ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 32

Share Button

ಸಂಗ್ರಹಾಲಯದ ಸವಿನೋಟ

ಸುಂದರವಾದ ಸೂರ್ಯೋದಯ, ಯುದ್ಧ ಸ್ಮಾರಕಗಳನ್ನು ಕಣ್ತುಂಬಿಕೊಂಡಾಗ, ಸಮಯ 7:30..ಬೆಳಗ್ಗಿನ ಉಪಹಾರಕ್ಕೆ ನಮ್ಮೆಲ್ಲರ ಉದರ ಸಜ್ಜಾಗಿತ್ತು. ರುಚಿಕಟ್ಟಾದ ತಿಂಡಿಯನ್ನು ಸಮೃದ್ಧವಾಗಿ ಸವಿದು ಹೊರಟೆವು, ಡಾರ್ಜಿಲಿಂಗ್ ತಿರುಗಾಟಕ್ಕೆ. ಅದಾಗಲೆ ಗಂಟೆ ಒಂಭತ್ತು. ಮನಸ್ಸು ತುಂಬಾ ಕುತೂಹಲ, ಖುಷಿ!  ನಮ್ಮ ವಾಹನಗಳು ಮೊದಲಿಗೆ ಅಲ್ಲಿಯ ಪ್ರಾಣಿ ಸಂಗ್ರಹಾಲಯ ಮತ್ತು ಪಾರ್ಕ್ ಜೊತೆಗೂಡಿರುವ PNH ಪಾರ್ಕ್, ಪದ್ಮಜ ನಾಯ್ಡು ಪ್ರಾಣಿಶಾಸ್ತ್ರೀಯ ಉದ್ಯಾನವನ (Padmaja Naidu Himalayan Zoological Park and  Himalayan Mountaineering Institute) ನೋಡಲು ಹೊರಟೆವು.

ಸಾಮಾನ್ಯವಾಗಿ ಪರ್ವತ ಪ್ರದೇಶದ ರಸ್ತೆಗಳು ಕಡಿದಾಗಿ, ಅತಿ ಕಠಿಣ ತಿರುವು ಹಾಗೂ ಏರಿಳಿತಗಳನ್ನು ಹೊಂದಿರುತ್ತವೆ. ಅಂತಹ ರಸ್ತೆಯಲ್ಲಿ ಓಡಿದವು ನಮ್ಮ ಗಾಡಿಗಳು. ಬೆಳಗ್ಗಿನ ತಿಳಿ ಬಿಸಿಲು ಹರಡಿದ್ದರಿಂದ ಚಳಿಯ ತೀವ್ರತೆ ಕಡಿಮೆಯಾಗಿತ್ತು. ದಟ್ಟ ವನಸಿರಿಯ ಸೊಬಗು ಮನತುಂಬಿದರೂ, ನಿರೀಕ್ಷಿಸಿದಷ್ಟು ಸುಂದರವಾಗಿ ಕಾಣಲಿಲ್ಲ, ನಾವಿದ್ದ ಡಾರ್ಜಿಲಿಂಗ್ ನಲ್ಲಿ ಸ್ವಚ್ಛತೆಯ ಕೊರತೆ ಎಲ್ಲೆಲ್ಲೂ ಎದ್ದು ಕಾಣುತ್ತಿತ್ತು… ಬಾಲಕೃಷ್ಣರು ಈ ಮೊದಲೇ ಹೇಳಿದ ಮಾತು ನಿಜವೆನ್ನಿಸಿ, ಸ್ವಲ್ಪ ನಿರಾಸೆಯೂ ಆಯಿತೆನ್ನಬಹುದು. ಉದ್ಯಾನವನದ ಮುಂದೆ, ನೂರಾರು ಪ್ರವಾಸಿಗರು ಟಿಕೆಟ್ ಗಾಗಿ ಕ್ಯೂ ನಿಂತಿರುವುದು ಕಂಡಿತು. ಹಿಂದುಳಿದ ನಮ್ಮ ಪ್ರವಾಸಿ ಬಂಧುಗಳ ಮಗದೊಂದು ತಂಡವು  ನಮ್ಮನ್ನು ಸೇರುವುದಕ್ಕಾಗಿ  ಕಾಯುತ್ತಾ ಕುಳಿತೆವು.

ಸುಮಾರು 67.5 ಎಕರೆಗಳಷ್ಟು ಜಾಗದಲ್ಲಿ ಪಸರಿಸಿಕೊಂಡಿರುವ ಈ ಉದ್ಯಾನವನವನ್ನು, ದೇಶದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ್ತಿ ಸರೋಜಿನಿ ದೇವಿ ನಾಯ್ಡು ಅವರ ಮಗಳು ಪದ್ಮಜ ನಾಯ್ಡು ಅವರ ನೆನಪಿನಲ್ಲಿ, 1975ರಲ್ಲಿ ಅಂದಿನ ಪ್ರಧಾನಿಗಳಾಗಿದ್ದ ಇಂದಿರಾಗಾಂಧಿಯವರು ಲೋಕಾರ್ಪಣೆ ಮಾಡಿದರು. ನಮ್ಮ ದೇಶದ ಅತೀ ಎತ್ತರ(ಸಮುದ್ರಮಟ್ಟದಿಂದ ಸುಮಾರು 7000ಅಡಿ)ದಲ್ಲಿರುವ ಪ್ರಾಣಿ ಸಂಗ್ರಹಾಲಯ ಇದಾಗಿದೆ. ಆದ್ದರಿಂದ ಶೀತ ಪ್ರದೇಶದಲ್ಲಿ ಜೀವಿಸಬಲ್ಲ ಪ್ರಾಣಿಗಳನ್ನು ಮಾತ್ರ ಇಲ್ಲಿ ಇರಿಸಬೇಕಷ್ಟೆ. ಇಲ್ಲಿಯ ನಿರ್ವಹಣೆ ವೆಚ್ಚವನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳೆರಡೂ ಹಂಚಿಕೊಳ್ಳುತ್ತವೆ.

ಎಲ್ಲರೂ ಸೇರಿದಾಗ, ಗಣೇಶಣ್ಣ ತಲೆ ಎಣಿಸಿ, ಲೆಕ್ಕ ಸರಿಯಾಗಿದೆಯೆಂದು ಖಾತರಿಪಡಿಸಿಕೊಂಡು, ಗೇಟಿನೊಳಗೆ ಕರೆದೊಯ್ದರು. ವಿಶಾಲವಾದ ರಸ್ತೆ ಸ್ವಲ್ಪ ಏರುದಾರಿಯಲ್ಲಿ ಸಾಗಿತ್ತು. ನಮಗೆ ವಿವರಿಸಲು ಒಳ್ಳೆಯ ಮಾರ್ಗದರ್ಶಿಯನ್ನು ಕೂಡಾ ನಿಯೋಜಿಸಿದ್ದರು, ಬಾಲಣ್ಣನವರು. ಎರಡೂ ಪಕ್ಷಗಳಲ್ಲಿ, ಎತ್ತರದ ತಂತಿ ಬೇಲಿಯೊಳಗೆ  ಪ್ರಾಣಿಗಳು ಆಹಾರ ಸೇವಿಸುತ್ತಿರುವುದು ಕಂಡುಬಂತು. ಎತ್ತರದ ಶೀತ ಪ್ರದೇಶಗಳಲ್ಲಿಯೇ ವಾಸಿಸುವಂತಹ ಕೆಲವು ವಿಶೇಷ ಪ್ರಾಣಿಗಳ ಸಂರಕ್ಷಣೆ  ಹಾಗೂ  ಅಭಿವೃದ್ಧಿಯ ಕಾರ್ಯಗಳನ್ನು ನಡೆಸುತ್ತಿರುವುದು ತಿಳಿಯಿತು. ಪ್ರಾಣಿಗಳಿರುವ ಕೆಲವು ಕಡೆಗಳಲ್ಲಿ ವ್ಯವಸ್ಥೆ ಅಷ್ಟೇನೂ ಚೆನ್ನಾಗಿರುವಂತೆ ಕಾಣಲಿಲ್ಲ. ಎತ್ತರದ ಆಡುಗಳು(mountain goat), ಬೆಳ್ಳಗಿನ ಹಿಮ ಚಿರತೆ,  ಟಿಬೆಟ್ ನ ಎತ್ತರದ ತೋಳ  ಇತ್ಯಾದಿಗಳು ವಿಶೇಷ ಪ್ರಾಣಿಗಳ ಜೊತೆಗೆ ನೋಡಿದ ಇನ್ನೊಂದು ಅತೀ ಚಂದದ ಪ್ರಾಣಿ, ಕೆಂಪು ಪಾಂಡಾ. ಸಾಮಾನ್ಯ ಪಾಂಡಾವೇ ನೋಡಲು ತುಂಬಾ ಮುಗ್ಧ,ಮುದ್ದು, ಚಂದ. ವಿಶಾಲವಾದ ಹಸಿರು ವನದಲ್ಲಿರುವ ದೊಡ್ಡದಾದ ಮರಗಳ ಮೇಲೆ ಮತ್ತು ನೆಲದ ಮೇಲೆ ಓಡಾಡಿಕೊಂಡಿದ್ದ ಎರಡು ಮೂರು ಮುದ್ದಾದ  ಪಾಂಡಾಗಳು ಎಲ್ಲರ ಗಮನ ಸೆಳೆದವು. ಮನುಷ್ಯರನ್ನು ಕಂಡಾಗ ಸದ್ದಿಲ್ಲದೆ ಅಡಗಿ ಮುಖ ಮರೆಸಿಕೊಳ್ಳುವುದು ಕಂಡಾಗ ಮೋಜೆನಿಸಿತು. ಅಗಲವಾದ ಕಾಲುದಾರಿಯಲ್ಲಿ ಮೇಲಕ್ಕೆ ಹೋದಂತೆಲ್ಲ, ಪಂಜರಗಳಲ್ಲಿ ವಿವಿಧ ಪಕ್ಷಿಗಳು, ದೊಡ್ಡದಾದ ಗೂಡುಗಳಲ್ಲಿ ಭಯ ಹುಟ್ಟಿಸಿ ಮೈ ನವಿರೇಳಿಸುವ ಹಾವುಗಳು ಪ್ರಾಣಿಪ್ರಿಯರ ಗಮನ ಸೆಳೆದುವು. ವರ್ಷ ಒಂದಕ್ಕೆ ಸುಮಾರು ಮೂರು ಲಕ್ಷದಷ್ಟು ಪ್ರವಾಸಿಗರು ಭೇಟಿ ಕೊಡುವ ಈ ಪ್ರಾಣಿ ಸಂಗ್ರಹಾಲಯವನ್ನು ನೋಡಿದಾಗ ಅದನ್ನು ಇನ್ನೂ ಅಭಿವೃದ್ಧಿ ಪಡಿಸುವ ಅಗತ್ಯವಿದೆ ಎಂದೆನಿಸುವುದು ಸುಳ್ಳಲ್ಲ.

ಅದಾಗಲೇ ಗಂಟೆ 11:30. ಸುತ್ತಾಡಿಯಾದ ಬಳಿಕ,  ಎಲ್ಲರ ಮನವರಿತು,  ದ್ವಾರದ  ಮುಂಭಾಗದಲ್ಲಿದ್ದ ದೊಡ್ಡ ಮರದ ಸುತ್ತಲಿನ ಕಟ್ಟೆಯ ಮೇಲೆ ಎಲ್ಲರನ್ನೂ ಕುಳ್ಳಿರಿಸಿ, ಬೇಕಾದಷ್ಟು ಗೇರುಬೀಜ, ಒಣದ್ರಾಕ್ಷಿ, ಬಾದಾಮಿ ಇತ್ಯಾದಿ ಒಣ ಹಣ್ಣುಗಳನ್ನು ಮುಷ್ಟಿ ತುಂಬಾ  ಕೊಟ್ಟು ಹೊಟ್ಟೆ ತುಂಬಿಸಿದರು ಗಣೇಶಣ್ಣ. ಜೊತೆಗೇ, ಅಲ್ಲೇ ಪಕ್ಕದಲ್ಲಿದ್ದ ಪುಟ್ಟ ಅಂಗಡಿಯಿಂದ, ಬೇಕಾದವರಿಗೆಲ್ಲಾ ಟೀ ಸಪ್ಲೈ ಕೂಡಾ ಆಯಿತು. ಆ ಅಂಗಡಿಯಲ್ಲಿ ಚಹಾ ಖಾಲಿಯಾದಾಗ, ಇನ್ನೊಂದು ಕಡೆಯಿಂದ ಜ್ಯೂಸ್ ಗಳ ಬಾಟಲಿಗಳು ನಮ್ಮ ಕೈ ಸೇರಿದುವು.

ಆಮೇಲೆ ನಮ್ಮ ನಡಿಗೆ ಅಲ್ಲೇ ಪಕ್ಕದಲ್ಲಿದ್ದ ಪರ್ವತಾರೋಹಿಗಳ ತರಬೇತಿ ಕೇಂದ್ರದತ್ತ. ತರಬೇತಿ ಶಿಬಿರಗಳು ನಡೆಯುವ ಸಮಯ ಮೀರಿದ್ದರಿಂದ, ಅಲ್ಲಿದ್ದ ಮ್ಯೂಸಿಯಂ ವೀಕ್ಷಿಸುವ ಸಲುವಾಗಿ ಆ ಕಡೆಗೆ ಹೋದರೆ, ಅದರೊಳಗೆ ಪ್ರವಾಸಿಗರ  ದಂಡೇ ತುಂಬಿತ್ತು. ಈ ಸಂಗ್ರ‌ಹಾಲಯದಲ್ಲಿ ನೈಸರ್ಗಿಕ ಇತಿಹಾಸದ ಅನೇಕ ವಸ್ತುಗಳನ್ನು ತುಂಬಾ ಚೆನ್ನಾಗಿ  ಸಂರಕ್ಷಿಸಲ್ಪಟ್ಟಿತ್ತು. ಫ್ರಥಮ ಎವರೆಸ್ಟ್ ಶಿಖರಾರೋಹಿಗಳಾದ, ತೇನ್ ಸಿಂಗ್ ಮತ್ತು ಹಿಲೆರಿ ಉಪಯೋಗಿಸಿದ ವಸ್ತುಗಳು, ಪರ್ವತಾರೋಹಿಗಳು ಉಪಯೋಗಿಸುವಂತಹ ವಸ್ತುಗಳು, ಅಲ್ಲಿಯ ಸಾಂಪ್ರದಾಯಿಕ ಉಡುಗೆ- ತೊಡುಗೆ, ಆಯುಧಗಳು, ಇತ್ಯಾದಿಗಳು ಅತ್ಯಂತ ಅಚ್ಚುಕಟ್ಟಾಗಿ ಜೋಡಿಸಲ್ಪಟ್ಟಿದ್ದವು. ಎಲ್ಲವನ್ನೂ ಸವಿಸ್ತಾರವಾಗಿ ವಿವರಿಸಲು ಉತ್ತಮ ಗೈಡ್ ಕೂಡಾ ಜೊತೆಗಿದ್ದರು.. ಒಂದು ತಾಸು ಸರಿದುದೇ ತಿಳಿಯಲಿಲ್ಲ. ಸಂಗ್ರಹಾಲಯದಲ್ಲಿ ವಸ್ತುಗಳನ್ನೆಲ್ಲಾ  ನೆರಳು ಬೆಳಕಿನ ಅತ್ಯುತ್ತಮ ವ್ಯವಸ್ಥೆ ಮತ್ತು ಉಪಯುಕ್ತ ಮಾಹಿತಿಯಿಂದೊಡಗೂಡಿ  ಜೋಡಿಸಲ್ಪಟ್ಟಿರುವುದು ಗಮನಸೆಳೆಯಿತು.

ಸಂಗ್ರಹಾಲಯದ ಮುಂಭಾಗದಲ್ಲಿದ್ದ ಎಡ್ಮಂಡ್ ಹಿಲೆರಿಯ ಎತ್ತರವಾದ ಮೂರ್ತಿಯ ಮುಂದೆ ನಿಂತು ಎಲ್ಲರೂ ಫೋಟೋ ಕ್ಲಿಕ್ಕಿಸಿದ್ದಲ್ಲದೆ; ಸವಿನೆನಪಿಗಾಗಿ ಗ್ರೂಪ್ ಫೋಟೋ ಕೂಡಾ ಗಣೇಶಣ್ಣನ ಮೊಬೈಲ್ ಸೇರಿತು. ಅದಾಗಲೇ ಗಂಟೆ ಹನ್ನೆರಡು.. ಮಧ್ಯಾಹ್ನದ ಸವಿಯೂಟದ ನೆನಪಿನೊಂದಿಗೆ ಹೋಟೆಲ್ ಗೆ ಹಿಂತಿರುಗುವ ಸಿದ್ಧತೆಯಾದಾಗ ನೆನಪಾಯ್ತು, ಚಾರಣಿಗಳಿಗಾಗಿ ಇರುವ ತರಬೇತಿ ಕೇಂದ್ರ ನೋಡುವ ಅವಕಾಶ ಸಿಕ್ಕಿದರೆ ಚೆನ್ನಾಗಿತ್ತೆಂದು. ಜೊತೆಗೇ ಅದರ ಬಗ್ಗೆ ಪ್ರದರ್ಶಿಸಲ್ಪಡುವ ಕಿರುಚಿತ್ರ ನೋಡುವಾಸೆಯೂ ಮನದಲ್ಲಿತ್ತು. ಆದರೆ ಅದಾಗಲೇ ಸಮಯ ಮೀರಿದ್ದರಿಂದ ಅದೆರಡು ಕಾರ್ಯಕ್ರಮಗಳೂ ರದ್ದುಗೊಂಡವು. ಸಿಕ್ಕಿದ್ದನ್ನು ದಕ್ಕಿಸಿಕೊಂಡ ತೃಪ್ತಿ ನಮ್ಮೆಲ್ಲರದು. ಹಾಗೆಯೇ.. ಹೋಟೆಲ್ ದಾರಿ ಹಿಡಿದವು, ನಮ್ಮ ಕಾರುಗಳು…

ಈ ಪ್ರವಾಸಕಥನದ ಹಿಂದಿನ ಪುಟ ಇಲ್ಲಿದೆ:  ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 31

(ಮುಂದುವರಿಯುವುದು..)

-ಶಂಕರಿ ಶರ್ಮ, ಪುತ್ತೂರು.

4 Responses

  1. Jayalaxmi says:

    ಚೆನ್ನಾಗಿದೆ.

  2. ಶಂಕರಿ ಶರ್ಮರ ಪ್ರವಾಸ ಕಥನ ಚೆನ್ನಾಗಿ ಮೂಡಿಬರುತ್ತಿದೆ ಗೈಡಿನಂತೆ…

  3. ನಯನ ಬಜಕೂಡ್ಲು says:

    ಚೆನ್ನಾಗಿದೆ ಮೇಡಂ

  4. ಶಂಕರಿ ಶರ್ಮ says:

    ಮೆಚ್ಚುಗೆ ವ್ಯಕ್ತಪಡಿಸಿದ ನಯನ ಮೆಡಂ, ವಿಜಯಕ್ಕ ಹಾಗೂ ಜಯಲಕ್ಷ್ಮಿ ಮೇಡಂ… ತಮಗೆಲ್ಲರಿಗೂ ಧನ್ಯವಾದಗಳು..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: