ಭೀಷಣ ಪ್ರತಿಜ್ಞೆ ಮಾಡಿದ ಭೀಷ್ಮ

Share Button

          ಕಷ್ಟ ಕಾಲದಲ್ಲಿ ಸತ್ಪಾತ್ರರಿಗೆ ಏನಾದರೂ ವಸ್ತುಗಳನ್ನೋ  ಧನ-ಕನಕವನ್ನೊ ಭೂಮಿಯನ್ನೂ ದಾನ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ಶಾಸ್ತ-ಧರ್ಮ ಸಾರುತ್ತದೆ. ಆದರೆ ಆ ದಾನಕ್ಕೆ ಸರಿಯಾದ ಅರ್ಥ ಬರಬೇಕಾದರೆ ಅದರೊಂದಿಗೆ ತ್ಯಾಗವೂ ಸೇರಬೇಕಂತೆ. ಅಂದರೆ, ದಾನ ನೀಡಿದಾತನು ತಾನು ನೀಡಿದಂತಹದೇ ಇನ್ನೊಂದು ವಸ್ತುಗಳನ್ನು ಖರೀದಿಸಿಯೋ ಬೇರೆಯವರಿಂದ ಸ್ವೀಕರಿಸಿಯೋ ಮಾಡದೆ ಅದನ್ನು ಬಿಟ್ಟೇ ಬಿಡುವುದು. ಇದು ತ್ಯಾಗರೂಪವಾಗಿರುತ್ತದೆ. ಇಂತಹ ತ್ಯಾಗರೂಪದ ದಾನವು ಭೂಮಿಯಲ್ಲಿ ಸರ್ವಶ್ರೇಷ್ಠವಾದುದು ಎನಿಸಿಕೊಳ್ಳುತ್ತದೆ. ಹಾಗೆಯೇ ನಮಗೆ ಅತೀ ಪ್ರೀತಿ ಪಾತ್ರರಾದವರು ನಮ್ಮಲ್ಲಿರುವ ವಿಶೇಷವಾದ ವಸ್ತುವೊಂದನ್ನು ಇಷ್ಟಪಟ್ಟರೆ ಮೊದಲಿಗೆ ನಮ್ಮ ಮನಸ್ಸು ಅದನ್ನು ಕೊಡಲು ನಿರಾಕರಿಸುತ್ತದೆ. ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ಕೊಟ್ಟರೂ ಕೊಟ್ಟ ಮೇಲೆ ಅಂತಹುದೇ ಒಂದು ಬರುವತನಕ ಕೈ ಜಾರಿಹೋದ ಭಾವನೆ ನಮ್ಮಲ್ಲಿರುತ್ತದೆ. ಹೀಗಿರುವಾಗ ನಾವು ತ್ಯಾಗರೂಪದಲ್ಲಿ ಏನನ್ನು ಕೊಡಲು ಸಾಧ್ಯ? ಧನವನ್ನೋ ಕನಕವನ್ನೋ ಭೂಮಿಯನ್ನೋ ಪ್ರತಿಫಲಾಪೇಕ್ಷೆಯಿಂದ ಕೊಡುತ್ತೇವೆ ತಾನೇ ? ತ್ಯಾಗರೂಪದಲ್ಲಿ ಕೊಡುತ್ತೇವೆಯೇ ? ಖಂಡಿತ ಇಲ್ಲ. ಹಾಗಾದರೆ ಇದೆಲ್ಲದಕ್ಕೂ ಮಿಗಿಲಾಗಿ ತನ್ನ ತಂದೆಯವರ ಮನೋಭೀಷ್ಟವನ್ನು ಅರಿತು, ಅದನ್ನು ಈಡೇರಿಸುವುದಕ್ಕಾಗಿ ತನ್ನ ಭಾವೀ ಜೀವನವನ್ನು ಭೀಷಣವಾದ ಪ್ರತಿಜ್ಞೆಯಿಂದ ತ್ಯಾಗ ಮಾಡಿದವನಿದ್ದಾನೆ.  ಅವನೇ ಭೀಷ್ಠ, ಯಾವುದಾದರೂ ಸಂದರ್ಭದಲ್ಲಿ ಪ್ರತಿಜ್ಞೆಎಂದಾಗ  ಭೀಷ್ಮನ ನೆನಪಾಗುತ್ತದೆ. ಭೀಷ್ಠ ಎಂದಾಗ ಆತನ ಪ್ರತಿಜ್ಞೆ ಮೊದಲು ನೆನಪಾಗುವುದು ಸಹಜ, ಈ ಭೀಷ ಯಾರು?ಎಲ್ಲಿ ಹೇಗೆ ಜನಿಸಿದ ? ಯಾವುದಕ್ಕಾಗಿ ಏನೆಂದು  ಪ್ರತಿಜ್ಞೆ ಮಾಡಿದ?  ಮುಂದೆ ಹೇಗೆ ಮಹಾಪುರುಷನಾದ ಎಂದೆಲ್ಲ ತಿಳಿಯೋಣ.

ಚಂದ್ರವಂಶದಲ್ಲಿ ಪ್ರತೀಪನೆಂಬ ರಾಜನಿದ್ದ. ಅವನ ಮಗ ಶಂತನು ಮಹಾರಾಜ, ಇವನು ಒಂದು ದಿನ ಬೇಟೆಗಾಗಿ ತೆರಳಿದ್ದವನು ಗಂಗಾ ತೀರದಲ್ಲಿ ಕುಳಿತು ತನ್ನ ಮನವನ್ನೂ ಅರಮನೆಯನ್ನೂ ತುಂಬಿಸಬಲ್ಲ ಸಂಗಾತಿಯನ್ನು ಬಯಸಿದ .ಸ್ವಲ್ಪದರಲ್ಲಿಯೇ ಸರ್ವಾಂಗ ಸುಂದರಿಯಾದ ಗಂಗಾದೇವಿ ಅಲ್ಲಿ ಪ್ರತ್ಯಕ್ಷಳಾದಂತೆ ಕಂಡಳು. ಗಂಗಾದೇವಿಯೊಡನೆ ತನ್ನನ್ನು ಮದುವೆ ಯಾಗಬೇಕೆಂದು ಶಂತನು ಕೇಳಿಕೊಂಡ. ಆಗ ಆಕೆ ಮಹಾರಾಜಾ ನಿನ್ನವಳಾಗುವುದಕ್ಕೆ ನನಗೆ ಸಮ್ಮತಿ ಇದೆ. ಆದರೆ… ನೀನು ಮಾತ್ರ ನನ್ನ ಒಂದು ಶರಥಕ್ಕೆ ಒಪ್ಪಬೇಕು. ನಮ್ಮಿಬ್ಬರ ವಿವಾಹ ಜೀವನದಲ್ಲಿ ನಾನು ಸರ್ವತಂತ್ರ ಸ್ವತಂತ್ರಳು, ನಾನೇನು ಮಾಡಿದರೂ ನೀನು ಪ್ರಶ್ನಿಸಬಾರದು. ಹಾಗಾದರೆ ಮಾತ್ರ ಸಮ್ಮತಿಸುತ್ತೇನೆ. ಆದರೆ ಆಗ ಒಪ್ಪಿಕೊಂಡು ಆಮೇಲೆ ಅಡ್ಡಿಪಡಿಸಿದರೆ ಕೂಡಲೇ  ನಿನ್ನನ್ನು ತ್ಯಜಿಸಿ ಹೊರಟು ಹೋಗುತ್ತೇನೆಎಂದಳು ಗಂಗೆ, ಶಂತನು ಗಂಗೆಯ ಶರಥಕ್ಕೆ ಒಪ್ಪಿ ಸ್ವೀಕರಿಸಿ ಅರಮನೆಗೆ ಕರೆತಂದು ಮದುವೆಯಾದ, ಸಕಾಲಕ್ಕೆ ಗಂಗಾದೇವಿ   ಪುತ್ರನಿಗೆ ಜನ್ಮ ನೀಡಿದಳು. ಪುತ್ರೋತ್ಸವನಾದ ಸಂಭ್ರಮದಲ್ಲಿ ರಾಜನಿದರೆ, ಹಡೆದ  ರಾಣಿ ಅದನ್ನು ಒಯ್ದು ಗಂಗಾನದಿಯಲ್ಲಿ ತೇಲಿಬಿಟ್ಟಳು. ರಾಜನು ಪ್ರಶ್ನಿಸುವಂತಿಲ. ಕಾಲಕಮದಲ್ಲಿ ಎರಡನೇ ಮಗು, ಮೂರನೇ ಮಗು ಹೀಗೆ ಮುಂದುವರಿಯಿತು. ಕೊಟ್ಟ ಭಾಷೆಗೆ ಕಟ್ಟುಬಿದ್ದು ರಾಜ ಸುಮ್ಮನಾಗಬೇಕಾಯಿತು. ಹೀಗೆ ಏಳು ಶಿಶುಗಳಿಗೆ ಮರಣವೇ ಗತಿಯಾಯ್ತು. ರಾಜನು ಮನದೊಳಗೇ ಕ್ರೋಧಗೊಂಡು ಬಿಸುಸುಯ್ದನು.

ರಾಣಿ ಎಂಟನೇ ಬಾರಿ ಗರ್ಭವತಿಯಾದಳು. ಒಂದು ಶುಭದಿನ ಸೂರ್ಯನಂತಿರುವ ಪುತ್ರರತ್ನನನ್ನು ಹೆತ್ತಳು. ಪ್ರತಿ ಬಾರಿಯಂತೆ ಹರಿಯುವ ಗಂಗೆಗೆ   ಬಿಸುಡಲು ಒಯ್ಯುವಾಗ ರಾಜನು ಕೆಂಡಾಮಂಡಲವಾಗಿ, ‘ರಾಣೀ, ಇದೇನು ಮಾಡುತ್ತಿರುವೆ ಕಳೆದ ಏಳುಬಾರಿಯೂ ನಿನ್ನ ಈ ಅಕೃತ್ಯಗಳನ್ನು ,ಮೂಕಪ್ರೇಕ್ಷಕನಂತೆ ಸಹಿಸಿದೆ. ಜಗತ್ತಿನಲ್ಲಿ ಕುಪುತ್ರ ಹುಟ್ಟಿದರೂ ಕುಮಾತೆಯು ಎಂದಿಗೂ ಹುಟ್ಟಲಾರಳು ಎಂಬ ನಾಣ್ಣುಡಿ ಇದೆ.  ಆದರೆ ನೀನು ನಿನ್ನ ಮಕ್ಕಳಿಗೆ ಯಮರೂಪಿಯಾದೆ’. ಆಗ ಮಹಾರಾಣಿ ನಸುನಕ್ಕು ಹೇಳಿದಳು. ‘ರಾಜಾ.. ನನ್ನನ್ನು ದೂಷಿಸಬೇಡ. ಕೆಲವು ಸಲ ನಾವು ಅದೃಷ್ಟದ ಆಟಕ್ಕೆ ಮಣಿಯಬೇಕಾದ್ದರಿಂದ ಕೊಲ್ಲಲ್ಪಟ್ಟ ಏಳು ಸುಪುತ್ರರು ಏಳು ವಸುಗಳು. ಈಗ ಹುಟ್ಟಿದವನು ಎಂಟನೆಯವನು. ಅಷ್ಟವಸುಗಳು ವಸಿಷ್ಠರ ಶಾಪಕ್ಕೊಳಗಾಗಿ ಧರಿತ್ತಿಯಲ್ಲಿ ನಮಗೆ ಪುತ್ರರಾಗಿ ಅವಿರ್ಭವಿಸಿದ್ದಾರೆ. ಶಾಪ ವಿಮೋಚನೆಯಾಗಿ ಈಗ ಅವರವರ ಸ್ಥಾನದಲ್ಲಿದ್ದಾರೆ. ನೀನೀಗ ಕೊಟ್ಟ ವಚನವನ್ನು ತಪ್ಪಿರುವೆ. ನಾನು ಈ ಕುಮಾರನ ಸಹಿತ ಹೊರಟು ಹೋಗುತ್ತೇನೆ. ಆದರೆ ಚಿಂತಿಸಬೇಡ, ಇವನ ವಿದ್ಯಾಭ್ಯಾಸದ ತರುವಾಯ ನಿನಗೇ ತಂದು ಒಪ್ಪಿಸುವೆ. ಮುಂದಕ್ಕೆ ಇವನು ಲೋಕ ಪ್ರಖ್ಯಾತನಾಗುತ್ತಾನೆ’ ಎಂದು ಹೇಳಿ ಕಣ್ಮರೆಯಾದಳು. ಪುನಃ ತಾನು ಏಕಾಂಗಿಯಾದುದಕ್ಕೆ ರಾಜ ತನ್ನ ವಿಧಿಯನ್ನೇ ಹಳಿದುಕೊಂಡ.

ಹೀಗೆ ಕೆಲಕಾಲ ಕಳೆಯಿತು. ಶಂತನು ಒಂದು ದಿನ ಬೇಟೆಯಾಡುತ್ತಾ ಗಂಗಾನದೀ ತಟಕ್ಕೆ ಬರುವಾಗ ಒಬ್ಬ ತೇಜಸ್ವಿ ರಾಜಕುಮಾರನು ತನ್ನ ಶರೀರದಿಂದ ನದಿಯ ನೀರನ್ನು ಕಟ್ಟಿ ನಿಲ್ಲಿಸಿದ್ದ. ರಾಜನಿಗೆ ಹಿಂದಿನ ನೆನಪು ಮರುಕಳಿಸಿತು. ಕೂಡಲೇ ಗಂಗಾದೇವಿ ಪ್ರತ್ಯಕ್ಷಳಾಗಿ ‘ಮಹಾರಾಜಾ ಇವನು ನಮ್ಮಿ ಮಗನು. ಆ ದಿನ ನಿಮ್ಮಿಂದ ಒಯ್ಯಲ್ಪಟ್ಟು ದೊಡ್ಡವನನ್ನಾಗಿ ಮಾಡಿದ್ದೇನೆ. ಪರಶುರಾಮರು ಇವನಿಗೆ ಶಸ್ತಾಸ್ತವನ್ನು ಕಲಿಸಿ ವಿದ್ಯಾ ನಿಪುಣನನ್ನಾಗಿಸಿದ್ದಾರೆ. ಈತನು ಶಕ್ತಿಯಲ್ಲಿ ದೇವೇಂದ್ರನನ್ನೂ ಮೀರಿಸಬಲ್ಲವನಾಗಿದ್ದಾನೆ. ಇನ್ನು ನಿಮ್ಮಲ್ಲಿ ಬೆಳೆಯಲಿದ್ದಾನೆ. ಚಂದ್ರವಂಶದಲ್ಲಿ ಅತ್ಯನ್ನುತನೆನಿಸಿ ಅಮರನಾಗುವನು’ ಎಂದು ಹೇಳಿ ಅಂತರ್ಧಾನಳಾದಳು. ಶಂತನು ಅವನನ್ನು ಕರೆತಂದು ದೇವವ್ರತನೆಂದು ಹೆಸರಿಟ್ಟು ಯುವರಾಜನನ್ನಾಗಿ ಮಾಡಿದನು.

ಮುಂದೆ ಒಂದು ದಿನ ಶಂತನು ಮಹಾರಾಜನು ಯಮುನಾ ನದಿಯ ಬಳಿ ಸೃಷ್ಟಿ ಸೌಂದರ್ಯ ಸವಿಯುತ್ತಾ ಇದ್ದಾಗ ನದಿಯಲ್ಲಿ ದೋಣಿ ನಡೆಸುತ್ತಿದ್ದ ಒಬ್ಬ ತರುಣಿಯನ್ನು  ಕಂಡನು. ಅವಳ ಮೈಯಿಂದ ಸುಗಂಧವು ಯೋಜನ ಪರ್ಯಂತ ಹಬ್ಬಿತ್ತು. ಸುಂದರೀ ನೀನು ಬೆಸ್ತರ ಕನೈಯಾದರೂ ರೂಪವತಿಯಾಗಿಯೂ ಸುಗಂಧ ಸೂಸುತ್ತಿರುವಳಾಗಿಯೂ ಕಾಣಿಸುತ್ತಿ, ನಿನ್ನನ್ನು ಕಂಡು ಮೋಹಗೊಂಡಿದ್ದೇನೆ. ನೀನ್ಯಾರು ಎಂದು ಪ್ರಶ್ನಿಸಿದನು. ಆಗ ಸತ್ಯವತಿಯು ನನ್ನ ತಂದೆಯಾದ ದಾಶರಾಜನು ಈ ನದೀದಡದಲ್ಲೇ ಮನೆ ಮಾಡಿ ಇದ್ದಾನೆ. ಅವನಲ್ಲಿ ಕೇಳಿ ಎಂದು ಕಳುಹಿಸಿದಳು, ಶಂತನು ಮರು ಮಾತನಾಡದೆ ದಾಶರಾಜನಿದ್ದೆಡೆಗೆ ತೆರಳಿ ಅವನನ್ನು ಕೇಳಿದನು. ಆಗ ಬೆಸ್ತನು ‘ರಾಜಾ…. ನೀನು ನನ್ನ ಪುತ್ರಿಯನ್ನು ಕೈಹಿಡಿಯುವೆಯಾದರೆ ನನಗೆ ಮತ್ತೇನು ಬೇಕು ಹೇಳು. ಆದರೆ   ಒಂದು ಮಾತು.ನಿನಗೆ ಅವಳಲ್ಲಿ ಹುಟ್ಟುವ ಮಕ್ಕಳಿಗೆ ರಾಜ್ಯ ಸಲ್ಲಬೇಕು. ಈ ನನ್ನ ಬಯಕೆಯನ್ನು ಇಡೇರಿಸುವುದಾದರೆ ಸರಿ’ ಎಂದನು. ಪಿತನು ಎಲ್ಲಾ ಕಾರ್ಯಗಳಲ್ಲೂ ನಿರುತ್ಸಾಹದಿಂದ ಇರುವುದನ್ನು ಗಮನಿಸಿದ ದೇವವ್ರತನು ಪಿತನೊಂದಿಗಿದ್ದ್ ವೃದ್ಧ ಮಂತ್ರಿಯಿಂದ ವಿಷಯ ತಿಳಿದನು .ಕೂಡಲೆ ಯಮುನಾ ತೀರಕೆಕ್ ದಾಶರಾಜನನ್ನು ಹುಡುಕಿಕೊಂಡು ಬಂದ ದೇವವ್ರತನು ‘ ದಾಶರಾಜಾ, ನನ್ನ ಪಿತನು ನಿನ್ನ ಮಗಳಲ್ಲಿ ಮೋಹಿತರಾಗಿರುವುದರಿಂದ ಅವರಿಗೆ ಮದುವೆ ಮಾಡಿಸುವುದಕ್ಕೋಸ್ಕರ ಬಂದಿದ್ದೇನೆ’ ಎಂದನು. ಬೆಸ್ತರಾಜ ಇವನ ಮಾತನ್ನು ಕೇಳಿ ಬೆರಗಾದ. ಲೋಕದಲ್ಲಿ ಪ್ರಾಯಕ್ಕೆ ಬಂದ ಮಗನಿಗೆ ತಂದೆಯಾದವನು ಮದುವೆ ಮಾಡಿಸುವುದು ಸಹಜ. ಆದರೆ ಇವನು ತಂದೆಗೇ ಮದುವೆ ಮಾಡಿಸಲು ಮುಂದಾಗಿದ್ದಾನೆ!

‘ಯುವರಾಜಾ… ನಿನ್ನೆ ನಿನ್ನ ತಂದೆಯಲ್ಲಿ ಹೇಳಿದುದನ್ನೇ ಹೇಳುತ್ತೇನೆ, ಆದೇನೆಂದರೆ, ಆವಳಲ್ಲಿ ಹುಟ್ಟುವ ಮಕ್ಕಳಿಗೆ ಪಟ್ಟಾಭಿಷೇಕವಾಗುವುದಾದರೆ ನನ್ನ ಅಭ್ಯಂತರವಿಲ್ಲ’. ಎಂದಾಗ ದೇವವ್ರತ ಒಪ್ಪಿದ. ‘ನೀನೀಗ ಪಿತೃವಾತ್ಸಲ್ಯಕ್ಕೆ ಕಟ್ಟುಬಿದ್ದು ಒಪ್ಪಬಹುದಾದರೂ, ಭವಿಷ್ಯತ್ತಿನಲ್ಲಿ ನಿನ್ನ ಕುವರರು ಒಪ್ಪಬಹುದೇ’ ಎಂದನು. ಗಾಂಗೇಯನಿಗೆ ಬೆಸ್ತ ರಾಜನ ದೂರದರ್ಶಿತ್ವ ಮನವರಿಕೆಯಾಯ್ತು. ಹಿಂದೆ ಶ್ರೀರಾಮ ಪಾಲಿಸಿದ ಪಿತೃವಾಕ್ಯ ಪರಶುರಾಮ ಪಾಲಿಸಿದ ಪಿತೃವಾಕ್ಯ ನೆನಪಾಗಿ ‘ಭೋಗಕ್ಕಿಂತ ತ್ಯಾಗ ಹಿರಿದು, ಅದರಲ್ಲಿ ಅಪಾರ ಸಂತೋಷ, ಸಮಾಧಾನವಿದೆ ಎಂದುಕೊಂಡು ಹೇಳಿದ.’ ಓ… ಬೆಸ್ತರಾಜ, ನನ್ನ ಪ್ರತಿಜ್ಞೆಯನ್ನು ಕೇಳು. ನಾನು, ಆಜನ್ಮ ಬ್ರಹ್ಮಚಾರಿಯಾಗಿಯೇ ಇರುವೆ, ಇದಕ್ಕೆ ಆ ಸೂರ್ಯನಾರಾಯಣನೇ ಸಾಕ್ಷಿಯಾಗಿ ಏಕಾದಶರುದ್ರರು, ದ್ವಾದಶಾದಿತ್ಯರು ,ದೇವಾಧಿದೇವತೆಗಳು ಸಾಕ್ಷಿ.  ಹೆತ್ತವ್ವೆಯ ಸಾಕ್ಷಿಯಾಗಿ ಸಾರುತ್ತಿದ್ದೇವೆ. ನಿನ್ನ ಮಗಳಿಗೆ ಹುಟ್ಟುವ ಮಕ್ಕಳಿಗೆ ರಾಜ್ಯವು ಸಲ್ಲಲಿ, ಈ ಜಗತ್ತಿನಲ್ಲಿರುವ ಸಕಲ ನಾರೀಕುಲವು ನನ್ನ ತಾಯಿ ಭಾಗೀರಥಿಗೆ ಸಮಾನ. ನಾನು ಅಪುತ್ರನಾಗುವೆನೆಂದು ಚಿಂತಿಸಬೇಕಾಗಿಲ್ಲ. ತಂದೆಯವರ ಅಭೀಷ್ಟ ಈಡೇರುವುದರಿಂದ ನನಗೆ ಅಕ್ಷಯ ಲೋಕ ದೊರಕುವುದು ‘ ಎಂದು ಭೀಕರವಾದ ಪ್ರತಿಜ್ಞೆಯನ್ನು ಮಾಡಿದನು. ಅಂಬಿಗನೊಡೆಯನಿಗೆ ಪರಮಾಶ್ಚಯ ವಾಯಿತು. ಆಕಾಶದಿಂದ ಸುಮನಸರು  ಪುಷ್ಪವೃಷ್ಟಿಯನ್ನು ಸುರಿಸಿದರು. ಜನಕನಿಕೋಸುಗ ಭಾವೀಜೀವನವನ್ನು ಧಾರೆಯೆರೆದು ಭೀಷಣ ಪ್ರತಿಜ್ಞೆಯನ್ನು ಮಾಡಿರುವೆ. ಇಂದಿನಿಂದ ನಿನ್ನ ಹೆಸರು ಭೀಷ್ಮನೆಂದು ಪ್ರಖ್ಯಾತಿಯಾಗಲಿ ಎಂದರು. ಅಷ್ಟ ದಿಕ್ಕುಗಳಲ್ಲೂ  ‘ಭೀಷ್ಮ… ಭೀಷ್ಮ’  ಎಂದು ಪ್ರತಿಧ್ವನಿಯಾಯಿತು. ದೇವವ್ರತನು ಭೀಷ್ಮನಾದನು. ಶಂತನು ತನ್ನ ಪುತ್ರನ ಕಠಿಣ ಪ್ರತಿಜ್ಞೆಯನ್ನೂ ಮಹಾತ್ಯಾಗವನ್ನೂ ಮೆಚ್ಚಿಕೊಂಡು ಮಗೂ, ನಿನ್ನ ಈ ಅಸದೃಶವಾದ ತ್ಯಾಗಕ್ಕೆ ವರವನ್ನು ಕರುಣಿಸುತ್ತಿದ್ದೇನೆ. ನೀನು ಇಚ್ಛಾಮರಣಿಯಾಗು.ನೀನು ಇಚ್ಚಿಸಿದಾಗ ನಿನಗೆ ಮರಣ ಒದಗಲಿ ಎಂದನು.ತಾ ಹೀಗೆ ಭೀಷ್ಮನಿಗೆ ಗಾಂಗೇಯ, ದೇವವ್ರತ, ಇಚ್ಚಾಮರಣಿ, ಸತ್ಯವ್ರತ, ಅಮರಸಂದೋದ್ಭವ ಎಂದು ಅನೇಕ ಹೆಸರುಗಳಿವೆ.

ಭೀಷ್ಕನು ತನ್ನ ತಂದೆಯ ಎರಡನೇ ಪತ್ನಿಯ ಮಗನಾದ ವಿಚಿತ್ರವೀರ್ಯನಿಗೆ ಮದುವೆ ಮಾಡಿಸಲು ಕಾಶೀರಾಜನ ಮಗಳಂದಿರಾದ ಅಂಬೆ, ಅಂಬಿಕೆ, ಅಂಬಾಲಿಕೆಯರನ್ನು ಕರೆತಂದನು. ಆದರೆ ಅಂಬೆಯು ಭೀಷ್ಮನನ್ನೇ ವಿವಾಹವಾಗುವೆನೆಂದು ಆತನಲ್ಲಿ ಹಠ ಹಿಡಿದಾಗ ಭೀಷ್ಕನು ತನ್ನ ಪ್ರತಿಜ್ಞೆಯನ್ನು ತಿಳಿಸಿ ನಿರಾಕರಿಸಿದನು. ಆಗ ಆಕೆಯು ಅವನಲ್ಲಿ ಮುಂದಿನ ಜನ್ಮದಲ್ಲಿ ನಾನು ಶಿಖಂಡಿಯಾಗಿ ಬಂದು ನಿನ್ನ ಮರಣಕ್ಕೆಕಾರಣವಾಗುವೆ ಎಂದು ಹೇಳಿ ಗಂಗಾತೀರದಲ್ಲಿ ಅಗ್ನಿಕುಂಡ ಮಾಡಿ ಆತ್ಮಹತ್ಯೆಗೈದಳು.  ಅಂಬಿಕೆ ಹಾಗೂ ಅಂಬಾಲಿಕೆಯರನ್ನು ಭೀಷ್ಮ ವಿಚಿತ್ರವೀರ್ಯನಿಗೆ ಮದುವೆ  ಮಾಡಿಸಿದನು. ಆದರೆ ವಿಚಿತ್ರವೀರ್ಯನು ಸಂತಾನಹೀನನಾಗಿ ನಿಧನ ಹೊಂದಿದಾಗ  ಅವನ ತಾಯಿ ಸತ್ಯವತಿಯು ವ್ಯಾಸರನ್ನು ಕರೆದು ನಿಯೋಗ ಪದ್ಧತಿಯಲ್ಲಿ  ಸೊಸೆಯಂದಿರಿಗೆ ಮಕ್ಕಳಾಗುವಂತೆ ಪ್ರೇರೇಪಿಸಿದಳು. ಅಂಬಿಕೆಗೆ ದೃತರಾಷ್ಟ್ರನೂ  ಅಂಬಾಲಿಕೆಗೆ ಪಾಂಡುವೂ ಜನಿಸಿದರು. ಭೀಷ್ಮನು ಕೌರವ, ಪಾಂಡವರಿಗೆ ಕೃಪಾಚಾರ್ಯ ಮತ್ತು ದ್ರೋಣಾಚಾರ್ಯರಿಂದ ಬಿಲ್ಲು ವಿದ್ಯೆ ಪಾಠವನ್ನು ಹೇಳಿಸಿದನು. ಕೌರವ-ಪಾಂಡವರಿಗೆ ದ್ಯೂತವಾಗಿ  ಪಾಂಡವರು ಸೋತು ಮುಂದೆ ವನವಾಸ, ಅಜ್ಞಾತವಾಸಗಳಾದಾಗ ನೊಂದನು. ಪಾಂಡವರಿಗೆ ಸಲ್ಲಬೇಕಾದ ಅರ್ಧರಾಜ್ಯವನ್ನು ಕೊಡಬೇಕೆಂದು ಕೌರವನಿಗೆ ಭೀಷ್ಠ ಹೇಳಿದರೂ ಅವನು ಕೇಳದಿರಲು ಕುರುಕ್ಷೇತ್ರ ಯುದ್ಧವಾಯಿತು. ಆಗ ನಿರ್ವಾಹವಿಲ್ಲದೆ ರಾಜನಾದ ಕೌರವನ ಸೇನೆಯ ಒಡತನವನ್ನು ಭೀಷ್ಕನು ಹೊತ್ತನು. ಹತ್ತು ದಿನಗಳವರಿಗೆ ಪಾಂಡವರೊಡನೆ ಯುದ್ದಮಾಡಿದನು.ಇಚ್ಚಾಮರಣಿಯಾದ ಭೀಷ್ಮನೇ ತನ್ನ ಪರಾಜಯದ ಸೂಚನೆ ಕೃಷ್ಣನಿಗೆ ನೀಡಲು  ಶಿಖಂಡಿಯನ್ನು ಯುದ್ಧಕ್ಕೆ ನಿಲ್ಲಿಸಲು ಭೀಷ್ಮನು ಧನುಸ್ಸನ್ನು ಕೆಳಗಿಟ್ಟನು. ದೇಹವೆಲ್ಲವೂ ಬಾಣಗಳಿಂದಾವೃತವಾಗಲು ಶರಮಂಚದಲ್ಲೇ ಮಲಗಿದನು. ಶಿರವು ಜೋತಾಡಲು  ಅರ್ಜುನನು ಬಾಣಗಳಿಂದ ತಲೆದಂಬನ್ನಾಗಿ ಮಾಡಿ ಭೀಷನ ತಲೆಯಡಿಗೆ ಇಟ್ಟನು. ಯುದ್ದಾ ನಂತರ ಯುದಿಷ್ಠಿರನಿಗೆ ವರ್ಣಾಶ್ರಮ, ರಾಜನೀತಿ, ಅಪದ್ಧರ್ಮ, ಮೋಕ್ಷ್ಧಧರ್ಮ ಮೊದಲಾದವುಗಳನ್ನು ಶರಮಂಚದಲ್ಲಿ ಮಲಗಿಯೇ ಬೋಧಿಸಿದನು. ಮುಂದೆ ಶ್ರೀಕೃಷ್ಣನ ಅಪ್ಪಣೆ ಪಡೆದು ಉತ್ತರಾಯಣದ ಮಾಘಮಾಸ, ಶುಕ್ಲಪಕ್ಷದ ಅಷ್ಟಮೀ ತಿಥಿಯಲ್ಲಿ ಸ್ವರ್ಗಸ್ಥನಾದನು.

ಕುರುಕುಲ ಪಿತಾಮಹನೆನಿಸಿದ ಭೀಷ್ಮನ ಜೀವನ ವೃತ್ತಾಂತವು ವಿಚಿತ್ರವೂ ರೋಚಕವೂ ಆಗಿ ಓದುಗರಿಗೆ ಅನೇಕ ನೀತಿ ಸೂತ್ರಗಳನ್ನೂ ಧರ್ಮ ಬೋಧನೆಯನ್ನೂ ಬೋಧಿಸುತ್ತದೆ. ಮಹಾಭಾರತವು ಬೃಹತ್ ಆಲದ ಮರದಂತಿದ್ದರೆ ಭೀಷ್ಮನನ್ನು ಮರದ ಕಾಂಡಕ್ಕೆ ಹೋಲಿಸಬಹುದು. ತಂದೆಗೆ ಮದುವೆ ಮಾಡಿಸಿದ ಮಗ. ಅದಕ್ಕಾಗಿ ಕಠೋರವಾದ ಪ್ರತಿಜ್ಞೆ ಮಾಡಿದವನೂ, ಆ ಜನ್ಮ ಬ್ರಹ್ಮಚಾರಿಯಾಗಿದ್ದವನೂ, ಪಾಂಡವ-ಕೌರವರನ್ನು ಪೋಷಿಸಿದವನೂ, ಇಚ್ಛಾಮರಣಿ ಎನಿಸಿದವನೂ ಆಗಿದ್ದು ಅಸದೃಶ ಹಿರಿಮೆ ಭೀಷ್ಮನದು.

– ವಿಜಯಾ ಸುಬ್ರಹ್ಮಣ್ಯ, ಕುಂಬಳೆ

4 Responses

 1. ASHA nooji says:

  Super akkooo

 2. ನಯನ ಬಜಕೂಡ್ಲು says:

  ದಾನ ಹಾಗೂ ತ್ಯಾಗ ಮಾಡುವಾಗ ಮನಸ್ಸು ಎಷ್ಟು ದೃಢವಾಗಿರಬೇಕು ಅನ್ನುವುದನ್ನು ಮಹಾಭಾರತದ ಕತೆಯ ಮೂಲಕ ವಿವರಿಸಿದ ರೀತಿ ಚೆನ್ನಾಗಿದೆ.

 3. Krishnaprabha says:

  ಕಥೆಯನ್ನು ಇನ್ನೊಮ್ಮೆ ನೆನಪಿಸಿತು

 4. Shankari Sharma says:

  ಕಥಾ ನಿರೂಪಣೆ ಸಹಜವಾಗಿ ಮೂಡಿ ಬಂದಿದೆ. ಧನ್ಯವಾದಗಳು ವಿಜಯಕ್ಕ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: