ಈಗಲೀಗಲೆ ಕಾಣಲಾರೆ..
ಯಾವ ಬೇಗುದಿಯಲೋ ಅದಾವ
ಸಂತಸದಲೋ ಯಾರೋ ಹೊಸೆದ
ಬತ್ತಿಗಳಿಗೆ ನಾನಿಲ್ಲಿ ಬೆಂಕಿಯ ಕಿಡಿಯನಿತ್ತೆ.
ಹೊತ್ತಿ ಉರಿಯಿತೋ ಜ್ವಾಲೆ ಬೆಳಗಿ
ತೋರಿತೋ ದೀಪ ಆದರೀ ಕ್ಷಣಕೆ
ಅದನು ಕಾಣಲಾರೆ..
ಯಾರದೋ ಹಣೆಬೆವರು ಯಾವುದೋ
ಹನಿ ನೀರು; ನೆನೆದ ನೆಲಕೆ ಬಿದ್ದ ಬೀಜ-
ನೂರು ಬುತ್ತಿ; ಉಂಡು ಚೆಲ್ಲಿದ ಅನ್ನ
ಮತ್ತೆ ಹುಟ್ಟಲಾರದ ವ್ಯರ್ಥ ತುತ್ತು,
ಒಂದು ಬಾರಿಗೇ ಒಡೆದ ತತ್ತಿಯಲಿ
ಜೀವದುಸಿರು ಈ ಕ್ಷಣಕೆ ಕಾಣಲಾರೆ..
ಹದಗೊಂಡ ಹಸಿನೆಲಕೆ ಹುರಿದ ಕಾಳನು
ಬಿತ್ತಿ, ಹಸನಾದ ಹೊಸಫಸಲ ಬಯಕೆ
ಮೂಡಿ; ಬರಡು ಮರುಭೂಮಿಗೆ
ಹಾಲುಮಳೆ ಹನಿಸಿ ಸುಗ್ಗಿ ಹೊತ್ತಿಗೆ
ಕೊಯ್ಲಿನ ಸಂತಸ ನಾ ಎಂದೂ ಕಾಣಲಾರೆ..
ಫಲಿತಾಂಶ ಕಂಡ ಮೇಲೆ ಪರಿಣಾಮ
ಬೇರೆ. ಕ್ರಿಯೆಯು ಉತ್ತಮವಿರೆ, ಅಂತ್ಯದಲಿ
ದೊರಕಲಾರದೆ ಜಯ? ಭರವಸೆಯ
ಕನಸನು ಕಾಣಲಾರದೆ ನಾ ಉಳಿಯಲಾರೆ..
ಕಾಯುವಿಕೆಗೂ ಮುನ್ನ ಸುಖಾ
ಸುಮ್ಮನೆ ಕಾಲ ಕಳೆಯಲಾಗದು;
ನಾಳಿನ ಬೆಳಕನ್ನು ಈಗಲಿನ ಕತ್ತಲೆಯ
ಕೋಣೆಯಲಿ ನಾನಾದರೂ ಹೇಗೆ
ಕಾಣುವುದು ! ಹೊಸೆಯಲಾರದೆ ಬತ್ತಿ ,
ಹಚ್ಚಲಾರದೆ ದೀಪ….
-ವಸುಂಧರಾ ಕದಲೂರು
Nice madam ji, ಅರ್ಥವತ್ತಾಗಿದೆ ಕವನ
ಬರಡು ಮರುಭೂಮಿಗೆ
ಹಾಲುಮಳೆ ಹನಿಸಿ ಸುಗ್ಗಿ ಹೊತ್ತಿಗೆ
ಕೊಯ್ಲಿನ ಸಂತಸ ನಾ ಎಂದೂ ಕಾಣಲಾರೆ..ಈ ಸಾಲು ಬಹಳ ಇಷ್ಟವಯಿತು. ಓದುಗರನ್ನು ಚಿಂತನೆಗೆ ಹಚ್ಚುವ ಕವನ.
.
ಪ್ರಯತ್ನವಿಲ್ಲದೆ ಫಲಿತಾಂಶ ಸಿಕ್ಕದು.ಆದರೆ ಸುಖಾಸುಮ್ಮನೆ ..
ಬಯಸಿದರೆ.. ಹೇಗೆ. ಚಿಂತನೆಗೆ ಹಚ್ಚುವ ಕವನ.ಚೆನ್ನಾಗಿದೆ.ಅಭಿನಂದನೆಗಳು ಮೇಡಂ
ಚೆನ್ನಾಗಿದೆ ಕವನ…ಅಂತ್ಯದಲ್ಲಿಯಾದರೂ ಜಯ ಸಿಗಬೇಕು..ಭರವಸೆಯ ದೀಪ ಭವಿಷ್ಯದ ದಾರಿದೀವಿಗೆ
ಭರವಸೆಯ ಬೆಳಕು, ಅದುವೇ ಜೀವನ ಪಥದ ದೀವಿಗೆ.. ಹದಗೊಂಡ ನೆಲಕೆ ಹುರಿದ ಕಾಳನು ಬಿತ್ತಿ ಬೆಳೆ ತೆಗೆಯಲಸಾಧ್ಯ..ಮುನ್ನುಗ್ಗುವ ಛಲವೇ ಬದುಕಿನಲಿ ಬೇಕು ನಿರಂತರ.. ಮಾರ್ಮಿಕ , ಸೊಗಸಾದ ಕವನ..