ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು :ಪುಟ 25

Share Button


ಪರ್ವತದ ತಪ್ಪಲಲ್ಲಿ..

‘ಅರ್ಜುನ ಸನ್ಯಾಸಿ’ ತಾಳಮದ್ದಳೆಯ ಅಭೂತಪೂರ್ವ ಯಶಸ್ಸಿನಿಂದಾಗಿ ತಂಡವು ಪ್ರೇಕ್ಷಕರ ಶ್ಲಾಘನೆಗೆ ಪಾತ್ರವಾಯಿತು.  ರಾತ್ರಿಯ ಮೃಷ್ಟಾನ್ನ ಭೋಜನದ ಸಮಯ ಬಾಲಣ್ಣನವರು ಮರುದಿನದ ಕಾರ್ಯಕ್ರಮದ ಬಗ್ಗೆ ಹೇಳಿದಾಗ ಎಲ್ಲರಲ್ಲೂ ಪುಳಕ! ಯಾಕೆ ಗೊತ್ತಾ? ಚೀನಾ-ಭಾರತ ಗಡಿಭಾಗದ ನಾಥೂ ಲಾ ಪಾಸ್ ಗೆ ಭೇಟಿ ನಿಗದಿಯಾಗಿತ್ತು.  ಅಲ್ಲಿಯ ಭೇಟಿಗೆ ಅನುಮತಿ ಸಿಗುವುದು ತುಂಬಾ ಕಷ್ಟವಾಗಿದ್ದರಿಂದ ನಮ್ಮ ಕಾರ್ಯಕ್ರಮದ ಪಟ್ಟಿಯಲ್ಲಿ ಅದನ್ನು ಸೇರಿಸಿರಲಿಲ್ಲ. ಮೊದಲನೆಯದಾಗಿ, ದಿನದಲ್ಲಿ ಎಂಭತ್ತು ವಾಹನಗಳಿಗೆ ಮಾತ್ರ ಅನುಮತಿ. ಅನುಮತಿ ದೊರೆತರೂ, ಹವಾಮಾನ ವೈಪರೀತ್ಯಗಳಿಂದಾಗಿ ಹೋಗಲಸಾಧ್ಯವಾದ ಪ್ರಸಂಗಗಳೇ ಹೆಚ್ಚು. ಇವೆಲ್ಲಾ ಅಡೆತಡೆಗಳ ನಡುವೆಯೂ ಬಾಲಣ್ಣನವರು ಅವರ ಪರಿಚಯದವರ ಮೂಲಕ ನಮ್ಮ ಪ್ರಯಾಣಕ್ಕೆ  ಅನುಕೂಲತೆಯನ್ನು ಮಾಡಿಕೊಟ್ಟಿದ್ದರು. ಜೊತೆಗೆ ದೈವಾನುಗ್ರಹದಿಂದ ಹವಾಮಾನವೂ ಚೆನ್ನಾಗಿರಲೆಂದು ಎಲ್ಲರ ಆಶಯವೂ ಆಗಿತ್ತು.

ಟಿಬೆಟ್ ಭಾಷೆಯಲ್ಲಿ ನಾಥೂ  ಎಂದರೆ ಕೇಳುವ ಕಿವಿಗಳು (listening ears) ಹಾಗೂ ಲಾ ಎಂದರೆ ದಾರಿ (pass) ಗೇಂಗ್ಟೋಕ್ ನಿಂದ ಸುಮಾರು 56ಕಿ.ಮೀ. ದೂರದಲ್ಲಿರುವ ನಾಥೂ ಲಾ ಪಾಸ್ ಸಮುದ್ರಮಟ್ಟದಿಂದ ಸುಮಾರು14,450 ಅಡಿಗಳಷ್ಟು ಎತ್ತರದಲ್ಲಿದೆ. ಹಿಮಾಲಯದ ಪರ್ವತ ಪ್ರದೇಶ ಮತ್ತು ಪೂರ್ವ ಸಿಕ್ಕಿಂ ಜಿಲ್ಲೆಯಲ್ಲಿರುವ ಇದು, ಟಿಬೆಟ್ ನ ಚೀನಾ ಆಢಳಿತ ಪ್ರದೇಶದ ಗಡಿಭಾಗವಾಗಿದ್ದು, ಐದು ಪೂರ್ವ ನಿರ್ಧರಿತ ಗಡಿ ಪ್ರದೇಶಗಳಲ್ಲಿ ಒಂದಾಗಿದೆ. ಹಿಂದೆಲ್ಲಾ, ಗಡಿ ಭಾಗದಲ್ಲಿರುವ ಜನರಿಗೆ ಹಾಗೂ ಸೈನಿಕರಿಗೆ ಅಗತ್ಯವಿರುವ ವಸ್ತುಗಳ ಸಾಗಣಿಕೆ ಇದರ ಮೂಲಕವೇ ನಡೆಯುತ್ತಿತ್ತು. 1962ರಲ್ಲಿ ಚೀನಾ-ಭಾರತ ಯುದ್ಧದ ಬಳಿಕ ಮುಚ್ಚಲ್ಪಟ್ಟಿದ್ದ ಈ ಗಡಿಯು 2006ರಲ್ಲಿ ತೆರೆಯಲ್ಪಟ್ಟಿತು. ಇದರಿಂದಾಗಿ ಗಡಿಯ ಎರಡೂ ಬದಿಗಳಲ್ಲಿರುವ ಹಿಂದು ಹಾಗೂ ಬೌದ್ಧ ಯಾತ್ರಾಸ್ಥಳಗಳಿಗೆ ಯಾತ್ರಾರ್ಥಿಗಳು ಕ್ರಮಿಸುವ ದೂರ ಕಡಿಮೆಯಾದುದರ ಜೊತೆಗೆ ಈಗಲೂ ವಾರದ ನಿಗದಿತ ದಿನಗಳಲ್ಲಿ ನಿಗದಿತ ವಸ್ತುಗಳನ್ನು ಒಯ್ಯಬಹುದಾಗಿದೆ. ಆಗಾಗ ಎರಡೂ ಕಡೆಯ ಸೈನಿಕರು ಬೆರೆಯುವುದರಿಂದ ಸೈನಿಕರ ಬಾಂಧವ್ಯ ವೃದ್ಧಿಗೆ ಕೂಡಾ ಈ ಜಾಗವು ಸಾಕ್ಷಿಯಾಗಿದೆ.

ಭಾರತದ ಯುದ್ಧ ಸ್ಮಾರಕವಿರುವ ಈ ಸ್ಥಳದಲ್ಲಿ, ಚಳಿಗಾಲದಲ್ಲಿ -25℃ನಷ್ಟು ಚಳಿಯಿದ್ದರೆ, ಬೇಸಿಗೆಯಲ್ಲಿ (ಮೇ-ಅಕ್ಟೋಬರ್) 15℃ ರಿಂದ 20℃ನಷ್ಟು ಉಷ್ಣತೆಯಿದ್ದು ಪ್ರವಾಸಕ್ಕೆ ಹೇಳಿ ಮಾಡಿಸಿದಂತಿದೆ. ಗೇಂಗ್ಟಾಕ್ ನ ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಇಲಾಖೆಯ ಅನುಮತಿ ಪತ್ರ ಪಡೆದ ನಮ್ಮ ದೇಶವಾಸಿಗಳಿಗೆ ಮಾತ್ರ ಇಲ್ಲಿಗೆ ಪ್ರವೇಶ. ನೋಂದಾಯಿತ   ಪ್ರವಾಸೀ ಏಜೆನ್ಸಿಗಳು ಮಾತ್ರ ಪ್ರವಾಸಿಗರನ್ನು ಇಲ್ಲಿಗೆ ಕರೆದೊಯ್ಯಬಹುದಾಗಿದೆ. ಪ್ರತೀ ವಾಹನದಲ್ಲಿ ಸರಿಯಾಗಿ ಆರು ಜನರಿರಬೇಕಾದುದು ಕಡ್ಡಾಯ ಹಾಗೂ ಪ್ರವೇಶ ಶುಲ್ಕ ಒಬ್ಬರಿಗೆ ರೂ.200/- ತೆರಬೇಕಾಗುತ್ತದೆ. ಆದರೆ ಹೆಚ್ಚುವರಿ ಹಣದ ಅಪೇಕ್ಷೆ ಮೇರೆಗೆ ನಾವು ತಲಾ ರೂ.15೦೦/- ನ್ನು ಕೊಡಬೇಕಾಗಿತ್ತು. ಇದು ರಕ್ಷಿತ ಪ್ರದೇಶವಾದ್ದರಿಂದ ಪ್ರವಾಸಿಗರು ಪಾಸ್ ಪೋರ್ಟ್ ಅಳತೆಯ ಎರಡು ಫೋಟೋಗಳು ಮತ್ತು ಗುರುತು ಚೀಟಿಯನ್ನು ತಮ್ಮ ಬಳಿ ಇರಿಸಿಕೊಳ್ಳಬೇಕಾಗುತ್ತದೆ.

ಗೇಂಗ್ಟೋಕ್ ಗೆ ಹೋದವರಿಗೆಲ್ಲಾ ನಾಥೂ ಲಾ ಪಾಸ್ ಗೂ ಭೇಟಿಕೊಡುವ ಮಹದಾಸೆ ಇದ್ದೇ ಇರುತ್ತದೆ. ಅಲ್ಲಿಗೆ ಹೋಗುವ ಬಗ್ಗೆ, ಎರಡು ದಿನಗಳ ಹಿಂದೆಯೇ ನಮ್ಮೆಲ್ಲರಿಂದ ಎರಡು ಫೋಟೋಗಳನ್ನು ಗುರುತು ಚೀಟಿಯ ಪ್ರತಿಯನ್ನು ಹಾಗೂ ಪ್ರವೇಶಶುಲ್ಕವನ್ನು  ಪಡೆದು ಅವರ ಪರಿಚಯದವರ ಮೂಲಕ ಸಿದ್ಧತೆ ನಡೆಸುತ್ತಿದ್ದರು. ದೈವಾನುಗ್ರಹದಿಂದ ಅನುಮತಿಯೂ ಸಿಕ್ಕಿರುವ ವಿಷಯವನ್ನು ತಿಳಿಸಿದಾಗ ಆದ ಆನಂದ ಅಷ್ಟಿಷ್ಟಲ್ಲ! ಮರುದಿನ ಬೆಳಗ್ಗೆ ಎಂಟು ಗಂಟೆಗೆ ಎಲ್ಲರಿಗೂ ಸಿದ್ಧರಾಗಿರಲು ತಿಳಿಸಿದರು. ತಾಳಮದ್ದಳೆಯ ಗುಂಗಿನಲ್ಲಿದ್ದ ನಾವೆಲ್ಲರೂ ಮರುದಿನದ ಪ್ರವಾಸದ ಕುರಿತು ತಿಳಿದು ಖುಷಿಯಿಂದಲೇ ತಮ್ಮ ತಮ್ಮ ಶಯನಾಗಾರಗಳಿಗೆ ತೆರಳಿದೆವು.

ಮರುದಿನ ಬೆಳಗ್ಗೆ..ಮೇ 15, ನಮ್ಮ ಪ್ರವಾಸದ ಎಂಟನೇ ದಿನ. ವಿಶೇಷ ಫಲಾಹಾರವನ್ನು ಸವಿದು, ಸಮಯಕ್ಕೆ ಸರಿಯಾಗಿ ಬಂದ ನಮ್ಮ ಟ್ಯಾಕ್ಸಿಗಳಲ್ಲಿ ಹೊರಟಾಗ ಚುಮುಗುಟ್ಟುವ ಚಳಿ. ಎಲ್ಲರೂ ಸಾಧ್ಯವಾಷ್ಟು ಬೆಚ್ಚನೆಯ ಪೋಷಾಕು ಧರಿಸಿದ್ದೆವು. ಕುತೂಹಲ, ತುಸು ಆತಂಕ, ತುಂಬು ಉತ್ಸಾಹದೊಂದಿಗೆ  ಹೊರಟಾಗ ಅದಾಗಲೇ ಬೆಳಗ್ಗಿನ ಗಂಟೆ 8:30. ವಾಹನಗಳನ್ನು, ಹಾಗೂ  ಪ್ರವಾಸಿಗರನ್ನು ಪರಿಶೀಲಿಸಿ, ತಂಡಗಳನ್ನಾಗಿ ಮುಂದಕ್ಕೆ ಬಿಡುವ ಜಾಗಕ್ಕೆ, ಹನ್ನೊಂದು ಗಂಟೆ ಹೊತ್ತಿಗೆ ತಲಪಲೇ  ಬೇಕಿತ್ತು.  ಇಕ್ಕಟ್ಟಾದ, ಅತೀ ತಿರುವುಗಳಿರುವ ಏರು ರಸ್ತೆಯಲ್ಲಿ ಮುಂದುವರಿದಂತೆ ಅತ್ಯಂತ ವಿಹಂಗಮ ನೋಟ, ಮನಸೂರೆಗೊಳ್ಳುವಂತಿತ್ತು.  ಬಲಗಡೆ ಆಳದಲ್ಲಿ ದಟ್ಟ ಮಂಜು ಮುಸುಕಿದ ಕಣಿವೆ, ಎಡಗಡೆ ಕಣ್ಣೆತ್ತರಕ್ಕೆ ಖಾಲಿ ಬೆಟ್ಟಗಳ ಸಾಲು. ಅಗಾಧ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸುವಾಗ ಎದೆಯೂ ಸಣ್ಣಗೆ ಡವಗುಟ್ಟುತ್ತಿತ್ತು.. ಹೆದರಿಕೆಯಿಂದ. ವಾಹನವನ್ನು, ಚಾಲಕ
ತುಂಬಾ  ಜಾಗರೂಕತೆಯಿಂದ ನಿಧಾನವಾಗಿ ಚಲಾಯಿಸುತ್ತಿದ್ದ. ಸುಮಾರು ಒಂದು ಗಂಟೆ ಪ್ರಯಾಣದ ಬಳಿಕ ಪುಟ್ಟ ಹೋಟೇಲ್, *ಹಿಮಾಲಯನ್ ರೆಸ್ಟೋರೆಂಟ್* ಬಳಿ ವಾಹನಗಳು ನಿಂತವು.


ನಾಥೂ ಲಾ ಪಾಸ್ ನಲ್ಲಿನ  ಚಳಿಯನ್ನು ನಮ್ಮ ಈ ಚಪ್ಪಲಿ, ಶೂಗಳಾಗಲೀ, ತೆಳು ಸ್ವೆಟರ್ ಗಳಾಗಲೀ ತಡೆಯಲಾರವು. ಅದಕ್ಕಾಗಿ, ಅಲ್ಲಿಯೇ ಒಳ್ಳೆಯ ಶೂ, ಸ್ವೆಟರ್ ಗಳನ್ನು ಬಾಡಿಗೆಗೆ  ಪಡೆದು ಮುಂದುವರಿಯುವುದೆಂದು ಬಾಲಣ್ಣನವರು ಸೂಚಿಸಿದರು. ಕಾರಿಳಿದಾಗ, ಕೈ ಕಾಲು ಅಲ್ಲಾಡದಷ್ಟು ಗದಗುಟ್ಟುವ ಚಳಿ!  ಅಲ್ಲಿ ಎಲ್ಲರಿಗೂ ಫ್ರೆಶ್ ಆಗಲು ಅನುಕೂಲಕರವಾಗಿ ಧಾರಾಳ ನೀರಿನ ವ್ಯವಸ್ಥೆಯೊದಗಿಸಿದ್ದರು. ಆ ಕಟ್ಟಡದ ಹಿಂದೆಯೇ ಜುಳು ಜುಳು ಹರಿಯುವ ಚಂದದ ತೊರೆ.. ಸುತ್ತಲೂ ಸ್ವಚ್ಛ, ಸುಂದರ ಬೆಟ್ಟಗಳ ಕೋಟೆ.. ಎಲ್ಲಾ ನೋಡುತ್ತಾ ಮೈ ಮರೆಯುವಂತಹ ಸ್ಥಿತಿ! ಆದರೆ ಹೋಗಲೇ ಬೇಕಲ್ಲಾ? ಹಿತವಾದ ಬಿಸಿ ಬಿಸಿ ಕಾಫಿ ಸೇವನೆಯ ಬಳಿಕ ಬಾಡಿಗೆಗೆ ಪಡೆದ, ಹೊರಲಾರದಷ್ಟು ಭಾರದ ಸ್ವೆಟರ್ ಹಾಗೂ ಶೂಗಳನ್ನು ಜೋಡಿಸಿಕೊಂಡು ಹೊರಟೆವು. ಕಾರಿನ ಬಳಿಗೆ ಪಾಪ್ ಕಾರ್ನ್ ಮಾರಿಕೊಂಡು ಬಂದ ಹೆಂಗೆಳೆಯರನ್ನು ಕಂಡು ನಿಜವಾಗಿಯೂ ಖೇದವೆನಿಸಿತು. ಆ ಚಳಿಯಲ್ಲಿ ವ್ಯಾಪಾರ ಅಷ್ಟೇನೂ ಸುಲಭವಲ್ಲ ಅಲ್ಲವೇ? ಮುಂದಕ್ಕೆ ಪರ್ವತ ಪ್ರದೇಶದ ಅತೀ ಹೆಚ್ಚಿನ ಏರು ರಸ್ತೆಯಲ್ಲಿ  ವಾಂತಿಯಂತಹ ಆರೋಗ್ಯ ಸಮಸ್ಯೆಯ ಪರಿಹಾರಕ್ಕೆ ಪಾಪ್ ಕಾರ್ನ್ ತಿನ್ನುವುದು ತುಂಬಾ ಹಿತಕರವೆಂದು ಹೇಳಿ ವ್ಯಾಪಾರ ಕುದುರಿಸಿಕೊಳ್ಳುತ್ತಿದ್ದರು. ಹಾಗೆಯೇ ನಮ್ಮೆಲ್ಲರ ಕೈಗೂ ಒಂದೊಂದು ಪೊಟ್ಟಣಗಳು ಬಂದವು. ಮುಂದಕ್ಕೆ ದಾರಿ ಮಧ್ಯೆ , ಬಾಬಾ ಹರಿಭಜನ್ ಸಿಂಗ್ ಸ್ಮಾರಕಕ್ಕೆ ಇತ್ತು ನಮ್ಮ ಭೇಟಿ. ಏನು ಆ ಸ್ಮಾರಕ ವಿಶೇಷವೆಂದು ಯೋಚಿಸುತ್ತಿದ್ದಂತೆ.. ನಮ್ಮ
ವಾಹನಗಳು ಹಿಮಾಲಯ ಪರ್ವತ ತಪ್ಪಲಲ್ಲಿ ಸಾಗಿದುವು.

ಹಿಂದಿನ ಸಂಚಿಕೆ ಇಲ್ಲಿದೆ :  ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 24

(ಮುಂದುವರಿಯುವುದು..)

– ಶಂಕರಿ ಶರ್ಮ, ಪುತ್ತೂರು.

4 Responses

  1. ನಯನ ಬಜಕೂಡ್ಲು says:

    nice

  2. ಜಯಲಕ್ಷ್ಮಿ ಪಿ ರಾವ್ says:

    ಚೆನ್ನಾಗಿದೆ

  3. Shankari Sharma says:

    ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: