ವಿಶ್ವದ ಅತಿ ಪುಟ್ಟ ಅಂತರರಾಷ್ಟ್ರೀಯ ಸೇತುವೆ ಎಲ್-ಮಾರ್ಕೊ

Share Button

ವಿಶ್ವದ ಅತಿ ಪುಟ್ಟ ಅಂತರರಾಷ್ಟ್ರೀಯ ಸೇತುವೆ ಯಾವುದು? ಎಂದಾಗ ಥಟ್ ಅಂತ ಎಲ್ಲರ ಮನಸ್ಸಿಗೆ ಬರುವುದು ಯು‌ಎಸ್‌ಎ ಹಾಗೂ ಕೆನೆಡಾದ ಝವಿಕಾನ್ ದ್ವೀಪಗಳ ನಡುವಿನ ಸೇತುವೆ. ಸೈಂಟ್ ಲಾರೆನ್ಸ್ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಈ ಸೇತುವೆಯ ಉದ್ದಕೇವಲ 32 ಅಡಿ. ಝವಿಕಾನ್‌ನ ದೊಡ್ಡ ದ್ವೀಪ ಕೆನಡಾಗೆ ಸೇರಿದ್ದರೆ, ಅದೇ ಹೆಸರಿನ ಸಣ್ಣ ದ್ವೀಪ ಅಮೇರಿಕೆಯ ವಸಾಹತು.

2008 ರಲ್ಲಿ ಈ ದಾಖಲೆಯನ್ನು ಕಸಿದುಕೊಂಡಿದ್ದು ಪೋರ್ಚುಗಲ್ ಮತ್ತು ಸ್ಪೈನ್ ನಡುವಿನ‌ ಅರ್ಬಿಲೊಂಗೊ ತೊರೆಗೆ ಅಡ್ಡಲಾಗಿ ನಿರ್ಮಿಸಿರುವ ಪುಟ್ಟ ಸೇತುವೆ ಎಲ್-ಮಾರ್ಕೊ. ಈ ಸೇತುವೆಯ ಉದ್ದ ಕೇವಲ 10.4 ಅಡಿ (3 ಮೀಟರ್) ಹಾಗೂ ಅಗಲ 5 ಅಡಿ (1.5 ಮೀಟರ್). ಹಾಗಾಗಿ ಇದರ ಉದ್ದ ಝವಿಕಾನ್ ದ್ವೀಪದ ನಡುವಿನ ಸೇತುವೆಯ ಮೂರನೇ‌ ಒಂದು ಭಾಗದಷ್ಟು ಮಾತ್ರ. ಪೋರ್ಚುಗಲ್ ಹಾಗೂ ಸ್ಪೈನ್ ದೇಶಗಳನ್ನು ಬೇರ್ಪಡಿಸುವುದು ಅರ್ಬಿಲೊಂಗೊ ತೊರೆ. ಇದು ಅಲೆನ್ಟೆಜೊದ ಮಧ್ಯ ಭಾಗದಲ್ಲಿ ಹರಿಯುತ್ತದೆ. ಅರ್ಬಿಲೊಂಗೊ ತೊರೆಯ ಒಂದು ಬದಿಯಲ್ಲಿ ಪೋರ್ಚುಗೀಸ್‌ಗೆ ಒಳಪಟ್ಟ ಮಾರ್ಕೊ ಇದ್ದರೆ, ಮತ್ತೊಂದು ಬದಿಯಲ್ಲಿರುವ‌ ಎಲ್-ಮಾರ್ಕೊ ಸ್ಪೇನ್‌ಗೆ ಸೇರಿದೆ. ಮಾರ್ಕೊ ಹಾಗೂ ಎಲ್-ಮಾರ್ಕೊದ ಜನರ ಸಂಸ್ಖೃತಿ, ಸಂಪ್ರದಾಯ, ಪದ್ದತಿ, ರೀತಿ ರಿವಾಜು ಎಲ್ಲವೂ ಒಂದೇ. ಅವರಿಬ್ಬರನ್ನು ಒಂದು ಮಾಡಿರುವುದು ಎಲ್-ಮಾರ್ಕೊ ಪುಟ್ಟ ಸೇತುವೆ. ಮದುವೆಯ ಬಂಧನದಿಂದ ಒಂದಾಗಿರುವ ಹಲವಾರು ಕುಟುಂಬಗಳೂ ಎರೆಡೂ ಹಳ್ಳಿಯಲ್ಲಿವೆ.

ಇನ್ನೂ ಕುತೂಹಲಕಾರಿ ವಿಷಯವೆಂದರೆ ಈ ಎರೆಡು ಹಳ್ಳಿಗೂ ಬೇರೆ ಬೇರೆ ರಸ್ತೆ ಸಂಪರ್ಕವನ್ನು ಆಯಾ ದೇಶದ ಕಡೆಯಿಂದ ಕಲ್ಪಿಸಲಾಗಿದೆ. ಜನ ಒಬ್ಬರೊನ್ನೊಬ್ಬರು ಸಂಪರ್ಕಿಸಲು ಈ ಅಂತರರಾಷ್ಟ್ರೀಯ ಸೇತುವೆಯ ಮೊರೆ ಹೋಗಬೇಕಾದ್ದು ಅನಿವಾರ್ಯ.ಇದೊಂದು ಪಾದಚಾರಿ ಸೇತುವೆ. ಇದರ ನಿರ್ಮಾಣದಲ್ಲಿ ಮರದ ಹಲಗೆಗಳನ್ನು ಬಳಸಲಾಗಿದೆ. ಕಬ್ಬಿಣದ ಪಟ್ಟಿ ಹಾಗೂ ರೈಲಿಂಗ್ಸ್‌ಗಳ ಮೇಲೆ ಈ ಸೇತುವೆಯನ್ನು ನಿರ್ಮಿಸಲಾಗಿದೆ. ಎರೆಡು ಚಕ್ರದ ವಾಹನಗಳಾದ ಸೈಕಲ್ ಮತ್ತು ಮೋಟಾರ್ ಬೈಕ್‌ಗಳನ್ನು ಇದರ ಮೇಲೆ ಓಡಿಸಬಹುದು.

ಯೂರೋಪಿನ ಒಕ್ಕೂಟವು ಈ ಪುಟ್ಟ ಮರದ ಸೇತುವೆಯನ್ನು 21 ನೇ ಶತಮಾನದ ಮೊದಲ ದಶಕದಲ್ಲಿ ನಿರ್ಮಿಸಿತು. ಇದಕ್ಕೆ ಶ್ರಮ ವಹಿಸಿದ ಕಾರ್ಮಿಕರು ಅರ್ಬಿಲೊಂಗೊ ತೊರೆಯ ಆಚೀಚೆ ನೆಲೆಸಿರುವ ಸ್ಪೇನ್ ಮತ್ತು ಪೋರ್ಚುಗಲ್ ದೇಶದ ಪ್ರಜೆಗಳು. ಸ್ಪೇನಿನ ಲ-ಕೊಡೊಸೆರ ಮುನಿಸಿಪಾಲಿಟಿ ಹಾಗೂ ಪೋರ್ಚುಗೀಸಿನ ಆರೋಂಚಸ್‌ನಪರಿಷತ್ತು ಎಲ್-ಮಾರ್ಕೊದ ಸೇತುವೆಯಿಂದ ಬೆಸೆದುಕೊಂಡಿದೆ.

ಈ ಪುಟ್ಟ ಮರದ ಸೇತುವೆಯು ಅಸ್ಥಿತ್ವಕ್ಕೆ ಬರುವ ಮುನ್ನ ಇದೇ ಸ್ಥಳದಲ್ಲಿ ಮರದ ಹಲಗೆಗಳನ್ನು ಅಡ್ಡ ಹಾಕಿ ಅದನ್ನೇ ಸೇತುವೆಯಂತೆ ಉಪಯೋಗಿಸುತ್ತಿದ್ದರು. 1990 ರಲ್ಲಿ ಒಂದು ಬದಿಯಲ್ಲಿ ಕಬ್ಬಿಣದ ಪಟ್ಟಿಯ ರೈಲಿಂಗ್‌ಗಳನ್ನು ಹಾಕಿ ನಡೆದಾಡಲು ಉಪಯೋಗಿಸುತ್ತಿದ್ದ ಈ ಸೇತುವೆಯನ್ನು ಮಜಬೂತು ಮಾಡಲಾಯಿತು. ಕಾಲಕಾಲಕ್ಕಾದ ಈ ಎಲ್ಲಾ ಬದಲಾವಣೆಗಳಿಂದ ಇಂದು ಈ ಸೇತುವೆ ಸದೃಡವಾಗಿದೆ.

ಸ್ಪೇನ್ ಮತ್ತು ಪೋರ್ಚುಗಲ್ ದೇಶಗಳು ಯೂರೋಪಿನ್ ಒಕ್ಕೂಟವನ್ನು ಸೇರುವ ಮುನ್ನ ಎಲ್-ಮಾರ್ಕೊ ಚಿಲ್ಲರೆ ಕಳ್ಳಸಾಗಾಣಿಕೆಯ ಕೇಂದ್ರವಾಗಿತ್ತು. ನಾಗರೀಕ ಕಾವಲು ಪಡೆ ಹಾಗೂ ಆರ್ಥಿಕ ಕಾವಲು ಪಡೆಯವರು ಈ ಸಮಯದಲ್ಲಿ ಅಂದತ್ವವನ್ನು ಪ್ರದರ್ಶಿಸಿದ್ದು ಕಳ್ಳ ಸಾಗಾಣಿಕೆಗೆ ಇಂಬು ಕೊಟ್ಟಂತಾಗಿತ್ತು. ಈ ಎರೆಡೂ ದೇಶಗಳು ಯೂರೋಪಿನ್ ಒಕ್ಕೂಟ ಸೇರಿದ ನಂತರ ಆಮದು ರಪ್ತುವಿನ ವ್ಯವಹಾರಕ್ಕಿದ್ದ ಕಡಿವಾಣ ಸಡಿಲವಾಯಿತು. ಹಾಗಾಗಿ ಕಳ್ಳಸಾಗಾಣಿಕೆಗೆ ಬೆಲೆಯಿಲ್ಲವಾಗಿ ಅದು ನಿಂತಿತು.

ವಿಶ್ವದಲ್ಲಿರುವ ಸಾವಿರಾರು ಹೇಳ ಹೆಸರಿಲ್ಲದ ಸೇತುವೆಗಳಂತೆ ಇತಿಹಾಸದಲ್ಲಿ ಲೀನವಾಗಬೇಕಿದ್ದ ಎಲ್-ಮಾರ್ಕೊ ಸೇತುವೆ ಇಂದು ವಿಶ್ವ ವಿಖ್ಯಾತವಾಗಲು ಮೂಲ ಕಾರಣ ಅದರ ಎರೆಡು ಬದಿಗಳು ಬೇರೆ ಬೇರೆ ದೇಶದಲ್ಲಿನ ಅಡಿಪಾಯದ ಮೇಲೆ ನಿಂತಿರುವುದು.

-ಕೆ.ವಿ.ಶಶಿಧರ

6 Responses

 1. km vasundhara says:

  ಕುತೂಹಲಕಾರಿಯಾದ ಮಾಹಿತಿ. ಚೆನ್ನಾಗಿ ವಿವರಿಸಿದ್ದೀರಿ.

 2. ಬಿ.ಆರ್.ನಾಗರತ್ನ says:

  ಅತ್ಯುತ್ತಮ ಮಾಹಿತಿ ಅಭಿನಂದನೆಗಳು

 3. ನಯನ ಬಜಕೂಡ್ಲು says:

  Beautiful. ವಿಭಿನ್ನ ಲೇಖನ

 4. ಶಂಕರಿ ಶರ್ಮ says:

  ಅತ್ಯಂತ ಕುತೂಹಲಕಾರಿ ವಿಶೇಷ ಸಂಗತಿಯನ್ನು ಹೊತ್ತ ಕಿರು ಲೇಖನ ಅಗಾಧ ಮಾಹಿತಿಗಳನ್ನು ಒಳಗೊಂಡಿದೆ…ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: