ಒಗರು ಎಂದು ಒಗೆಯದಿರಿ..
ಹೆಚ್ಚಾಗಿ ಹಳ್ಳಿಗಳಲ್ಲಿ ಅಡಿಕೆತೋಟದಲ್ಲಿ ಬಾಳೆಯನ್ನು ಉಪಬೆಳೆಯಾಗಿ ಬೆಳೆಸುತ್ತಾರೆ. ಹಿತ್ತಿಲಲ್ಲಿಯೂ ಒಂದೆರಡು ಬಾಳೆ ಗಿಡಗಳನ್ನು ಕಾಣಬಹುದು. ಬಾಳೆ ಗೊನೆ ಬಿಟ್ಟು, ಕಾಯಿ ಸ್ವಲ್ಪ ಬಲಿತೊಡನೆ ಬಾಳೆ ಹೂವನ್ನು ಕೊಯಿದರೆ ಕಾಯಿ ಹೆಚ್ಹು ದಪ್ಪಗಾಗುವುದು ಎಂಬುದು ಅನುಭವದ ಮಾತು. ಬಾಳೆಹೂವನ್ನು ಎಸೆಯಬೇಕಿಲ್ಲ. ಇದರಿಂದ ರುಚಿಕರ ಅಡಿಗೆಯನ್ನು ತಯಾರಿಸಬಹುದು ಎಂಬುದೂ ಎಲ್ಲರಿಗೆ ತಿಳಿದ ವಿಚಾರ.
ಬಾಳೆ ಹೂ ಒಂದು ಔಷಧದ ಆಗರ. ಇದರಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಂ, ಪೋಟೆಶಿಯಂ ಮೊದಲಾದ ನಮ್ಮ ದೇಹಕ್ಕೆ ಬೇಕಾದ ಖನಿಜಾಂಶಗಳಿವೆ. ಜೀರ್ಣಕ್ರಿಯೆಗೆ ಇವು ಸಹಾಯ ಮಾಡುವುದು. ಬಾಳೆ ಹೂ ಗಂಟಲು, ಕರುಳಿನ ಅಲ್ಸರ್ ಶಮನಗೊಳಿಸುವುದು. ಬಾಣಂತಿ ಪಥ್ಯ ದಲ್ಲೂ ಇದನ್ನು ಪಲ್ಯ, ತಂಬುಳಿ ಮಾಡಿ ಉಣಬಡಿಸುತ್ತಾರೆ ಇದರಲ್ಲಿ ಅತ್ಯಧಿಕ ನಾರಿನಂಶ ಇರುವುದರಿಂದ ಮಲಬದ್ಧತೆಯನ್ನು ನಿವಾರಿಸುವುದು. ಮಹಿಳೆಯಾರ ಮಾಸಿಕಸ್ರಾವವನ್ನು ಸಮತೋಲನ ದಲ್ಲಿಡುವುದು ಎಂದು ಹಿರಿಯರ ಅನುಭವದ ಮಾತು. ಇತ್ತೀಚಿಗಿನ ಸಂಶೋಧನೆ ಯ ಪ್ರಕಾರ ಇದು ಹೃದಯದ ಕಾಯಿಲೆ, ರಕ್ತಶುದ್ಧಿ, ಕ್ಯಾನ್ಸೆರ್, ಸ್ಥೂಲಕಾಯ ನಿವಾರಣಯಲ್ಲೂ ಉತ್ತಮ ಪರಿಣಾಮಕಾರಿ ಎಂದು ತಿಳಿದು ಬಂದಿದೆ. ಹಾಲುನೀಡುವ ಹಸುಗಳಿಗೆ ಇದನ್ನು ತಿನ್ನಿಸಿದರೆ ಹಾಲು ಉತ್ಪತ್ತಿ ಹೆಚ್ಚಾಗುತ್ತದೆ ಎಂದು ಪಶು ವೈದ್ಯರ ಹೇಳಿಕೆ.
ಬಾಳೆ ಹೂವಿನ ರುಚಿಕರ ಖಾದ್ಯ ಗಳನ್ನು ಸವಿಯೋಣ.
ಬಾಳೆಹೂವಿನ ದೋಸೆ :
ಬೇಕಾಗುವ ಸಾಮಾಗ್ರಿ: ಸಾದಾ ಅಕ್ಕಿ ಉದ್ದಿನ ದೋಸೆ ಹಿಟ್ಟು -2 ಕಪ್ , ಹೆಚ್ಚಿದ ಬಾಳೆ ಹೂ- 2 ಕಪ್,ರುಚಿಗೆ ಉಪ್ಪು, ಎಣ್ಣೆ ಅಥವಾ ತುಪ್ಪ (ಸ್ವಲ್ಪ)
ಮಾಡುವ ವಿಧಾನ: ಬಾಳೆ ಹೂವನ್ನು ದೋಸೆ ಹಿಟ್ಟಿನ ಜತೆಗೆ ನುಣ್ಣಗೆ ರುಬ್ಬಿ. ಉಪ್ಪು ಸೇರಿಸಿ ಕಾದ ಕಾವಲಿಯಲ್ಲಿ ತೆಳ್ಳಗೆ ದೋಸೆ ಹೊಯ್ದು ಎಣ್ಣೆ ಹಾಕಿ ಗರಿ ಗರಿ ಯಾಗಿ ಬೇಯಿಸಿ. ರುಚಿಯಾದ ದೋಸೆ ರೆಡಿ. ತೆಂಗಿನ ಚಟ್ನಿ ಯೊಂದಿಗೆ ಸವಿಯಿರಿ.
ಬಾಳೆ ಹೂವಿನ ರೊಟ್ಟಿ :
ಬೇಕಾಗುವ ಸಾಮಾಗ್ರಿ: ಒಂದು ಕಪ್ ಬೊಂಬಾಯಿ ರವೆ, ಅರ್ಧ ಕಪ್ ಗೋಧಿ ಹಿಟ್ಟು, ಹಸಿಮೆಣಸಿನ ಚೂರು, ಶುoಠಿ, ನೀರುಳ್ಳಿ, ಕರಿಬೇವು ಎಲ್ಲಾ ಸೇರಿ ಒಂದು ಕಪ್ , ಹೆಚ್ಚಿದ ಬಾಳೆಹೂ ಒಂದು ಕಪ್, ರುಚಿಗೆ ಉಪ್ಪು, ಕಲಸಲು ನೀರು , ಎಣ್ಣೆ ಸ್ವಲ್ಪ
ಮಾಡುವ ವಿಧಾನ: ಎಣ್ಣೆ ಬಿಟ್ಟು ಉಳಿದ ಎಲ್ಲಾ ಸಾಮಾನುಗಳನ್ನು ಸ್ವಲ್ಪ ಸ್ವಲ್ಪವೇ ನೀರು ಹಾಕಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿ. ಬಾಳೆ ಎಲೆಯಲ್ಲಿ ರೊಟ್ಟಿ ತಟ್ಟಿ ಕಾದ ಕಾವಲಿಯಲ್ಲಿ ಎರಡೂ ಬದಿ ಎಣ್ಣೆ ಹಾಕಿ ಬೇಯಿಸಿ. ಆರೋಗ್ಯಕರ ರೊಟ್ಟಿ ರೆಡಿ.
ಬಾಳೆ ಹೂವಿನ ಪಕೋಡ :
ಬೇಕಾಗುವ ಸಾಮಾನು : ಬಾಳೆ ಹೂವಿನ ಹೋಳುಗಳು-ಮೂರು ಕಪ್ , ಹೆಚ್ಚಿದ ಈರುಳ್ಳಿ-ಒಂದು ಕಪ್, ಕಡಲೆ ಹಿಟ್ಟು – ಒಂದು ಕಪ್ , ಅಕ್ಕಿ ಹಿಟ್ಟು – ಕಾಲು ಕಪ್ , ಖಾರದ ಪುಡಿ – ಒಂದು ಚಮಚ , ಇಂಗು ಪುಡಿ – ಅರ್ಧ ಚಮಚ, ಉಪ್ಪು- ರುಚಿಗೆ, ಕರಿಯಲು ಎಣ್ಣೆ .
ಮಾಡುವ ವಿಧಾನ : ಬಾಳೆ ಹೂ, ಈರುಳ್ಳಿ, ಉಪ್ಪು, ಖಾರಪುಡಿ, ಇ೦ಗು ಪುಡಿ ಕಲಸಿ ಹತ್ತು ನಿಮಿಷ ಬಿಡಿ.ನಂತರ ಅದಕ್ಕೆ ಅಕ್ಕಿ ಹಿಟ್ಟು, ಕಡಲೆ ಹಿಟ್ಟು ಹಾಕಿ ಸ್ವಲ್ಪ ನೀರು ಚಿಮುಕಿಸಿ, ಕಲಸಿ, ಉದುರು ಉದುರಾಗಿ ಕಾದ ಎಣ್ಣೆಯಲ್ಲಿ ಕರಿಯಿರಿ. ಬಿಸಿ ಬಿಸಿ ಗರಿ ಗರಿ ಪಕೋಡ ತಯಾರು.
ಬಾಳೆ ಹೂವಿನ ವಡೆ :
ಬೇಕಾಗುವ ಸಾಮಾಗ್ರಿ: ಸಣ್ಣ ರವೆ – ಒಂದು ಕಪ್, ಅಕ್ಕಿ ಹಿಟ್ಟು – ಕಾಲು ಕಪ್ , ಮೈದಾ – ಕಾಲು ಕಪ್, ಹೆಚ್ಚಿದ ಬಾಳೆಹೂ – ಒಂದು ಕಪ್, ಹೆಚ್ಚಿದ ಈರುಳ್ಳಿ – ಅರ್ಧ ಕಪ್ , ಸಣ್ಣಗೆ ಹೆಚ್ಚಿದ ಹಸಿಮೆಣಸು,ಶು೦ಠಿ, ಕರಿಬೇವು ಸ್ವಲ್ಪ
ರುಚಿಗೆ ಉಪ್ಪು. ಕರಿಯಲು ಎಣ್ಣೆ
ಮಾಡುವ ವಿಧಾನ : ಎಣ್ಣೆ ಬಿಟ್ಟು ಉಳಿದ ಎಲ್ಲಾ ಸಾಮಾನುಗಳನ್ನು ಸ್ವಲ್ಪ ಸ್ವಲ್ಪವೇ ನೀರು ಹಾಕಿ ಚಪಾತಿ ಹಿಟ್ಟಿನಿಂದ ಸ್ವಲ್ಪ ಮೆತ್ತಗೆ ಕಲಸಿ ಕೊಳ್ಳಿ. ಬಾಳೆ ಎಲೆ ಅಥವಾ ಪ್ಲಾಸ್ಟಿಕ್ ಹಾಳೆಯಲ್ಲಿ ಪೂರಿಯಸ್ಟು ದೊಡ್ಡ ವಡೆ ತಟ್ಟಿ ಕಾದ ಎಣ್ಣೆಯಲ್ಲಿ ಕರಿದರೆ ಬಾಳೆ ಹೂವಿನ ವಡೆ ತಿನ್ನಲು ರೆಡಿ .
ಬಾಳೆ ಹೂವಿನ ಸಲಾಡ್ :
ಬೇಕಾಗುವ ಸಾಮಾನು : ಮೊಳಕೆಯೊಡೆದ ಹೆಸರುಕಾಳು –ಅರ್ಧ ಕಪ್ , ತೆಳ್ಳಗೆ ಹೆಚ್ಚಿದ ಬಾಳೆಹೂ – ಒಂದು ಕಪ್ , ನೀರುಳ್ಳಿ – ಕಾಲು ಕಪ್ , ಸಣ್ಣಗೆ ಹೆಚ್ಚಿದ ಸೌತೆಕಾಯಿ – ಅರ್ಧಕಪ್ , ರುಚಿಗೆ ಉಪ್ಪು. ಒಂದು ಚಮಚ ನಿಂಬೆರಸ. ಸ್ವಲ್ಪ ಶು೦ಠಿ, ಹಸಿಮೆಣಸಿನ ಚೂರುಗಳು
ಮಾಡುವ ವಿಧಾನ : ಮೇಲಿನ ಎಲ್ಲಾ ಸಾಮಾನುಗಳನ್ನು ಮಿಶ್ರ ಮಾಡಿ ಉಪ್ಪು ನಿಂಬೆರಸ ಬೆರೆಸಿ. ಡಯಟ್ ಮಾಡುವವರಿಗೆ ಆರೋಗ್ಯಕರ ಸಲಾಡ್ .
ಬಾಳೆ ಹೂವಿನ ತಂಬುಳಿ :
ಬೇಕಾಗುವ ಸಾಮಾಗ್ರಿ : ಅರ್ಧ ಕಪ್ ಕಾಯಿತುರಿ, ಒಂದು ಕಪ್ ಹೆಚ್ಚಿದ ಬಾಳೆಹೂ, ಒಂದು ಕಪ್ ಸಿಹಿ ಮಜ್ಜಿಗೆ ಅಥವಾ ಮೊಸರು, ಒಂದು ಚಿಟಿಕೆ ಜೀರಿಗೆ, ಒಂದು ತುಂಡು ಹಸಿಮೆಣಸು, ಉಪ್ಪು, ಒಗ್ಗರಣೆಗೆ ಸಾಸಿವೆ, ಎಣ್ಣೆ, ಕರಿಬೇವು.
ಮಾಡುವ ವಿಧಾನ; ಕಾಯಿ ತುರಿ, ಬಾಳೆ ಹೂ, ಜೀರಿಗೆ, ಮಜ್ಜಿಗೆ, ಹಸಿಮೆಣಸು ಇವುಗಳನ್ನು ನುಣ್ಣಗೆ ರುಬ್ಬಿ. ಸಾಸಿವೆ, ಕರಿಬೇವು ಒಗ್ಗರಣೆ ಕೊಟ್ಟರೆ ರುಚಿಯಾದ ತಂಬುಳಿ ಬಿಸಿ ಅನ್ನದ ಜೊತೆ ರುಚಿ.
ಬಾಳೆ ಹೂವಿನ ಚಟ್ನಿ :
ಬೇಕಾಗುವ ಸಾಮಾಗ್ರಿ: ಬೇಯಿಸಿದ ಬಾಳೆ ಹೂ ಒಂದು ಕಪ್, ಕಾಯಿತುರಿ ಒಂದು ಕಪ್, ಕೆಂಪು ಮೆಣಸು 5 ,ಕೊತ್ತಂಬರಿ 2 ಚಮಚ, ಉದ್ದಿನ ಬೇಳೆ 2 ಚಮಚ, ಇಂಗು ಕಡಲೆ ಕಾಳಿನಸ್ಟು, ಎರಡು ಎಸಳು ಬೆಳ್ಳುಳ್ಳಿ. ಹುಣಸೆಹಣ್ಣು ಸಣ್ಣ ನೆಲ್ಲಿಗಾತ್ರ, ಸ್ವಲ್ಪ ಎಣ್ಣೆ, ಉಪ್ಪು.
ಮಾಡುವ ವಿಧಾನ : ಮೆಣಸು, ಕೊತ್ತಂಬರಿ, ಉದ್ದಿನಬೇಳೆ, ಇಂಗು, ಬೆಳ್ಳುಳ್ಳಿ, ಎರಡು ಚಮಚೆ ಎಣ್ಣೆ ಹಾಕಿ ಹುರಿಯಿರಿ.
ಕಾಯಿತುರಿ, ಉಪ್ಪು, ಹುಣಸೆಹಣ್ಣು, ಬಾಳೆಹೂ, ಮತ್ತು ಹುರಿದ ಸಾಮಾನುಗಳನ್ನು ರುಬ್ಬಿ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ದೋಸೆ, ಚಪಾತಿ, ಅನ್ನ, ಗಂಜಿ ಊಟಕ್ಕೂ ಚೆನ್ನಾಗಿರುತ್ತದೆ.
ಬಾಳೆ ಹೂವಿನ ಪಲ್ಯ :
ಬೇಕಾಗುವ ಸಾಮಾಗ್ರಿ: ಸಣ್ಣಗೆ ಹೆಚ್ಚಿದ ಬಾಳೆ ಹೂ 3 ಕಪ್, ತೆಂಗಿನ ತುರಿ ಅರ್ಧ ಕಪ್, ಮಜ್ಜಿಗೆ ಅರ್ಧ ಕಪ್, ಬೆಲ್ಲದ ಪುಡಿ 4 ಚಮಚೆ, ಉಪ್ಪು ರುಚಿಗೆ, ಖಾರ ಪುಡಿ ಅರ್ಧ ಚಮಚ ಅರಸಿನ ಹುಡಿ, ಅರ್ಧ ಚಮಚ, ಒಗ್ಗರಣೆಗೆ ಸಾಸಿವೆ, ಉದ್ದಿನ ಬೇಳೆ, ಎಣ್ಣೆ.
ಮಾಡುವ ವಿಧಾನ: ಹೆಚ್ಚಿದ ಬಾಳೆಹೂವಿಗೆ ಉಪ್ಪು, ಅರಸಿನ, ಮಜ್ಜಿಗೆ, ಖಾರ ಪುಡಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ,
ಒಗ್ಗರಣೆಗೆ ಎಣ್ಣೆ, ಸಾಸಿವೆ, ಉದ್ದಿನ ಬೇಳೆ ಇಟ್ಟು ಒಗ್ಗರಣೆ ಸಿಡಿದನಂತರ ಬಾಳೆಹೂವನ್ನು ಹಾಕಿ ಚೆನ್ನಾಗಿ ಮಗುಚಿ, ಬೆಲ್ಲಹಾಕಿ ನೀರು ಹಾಕದೆ ಸಣ್ಣ ಉರಿಯಲ್ಲಿ ಬೇಯಿಸಿ. ಕಾಯಿತುರಿ ಸೇರಿಸಿ ಚೆನ್ನಾಗಿ ಮಗುಚಿ. ರುಚಿಯಾದ ಪಲ್ಯ ತಯಾರು.
ವಿ.ಸೂ:– ಬಾಳೆ ಹೂ ಹೆಚ್ಹುವಾಗ ಆಗಾಗ ಹುಡಿ ಉಪ್ಪನ್ನು ಕೈಗೆ ಸವರಿ ಕೊಂಡರೆ ಕೈಗೆ ಅಂಟಿಕೊಳ್ಳುವುದಿಲ್ಲ. ಮತ್ತು ಉಗುರು ಬೆರಳುಗಳು ಕಪ್ಪಾಗುವುದನ್ನು ತಡೆಯಬಹುದು. ಬಾಳೆ ಹೂವನ್ನು ಬೇಯಿಸುವಾಗ ಎರಡು ಚಮಚ ಹುಣಸೆರಸ ಅಥವಾ ಹುಳಿಮಜ್ಜಿಗೆಯನ್ನು ಬೆರೆಸಿದರೆ ಬಣ್ಣ ಕಪ್ಪಾಗದೆ ತಾಜಾ ಉಳಿಯುವುದು.
-ಸಾವಿತ್ರಿ ಭಟ್ ಬಡೆಕ್ಕಿಲ, ಪುತ್ತೂರು
YABHO .estu reethyali aguthe allvoo akkooo
ಬಾಳೆ ಹೂವಿನ ವೈವಿಧ್ಯಮಯ ಅಡುಗೆಗಳನ್ನು ಔಷಧೀಯ ಗುಣಗಳ ಸಹಿತ ವಿವರಿಸಿದ್ದೀರಿ…ಬಹಳ ಚೆನ್ನಾಗಿದೆ
ಬಾಳೆಹೂವಿನ ಪತ್ರೊಡೆ ರುಚಿಯಾಗಿರುತ್ತದೆ. ಚಿಕ್ಕಂದಿನಲ್ಲಿ ಹೂವಿಂದ ಕಳಚಿ ಬಿದ್ದ ಹೊಸ ಪದರ (ಬಾಳೆಕೂಂಬೆ) ತಂದು ರುಚಿಯಾಗಿ ಅಮ್ಮ ಚಟ್ಣಿ ಮಾಡುತ್ತಿದ್ದುದು ಈಗ ನೆನಪಾಯಿತು.
ಓದಿ ಪ್ರೋತ್ಸಾಹಿಸಿ ದ ಓದುಗರಿಗೆ ಧನ್ಯವಾದಗಳು.
ಪ್ರಕಟಿಸಿದ ಸಂಪಾದಕಿ ಯವರಿಗೂ ಧನ್ಯವಾದಗಳು
ಬಾಳೆಕುಂಡಿಗೆಯ ಬಹು ರುಚಿಯನ್ನು ಬಹುವಿಧವಾಗಿ ತಿಳಿಸಿದ್ದಕ್ಕೆ ಸಾವಿತ್ರಿಯವರಿಗೆ ಧನ್ಯವಾದ.
ನನಗೆ ಅದರ ಪಲ್ಯ, ಚಟ್ಣಿ, ಪತ್ರೊಡೆ ಅಷ್ಟೇ ಗೊತ್ತಿತ್ತಷ್ಟೆ…
ಚೆನ್ನಾಗಿದೆ. ಸಾಕಷ್ಟು ಹೊಸ ರುಚಿಗಳ ಪರಿಚಯ.
ಬಾಳೆಮೋತೆಯ ಚಟ್ನಿಯ ಅದ್ಭುತ ರುಚಿ ಬಲ್ಲವರಿಗೆ ಮಾತ್ರ ಗೊತ್ತು
ಅದೆಷ್ಟು ಅರೋಗ್ಯಪೂರ್ಣ ರೆಸಿಪಿಗಳು! ಬಾಳೇಹೂವಿನ ಕೆಲವು ಅಡುಗೆ ಗೊತ್ತಿತ್ತು..ಇನ್ನು ಕೆಲವು ರೆಸಿಪಿಗಳನ್ನು ಪ್ರಯತ್ನಿಸುವೆ .ಧನ್ಯವಾದಗಳು
ಧನ್ಯವಾದ ಗಳು
ನನಗೆ ಗೊಜ್ಜು ಚಟ್ನಿ ಎರಡೇ ಗೊತ್ತಿದ್ದದ್ದು . ಎಷ್ಟೊಂದು ತಿಳೀತು
ಮೆಣಸುಕಾಯಿಯೂ ಬಲು ರುಚಿಯಾಗುತ್ದದೆ
ರುಕ್ಮಿಣಿಮಾಲಾ
ಅಬ್ಬಾ.. ಎಷ್ಟು ವೈವಿಧ್ಯಮಯ ಅಡಿಗೆ, ತಿನಿಸುಗಳು! ಸಾವಿತ್ರ ಅಕ್ಕನ ಕೈಯಿಂದ ರುಚಿಕರವಾದ ತಿಂಡಿಗಳನ್ನು ತಿಂದ ಅನುಭವ, ಇವುಗಳ ರುಚಿಯನ್ನು ಇನ್ನೂ ಹೆಚ್ಚಿಸಿತು. ಧನ್ಯವಾದಗಳು ಅಕ್ಕ.
ಧನ್ಯವಾದಳು