ಶತಶತಮಾನಗಳ ತಲೆಬರಹ
ತಪ್ಪುವ ಹಾದಿಗಳ ಗುಂಟ
ಅರಿವಿನ ಸೂಡಿ ಸಿಗಬಹುದೇ
ಎಂದುಕಾಯುತ್ತಲೇಇದ್ದಾರೆ
ಜನ
ದಂಧುಗಗಳ ಸಾಲೇ ಸಾಲು
ಎದುರಾಗುತ್ತ ಬೇಸತ್ತ ಮನಸ್ಸುಗಳು
ಒಂದನ್ನೊಂದು ಹದತಪ್ಪುತ್ತಲೇ
ಬದುಕ ಹದಕ್ಕೆ ಕಾಯಿಸಿಕೊಳ್ಳುವ ಕನಸು
ನನಸಾಗದ ಹಾದಿಯ ಮೇಲೆ
ಸೌಧಕಟ್ಟುತ್ತಿದ್ದಾರೆ
ಶತಶತಮಾನಗಳಿಂದ ಜನ
ಹಾವಿನ ಹಾದಿಯನ್ನು
ಹೂವೆಂದುಕೊಂಡು
ನಂಜಿಗೆ ಬಲಿಯಾಗುತ್ತಿದ್ದಾರೆ ಜನ
ಮಧ್ಯದಕಡಲಿಗೆ ಮುಗಿಬಿದ್ದು
ಮದ್ದೆ ಸಿಗದೇ
ಮಾರಿಕೊಂಡ ಮನಸ್ಸಿನ ಕೂಪದೊಳಗಿನ
ನೆನಪುಗಳ ಒಂದೊಂದಾಗಿ
ಗೋರಿಯೊಳಗೆ ಹೂತು ಹಾಕುತ್ತಲೇ
ಮರೆತು ಅದನ್ನೆ ಎದೆಯ
ಹಾಡಾಗಿಸಿಕೊಳ್ಳುತ್ತಿದ್ದಾರೆ
ಶತಶತಮಾನಗಳಿಂದ ಜನ
ಯಾವಎತ್ತರಕ್ಕೆಏರಿದರೂ
ಜಾರುವ ಭಯದಲ್ಲಿಯೇ
ಬಸವಳಿಯುತ್ತಾರೆ ಜನ
ಬೆಳಕನ್ನು ಮುತ್ತಿಕ್ಕುವ ಆಸೆಗೆ
ಬಲಿಬಿದ್ದು ಕೈತಪ್ಪಿ
ಬೆಂಕಿಯನ್ನು ಅಪ್ಪಿ
ಸುಟ್ಟಗಾಯದ ನೋವಿಗೆ
ಮುಲಾಮು ಹಚ್ಚುತ್ತ
ಮುಲುಗುಡುತ್ತಿದ್ದಾರೆ ಜನ
ಪರಂಪರೆಯ ಮೊರದಲ್ಲಿ
ಬದಲಾವಣೆಯ ಅಕ್ಕಿ ಆರಿಸುತ್ತಾ
ಕಸವರವನ್ನು ಕಸವೆಂದು
ತೆಗೆತೆಗೆದು ಚೆಲ್ಲುತ್ತಿದ್ದಾರೆ ಜನ
ನೆಮ್ಮದಿಯ ಹುಡುಕುತ್ತಾ
ದೇಗುಲಗಳ ಘಂಟೆಗಳ ಬಾರಿಸುತ್ತ
ಪರಮಾತ್ಮ ಎನ್ನುತ್ತ
ಪಂಥಗಳ ಕಟ್ಟಿಕೊಳ್ಳುತ್ತಲೇ
ನಡೆದಿದ್ದಾರೆ
ಶತಶತಮಾನಗಳಿಂದ ಜನ
– ನಾಗರೇಖಾ ಗಾಂವಕರ, ದಾಂಡೇಲಿ
ಶತಮಾನಗಳಿಂದ ಜನರ ಬದಲಾವಣೆ ಇಲ್ಲದ ಪಾಡು ಬಗ್ಗೆ ಮೂಡಿ ಬಂದಿದೆ ಚಲೋ ನವ್ಯ ಕವನ.