ನನ್ನೊಳಗಿನ ಭ್ರೂಣ.
ಅಮ್ಮಾ,
ನಿನ್ನ ಗರ್ಭದೊಳಗಿನ ಬೆಚ್ಚಗಿನ ಗೂಡಿನಲಿ
ಕಣ್ಮುಚ್ಚಿ ಪಿಂಡವಾಗಿ ರೂಪುಗೊಳ್ಳುತ್ತಿದ್ದೇನೆ
ಗಂಡೆಂದು ಭ್ರಮಿಸಿ ಕಲ್ಪನೆಯ ಹರಿಯಬಿಡಬೇಡ
ನಿನ್ನಂತೆಯೇ ನಾನು ಹೆಣ್ಣು
ಹಾಗೆಂದು ನನ್ನ ಹಿಚುಕಬೇಡ.
ಅವರಿವರ ಮಾತು ಕೇಳಿ
ಇಳಿಯಬೇಡ ನೀನು ನೋವಿನಾಳಕ್ಕೆ.
ಕಟ್ಟಿಕೊಳ್ಳಬೇಡ ನಿನ್ನ ಸುತ್ತ
ದುಃಖ ತುಂಬಿದ ಕೋಟೆ
ನಾಲ್ಕು ಗೋಡೆಗಳ ಮಧ್ಯೆ ಮತ್ತೊಂದು ಹೆಣ್ಣಿನ
ಹೆರಿಗೆಯಾಗುವುದೆಂಬ ಭಯಬೇಡವಮ್ಮಾ,
ಭುವಿಯೊಂದೇ ಅಲ್ಲ ಕಣೆ ಅಮ್ಮಾ
ಆಗಸದುದ್ದಕ್ಕೂ ಕಣ್ಣ ಹರಿಯಬಿಡು
ಅರಿವಾಗುವುದು ಅಗೋಚರ ನಿತ್ಯಸತ್ಯ.
ಮಾತು ಬಾರದ ಹಕ್ಕಿ, ಸುಖಿಸುತ್ತಿದೆ ಕಾಳ ಹೆಕ್ಕಿ.
ನೀ ಸಾಧಿಸಲಾಗದ್ದನ್ನು
ನಾ ಸಾಧಿಸಲು ಬಿಡು,
ನೀ ಎಂದುಕೊಂಡ ಎತ್ತರಕ್ಕೆ
ನಾ ಏರುತ್ತೇನೆ ನೋಡು,
ಒಮ್ಮೆ ನನ್ನನ್ನು ಧರೆಗಿಳಿಸಿಬಿಡು
ಹಾಲಿಗೆ ನೀರು ಸೇರಿಸಿ ಕುಡಿಸಿಬಿಡು
ಜನ್ಮ ಕೊಟ್ಟ ನಿನ್ನ ಹೆಸರನ್ನು
ಇತಿಹಾಸದ ಉಸಿರಾಗಿಸಿ ಸುಖಿಸುತ್ತೇನೆ ನೋಡು.
ಅಮ್ಮಾ ..ಹಿಚುಕಬೇಡವೇ..ನನ್ನ
ಕೊಲ್ಲಬೇಡವೇ…ನನ್ನಾಸೆಗಳನ್ನ.
-ಬಿ.ಆರ್.ನಾಗರತ್ನ. ಮೈಸೂರು.
ಭಾವಾರ್ಥ ಬಹಳ ಆಳವಾಗಿ ಇದೆ
ತುಂಬಾ ಚೆನ್ನಾಗಿದೆ.
ವಾವ್! ಸಕತ್ತಾಗಿದೆ.
ಬದುಕಲು, ಬೆಳೆಯಲು ಹೆಣ್ಣಿಗೆ ಬಿಟ್ಟರೆ ಅವಳಿಂದ ಸಾಧಿಸಲಾಗದು ಯಾವುದು ಇಲ್ಲ.
ಚೆನ್ನಾಗಿದೆ
ಧರೆಯಲಿಳಿಯಬಿಡು ಏರುವೆನು ಆಗಸದೆತ್ತರಕೆ-ಚನ್ನಾ ಗಿ ದೆ, ಮಾತೆಯ ಪ್ರೀತಿ ಯ ಆಳ-ಎತ್ತರ ಅಳತೆಗೆ ಮೀರಿದೆ
ಅರ್ಥಪೂರ್ಣ ಕವನ.
‘ತಾಯಿ’ಗೆ ಧೈರ್ಯ ತುಂಬುವ ಸಾಲುಗಳುಳ್ಳ ಚೆಂದದ ಕವನ . ಇಷ್ಟವಾಯಿತು
ನಾನು ಬರೆದು ಪ್ರಸ್ತುತಿ ಪಡಿಸಿದ ಕವನವನ್ನು ಓದಿ ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ತಿಳಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು.
ಭಾವಪೂರ್ಣವಾಗಿದೆ. ಮನತಟ್ಟಿದೆ.
ಇಂದಿಗೂ ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳ ಜನನದ ಬಗ್ಗೆ ಹೆತ್ತವರಿಗೆ ಇರುವ ಭಯದಿಂದ ನಡೆಯುತ್ತಿರುವ ಕ್ರೌರ್ಯವನ್ನು ಬಿಂಬಿಸುವ ಕವನ ಮನ ಮುಟ್ಟುತ್ತದೆ.. ತಟ್ಟುತ್ತದೆ.. ಭಾವಪೂರ್ಣ ಕವನ…ಧನ್ಯವಾದಗಳು.