ಇಂಗ್ಲಿಷ್-ವಿಂಗ್ಲಿಷ್/ಇಂಗ್ಲಿಷನ್ನು ಕಲಿಯೋಣ

Share Button

 

2012 ರಲ್ಲಿ ಬಿಡುಗಡೆಯಾಗಿ  ಸೂಪರ್ ಹಿಟ್ ಆದ ಹಿಂದಿ ಸಿನೆಮಾ ‘ಇಂಗ್ಲಿಷ್-ವಿಂಗ್ಲಿಷ್’ . ಸ್ಕೂಲ್-ಕಾಲೇಜುಗಳಿಗೆ ಹೋಗುವ ಮಕ್ಕಳಿಂದ ಹಿಡಿದು , ಗೃಹಿಣಿಯರು, ಬುದ್ಧಿಜೀವಿಗಳು ಎಲ್ಲರಿಗೂ ಇಷ್ಟವಾಗುವ ಸಿನೆಮಾ ಇದು. ನಾಯಕಿ ಶ್ರೀದೇವಿ ಇಂಗ್ಲಿಷ್ ಬಾರದೆ ಪಡುವ ಪಡಿಪಾಟಲು ನೋಡಿ ಕಣ್ಣೀರುಗರೆಯದ ಮಂದಿಯೇ ಇಲ್ಲ ಎಂದರೆ ತಪ್ಪಾಗಲಾರದು. ಇಂಗ್ಲಿಷ್ ಬಾರದ ಭಾರತೀಯರೆಲ್ಲರ ಪ್ರತೀಕವಾಗಿ , ಅದರಲ್ಲೂ ಹೆಣ್ಣು ಜೀವಗಳ ಅಸಹಾಯಕತೆಯ , ಐಡೆಂಟಿಟಿಗೋಸ್ಕರ ಅವರು ಪಡುವ ಪ್ರಯತ್ನದ ರೂಪಕದಂತೆ ಶ್ರೀದೇವಿ ಮನೋಜ್ಞವಾಗಿ ನಟಿಸಿದ್ದಾರೆ. (ನಟಿ ಶ್ರೀದೇವಿ ಅವರು 24 ಫೆಬ್ರವರಿ 2018 ರಂದು ದುಬೈಯಲ್ಲಿ ನಿಧನರಾದರು)

ಲಾರ್ಡ್ ಮೆಕಾಲೆಯ ಕಾಲದಿಂದಲೂ ಇಂಗ್ಲಿಷ್ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ಈಗಿನ ಗ್ಲೋಬಲೈಸ್ಡ್ ಯುಗದಲ್ಲಿ ಇಂಗ್ಲಿಷನ್ನು ನಿರ್ಮೂಲನ ಮಾಡುವುದಂತೂ ಖಂಡಿತ ಸಾಧ್ಯವಿಲ್ಲ ಹಾಗೂ ಅದು ಅಗತ್ಯವೂ ಇಲ್ಲವೇನೋ. ಅಷ್ಟರ ಮಟ್ಟಿಗೆ ಅದು ನಮ್ಮದೇ ಭಾಷೆ ಆಗಿಬಿಟ್ಟಿದೆ. ಹಾಗೆ ನೋಡಿದರೆ ಇಂಗ್ಲಿಷರಿಗಿಂತ ಭಾರತೀಯರಲ್ಲಿಯೇ ಇಂಗ್ಲಿಷ್ ಮಾತನಾಡುವವರ ಜನಸಂಖ್ಯೆ ಜಾಸ್ತಿ ಇರಬಹುದು.

 

ಇಂಗ್ಲಿಷ್ ಎನ್ನುವುದು ಬ್ರಹ್ಮವಿದ್ಯೆಯೇನಲ್ಲ. ಸಾಕಷ್ಟು exposure  ದೊರೆತರೆ ಹೇಗಿರುವ ದಡ್ಡ ಶಿಖಾಮಣಿ ಕೂಡ ಅದನ್ನು ಕಲಿಯಬಲ್ಲರು. ಸೆಕ್ಯೂರಿಟಿ ಗಾರ್ಡ್, ವಾಚ್ ಮೆನ್ ಕೆಲಸಕ್ಕೆ ಕೂಡ ಅಲ್ಪಸ್ವಲ್ಪ ಇಂಗ್ಲಿಷ್ ಆದರೂ ಬರಲೇಬೇಕಾದ ಈ ಕಾಲದಲ್ಲಿ ಇಂಗ್ಲಿಷನ್ನು ಕಲಿಯಲೇಬೇಕಾದುದು ನಮ್ಮ ಅನಿವಾರ್ಯವಾದ ಕರ್ಮವೋ, ಸೌಲಭ್ಯವೋ ಆಗಿದೆ.ನಮ್ಮ ವಿದ್ಯಾಭ್ಯಾಸ ಪದ್ಧತಿಯ ವ್ಯಂಗ್ಯ ಎಂದರೆ , ಪ್ರಾಥಮಿಕ- ಮಾಧ್ಯಮಿಕವನ್ನು ಕನ್ನಡ ಮಾಧ್ಯಮದಲ್ಲಿ ಕಲಿತವರೂ, ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತವರೂ ಕಾಲೇಜು ಹಂತಕ್ಕೆ ಬಂದಾಗ ಒಟ್ಟಿಗೆ ಸ್ಪರ್ಧಿಸಬೇಕಾಗಿ ಬರುವಂತಹದು. ಚುರುಕಾಗಿ ಗ್ರಹಿಸುವ ಮಕ್ಕಳನ್ನು ಹೊರತುಪಡಿಸಿ ಉಳಿದ ಹೆಚ್ಚಿನ ಮಕ್ಕಳೂ  concept ಏನು ಎಂದೆ ಅರ್ಥವಾಗದೆ ತಳಮಳಿಸಿ ತಬ್ಬಿಬ್ಬಾಗುತ್ತಾರೆ. ( ಗಡಿನಾಡಿನ ಕಾಲೇಜೊಂದರಲ್ಲಿ ಕಲಿತ ನನಗೆ ಅತ್ತ ಮಲಯಾಳಂ, ಇತ್ತ ಇಂಗ್ಲಿಷ್ ಎರಡೂ ಬಾರದೆ ಸೈನ್ಸ್ ಸಬ್ಜೆಕ್ಟ್ ನಲ್ಲಿ ಪಾಸಾದದ್ದೇ ದೊಡ್ಡ ವಿಕ್ರಮ).

ಯಾವುದೇ ಮಾತೃಭಾಷೆಯನ್ನು ನಾವು ಮೊದಲು ಕೇಳಿ, ಆಮೇಲೆ ಅದರ ವ್ಯಾಕರಣ ಕಲಿಯುತ್ತೇವೆ. ಹಾಗೆ ನೋಡುವುದಿದ್ದರೆ ಚಿಕ್ಕಮಕ್ಕಳು ಕೂಡ ಅವರದೇ ರೀತಿಯಲ್ಲಿ ವ್ಯಾಕರಣವನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತವೆ. Noam Chomskya  ಯ Universal Grammar Theory ಹೇಳುವುದು ಇದನ್ನೆ. ಇಂಗ್ಲಿಷನ್ನು ಸುಲಲಿತವಾಗಿ ಮಾತನಾಡಲು, ಬರೆಯಲು ಇರುವ ಒಂದೆ ಒಂದು ಮಾರ್ಗ ಆ ಭಾಷೆಯನ್ನು ಬಳಸುವುದು.

ರಜಾಕಾಲದಲ್ಲಿ ಸಿಂಪಲ್ಲಾಗಿರುವ ಮಕ್ಕಳ ಕಥೆ ಪುಸ್ತಕಗಳಿಂದ ಆರಂಭಿಸಿ ಸರಳವಾಗಿ ಸಾರಾಂಶ ಕೊಟ್ಟಿರುವ ಇಂಗ್ಲಿಷ್ ಪುಸ್ತಕಗಳನ್ನು ಓದಬಹುದು. ಉದಾ: Tales from Shakespeare. ಎಲ್ಲಕ್ಕಿಂತ ಪ್ರಮುಖವಾಗಿ ಇಂಗ್ಲಿಷ್ ವ್ಯಾಕರಣ ಪುಸ್ತಕಗಳು ಬೇಕಾದಷ್ಟಿವೆ. ಬೇಸಿಕ್ ಆಗಿ ಯಾವುದಾದರೂ ಒಂದು ಪುಸ್ತಕದಲ್ಲಿರುವ ನಿಯಮಗಳನ್ನು ಕಲಿತುಕೊಂಡು ಆದಷ್ಟು ಬೇಗ ಇಂಗ್ಲಿಷ್ – ಇಂಗ್ಲಿಷ್ ಗ್ರಾಮರ್ ಪುಸ್ತಕಕ್ಕೆ ಶಿಫ಼್ಟ್ ಆಗಿ . ( ಹಾಗೆ ನೋಡುವುದಿದ್ದರೆ , ಟೆಕ್ಸ್ಟ್ ನ ಹಿಂಭಾಗದಲ್ಲಿರುವ ಗ್ರಾಮರ್ ಅನ್ನು ಹಂತಹಂತವಾಗಿ , ಆದರೆ ಸಂಪೂರ್ಣವಾಗಿ ಕಲಿತರೆ ಅದೇ ಸಾಕು)

ಎಷ್ಟೋ ವಿಧ್ಯಾರ್ಥಿಗಳು ಬಾಯಿಪಾಠ ಮಾಡಿಯಾದರೂ ಬರೆಯಬಲ್ಲರು. ಆದರೆ ಮಾತಿನ ಹಂತಕ್ಕೆ ಬಂದಾಗ ತಡವರಿಸುತ್ತಾರೆ. ನನ್ನನ್ನೂ ಸೇರಿಸಿ ಎಷ್ಟೋ ಜನ ಕನ್ನಡಿಗರು ಕ್ರಿಯೇಟಿವ್ ಆಗಿ ಬರೆಯಬೇಕೆಂದಾಗ ಕನ್ನಡದಲ್ಲೇ ಬರೆಯುತ್ತಾರೆ. ನೋವಾದಾಗ ‘ಅಮ್ಮ’ ಎಂದು ಕನ್ನಡದಲ್ಲಿ ಕನವರಿಸುವಂತೆ!

ನಮ್ಮ ಸಮಾಜದಲ್ಲಿ ಇಂಗ್ಲಿಷ್ ನಲ್ಲಿ ಮಾತನಾಡುವವರಿಗೆ , ಬರೆಯುವವರಿಗೆ ಇನ್ನಿಲ್ಲದ ಮನ್ನಣೆ. ಜಾಗತಿಕವಾಗಿಯೂ ಅಷ್ಟೆ. ಭಾರತೀಯ ಆಂಗ್ಲ ಸಾಹಿತಿಗಳಿಗೆ ಸಿಗುವ ಮನ್ನಣೆ , ಅವಾರ್ಡ್ , ಓದುಗ ವರ್ಗ ಕನ್ನಡದ ಹೆಸರಾಂತ ಸಾಹಿತಿಗಳಿಗೂ ಲಭಿಸುವುದಿಲ್ಲ. ಇದಕ್ಕೆ ಕಾರಣ ಇಂಗ್ಲಿಷ್ ಜಾಗತಿಕವಾಗಿ ಪವರ್ ಫ಼ುಲ್ ದೇಶಗಳ ಭಾಷೆ ಆಗಿರುವುದು. ತುಳುವೇ ಜಾಗತಿಕ ಸಂವಹನ ಭಾಷೆಯಾಗಿದ್ದಲ್ಲಿ ತುಳು ಸ್ಪೀಕಿಂಗ್ ಕ್ಲಾಸುಗಳಿಗೆ ಸಾವಿರಾರು ರೂಪಾಯಿ ಕೊಟ್ಟು ವಿದ್ಯಾರ್ಥಿಗಳೆಲ್ಲರೂ ಸೇರಿಕೊಳ್ಳುತ್ತಿದ್ದರೆನ್ನುವುದರಲ್ಲಿ ಸಂಶಯವಿಲ್ಲ.

