒಂದು ಅತ್ಯಂತ ಸುಂದರವಾದ ಕಟ್ಟಡ. ಕುತೂಹಲದಿಂದ ಇದೇನಪ್ಪಾ ಎಂದು  ನೋಡಿದಾಗ ತಿಳಿಯಿತು..ಅದು
ಶೌಚಾಲಯವಾಗಿತ್ತು!! ನಿಜವಾಗಿಯೂ ಅತ್ಯಂತ ಆಶ್ಚರ್ಯಪಡುವ ಸರದಿ ನಮ್ಮದಾಗಿತ್ತು. ಹೊರಗಿನಿಂದ ಎಷ್ಟು ಚೆನ್ನಾಗಿತ್ತೋ, ಕಟ್ಟಡದ ಒಳಗೆ ಹೋದಾಗ ಇನ್ನಷ್ಟು ಚೆನ್ನಾಗಿ, ಸುವ್ಯವಸ್ಥಿತವಾಗಿರುವುದು ಕಂಡು ಸಂತೋಷವೆನಿಸಿತು. ಅಲ್ಲಿ ಪಾವತಿಸಬೇಕಾದ ಹಣ ಅತ್ಯಂತ ಕಡಿಮೆಯಾಗಿತ್ತು ( ರೂ.1). ಅತ್ಯಂತ ಸ್ವಚ್ಛ, ಫಳಪಳ ಹೊಳೆಯುವ ನೆಲದಲ್ಲಿ ಕೆಲವರು ಮಲಗಿ ವಿಶ್ರಾಂತಿ ಪಡೆಯುತ್ತಿರುವುದೂ ಕಂಡಿತು! ಆಗಾಗ ಫಿನೈಲ್ ಹಾಕುತ್ತಿದ್ದುದರಿಂದ, ಇರುವ ಸ್ಥಳವಿಡೀ ಪರಿಮಳದಿಂದ ಕೂಡಿತ್ತು.  ಕೈ ಸ್ವಚ್ಛಗೊಳಿಸಲು ಸಾಬೂನು ಸೌಲಭ್ಯ! ನಾವು ನೋಡಿ ಬೆರಗಾಗಿ ಹೋದೆವು.ಆತ್ಮೀಯವಾಗಿ ಮಾತಾಡಿಸಿದ ಅಲ್ಲಿದ್ದ ಮಹಿಳೆಯರಿಗೆ ಧನ್ಯವಾದ ಸಮರ್ಪಿಸಿ ಹೊರ ಬಂದಾಗ  ಮನಸ್ಸು ಸಂತಸಗೊಂಡಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ವ್ಯವಸ್ಥೆ ಎಲ್ಲಾ ಕಡೆಗಳಲ್ಲಿಯೂ ಇದ್ದರೆ ಎಷ್ಟು ಚೆನ್ನಾಗಿತ್ತು ಎನ್ನಿಸಿತು.

ಮುಂದಕ್ಕೆ ನಮ್ಮ ಗಮನ ಮಠದತ್ತ… ಎದುರಿಗೇ ಅತ್ಯಂತ ಸುಂದರ ಕಟ್ಟಡವು ಕೈ ಬೀಸಿ ಕರೆಯುತ್ತಿತ್ತು. ಪ್ರಸಿದ್ಧ ಹೂಗ್ಲಿ ನದಿಯ ಪಶ್ಚಿಮ ದಡದಲ್ಲಿ, 1938ರಲ್ಲಿ ಸ್ವಾಮಿ ವಿವೇಕಾನಂದರಿಂದ ಸ್ಥಾಪಿಸಲ್ಪಟ್ಟ ಈ ಮಠವು ಸಾಧಾರಣ ನಲ್ವತ್ತು ಎಕರೆಗಳಷ್ಟು ವಿಸ್ತಾರವಾದ ಜಾಗದಲ್ಲಿ ಪಸರಿಸಿದೆ.   ರಾಮಕೃಷ್ಣ ಮಠ ಮತ್ತು ಮಿಶನ್ ಗಳ  ಮುಖ್ಯ ಕಾರ್ಯಾಲಯವಾಗಿರುವ ಇದು, ಅವರ ಎಲ್ಲಾ  ಕಾರ್ಯ ಚಟುವಟಿಕೆಗಳ ಕೇಂದ್ರ ಸ್ಥಾನವಾಗಿದೆ. ಮಠದ ಮುಖ್ಯ ಕಟ್ಟಡವು, ಕ್ರೈಸ್ತ, ಇಸ್ಲಾಂ, ಹಿಂದು ಹಾಗೂ ಬೌದ್ಧ ಧರ್ಮಗಳ ಕಲಾ ನೈಪುಣ್ಯತೆಗಳಿಂದೊಡಗೂಡಿದ ಅತ್ಯಂತ ಸುಂದರ ಕಟ್ಟಡ. ಅದರ ಮುಖ್ಯ ದ್ವಾರದ ಮುಂಭಾಗದಲ್ಲಿ ಎಲ್ಲಾ ಧರ್ಮಗಳ ಚಿಹ್ನೆಗಳು ಕಂಡುಬರುತ್ತಿದ್ದು, ಸರ್ವಧರ್ಮಗಳ ಸಮನ್ವಯತೆಯನ್ನು ಸಾರಿ ಹೇಳುವಂತಿದೆ.

ದಕ್ಷಿಣ ಭಾರತದ ದೇಗುಲಗಳಲ್ಲಿರುವಂತೆ ಗೋಪುರದ ರಚನೆ, ಬೌದ್ಧ ಶೈಲಿಯ ಕಂಬಗಳು, ರಜಪೂತ-ಮೊಗಲ ಶೈಲಿಯಲ್ಲಿರುವ ಕೊಡೆಯಾಕಾರದ ಗೋಲಗಳು ಮನ ಸೆಳೆಯುತ್ತವೆ. ಆ ಮಹಾ ಮಠದ ಎದುರಲ್ಲಿ ಚಪ್ಪಲಿಗಳನ್ನು ಬಿಟ್ಟು ಒಳ ನಡೆದಾಗ ಅವರ್ಣನೀಯ ಅನುಭವ! ಭಕ್ತ ಜನಸಂದಣಿ ಹೆಚ್ಚೇನೂ ಇರದುದರಿಂದ ಅನುಕೂಲಕರವಾಗಿತ್ತು. ಆದರೆ ಅದಾಗಲೇ ಗಂಟೆ ಹನ್ನೊಂದಾದುದರಿಂದ ಮಠದೊಳಗಿನ ಮಂದಿರದ ಬಾಗಿಲು ಮುಚ್ಚಿತ್ತು. ಅದು ಇನ್ನು ಹನ್ನೆರಡು ಗಂಟೆಗೆ ತೆರೆಯುವುದೆಂದು ತಿಳಿಯಿತು. ಆವರಣದೊಳಗಿನ ಇನ್ನೂ ಹಲವಾರು ಮಂದಿರಗಳನ್ನು ವೀಕ್ಷಿಸಲು ಇದೇ ಸುಸಮಯವೆಂದು ಎಲ್ಲರೂ ಹೊರಟೆವು.

ಬಿಸಿಲ ಕಾವು ಮಿತಿ ಮೀರಿತ್ತು. ಹೊರಗಡೆಯ ಕಲ್ಲಿನ ಕಾಲು ಹಾದಿಯಲ್ಲಿ ನಡೆಯುವುದು ಬಿಡಿ..ಹೆಜ್ಜೆ ಇಟ್ಟರೆ ಕಾಲು ಸುಟ್ಟು ಹೋಗುವುದೇನೋ ಎಂದು ಹೆದರಿ, ಅಲ್ಲಿಯ ಹುಲ್ಲು ಹಾಸಿನ ಮೇಲೆ ಕಾಲಿಟ್ಟ ಕ್ಷಣಕ್ಕೆ ತುಸು ಹಾಯೆನಿಸಿತು. ಪಕ್ಕದಲ್ಲಿಯೇ ಇತ್ತು..ವಿವೇಕಾನಂದರ ವಸ್ತು ಸಂಗ್ರಹಾಲಯ. ಸುತ್ತಲೂ  ಕಹಿ ಬೇವಿನ ಮರಗಳು, ಮಾವಿನ ತೋಪಿನ ನೆರಳು..ಮಾವಿನ ಮರಗಳಲ್ಲಿ ತುಂಬಾ ಮಾವು. ನೆಲದಲ್ಲಿ ಎಲೆ, ಕಡ್ಡಿಗಳಿಲ್ಲದೆ, ಎಲ್ಲಿ ನೋಡಿದರಲ್ಲಿ ಸ್ವಚ್ಛ.. ಸುಂದರ. ಅಲ್ಲಿ ಸ್ವಲ್ಪ ಸುಧಾರಿಸಿಕೊಂಡು ವಸ್ತು ಸಂಗ್ರಹಾಲಯದತ್ತ ನಡೆದಾಗ ಎಲ್ಲರ ಮೊಗದಲ್ಲಿ ಹುರುಪು ಎದ್ದು ಕಾಣುತ್ತಿತ್ತು.

ಮಹಡಿಯ ಮೇಲಿದ್ದ ಸಂಗ್ರಹಾಲಯದಲ್ಲಿ, ಪ್ರತ್ಯೇಕ ಪ್ರತ್ಯೇಕ ಕೊಠಡಿಗಳಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಇರಿಸಿದ್ದ ಅವರ ವಸ್ತುಗಳನ್ನು, ಬಾಗಿಲು ಮುಚ್ಚಿದ್ದರಿಂದ ಪೂರ್ತಿಯಾಗಿ ವೀಕ್ಷಿಸಲಾಗದಿದ್ದರೂ, ಅಲ್ಲಿದ್ದ ಕಿಟಿಕಿ ಮುಖಾಂತರವೇ ಆದಷ್ಟು ನೋಡಿದೆವು. ವಿವೇಕಾನಂದರ ಚಿತಾಭಸ್ಮವಿದ್ದ ಪಾತ್ರೆ, ಉಪಯೋಗಿಸುತ್ತಿದ್ದ ಮಂಚ, ಹಾಸಿಗೆ, ಕೋಲು, ಮೇಜು, ಕುರ್ಚಿಗಳು..ಕಂಡಾಗ ರೋಮಾಂಚನಗೊಂಡು ಭಾವುಕರಾದೆವು. ಎತ್ತರದ ಕಿಟಿಕಿಯಿಂದ ಬೀಸಿ ಬರುತ್ತಿದ್ದ ತಂಪಾದ ಗಾಳಿಯ ಇರವನ್ನು ಆಸ್ವಾದಿಸುತ್ತ ಕೆಳಗಿಳಿದಾಗ, ಎದುರಿಗೇ ಕಾಣುತ್ತಿತ್ತು.. ಮಠದ ಕಲಾಪೂರ್ಣ ಕಟ್ಟಡದ ವಿಹಂಗಮ ನೋಟ.

ಮಠದ ಒಳಗಡೆಯಿರುವ ವಿಶಾಲವಾದ ಹಜಾರದಲ್ಲಿ ಪ್ರವಾಸಿಗರು ತುಂಬಿದ್ದರೂ ಅಲ್ಲಿದ್ದ ನಿಶ್ಶಬ್ದತೆ, ಒಟ್ಟು ವಾತಾವರಣವನ್ನು ಭಾವ ಭಕ್ತಿಪೂರ್ಣವಾಗಿಸಿತ್ತು. ಅದಾಗಲೇ ಮಧ್ಯಾಹ್ನ ಗಂಟೆ ಹನ್ನೆರಡಾಗುತ್ತಾ ಬಂದಿತ್ತು. ಎಲ್ಲರೂ ಕಾಯುತ್ತಿದ್ದ ಘಳಿಗೆ..ಗುಡಿಯ ದ್ವಾರವು ತೆರೆಯುತ್ತಿದ್ದಂತೆಯೇ ಶುಭ್ರ ಶ್ವೇತ ಅಮೃತಶಿಲೆಯ ಸೊಗಸಾದ, ಮಹಾ ತಪಸ್ವಿ ಶ್ರೀ ರಾಮಕೃಷ್ಣ ಪರಮಹಂಸರ ದಿವ್ಯ ಮೂರ್ತಿಯ ದರ್ಶನವಾಯಿತು. ಕುಳಿತ ಭಂಗಿಯ, ಶಾಂತ ಮೂರ್ತಿಯ ಮಮಕಾರ ತುಂಬಿದ ನೇತ್ರಗಳ ನೋಟ ಎಲ್ಲರ ಮೇಲೂ ಹರಿದಾಡಿದಂತೆ ಭಾಸವಾಯಿತು! ಸ್ವಲ್ಪ ಸಮಯ ಅಲ್ಲಿಯ ಉಪನ್ಯಾಸದಲ್ಲಿ ಪಾಲ್ಗೊಂಡು ಹೊರಟಾಗ ಮನದಲ್ಲಿ ಸಾರ್ಥಕ್ಯ ಭಾವ ಮೂಡಿತ್ತು.

ಹೊರಗಡೆಗೆ ಮಠದ ಆವರಣದಲ್ಲಿ ಸ್ವಲ್ಪ ಸುತ್ತಾಡಿ, ಮರಗಳಲ್ಲಿದ್ದ ಮಾವಿನ ಹಣ್ಣುಗಳನ್ನು ಆಸೆಯಿಂದ ನಿರುಕಿಸುತ್ತಾ ಮುನ್ನಡೆದಾಗ ಕಾಣಿಸಿತು.. ಶುದ್ಧ ಕುಡಿಯುವ ನೀರು. ಅದನ್ನು ಬೇಕಾದಷ್ಟು ಕುಡಿದು,ತಮ್ಮ ತಮ್ಮ ಬಾಟಲುಗಳಲ್ಲಿಯೂ ತುಂಬಿಸಿಕೊಂಡು ಅಲ್ಲೇ ಸ್ವಲ್ಪ ಕುಳಿತು ಸುಧಾರಿ‌ಸುತ್ತಿರುವಾಗಲೇ ಗಮನಿಸಿದೆ.. ಪಕ್ಕದಲ್ಲಿ ಕುಳಿತ ಭಾರತಿ ಅಕ್ಕನವರ ಹೊಚ್ಚ ಹೊಸ ವ್ಯಾನಿಟಿ ಬ್ಯಾಗ್ ಒಂದು ಬದಿಯಲ್ಲಿ ದೊಡ್ಡದಾಗಿ ಹರಿದುದು.   ತಕ್ಷಣ, ಗಾಬರಿಗೊಂಡ ನಾನು, ಅದನ್ನು ಅವರ ಗಮನಕ್ಕೆ ತಂದಾಗ ಅರ್ಥವಾಯಿತು..ನಮ್ಮ ದೋಣಿವಿಹಾರದ ಕಿಸೆ ಕಳ್ಳರು ಅವರ ಕೈ ಚಳಕ ಚೆನ್ನಾಗಿಯೇ ತೋರಿಸಿದ್ದರು! ಬೇಸರಗೊಂಡ ನಾವೆಲ್ಲ ಕಳ್ಳರಿಗೆ ಹಿಡಿ ಶಾಪ ಹಾಕುವುದು ಬಿಟ್ಟರೆ ಬೇರೆ ದಾರಿ ಇರಲಿಲ್ಲ. ದೈವವಶಾತ್ ಏನನ್ನೂ ತೆಗೆದಿರಲಿಲ್ಲ. ಬೇಲೂರು ಮಠದ ಭೇಟಿ ಮುಗಿಸಿ ಅಲ್ಲಿಂದ ಹೊರ ಬಂದಾಗ ಮಧ್ಯಾಹ್ನದ ಸೂರ್ಯ, ನೆತ್ತಿ ಮೇಲೆ ಧಗಧಗಿಸುತ್ತಿದ್ದ. ನಮಗಾಗಿ ಕಾದಿದ್ದ ಬಸ್ಸನ್ನೇರಿ, ಆ ದಿನದ ವಿಶೇಷ ಘಟನೆಗಳು, ಹೊಸ ಅನುಭವಗಳನ್ನು ಮೆಲುಕು ಹಾಕುತ್ತಾ, ಚುರುಗುಟ್ಟುತ್ತಿರುವ ಹೊಟ್ಟೆಯನ್ನು ಸಮಾಧಾನಿಸಲು ಹೋಟೆಲ್ ಕಡೆಗೆ ಹೊರಟಿತು ನಮ್ಮ ಪಯಣ..

(ಮುಂದುವರಿಯುವುದು..)

– ಶಂಕರಿ ಶರ್ಮ, ಪುತ್ತೂರು.

2 Responses

  1. ನಯನ ಬಜಕೂಡ್ಲು says:

    ಚೆನ್ನಾಗಿದೆ ಮೇಡಂ. ಪ್ರತೀ ವಾರವೂ ಬಹಳ ಕುತೂಹಲಕಾರಿಯಾಗಿ ಓದಿಸಿಕೊಂಡು ಹೋಗುತ್ತಿದೆ ಪ್ರವಾಸ ಕಥನ .

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: