ನೆನಪಿನ ಬುತ್ತಿಯ ತಿಳಿಹಳದಿ ಎಸಳುಗಳು
ಹದಿನೈದು ದಿನಗಳಿಂದ ನಿನ್ನನ್ನು ಪ್ರತಿದಿನ ಬೆಳಿಗ್ಗೆ ನೋಡುವುದೇ ಒಂದು ಪ್ರಿಯವಾದ ಕೆಲಸವಾಗಿತ್ತು. ಆಷಾಢದ ತಂಪಿನಲಿ ಸುಯ್‌ಗುಟ್ಟುವ ಗಾಳಿಯಲ್ಲಿ ನೀನು ಚಿಗುರೊಡೆದು ಬೆಳೆದಾಗಿತ್ತು. ಮಗುವಿನ ಸುಂದರ ಕೈಯಂತೆ ಬಾಗಿ ಬಳುಕುವ ರೆಂಬೆಯಲ್ಲಿ ನಿನ್ನ ಆಗಮನವಾಯಿತು. ಈ ದಿನ ನಿನ್ನನ್ನು ನೋಡಿದ ಕೂಡಲೆ ನನ್ನ ಅರಿವಿಲ್ಲದೆಯೇ ಮುಖದಲ್ಲಿ ನಗೆಯೊಂದು ಮೂಡಿಬಂತು. ಏಕೆಂದರೆ ನೀನು ನನ್ನನ್ನು ನೋಡಿ ಮೊದಲು ನಕ್ಕಿದ್ದೆ! ಎಂತಹ ಸುಂದರ ನಿಷ್ಕಲ್ಮಶ ಮಗುವಿನಂತಹ ನಗು ನಿನ್ನದು. ತಿಳಿ ಹಳದಿ ಬಣ್ಣದ ಸುಂದರ ಗುಲಾಬಿ ಹೂ ನೀನು. ಎಂತಹ ಸುಂದರ ಜೋಡಣೆ ನಿನ್ನ ನವಿರಾದ ಎಸಳುಗಳದ್ದು. ಎಸಳ ಅಂಚಿನಲ್ಲಿ ನವವಧು ನಾಚಿದಾಗಿನ ಕೆನ್ನೆಕೆಂಪಿನ ತಿಳಿ ರೋಜಾ ಬಣ್ಣ. ನಿನ್ನ ನೋಡಿದಾಗ ನನ್ನ ತಂದೆಯೇ ಬಂದು ನನ್ನೆದುರು ನಿಂತು ನಕ್ಕಂತಾಯಿತು. ಅಪ್ಪನ ಹಾಗೇ ನಿನ್ನದೂ ಮುಗ್ಧ ನಗೆ. ನಿರ್ಮಲ ಮನಸ್ಸು ಅನ್ನಿಸಿತು. ಇಷ್ಟಕ್ಕೂ ‘ನೀನು ಅಪ್ಪ ಹಾಕಿ ಬೆಳೆಸಿದ ಗಿಡದ ಮೊಮ್ಮಗಳಲ್ಲವೇ? ಮನಸ್ಸು ಸುಮಾರು ಆರು ದಶಕಗಳ ಹಿಂದೆ ಓಡುತ್ತಿದೆ. ನೀನು ನಮ್ಮ ಮನೆಗೆ ಆಗತಾನೆ ಬಂದಿದ್ದು. ನನಗೆ ಚೆನ್ನಾಗಿ ನೆನಪಿದೆ. ಅಪ್ಪ ನಿನ್ನನ್ನೂ ಮತ್ತು ಇನ್ನೂ ಹಲವು ಗಿಡಗಳನ್ನೂ ತಂದು ನೆಟ್ಟರು. ನೀನು ಬಾಗಿಲದಾರಿಯಲ್ಲೇ ಇದ್ದೆ. ಅಪ್ಪನ ಆರೈಕೆಯಲ್ಲಿ ಸುಂದರವಾಗಿ ಎತ್ತರವಾಗಿ ಬೆಳೆದೆ. ನೋಡನೋಡುತ್ತಲೇ ಸುಂದರ ಹೂಗಳನ್ನು ಧರಿಸಿದೆ. ಅದನ್ನು ಕೀಳಲು ನಾನು ಅಮ್ಮನಿಗೆ ಬಿಡುತ್ತಲೇ ಇರಲಿಲ್ಲ. ಪ್ರತಿದಿನ ಎಷ್ಟು ಹೂಗಳಿವೆ ಎಂದು ಲೆಕ್ಕ ಮಾಡುವುದೊಂದು ಕೆಲಸ ನನಗೆ. ಕಮ್ಮಿಯಾಗಿದ್ದರೆ ಅಮ್ಮ ಕಿತ್ತು ಯಾರಿಗೋ ದಾನ ಮಾಡಿದ್ದಾಳೆ ಎಂದು ಅರ್ಥ. ಅದಕ್ಕಾಗಿ ಅವಳ ಮೇಲೆ ನನ್ನ ಮುನಿಸು.
ಹೀಗೇ ಕಾಲ ಉರುಳಿದ್ದೇ ಗೊತ್ತಾಗಲಿಲ್ಲ ಗುಲಾಬಿ. ಮದುವೆ, ಸಂಸಾರ, ಕೆಲಸ ಹೀಗೇ ನನ್ನ ಜೀವನ ಉರುಳಿದ್ದೇ ಗೊತ್ತಾಗಲಿಲ್ಲ. ಇತ್ತ ಕಡೆ ಬಂದ ಮೇಲೆ ನಿನ್ನ ನೆನಪೂ ಕಡಿಮೆಯಾಗಿತ್ತು. ಆದರೆ ಕಳೆದ ವರ್ಷ ನನ್ನಕ್ಕನ ಮನೆಯಲ್ಲಿ ಮತ್ತೆ ನಿನ್ನ ಮಗಳನ್ನು ನೋಡಿದಾಗ ಧುತ್ತೆಂದು ಎಲ್ಲ ನೆನಪುಗಳು ನನ್ನ ಕಣ್ಣಿನ ಮುಂದೆ ಪ್ರದರ್ಶನ ಹಮ್ಮಿಕೊಂಡವು. ಅಕ್ಕನ ಮನೆಯಿಂದ ನಿನ್ನ ರೆಂಬೆಗಳನ್ನು ತಂದು ನೆಟ್ಟೆ. ದಿನವೂ ನೀರುಣಿಸಿದೆ. ನಿನ್ನಲ್ಲಿ ಹೊಸಚಿಗುರುಗಳು ಮೂಡಿದವು. ಅಪ್ಪನ ಆಶೀರ್ವಾದ ಅಲ್ಲದೆ ಇದು ಮತ್ತಿನ್ನೇನು? ಇಂದು ಸುಂದರ ಹೂವನ್ನು ನನಗೆ ನೀಡಿರುವೆ. ಅಪ್ಪನ ನೆನಪುಗಳ ಸರಮಾಲೆಯೇ ನಿನ್ನನ್ನು ನೋಡಿದಾಗ ನನ್ನ ಮುಂದೆ ಬರುತ್ತದೆ. ಇದನ್ನು ಹಂಚಿಕೊಳ್ಳಲು ನನ್ನ ಅಣ್ಣನ ಮಕ್ಕಳಿಗೆ ವಾಟ್ಸಾಪ್‌ನಲ್ಲಿ ನಿನ್ನ ಚಿತ್ರ ಕಳಿಸಿದೆ. ಅವರು ನನ್ನ ಅಪ್ಪನ ಜೊತೆಯಲ್ಲೇ ಬೆಳೆದವರು. ತಾತನನ್ನು ತುಂಬಾ ಹಚ್ಚಿಕೊಂಡು ಮೆಚ್ಚಿದವರು. ಎಂತಹ ಸಂಭ್ರಮ ಪಟ್ಟರು ಗೊತ್ತಾ ನಿನ್ನ ಕಥೆಯನ್ನು ಕೇಳಿ ! ಅಪ್ಪ ಬೆಳೆಸಿದ ತಿಳಿ ಹಳದಿ ಬಣ್ಣದ ಗುಲಾಬಿಯೇ ನಿನಗಿದೋ ನನ್ನ ಪ್ರೀತಿಯ ಪ್ರಣಾಮಗಳು.
ಹೊಸ ಚಿಗುರು ಹಳೆ ಬೇರು ಕೂಡಿರಲು ಮರಸೊಬಗು |
ಹೊಸಯುಕ್ತಿ ಹಳೆತತ್ತ್ವದೊಡಗೂಡೆ ಧರ್ಮ ||
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ |
ಆಸವು ಜನಜೀವನಕೆ – ಮಂಕುತಿಮ್ಮ ||
– ಡಿ.ವಿ.ಜಿ. ಹಳೆಬೇರು, ಹೊಸಚಿಗುರು
– ಡಾ. ಎಸ್. ಸುಧಾ, ಮೈಸೂರು
ಲೇಖನದಲ್ಲಿ ಅಪ್ಪನ ನೆನಪುಗಳು ತುಂಬಾ ಇಷ್ಟವಾಯಿತು
Thanks savithri
ಆಪ್ಪಂದಿರ ದಿನಕ್ಕೆ ಸುಂದರ ಕಾಣಿಕೆ
Thanks nirmala
ಅರಳಿದ ಸುಂದರ ಹೂಗಳಂತಹ ಅಪ್ಪನ ನೆನಪುಗಳು. ಚಂದ
ನಿಜಕ್ಕೂ ಸುಂದರ ಹಳದಿ ಗುಲಾಬಿಯಂತೆಯೇ ಇದೆ..ನಿಮ್ಮ ಅಪ್ಪನವರ ಸಿಹಿ ನೆನಪಿನ ಪಕಳೆಗಳ ಕಂಪು..ಮುದ್ದಾದ ಬರಹ.
Thanks nayana
Thanks
ನೆನಪುಗಳ ಮೆರವಣಿಗೆ.. ಸೂಪರ್
Thanks
ಬಹಳ ಮೆಚ್ಚುಗೆಯಾಯಿತು
Thanks
ಚಂದದ ಹೂಗಳು. ಸುಂದರ ಲೇಖನ. ಆಪ್ಯಾಮಾನವಾದ ಅಪ್ಪನ ನೆನಪುಗಳು.
ನಿಮ್ಮಪ್ಪ ಸ್ವರ್ಗದಲ್ಲೇ ಬೀಗುತ್ತಿರುವುದು ಖಂಡಿತ, ಇಂತಹ ಮಗಳಿರಬೇಕು ಎಲ್ಲರಿಗೂ