ಎಡಚರು- ಪ್ರಕೃತಿ ವಿಸ್ಮಯದ ಭಾಜನರಿವರು
“ಮಾಮನಿಗೆ ಶೇಕ್-ಹ್ಯಾಂಡ್ ಮಾಡು ಪುಟ್ಟಾ” ಅಂದ ಅಮ್ಮನ ಮಾತು ಕೇಳಿದ ಮಗು ಎಡಗೈ ಮುಂದೆ ಚಾಚಿತು. “ಆ ಕೈ ಬೇಡ, ಪೊಲ್ಲು ಕೈ ಕೊಡು (ಚಂದದ ಕೈ ಕೊಡು)” ಅಂತ ಹೇಳುತ್ತಾ ಎಡದ ಕೈಯನ್ನು ಹಿಂದೆ ಸರಿಸಿ ಮಗುವಿನ ಬಲ ಕೈಯನ್ನು ಮುಂದಕ್ಕೆ ಚಾಚುವಂತೆ ಕಲಿಸುತ್ತಿದ್ದರು ಆ ಅಮ್ಮ. ಬಹುತೇಕ ಮನೆಗಳಲ್ಲಿ ಕಾಣುವಂತಹ ದೃಶ್ಯವಿದು. ಎಳವೆಯಿಂದಲೇ ಮಕ್ಕಳಿಗೆ ಬಲ ಕೈಯನ್ನು ಬಳಸಲು ಅಭ್ಯಾಸ ನೀಡುವಲ್ಲಿ ತಾಯಿ- ತಂದೆ ಹಾಗೂ ತಾತ, ಅಜ್ಜಿ ಎಲ್ಲರ ಪಾತ್ರವಿರುತ್ತದೆ. ಮೊದಲ ಅಕ್ಷರಾಭ್ಯಾಸವನ್ನು ದೇವರೆದುರು ಮಾಡುವಾಗಲೂ ಮಗುವಿನ ಬಲಕೈಯನ್ನು ಹಿಡಿದು ಮಾಡಿಸಲಾಗುತ್ತದೆ. ಮಗು ಎಡ ಕೈಯಲ್ಲಿ ಬಳಪ ಹಿಡಿದರೆ, ಕೂಡಲೇ ಅದನ್ನು ತಿದ್ದುವರು ತಾಯಂದಿರು. ಹದಿನೆಂಟನೆಯ ಶತಮಾನದಲ್ಲಿ ನಮ್ಮ ಭಾರತದಲ್ಲಿ ಮಾತ್ರವಲ್ಲ, ಇತರ ದೇಶಗಳಲ್ಲಿಯೂ ಎಡಚರನ್ನು ಕಂಡರೆ ಅವರು ಮಾಟಮಂತ್ರ ಮಾಡುವವರೆಂದು ಅಂದುಕೊಳ್ಳುತ್ತಿದ್ದರಂತೆ. ಎಡದ ಕೈಯನ್ನು ಶೌಚ ಕ್ರಿಯೆಯ ಸಂದರ್ಭದಲ್ಲಿ ಮಾತ್ರ ಬಳಸುವುದು ರೂಢಿಯಾಗಿತ್ತು. ಎಡದ ಕೈಯಲ್ಲಿ ದಾನ, ಹಣ ಕೊಡಬಾರದು, ಎಡದ ಕೈಯಲ್ಲಿ ಏನನ್ನು ಸ್ವೀಕರಿಸಬಾರದು. ಬಲದ ಕೈಯಲ್ಲಿಯೇ ಉಣ್ಣಬೇಕು. ಒಟ್ಟಿನಲ್ಲಿ ಬಲದ ಕೈಗೆ ಶ್ರೇಷ್ಠ ಸ್ಥಾನ, ಎಡದ ಕೈಗೆ ನಿಕೃಷ್ಟ ಸ್ಥಾನ. ಎಡಚರನ್ನು ತಾತ್ಸಾರ ಭಾವನೆಯಿಂದ ನೋಡುವುದು, ಕೀಳಾಗಿ ನೋಡುವ ದಿನಗಳಿದ್ದವು. ಅದಕ್ಕೋಸ್ಕರ ಯಾವುದಾದರೂ ಮಗು ಎಡದ ಕೈಯಿಂದ ಬರೆಯತೊಡಗಿದರೆ, ಹೊಡೆದು ಬಡಿದು ಬಲದ ಕೈಯನ್ನೇ ಉಪಯೋಗಿಸುವಂತೆ ಹೆತ್ತವರು ಮಕ್ಕಳ ಮೇಲೆ ಒತ್ತಡ ತರುತ್ತಿದ್ದರು.
ಸಾಧಾರಣವಾಗಿ ಹೆಚ್ಚಿನ ಜನರು ತಮ್ಮ ಎಲ್ಲಾ ವೈಯಕ್ತಿಕ ಹಾಗೂ ಇತರೇ ಕೆಲಸಗಳನ್ನು ಮಾಡಲು ತಮ್ಮ ಬಲ ಕೈಯನ್ನು ಬಳಸುವರು. ಬಲದ ಕೈಯನ್ನು ಜಾಸ್ತಿ ಬಳಸುವವರಿಗೆ ಬಲಚ ಅನ್ನುವರು. ಹೆಚ್ಚಿನವರೆಲ್ಲರೂ ಬಲಚರಾಗಿರುವುದರಿಂದ ಆ ಶಬ್ದವನ್ನು ಬಳಸುವುದು ಕಡಿಮೆ. ಆದರೂ ಅಲ್ಲೊಂದು ಇಲ್ಲೊಂದರಂತೆ ಕೆಲವರು ತಮ್ಮ ಎಡಕೈಯನ್ನು ಬಳಸುವುದುಂಟು. ಗುಂಪಿನಲ್ಲಿ ಬೇರೆಯಾಗಿ ಗುರುತಿಸುಕೊಳ್ಳುವಂತಹ ಎಡ ಕೈ ಬಳಸುವವರನ್ನು ಎಡಚರು ಅನ್ನುತ್ತಾರೆ. ಯಾವುದೇ ಕೆಲಸ ಮಾಡಲು ಹೊರಟರೂ ಇವರ ಎಡ ಕೈಯೇ ಮುಂದೆ ಬರುತ್ತದೆ. ಇನ್ನು ಇಂಗ್ಲೀಷಿನಲ್ಲಿ ಎಡಚರನ್ನು Southpaw (ಮುಖ್ಯವಾಗಿ ಕ್ರೀಡಾಳುಗಳಿಗೆ- ಬೇರೆ ರಂಗದಲ್ಲಿರುವವರಿಗೂ ಬಳಸುವರು) ಎಂದೂ, ಬಲಚರನ್ನು Northpaw ಎಂದೂ ಕೂಡಾ ಹೇಳುವರು. ಇನ್ನು ಕೆಲವೇ ಕೆಲವರು ಎರಡೂ ಕೈಗಳಿಂದ ಸಮನಾಗಿ ಕೆಲಸ ನಿರ್ವಹಿಸಬಲ್ಲರಂತೆ. ಅಂತಹವರನ್ನು ಇರ್ಕ್ಕೈ ಕುಶಲ (Ambidextrous) ಅನ್ನುವರು. ಸಮೀಕ್ಷೆಯ ಪ್ರಕಾರ ಪ್ರಪಂಚದ ಜನಸಂಖ್ಯೆಯ ಶೇಕಡಾ ಹತ್ತರಷ್ಟು ಜನರು ಎಡಚರಂತೆ!