ನನ್ನ ಪ್ರಕಾರ ಇಂಗ್ಲಿಷ್ ಬರದಿದ್ದರೆ ಕೀಳರಿಮೆ ಪಟ್ಟುಕೊಳ್ಳುವ ಅಗತ್ಯವೇನೂ ಇಲ್ಲ. ಹಾಗೆ ನೋಡುವುದಿದ್ದರೆ ದಕ್ಷಿಣ ಭಾರತದ ನಮಗೆ ಹಿಂದಿಯೂ ಅಷ್ಟಕ್ಕಷ್ಟೆ. ಇನ್ನು ಭಾರತದಲ್ಲಿಯೇ ಹಲವು ಭಾಷೆ, ಸಂಸ್ಕೃತಿ, ಒಳಪಂಗಡಗಳನ್ನೊಳಗೊಂಡ ಶ್ರೀಮಂತ ಪರಂಪರೆ ನಮ್ಮದು. ನಮ್ಮ ಇಂಗ್ಲಿಷ್ ಮೇಲೆ ಕನ್ನಡ accent  ಇದ್ದರೆ ಅದರ ಅರ್ಥ ನಮಗೆ ಎರಡು ಭಾಷೆ ಗೊತ್ತಿದೆ ಎಂದು. ಇಂಗ್ಲಿಷರಂತೆ ಉಚ್ಚರಿಸಿದುವುದೂ ನಮಗೆ ಕಷ್ಟವೇ. ಸ್ವಾಭಿಮಾನದಿಂದ ಯೋಚಿಸಿದರೆ ‘ಪುಲಿಕೇಶಿ ಶೆಟ್ಟಪ್ಪನವರ್’ ಎಂದೋ ‘ವಿಗ್ರಡ ವಿಕ್ರಮರಾಯ’ ಎಂದೋ ಅವರು ಸರಿಯಾಗಿ ಉಚ್ಚರಿಸಲಿ ನೋಡೋಣ!

ಜಾಗತಿಕ ಅಲೆಯ ಬೀಸಿನಲ್ಲಿ ಇವೆಲ್ಲ ವಿತಂಡವಾದಗಳೇನೋ. ಇಂಗ್ಲಿಷ್ ನಮಗೆ ಅನೇಕ ಉದ್ಯೋಗಾವಕಾಶಗಳನ್ನು ಕೊಡುತ್ತದೆ. ಕಾಲ್ ಸೆಂಟರ್ ನ್ ಜಾಬ್ ಇರಲಿ, ಇಂಜಿನಿಯರ್ ಆಗಿ ಮಲ್ಟಿನ್ಯಾಶನಲ್ ಕಂಪೆನಿಗೆ ಸಂದರ್ಶನಕ್ಕೆ ಹೋಗಲಿ ಇಂಗ್ಲಿಷ್ ನಲ್ಲಿ ಸರಿಯಾಗಿ ಮಾತನಾಡಲು ಬರಬೇಕು. ಹೆಚ್ಚೇಕೆ ನಮ್ಮ ದೇಶದಲ್ಲೇ ಬೇರೆ ಕಡೆಗೆ ಹೋದಾಗ ನಮಗೆ ಇಂಗ್ಲಿಷ್ ಇಲ್ಲದೆ ಸಂವಹನ ಮಾಡಲು ಸಾಧ್ಯವಿಲ್ಲ. ( ಇಲ್ಲವಾದರೆ ಮಣಿಪುರ, ಅಸ್ಸಾಂ, ರಾಜಸ್ಥಾನ್ ಇಲ್ಲೆಲ್ಲ ಬಸ್ ಸ್ಟ್ಯಾಂಡ್ ನಲ್ಲಿ ಕಳೆದು ಹೋದ ಮಗುವಿನಂತೆ ನಮ್ಮ ಪರಿಸ್ಥಿತಿಯಾಗಬಹುದು!) ಹತ್ತಾರು ವರ್ಷಗಳಿಂದ ತಕ್ಕ ಮಟ್ಟಿಗೆ ಇಂಗ್ಲಿಷ್ ಮಾತನಾಡುವ ಕಾರಣ ( ಪರಿಪೂರ್ಣತೆ ಎನ್ನುವುದೊಂದು process), ತಡವರಿಸುವ ಎಳೆಯರಿಗೆ ಕೆಲವು ಸಲಹೆಗಳು:

 1. ಭಾಷೆಯ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಿ. ಯಾಕೆಂದರೆ ಅದು ಹೊಸ ಸಾಧ್ಯತೆಗಳನ್ನು , ಅರಿವಿನ ಪರಿಧಿಯನ್ನು ವಿಸ್ತರಿಸಲು ಸಹಕಾರಿಯಾಗುತ್ತದೆ.
 2. ಸಾಧ್ಯವಾದಷ್ಟು ಚಿಕ್ಕ ಮಕ್ಕಳೊಂದಿಗೆ, ನಿಮ್ಮನ್ನು ಇಷ್ಟ ಪಡುವ ಕ್ಲಾಸ್ ಮೇಟ್ ಗಳೊಂದಿಗೆ , ಅಧ್ಯಾಪಕರೊಂದಿಗೆ ( ಅವರು ನಿಮ್ಮನ್ನು ಕುಗ್ಗಿಸದೆ, ಸ್ಫೂರ್ತಿ ತುಂಬುವವರಾಗಿರಬೇಕು) ಹೆಚ್ಚು ಹೆಚ್ಚು ಸಂಭಾಷಿಸಿ.
 3. ಒಳ್ಳೆಯ ಅಭಿರುಚಿಯ ಇಂಗ್ಲಿಷ್ ಸಿನೆಮಾಗಳನ್ನು, ಕಾರ್ಟೂನ್ ಗಳನ್ನು ನೋಡಿ.
 4. ರೇಡಿಯೋ, ಟಿವಿ ನ್ಯೂಸ್ ಗಳು ಕಡ್ಡಾಯ.
 5. ಇಂಗ್ಲಿಷ್ ನ್ಯೂಸ್ ಪೇಪರ್ ಗಳಲ್ಲಿ ನಿಮಗೆ ಯಾವ ಸೆಕ್ಷನ್ ಇಷ್ಟವೋ ( ಉದಾ: ಫಿಲ್ಮ್ , ಸ್ಪೋರ್ಟ್ಸ್) ಅವನ್ನು ನಿತ್ಯ ಓದಿ. ಆಮೇಲೆ ಸಂಪಾದಕೀಯಕ್ಕೆ ಶಿಫ಼್ಟ್ ಆಗಬಹುದು.
 6. ಡಿಕ್ಷನರಿ ನಿಮ್ಮ ಬೆಶ್ಟ್ ಫ಼್ರೆಂಡ್. ಹೊಸ ಹೊಸ ಶಬ್ದ ಕಲಿತಂತೆಲ್ಲ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ.
 7. ಸಾಧ್ಯವಾದಲ್ಲಿ, ಇಂಗ್ಲಿಷನಲ್ಲಿ ಸಣ್ಣ ಪುಟ್ಟ ಲೇಖನಗಳನ್ನು ಏನಿಲ್ಲವೆಂದರೆ ದಿನಚರಿಯನ್ನಾದರೂ ಬರೆಯಿರಿ (ಎಲ್ಲಕ್ಕಿಂತ ಮೊದಲು ಪರೀಕ್ಷೆ ಪಾಸಾಗಲು ನಿಗದಿತ ಸಿಲೆಬಸ್ ಅನ್ನು ಸಾರಾಂಶ ರೂಪದಲ್ಲಿ ನಾಲ್ಕಾರು ಬಾರಿ ಓದಿ ಮನನ ಮಾಡಿಕೊಳ್ಳಿ. ಮಾತನಾಡುವ ಇಂಗ್ಲಿಷನ್ನು ಡಿಗ್ರಿ ಆದ ಮೆಲೆ ಕೂಡ ಸ್ಪೀಕಿಂಗ್ ಕ್ಲಾಸಿಗೆ ಹೋಗಿಯಾದರೂ ಕಲಿಯಬಹುದು)
 8. ಕೊನೆಯದಾಗಿ , ಕನ್ನಡ ಭಾಷೆಯ ಸೊಗಡು, ಆಪ್ತತೆ , ಅದು ಸ್ಪುರಿಸುವ ಬೆಚ್ಚನೆಯ ಭಾವ ಬೇರೆ ಯಾವ ಭಾಷೆಯಲ್ಲಿಯೂ ನಮಗೆ ದೊರೆಯುವುದಿಲ್ಲ

‘ಸಿರಿಗನ್ನಡಂ ಗೆಲ್ಗೆ’

 

– ಜಯಶ್ರೀ ಬಿ. ಕದ್ರಿ

13 Responses

 1. Krishnaveni Kidoor says:

  ಚೆನ್ನಾಗಿದೆ ಬರಹ .ಎಂಟನೆಯ ಪಾಯಿಂಟ್ ಮತ್ತೂ ಅರ್ಥವತ್ತಾಗಿದೆ .ಮಾತೃಭಾಷೆ ಯಾವಾಗಲೂ ಆಪ್ತ್ಹವೇ .

 2. Ghouse says:

  Nice article….

 3. Shruthi Sharma says:

  Loved this article and then watched English-Vinglish movie.. 😀 Very nicely written.. 😉

 4. BH says:

  ಲೇಖನ ಚೆನ್ನಾಗಿದೆ. ಇದರಿಂದ ಪ್ರಭಾವಿತಳಾಗಿ , ಇಂಗ್ಲಿಷ್-ವಿಂಗ್ಲಿಷ್ ಸಿನೆಮಾವನ್ನು ಡೌನ್ ಲ್ಲೋಡ್ ಮಾಡಿ ನೋಡಿದೆವು.

 5. ಆನಂದ್ ಋಗ್ವೇದಿ says:

  ಬರಹ ಅರ್ಥಪೂರ್ಣ. ಜಾಗತೀಕರಣದ ಈ ದಿನಗಳಲ್ಲಿ ಭಾಷೆಯಾಗಿ ಇಂಗ್ಲೀಷ್ ಕಲಿಯುವುದು ಅನಿವಾರ್ಯ ನಿಜ, ಹಾಗೆಂದು ಕನ್ನಡವನ್ನು ಮರೆಯುವಂತಿಲ್ಲ. ಕಳೆದೊಂದು ದಶಕದಿಂದ ಕನ್ನಡ ಹೆಚ್ಚು ಅವಜ್ಞೆಗೆ ಗುರಿಯಾಗಿದೆ ಎಂಬುದೇ ಖೇದ

 6. ಡಾ. ಬಡೆಕ್ಕಿಲ ಶ್ರೀಧರ ಭಟ್. says:

  ಇಂಗ್ಲಿಷ್, ವಿಂಗ್ಲಿಷ್ : ನಮ್ಮಲ್ಲಿ ಕೆಲವರಂತೂ “ಕಂಗ್ಲಿಷ್” ನಲ್ಲಿ ಹೆಚ್ಚು ನುರಿತವರು. ಮೊನ್ನೆ ತೀರಿಹೋದ ಮೋಹಕ ನಟಿ, ಶ್ರೀದೇವಿಯಿಂದ ಪ್ರಾರಂಭಿಸಿ, ಒಳ್ಳೆಯ ಆಕರ್ಷಣೆಯಿಂದ ಸೆಳೆದು (ನಿಜವಲ್ಲವೇ..ಅದೆಷ್ಟು ಜನ ಸಿನೆಮ ಪ್ರಿಯರ ಕಣ್ಮಣಿ ಅಲ್ಲವೇ ಶ್ರೀದೇವಿ ), ಓದುಗರ ನಾಡಿ ಮಿಡಿತ, ನಿಮಗೆ ಗೊತ್ತಿಲ್ಲದೆಯೋ ಅಥವಾ ಗೊತ್ತಾಗಿಯೋ, ಹಿಡಿದು ಬಿಟ್ಟಿರಿ, ಮೇಡಂ ಜಯಶ್ರೀ!
  ಏನೇ ಆದರೂ, ‘ಸ್ಪೋಕನ್ ಇಂಗ್ಲಿಷ್’ ನ ಬಾಗಿಲು ತೆರೆಯಲು ಬೇಕಾಗುವ ಬೀಗದ ಕೈ ಗೊಂಚಲನ್ನು ( 8 ಕೀಲಿಗಳು) ಕೊಟ್ಟಿದ್ದೀರಿ. ನಾನೂ ಕಲಿಯುವೆ. ಧನ್ಯವಾದಗಳು.

 7. Raju Nadaf says:

  ಇಂಗ್ಲಿಷ್ ಭಾಷೆಯ ಮಹತ್ವ ಕುರಿತು ಉತ್ತಮ ವಿಶ್ಲೇಷಣೆ ಮೇಡಂ.

 8. Sowjanya Kadappu says:

  ಇಂಗ್ಲಿಷ್ ಯಾಕೆ ಬೇಕು ಎಂದು ವಿತಂಡವಾದ ಮಾಡುವವರು ಇದನ್ನು ಓದಬೇಕು. ಈಗಿನ ಸ್ಪರ್ಧಾತ್ಮಕ ಕಾಲದಲ್ಲಿ ಆಂಗ್ಲ ಭಾಷೆ ಅನಿವಾರ್ಯ. ಹಾಗೆಂದು ಕನ್ನಡ ಭಾಷೆಯ ನಿರಾದರಿಸಬೇಕೆಂದಿಲ್ಲ. ಕನ್ನಡ ಪುಸ್ತಕ,ಲೇಖನಗಳನ್ನು ಪ್ರೋತ್ಸಾಹಿಸುವುದರ ಮೂಲಕ ಭಾಷೆಯ ಉಳಿಕೆ ಸಾಧ್ಯ. ನಿಜ. ಭಾವನೆಗಳನ್ನು ವ್ಯಕ್ತಪಡಿಸಲು ಮಾತೃ ಭಾಷೆಯಿಂದಷ್ಟೇ ಸಾಧ್ಯ ಎನಿಸುತ್ತದೆ. ಲೇಖನ ತುಂಬಾ ಚೆನ್ನಾಗಿದೆ.

 9. Farhanaaz Maski says:

  Nice madam. U have mentioned so many easy ways, to improve English language dats really effective. Hope it vl b helpful for beginners.. ಇಂಗ್ಲಿಷ್ ಭಾಷಾ ವ್ಯಾಮೋಹ ಜಾಸ್ತಿ ನಮ್ ಜನರಿಗೆ. ಆದರೆ ನಮ್ ಕನ್ನಡದ ಸೊಬಗು ಒಂದ್ ಅದ್ಭುತವೇ ಸರಿ. ನನ್ನ ಮಾತೃಭಾಷೆ ಉರ್ದು ಆಗಿದ್ದರೂ ನಾನು ನನ್ನ ಭಾವನೆಗಳನ್ನು ಕನ್ನಡದಲ್ಲೇ ಬರೆಯುತ್ತೇನೆ. ಅದೇನೋ ಕನ್ನಡ ಎಂದರೆ ಒಂಥರಾ ಒಲವು ನನಗೆ !!

 10. Jayashree B kadri says:

  Thank you. So nice of you

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: