ಸಂಜಯನ ದಿವ್ಯ ಚಕ್ಷು
ಮಾನವನ ಅಂಗಗಳಲ್ಲಿ ಕಣ್ಣು ಶ್ರೇಷ್ಠವಾದುದು. ದೃಷ್ಟಿಹೀನನ ಪಾಡು ಶೋಚನೀಯ. ಹೊರ ಪ್ರಪಂಚ ನೋಡಲಾರದವನು ನಿಜಕ್ಕೂ ದುರ್ದೆವಿ. ಅಂತಹವರಿಗೆ ಕಣ್ಣುಳ್ಳವರು ಸಹಾಯ ಹಸ್ತ ಚಾಚುವುದು ಮಾನವ ಸಹಜ ಗುಣ. ಜನ್ಮತಃ ಕಣ್ಣಿಲ್ಲದ ಹುಟ್ಟು ಕುರುಡರಿಗೆ ಕಣ್ಣು ನೀಡುವವರು ಸುದಾನಿಗಳು, ನೇತ್ರ ಹೀನನಿಗೆ ತಮ್ಮ ಕಣ್ಣುಗಳನ್ನು ದಾನ ಮಾಡುವುದು ನೇತ್ರದಾನಿಯ ನಿಧನಾನಂತರವೇ. ಆದರೆ ಕುರುಡರಿಗೆ ಕಣ್ಣಿನಂತೆ ಸಹಾಯ ಮಾಡುವವರು ನೇತ್ರ ದಾನಿಗಳಿಗಳಿಗಿಂತಲೂ ಮೇಲಲ್ಲವೇ? ಹೌದು..
ನಮ್ಮ ಪುರಾಣದಲ್ಲಿ ಇಂತಹ ಪಾತ್ರಗಳಿದ್ದುವು . ಮಹಾಭಾರತದಲ್ಲಿ ಕಣ್ಣಿಲ್ಲದ ಹುಟ್ಟು ಕುರುಡ ಯಾರೆಂದು ಕೇಳಿದರೆ ಪುಟ್ಟ ಮಕ್ಕಳೂ ದೃತರಾಷ್ಟ್ರನೆಂದು ಹೇಳಬಹುದು.ಆದರೆ ಆತನಿಗೆ ಕಣ್ಣಿನಂತೆ ಕಾರ್ಯ ನಿರ್ವಹಿಸಿದವನೊಬ್ಬನಿದ್ದ. ದೃತರಾಷ್ಟ್ರನ ಮಕ್ಕಳಾದ ಕೌರವರಿಗೂ ಅವನ ತಮ್ಮ ಪಾಂಡುವಿನ ಮಕ್ಕಳಾದ ಪಾಂಡವರಿಗೆ ಯುದ್ಧವಾಗುವ ಸಂದರ್ಭದಲ್ಲಿ ಅರಮನೆಯಲ್ಲಿ ಅಂಧರಾಜ ದೃತರಾಷ್ಟ್ರನ ಸಮ್ಮುಖದಲ್ಲಿಯೇ ನೇರ ಯುದ್ದ ವಿವರಣೆ ನೀಡುವ ದಿವ್ಯದೃಷ್ಟಿ ಪಡೆದವನೊಬ್ಬನಿದ್ದ. ಅವನೇ ಸಂಜಯ. ಈ ಸಂಜಯನೆಂದರೆ ಯಾರು ಆತನಿಗೆ ಕುರುಕ್ಷೇತ್ರದಲ್ಲಾಗುವ ಯುದ್ದದ ವಿವರಣೆಯನ್ನು ಅರಮನೆಯಲ್ಲಿ ಕುಳಿತು ಹೇಳುವುದಕ್ಕೆ ದಿವ್ಯದೃಷ್ಟಿ ನೀಡಿದವರಾರು ಎಂದೆಲ್ಲ ತಿಳಿಯೋಣ.
ಚಂದ್ರವಂಶದ ಶಂತನು ರಾಜನ ಮಗ ವಿಚಿತ್ರವೀರ್ಯ. ಈತನ ಮಗನೇ ದೃತರಾಷ್ಟ. ಇವನ ಮಂತ್ರಿಯೂ, ಸಾರಥಿ (ಗಾಡಿ ನಡೆಸುವವ)ಯೂ ಆಗಿದ್ದವ ಗವಲ್ಗಣ, ಇವನ ಪುತ್ರನೇ ಸಂಜಯ, ಸಂಜಯನೂ ಸೂತ (ಸಾರಥಿ) ನಾಗಿದ್ದನೆಂದು ತಿಳಿದು ಬರುತ್ತದೆ. ದೃತರಾಷ್ಟ್ರನಿಗೆ ಭಾರತ ಯುದ್ಧದ ವಿವರಗಳನ್ನು ನಿರೂಪಿಸುತ್ತಿದ್ದು ಆ ಕೆಲಸ ಒಂದು ರೀತಿಯ ಸಾರಥ್ಯವೆಂಬುದೂ ಇಲ್ಲಿ ವಿಶೇಷ ಅನ್ವರ್ಥವನ್ನು ಗ್ರಹಿಸಬಹುದು.
ಪಾಂಡವರು ಉಪಪ್ಲವ್ಯ ನಗರದಲ್ಲಿದ್ದಾಗ ಸಂಜಯನನ್ನು ಪಾಂಡುವರಲ್ಲಿಗೆ ಸಂಧಾನಕ್ಕಾಗಿ ದೃತರಾಷ್ಟ್ರ ಕಳುಹಿಸಿದ್ದನು. ಅವನು ಪಾಂಡವರ ಅಭಿಪ್ರಾಯ ತಿಳಿದು ವಾಪಾಸು ಹಸ್ತಿನಾವತಿಗೆ ಬಂದು ‘ರಾಜಾ, ನಾನು ಅತಿ ವೇಗದಿಂದ ಬಂದುದು ಆಯಾಸಗೊಂಡಿದ್ದೇನೆ. ನಾಳೆ ರಾಜಸಭೆಗೆ ಬಂದು ಯುದಿಷ್ಠಿರ ಹೇಳಿದ ಹೇಳುತ್ತೇನೆ’ ಎಂದು ದೃತರಾಷ್ಟ್ರನ ಅಪ್ಪಣೆ ಪಡೆದು ತನ್ನ ಮನೆಗೆ ಹೋಗುತ್ತಾನೆ. ರಾತ್ರಿ ದೃತರಾಷ್ಟ್ರನಿಗೆ ನಿದ್ರೆ ಬಾರದೆ ವಿದುರನನ್ನು ಕರೆಸಿ ಆತನಿಂದ ನೀತಿಯನ್ನು ಕೇಳಿದನು. ಆಮೇಲೆ ವಿದುರನ ಸೂಚನೆಯಂತೆ ಸಂಜಯನು ದೃತರಾಷ್ಟ್ರನಿಗೆ ತತ್ವೋಪದೇಶ ಮಾಡಿದನು.
ಯುದ್ಧ ಸನ್ನದ್ಧವಾಗುತ್ತಿದ್ದಂತೆ ಹಸ್ತಿನಾವತಿಗೆ ವೇದವ್ಯಾಸರ ಆಗಮನವಾಯಿತು, ಅವನು ದೃತರಾಷ್ಟ್ರನಲ್ಲಿ ‘ಯುದ್ಧ ವೀಕ್ಷಿಸಲು ದಿವ್ಯದೃಷ್ಟಿ ಕರುಣಿಸುತ್ತೇನೆ’ ಎಂದರು, ಆಗ ಅಂಧ ನೃಪಾಲನು ‘ನಾನು ಹುಟ್ಟು ಕುರುಡನಾಗಿದ್ದು, ಈಗ ಬರ್ಬರ ಹತ್ಯೆ ಅಮಂಗಲವನ್ನು ನೋಡುವುದಕ್ಕಾಗಿ ಕಣ್ಣುಗಳನ್ನು ಪಡೆಯಲು ಇಚ್ಚಿಸುವುದಿಲ್ಲ. ಆದರೆ, ಸಂಗ್ರಾಮ ವಾರ್ತೆಯನ್ನು ಸಂಪೂರ್ಣವಾಗಿ ಕೇಳಲಿಚ್ಚಿಸುತ್ತೇನೆ’ ಎಂದನು. ಆಗ ವೇದವ್ಯಾಸ ಮಹರ್ಷಿಗಳು ‘ಆಗಲಿ ರಾಜಾ, ನಿನ್ನ ಬಲಗೈಯಂತಿರುವ ಸಂಜಯನಿಗೆ ದಿವ್ಯಾಕ್ಷುಗಳನ್ನು ಕರುಣಿಸುತ್ತೇನೆ. ಆತನು ಸಮರ ಭೂಮಿಯಲ್ಲಿ ನಡೆಯುವ ವಾರ್ತೆಯನ್ನು ದಿವ್ಯ ದೃಷ್ಟಿ ನೋಡಿ ನಿನಗೆ ವಿವರಿಸಬಲ್ಲನು‘ ಎಂದರಲ್ಲದೆ ಸಂಜಯನಿಗೆ ದಿವ್ಯಚಕ್ಷುವನ್ನು ಅನುಗ್ರಹಿಸಿ ಹೊರಟು ಹೋದರು.
ಸಂಜಯನು ಹದಿನೆಂಟು ದಿನಗಳ ಯುದ್ದ ವಿವರಣೆಯನ್ನು ಸವಿವರವಾಗಿ ಈ ದೃತರಾಷ್ಟ್ರನಿಗೆ ನೀಡಿದನು. ಕೊನೆಗೆ ರಾಜನ ಆದೇಶದಂತೆ ಈತನು ಕೌರವ ಪಕ್ಷದಲ್ಲಿದ್ದು ಯುದ್ದ ಮಾಡುತ್ತಿದ್ದಾಗ ಸಾತ್ಯಕಿಯು ಈತನನ್ನು ಕೊಲ್ಲಲು ಬಂದನು. ಆಗ ವ್ಯಾಸಮುನಿ ಬಂದು ಬಿಡಿಸಿದನು. ದೃತರಾಷ್ಟ್ರ, ಗಾಂಧಾರಿ, ಕುಂತಿಯರು ಕಾಳಿಚ್ಚಿಗೆ ತುತ್ತಾದ ನಂತರ ಇವನು ಹಿಮವತ್ವರ್ವದ ಕಡೆಗೆ ತಪಸ್ಸಿಗೆ ಹೋದನು. ಸಂಜಯನು ಅರ್ಜುನನ ಪರಮ ಮಿತ್ರನಾಗಿದ್ದನು. ಸಂಜಯನಿಗೆ ಮಾತ್ರ ಅರ್ಜುನನ ಕೋಣೆಗೆ ಹೋಗುವ ಅಧಿಕಾರವಿತ್ತು. ಇವನಿಗೆ ಭಾರತ ಯುದ್ಧಾನಂತರ ದಿವ್ಯದೃಷ್ಟಿ ಲೋಪವಾಯಿತು. ದೇವನೊಲಿದರೆ ಯಾವುದು ಅಸಾಧ್ಯವಿಲ್ಲ ಅಲ್ಲವೆ ಅವನು ಮನಸ್ಸು ಮಾಡಿದರೆ ಕೃಪಾಕಟಾಕ್ಷ. ಇಲ್ಲದೆ ಹೋದರೆ ಇಲ್ಲ. ಸಂಜಯನೇ ಯೋಗ್ಯ ಉದಾಹರಣೆ.
-ವಿಜಯಾ ಸುಬ್ರಹ್ಮಣ್ಯ, ಕುಂಬಳೆ
ಉತ್ತಮ ಮಾಹಿತಿ ಗೂತ್ತಿರುವ ಸಂಗತಿಯಾದರೂ ನಿರೂಪಣಿ ಚೆನ್ನಾಗಿ ಮೂಡಿ ಬಂದಿದೆ.ಅಭಿನಂದಗಳು.
ಚೆನ್ನಾಗಿದೆ ಮೇಡಂ.
ಪ್ರಕಟಿಸಿದ ಹೇಮಮಾಲಾ ಹಾಗೂ ಬಿ.ಆರ್ ನಾಗರತ್ನ ಮತ್ತು ನಯನ ಬಜಕ್ಕೂಡ್ಳು ಇವರಿಗೆ ಧನ್ಯವಾದಗಳು.
ಮಹಾಭಾರತದ ಪಾತ್ರಗಳಲ್ಲಿ ತನ್ನದೇ ಸ್ಥಾನ ಹೊಂದಿರುವುದು ಸಂಜಯನ ಪಾತ್ರ. ಭಗವದ್ಗೀತೆಯಲ್ಲಿ ಸಂಜಯ ಉವಾಚ ಅತೀ ಮುಖ್ಯ ಭೂಮಿಕೆ ವಹಿಸುತ್ತದೆ. ಉತ್ತಮ ಮಾಹಿತಿಗಳನ್ನೊಳಗೊಂಡ ಚೊಕ್ಕ ಲೇಖನ. ಧನ್ಯವಾದಗಳು ವಿಜಯಕ್ಕ.
ನಿಮ್ಮ ಮನೋಭೂಮಿಕೆಗೆ ಧನ್ಯವಾದ ಶಂಕರಿಶರ್ಮ.