ಹೆಣ್ಣು
ನಾಲ್ಕು ಗೋಡೆಗಳ ಮದ್ಯೆ
ಸಂತಸವ ಕಾಣುತ್ತ
ಸಂಸಾರ ನೌಕೆಯಲಿ ಮುಳುಗಿ ತೇಲಾಡುತ್ತ..
ಸವಿರುಚಿಯ ಇಷ್ಟದಲಿ ಮಾಡಿ ಉಣಬಡಿಸುತ್ತ
ಮೆಚ್ಚುಗೆಯ ನೋಟದಲಿ
ತೃಪ್ತಿ ಕಂಡಳು ಹೆಣ್ಣು ||
ಅರ್ಥ ಗೂಡಾರ್ಥಗಳ ಕಪಟ ವಂಚನೆಯೆಲ್ಲ ಅರಿಯದಿಹ
ನಿಸ್ವಾರ್ಥಿ ಮುಗ್ಧೆ ಇವಳೂ..
ಬದುಕ ಬವಣೆಗಳನ್ನು
ಅನುಭವಿಸಿ ನೋಯದೆ
ತನ್ನ ಭಾವಗಳ ಮರೆತು
ಬೆರೆತವಳು ಹೆಣ್ಣು ||
ಹುಟ್ಟಿದಾ ಮನೆಯೊಂದು
ಬಾಳುವೆಯ ಮನೆಯೊಂದು
ಎರಡು ಮನೆಗಳ
ಹೆಸರುಳಿಸಿ
ಮೆರೆಸುವಳು ಹೆಣ್ಣು…||
ಮುದ್ದುಮರಿ ಮುದ್ದಿಕ್ಕಿ,
ಹರಸಿ ಪೋಷಿಸಿದವಳು..
ರೆಕ್ಕೆಪುಕ್ಕವ ಬಲಗೊಳಿಸಿ,
ಹಾರಲೂ ಬಿಟ್ಟವಳು..
ತನ್ನಾಸೆಗಳ ಬದಿಗಿರಿಸಿ
ತನ್ನ ತಾ ಬಂಧಿಸುತ
ಪಂಜರದ ಗಿಣಿಯಂತೆ
ಬದುಕಿದವಳೂ..||
ಜೀವದಾ ಹಣತೆಗೆ ಸಹನೆ
ಎಣ್ಣೆಯ ಸುರಿದವಳು
ಆರದಂತೇ ಬೆಳಕಾಗಿ
ಕಣ್ಣಾದವಳೂ
ಜಗದಗಲ ಹೊಳೆವಂತೆ
ಹರಸಿದವಳೂ..||
ಮನೆ ಮನವ ಬೆಳಗಿಸಿ
ಬೆಳಕಾದವಳೂ..
ಮಹಿಯ ಮುತ್ತು ಮಹಿಳೆಯ
ಪೊಗಳಲು
ಒಂದು ದಿನ ಸಾಕೆ..
ಅನವರತ ನೆನೆಯುತ್ತ
ಹಾರೈಸಲಾರಿರೇಕೆ..||
-ಪ್ರಮೀಳಾ ಚುಳ್ಳಿಕ್ಕಾನ.
ಮನ ಮುಟ್ಟುವ ಕವನ..
ಒಳ್ಳೆಯ ಕವನ..
“ಹೆಣ್ಣು” ಅನ್ನುವ ಪದದ ವಿಶಾಲ ಅರ್ಥ ಅಡಗಿದೆ ಪುಟ್ಟ ಕವನದ ತುಂಬಾ. ಹೆಣ್ಣು ಎಂದರೆ ಪದಗಳಲ್ಲಿ ಬಣ್ಣಿಸಿ ಮುಗಿಯದ ಸಾಹಿತ್ಯದಂತೆ. ಎಷ್ಟು ಬರೆದರೂ, ವಿವರಿಸಿದರೂ ಮುಗಿಯದು ಅವಳ ಕುರಿತಾಗಿ.
ಚಂದದ ಕವಿತೆ.
ಅಸಂಖ್ಯ ಜವಾಬ್ದಾರಿಗಳನ್ನು ಹೊತ್ತು ನಡೆಯುವ ಹೆಣ್ಣಿನ ಬಗೆಗಿನ ಭಾವಲೋಕವನ್ನು ಅನಾವರಣಗೊಳಿಸಿರುವಿರಿ, ದನ್ಯವಾದಗಳು.