ಕೋರೋನ ಕಾಲದ ಕೆಲ ಬಿಡಿ ಚಿತ್ರಗಳು.

Share Button

ನಾಗಲೋಟದಿಂದ ಓಡುತ್ತಿದ್ದ ಪ್ರಪಂಚವನ್ನ ಈ ಕೋರೋನ ಅನ್ನೋ  ಕಣ್ಣಿಗೆ ಕಾಣದ ಅತ್ಯಂತ ಸೂಕ್ಷ್ಮ ಜೀವಿ ಹಿಡಿದು ನಿಲ್ಲಿಸಿರುವುದು ನಮ್ಮ ಈ ಕಾಲದ ಸೋಜಿಗವೇ ಸರಿ. ಯಾವ ದೇಶವನ್ನೂ ಬಿಡದೆ ಇಡೀ ಭೂಮಿಯ ಎಲ್ಲರನ್ನೂ ಮನೆಗೆ ಕಟ್ಟಿ ಹಾಕಿ ಆತಂಕದಿಂದ ದಿನ ದೂಡುವಂತೆ ಮಾಡಿಬಿಟ್ಟಿದೆ. ಇಡೀ ದೇಶಕ್ಕೆ ಲಾಕ್ಡೌನ್ ಘೋಷಣೆಯಾಗಿ  ಕೋಟಿಗಟ್ಟಲೆ ಜನ ಮನೆಗಳಲ್ಲೇ ಬಂದಿಯಾಗಿದ್ದರೆ, ಇನ್ನು ತಮ್ಮ ಸ್ವಂತ ಊರಿಗೆ ಮರಳಿ ಹಿಂದಿರುಗಲು ಲಕ್ಷಾಂತರ ಜನ ಪಾದಯಾತ್ರೆ ಕೈಗೊಂಡು ಸಾಗುತ್ತಿರುವ ದೃಶ್ಯಗಳು, ಅವರ ಬವಣೆ ಮನ ಕಲಕುತ್ತದೆ.ಜೊತೆಗೆ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವ ನೂರೆಂಟು ಮಾನವೀಯ ಉದಾಹರಣೆಗಳು ಮನುಷ್ಯತ್ವದ ಬಗ್ಗೆ ಭರವಸೆ ಮೂಡಿಸುತ್ತಿವೆ.ಅಲ್ಲದೆ ಮನುಷ್ಯರಲ್ಲಿ  ಕರುಣೆಯ ಸೆಲೆ ಎಂದೂ ಆರದು ಅನಿಸಿ ಈ ಕಷ್ಟಕಾಲ ವನ್ನೂ ಖಂಡಿತ ಮನುಕುಲ ಎದುರಿಸಿ ಗೆಲ್ಲುತ್ತದೆ ಅನಿಸಿತು.

ಮನೆಯಲ್ಲಿ ಇರಲು ಪ್ರಾರಂಭಿಸಿದ ಶುರುವಿನಲ್ಲಿ ಮನೆ ಕ್ಲೀನ್ ಮಾಡುವುದರಲ್ಲೇ ಕೆಲವು ದಿನ ಕಳೆದು ಹೋದವು.ಮಕ್ಕಳಿಗೂ ಶಾಲೆ ಇಲ್ಲದೆ ಮನೆಯಲ್ಲೇ ಇರುವ ಹಾಗೆ  ಆದ್ದರಿಂದ ಅವರನ್ನು ಯಾವುದಾದರೂ ಒಂದು ಕೆಲಸದಲ್ಲಿ ತೊಡಗಿಸಿ ಇಡುವುದು ಒಂದು ಹೊಸ ಕೆಲಸವಾಗಿ ಸೇರ್ಪಡೆಗೊಂಡಿತು. ಟಿವಿ ಮೊಬೈಲ್ ಗಳಿಂದ ಬಿಡುವು ಸಿಕ್ಕಾಗ, ಒಬ್ಬರ  ಜೊತೆ ಒಬ್ಬರು ಜಗಳವಾಡಿಕೊಂಡೋ, ಆಟವಾಡಿಕೊಂಡೋ, ಹರಟೆ ಹೊಡೆಯುತ್ತಲೋ ಇದ್ದುಕೊಂಡು,ಇಲ್ಲವೇ ಏನಾದರೂ ಕ್ರಾಫ್ಟ್ ಕೆಲಸ ಮಾಡಿಕೊಂಡು,ಅಕ್ಕಪಕ್ಕದ ಸ್ನೇಹಿತರೊಂದಿಗೆ ಅಂತರವಿಟ್ಟುಕೊಂಡೂ ಬೆರೆಯುತ್ತಾ ಒಮ್ಮೆಯೂ ಬೇಸರ ಎನ್ನದೆ ಸದಾ ಬ್ಯುಸಿಯಾಗಿರುವ ಮಕ್ಕಳ ಕಂಡರೆ ಅಸೂಯೆಯಂತೂ ಆಗುತ್ತದೆ. ಬಾಲ್ಯದ ಈ ನಿರುಮ್ಮಳ ಸ್ಥಿತಿ, ಪರಿಸ್ಥಿತಿಯ ಗಂಭೀರತೆಯ ಅರಿವು ಇರದ ಮುಗ್ಧತೆ,ಅಪಾರ ಜೀವನೋತ್ಸಾಹಗಳು ದೊಡ್ಡವರಿಗೂ ಸ್ವಲ್ಪ ಈ ಹೊತ್ತಿನ ತಳಮಳಗಳನ್ನು ಎದುರಿಸಲು ಸಹಾಯ ಮಾಡಿವೆ.

ತಾಯಂದಿರಂತೂ ಮೂರು ಹೊತ್ತು ಬೇರೆ ಬೇರೆ ತರಹದ ಅಡುಗೆ ಮಾಡಿ ಮಾಡಿ ಮನೆಯವರ  ಜಿಹ್ವ ಚಾಪಲ್ಯ ತಣಿಸಿ ತಣಿಸಿ ಬೇಸತ್ತು ಹೋಗಿದ್ದಾರೆ. ಹಪ್ಪಳ ಸಂಡಿಗೆ ಮಾಡುವ ಸಡಗರ ಕೆಲವು ಮನೆಗಳಲ್ಲಿ. ಹೊಸ ಹೊಸ ರೆಸಿಪಿಗಳ ಪ್ರಯೋಗ ಮಾಡದೇ ಇರುವ ಮನೆಗಳೇ ಬಹುಶಃ ಇಲ್ಲವೇನೋ. ಈಗೇನು ಪ್ರಪಂಚದ ಯಾವ ಮೂಲೆಯ ಅಡುಗೆಯಾದರೂ ಸ್ಮಾರ್ಟ್ ಫೋನ್ ಇದ್ದರೆ ಸಾಕು ಬೆರಳ ತುದಿಯಲ್ಲೇ  ಲಭ್ಯ.

ಮಹಾನಗರಗಳಿಂದ ಗುಳೆ ಹೊರಟವರು ಕೇವಲ ವಲಸೆ ಕಾರ್ಮಿಕವರ್ಗದವರು ಮಾತ್ರವಲ್ಲ ಹಳ್ಳಿಯ ಮೂಲಗಳಿಂದ ಹೋಗಿ ನಗರ ಪ್ರದೇಶಗಳಲ್ಲಿ ಒಳ್ಳೆಯ ಕೆಲಸದಲ್ಲಿರುವವರು ಕೂಡ ಬಹಳಷ್ಟು ಮಂದಿ ತಮ್ಮ ತಮ್ಮ ಊರುಗಳಿಗೆ, ಹಳ್ಳಿಗಳಿಗೆ ಹಿಂದಿರುಗಿದ್ದಾರೆ. ಎಷ್ಟೋ ಜನಕ್ಕೆ ಬಹಳ ವರ್ಷಗಳ ಬಳಿಕ ಅವರ ಉಸಿರು ಗಟ್ಟಿಸುವ ಹುಲಿ ಸವಾರಿಯ ಕೆಲಸದಿಂದ ವಿರಾಮ ಸಿಕ್ಕಿದೆ. ಊರು ಸೇರಿದವರು ಎಷ್ಟೋ ವರ್ಷಗಳ ಬಳಿಕ ಗಂಟೆಗಟ್ಟಲೆ ನಿದ್ರೆ ಮಾಡಿದ್ದಾರೆ.ಕುಟುಂಬದವರೊಂದಿಗೆ ಗಂಟೆಗಟ್ಟಲೆ ಹರಟೆ ಹೊಡೆದಿದ್ದಾರೆ.ತಮ್ಮ ಎಷ್ಟೋ ಖರ್ಚುಗಳು ಎಷ್ಟು ಅನಗತ್ಯ ಹಾಗೂ ನಿರರ್ಥಕ ಎನ್ನುವುದಿಗ ಮನಸ್ಸಿಗೆ ಬರುತ್ತಿದೆ. ಕಣ್ಣೀಗ ವಿಶಾಲವಾಗಿ ತೆರೆದು ಜಗವೆಲ್ಲಾ ನಿಚ್ಚಳವಾಗಿ ಕಾಣುತ್ತಿದೆ. ದೂರದ ಮಾಲ್ ನಲ್ಲಿ ಏನು ಸಿಗುವುದೋ ಅದೇ ವಸ್ತು ಮನೆ ಪಕ್ಕದ ಕಿರಾಣಿ ಅಂಗಡಿಯಲ್ಲು ಇದೆ ಅನ್ನುವುದು ಗಮನಕ್ಕೆ ಬರುತ್ತಿದೆ. ವೀಕ್ ಎಂಡ್ನ ಶಾಪಿಂಗ್ ಇಲ್ಲದೆಯೂ ಇರಲು ಸಾಧ್ಯವಾಗಿದೆ.
ತಿಂಗಳ ಕೊನೆ ಬರುವ ಅಷ್ಟರಲ್ಲಿ ಖಾಲಿಯಾಗಿರುತ್ತಿದ್ದ  ಸಂಬಳ ಈಗ ತಿಂಗಳು ಕಳೆದು ಇನ್ನೊಂದು ತಿಂಗಳ ಸಂಬಳ ಆಗದೆ ಇದ್ದರೂ ಉಳಿದಿರುವುದು ನಮ್ಮ ನಿರರ್ಥಕ ಖರ್ಚುಗಳ ಕಡೆಗೆ ಬೆರಳು ತೋರಿಸಿ ಎಚ್ಚರಿಸಿದಂತಾಗಿದೆ. ಕೆಲಸದ ಹಿಂದೆ ಓಡಿ ಓಡಿ ದಣಿದ ಮೈ ಮನಗಳಿಗೆ ದೊರೆತಿರುವ ವಿರಾಮ ನಮ್ಮ ಜೀವನದ ಅನಾವಶ್ಯಕ ಒತ್ತಡ, ಹೊಣೆಯರಿಯದ ಕೊಳ್ಳು ಬಾಕತನ, ದುಂದು ವೆಚ್ಚ, ನಮ್ಮ ಪ್ರದರ್ಶನ ಪ್ರಿಯತೆ ಇವೆಲ್ಲವುಗಳ ಅರ್ಥಹೀನತೆಯನ್ನು ಅರ್ಥ ಮಾಡಿಸಿದೆ. ಸರಳ ಜೀವನದ ಮಹತ್ವ ಬಹಳಷ್ಟು ಮಂದಿಗೆ ಇಷ್ಟವಿರಲಿ ಬಿಡಲಿ ಮನವರಿಕೆಯಾಗಿದೆ.

ಬೆಂಗಳೂರಿನ ಕಾರ್ಪೊರೇಟ್ ಕಂಪನಿಗಳಲ್ಲಿ ಉದ್ಯೋಗಿಗಳಾಗಿ ಅಲ್ಲಿಯ ವೇಗದ ಜೀವನಕ್ಕೆ ಒಗ್ಗಿ ಹೋಗಿದ್ದ ನನ್ನ ಅಣ್ಣ ತಮ್ಮಂದಿರಿಬ್ಬರೂ ಲಾಕ್ ಡೌನ್ ಘೋಷಣೆ ಯಾದ ಬಳಿಕ ದಿನಗಟ್ಟಲೆ ಮನೆಯಲ್ಲೇ ಬಂದಿಯಾಗಿರಬೇಕಾದ ಪರಿಸ್ಥಿತಿ ತಪ್ಪಿಸಿಕೊಳ್ಳಲು ಊರಿಗೆ ಧಾವಿಸಿ ಹೋದರು. ಊರಿನಲ್ಲಿ ತೋಟದ ಒಳಗೆ ಮನೆಯಾಗಿರುವುದು ಒಂದು ವರವೇ ಸರಿ. ಜೊತೆಗೆ ಅಕ್ಕ ಪಕ್ಕದ ಮನೆ ತೋಟಗಳು ಕೂಡ ಎಲ್ಲ ನೆಂಟರವೆ ಆಗಿರೋದ್ರಿಂದ ಹೊತ್ತು ಕಳೆಯುವುದು ಕಷ್ಟ ವಾಗಿಲ್ಲ.ಹಾಗೆ ಬಹಳ ದಿನಗಳಿಂದ ಬಾಕಿ ಉಳಿದಿದ್ದ ತೋಟದ ಕೆಲಸಗಳನ್ನು ಆಳುಗಳು ಸಿಗದ ಕಾರಣ ತಾವೇ ಗುದ್ದಲಿ ಹಿಡಿದು ಮಾಡಿ ಪಟ್ಟ ಶ್ರಮಕ್ಕೆ, ಅದರಿಂದ ದೊರಕಿದ ಖುಷಿ ನೆಮ್ಮದಿಗೆ ಬೆಲೆ ಕಟ್ಟಲು ಸಾಧ್ಯವೇ.ಎಷ್ಟೇ ಓದಿ ಎಂತಹದೇ ದೊಡ್ಡ ಕೆಲಸದಲ್ಲಿದ್ದರೂ ಮಣ್ಣಿನ ಕೆಲಸ ನೀಡುವ ಸುಖಕ್ಕೆ ಹೋಲಿಕೆಯೇ ಸಾಧ್ಯವಿಲ್ಲ. ಜೊತೆಗೆ ಊರಿನ ಶುದ್ಧ ನೀರು ಗಾಳಿ ಆಹಾರದಿಂದ ಸಿಕ್ಕ ಆರೋಗ್ಯ ಒಂದು ಬೋನಸ್ಸೆ ಸರಿ.

ಸಾಂದರ್ಭಿಕ ಚಿತ್ರ: ಅಂತರ್ಜಾಲ ಕೃಪೆ

ಇನ್ನೂ ಈ ಬೇಸಿಗೆಯ ಲಗ್ನಗಳಲ್ಲಿ ಜರುಗುತ್ತಿದ್ದ ಆಡಂಬರದ ಮದುವೆಗಳಿಗೆ ಅವಕಾಶವಿರದ ಕಾರಣ ಸರಳ ವಿವಾಹಕ್ಕೆ ಮೊರೆ ಹೋಗಿರುವುದು ಒಂದು ರೀತಿಯಲ್ಲಿ ಒಳ್ಳೆಯದೇ.ಇಲ್ಲವಾದಲ್ಲಿ ಆ ಮದುವೆಗಳು, ಆ ಆಡಂಬರ, ಆ ಅಬ್ಬರ,ಕಡಿವಾಣವಿಲ್ಲದ ಖರ್ಚುವೆಚ್ಚ,ಎಲ್ಲವೂ ಉಳ್ಳವರು ಹೇಗೋ ನಿಭಾಯಿಸಿದರೂ,ಅಷ್ಟು ಅನುಕೂಲವಿಲ್ಲದವರು ಜನ ಮೆಚ್ಚಿಸುವ ಸಲುವಾಗಿಯೇ ಸಾಲ ಸೋಲ ಮಾಡಿ ವಿಜೃಂಭಣೆಯಿಂದ ಮದುವೆ ಮಾಡಿ ನಂತರ ಆ ಮದುವೆಯ ಆರ್ಥಿಕ ಹೊಡೆತದಿಂದ ವರ್ಷಗಟ್ಟಲೆ ನರಳಿರುವ ಕುಟುಂಬಗಳು ಎಷ್ಟಿಲ್ಲ? ಹೀಗೆ ಲಾಕ್ಡೌನ್ನಿಂದಾಗಿ ಅದ್ಧೂರಿ ಮದುವೆ ತಪ್ಪಿ ಹೋಗಿ ಸರಳವಾಗಿ .ಮನೆಯಲ್ಲೇ ನಡೆದ ಮದುವೆಗೆ ಹೋದಾಗ, ಸೀಮಿತ ಅತಿಥಿಗಳ,ಯಾವುದೇ ಆಡಂಬರ, ಅಲಂಕಾರ,ವಿಶೇಷ ಭೋಜನವಿಲ್ಲದ ಆ ಸರಳ ವಿವಾಹ ಎಷ್ಟು ಚೆನ್ನಾಗಿ ಅನಿಸಿತೆಂದರೆ ಇದೇ ವ್ಯವಸ್ಥೆ ಮುಂದುವರಿದರೆ ಎಷ್ಟೋ ಬಡ ಕುಟುಂಬಗಳು ಬದುಕಿಕೊಳ್ಳುತ್ತವೆ ಎನಿಸಿತು.

ಸಾಮಾಜಿಕ ಅಂತರ ದೇಹಗಳಿಗೆ ಮಾತ್ರವಾಗಿ ಮನಸ್ಸುಗಳು ಹತ್ತಿರವಾಗಿವೆ. ಒಂದು ದಿನ ಇದ್ದಕ್ಕಿದ್ದಂತೆ ಎಷ್ಟೋ ವರ್ಷಗಳ ಹಳೆಯ ಗೆಳತಿಯೊಬ್ಬಳು ಫೋನ್ ಮಾಡಿ “ದಿನಾ ಇಬ್ಬಿಬ್ಬರು ಸ್ನೇಹಿತರನ್ನು ಮಾತನಾಡಿಸುತ್ತಿದ್ದೇನೆ ಕಣೇ,ಎಷ್ಟೋ ವರ್ಷಗಳಿಂದ ಕಾಣದೇ ಇರುವವರನ್ನು ಮಾತನಾಡಿಸಲು ಈಗ ಸಮಯ ಒದಗಿತು ನೋಡು ಎಷ್ಟೋ ವರ್ಷಗಳಿಂದ ಓದಲು ತೆಗೆದಿಟ್ಟು  ಧೂಳು ಹಿಡಿಸಿದ್ದ ಪುಸ್ತಕಗಳ ಓದಲು ಒಂದಿಷ್ಟು ಪುರುಸೊತ್ತು ಸಿಕ್ಕಿತು.” ಎನ್ನುತ್ತಾ ನಕ್ಕಳು. ಕೆಲಸಕ್ಕೆ ಓಡುತ್ತಿದ್ದ ದಿನಗಳಲ್ಲಿ ಕೇವಲ ಒಂದು ಮುಗುಳ್ನಗು ಇಲ್ಲವೇ ” ಆರಾಮ?” ಇಷ್ಟೇ ಕುಶಲೋಪರಿಗಳಲ್ಲಿ ನಿಭಾಯಿಸುತ್ತಿದ್ದ ನೆರೆಹೊರೆಯವರೆಲ್ಲ ಈಗ ಕಷ್ಟ ಸುಖ ಮಾತನಾಡುವಷ್ಟು ಆಪ್ತರಾಗಿದ್ದಾರೆ. ಅಕ್ಕ ಪಕ್ಕದ ಮನೆಗಳಲ್ಲಿ ವಾಸಿಸುವರ ಬಗ್ಗೆ ಕಾಳಜಿ ವಹಿಸಿ ಎಲ್ಲರ ಮನೆಗಳವರ ಕ್ಷೇಮದ ಬಗ್ಗೆ ನಿಗಾ ಇಡುವುದು ನೋಡಿದಾಗ “ಅಮೃತ ವಾಹಿನಿ ಯೊಂದು ಹರಿಯುತಿದೆ ಮಾನವನ ಎದೆಯಿಂದ ಎದೆಗೆ ಸತತ” ಎನ್ನುವ ಕವಿವಾಣಿ ಸತ್ಯ ಎನಿಸಿತು.

ಮನೆ ಕೆಲಸದವರಿಗೆ ಕಡ್ಡಾಯರಜೆ ನೀಡ ಬೇಕಾಗಿ ಬಂದರೂ ಅವರಿಗೆ ಪ್ರತಿ ತಿಂಗಳು ಸಂಬಳ ನೀಡುವ, ಪ್ರತಿ ಸಂಜೆ ಅಂತರ ವಿಟ್ಟುಕೊಂಡು ಮನೆಯ ಮುಂದಿನ ಆವರಣ ದಲ್ಲೆ ಕಡ್ಡಾಯ ವಾಕ್ ಮಾಡುವ,ಅನಿವಾರ್ಯವಾಗಿ ಒಂಟಿಯಾಗಿ ಮನೆಯಲ್ಲಿ ಇರಬೇಕಾಗಿರುವಾ ವೃದ್ದ ಮಹಿಳೆಯೊಬ್ಬರ ಯೋಗಕ್ಷೇಮ ದಿನಾ ವಿಚಾರಿಸುತ್ತಾ,ಅಕ್ಕ ಪಕ್ಕದ ಎಲ್ಲ ಮಕ್ಕಳನ್ನು ಬೇಧ ಭಾವ ಮಾಡದೇ ಕಾಳಜಿ ಮಾಡುತ್ತಾ ಅವರನ್ನೆಲ್ಲ ಆಟಪಾಠಗಳಲ್ಲಿ ತೊಡಗಿಸಿಕೊಳ್ಳಲು ಸಹಾಯ ಮಾಡುತ್ತಾ,ಈ ಕಷ್ಟ ಕಾಲವನ್ನು ನಮ್ಮ ನೆರೆಹೊರೆಯವರು ಸಹನೀಯವಾಗಿ ಮಾಡಿದ್ದಾರೆ.

ಎಲ್ಲದಕ್ಕಿಂತ ಮುಖ್ಯವಾಗಿ ಈ ಕೊರೋನ ವಿರುದ್ಧದ ಹೋರಾಟದಲ್ಲಿ ಅವಿರತವಾಗಿ, ಅವಿಶ್ರಾಂತವಾಗಿ ತೊಡಗಿಸಿಕೊಂಡು ಹೋರಾಡುತ್ತಿರುವ ನಮ್ಮ ಸರ್ಕಾರ, ವೈದ್ಯರು, ಶುಶ್ರೂಷಕರು, ಪೊಲೀಸ್ ಸಿಬ್ಬಂದಿ, ವಿವಿಧ ಪಂಚಾಯತ್ ಸಿಬ್ಬಂದಿ,ಆಶಾ ಕಾರ್ಯಕರ್ತೆಯರು, ಅಂಗನ ವಾಡಿ ಕಾರ್ಯಕರ್ತೆಯರು,ಎಲ್ಲರಿಗೂ ಒಂದು ಬಿಗ್ ಸೆಲ್ಯೂಟ್. ನಿಧಾನವಾಗಿ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿರುವಂತೆ ಮೆಲ್ಲ ಮೆಲ್ಲನೆ ಎಲ್ಲರೂ ತಮ್ಮ ತಮ್ಮ ಕೆಲಸ ಕಾರ್ಯ ಗಳಿಗೆ ತೆರಳು ತಿದ್ದಾರೆ.ಆದರೂ ಎಲ್ಲವೂ ಮುಂಚಿನಂತಾಗಲು ಇನ್ನೂ ಎಷ್ಟು ಕಾಲ ಬೇಕೋ?

ಲಾಕ್ ಡೌನ್ ಅವಧಿ ಮುಗಿಸಿ ಬೆಂಗಳೂರಿಗೆ ಮರಳಿ ಹಿಂದಿರುಗಿ  ಹೋಗಬೇಕಾಗಿ ಬಂದ ನನ್ನ ಅಣ್ಣತಮ್ಮಂದಿರು ಹೊರಟು ನಿಂತಾಗ, ಎರಡು ತಿಂಗಳಿನಿಂದ ಊರಿನಲ್ಲಿ ನೋಡಿಕೊಂಡ ಅತ್ತೆ ಮಾವಂದಿರು, ಕಸಿನ್ಗಳು, ನೆಂಟರೆಲ್ಲ ಕಂಬನಿಗರೆಯುತ್ತ ಬೀಳ್ಕೊಟ್ಟ ಚಿತ್ರ ಬಹಳ ದಿನಗಳವರೆಗೆ ಮಾಸಲಾರದು.ಆದರೆ ಅನ್ನಿಸುವುದು ನಮ್ಮ ಒಳ ಹೊರಗನ್ನೆಲ್ಲಾ ಶುಚಿಗೊಳಿಸಲು ಒಂದು ವಿನಾಶಕಾರಿ ಖಾಯಿಲೆಯೇ ಬರಬೇಕಿತ್ತೆ!. ಮನುಷ್ಯತ್ವದ ಅನಾವರಣ ಕೇವಲ ಕಷ್ಟ ಕಾಲದಲ್ಲಿ ಮಾತ್ರವೇ? ಕೇವಲ ನಾನು ನನ್ನದು ಅನ್ನುವುದು ಹೋಗಿ ಎಲ್ಲರ ಬಗ್ಗೆ ಎಲ್ಲರೂ ಚಿಂತಿಸಿದ್ದಿದ್ದರೆ ಈ ದಿನಗಳು ಬರುತ್ತಿದ್ದವೇ?

-ಸಮತಾ.ಆರ್

17 Responses

 1. Malavika.R says:

  Super aagide satyavanne yele yeleyagi vivarisiddira

 2. Anonymous says:

  Nice one:)

 3. Latha v.p. says:

  Thumba chennagide

 4. Asha says:

  Super agide

 5. Asha says:

  Super agide akka

 6. pushpa says:

  Very good article samatha

 7. Veena says:

  Really superrr

 8. Kamalakshi says:

  I liked this article. It’s very good.
  Keep it up.

 9. Dayananda Diddahalli says:

  Very thoughtful article, keep it up Samatha

 10. SmithaAmrithraj. says:

  Very nice samatha

 11. KRISHNAPRABHA M says:

  ತುಂಬಾ ಚೆನ್ನಾಗಿದೆ ಈ ಲೇಖನ

 12. ಸುನೀತ says:

  ಕಟು ವಾಸ್ತವ ಸಮತಾ..ಚೆಂದದ ಭಾಷೆ ಕೂಡಾ..

 13. ಭಾಷೆ,ಬರೆಹ ಎರಡೂ ಚೆಂದ ಸಮತಾ

 14. ನಯನ ಬಜಕೂಡ್ಲು says:

  ಸಾಮಾಜಿಕ ಅಂತರ ದೇಹಗಳಿಗೆ ಮಾತ್ರ ಮನಸುಗಳಿಗಲ್ಲ – ಈ ಮಾತು ಬಹಳ ಇಷ್ಟವಾಯಿತು ಮತ್ತು ಸತ್ಯ ಕೂಡ. Very nice

 15. Dr Geethashree DM says:

  Super article

 16. Sowmya says:

  Nice one

 17. ಶಂಕರಿ ಶರ್ಮ says:

  ಸೊಗಸಾದ ಸಕಾಲಿಕ ಲೇಖನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: