ಅಳಿಸಿದ ಹಾಯ್ಕು
ಅದೊಂದು ದಿನ ಹೀಗೊಂದು ಹಾಯ್ಕು ಬರೆದಿದ್ದೆ. ಈಗೇಕೋ ಈ ಹಾಯ್ಕು ಸುಳ್ಳೆನಿಸುತ್ತಿದೆ. ಆದ್ದರಿಂದ ಈ ಹಾಯ್ಕುವನ್ನು ಅಳಿಸಿ ಹಾಕುತ್ತಿದ್ದೇನೆ. ಹಾಯ್ಕು ಕವಿಗಳು ಸತ್ಯವನ್ನಷ್ಟೇ ಬರೆಯಬೇಕು. ಸತ್ಯವನ್ನಷ್ಟೇ ಬರೆಯುತ್ತಾರೆ. ತಮ್ಮ ಪಂಚೇಂದ್ರಿಯಗಳ ಅನುಭವಕ್ಕೆ ದೊರೆತ ಸಂಗತಿಗಳನ್ನಷ್ಟೇ ಬರೆಯುತ್ತಾರೆ. ಸುಳ್ಳುಗಳನ್ನು ಅವರೆಂದೂ ಬರೆಯುವುದಿಲ್ಲ. ಪ್ರೇಮ ಕವಿಗಳು, ಇನ್ನಿತರೆ ಕವಿತೆ ಬರೆಯುವವರು ಮಾತ್ರ ಸುಳ್ಳು ಮತ್ತು ಕಲ್ಪನೆಗಳನ್ನು ಬರೆಯುವುದು. ನೀವೆ ಗಮನಿಸಿ, ಭತ್ತ ರಾಗಿ ಜೋಳದ ಹೊಲಗಳಲ್ಲಿ ತೆನೆ ಕಾಳುಗಟ್ಟುವ ಸಂದರ್ಭ ಹಕ್ಕಿಗಳು ಅಳಿಲುಗಳು ಹೊಲದ ತುಂಬಾ ನೆಗೆದಾಡುತ್ತಾ ರೈತನಿಗಿಂತಲೂ ಹೆಚ್ಚು ಸಂಭ್ರಮಿಸುತ್ತಿರುತ್ತವೆ.
ಆದರೆ ಹೂದೋಟದಲ್ಲಿ ಹಕ್ಕಿ ಅಳಿಲುಗಳಿಗೆ ಆಹಾರ ದೊರೆಯುವುದಿಲ್ಲ. ಆದ್ದರಿಂದ ಹಕ್ಕಿ ಅಳಿಲುಗಳು ಅಲ್ಲಿಗೆ ಹೋಗುವುದಿಲ್ಲ. ಸಂಭ್ರಮವು ಅಲ್ಲಿರುವುದಿಲ್ಲ. ಹೀಗೆಂದುಕೊಂಡಿದ್ದೆ. ಆದರೆ ನನ್ನ ನಿರೀಕ್ಷೆ ಸುಳ್ಳಾಯಿತು. ಇದನ್ನು ಗಮನಿಸಲೆಂದೇ ಮೇಲಿನ ಹಾಯ್ಕುವನ್ನು ಧ್ಯಾನಿಸುತ್ತಾ ಹೂದೋಟದಲ್ಲಿ ಹೆಜ್ಜೆ ಹಾಕುತ್ತಿದ್ದೆ. ಮತ್ತೊಂದು ಹೊಸ ಸಂಗತಿ ನನಗೆ ಗೋಚರಿಸಬಹುದು, ಈ ಹಾಯ್ಕುವಿಗೊಂದು ಹೊಸ ದೃಷ್ಟಿಕೋನ ನೀಡಬಹುದೆಂದು ಅಂದುಕೊಂಡೆ. ನಾನಂದುಕೊಂಡಂತೆ ಹೊಸ ಸಂಗತಿಯೊಂದು ನನ್ನ ಗಮನಕ್ಕೆ ಬಂದಿತ್ತು. ಆದರೆ ಹಾಯ್ಕುವಿಗೆ ಮತ್ತೊಂದು ಕೋನ ನೀಡುವ ಬದಲು ಸುಳ್ಳುಸುಳ್ಳೇ ಬರೆದ ಹಾಯ್ಕುವನ್ನು ಅಳಿಸಬೇಕಾಯ್ತು. ಸತ್ಯವಷ್ಟೇ ಶಾಶ್ವತ, ಸುಳ್ಳಿಗೆ ಆಯಸ್ಸು ಕಮ್ಮಿ. ಜೋಳ, ರಾಗಿಯ ಹೊಲಗಳಿಗೆ ಆಹಾರ ಅರಸಿ ಬರುವ ಹಕ್ಕಿ ಅಳಿಲುಗಳು ಮನುಷ್ಯರ ಹೆಜ್ಜೆ ಸಪ್ಪಳ, ನೆರಳಿನಾಕಾರ ಕಂಡು ಕೇಳಿದರು ಹೊಲದಿಂದ ದೌಡಾಯಿಸುತ್ತವೆ. ಹತ್ತಿರದ ಮರವೇರಿ ಕುಳಿತುಬಿಡುತ್ತವೆ. ಬಹುಶಃ ರೈತನ ಹೊಲದಲ್ಲಿ ಕದಿಯುತ್ತಿದ್ದೇವೆ ಎಂಬ ಕಳ್ಳತನದ ಭಾವ ಅವುಗಳದ್ದು. ಅಥವಾ ಮನುಷ್ಯರಿಂದ ನಮಗೆ ತೊಂದರೆಯಾಗಬುದೆಂಬ ಭಯವೂ ಹೆಚ್ಚಿರಬಹುದು.
ಆದರೆ ಹೂದೋಟದಲ್ಲಿ ನೋಡಿ ಅದೇನು ಸಂಭ್ರಮ! ರಾಗಿ ಜೋಳದ ಹೊಲಕ್ಕೆ ತೆನೆಯಾಗುವ ಸಂದರ್ಭ ಹಕ್ಕಿ ಅಳಿಲುಗಳು ಬಂದು ಹೋಗುವಂತೆ, ಹೂದೋಟದಲ್ಲಿ ಹೂ ಮೊಗ್ಗುಗಳು ಮೂಡುವ ಸಂದರ್ಭದಲ್ಲಿ ದುಂಬಿಗಳು ಆಗಮಿಸುತ್ತವೆ. ಆದರೆ ಹಕ್ಕಿ ಅಳಿಲುಗಳಂತೆ ಮನುಷ್ಯರನ್ನು ಕಂಡೊಡನೆ ದುಂಬಿಗಳು ಹಾರಿಹೋಗುವುದಿಲ್ಲ. ಹೂದೋಟದಲ್ಲಿ ಹೂವುಗಳಷ್ಟೇ ಮಾನವನಿಗೆ ಸೇರಿದ್ದು. ಅದರೊಳಗಿನ ಮಕರಂದ ನಮ್ಮ ಸ್ವತ್ತು ಎಂಬಂತೆ ಸದ್ದಾದರೂ ನೆರಳು ಮೂಡಿದರು ಧ್ಯಾನಸ್ಥ ಸ್ಥಿತಿಯಲ್ಲಿ ದುಂಬಿಗಳು ಮಧುವ ಹೀರುವ ಕಾಯಕದಲ್ಲಿ ತೊಡಗಿರುತ್ತವೆ. ಮೊನ್ನೆ ಇದು ನನ್ನ ಗಮನಕ್ಕೆ ಬಂತು. ಹೂದೋಟದ ತುಂಬಾ ಸಡಗರದಿಂದ ಹಾರಾಡುತ್ತಿದ್ದ ದುಂಬಿಗಳು ಮಕರಂದ ಹೀರುತ್ತಿದ್ದವು. ಹೂದೋಟದಲ್ಲಿನ ಈ ಸಡಗರವನ್ನು ಕಣ್ತುಂಬಿಕೊಂಡ ಮೇಲೆ ಮೇಲಿನ ಹಾಯ್ಕುವನ್ನು ಅಳಿಸಬೇಕಾಯಿತು.
-ನವೀನ್ ಮಧುಗಿರಿ
ಪ್ರಕೃತಿ ನಿಯಮ ಪ್ರತಿ ಯೊಂದು ಜಿವಿಗು ಹಹಾರದ ಹವಷ
ವಿಶ್ವ ಸೃಷ್ಟಿ ಕವಿ ದೃಷ್ಟಿಗಳ ಸಮನ್ವಯವೇ ಕಾವ್ಯ/ ಸಾಹಿತ್ಯದ ರಸಧಾರೆಗೆ ಹೂರಣ … ಬರಹ ಬಹಳ ಚೆನ್ನಾಗಿದೆ.
ನಿಮ್ಮ ಬರಹದಲ್ಲಿ ಬರುವ ಪ್ರಕೃತಿ ವರ್ಣನೆ ಬಹಳ ಚಂದ.
ಒಳಗಣ್ಣು ಕಂಡದ್ದನ್ನು ಹೊರಗಣ್ಣು ನೋಡಿ, ಹಾಯ್ಕು ಅಳಿಯಿತು…
ಸಹಜ ನಿಸರ್ಗದ ಭಾವಪೂರ್ಣ ವರ್ಣನೆ ಸೊಗಸಾಗಿದೆ.