ಎಡಚರಾಗಿದ್ದು ಇತಿಹಾಸ ಪ್ರಸಿದ್ಧರಾದ ವ್ಯಕ್ತಿಗಳ, ವಿಜ್ಞಾನಿಗಳ, ಕಲಾಕಾರರ, ಚಿತ್ರನಟರ, ಕ್ರಿಕೆಟ್/ಫುಟ್ಬಾಲ್/ಟೆನ್ನಿಸ್ ಆಟಗಾರರ ಉದ್ದ ಪಟ್ಟಿಯೇ ಇದೆ. ಅರಿಸ್ಟಾಟಲ್, ಚಾರ್ಲ್ಸ್ ಡಾರ್ವಿನ್, ಆಲ್ಬರ್ಟ್ ಐನ್ಸ್-ಸ್ಟೈನ್, ಮೇರಿ ಕ್ಯೂರಿ, ಸರ್ ಐಸಾಕ್ ನ್ಯೂಟನ್, ಲಿಯೋನಾರ್ಡೋ ಡಾ ವಿಂಚಿ, ಜೆನ್ನಿಫರ್ ಲಾರೆನ್ಸ್, ಟಾಮ್ ಕ್ರ್ಯೂಸ್, ಏಂಜೆಲಿನಾ ಜೋಲಿ, ಓಪ್ರಾ ವಿನ್-ಫ್ರೇ, ಅಮಿತಾಬ್ ಬಚ್ಚನ್, ವಿಷ್ಣುವರ್ಧನ್, ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ, ಬ್ರಿಯಾನ್ ಲಾರಾ, ಪೀಲೆ, ಮರಡೋನಾ, ಬಿಲ್ ಗೇಟ್ಸ್, ….ಹೀಗೆ ಉದ್ದ ಪಟ್ಟಿಯೇ ಇದೆ. ಇನ್ನೂ ಒಂದು ವಿಶೇಷವೆಂದರೆ ಜಗತ್ತಿನ ದೊಡ್ಡಣ್ಣ ಎನಿಸಿಕೊಂಡಿರುವ ಅಮೇರಿಕಾದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ, ಬಿಲ್ ಕ್ಲಿಂಟನ್, ಜಾರ್ಜ್ ಬುಷ್, ಜೆರಾಲ್ಡ್ ಫೋರ್ಡ್, ಹರ್ಬರ್ಟ್ ಹೂವರ್, ಹ್ಯಾರಿ ಟ್ರೂಮನ್, ರೊನಾಲ್ಡ್ ರೇಗನ್ ಎಲ್ಲರೂ ಎಡಚರಂತೆ. ಮಹಾತ್ಮ ಗಾಂಧಿ,.. ಲಿಯೋನಾರ್ಡೋ ಡಾ ವಿಂಚಿ, ರೊನಾಲ್ಡ್ ರೇಗನ್, ಮರಿಯಾ ಶರಪೋವಾ, .. ಇವರೆಲ್ಲಾ “ಇರ್ಕ್ಕೈ ಕುಶಲ” ರಂತೆ.
ಎಡಚರಲ್ಲಿ ಹೆಚ್ಚಿನವರು ಗಂಡಸರಾಗಿರುವುದು ಇನ್ನೊಂದು ಅಚ್ಚರಿಯ ಸಂಗತಿ. ಪ್ರಪಂಚದಲ್ಲಿರುವ ಅವಳಿಗಳಲ್ಲಿ ಶೇಕಡಾ ಇಪ್ಪತ್ತರಷ್ಟು ಅವಳಿಗಳಲ್ಲಿ ಎಡಚರು ಇದ್ದಾರೆ ಅಂತ ಸಮೀಕ್ಷೆಯೊಂದು ಹೇಳುತ್ತದೆ. ಎಡಚರು ಉಳಿದವರಿಗಿಂತ ವಿಭಿನ್ನವಾಗಿರುತ್ತಾರಂತೆ. ಅವರು ಜಾಸ್ತಿ ಚಿಂತನಶೀಲರಾಗಿರುವರು ಹಾಗೆಯೇ ಸೃಜನಶೀಲರು, ವಿಭಿನ್ನ ಆಲೋಚನೆಗಳುಳ್ಳವರು, ಅತಿ ಬುದ್ಧಿವಂತರು, ಗಣಿತದಲ್ಲಿ ಜಾಣರು ಎಂದು ವರದಿಗಳು ಹೇಳುತ್ತವೆ. ಎಡಚರಾಗಲು ಕಾರಣವೇನು ಅನ್ನುವುದರ ಬಗ್ಗೆ ಹಲವಾರು ಅಧ್ಯಯನಗಳು, ಸಂಶೋಧನೆಗಳು ನಡೆದಿವೆ, ನಡೆಯುತ್ತಿವೆ. ನರತಜ್ಞ ನಾರ್ಮನ್ ಗೆಶ್ ವಿಂಕ್ ಹೇಳುವಂತೆ ಮಗು ಗರ್ಭದಲ್ಲಿರುವಾಗ ಆಗುವ ಟೆಸ್ಟೊಸ್ಟಿರೋನ್ ಹಾರ್ಮೋನಿನ ಏರಿಳಿತದಿಂದಾಗಿ, ಹುಟ್ಟುವ ಮಗು ಎಡಚ ಆಗಬಹುದು. ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ಮನಃಶಾಸ್ತ್ರಜ್ಞರಾದ ಕ್ಲೇರ್ ಪೊರಾಕ್ ಅವರ ಸಂಶೋಧನೆಯ ಪ್ರಕಾರ, ಜೈವಿಕ ಹಾಗೂ ವಂಶಪಾರಂಪರ್ಯ ಕಾರಣಗಳು ಕೈಗಳ ಬಳಕೆಯನ್ನು ನಿರ್ಧರಿಸುತ್ತವೆ. ಡಿ ಜೀನ್ ಇದ್ದರೆ ಬಲಚರು, ಹಾಗೂ ಸಿ ಜೀನ್ ಇದ್ದರೆ ಎಡಚರು ಆಗುವರಂತೆ.
ದಿನ ನಿತ್ಯ ಬಳಸುವ ಹೆಚ್ಚಿನ ವಸ್ತುಗಳ ವಿನ್ಯಾಸ ಬಲಚರಿಗೆ ಅನುಕೂಲವಾಗುವಂತೆ ಇರುವ ಕಾರಣ, ಎಡಚರು ಕೆಲವೊಂದು ವಿಷಯಗಳಲ್ಲಿ ಪರದಾಡಬೇಕಾಗುತ್ತದೆ. ಎಡಚರು ಹೊಂದಿಕೊಳ್ಳಬೇಕಾಗುತ್ತದೆ. ಅದು ಎಡಚರ ಮುಂದಿರುವ ಸವಾಲು. ಉದಾಹರಣೆಗೆ ಎಡದ ಕೈಯಲ್ಲಿ ಬರೆಯುವ ವಿದ್ಯಾರ್ಥಿ ಉಳಿದ ವಿದ್ಯಾರ್ಥಿಗಳ ಮಧ್ಯದಲ್ಲಿ ಕುಳಿತುಕೊಂಡರೆ, ಬರೆಯಲು ಸಮಸ್ಯೆಯಾಗುವುದು. ಕಪ್ಪು ಹಲಗೆಯ ಮೇಲೆ ಬರೆಯುವಾಗ ಮೊದಲು ಬರೆದದ್ದು ಅಳಿಸಿಹೋಗುವುದು. ಕತ್ತರಿ ಬಳಸಲು ಅನಾನುಕೂಲವಾಗುವುದು, ಸ್ಪೈರಲ್ ನೋಟ್-ಪುಸ್ತಕದಲ್ಲಿ ಬರೆಯಲು ಕಷ್ಟವಾಗುವುದು, ಸಂಗೀತ ಉಪಕರಣಗಳನ್ನು ನುಡಿಸಲು ಕಷ್ಟವಾಗುವುದು. ಎಡಚರು ಎದುರಿಸುವ ಸವಾಲುಗಳ/ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು, Left Handers International Inc.,ಯನ್ನು ಸ್ಥಾಪಿಸಿದ ಡೀನ್ ಆರ್ ಕ್ಯಾಂಪ್-ಬೆಲ್ ಅವರು 1976 ರಲ್ಲಿ ಮೊದಲ ಬಾರಿಗೆ ವಿಶ್ವ ಎಡಚರ ದಿನವನ್ನು ಮೊತ್ತಮೊದಲಿಗೆ ಆಚರಿಸಿದರು. 1997 ರಲ್ಲಿ ಆಗಸ್ಟ್ 13- ವಿಶ್ವ ಎಡಚರ ದಿನ ಎಂದು ಅಧಿಕೃತವಾಗಿ ಘೋಷಿಸಲ್ಪಟ್ಟಿತು. ಪ್ರತಿವರ್ಷವೂ ಆಗಸ್ಟ್ 13ರಂದು ವಿಶ್ವ ಎಡಚರ ದಿನವನ್ನು ಆಚರಿಸಲಾಗುತ್ತದೆ. ಆ ದಿನದಂದು ಎಡಚರ ವಿಶೇಷತೆ ಹಾಗೂ ಭಿನ್ನತೆಯನ್ನು ಆಚರಿಸಲಾಗುತ್ತದೆ.
ಈಗ ಕಾಲ ಬದಲಾಗಿದೆ. ಎಡಚರಾಗುವುದು ಶಾಪದಿಂದಲ್ಲ ಅನ್ನುವ ಅರಿವು ಜನರಲ್ಲಿ ಮೂಡಿದೆ. ಎಡಚರನ್ನು ಯಾರೂ ತಾತ್ಸಾರದಿಂದ ನೋಡುವುದಿಲ್ಲ. ಬದಲಾಗಿ ಜೀವವೈವಿಧ್ಯದ ಕುರುಹಾದ ಎಡಚರು ಕೆಲಸ ಮಾಡುವ ಚೆಲುವನ್ನು ಕಣ್ತುಂಬಿಸಿಕೊಳ್ಳುವ ದಿನಗಳು ಬಂದಿವೆ. “ತನ್ನ ಮಗು ಎಡಚ, ದಯವಿಟ್ಟು ಮಗುವಿಗೆ ಬಲದ ಕೈಯಲ್ಲಿ ಬರೆಯಲು ಒತ್ತಾಯ ಹೇರಬೇಡಿ, ದಯವಿಟ್ಟು ನನ್ನ ಮಗುವಿಗೆ ಬೆಂಚಿನ ಎಡಬದಿಯಲ್ಲಿಯೇ ಕುಳಿತುಕೊಳ್ಳಲು ಅನುಮತಿ ನೀಡಿ” ಎಂದು ಹೆತ್ತವರು ಶಿಕ್ಷಕರಲ್ಲಿ ಮುಕ್ತವಾಗಿ ಹೇಳುವಂತಹ ದಿನಗಳು ಬಂದಿವೆ. ಎರಡು ಆಂಗ್ಲ ನುಡಿಮುತ್ತುಗಳೊಂದಿಗೆ ನನ್ನ ಲೇಖನ ಮುಗಿಸುವೆ.
“Life without left handed people wouldn’t be right”- C R Manske
“I may be left handed, but I am always right”- Anonymous.
-ಕೃಷ್ಣಪ್ರಭಾ, ಎಂ. ಮಂಗಳೂರು
ಎಡಕೈ ಮುಂದೆ ನನ್ನ ಮಗನಿಗೆ. ಸಮಾರಂಭಗಳಲ್ಲಿ ಏನಾದರು ಬಡಿಸುವ,ಹಂಚುವ ಕೆಲಸಕ್ಕೆ ಹಿಂಜರಿಯುತ್ತಿದ್ದ. ಕ್ರಿಕೆಟ್ ಪ್ರಿಯನಾದ ಅವನಿಗೆ “
ಎಡಚ” ನಾದ್ದರಿಂದ ಸದಾ ಎಲ್ಲ ತಂಡದವರ ಬೇಡಿಕೆಯ ಆಟಗಾರ ಆಗಿದ್ದ.ಇಂದಿಗೂ “ಒಪ್ಪ ಕೈಲಿ “ ಎಂದು ನನ್ನನ್ನು ಹೇಳುವ ಅವಕಾಶ ತಪ್ಪಿಸಿಕೊಳ್ಳುವುದಿಲ್ಲ. ನಮ್ಮ ಮನೆಯಲ್ಲಿ ಕೆಲವು ಜನ “ತೊತ್ತೆಕೈ”( ಎಡಚ ) ಯವರಿದ್ದಾರೆ…ಇದು ವಂಶಪಾರಂಪರ್ಯವೇ ತಿಳಿಯೆ.
ಲೇಖನ Super prabha .nanu edada kai yali bareyuvadu .nanenu ಗಣಿತದಲ್ಲಿ ಮೋಸ .nanage 1ತರಗತಿಗೆ ಎಡದಕೈಯಲ್ಲಿ ಬರೆದುದಕ್ಕೆ ಹೊಡೆತತಿಂದೆ .ellaru thothe kai endu heeyalisidru ,nana chikkige edada kai .nanna magaligu edada kai nanna sodarathegu edada kai .ವಂಶಪಾರಂಗತವಾಗಿ ಬಂದಿದೆ ನನಗೆ .
ಲೇಖನ ಸೂಪರ್..ಎಡಗೈ ಬರಹಗಾರರಿಗೆ ನನ್ನ ಶುಭಾಶಯಗಳು
Super mam
Namma Pranam
Namma Hemme
Good topic
Nanna ಮಗಳು 22yrs MSc ….ಈಗ ಲಾಕ್ಡೌನ್ timelli ಲೆಪ್ಟ handalli ಬರೆಯೋಕೆ ಟ್ರೈ ಮಾಡ್ತಿದ್ದಾಳೆ ..
ಲೇಖನ ಚೆನ್ನಾಗಿದೆ.ನನ್ನ ಮಗನೂ ಯಜಮಾನ ರೂ ಎಡಚರೇ.ಎಡಚರ ದಿನದ ಶುಭಾಶಯಗಳು
Very good and informative article
ನನ್ನ ಕ್ಲಾಸ್ಮೆಟ್ ಹಾಗೂ ನನ್ನ ಆತ್ಮೀಯ ಗೆಳತಿ ಶಾರದಾ ಕಾನತ್ತಿಲ ಬರೆಯಲು ಎಡಕೈ ಉಪಯೋಗಿಸುತ್ತಿದ್ದಳು.ಆಕೆ ಕಲಿಯುವುದಕ್ಕೆ ಕ್ಲಾಸಿಗೇ ಮೊದಲಿಗಳು.
ಇದಕ್ಕೆ *ಎಡಚ* ಎನ್ನುವ ಶಬ್ಧ ಈಗತಾನೇ ತಿಳಿಯಿತು.
ನೈಸ್ ಮೇಡಂ ಜಿ, ನಿಮ್ಮ ಬರಹಗಳ ವಿಶೇಷತೆ ಎಂದರೆ, ವಿಷಯ ಸಣ್ಣದು ಆದರೆ ಅದರಲ್ಲಿ ಮಾಹಿತಿ ತುಂಬಾ ಹಾಗೂ ಆಕರ್ಷಕ ವಾಗಿರುತ್ತದೆ.
Very interesting and informative article with a humorous touch..nice mam
ಕೃಷ್ಣ ಪ್ರಭ ಒಳ್ಳೆಯ ವಿಷಯದ ಬಗ್ಗೆ ಬರೆದ್ಇದ್ದೀರಿ.ನಾನೂ ಎಡಕೈಯಲ್ಲಿ ಬರೆಯುವುದು .ಎಡಚ ಎಂದು ಹೇಳುತ್ತಾರೆ ಅಂತ ಈಗ ತಿಳಿಯಿತು.ಒಂದನೇ ತರಗತಿಯಲ್ಲಿ ಅಧ್ಯಾಪಕರು ರಬಲಕೈಯ್ಯಲ್ಲಿ ಬರೀ ಎಂದು ಜೋರು ಮಾಡುತ್ತಿದ್ದರು.ಎಲ್ಲ ಮಕ್ಕಳೂ ತಮಾಷೆ ಮಾಡುತ್ತಿದ್ದರು.ಹೈಸ್ಕೂಲಿನಲ್ಲೂ..ಇದೇ ರೀತಿ.ಮುಂದೆ ಅಧ್ಯಾಪಕ ತರಬೇತಿಗೆ ಹೋದಾಗಲೂ ಇದೇರೀತಿ ಅಲ್ಲಿ ಮಕ್ಕಳು ತಮಾಷೆ ಮಡುತ್ತಿದ್ದರು.ಅನಂತರ ಅಧ್ಯಾಪಕ ವೃತ್ತಿಗೆ ಸೇರಿದಾಗ ದೊಡ್ಡ ಸಮಸ್ಯೆ.ಮಕ್ಕಳ ಎದುರು ಎಡ. ಕೈಯ್ಯಲ್ಲಿ ಬರೆಯುವ ಹಾಗಿಲ್ಲ.ಬಲಕೈಯಲ್ಲಿ ಆಗುವುದಿಲ್ಲ.ಮಕ್ಕಳ ಹಾಗೆ ನೋಟ್ ಬುಕ್ ಕೋಪಿ ಬುಕ್ಗಳಲ್ಲಿ ಬರೆದು ಬರೆದು ಅಬ್ಯಾಸ ಮಾಡಿದೆ ಪರಿಣಾಮ ಹಾಜರಿ ಬಲಕೈಯ್ಯಲ್ಲಿ ಹಾಕುವಷ್ಟು ಆಯಿತು.ಅದೇರೀತಿ ಕರಿಹಲಗೆಯಲ್ಲು ನಿಧಾನಕ್ಕೆ ಬರೆಯತೊಡಗಿದೆ .ನೋಟ್ಸು.ಬುಕ್ಕಲ್ಲಿ ಬರೆಯಲು ಇಂದಿಗೂ ನನಗೆ ಆಗುವುದಿಲ್ಲ.ಟೀಚರ್ ನೀವು ಎಡಕೈಯ್ಯಲ್ಲಿ ಬರೆಯುವುದು ಎಂದು ಮಕ್ಕಳು ಹೇಳಿದಾಗ ಏನೋ ಮಾತು ಬದಲಾಯಿಸಿ ಸಮಜಾಯಿಸುತ್ತಿದ್ದೆ.ನಾನೂ ತೊತ್ತೆಕೈ ಸುಬ್ಬಿ.ಎಡಚರರ. ದಿನದ ಹಾರ್ದಿಕ ಶುಭಾಶಯಗಳು
Very informative article Madam.
ಈ ಬಾರಿ ಯ ತಮ್ಮ ಲೇಖನ ವಿಶಿಷ್ಟ ವಾಗಿ ಕಂಡಿತು.
ನಾನು ಎಡಚ ಆಗಿದ್ದ ರೆ….. ಎನ್ನುವ ಅಂದಿನ ಬಗೆಹರಿಯದ ಪ್ರಶ್ನೆಗೆ, ಆ ಕಲ್ಪನೆಯ ಹಿಂದಿನ ಭಯಕ್ಕೆ ಇಂದು ಉತ್ತರವ ಕಂಡುಕೊಂಡೆ.
Good Presentation…
Prabha, Very informative article. To overlook it looks very simple. But you had collected so many useful informations. Big salute for your effort. Wish you all the best.
ಮುಗ್ಧತೆ ಮತ್ತು ಸ್ವಲ್ಪ ಕೀಟಲೆಯ ಉದ್ದೇಶದಿಂದ, ಪ್ರಾಥಮಿಕ ಶಾಲೆಯ ಎಡಚ ಸಹಪಾಠಿಯೊಬ್ಬಳನ್ನು ಆಡಿಕೊಂಡು ನಗುತ್ತಿದ್ದೆವು. ಆಕೆ ಕೋಪಿಸಿಕೊಂಡರೆ ನಮಗೆ ಕುಚೇಷ್ಟೆಯ ಬುದ್ಧಿ. ನೊಂದುಕೊಳ್ಳತಿದ್ದಳು ಅಂತ ಈಗ ಅನಿಸುತ್ತಿದೆ!
ಅಕ್ಕ ನಾನು ಎರಡೂ ಕೈ ಸಮಾನವಾಗಿ ಬಳಸುತ್ತೇನೆ, ಆದರೂ ಕೆಲವೊಮ್ಮೆ ಎಡಗೈ ಮುಂದು,.. ! ಬರಹ ಸೂಪರ್..
ಎಡಚರು ಬಹಳ ಬುದ್ಧಿವಂತರೆಂದು ಪ್ರತೀತಿ. ನನ್ನ ಸಹೋದ್ಯೋಗಿಯೊಬ್ಬರು ಎಡದ ಕೈಯಲ್ಲಿ ಮುದ್ದಾಗಿ ಬರೆಯುವುದು ಕಂಡು ಬಹಳ ಆಶ್ಚರ್ಯವಾಗುತ್ತಿತ್ತು. ಇನ್ನೊಮ್ಮೆ ಗಮನಿಸಿದಾಗ ಬಲಗೈಯಲ್ಲಿಯೂ ಅಷ್ಟೇ ಚೆನ್ನಾಗಿ ಬರೆಯುವುದು ಕಂಡು ನಮ್ಮ ಕಣ್ಣಲ್ಲಿ ಬಹಳ ದೊಡ್ಡ ಹೀರೋ ಆಗಿಬಿಟ್ಟರು!..ಸೊಗಸಾದ ವಿಶೇಷ ಲೇಖನ.
*ಉತ್ತಮ ಲೇಖನ ಮತ್ತು ಮಾಹಿತಿ*
ಸಣ್ಣ ಪ್ರಾಯದಲ್ಲಿ ನಾನೂ ಅನೇಕರಿಂದ ಅಪಹಾಸ್ಯಕ್ಕೊಳಗಾಗಿದ್ದೆ.,ಡೆಮ್ಮೆ ಕೈ, ಡೆಮ್ಮೆಕೈ ಸುಬ್ರಾಯ, ಅಂತ ತಮಾಷೆ ಮಾಡುತಿದ್ದರು. ಬಾಲ್ಯದಲ್ಲಿ ನನಗೂ ಮನೆಯಲ್ಲಿ ಬಲದ ಕೈಯಲ್ಲಿ ಬರೆಯಲು ಒತ್ತಡ, ಶಿಕ್ಷೆ,ಇತ್ತಂತೆ.ಮುಂದೆ ನನ್ನ LKG ಟೀಚರ್ ಮನೆಗೆ ಬಂದು, ಅಕ್ಷರ ಚೆನ್ನಾಗಿದೆ,ಎಡಗೈಯಲ್ಲಿಯೇ ಅಭ್ಯಾಸ ಮಾಡಲೆಂದು ಹೇಳಿದ ಮೇಲೆ ನಾನೂ ಪೂರ್ಣ ಪ್ರಮಾಣದ ಎಡಚನಾದೆ.( ಕ್ರಿಕೇಟ್ ಬ್ಯಾಟಿಂಗ್, ಮತ್ತು ಊಟ,ಎರಡು ಬಲ ಕೈ ಯಲ್ಲಿ)
ಡಾ. ಶಶಿಕುಮಾರ್ ಅವರ ಪ್ರತಿಕ್ರಿಯೆ
ಮೊದಲನೆಯದಾಗಿ ಈ ವಿಷಯ ನೀಡಿ, ಲೇಖನಗಳನ್ನು ಆಹ್ವಾನಿಸಿ, ನಂತರ ನನ್ನ ಲೇಖನ ಪ್ರಕಟಿಸಿದ ಶ್ರೀಮತಿ ಹೇಮ ಮಾಲಾ ಅವರಿಗೆ ಧನ್ಯವಾದಗಳು. ಈ ಲೇಖನ ಓದಿ ಮೆಚ್ಚಿದ ಹಾಗೂ ಪ್ರತಿಕ್ರಿಯೆ ನೀಡಿದ ಎಲ್ಲಾ ಸಹೃದಯರಿಗೆ ವಂದನೆಗಳು. ಈ ಲೇಖನ ಬರೆದುದರಿಂದ ನಮ್ಮ ಪರಿಚಿತರಲ್ಲಿ ಯಾರೆಲ್ಲಾ ಎಡಚರು ಅಂತ ತಿಳಿದುಕೊಳ್ಳಲು ಸಹಕಾರಿಯಾಯಿತು. ತುಳುವಿನಲ್ಲಿ ಡೆಮ್ಮೆ ಕೈ ಅನ್ನುವುದು ಗೊತ್ತಿತ್ತು. ಆದರೆ ತೊತ್ತೆ ಕೈ ಅನ್ನುವ ಪದಪ್ರಯೋಗವನ್ನು ಮೊದಲ ಬಾರಿಗೆ ಕೇಳಿದ್ದು. ಅನೇಕ ಮಾಹಿತಿಗಳು ಸಿಕ್ಕಿದವು. ಎಡಚರು ಅನುಭವಿಸಿದ, ಅನುಭವಿಸುವ ಸಮಸ್ಯೆಗಳನ್ನು ಕೂಡಾ ತಿಳಿದುಕೊಳ್ಳುವಂತಾಯಿತು. ಒಟ್ಟಿನಲ್ಲಿ ಈ ಲೇಖನಕ್ಕೋಸ್ಕರ ಮಾಹಿತಿ ಸಂಗ್ರಹ ಮಾಡುವಾಗ, ಹಲವು ಹೊಸ ವಿಷಯಗಳನ್ನು ತಿಳಿದುಕೊಳ್ಳುವಂತಾಯಿತು.
ತುಂಬಾ ಚೆನ್ನಾಗಿದೆ, ಸಮಾಜ ನಕಾರಾತ್ಮಕ ಎಂದು ತಿಳಿದಿರುವುದು, ವೈಚಾರಿಕತೆಯ ಸೂಕ್ಷ್ಮತೆಯಲ್ಲಿ ಆಳಕ್ಕೆ ಇಳಿದಷ್ಟು ಅದರ ಸಕಾರಾತ್ಮಕ ಪರಿಣಾಮಗಳನ್ನು ತಿಳಿದ ಸಮಾಜ ಅದೇ ನಕಾರಾತ್ಮಕತೆಯನ್ನು ಸಾಕಾರವಾಗಿ ಜೀವನದ ಭಾಗವಾಗಿ ಬದಲಾಗುತ್ತದೆ. ಅಲ್ವೇ…