ಪುನರ್ಪುಳಿ ಎಲೆ ಚಟ್ನಿಯೂ ಫ಼ುಡ್ ಬ್ಲಾಗ್ ಗಳೂ

Share Button

ಇತ್ತೀಚೆಗೆ ಫ಼ೇಸ್ ಬುಕ್ ನಲ್ಲಿನ ಎಳೆ ಗೆಳತಿಯ ವಾಲ್ ನಲ್ಲಿ ಪುನರ್ಪುಳಿ (ಬೀರುಂಡ) ಎಲೆಯ ಚಟ್ನಿಯ ರೆಸಿಪಿ ನೋಡಿದೆ. ಹಳ್ಳಿ ಮೂಲದಿಂದ ಬಂದ ನಮಗೆ ಪುನರ್ಪುಳಿ ಹಣ್ಣಿನ ಜ್ಯೂಸ್, ಸಿಪ್ಪೆಯ ಸಾರು, ಹಣ್ಣಿನಲ್ಲಿ ಸಕ್ಕರೆ ತುಂಬಿ ಬಿಸಿಲಿಗಿಟ್ಟು ಅಮ್ಮ ಮಾಡುತ್ತಿದ್ದ ಸಿರಪ್ ಎಲ್ಲ ನೆನಪಾಗಿ ಕುತೂಹಲದಿಂದ ಆಕೆಯ ಇನ್ನಿತರ ಪೋಸ್ಟ್ ಗಳನ್ನೂ ನೋಡಿದೆ. ನೋಡ ನೋಡುತ್ತಿದ್ದಂತೆ ಕೊಡಗಸನ ಹೂ ತಂಬುಳಿ, ಉಪ್ಪಿನಲ್ಲಿ ಹಾಕಿದ ಲಿಂಬೆ ಸಿಪ್ಪೆಯ ಚಟ್ನಿ, ಬಾಳೆ ದಿಂಡಿನ ಮೊಸರು ಗೊಜ್ಜು, ಕೆಸುವಿನ ಸೊಪ್ಪು ಚಟ್ನಿ, ಕಾಯಿ ಪಪ್ಪಾಯಿ ದೋಸೆ.. ಹೀಗೆ ಅಲ್ಲೊಂದು ಅಮಾಯಕತೆ, ಮುಗ್ಧತೆಯ ಅಡುಗೆ ಮನೆ ಪ್ರಪಂಚವೇ ತೆರೆದುಕೊಂಡಿತ್ತು. ಈ ಹುಡುಗಿಯ ಬ್ಲಾಗ್ ನ ವಿಶೇಷತೆಯೇನೆಂದರೆ ‘ಕಸದಿಂದ ರಸ’ ಅಂತಾರಲ್ಲ ಆ ರೀತಿ ಖರ್ಚಿಲ್ಲದೆ ತೋಟ, ಹಿತ್ತಿಲಿನಲ್ಲಿಯೋ, ಗದ್ದೆ ಬದುವಿನಲ್ಲಿಯೋ ಇರಬಹುದಾದ , ಆದರೆ ವಿನೂತನವಾಗಿ ಸೃಜಿಸಿದ ಅಡುಗೆಗಳು. ಅಶೋಕೆ ಹೂ ಸಾರು, ಕಾಡು ಕೇಪುಳ ತಂಬುಳಿ, ಗಾಂಧಾರಿ ಮೆಣಸು ( ಸೂಜಿ ಮೆಣಸು) , ದಾಸವಾಳ ಹೂವಿನ ಅಡುಗೆ, ಈಂದಿನ ಹುಡಿ ಹಲ್ವ.. ಹೀಗೆ ಸ್ಥಳೀಯತೆಯ ಸೊಬಗು. ನಮ್ಮ ಸ್ಥಳೀಯ ಪಾಕ ವೈವಿಧ್ಯ ಹಾಗೂ ಜೀವನ ವಿಧಾನ, ಜೀವನ ಪ್ರೀತಿಗೆ ಸಾಕ್ಷಿಯಾಗಿಯೇ ಈ ಅಡುಗೆ ಚಿತ್ರಗಳು, ಅವುಗಳನ್ನೊಂದು ಕಥನದಂತೆ ಪ್ರಸ್ತುತ ಪಡಿಸಿದ ರೀತಿ ಮನ ತಟ್ಟಿತು.

ಫ಼ುಡ್ ಬ್ಲಾಗ್ ಎಂದಲ್ಲದಿದ್ದರೂ ಇತ್ತೀಚೆಗೆ ಅಡುಗೆಯನ್ನು, ಅಡುಗೆ ರೆಸಿಪಿಗಳನ್ನು ಸಾಮಾಜಿಕ ತಾಣಗಳಲ್ಲಿ , ವೆಬ್ ಸೈಟ್ ಗಳಲ್ಲಿ ಹಂಚಿಕೊಳ್ಳುತ್ತಿರುವುದು ಕಾಣ ಬರುತ್ತಿದೆ. ಒಂದು ಕಾಲದಲ್ಲಿ ಅಡುಗೆ ಪುಸ್ತಕಗಳು, ಟಿ ವಿಯಲ್ಲಿನ ಅಡುಗೆ ಶೋಗಳನ್ನು ನೋಡಲು ಕಾದು ಕುಳಿತುಕೊಳ್ಳಬೇಕಾಗುತ್ತಿತ್ತು. ಈಗ ನೋಡಿದರೆ ಸಾಕಷ್ಟು ಯು ಟ್ಯೂಬ್ ಚಾನೆಲ್ ಗಳು, ಅಡುಗೆ ಬ್ಲಾಗ್ ಗಳು, ಫ಼ೇಸ್ ಬುಕ್ ಪೇಜ್ ಗಳು ಎಂದೆಲ್ಲ ಅಡುಗೆ ಕಲಿಯಲು ಕಷ್ಟವೇನಿಲ್ಲ. ಅದರಲ್ಲೂ ಯುವಕ ಯುವತಿಯರೂ ಒಂದು ರೀತಿಯ ‘ಜೋಶ್’ ನಿಂದ   ನಿದ ಬರೆಯುತಿರುವುದು ಒಂದು ರೀತಿಯ ‘ಹೋಮ್ ಫ಼ುಡ್’ ಆಂದೋಲನದ ಮುನ್ನುಡಿಯಂತೆಯೇ ನನಗನಿಸುತ್ತಿರುತ್ತದೆ.

ತೀರಾ ತಿನ್ನುವುದೊಂದೇ ನಮ್ಮ ಜೀವನದ ಗುರಿ ಅಲ್ಲದಿದ್ದರೂ ‘ಅಡುಗೆ’ ಗೆ ನಮ್ಮ ಜೀವನದಲ್ಲಿ ಪ್ರಮುಖ ಸ್ಥಾನವಿದೆ. ‘ಒಗ್ಗರಣೆ’ ‘ಸಾಲ್ಟ್ ಅಂಡ್ ಪೆಪ್ಪರ್’, ‘ಮಿಸ್ಟರ್ ಬಟ್ಲರ್, ‘ಲಂಚ್ ಬಾಕ್ಸ್’ ನಂತಹ ಚಲನ ಚಿತ್ರಗಳ ಜನಪ್ರಿಯತೆಯೂ ಇದನ್ನೇ ಸೂಚಿಸುವಂತಿದೆ. ನಮ್ಮ ಮನಸ್ಸಿನ ಖುಶಿ, ಆರೋಗ್ಯ, ನೆಮ್ಮದಿ ಕೂಡ ಆಹಾರದೊಂದಿಗೆ ಬಲವಾಗಿ ತಳಕು ಹಾಕಿಕೊಂಡಿರುವುದು ಹೌದು. ಹಾಸ್ಟೆಲ್ ನಲ್ಲೋ, ಪಿಜಿಗಳಲ್ಲೋ ಇರುವವರು ಇದಕ್ಕೆ ‘ಅಹುದಹುದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಫ಼ುಡ್ ಬ್ಲಾಗ್ ಗಳ ಬಗ್ಗೆ ಒಂದಷ್ಟು ಮಾತು. ಲಾಕ್ ಡೌನ್ ಸಮಯದ ಮೊದಲ ಭಾಗದಲ್ಲಂತೂ ಕಡಿಮೆ ತರಕಾರಿ ಬಳಸಿ ಮಾಡುವ ಅನ್ನದ ತಿಳಿ ಸಾರು, ತರಕಾರಿ ಸಿಪ್ಪೆ, ಬೀಜಗಳ ಚಟ್ನಿ, ಬೆಂಡೆ ತೊಟ್ಟಿನ ಫ಼್ರೈ, ದೋಸೆ.. ಹೀಗೆಲ್ಲ ಶುರುವಾದ ಈ ಅಭಿಯಾನ ತಮ್ಮ ತಮ್ಮ ಸ್ಥಳೀಯ ವಿಶಿಷ್ಟತೆಗಳನ್ನು, ಆಹಾರ, ಕೃಷಿ ಎಂದೆಲ್ಲ ಕವಲುಗಳಾಗಿ ವಿಸ್ಮಯ ಹುಟ್ಟಿಸುತ್ತಿದೆ. ಫ಼ುಡ್ ಬ್ಲಾಗ್ ಗಳ ವಿಶಿಷ್ಟತೆ ಎಂದರೆ ಅವುಗಳಲ್ಲಿರುವ ಒಂದು ರೀತಿಯ ಸಂಭ್ರಮ. ರಾಜಕೀಯ ಚರ್ಚೆಗಳಿಗಿಂತಲೂ ಫ಼ುಡ್ ಬ್ಲಾಗಿಗರಿಗೆ ‘ಅಡುಗೆ’ ತುಂಬ ಪ್ರಾಮುಖ್ಯ. ತೋಟಗಾರಿಕೆಯಲ್ಲಿ ಆಸಕ್ತಿ ಇರುವ ಇನ್ನೊಬ್ಬ ಗೆಳತಿಯ ಬ್ಲಾಗನ್ನಂತೂ ವಿಶಿಷ್ಟ ಆಸಕ್ತಿಯಿಂದ, ಕುತೂಹಲದಿಂದ ನೋಡುತ್ತಿರುತ್ತೇನೆ. ತಾನೇ ಹೊಸ ಹೊಸ ಅಡುಗೆಗಳನ್ನು, ಬಹಳ ‘ಕ್ಯಾಶುವಲ್’ ಅಂತಾರಲ್ಲ ಹಾಗೆ ಆವಿಷ್ಕರಿಸಿ, ನಿರ್ಲಿಪ್ತವಾಗಿ ಆಕೆ ಹಂಚಿಕೊಳ್ಳುತ್ತಿರುತ್ತಾರೆ. ನಾನಂತೂ ಆ ಆಡುಗೆಗಳ ಹೆಸರುಗಳನ್ನು ನೋಡಿ ಸಂಭ್ರಮಿಸುವುದಿದೆ. ಶ್ರೀಗಂಧದ ಚಿಗುರಿನ ಚಟ್ನಿ ಪುಡಿ, ಮಾವು ಶುಂಠಿ ಚಿತ್ರಾನ್ನ, ಸೀಬೆ ಎಲೆ ತಂಬುಳಿ, ತೊಂಡೆ ಎಲೆ ಪತ್ರೊಡೆ, ಕರಿ ಬೇವಿನ ದೋಸೆ, ದೊಡ್ಡ ಪತ್ರೆ ಚಪಾತಿ, ಬೆಂಡೆ ತೊಟ್ಟಿನ ದೋಸೆ, ಬೆಳ್ಳುಳ್ಳಿ ಸೊಪ್ಪಿನ ಪಲಾವ್, ಒಂದೆಲಗದ ದೋಸೆ, ಹೀರೆಕಾಯಿ ಚಪಾತಿ, ಅತ್ತಿ ಕಾಯಿ ಉಪ್ಪಿನಕಾಯಿ .. ಹೀಗೆಲ್ಲ.

(ಚಿತ್ರಕೃಪೆ: ರುಕ್ಮಿಣಿಮಾಲಾ)

ಫ಼ುಡ್ ಬ್ಲಾಗ್ ಗಳಿಗೆ ಸಮಾನಾಂತರವಾಗಿ ಬೆಳೆಯುತ್ತಿರುವ ಇನ್ನೊಂದು ಶಾಖೆ ಸಸ್ಯಗಳ ಬಗ್ಗೆ. ‘ನಮ್ಮ ಮನೆ ಕೈತೋಟ’, ‘ಸಸ್ಯ ಕಾಶಿ’ , ಹೀಗೆಲ್ಲ ಬೇರೆ ಬೇರೆ ಗಿಡಗಳ ಬಗ್ಗೆ ಪರಿಚಯಿಸಿ, ಅವುಗಳ ಬಗ್ಗೆ ಸಣ್ಣದಾಗಿ ಮಾಹಿತಿ ಕೊಡುವ ಬ್ಲಾಗ್ ಗಳು. ಟೆರೇಸ್ ನಲ್ಲಿ ಪುಟ್ಟ ಕೈ ತೋಟ ಇರುವವರಿಂದ ಹಿಡಿದು ಜಮೀನುದಾರರ ವರೆಗೆ ಮಣ್ಣಿನ ಸೆಲೆಯುಳ್ಳ ಚಿತ್ರಗಳನ್ನು, ಬರಹಗಳನ್ನು ಪ್ರಕಟಿಸುತ್ತಿರುತ್ತಾರೆ. ನಿಧಾನವಾಗಿ ಇದು ಒಂದು ಕೃಷಿಯ ಪ್ರೀತಿಯನ್ನು, ಸ್ವಾವಲಂಬಿತನವನ್ನು ಹೆಚ್ಚಿಸುವ ವೇದಿಕೆಯಾಗಬಹುದು.

ಇನ್ನು ಆಹಾರವೆನ್ನುವುದು ನಮ್ಮ ನಾಗರಿಕತೆಯ ಉಗಮವಾದಂದಿನಿಂದಲೂ ನವ ನವೋನ್ಮೇಷಶಾಲಿನಿಯಾಗಿ ವಿಕಾಸವಾಗಿ ಬಂದ ಜೀವನ ಕೌಶಲ್ಯವೇ ಆಗಿದ್ದು ಆಹಾರಕ್ಕೋಸ್ಕರವೇ, ಫಲವತ್ತಾದ ಭೂ ಭಾಗಗಳಿಗೋಸ್ಕರವೇ ಯುದ್ಧಗಳಾಗುತ್ತಿದ್ದವು ಎಂದು ನಮಗೆ ಗೊತ್ತೇ ಇದೆ. ರೆಸಿಪಿಗಳನ್ನು ಹಂಚಿಕೊಳ್ಳುವುದು, ಚರ್ಚಿಸುವುದು, ಸಾಧ್ಯವಾದರೆ ಅದರಲ್ಲಿಯೇ ಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವುದು ಒಂದು ರೀತಿಯ ಸಾಂಸ್ಕೃತಿಕ ಕೊಡುಕೊಳ್ಳುವಿಕೆಯೇ. ಉದಾಹರಣೆಗೆ ಕರಾವಳಿಯ ನೀರು ದೋಸೆಯನ್ನು ಧಾರವಾಡದಲ್ಲಿರುವ ಹೆಣ್ಣು ಮಗಳೊಬ್ಬಳು ಇಷ್ಟ ಪಟ್ಟು ಮಾಡಲು ಕಲಿಯುತ್ತಾಳೆ. ಅಂತೆಯೇ ಬೆಂಗಳೂರಿನ ಬಿಸಿಬೇಳೆ ಭಾತ್ ಕೂಡಾ. ಬಯಲು ಸೀಮೆಯ ರಾಗಿಮುದ್ದೆ, ಬಸ್ಸಾರು.. ಹೀಗೆ ಎಲ್ಲ ಭೂ ಭಾಗದ ಅಡುಗೆಗಳನ್ನೂ ಎಲ್ಲೋ ಹಳ್ಳಿ ಮೂಲೆಯಲ್ಲಿರುವ ಹೆಣ್ಣು ಮಗಳೊಬ್ಬಳು ಆಸ್ಥೆಯಿಂದ ಕಲಿತು ಖುಶಿ ಪಡುತ್ತಾಳೆ. ಇದೊಂದು ಸೈಬರ್ ಸಬಲೀಕರಣ. ಸಣ್ಣ ಮಟ್ಟಿಗಿನ ಹಿಂಜರಿಕೆಯಿಂದ ಮಿಡಿ ಉಪ್ಪಿನಕಾಯಿ ರೆಸಿಪಿ ಹಾಕಿದ ಮಹಿಳೆಯೊಬ್ಬಳು ಫೋಟೊ ಅಪ್ ಲೋಡ್ ಮಾಡಲು, ಅದಕ್ಕೊಂದು ‘ಸ್ಕ್ರಿಪ್ಟ್’ ಬರೆದು ಅನುಭವ ಹಂಚಿಕೊಳ್ಳಲು, ಅಡುಗೆಯ ವಿವಿಧ ಹಂತಗಳ ವಿಡಿಯೋ ಮಾಡಲು, ಕಮೆಂಟ್ ಗಳಿಗೆ ಉತ್ತರಿಸಲು.. ಒಟ್ಟಿನ ಮೇಲೆ ಹೊರ ಜಗತ್ತಿನೊಂದಿಗೆ ತಾನೂ ತನ್ನ ಮುಗ್ಧ ಪ್ರಪಂಚವನ್ನು ಹಂಚಿಕೊಳ್ಳುತ್ತ, ‘ಸೃಜನ ಶೀಲ ಅಭಿವ್ಯಕ್ತಿ’ ತಂದೊಡ್ಡುವ ಸ್ವಾತಂತ್ರ್ಯ ಅನುಭವಿಸುವುದಿದೆಯಲ್ಲ ಅದೇ ಒಂದು ಪುಟ್ಟ ಹೆಜ್ಜೆ ಅಲ್ಲವೇ? ನಿಧಾನವಾಗಿ ಈ ಫ಼ುಡ್ ಬ್ಲಾಗಿಗರು ಸೆಲೆಬ್ರಿಟಿ ಶೆಫ಼್ ಗಳಾಗುವ, ಟಿವಿ ಶೋ ಕೂಡ ಕೊಡುವ, ರುಚಿ ರುಚಿಯಾದ ತಿಂಡಿಗಳ ಬಗ್ಗೆ ಬರೆಯುತ್ತಲೇ. ಕಥೆ, ಕವಿತೆ ಎಂದೆಲ್ಲ ಬರೆಯಲಾರಂಭಿಸುವ.. ಹೀಗೆ ಅನೇಕ ಆಯಾಮಗಳು. ಆಹಾರಕ್ಕೆ ಸಂಬಂಧಿಸಿ ಅನೇಕ ವಾದ, ವಿವಾದಗಳು, ನಿಟ್ಟುಸಿರಿನ ಕಥೆಗಳು, ಬಡತನ, ದೈನ್ಯ.. ಹೌದು. ಹಾಗೆಂದು ತಮ್ಮದೇ ಆದ ರೀತಿಯಲ್ಲಿ ಫ಼ುಡ್ ಬ್ಲಾಗ್ ಗಳು ಒಂದು ರೀತಿಯ ಪ್ರಫ಼ುಲ್ಲ ವಾತಾವರಣವನ್ನು ಸೃಷ್ಟಿಸುತ್ತಿರುವುದೂ ಹೌದು. ನಾಲ್ಕು ಲಕ್ಶಕ್ಕೂ ಮೀರಿ ಸದಸ್ಯರಿರುವ ‘ಆಡುಗೆ ಅರಮನೆ’ಯಂತಹ ಬ್ಲಾಗ್ ಗಳು, ‘ಗ್ರಾಂಡ್ ಪಾ ಕಿಚನ್’ ನಂತಹ ಜನಪ್ರಿಯ ತಾಣಗಳು ಇದನ್ನೇ ಸೂಚಿಸುವಂತಿದೆ.

-ಜಯಶ್ರೀ ಬಿ ಕದ್ರಿ.

10 Responses

 1. Shruthi Sharma says:

  ಎಷ್ಟು ಚೆಂದ ಬರೆಯುತ್ತೀರಿ! ಓದುತ್ತಾ ಬೇರೆಯದೇ ಪ್ರಪಂಚ ತೆರೆದುಕೊಂಡು ಹೋಯಿತು.

 2. SmithaAmrithraj. says:

  ಬಹಳ ಒಳ್ಳೆಯ ಬರಹ

 3. Akshatha Raj Perla says:

  ಮೇಡಮ್ ಚೆನ್ನಾಗಿದೆ ✍️

 4. ಹರ್ಷಿತಾ says:

  ಚೆನ್ನಾಗಿ ಬರೆದಿದ್ದೀರಿ, ಅಡುಗೆ-ಕ್ರೃಷಿ ಆಧಾರಿತ ಬ್ಲಾಗ್ಗಳು ಅತ್ಯಂತ ಆಸಕ್ತಿಕರವಾಗಿರುತ್ತವೆ….

 5. ನಯನ ಬಜಕೂಡ್ಲು says:

  ಸೂಪರ್. ಸಿಂಪಲ್ ವಿಷಯ ಆದರೆ ಆಕರ್ಷಕ ಬರಹ.

 6. ಶಶಿಕಲಾ ಹೆಗಡೆ says:

  ಅಡುಗೆ ಮನೆ… ಹೊಸ ಹೊಸ ಆವಿಷ್ಕಾರಗಳ ತಾಣ.
  ಹಂಚಿಕೊಳ್ಳಲು ಆಧುನಿಕ ತಂತ್ರಜ್ಞಾನ.
  ಚಂದದ ಬರಹ

 7. ASHA nooji says:

  ಸುಪರ್ ಜಯ ಬರಹ .

 8. ಶಂಕರಿ ಶರ್ಮ says:

  ಸರಳ, ಆರೋಗ್ಯಕರ ಅಡಿಗೆ ಮಾಹಿತಿಗಳ ಭಂಡಾರವನ್ನೇ ಹೊತ್ತ ಲೇಖನ ಖುಷಿ ಕೊಟ್ಟಿತು.

 9. Krishnaprabha says:

  ತುಂಬಾ ಚೆನ್ನಾಗಿದೆ ಲೇಖನ.. ಮಾಹಿತಿಗಳ ಭಂಡಾರವೇ ತುಂಬಿದೆ

 10. ಅಭಿನಂದಿಸಿದ ಎಲ್ಲರಿಗೂ ಧನ್ಯವಾದಗಳು- ಜಯಶ್ರೀ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: