ಮುಂಬಯಿ ಹೊತ್ತಿ ಉರಿಯುತ್ತಿದ್ದಾಗ…

Share Button

ಮನುಷ್ಯನಿಗೆ ಬಗೆಬಗೆಯ ಪಾಠ ಕಲಿಸಿ ಬದುಕನ್ನು ರೂಪಿಸುವುದರಲ್ಲಿ ಅನುಭವಗಳ ಪಾತ್ರ ಬಹಳ ದೊಡ್ಡದು. ಕೆಲವು ಅನುಭವಗಳು ಮತ್ತೆ ಮತ್ತೆ ಮೆಲುಕು ಹಾಕುವಂತಿದ್ದರೆ ಇನ್ನು ಕೆಲವನ್ನು ಮರೆಯಲು ಹರ ಸಾಹಸ ಮಾಡುತ್ತೇವೆ. ಕೆಲವು ಅನುಭವಗಳನ್ನು ಹಾದು ಬರುವಾಗ ಕಷ್ಟ ಎನಿಸಿದ್ದರೂ ನಂತರ ಅವನ್ನು ನೆನೆಸಿಕೊಂಡು ಮುದಗೊಳ್ಳವುದೂ ಉಂಟು. ಈ ನನ್ನ ಅನುಭವವನ್ನು ಯಾವ ಗುಂಪಿಗೆ ಸೇರಿಸಬಹುದು‌ ನೀವೇ ನಿರ್ಧರಿಸಿ.

1978 ರಲ್ಲಿ ಒಮ್ಮೆ ನಮ್ಮ ಸೋದರ ಮಾವನ ಮನೆಗೆ ಮೊತ್ತ ಮೊದಲ ಬಾರಿಗೆ ಮುಂಬಯಿಗೆ ಹೋಗಿದ್ದಾಗ ಅಲ್ಲಿಯ ಹುಚ್ಚು ಹಿಡಿಸುವ ಜನಜಂಗುಳಿ, ತಲೆ ಜುಮ್ಮೆನಿಸುವ ಬುಲೆಟ್ ಟ್ರೈನಿನ ವೇಗದ ಜೀವನದ ರೀತಿ‌ ನೋಡಿ ಬೆದರಿ ಹರಿಹರಕ್ಕೆ ವಾಪಸ್ಸು ಕಳಿಸಿ ಎಂದು ಹಠ ಮಾಡಿದಾಗ,  ನಮ್ಮ ಸೋದರ ಮಾವ, *ನಿನ್ನ ಮಗಳು ರತ್ನ ಶುದ್ಧ ಹಳ್ಳಿ ಗುಗ್ಗು ಕಣೆ* ಎಂದು ಅವರಕ್ಕನಿಗೆ ಯಾನೆ ನಮ್ಮಮ್ಮನಿಗೆ ದೂರಿದ್ದರು.

ಆದರೆ ಅಲ್ಲಿಂದ ಐದು ವರ್ಷಕ್ಕೆ ವಿಧಿ ನನಗೆ ಮುಂಬಯಿಯ ಗಂಡನನ್ನೇ ಕೊಟ್ಟಾಗ ಒಂದೆರಡು ತಿಂಗಳಲ್ಲೇ ಅಲ್ಲಿಯ ಜೀವನಕ್ಕೆ ಸಲೀಸಾಗಿ ಹೊಂದಿಕೊಂಡುದನ್ನು ಕಂಡು ಅದೇ ಸೋದರಮಾವ ತನ್ನಕ್ಕನಿಗೆ  *ಏನೇ ನಿನ್ನ ಮಗಳು ಇಷ್ಟೊಂದು ಸ್ಮಾರ್ಟ್* ಎಂದು ಶಹಬ್ಬಾಸ್ ಗಿರಿಯನ್ನೂ ಕೊಟ್ಟಿದ್ದರು. ಆ ಮಾಯಾನಗರಿ ಬಹಳ ಬೇಗನೆ ನನ್ನಂತಹ *ಹಳ್ಳಿಗುಗ್ಗು* ವನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡುಬಿಟ್ಟಿತ್ತು. ಅಲ್ಲಿಯ ಅನುಭವಗಳೋ ವೈವಿಧ್ಯಮಯ.

1992 ರಲ್ಲಿ ಅಯೋಧ್ಯೆಯಲ್ಲಿದ್ದ ಬಾಬರಿ ಮಸೀದಿ ಧ್ವಂಸವಾಗಿ ಅದರ ಪರಿಣಾಮ 1993 ರ ಆದಿಯಲ್ಲಿ ಮುಂಬಯಿನಲ್ಲಿ ‌ಭೀಕರವಾಗಿ‌ ಕಾಣಿಸಿಕೊಳ್ಳತೊಡಗಿತು. ಆ ಸಮಯದಲ್ಲಿ ಮನೆಯಲ್ಲಿ ನಾನು ಮತ್ತು ನನ್ನ ಇಬ್ಬರು ಚಿಕ್ಕಮಕ್ಕಳು ಅಷ್ಟೇ. ನನ್ನ ಪತಿ ಶ್ರೀನಿವಾಸಮೂರ್ತಿ ಆಫೀಸಿನ ಕೆಲಸದ‌ ಮೇಲೆ ಹೈದರಾಬಾದಿಗೆ ಹೋಗಿ ಆಗಲೇ ಮೂರು ವಾರಕ್ಕೂ‌ ಜಾಸ್ತಿಯಾಗಿತ್ತು.

ಪರಸ್ಪರ ಅಪನಂಬಿಕೆ ದ್ವೇಷಗಳ‌ ದಳ್ಳುರಿಯಲ್ಲಿ ಮುಂಬಯಿ ಅಕ್ಷರಶಃ ಹೊತ್ತಿ ಉರಿಯುತ್ತಿತ್ತು. ಆಗಾಗ್ಗೆ ಕೇಳುತ್ತಿದ್ದ ಗುಂಡಿನ ಸದ್ದು, ಅಲ್ಲಲ್ಲಿ‌ ಹೊತ್ತಿಸುತ್ತಿದ್ದ ಬೆಂಕಿ, ಕೊಲೆ, ಸುಲಿಗೆ, ಲೂಟಿಗಳಿಂದಾಗಿ ಮತ್ತು ಕಿವಿಗೆ ಬೀಳುತ್ತಿದ್ದ ಭಯಂಕರ ಸುದ್ದಿಗಳನ್ನು  ಅರಗಿಸಿಕೊಳ್ಳಲಾಗದೆ ಸದಾಕಾಲ ಹೃದಯ ಭಯದಿಂದ ಥರಗುಡುತ್ತಿತ್ತು.  ಆದರೆ ಮಕ್ಕಳ ಹೂವಿನಂತಹ ಮನಸ್ಸಿಗೆ ಅದರ ವಿಕೃತ ಝಳ ತಾಕಬಾರದೆಂದು ನನ್ನ ಮಮತೆಯ ರೆಕ್ಕೆಯೊಳಗೆ ಮುಚ್ಚಿಟ್ಟು ಆದಷ್ಟೂ ರಕ್ಷಿಸಲು ಯತ್ನಿಸುತ್ತಿದ್ದೆ. ಒಂದೊಂದು ದಿನ ಕಳೆದಾಗಲೂ ಸಧ್ಯ ಇವತ್ತು‌ ಬದುಕಿ ಉಳಿದುಕೊಂಡಿದ್ದೇವೆ ಎಂಬ, ಅವತ್ತಿನ ಆಪತ್ತಿನಿಂದ ಬಚಾವಾಗಿರುವ ಭಾವ.  ಯಾವ ಕ್ಷಣಕ್ಕೆ, ಯಾವ ತರಹದ ದಾಳಿ, ಯಾವ ಕಡೆಯಿಂದ, ಹೇಗೆ ಬರುತ್ತದೋ ಎಂಬ ಭೀತಿಯಲ್ಲೇ ದಿನ ದೂಡುತ್ತಿದ್ದೆವು.

ನಾವಿದ್ದುದು ಮಾತುಂಗಾ ಪಶ್ಚಿಮದ  ಲೇಡಿ ಜೇಮಶೇಟಜಿ ರಸ್ತೆಗೆ ಹೊಂದಿಕೊಂಡಿದ್ದ ಟಿ‌.ಎಚ್. ಕಟಾರಿಯಾ ಮಾರ್ಗದ OCS ಕ್ವಾರ್ಟರ್ಸ್ನನಲ್ಲಿ. 75-80 ಮನೆಗಳು.  ಮುಂಬಯಿಯ ಪ್ರಸಿದ್ಧ ‘*ಕರ್ನಾಟಕ ಸಂಘ*  ನಮ್ಮ ಕಾಲನಿಯ ಎದುರುಗಡೆಯೇ ಇತ್ತು. ನಮ್ಮದು 3 ಕೋಣೆಗಳ ದೊಡ್ಡ ಪ್ಲಾಟ್.  ಮುಂಬಯಿಯಲ್ಲಿ ಗಲಭೆ ಶುರುವಾಗುವ ಸೂಚನೆ ಕಂಡಾಗ ಮೊದಲಿಗೆ 144 ಸೆಕ್ಷನ್ ಜಾರಿ ಮಾಡಿದರೂ ಹಿಂಸೆ ದೊಂಬಿ ಭೀಕರವಾದಾಗ ಕರ್ಫ್ಯೂ ಹೇರಿದರು. ಗಲಭೆ ಸ್ವಲ್ಪ ನಿಯಂತ್ರಣಕ್ಕೆ ಬಂದಾಗ ಕರ್ಫ್ಯೂ‌ ಸಡಲಿಸಿದರೂ ಹತೋಟಿಗೆ ಸಿಗದೆ ಮತ್ತೆ ಮತ್ತೆ‌ ಕರ್ಫ್ಯೂ ಜಾರಿಯಾಗುತ್ತಿತ್ತು.

ಹೀಗೆ ಒಮ್ಮೆ ಎರಡು ಮೂರು ಗಂಟೆಗಳ ಕಾಲ ಕರ್ಫ್ಯೂ ಸಡಲಿಸಿದ್ದಾರೆಂದು ತಿಳಿದುಬಂದಿತು. ಆ ಸಮಯದಲ್ಲಿ ಜೀವನಾವಶ್ಯಕ ವಸ್ತುಗಳ ಅಂಗಡಿಗಳನ್ನು ತೆರೆಯಲೂ ಅನುಮತಿ ಇರುತ್ತಿತ್ತು. ಬೆಳಗಿನ ತಿಂಡಿ ಆಗಿತ್ತು. ಇನ್ನೂ ಅಡಿಗೆ ಮಾಡಿರಲಿಲ್ಲ. ಪರವಾಗಿಲ್ಲ ಎಂದುಕೊಂಡು, ತಕ್ಷಣ ತುರ್ತಾಗಿ ಬೇಕಾದ ಸಾಮಾನುಗಳ ಪಟ್ಟಿ ಮಾಡಿಕೊಂಡು, ನಾನು ಬರುವವರೆಗೂ ಬಾಗಿಲು ತೆರೆದು ಹೊರಗೆ ಬರಬಾರದೆಂದು ಮಕ್ಕಳಿಗೆ ಕಟ್ಟಪ್ಪಣೆ ಮಾಡಿ, ನಮ್ಮ ಕಾಲೊನಿಯಿಂದ ಹೊರಬಂದು ಬಲಕ್ಕೆ ತಿರುಗಿ ಮತ್ತೆ ಬಲಕ್ಕೆ ಮುಖ್ಯರಸ್ತೆಯಲ್ಲಿ – ಒಟ್ಟು ‌ನೂರೈವತ್ತು ಮೀಟರ್ ಅಷ್ಟೇ ದೂರವಿದ್ದ *ಅಪ್ನಾ ಭಂಡಾರ್* ಗೆ ಧಾವಿಸಿದೆ.  ನಾನೇ ಮೊದಲಿನ ಗಿರಾಕಿ. ಸಾಮಾನಿನ ಪಟ್ಟಿ ಕೊಡುವಷ್ಟರಲ್ಲಿ, ಲಾಂಗು, ಕತ್ತಿ ಚಾಕು, ಚೂರಿ, ಒಡೆದ ಬಾಟಲ್ ಕಲ್ಲು ದೊಣ್ಣೆ‌ಗಳನ್ನು ಹಿಡಿದಿದ್ದ ದೋಡ್ಡ ಗುಂಪೊಂದು *ಮಾರೋ. ಮಾರ್ ಡಾಲೋ* ಎಂದು ಅಬ್ಬರಿಸುತ್ತಾ ನಮ್ಮೆಡೆಗೆ‌ ನುಗ್ಗಿ‌ಬಂತು. ಆ ಕ್ಷಣಕ್ಕೆ ಅಂಗಡಿಯವ ಮಿಂಚಿನ ವೇಗದಲ್ಲಿ ನ‌ನ್ನ ತೋಳನ್ನು ಹಿಡಿದು  ಒಳಗೆಳೆದುಕೊಂಡು, ಅಷ್ಟೇ ಮಿಂಚಿನ ವೇಗದಲ್ಲಿ‌ ಷಟರ್ ಕೆಳಗೆಳೆದು ಮುಚ್ಚಿಬಿಟ್ಟ.

ಕಣ್ಣು ಕತ್ತಲೆಗಟ್ಟಿ, ಕಾಲುಗಳು ಥರಥರನೆ ನಡುಗತೊಡಗಿದವು. ಬಲಿ‌ ಕೈ ತಪ್ಪಿದುದಕ್ಕೆ ರೋಷಗೊಂಡ ಗುಂಪು ದೊಡ್ಡ ದೊಡ್ಡ ಕಲ್ಲು ದೊಣ್ಣೆಗಳಿಂದ ಕುಟ್ಟುತ್ತಾ ಷಟರ್ ಅನ್ನು ಮುರಿಯುವ ಪ್ರಯತ್ನ ಮಾಡತೊಡಗಿದಾಗಲಂತೂ ಹೃದಯ ಬಾಯಿಗೆ ಬಂದು ಕಣ್ಣು ಗುಡ್ಡೆಗಳು ಹೊರಗೆ ಜಿಗಿಯುವಂತಹ ರುದ್ರ ಭೀತಿ.

‘ನನ್ನ ಮಕ್ಕಳಿನ್ನೂ ತುಂಬಾ ಚಿಕ್ಕವರು. ಇಬ್ಬರೇ ಮನೆಯಲ್ಲಿದ್ದಾರೆ.  ನಾನಿಲ್ಲಿಂದ ಜೀವಂತ ವಾಪಸ್ಸಾಗ್ತೀನಾ?! ನನಗೇನಾದ್ರೂ ಆದ್ರೆ ಮಕ್ಕಳ ಗತಿಯೇನು’? ಎನ್ನುತ್ತಾ ಅಳತೊಡಗಿದೆ.

ಅಂಗಡಿಯವನ ಮುಖವೂ ರಾಹು ಬಡಿದಂತೆ.  ಕೈ  ಮುಗಿಯುತ್ತಾ, “ಅಳಬೇಡಿ ಬೆಹನ್ ಜೀ. ಪ್ಲೀಸ್ ಅಳಬೇಡಿ. ಅವರಿಗೆ ಷಟರ್ ಒಡೆಯೋಕೆ ಆಗೊಲ್ಲ. ಆದ್ರೆ ಹೊರಗಿನಿಂದ ಪೆಟ್ರೋಲ್‌ ಸೀಮೆ ಎಣ್ಣೆ ಏನಾದರೂ ಸುರಿದು ಬೆಂಕಿ ಹಚ್ಚಿಬಿಟ್ರೆ ಬಿಲದೊಳಗಿನ ಇಲಿಯಂತೆ ನಾವಿಲ್ಲಿ ಜೀವಂತ ಬೆಂದು ಹೋಗ್ತೀವಿ. ಹಾಗಾಗದಂತೆ ದೇವರನ್ನು‌ ಬೇಡಿಕೊಳ್ಳೋಣ‌ ಬೆಹನ್. ಬೇಡಿಕೊಳ್ಳೋಣ” ಎಂದು ಅವನೂ‌ ಕಂಗೆಟ್ಟು ಹಲುಬತೊಡಗಿದ.(ರಾಧಾ ಚಾಲ್ ಎಂಬಲ್ಲಿ ನುಗ್ಗಿಬಂದ ಗುಂಪಿಗೆ ಹೆದರಿ ಮನೆಗೆ ಓಡಿ ಹೋಗಿ ಬಾಗಿಲು ಹಾಕಿಕೊಂಡವರ ಮನೆಯ ಬಾಗಿಲಿನ ಸಂಧಿಯಿಂದ ಪೆಟ್ರೋಲ್ ಸುರಿದು,ಬೆಂಕಿ ಹಚ್ಚಿ, ಒಳಗಿನವರನ್ನು ಜೀವಂತ ಸುಟ್ಟ ಘೋರ ಬರ್ಬರ ಕೃತ್ಯ ಕೆಲವೇ ದಿನಗಳ ಹಿಂದೆ ನಡೆದಿತ್ತು).


ಅಂತಹ ಭೀಕರ ಸನ್ನಿವೇಶದಲ್ಲಿ ನಿಶ್ಚಲ ಮನಸ್ಸಿನಿಂದ ಪ್ರಾರ್ಥನೆ ಮಾಡಲು ಸಾಧ್ಯವಿತ್ತೇ?? ಒಡೆದು ಹೋಗುವಂತೆ ಹೊಡೆದುಕೊಳ್ಳುತ್ತಿದ್ದ ಎದೆ. ಅದೇ ಸ್ಥಿತಿಯಲ್ಲೇ ಕೈ ಮುಗಿದು ಕಣ್ಮುಚ್ಚಿ‌ ಆರ್ತರಾಗಿ‌ ಬೇಡಿಕೊಳ್ಳತೊಡಗಿದೆವು. ರೊಚ್ಚಿನಿಂದ ಷಟರ್ ಒಡೆಯುವ ಪ್ರಯತ್ನ ಮಾಡುತ್ತಲೇ ಇದ್ದರು.

ಕ್ಷಣವೊಂದು‌ ಕಲ್ಪಗಳೆನಿಸುವಷ್ಟು ದೀರ್ಘವಾಗಿ ಅಂತ್ಯವೇ ಇಲ್ಲ ಎನ್ನುವಂತಹ ಭಯಂಕರ‌ ಸನ್ನಿವೇಶ.  ಜೀವಂತ ವಾಪಸ್ಸಾಗಿ ಮಕ್ಕಳನ್ನು ಮತ್ತೆ ನೋಡುತ್ತೇನೆಂಬ ವಿಶ್ವಾಸ ಕಮರಿ ಹೋಗುತ್ತಿತ್ತು. ಹಾಗಾದರೆ ಅಪ್ಪನೂ ದೂರದಲ್ಲಿರುವ ಎಳೆಯ ಮಕ್ಕಳ‌ ಗತಿ ಏನು? ಎಂತಹ ಯಾತನಾಮಯ ಸಾವು ನಮಗೆ ಕಾದುಕೊಂಡಿದೆಯೋ ಎಂದು ವ್ಯಕ್ತ ಪಡಿಸದೆಯೇ  ಇಬ್ಬರೂ ಥರ ಥರ ನಡುಗುತ್ತಿದ್ದೆವು‌. ಯಾಂತ್ರಿಕವಾಗಿ‌ ಬಾಯಿ “ಕಾಪಾಡು ಕಾಪಾಡು” ಎಂದು ಬೇಡಿಕೊಳ್ಳುತ್ತಿತ್ತು.

ಷಟರ್ ಒಡೆಯುವ ಉಗ್ರ ಗಲಭೆಕೋರರ ಎಲ್ಲಾ ಪ್ರಯತ್ನವೂ ವಿಫಲವಾದಾಗ ಕೆಟ್ಟದಾಗಿ‌ ಬೈಯುತ್ತಾ ಗುಂಪು ಚದುರಿ ದೂರ ಹೋಗಿದೆ. ಇನ್ನು‌ ಅಪಾಯ ಇರಲಾರದು  ಎನಿಸುವ ಹೊತ್ತಿಗೆ ಮನೆ ಬಿಟ್ಟು ನಾಲ್ಕು ಗಂಟೆ ದಾಟಿತ್ತು. ಆ ಕ್ರೂರಿಗಳ ಬಳಿ ಪೆಟ್ರೋಲ್ ಸೀಮೆ ಎಣ್ಣೆ ಏನೂ ಇರಲಿಲ್ಲ ಎಂಬುದು ಅಷ್ಟು ಹೊತ್ತಿಗೆ ಖಚಿತವಾಗಿ ಸ್ವಲ್ಪ ಧೈರ್ಯ ಬಂದಿತು. ಬಹಳ ದೂರದಲ್ಲಿ ಕೇಳುತ್ತಿದ್ದ ಗಲಭೆ ಹತ್ತಿಕ್ಕಲು ಹೊರಟಿರಬಹುದಾದ ಪೋಲೀಸ್ ವ್ಯಾನಿನ ಸೈರನ್.‌ ಯಾರಾದರೂ ಬಂದು ರಕ್ಷಿಸಿಯಾರು ಎಂಬ‌ ಯಾವ ಭರವಸೆಯನ್ನೂ ಆಗ ತಾಳುವಂತಿರಲಿಲ್ಲ. ಮುಚ್ಚಿದ್ದ ಅಂಗಡಿಗಳಿಗೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆಗಳೂ ಬೇಕಾದಷ್ಟು ನಡೆದಿದ್ದನ್ನು ಕೇಳಿದ್ದರಿಂದ, ಅಂಗಡಿಯಲ್ಲಿ‌ ಸುರಕ್ಷಿತವಾಗಿರಬಹುದು ಎಂದು ನಂಬಲು ಯಾವ ಆಧಾರವೂ ಇರಲಿಲ್ಲ. ಹೇಗಾದರೂ ಜೀವ ಉಳಿಸಿಕೊಂಡು ಮನೆಗೆ ಧಾವಿಸಬೇಕು. ಮಕ್ಕಳು ಎಷ್ಟು ಹೆದರಿರುತ್ತಾರೋ?

ಅಂಗಡಿಯವ ಎಚ್ಚರಿಕೆಯಿಂದ ಹಿಂದಿನ ಸಣ್ಣ‌ ಬಾಗಿಲು ತೆರೆದು “ಮನೆ ಎಲ್ಲಿ‌” ಎಂದು ಕೇಳಿದ. ಇಲ್ಲೇ OCS  ಕಾಲೊನಿ‌” ಎಂದು ಹೇಳಿ “ನಿಮ್ಮ ಮನೆ ಎಲ್ಲಿ”  ಎಂದು ಕೇಳಿದೆ. “ನಮ್ಮದೂ ಹತ್ತಿರದಲ್ಲೆ” ಎಂದವನೇ “ಸರಿ. ಬೆಹನ್ ಜೀ ಬೇಗ ಮನೆ ಸೇರ್ಕೊಳಿ” ಎಂದು ತಾನೂ ಅಂಗಡಿಗೆ  ಬೀಗ ಹಾಕಿ ತನ್ನ ಮನೆ ಕಡೆ ಧಾವಿಸಿದ.

ಅವನಿಗೆ ಮೌನವಾಗಿ‌ ಕೈಮುಗಿದು ಮುಖ್ಯ ರಸ್ತೆಯಲ್ಲಿ ವಾಪಸ್ಸಾಗುವ ಧೈರ್ಯವಾಗದೆ ಸಂದಿಗೊಂದಿಯಲ್ಲಿ‌ ನುಸುಳುತ್ತಾ, ಎರಡು ಕಾಲೊನಿಗಳ ಕಂಪೌಂಡ್ ಹಾರಿ ಒಂದಿಷ್ಟು ಕೈ ಕಾಲು ತರಚಿಸಿಕೊಂಡು ನಮ್ಮ ಪ್ಲಾಟ್ ಬಳಿ ಬಂದಾಗ ಹೆಚ್ಚೂ ಕಡಿಮೆ ಇಡೀ ಕಾಲನಿಯ ಜನ ಗ್ರೌಂಡ್ ಪ್ಲೋರಿನಲ್ಲಿದ್ದ ನಮ್ಮ ಮನೆಯ ಮುಂದೆ ಸೇರಿದ್ದರು.

ಅಮ್ಮ ಎಷ್ಟೊತ್ತಾದರೂ ಬಾರದುದನ್ನು ನೋಡಿ ನನ್ನ ಮಕ್ಕಳು ಬೆದರಿ ಹೊರಗೆ ಬಂದು ಅಮ್ಮನನ್ನು ಕಾಣದೆ,

“ಅಮ್ಮಾ ಬೇಕು. ಅಮ್ಮಾ ಬೇಕು. ನಮ್ಮಮ್ಮ ಬೇಕು” ಎಂದು‌ ಕಂಗಾಲಾಗಿ ಅಳುತ್ತಿದ್ದಾರೆ.  ಚಾಕ್ಲೆಟ್ ಬಿಸ್ಕತ್ತು‌ ಕೊಟ್ಟು ಸ್ವಲ್ಪ ಸಂತೈಸುವ ಯಾರ ಪ್ರಯತ್ನವೂ ಸಫಲವಾಗದೆ ಇನ್ನೂ ಹೆಚ್ಚು ಹೆಚ್ಚು ಹೃದಯ ವಿದ್ರಾವಕವಾಗಿ ರೋಧಿಸುತ್ತಿದ್ದಾರೆ. ಮಕ್ಕಳ ಆಕ್ರಂದನ ಕೇಳಿದ್ದೇ ಬಾಣದಂತೆ ಗುಂಪನ್ನು ಸೀಳಿಕೊಂಡು ನುಗ್ಗಿ ಅಳುತ್ತಾ ಎದೆಗಪ್ಪಿಕೊಂಡೆ. ಅಷ್ಟು ಹೊತ್ತು ಅನುಭವಿಸಿದ ಭಯ ದಿಗಿಲು, ಜೀವಂತ ಉಳಿದು ಮಕ್ಕಳನ್ನು ಕಾಣುತ್ತಿರುವ ಸಂತೋಷಕ್ಕೆ ನಿರ್ಲಜ್ಜೆಯಿಂದ ನನ್ನ ಕಣ್ಣುಗಳಲ್ಲಿ‌ ಗಂಗಾ‌ಪ್ರವಾಹ.

ನನ್ನನ್ನು ನೋಡಿ ಸ್ತಂಭಿತರಾದ‌ ಕಾಲನಿಯ ಜನಗಳ ಕಣ್ಣಲ್ಲಿ‌ ನಂಬಲಾಗದ ಆನಂದಾಶ್ಚರ್ಯ.‌

“ಮಿಸೆಸ್ ಮೂರ್ತಿ, ಯು ಆರ್‌ ಅಲೈವ್!!?? ಥ್ಯಾಂಕ್ ಗಾಡ್”.

” ಮಿಸೆಸ್ ಮೂರ್ತಿ ಆಪ್ ಜಿಂದಾ ಹೈ!!? ಭಗವಾನ್ ಕೊ ಲಾಖ್ ಲಾಖ್‌ ಶುಕ್ರಿಯಾ”

ನನ್ನನ್ನು ಯಾರೋ ಕೊಂದು ಹಾಕಿದ್ದಾರೆಂಬ ನಿಶ್ಚಯಕ್ಕೆ ಬಂದು ಮುಂದೇನು ಮಾಡಬೇಕು‌ ಎಂದು ದಿಕ್ಕು ತೋಚದೆ ಭಯಪಟ್ಟುಕೊಂಡಿದ್ದವರೆದುರಿಗೆ ಪವಾಡವೇನೋ‌ ಎಂಬಂತೆ ನಾನು ಜೀವಂತ‌ ನಿಂತಿದ್ದೆ. ಭಾವೋದ್ವೇಗದಿಂದ ನನ್ನನ್ನು ಅಲ್ಲಿನ ಗೆಳತಿಯರು ಅಪ್ಪಿಕೊಂಡಾಗ ಹಲವರ ಕಣ್ಣಲ್ಲಿ‌ ಆನಂದಾಶ್ರು.

ಇಲ್ಲ ಸಲ್ಲದ ಸುದ್ದಿಗಳಿಂದ ಪರಿಸ್ಥಿತಿ ಇನ್ನೂ‌ ವಿಕೋಪಕ್ಕೆ ಹೋದೀತೆಂದು ಎಲ್ಲಾ ತರಹದ ಸಂಪರ್ಕಗಳನ್ನೂ ಸ್ಥಗಿತಗೊಳಿಸಿದ್ದರು. ನಮ್ಮ ಮನೆಯಲ್ಲಿ ಟೆಲಿಫೋನ್ ಇರಲಿಲ್ಲ. ಪತ್ರಗಳೂ ಬಟವಾಡೆಯಾಗುತ್ತಿರಲಿಲ್ಲ. ಹಾಗಾಗಿ‌ ಆಗ ದಾವಣಗೆರೆಯಲ್ಲಿದ್ದ ನನ್ನ ಅಮ್ಮ ಅಪ್ಪನಿಗಾಗಲೀ, ಅಕ್ಕ ತಂಗಿಯರಿಗಾಗಲೀ, ಬೆಂಗಳೂರಿನ ಅತ್ತೆ‌ಮಾವ, ಕಡೆಗೆ ನನ್ನ ಪತಿ ಯಾರೊಬ್ಬರಿಗೂ ನಾವಿಲ್ಲಿ ಏನೇನು ಅನುಭವಿಸುತ್ತಿದ್ದೇವೆಂಬ ಕನಿಷ್ಠ ಕಲ್ಪನೆಯೂ ಇರಲಿಲ್ಲ. “ಹೇಗಿದ್ದೀಯ” ಎಂಬ ಒಂದು ಕಕ್ಕುಲಾತಿಯ ಮಾತಿಗಾಗಿ ಹೃದಯ ಹಲುಬಿ‌ ಹಲುಬಿ ಹಂಬಲಿಸಿ ಚಾತಕಪಕ್ಷಿಯಂತೆ ಕಾಯುತ್ತಾ ರೋಧಿಸುತ್ತಿತ್ತು.

ಈಗಲೂ ಆ ಅನುಭವಗಳ ನೆನಪು ನನ್ನ ನರನಾಡಿಗಳಲ್ಲಿ‌ ನಡುಕ ಹುಟ್ಟಿಸುವುದು ಸುಳ್ಳಲ್ಲ.

– ರತ್ನ 

9 Responses

 1. km vasundhara says:

  ಅಬ್ಬಾ… ಎಂತಹಾ ಮೈ ನಡುಗಿಸುವ ಘಟನೆಗೆ ನೀವು ಸಾಕ್ಷಿಯಾಗಿದ್ದೀರಿ… ಓದಿಯೇ ಭಯಪಟ್ಟೆ.. ಬರವಣಿಗೆಯಲ್ಲಿ ವಿಷಯವನ್ನು ಸಶಕ್ತವಾಗಿ ನಿರೂಪಿಸುವ ಕಲೆ ನಿಮಗೆ ಇದೆ. ಬರೆಯಿರಿ…

 2. Hema says:

  ಪುನರ್ಜನ್ಮವನ್ನೇ ಪಡಿದಿದ್ದೀರಿ. ಮೈನವಿರೇಳಿಸುವ ಬರಹ! ಆ ಸಮಯದಲ್ಲಿ ಪ್ರಕ್ಷುಬ್ದ ತಾಯಿಯಾಗಿ ನಿಮ್ಮ ಸಂಕಟ, ಮಕ್ಕಳ ಅಸಹಾಯಕತೆ…ನೆನೆಸಿಕೊಂಡೇ ಭಯವಾಗುತ್ತಿದೆ!

 3. Anonymous says:

  ಮೈ ನಡುಗಿ ಹೋಯಿತು.ತುಂಬಾ ಚೆನ್ನಾಗಿ ನಿಮ್ಮ ಅನುಭವ ನಿರೂಪಿಸಿದ್ದೀರಿ.ನಾನು ನಿಮ್ಮ ಬರವಣಿಗೆಯ ಶೈಲಿಯ ಫ್ಯಾನ್ ಆಗಿಬಿಟ್ಟಿದ್ದೇನೇ ಮೇಡಂ…

 4. ನಯನ ಬಜಕೂಡ್ಲು says:

  ಅಬ್ಬಾ…

 5. ಬಿ.ಆರ್.ನಾಗರತ್ನ says:

  ಬದುಕಿನ ಬುತ್ತಿ ಬಿಚ್ಚಿದಾಗ ಆದ ಅನುಭವ ಅನುಭವಿಸಿದ ವರಿಗೇ ಗೊತ್ತು .ಕಾಣದ ಕೈಗಳ ಶಕ್ತಿ ಊಹೆ ಗೂ ನಿಲುಕದ್ದು.ತುಂಬಾ ಚೆನ್ನಾಗಿ ನಿರೂಪಿಸಿದೀರಾ ಮೇಡಂ.ಅಭಿನಂದನೆಗಳು.

 6. Krishnaprabha says:

  ಅಬ್ಬಾ.. ಓದುತ್ತಿದ್ದಂತೆ ಕಣ್ಣೀರಧಾರೆ… ನಿಮ್ಮ ವಿವರಣೆಯ ಶೈಲಿಯೇ ಆ ದಿನದ ಘಟನೆಗಳು ನಿಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುವ ಭಾವತೀವ್ರತೆಯ ಪ್ರತಿಬಿಂಬಿಸಿದೆ

 7. Anonymous says:

  ರೋಚಕ ಅನುಭವ! ಉತ್ತಮ ಕಥಾ ಶೈಲಿ.

 8. ಶಂಕರಿ ಶರ್ಮ says:

  ಅಬ್ಬಬ್ಬಾ.. ದೇವರೇ..ಅತ್ಯಂತ ಭೀಕರ ಸನ್ನಿವೇಶವನ್ನು ಎದುರಿಸಿ ಗೆದ್ದವರು ನೀವು! ನಿರೂಪಣೆ ಚೆನ್ನಾಗಿದೆ ಎಂದು ಹೇಳಲು ಮನಸ್ಸಿಲ್ಲ..ಯಾಕೆಂದರೆ, ಇದನ್ನು ಬರೆಯುತ್ತಿರುವಾಗ ನೀವು ಅನುಭವಿಸಿದ ಪ್ರತಿ ಕ್ಷಣದ ಆತಂಕವನ್ನು ಪುನಃ ಆನುಭವಿಸಿರುತ್ತೀರಿ..ನನಗೊತ್ತು. ನೋವು..ನಲಿವನ್ನು ಹಂಚಿಕೊಂಡಿರುವಿರಿ.. ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: