ಮಾನವೀಯತೆ
ತಾ ಮಾತ್ರ ಬೆಳೆದು ಇತರರ ಪ್ರಪಾತದೆಡೆ ನೂಕುವುದು ಸ್ವಾರ್ಥತೆ !
ತಾನೂ ಕಲಿತು ತನ್ನೊಡನಾಡಿಗಳಿಗೂ ಅರಿವು ಮೂಡಿಸುವುದು ನಿಸ್ವಾರ್ಥತೆ !!
ತಾನು ಕೆಟ್ಟು ಪರರನ್ನು ಕೆಡಿಸುವುದು ಧೂರ್ತತೆ !
ತನ್ನ ಬೆಳೆಸಿದವರ ಬೆನ್ನಿಗೇ ಇರಿಯುವುದು ಕಪಟತೆ !!
ಶುದ್ಧ ಮನದ ನಿಷ್ಕಲ್ಮಶ ಭಾವನೆಗಳು ಸಹಜತೆ !
ಸ್ವಾತಂತ್ರ್ಯವ ದುರುಪಯೋಗಿಸುವುದು ಅಸಹಜತೆ !!
ತಾ ಮನ ಬಂದಂತೆ ಕುಣಿದು ಮುಗ್ಧರ ದಾರಿ ತಪ್ಪಿಸುವುದು ಕೃತ್ರಿಮತೆ !
ತಾನು ಕೆಟ್ಟು ಪರರ ಮುಖಕ್ಕೆ ಮಸಿ ಬಳಿಯುವ ಗುಣ ಪೈಶಾಚಿಕತೆ !!
ತಪ್ಪಿನ ಅರಿವಾದರೂ ಒಪ್ಪಿಕೊಳ್ಳದಿರುವುದು ನಾಟಕೀಯತೆ !
ವಿವೇಕವೆಚ್ಚರಿಸಿದರೂ ತಿದ್ದಿಕೊಳ್ಳದಿರುವುದು ಮನದ ದುರ್ಬಲತೆ !!
ತನ್ನ ಪಾಡಿಗೆ ತಾನಿದ್ದು ತನ್ನಿರವನ್ನೇ ಮರೆಯುವುದು ಮುಗ್ಧತೆ !
ಜಗದ ಜಂಜಾಟ ತನಗೇಕೆಂದು ಸುಮ್ಮನಿರುವುದು ನಿರ್ಲಿಪ್ತತೆ !!
ಕಷ್ಟಸುಖಗಳೇನೇ ಬರಲಿ ಸಮಚಿತ್ತದಿ ಬಾಳ ತೇರ ಎಳೆವುದು ಧೃಡತೆ !
ತಾ ಹೊಳೆದು ಜನಮಾನಸದತ್ತ ಬೆಳಕ ಪ್ರಭೆಯ ಬೀರುವುದು ಮಾನವೀಯತೆ..!!
-ಪ್ರಮೀಳಾ ಚುಳ್ಳಿಕ್ಕಾನ.
ಬದುಕಿನಂಗಳದ ಒಳಿತು ಕೆಡುಕು ಎರಡರ ಪರಿಚಯ ನೀಡೋ
ಸುಂದರ ಕವಿತೆ. ಚೆನ್ನಾಗಿದೆ
ಧನ್ಯವಾದಗಳು
ಮಾನವನಲ್ಲಿರುವ ಗುಣಾವಗುಣಗಳ ಸೂಕ್ಷ್ಮ ತುಲನಾತ್ಮಕ ಸುಂದರ ಕವನ ಮನ ಮಥಿಸುವಂತಿದೆ.
ಧನ್ಯವಾದಗಳು