ಉಡುಗೊರೆಯ ಹೂವು
ಒಂದೇ ಸಮನೆ ಕೈಕಾಲು ಸೋಲುವಂತೆ ಅವನು ಈಜಿದ. ಹೀಗೆ ಈಜುವುದಕ್ಕೆ ಕಾರಣ ಅವಳು ಮತ್ತು ಆ ಹೂವು! ಅವನು ಈಜುತ್ತಲೇ ಇದ್ದ.
ಆಕೆಯ ಬಳಿ ‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದು ತನ್ನ ಪ್ರೇಮವನ್ನು ನಿವೇದಿಸಿಕೊಂಡವನಿಗೆ ದ್ವೀಪವನ್ನು ತೋರಿಸಿ ಅಲ್ಲಿ ಅರಳಿರುವ ಹೂ ತರಲು ಹೇಳಿದ್ದಳು. ಅವನು ದೂರದಲ್ಲಿ ಅಸ್ಪಷ್ಟವಾಗಿ ಕಾಣುವ ಹೂವಿನತ್ತ ಅವಳ ನೆನಪಿನಲ್ಲಿ ಈಜುತ್ತಿದ್ದ.
ಎಷ್ಟೋ ವರುಷಗಳ ನಂತರ ಆ ದ್ವೀಪವನ್ನು ತಲುಪಿ ಹೂವನ್ನು ಜೋಪಾನವಾಗಿ ಕೊಯ್ದು ಮತ್ತಷ್ಟು ವರ್ಷಗಳ ಕಾಲ ಈಜಿ ವಾಪಸ್ಸು ಬರುವ ಹೊತ್ತಿಗೆ ಅವನಿಗೆ ಸುಸ್ತಾಗಿತ್ತು. ಆ ಹೂವು ಬಾಡಿತ್ತು.
ದಡಕ್ಕೆ ಬಂದಾಗ ಅವನಿಗೆ ಆಕೆ ಕಾಣಲಿಲ್ಲ. ಬದಲಿಗೆ ಆಕೆ ಕೂತ ಜಾಗದಲ್ಲಿ ಮುದುಕಿಯೊಬ್ಬಳು ಕೂತಿದ್ದಳು. ಅವಳಿಗೂ ದೂರದಲ್ಲಿ ಆತನ ಬದಲು ತನ್ನತ್ತ ಮುದುಕನೊಬ್ಬ ಬರುತ್ತಿರುವುದು ಕಂಡಿತು.
ಕೊನೆಗೆ ಇಬ್ಬರೂ ದಡದಲ್ಲಿ ನಿಂತು ದೂರದ ದ್ವೀಪದಲ್ಲಿ ಹೂವು ಕಾಣಿಸುವುದೇ ಎಂದು ನೋಡಿದರು.
ಹೂವು ಅವರ ಕಣ್ಣಲ್ಲಿತ್ತು.
ಇದು ಜೋಗಿಯವರ ಸಣ್ಣಕತೆ. ಒಂದು ಹೂವಿನ ಕತೆ. ಒಮ್ಮೆ ಬಸ್ಸಿನ ಪಯಣದಲ್ಲಿ ‘ಜೋಗಿ ಕತೆಗಳು’ ಕೃತಿಯನ್ನು ಓದಿ ಮುಗಿಸಿ ಕಣ್ಮುಚ್ಚಿದೆ. ಕನಸಿನಲ್ಲಿ ಕವಿತೆಯೊಂದು ಅರಳಿತು.
ನಾನು ಕೊಟ್ಟ
ಉಡುಗೊರೆಯ ಹೂ
ಅವಳ ಕಣ್ಣುಗಳಲ್ಲಿ
ಅರಳುತ್ತಿದೆ
-ನವೀನ್ ಮಧುಗಿರಿ
ಚಂದದ ಚಿಕ್ಕ ಚೊಕ್ಕ ನ್ಯಾನೋ ಕಥೆ
ಆ ಹೂವಿನ ಚೆಲುವ ಕಂಡು ಹೃದಯ ಮಿಡಿಯುತ್ತಿದೆ.
ತುಂಬಾ ಚೆನ್ನಾಗಿದೆ ಕಥೆ.
ಚಿಕ್ಕ, ಚೊಕ್ಕ ಕಥಾ ನಿರೂಪಣೆ