ಕವನಕ್ಕೊಂದು ದಿನ

Share Button

ಏನು..ಆಶ್ಚರ್ಯವಾಯ್ತೆ? ಕವನಕ್ಕೂ ಒಂದು ದಿನವೆಂಬುದಿದೆಯೇ ಎಂದು ಯೋಚನೆಯೇ? ಹೌದು, ಈಗೀಗ ವರ್ಷದ ಎಲ್ಲಾ ದಿನಗಳೂ ಅತೀ ವಿಶೇಷದ್ ಮುಖ್ಯ ದಿನಗಳೇ ಆಗಿವೆ ಎಂದುಕೊಳ್ಳುವಂತಾಗಿದೆ. ಹಾಗೆಯೇ ಇದು ಕೂಡಾ ಇತ್ತೀಚೆಗಿನ ವರ್ಷದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡತಹುದು. 1999ನೇ  ಇಸವಿಯಲ್ಲಿ UNESCO(The United Nations Educational Scientific and Cultural Organization)ದಿಂದ  ಪ್ರತೀ ವರ್ಷ ಮಾರ್ಚ್ 21ರಂದು ಕವಿತಾ ದಿನವನ್ನಾಗಿ ಆಚರಿಸಲು ಕರೆನೀಡಿತು. ಹಾಗಾದ್ರೆ, ಕವಿ, ಕವಯಿತ್ರಿಗಳೆಲ್ಲಾ ಅದೇ ದಿನ ಮಾತ್ರವೇ ಕವನ ಬರೆಯಬೇಕೇನೋ ಎಂದು ಚಿಂತಿತರಾಗಬೇಕಿಲ್ಲ. ಯಾಕಂದ್ರೆ, ಜಗತ್ತಿನಲ್ಲಿ ಅಳಿವಿನಂಚಿನಲ್ಲಿರುವ ಭಾಷೆಗಳ ಉಳಿವು ಹಾಗೂ ಅಭಿವೃದ್ಧಿಗಾಗಿ ಕಾರ್ಯವೆಸಗಲು ಈ ದಿನ ಜಗತ್ತಿನೆಲ್ಲೆಡೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಅಲ್ಲದೆ, ಎಲ್ಲಾ ಭಾಷೆಗಳಿಗೆ ಉತ್ತೇಜನ, ಭಾಷೋನ್ನತಿ ಬಗ್ಗೆ ಕಾರ್ಯಾಗಾರಗಳು ನಡೆಯುವುವು. ಕವನ ಬರೆಯುವುದು, ಓದುವುದು, ಕವನಗಳ ಪ್ರಕಟಣೆ, ಕವನ ಬರೆಯುವ ಬಗ್ಗೆ ಮಾಹಿತಿಗಳ ಕಾರ್ಯಾಗಾರಗಳು ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಷಾಂತರಗಳ ಬಗ್ಗೆ ಜನರಲ್ಲಿ ಒಲವು ಮೂಡಿಸುವ ನಿಟ್ಟಿನಲ್ಲಿ ಆಂದೋಲನಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ.

ಮೊತ್ತ ಮೊದಲಾಗಿ  ನಮ್ಮ ಗಮನಕ್ಕೆ ಬರುವಂತಹುಗಳು,ಪುರಾಣ ಕವಿಗಳಾದ ವಾಲ್ಮೀಕಿ, ವ್ಯಾಸರ ಮಹಾನ್ ಕೃತಿಗಳು. ದೇವ ಭಾಷೆ ಸಂಸ್ಕೃತದಲ್ಲಿ ರಚನೆಯಾದ ಶ್ಲೋಕ ರೂಪದ ಕವನಗಳು ಮಾನವ ಜನಾಂಗಕ್ಕೆ ದಾರಿದೀಪಗಳಂತಿವೆ. ಪ್ರಖ್ಯಾತ ಕವಿಗಳ  ಛಂದೋಬದ್ಧ ಕವನಗಳು; ಸರ್ವಜ್ಞ ವಚನಗಳು, ದಾಸರ ಪದಗಳು,ಛಂದಸ್ಸು,ಸಂಧಿ, ಸಮಾಸಗಳ ಗೋಜಿಗೆ ಹೋಗದೆ, ಮನದ ಹರಿವು ಬಂದಂತೆ ಬರೆಯುವ ನವ್ಯ ಕವನಗಳು; ಗಝಲ್, ರುಬಾಯಿಗಳಂತಹ ವಿವಿಧ ರೀತಿಯ ಪ್ರಾಸಬದ್ಧ ಕವಿತೆಗಳು, ಆಹಾ..ಒಂದೇ ಎರಡೇ ಸಾವಿರಾರು ಬಗೆಯಲ್ಲಿ ನಿರಂತರ ಹರಿದು ಬರುವ ಕವನಗಳು ಹಾಗೂ ಮುದ್ರಣಗೊಂಡು ಹೊರಬರುತ್ತಿರುವ ನೂರಾರು ಕವನದ ಹೊತ್ತಗೆಗಳು! ಏನಾದರೂ ಬರೆಯಬೇಕೆಂಬ ಹಂಬಲವಿರುವವರು ಪ್ರಾರಂಭದಲ್ಲಿ ಸಾಮಾನ್ಯವಾಗಿ ಲೇಖನಗಳನ್ನು ಬರೆಯದೆ, ಸಣ್ಣ ಪುಟ್ಟ ಕವನಗಳನ್ನು ಬರೆಯುವುದನ್ನು ಕಾಣಬಹುದು.

ನಿಜವಾಗಿಯೂ, ಕತೆ, ಕಾದಂಬರಿ ಅಥವಾ ಇತರ ಬರಹಗಳನ್ನು ಓದುವಂತೆ ಜನರು, ಕವನ ಸಂಕಲನಗಳನ್ನು ಓದುವುದು ತುಂಬಾ ಕಡಿಮೆಯಲ್ಲವೇ? ಆದರೆ, ಕವನಗಳಿಗೆ ಸ್ವರ ಸಂಯೋಜನೆ ಮಾಡಿ ಹಾಡಿದರೆ, ಅದರ ಸ್ತರವೇ ಮೇಲೇರಿದಂತೆ! ಮನಮುದಗೊಳ್ಳಲು ಹಾಡುಗಳನ್ನೇ ಗುಣುಗುಣಿಸಬೇಕಲ್ಲವೇ? ಮನದ ಭಾವನೆಗಳಿಗೆ ರೂಪುಕೊಡಲು ಕವನ ಸುಲಭದ ಮಾಧ್ಯಮವೇ ಹೌದು.ಈಗಂತೂ ಅಂತರ್ಜಾಲದ ಯು ಟೂಬ್, ವಾಟ್ಸಾಪ್ ನಂತಹ ವ್ಯವಸ್ಥೆಗಳಿಂದ ಲೆಕ್ಕವಿಲ್ಲದಷ್ಟು ಗಾಯಕರೂ, ಕವಿ, ಕವಯತ್ರಿಯರೂ ರೂಪುಗೊಳ್ಳುತ್ತಿರುವುದು ಧನಾತ್ಮಕ ಬೆಳವಣಿಗೆಯೆಂದೇ ಹೇಳಬಹುದು. ನನಗೆ ಕೂಡಾ, ವಾಟ್ಸಾಪ್ ನ ಕಾರಣದಿಂದಲೇ ಹಲವು ಕವನಗಳನ್ನು ಬರೆಯಲು ಸಾಧ್ಯವಾದ ಬಗ್ಗೆ ಸಂತೋಷವಿದೆ.

ಮನದೊಳಗಿನ ಭಾವನೆಗಳು
ಸುಖ ದು:ಖ ನೋವುಗಳು
ಮಂಥನ ಚಿಂತನ ಹರಹುಗಳು
ಮೂಡಿ ಬಂದವು ಕವನಗಳು

– ಶಂಕರಿ ಶರ್ಮ, ಪುತ್ತೂರು.

   

7 Responses

  1. ಶಂಕರಿಶರ್ಮ…, ಕವನದ ದಿನವನ್ನೂ ನೆನಪಿಗೆ ತಂದುದು ಒಳ್ಳೆಯದೇ…ಉತ್ತಮ ಬರಹ…

  2. ನಯನ ಬಜಕೂಡ್ಲು says:

    ತುಂಬಾ ಚೆನ್ನಾಗಿದೆ, ಕವನಗಳ ಕುರಿತಾದ ಪರಿಚಯ. ಕವನ ಮನಸಿನ ಭಾವ ಗಳನ್ನು ಹೊರ ಹಾಕಲು ಇರುವ ಒಂದು ಉತ್ತಮ ಮಾರ್ಗ.

  3. Savithri bhat says:

    ಓದಿ ಮನಮುದ ಗೊಂಡಿತು

  4. ASHA nooji says:

    ತುಂಬಾ ಚೆನ್ನಾಗಿದೆ ನಿಮ್ಮ ಲೇಖನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: