ಭೀತಿಯ ಮಧ್ಯೆ ಫಜೀತಿ..!

Share Button

ಸಮಸ್ತ ಮಾನವ ಜನಾಂಗವನ್ನು ತಲ್ಲಣಗೊಳಿಸುತ್ತಿರುವ ಸೂಕ್ಷ್ಮ ಜೀವಾಣು ಕೊರೋನವು, ತನ್ನ ಕಬಂಧ ಬಾಹುವನ್ನು ದಿನದಿಂದ ದಿನಕ್ಕೆ ಅತಿ ವಿಸ್ತಾರವಾಗಿ ಚಾಚುತ್ತಿರುವುದು, ನಮಗಿಂದು ಅರಗಿಸಿಕೊಳ್ಳಲಾರದ ಕಠೋರ ಸತ್ಯವಾಗಿದೆ. ನಮ್ಮ ಜೀವಿತ ಕಾಲದಲ್ಲೇ ಇಂತಹುದೊಂದು ದುರಂತಕ್ಕೆ  ನಾವು ಸ್ವತ: ಜೀವಂತ ಸಾಕ್ಷಿಯಾಗಬಹುದೆಂದು ಯಾರಾದರೂ ಕನಸಲ್ಲೂ ಯೋಚಿಸಲು ಸಾಧ್ಯವಿತ್ತೇ?

ಪೃಥ್ವಿಯಲ್ಲಿರುವ ಸಕಲ ಜೀವಿಗಳಲ್ಲಿ ಮಾನವನು ಬುದ್ಧಿವಂತನೆನಿಸಿಕೊಂಡು, ಸಕಲ ಜೀವ ಸಂಕುಲನಗಳನ್ನು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಂಡೆನೆನ್ನುವ ಮಿಥ್ಯವನ್ನೇ ಸತ್ಯವೆಂದು ತಿಳಿದಿರುವುದಿಂದಲೇ, ಇಂತಹ ಘೋರ ಪರಿಣಾಮವನ್ನು ಎದುರಿಸಬೇಕಾದ ಕರಾಳ ದಿನವೊಂದು ಧುತ್ತೆಂದು ಬಂದೆರಗಿದುದು! ತನ್ನ ಇತಿಮಿತಿಗಳನ್ನು ಪೂರ್ತಿ ಮರೆತು, ಪ್ರಕೃತಿಯಲ್ಲಿರುವ ಪ್ರತಿಯೊಂದು ಚರಾಚರಗಳಿಗೂ ಕೊಡಬೇಕಾದ ಮಹತ್ವತೆಯನ್ನು ಕೊಟ್ಟು, ಬೆರೆತು ಜೀವಿಸುವುದನ್ನು ಬಿಟ್ಟು; ಅತಿ ಸ್ವಾರ್ಥಿಯಾಗಿ ಬಿಟ್ಟಿದೆ ಈ ಮಾನವ ಸಂಕುಲ. ವಿಜ್ಞಾನದ ಮುನ್ನಡೆಯಲ್ಲಿ ಸಾಧಿಸಿದುದು ಹಲವಾರು.. ಮಂಗಳನ ಅಂಗಳಕ್ಕೆ ಲಗ್ಗೆ ಇಡಲು ಹೊರಟವನಿಗೆ, ಈಗ ತನ್ನ ಅಂಗಳಕ್ಕೇ ಹೆಜ್ಜೆ ಇಡಲು ಭಯ ಪಡುವಂತಾಗಿದೆ. ಪಕ್ಕದ ಚೀನಾ ದೇಶವು ತನ್ನ ಸಹಸ್ರಾರು ವಸ್ತುಗಳನ್ನು ಪ್ರಪಂಚವಿಡೀ ರಫ್ತು ಮಾಡಿ, ಬಲಿಷ್ಟ ದೇಶವಾಗಿ ರೂಪುಗೊಳ್ಳುತ್ತಿರುವ ಹಿನ್ನೆಲೆಯಲ್ಲೇ, ಅಲ್ಲೇ ಉದ್ಭವಗೊಂಡ ಈ ಮಹಾಮಾರಿಯನ್ನು ಕೂಡಾ  ಪ್ರಪಂಚಕ್ಕಿಡೀ  ಉಚಿತವಾಗಿ ಹಂಚಿದ್ದು ಮಾತ್ರ  ಅರಗಿಸಿಕೊಳ್ಳಲಾಗದ ಕಟುಸತ್ಯ. ತೀವ್ರಗತಿಯಲ್ಲಿ ಹರಡುತ್ತಿರುವ, ತಹಬಂದಿಗೆ ತರಲು ಹೆಣಗಾಡುತ್ತಿರುವ, ಈ ರೋಗದ ಮೂಲ, ಯ:ಕಿಶ್ಚಿತ್ ಕಣ್ಣಿಗೆ ಕಾಣದ ಸೂಕ್ಷಾಣುವೊಂದು,  ಮಾನವನನ್ನು ಇನ್ನಿಲ್ಲದಂತೆ ಬಗ್ಗು ಬಡಿದಿದೆ. ಮಹಾಯುದ್ಧದ ಕಾಲದಲ್ಲಿ ಕೂಡಾ ಇಷ್ಟು ಆತಂಕವಿದ್ದಿರಲಿಲ್ಲವೇನೋ.! ಕೊರೋನದ ನಿಯಂತ್ರಣಕ್ಕೆ ಉಳಿದಿರುವ ಒಂದೇ ದಾರಿ, ಅದರ ಹರಡುವಿಕೆಯ ಸರಪಳಿಯನ್ನು ತುಂಡರಿಸುವುದು. ಅದಕ್ಕಾಗಿ, ಪ್ರತಿಯೊಬ್ಬರೂ ತಮ್ಮ ಮನೆಯಲ್ಲೇ ಇದ್ದು, ಹೊರಗಡೆ ಹೋದಾಗ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಕಟ್ಟುನಿಟ್ಟಿನ ಕ್ರಮವನ್ನು ಸರಕಾರವು ರೂಪಿಸಿದೆ.

ಸಂಘಜೀವಿಯಾದ ಮನುಜನು ಈಗ ಏಕಾಂತಕ್ಕೆ ಶರಣು ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಅಕ್ಕಪಕ್ಕದವರು, ಪರಿಚಿತರು, ಅಪರಿಚಿತರು, ಬಂಧುಗಳು, ಆತ್ಮೀಯರು ಯಾರನ್ನೂ ಬಳಿಗೆ ಸೇರಿಸುವಂತಿಲ್ಲ. ಪ್ರತಿಯೊಬ್ಬರನ್ನೂ ಸಂದೇಹದ ದೃಷ್ಟಿಯಲ್ಲಿ ನೋಡುವಂತಾಗಿದೆ. ಮನೆಗೆ ಬಂದ ಅತಿಥಿಯನ್ನು ಒಳಗೆ ಕರೆದು ಸತ್ಕರಿಸುವುದು ನಮ್ಮ ಪದ್ಧತಿ. ಈಗ ಅದಕ್ಕೆ ವ್ಯತಿರಿಕ್ತವಾಗಿ, ಬಂದವರನ್ನು ಹೊರಗಡೆಗೇ ದೂರದಲ್ಲಿ ನಿಲ್ಲಿಸಿ, ಭಯದಿಂದಲೇ ಮಾತನಾಡಿ ಆದಷ್ಟು ಬೇಗ ಕಳಿಸಿಕೊಡಬೇಕಾದ ಅನಿವಾರ್ಯತೆ ಉಂಟಾಗಿದೆ! ಹಾಗೆಯೇ ಆಯ್ತು.. ಆಗಿನ್ನೂ ಮೊದಲ ಗೃಹಬಂಧನದ ಸಮಯ. ಪರಿಚಿತ ಹಿರಿಯ ಮಹಿಳೆಯೊಬ್ಬರು ಬೆಳಗ್ಗಿನ ಹೊತ್ತು ನೇರವಾಗಿ ಮನೆಯೊಳಗೆ ಬಂದರು. (ನಮ್ಮ ಮನೆ ಬಾಗಿಲು ಮಲಗುವ ಸಮಯ ಬಿಟ್ಟು, ಉಳಿದ ಎಲ್ಲಾ ಸಮಯ ತೆರೆದೇ ಇರುತ್ತದೆ) ನಮಗೋ ಗಾಬರಿಯಲ್ಲಿ ಏನು ಮಾತಾಡಬೇಕೆಂದು ತಿಳಿಯಲಿಲ್ಲ. ನನ್ನವರು ನನಗಿಂತಲೂ ಜಾಸ್ತಿ ಗಾಬರಿಗೊಂಡು, ಅವರಲ್ಲಿ ಜೋರಾಗಿ ಮಾತಾಡಲಾರಂಭಿಸಿದರು. ನಾನು ಆ ಆಯೋಮಯ ಸ್ಥಿತಿಯನ್ನು ತಹಬಂದಿಗೆ ತರುವ ಪ್ರಯತ್ನದಲ್ಲಿ ಅವರನ್ನು ಕುರ್ಚಿಯಲ್ಲಿ ಕುಳ್ಳಿರಿಸಿ ವಿಷಯವೇನೆಂದು ಅರಿತುಕೊಳ್ಳುವ ಪ್ರಯತ್ನ ಮಾಡಿದೆ. ನಾನು ಸ್ವಯಂಸೇವಕಿಯಾಗಿದ್ದ, ಬಡವರಿಗಾಗಿ ನಡೆಸುವ ಉಚಿತ ವೈದ್ಯಕೀಯ ಶಿಬಿರದಿಂದ ಅವರಿಗೆ ತುರ್ತಾಗಿ ಮಾತ್ರೆಗಳು ಬೇಕಾಗಿತ್ತು. ಅದಕ್ಕಾಗಿ ನನ್ನ ಸಹಾಯವನ್ನು ಕೇಳಿ ಬಂದಿದ್ದರು. ಲಾಕ್ ಡೌನಿನಿಂದಾಗಿ ಮರುದಿನದ ಶಿಬಿರ ರದ್ದಾಗಿದ್ದು ಅವರಿಗೆ ತಿಳಿದಿರಲಿಲ್ಲ. ಅದನ್ನು ತಿಳಿಸಿ, ಅವರನ್ನು ಕಳುಹಿಸಿಕೊಡುವುದರಲ್ಲಿ ಸುಸ್ತಾಗಿಬಿಟ್ಟಿತ್ತು! 

ಇಂತಹ ಸನ್ನಿವೇಶದಲ್ಲಿ ,ನಮ್ಮ ಕೆಲವು ಅನುಭವಗಳು ಮನಮುಟ್ಟುವಂತಿರುತ್ತವೆ.ಒಂದು ವಸತಿ ಸಮುಚ್ಚಯದ ಆರನೇ ಮಹಡಿಯಲ್ಲಿರುವ ಸಾವಿತ್ರಮ್ಮನವರು ಒಬ್ಬರೇ ಮನೆಯಲ್ಲಿದ್ದರು. ಅದೇ ಊರಲ್ಲಿರುವ ಮಗಳು, ತನ್ನ ಮಗುವಿನೊಂದಿಗೆ ಅಮ್ಮನನ್ನು ಕಾಣಲು ಆಗಾಗ ಬರುವುದಿತ್ತು. ಬರುವಾಗ ಅಮ್ಮನಿಗೆ ಏನಾದರೂ ಅಗತ್ಯದ ಸಾಮನುಗಳನ್ನು ತರಿತ್ತಿದ್ದರೆ; ಬಂದ ಮಗಳು, ಮೊಮ್ಮಗನಿಗೆ ಅವರ ವಿಶೇಷ ತಿಂಡಿ, ಅಡಿಗೆ ಸಿದ್ಧವಾಗಿ ಕಾದಿರುತ್ತಿತ್ತು. ಆದರೆ ಆ ದಿನ, ಬೆಳಗ್ಗಿನಿಂದಲೇ ಸ್ವಲ್ಪ ತಲೆ ನೋವು, ಶೀತ ಪ್ರಾರಂಭವಾಗಿತ್ತು. ಮಧ್ಯಾಹ್ನ ಹೊತ್ತಿಗೆ ಮಗಳ ಫೋನ್ ಬಂತು, “ಅಮ್ಮಾ, ನಾನು ಕೆಳಗೆ ನಿನಗಾಗಿ ಸ್ವಲ್ಪ ತರಕಾರಿ ಇಟ್ಟಿದ್ದೇನೆ. ಆಮೇಲೆ ತೆಗೆದುಕೋ.” ಸಾವಿತ್ರಮ್ಮನವರು ಸಂಭ್ರಮದಿಂದ, “ಎಲ್ಲಿದ್ದೀಯಾ, ಮೇಲೆ ಬಾ, ನಿನ್ನಿಷ್ಟದ ಸಾಂಬಾರ್ ಇದೆ, ತಗೊಂಡು ಹೋಗು” ಎಂದರೆ, ಮಗಳು, “ಇಲ್ಲ ಅಮ್ಮ ನಿನಗೆ ಶೀತ ಅಲ್ವಾ, ನಾನು ಬರೋದಿಲ್ಲ, ಆರೋಗ್ಯ ನೋಡ್ಕೋ ” ಎಂದು ಹೋಗಿಯೇ ಬಿಟ್ಟಳು. ಆಮ್ಮನ ಮನಸ್ಸು ಚುಳುಕ್ಕೆಂದಿದ್ದು ಸಹಜ ತಾನೇ?

ನಮ್ಮ ಮನೆಯವರು ಹಾಡುಪ್ರಿಯರು. ಮನೆಯೊಳಗೆ ಸದಾ ಯಾವುದಾದರೊಂದು ಹಾಡು ಯುಟ್ಯೂಬ್ ನಿಂದ ಹೊರಹೊಮ್ಮುತ್ತಿರುತ್ತದೆ. ಮನೆ ಸುತ್ತಲಿರುವ ಕೈ ತೋಟಕ್ಕೆ ಹೋದರೆ, ಸ್ವತ: ಗಟ್ಟಿ ಸ್ವರದಲ್ಲಿ ಹಾಡುವುದೂ ಇಷ್ಟ. ಈಗಂತೂ, ರಸ್ತೆಯಲ್ಲಿ ವಾಹನಗಳ ಓಡಾಟವಿಲ್ಲದೆ, ಇಡೀ ಪರಿಸರವು ಶಬ್ದಮಾಲಿನ್ಯವಿಲ್ಲದೆ ಶಾಂತವಾಗಿದೆ. ಎಂದಿನಂತೆ ತೋಟದಿಂದ ಗಟ್ಟಿಯಾಗಿ  ಭೀಮ್ ಸೇನ್ ಜೋಷಿಯವರು ಹಾಡಿದ ಹಾಡು ಕೇಳಿ ಬರುತ್ತಿತ್ತು, ‘ ಬಾರೋ ಕರುಣಾನಿಧೇ… ಬಾರೋ ಕರುಣಾನಿಧೇ…` ಆ ನಿಶ್ಶಬ್ದ ಮೌನದಲ್ಲಿ ನಮ್ಮವರು ಹಾಡುತ್ತಿದ್ದ ಹಾಡು, ತೋಟದಿಂದ ಹೊರ ದಾಟಿ ಹೋಗಿ ಎದುರಿನ ರಸ್ತೆವರೆಗೂ  ಗಟ್ಟಿಯಾಗಿ ಧ್ವನಿಸುತ್ತಿತ್ತು. ಅಲ್ಲೇ ವರಾಂಡದಲ್ಲಿದ್ದ ನನಗೆ ನಗು ತಡೆಯಲಾಗಲಿಲ್ಲ, ಪಕ್ಕದ ರಸ್ತೆಯಲ್ಲಿ ಕರುಣಾನಿಧಿ ಏನಾದರೂ ಹೋಗುತ್ತಿದ್ದರೆ, ಓಡಿಬರುತ್ತಿದ್ದನೋ ಏನೋ!

ಇನ್ನು, ಅಮೇರಿಕದಲ್ಲಿರುವ ಮಗಳ ಕುಟುಂಬ ಕೂಡಾ, ಇಡೀ ಜಗತ್ತು ಎದುರಿಸುತ್ತಿರುವಂತಹ ಸಮಸ್ಯೆಯಲ್ಲೇ ಮುಳುಗೇಳುತ್ತಿದ್ದರೂ, ಅವರಿರುವ ಜಾಗದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿಯೇ ಇದೆ. ಸಾಮಾನ್ಯವಾಗಿ, ಎಲ್ಲಾ ಕಡೆಗಳಲ್ಲೂ ಮನೆಯಿಂದಲೇ ಕೆಲಸ ಮಾಡುತ್ತಿರುವಂತೆ, ಅಲ್ಲಿಯೂ ನಡೆದಿದೆ. ಆದರೆ ಇದರ ಜೊತೆಗೇ, ಇಡೀ ದಿನ ಮನೆಯೊಳಗಡೆಗೇ ಇರುವ 10ವರ್ಷದ ಮತ್ತು 5 ವರ್ಷದ ಮಕ್ಕಳಿಬ್ಬರನ್ನು ಸಂಭಾಳಿಸುವುದು ಮಾತ್ರ ಸ್ವಲ್ಪ ಸವಾಲಾಗಿದೆ. ಅಲ್ಲಿಯ ಶಾಲೆಗಳೆಲ್ಲಾ ಮುಚ್ಚಲ್ಪಟ್ಟರೂ, ಉಳಿದಂತೆ, ಸಂಗೀತ, ಡ್ಯಾನ್ಸ್, ಕರಾಟೆಗಳಂತಹ ತರಗತಿಗಳನ್ನು ಅಂತರ್ಜಾಲದ ಮೂಲಕ ಕಲಿಸುತ್ತಿದ್ದಾರೆ. ಅದರಲ್ಲಿ ಕಲಿಯುವುದಕ್ಕೆ ಕೆಲವು ಸಮಸ್ಯೆಗಳಿರುವುದು ಅದು ನಡೆಯುವಾಗಲಷ್ಟೇ ಅರಿವಾಗುವುದು. ಐದು ವರ್ಷದ ಪುಟಾಣಿಯ ಕರಾಟೆ ತರಗತಿ ಆರಂಭವಾಯಿತು; ಆದರೆ ಕಿಕ್ ಗಳನ್ನು ಎಲ್ಲಿಗೆ ಕೊಡಲಿ? ಅಂದರೆ  ಕಲಿಯುವಾಗ ಅಲ್ಲಿ ಇಬ್ಬರು ಇರಬೇಕಲ್ಲವೇ? ಅದಕ್ಕಾಗಿ ಕರಾಟೆ ಮಾಸ್ಟರ್ ಸೂಚಿಸಿದರು, ‘ಯಾರಾದರೂ ಒಬ್ಬರು ಅವನ ಎದುರಲ್ಲಿ ದಿಂಬು ಹಿಡಿದು ನಿಲ್ಲಿ`.  ಕೊನೆಗೆ ಹತ್ತು ವರ್ಷದ ಅವನಕ್ಕನೇ ದಿಂಬು ಹಿಡಿದು ನಿಲ್ಲಬೇಕಾಯಿತೆನ್ನಿ! ಇನ್ನು ಅಕ್ಕನ ಭರತನಾಟ್ಯ ತರಗತಿಯಾದರೋ ಇನ್ನೂ ಅಧ್ವಾನ.. ಟೀಚರ್ ಬಲದ ಕೈಯಲ್ಲಿ ಅಂಗ ವಿನ್ಯಾಸ ಕಲಿಸುತ್ತಿದ್ದರೆ, ಪರದೆಯ ಮೇಲೆ ಎಡದ ಕೈ ಕಾಣುವುದಲ್ಲಾ? (ದರ್ಪಣದ ನಿಯಮ). ಹಾಗೆಯೇ ಕಾಲು, ಕಣ್ಣುಗಳ ಚಲನೆಯೂ ಕಲಿಯುವ ಮಕ್ಕಳಿಗೆ ಗೊಂದಲಕ್ಕೀಡು ಮಾಡುವುದು ಖಚಿತ. ಅಂತರ್ಜಾಲ ಸಂಪರ್ಕ ಸರಿಯಿಲ್ಲದಿದ್ದಲ್ಲಿ ಇನ್ನೂ ತೊಂದರೆ. ಸಂಗೀತ ಗುರುಗಳು ಪಾಠ ಹೇಳ್ತಾ ಮುಂದುವರಿಸಿದರೆ, ವಿದ್ಯಾರ್ಥಿ ಹಿಂದೆ ಉಳಿದು, ಮಿಕಿ ಮಿಕಿ ನೋಡಬೇಕಾದ ಅನಿವಾರ್ಯತೆ!  

ಇನ್ನು, ಹೊರ ಹೋಗುವಾಗ ಮುಖಗವಸು ಎಲ್ಲರಿಗೂ ಕಡ್ಡಾಯ ತಾನೇ? ಇದು ಕಣ್ಣನ್ನು ಬಿಟ್ಟು ಬೇರೆ ಕಡೆಗೆಲ್ಲಾ ಮುಚ್ಚಿರುತ್ತದೆ. ಅತೀ ಪರಿಚಿತರು ಎದುರಿಗೇ ಬಂದು ಮಾತನಾಡಿಸಿದರೆ ಕೂಡಾ ಯಾರೆಂದೇ ತಿಳಿಯುವುದಿಲ್ಲ! ‘ನೀವ್ಯಾರೆಂದು ತಿಳಿಯಲಿಲ್ವಲ್ಲಾ’ ಎಂದರೆ, ಅವರು ಮಾಸ್ಕನ್ನು ಮೆಲ್ಲ ಸರಿಸಿ ಗುರುತು ಹೇಳುವ ಪರಿಸ್ಥಿತಿ ಬಂದು ಬಿಟ್ಟಿದೆ ಈಗ!. ಇನ್ನು ಗಂಡಸರ ಅವಸ್ಥೆ ಕೇಳುವುದೇ ಬೇಡ.. ಸನ್ಯಾಸಿಗಳಂತೆ ಗಡ್ಡ ಮೀಸೆ ಬಿಟ್ಟು ಸ್ವಾಭಾವಿಕವಾಗಿಯೇ  ಗುರುತು ಸಿಗದವರಂತೆ ಆಗಿಬಿಟ್ಟಿರುವುದಂತೂ ಸತ್ಯ. ಇದೇ ಸ್ಥಿತಿಯಲ್ಲಿ ನಮ್ಮ ಪಕ್ಕದ ಮನೆಯ ರಾಮಣ್ಣನವರು ಇತ್ತೀಚೆಗೆ ಎದುರಿನ ರಸ್ತೆಯಲ್ಲಿ ಹೋಗುತ್ತಿದ್ದರು. ಅವರಲ್ಲಿ ಕೇಳಿದೆವು; ‘ಏನಣ್ಣ, ಏನಾದ್ರೂ ವ್ರತವಾ?’ ‘ಹೌದು..ಹೌದು, ಕೊರೋನ ವ್ರತ!’ ಎಂದರು!

ಈ ಮಧ್ಯೆ, ನಮ್ಮಲ್ಲಿಗೆ ತುಂಬಾ ವರ್ಷಗಳಿಂದ ಹಾಲು ಹಾಕುತ್ತಿದ್ದವರು, ಸಾಗಣಿಕೆ ತೊಂದರೆಯಿಂದಾಗಿ ಹಾಲು ಹಾಕಲು ಬರಲಿಲ್ಲ. ಪ್ಯಾಕೆಟ್ ಹಾಲು ರುಚಿಸದ ನಮಗೆ ಹಾಗೂ ಅಕ್ಕಪಕ್ಕದ ಮೂರ್ನಾಲ್ಕುಮನೆಯವರಿಗೆ ಹಾಲಿಗೆ ಗತಿ ಇಲ್ಲದಂತಾಯ್ತು.ಕಾಕತಾಳೀಯವೆಂಬಂತೆ ಸಮೀಪದ ಮನೆಯವರದ್ದು ಹಾಲು ವ್ಯಾಪಾರ. ಅವರೂ ಬೇರೆ ಕಡೆಗೆ ಹೋಗುವ ಹಾಗಿರಲಿಲ್ಲ. ಸರಿ, ಅವರೊಡನೆ ಮಾತಾಡಿ, ನಾವೆಲ್ಲರೂ ಅವರ ಬಳಿ ಹಾಲು ಪಡೆಯಲು ಪ್ರಾರಂಭಿಸಿದೆವು. ಆದರೆ ಅವರ ಶರತ್ತಿನ ಪ್ರಕಾರ, ಮನೆಗಳಿಗೆ ಹಾಲನ್ನು ಒಯ್ದು ಕೊಡುವುದಿಲ್ಲ. ನಮ್ಮ ಗೇಟಿನ ಎದುರಲ್ಲಿ ಅವರ ವಾಹನ ನಿಲ್ಲುತ್ತದೆ, ಅಲ್ಲಿಂದ ಒಯ್ಯಬೇಕು. ತಗೊಳ್ಳಿ, ಮರುದಿನದಿಂದ ನಮ್ಮ ಗೇಟಿನ ಕಂಬದ ಮೇಲೆ ನಾಲ್ಕೈದು ತರದ ಪಾತ್ರೆಗಳು, ಚೀಟಿಗಳು. ನಮ್ಮದು ಯಾವುದೆಂದು ನಮಗೇ ತಿಳಿಯದ ಪರಿಸ್ಥಿತಿ! ಅದರಲ್ಲೂ ಮುಂದೆ ಹೋಗಿ, ನಮ್ಮ ಪಾತ್ರೆಯನ್ನು ಹಿಂದೆ ಸರಿಸಿ, ತಮ್ಮದನ್ನು ಮುಂದಿಡುವ ಮುಂದುವರಿದವರು..ನಮಗೆ ನಗು ತರಿಸುವಂತಿತ್ತು!

ಈ ದೀರ್ಘ ಲಾಕ್ ಡೌನ್ ನಿಂದಾಗಿ ನಮ್ಮ ಅಕ್ಕಪಕ್ಕದ ಮನೆಯ ಮಕ್ಕಳಿಗೆ ಚಟುವಟಿಕೆಗಳು ಕಡಿಮೆಯಾಗಿ ತೀರಾ ಬೇಸರಪಡುವುದು ಕಂಡು, ಅವರಲ್ಲಿ ಸ್ವಲ್ಪ ಹಿರಿಯವಳು, ಲಗೋರಿ ಆಡುವ ಸಲಹೆ ಮುಂದಿಟ್ಟಳು. ಅಡಿಕೆ ತೋಟವಿರುವ, ನಮ್ಮ ಹತ್ತಿರದವರ ಮನೆಯಂಗಳ ಮೈದಾನವಾಗಿ ಸಿದ್ಧವಾಯ್ತು. ಆಟದಲ್ಲಿ ಗೋರಿ ಕಟ್ಟಲಿರುವ ಬಿಲ್ಲೆಗಳಾಗಿ, ಟೈಲ್ಸ್ ತುಂಡುಗಳನ್ನು ನಮ್ಮ ಮನೆ ಹಿಂದಿನ ಹಿತ್ತಿಲಿನಿಂದ ಹುಡುಕಿ  ತಂದು ಸಿದ್ಧಪಡಿಸಲಾಯಿತು. ಇನ್ನು ಮುಖ್ಯವಾಗಿರುವುದು..ಆಟಗಾರರನ್ನು ಕಲೆಹಾಕುವುದು. ಅಂತೂ, ಎಲ್ಲರಲ್ಲೂ ಯಾಚಿಸಿ, ಯಾಚಿಸಿ ಹನ್ನೊಂದು ಜನರ ತಂಡವು ಸಿದ್ಧವಾಯಿತು. ತಂಡದಲ್ಲಿನ ಅತೀ ಹಿರಿಯ ಸದಸ್ಯರು ನಲ್ವತ್ತು ವರ್ಷದವರಾದರೆ; ಕಿರಿ ಸದಸ್ಯ ಏಳು ವರ್ಷದವನು! ಒಂದು ದಿನದ ಲಗೋರಿ ಆಟವಂತೂ ಅಮೋಘವಾಗಿತ್ತೆನ್ನಬಹುದು. ಎರಡನೇ ದಿನದಾಟ ಮಳೆಯಿಂದಾಗಿ ರದ್ದಾಯಿತು!

ಹೀಗೆ, ನಮ್ಮ ಸುತ್ತುಮುತ್ತಲು ಹರಡಿರುವ ಭೀತಿಯ ಮಧ್ಯದಲ್ಲೇ ನಡೆಯುವ ಕೊಂಚ ತಮಾಷೆಯ ಪ್ರಸಂಗಗಳು ಮನಸ್ಸಲ್ಲಿ ಕೊಂಚ ನಿರಾಳತೆಯನ್ನು ಮೂಡಿಸುವುದಂತೂ ಸತ್ಯ. ಸಿಕ್ಕಿದ ಅವಕಾಶವನ್ನು ಬಳಸಿಕೊಂಡು ಒಳ್ಳೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಲ್ಲಿ, ಅದು, ನಮ್ಮನ್ನು ಸುತ್ತುವರಿದ ಗಂಭೀರತೆಯ ಗಾಢತೆಯನ್ನು ತಿಳಿಗೊಳಿಸುವುದರಲ್ಲಿ ಸಂಶಯವಿಲ್ಲ.

-ಶಂಕರಿ ಶರ್ಮ, ಪುತ್ತೂರು.

   

10 Responses

 1. Hema says:

  ಬರಹ ಸೂಪರ್…ಈಗೀಗ ಈ ರೀತಿಯ ಕೊರೊನಾ ಫಜೀತಿಗಳಾಗುತ್ತಿವೆ..

 2. ಹರ್ಷಿತಾ says:

  ಬಹಳ ಚೆನ್ನಾಗಿದೆ ಲೇಖನ, ಕೊರೋನಾದಿಂದಾಗಿ ಇಂತಹ ಹಲವಾರಿ ವಿಭಿನ್ನ ಅನುಭವಗಳನ್ನು ಪಡೆಯುವಂತಾಗಿದೆ..

 3. ಕೊರೋನಾ ಅದೆಷ್ಟೋ ಫಜೀತಿಗಳನ್ನು ತಂದೊಡ್ಡುತ್ತಿದೆ!!!!!!.

 4. ASHA nooji says:

  ಚಂದದವಿವರಣೆ ಆಂತೂ ಕೊರೊನದಿಂದ ಮಕ್ಕಳಿಗೂ ದೊಡ್ಡವರಿಗೂ maneya ella ಸದಸ್ಯರೂ
  ಮಕ್ಕಳೊಂದಿಗೆ ಕಲಿಕೆಯಲ್ಲೂ bagigalaga ಬೇಕು .allva akka .

  • ಶಂಕರಿ ಶರ್ಮ says:

   ನೀವಂದುದು ನಿಜ…ಮೆಚ್ಚುಗೆಗೆ ಧನ್ಯವಾದಗಳು.

 5. Savithri bhat says:

  ಕೊರೋನ ಪಜೀತಿ ಲೇಖನ ತುಂಬಾ ಚೆನ್ನಾಗಿತ್ತು

 6. ನಯನ ಬಜಕೂಡ್ಲು says:

  ಹಲವಾರು ಸಿಹಿ ಕಹಿ ಅನುಭವ ಗಳ ಆಗರ ವನ್ನೇ ನೀಡಿದೆ ಈ ಕೊರೊನ. ಪ್ರಸ್ತುತ ಪರಿಸ್ಥಿತಿ ಯನ್ನು ಬಹಳ ಚೆನ್ನಾಗಿ ಬರೆದಿದ್ದೀರಿ ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: